ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಇತಿಹಾಸ

ಸ್ವರ್ಣ ರೇಖಾಂಕಿತಂ ಲಿಂಗಂ, ನಾಸ್ತಿ ನಾಸ್ತಿ, ಜಗತ್ರಾಯೆ
ವಾಮ ಭಗದಿತಂ ಲಿಂಗಂ ನ ಭೂತೊ ನಃ ಭವಿಷ್ಯತಿ

ಪರಶುರಾಮ ಸೃಷ್ಟಿಯಲ್ಲಿ ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಕೊಲ್ಲೂರು ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಏಳು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಕೊಲ್ಲೂರು ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರ ಸ್ಕಂದ ಪುರಾಣದಲ್ಲಿ ಶ್ರೀ ಕ್ಷೇತ್ರದ ಮಹಿಮೆಯನ್ನು ವಿವರಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ಕೋಲ ಮಹರ್ಷಿಯು ತಪಸ್ಸುಗೈದುದರಿಂದ ಇದು ಕೋಲಾಪುರವೆನಿಸಿತು. ಇದು ಇಂದಿನ ಕೊಲ್ಲೂರು ಎಂದು ಹೆಸರಾಯಿತು. ಇದು ಒಂದು ಶಕ್ತಿಯ ಆರಾಧನೆಯ ಕ್ಷೇತ್ರ. ದೇವಿ ಮೂಕಾಂಬಿಕೆ ಇಲ್ಲಿಯ ಶಕ್ತಿ ದೇವತೆ. ಮೂಕಾಸುರ (ಕೌಂಹಾಸುರ) ಎಂಬ ರಾಕ್ಷಸರನ್ನು ವಧಿಸಿದವಳು.  ಕೌಂಹಾಸುರ ಎನ್ನುವ ರಾಕ್ಷಸನು ತನಗೆ ಯಾವುದೇ ಜೀವರಾಶಿಗಳಿಂದ ಮರಣ ಬರಬಾರದೆಂದು ವರವನ್ನು ಶಿವನಲ್ಲಿ ಕೇಳುವ ಸಂದರ್ಭದಲ್ಲಿ ವಾಗ್ದೇವಿಯು ಅವನು ಶಿವನಲ್ಲಿ ಏನು ಕೇಳಲಾಗದಂತೆ ಮೂಕಳಾಗಿಸಿದಳು. ಅದರಂತೆ ಅವನು ಮೂಕ (ಮೂಗ) ರಾಕ್ಷಸನಾದನು. ಇದರಿಂದ ಕುಪಿತನಾದ ಮೂಕಾಸುರನು ದೇವತೆಗಳ ಮೇಲೆ ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿದನು. ದೇವತೆಗಳು ಇವನ ಕಿರುಕುಳ ತಡೆಯಲಾರದೆ ದೇವಿಯ ಮೊರೆಹೋದರು. ದೇವಿಯು ಸಕಲ ದೇವತೆಗಳ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡು ಮೂಕಾಸುರನನ್ನು ವಧಿಸಿ ಲಿಂಗೈಕ್ಯವಾಗಿ ಮೂಕಾಂಬಿಕೆ ಎಂಬ ಹೆಸರನ್ನು ಗಳಿಸಿದಳು.

ಮೂಕಾಂಬಿಕೆಯು ಒಂದು ಆದಿಶಕ್ತಿ; ಅಂದರೆ ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾ ಸರಸ್ವತಿಯರನ್ನು ಒಳಗೊಂಡವಳು. ಈ ರೀತಿಯ ಆದಿಶಕ್ತಿಯನ್ನು ಕಾಣಬರುವುದು ಇಲ್ಲಿ ಮಾತ್ರ. ಉದ್ಭವಲಿಂಗವಾಗಿರುವ ಮಾಕಾಂಬಿಕೆಯು ಬ್ರಹ್ಮ, ಶಿವ ಹಾಗೂ ವಿಷ್ಣು ಬಲ ಭಾಗದಲ್ಲಿಯೂ ಹಾಗೂ ಎಡಭಾಗ ಎಂದು ಪ್ರತ್ಯೇಕಿಸುತ್ತದೆ. ಲಿಂಗದ ಎಡಭಾಗವು ಶಕ್ತಿ ಸಂಕೇತ ಹಾಗೂ ಅದರ ಬಲ ಭಾಗವು ಶಿವನನ್ನು ಪ್ರತಿನಿಧಿಸುತ್ತದೆ. ದೇವಿ ಮೂಕಾಂಬಿಕೆಯು ಶ್ರೀ ಚಕ್ರದ ಮೇಲೆ ನೆಲೆಸಿದ್ದಾಳೆ. ಕೋಲ ಋಷಿಗಳು ಹಸುವು ಲಿಂಗಕ್ಕೆ ತನ್ನ ಕೆಚ್ಚಲಿನ ಹಾಲಿನಿಂದ ಅಭಿಷೇಕಿಸುವುದನ್ನು ಕಂಡು ಚಕಿತರಾದರು. ನಂತರ ಅವರು ಅದನ್ನು ಪೂಜಿಸಲು ಆರಂಭಿಸಿದರು. ಹಸುವಿನ ಗೊರಸಿನ ಚಿಹ್ನೆಯನ್ನು ಈ ಲಿಂಗದಲ್ಲಿ ಕಂಡು ಚಕಿತರಾದರು. ನಂತರ ಅವರು ಅದನ್ನು ಪೂಜಿಸಲು ಆರಂಭಿಸಿದರು. ಹಸುವಿನ ಗೊರಸಿನ ಚಿಹ್ನೆಯನ್ನು ಈ ಲಿಂಗದಲ್ಲಿ ನಾವು ಕಾಣುವುದರಿಂದ ಈ ಲಿಂಗವು ವಿಶಿಷ್ಟವಾದ ಶಕ್ತಿಯನ್ನು ಹೊಂದಿರುವ ಲಿಂಗವೆನ್ನುವುದಕ್ಕೆ ಸಾಕ್ಷಿಯಾಗಿದೆ. ಆದಿಶಂಕರರು ತಪಸ್ಸಿನಲ್ಲಿದ್ದಾಗ ದೇವಿಯು ಅವರ ದೃಷ್ಟಿಯಲ್ಲಿ ಕಾಣಸಿಕೊಂಡಿದ್ದರಿಂದಾಗಿ ಆದಿಶಂಕರರು ಶ್ರೀ ಚಕ್ರದ ಯಂತ್ರದ ಮೇಲೆ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿದ್ದಾರೆ. ದೇವಸ್ಥಾನದ ಒಳಭಾಗದಲ್ಲಿ ಈಗಲೂ ಶಂಕರಾಚಾರ್ಯರ ಪೀಠವಿದ್ದು, ಆದಿ ಶಂಕರರು ರೂಪಿಸಿರುವ ನಿಯಯಾಗಮ ಪದ್ದತಿಯಂತೆ, ಪೂಜೆಯನ್ನು ಕೈಗೊಳ್ಳಲಾಗುತ್ತಿದೆ.

ಇಲ್ಲಿ ದೊರೆತಿರುವ ಪ್ರಾಚೀನ ಶಾಸ್ತ್ರಗಳಿಂದಲೂ, ಶಾಸನಗಳು ಮತ್ತು ಪುರಾವೆಗಳಿಂದಲೂ ೧೦ ನೇ ಶತಮಾನದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ದೇವಿ ಶಕ್ತಿಯ ಆರಾಧನಾ ಕೇಂದ್ರವಾಗಿದೆ. ಇಲ್ಲಿ ದೊರಕಿರುವ ಕ್ರಿ.ಶ.೧೪೮೧ ರ ಪ್ರಾಚೀನ ಶಾಸನವು ಶಕ್ತಿಯ ಮೂಲದ ಬಗ್ಗೆ ವಿವರಿಸಲಾಗಿದೆ. ಶ್ರೀ ಮೂಕಾಂಬಿಕಾ ದೇವಿಯು ಲಿಂಗದ ರೂಪದಲ್ಲಿರುವ ಆದಿಶಕ್ತಿ, ಸೃಷ್ಟಿಕರ್ತೆ, ಸಕಲ ಜೀವಗಳ ರಕ್ಷಕಿ ಎಂದು ವಿವರಿಸಲಾಗಿದೆ.

ಗರ್ಭಗುಡಿಯ ಶಿಕರವು ಶತಮಾನಗಳ ಹಿಂದೆ ಸ್ಥಳೀಯ ರಾಜನಿಂದ ದಾನವಾಗಿ ನೀಡಲ್ಪಟ್ಟ ಚಿನ್ನದಿಂದಾವೃತವಾಗಿದೆ. ಪರಿವಾರ ದೇವತೆಗಳು ದೇವಿಯ ಗರ್ಭಗುಡಿಯ ಸುತ್ತ ಇವೆ. ಅವುಗಳಲ್ಲಿ ಪ್ರಮುಖವಾದುದು ಶ್ರೀ ವೀರಭದ್ರ ದೇವರು, ಪರಿವಾರ ದೇವತೆಗಳಾದ ಸುಬ್ರಹ್ಮಣ್ಯ, ದಶಭುಜ ಗಣಪತಿ, ಪಂಚಮುಖಿ ಗಣಪತಿ, ಆಂಜನೇಯ, ಚಂದ್ರಮೌಳೇಶ್ವರ ಹಾಗೂ ಗೋಪಾಲ ಕೃಷ್ಣರ ಗುಡಿಗಳನ್ನು ದೇವಿಯ ಗುಡಿಯ ಸುತ್ತಲು ಕಾಣಬಹುದು. ಪಂಚಲೋಹದ ಮೂಕಾಂಬಿಕೆ ವಿಗ್ರಹವನ್ನು ಬಹಳ ಆಕರ್ಷಕವಾಗಿದ್ದು, ೪ ಕೈಗಳನ್ನು ಹೊಂದಿದ್ದು, ಮೇಲ್ಭಾಗದ ಎರಡು ಎರಡು ಕೈಗಳಲ್ಲಿ ಶಂಖ ಚಕ್ರವನ್ನು ಹಿಡಿದಿದ್ದು, ಮತ್ತೆರೆಡು ಕೈಗಳು ವರದ ಅಭಯ ಹಸ್ತ ಕೈಗಳಿಂದ ಭಕ್ತರನ್ನು ಆಶಿರ್ವದಿಸುವಂತೆ ಕಾಣುತ್ತಿದೆ.

ಮೂಕಾಂಬಿಕೆಯ ಗುಡಿಯ ಸುತ್ತ ಇರುವ ಗುಡಿಗಳು

ಶ್ರೀ ಚೌಡೇಶ್ವರಿ ದೇವಸ್ಥಾನ
ಶ್ರೀ ಸಂಪ್ರೆ ಗಣಪತಿ ದೇವಸ್ಥಾನ
ಶ್ರೀ ಸಿದ್ದೇಶ್ವರ ದೇವಸ್ಥಾನ
ಶ್ರೀ ಬಲಮುರಿ ಬೀದಿ ಗಣಪತಿ ದೇವಸ್ಥಾನ
ಶ್ರೀ ಗೋಪಾಲ ಕೃಷ್ಣ ದೇವಸ್ಥಾನ
ಶ್ರೀ ಮಾರಿಯಮ್ಮ ದೇವಸ್ಥಾನ
ಶ್ರೀ ಗಡಿ ಮಾಸ್ತಿಯಮ್ಮ ದೇವಸ್ಥಾನ

ಹಬ್ಬಗಳು ಮತ್ತು ಉತ್ಸವಗಳು

ನವರಾತ್ರಿ ಉತ್ಸವ

ನವರಾತ್ರಿ ಉತ್ಸವದ ದಿನಗಳಂದು ವಿಶೇಷ ಪೂಜೆಗಳ ಜೊತೆಗೆ ಶತ ರುದ್ರಭಿಷೇಕಗಳು ನಡೆಯುತ್ತದೆ. ರಾತ್ರಿ ಕಲ್ಪೋಕ್ತ ನವರಾತ್ರಿ ವಿಶೇಷ ಪೂಜೆ ನಡೆಯುತ್ತದೆ. ೯ ದಿನಗಳ ಕಾಲ ನಡೆಯುವ ನವರಾತ್ರಿಯಲ್ಲಿ ನವದುರ್ಗಾ ಅಲಂಕಾರಗಳು ನಡೆಯುತ್ತವೆ. ಮಹಾನವಮಿ ದಿನ ರಥವನ್ನು ಅಲಂಕರಿಸಿ ಅದರಲ್ಲಿ ದೇವಿಯನ್ನು ಕೂರಿಸಿ ರಥೋತ್ಸವವನ್ನು ಮಾಡುತ್ತಾರೆ. ಚಂಡಿ ಪಾರಯಣ ೯ ದಿನಗಳ ಕಾಲ ನಡೆಯುತ್ತದೆ. ಚಂಡಿಕಾ ಹೋಮ ಮಾಡಲಾಗುತ್ತದೆ. ನವರಾತ್ರಿ ಕಾರ್ಯಕ್ರಮವು ವಿಜಯದಶಮಿಯಂದು ಕೊನೆಗೊಳ್ಳುತ್ತದೆ. ವಿಜಯದಶಮಿ ದಿನ ಸಾವಿರಾರು ಭಕ್ತರು “ಅಕ್ಷರಭ್ಯಾಸ ಸೇವೆ” (ವಿದ್ಯಾಭ್ಯಾಸದ ಆರಂಭದ ದಿನ) ಯನ್ನು ಸರಸ್ವತಿ ಮಂಟಪದಲ್ಲಿ ಮಾಡುತ್ತಾರೆ.

ದೀಪಾವಳಿ ಉತ್ಸವ

ದೀಪಾವಳಿಯಲ್ಲಿ ಮಾಮೂಲಿನಂತೆ ಸೇವೆಗಳು ಮತ್ತು ವಿಶೇಷ ಪೂಜೆಗಳು (ವಿಶೇಷ) ಮಂಗಳಾರತಿಗಳು ಎಂದಿನಂತೆ ಮೂರು ದಿನಗಳು ನಡೆಯುತ್ತವೆ. ಕಾರ್ತಿಕ ಹುಣ್ಣಿಮೆ ಮತ್ತು ಕಾರ್ತಿಕ ಅಮಾವಾಸ್ಯೆಯಂದು ದೀಪೋತ್ಸವವು ತುಂಬಾ ವಿಜೃಂಭಣೆಯಿಂದ ನಡೆಯುತ್ತದೆ.

ವಾರ್ಷಿಕೋತ್ಸವ (ವರ್ಷದ ಜಾತ್ರೆ)

ವಾರ್ಷಿಕೋತ್ಸವವು ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ೯ ದಿನಗಳ ಕಾಲ ನಡೆಯುತ್ತದೆ. ನಿತ್ಯ ಪೂಜೆ, ವಿಶೇಷ ಬಲಿಗಳು ನಡೆಯುತ್ತವೆ. ಶತರುದ್ರಾಭಿಷೇಕವು ಮಧ್ಯಾಹ್ನ ನಡೆಯುತ್ತದೆ. ಸಂಜೆ ೫:೩೦ ಮತ್ತು ರಾತ್ರಿ ೧೦:೦೦ ಗಂಟೆಗೆ ಬೀದಿ ಉತ್ಸವಗಳು ನಡೆಯುತ್ತವೆ. ಎಂಟನೇ ದಿನ ಶ್ರೀ ಮಹಾ ರಥೋತ್ಸವವು ನಡೆಯುತ್ತದೆ. ಮಾರನೇ ದಿನ ಓಕುಳಿ ಉತ್ಸವ ಮತ್ತು ತೆಪ್ಪೋತ್ಸವವು (ಸೌಪರ್ಣಿಕಾ ನದಿಯಲ್ಲಿ) ನಡೆಯುತ್ತದೆ. ಆ ದಿನ ಮಹಾ ರಥೋತ್ಸವದಲ್ಲಿ ದೊಡ್ಡ ಕಟ್ಟೆಯಲ್ಲಿ ದೇವಿಯನ್ನು ಕೂರಿಸಿ ಉತ್ಸವ ಮಾಡುತ್ತಾರೆ.

ಜನ್ಮಾಷ್ಟಮಿ (ಶ್ರೀದೇವಿ ಅವತಾರ ತಾಳಿದ ದಿನ)

ಜನ್ಮಾಷ್ಟಮಿ ದಿನ ಎಂದಿನಂತೆ ನಿತ್ಯ ಪೂಜೆ ನಂತರ ಶತರುದ್ರಾಭಿಷೇಕವು ಮಧ್ಯಾಹ್ನ ನಡೆಯುತ್ತದೆ. ಈ ದಿನದ ನಂತರ ಕೃಷ್ಣಾಷ್ಟಮಿ ಮತ್ತು ಶಿವರಾತ್ರಿ ಹೊರತುಪಡಿಸಿ ಇತರ ಎಲ್ಲ ಉತ್ಸವಗಳು ನವರಾತ್ರಿ ಬರುವವರೆಗೆ ನಡೆಯುವುದಿಲ್ಲ. ಅದರೆ ಈ ಅವಧಿಯಲ್ಲಿ ಮಾಮುಲಿನಂತೆ ಬಲಿ ಉತ್ಸವಗಳು ನಡೆಯುತ್ತವೆ.

ಅಷ್ಟಭಂದ ಬ್ರಹ್ಮ ಕಲಶೋತ್ಸವ

ಅಷ್ಟಬಂಧ ಬ್ರಹ್ಮ ಕಲಶೋತ್ಸವವು ೧೨ ವರ್ಷಕೊಮ್ಮೆ ನಡೆಯುತ್ತದೆ. ಲಿಂಗಕ್ಕೆ ೧೦೦೮ ಕಳಶದ (೧೦೦೦ ಬೆಳ್ಳಿಯ ಕಳಶ ಮತ್ತು ೮ ಚಿನ್ನದ ಕಳಶ) ಪವಿತ್ರ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ. ಎಲ್ಲಾ ಸೇವೆಗಳು, ಕಾರ್ಯಕ್ರಮಗಳು, ಬ್ರಹ್ಮ ಕಲಶೋತ್ಸವದ ಜಾತ್ರೆಯಂದು ನಡೆಯುತ್ತದೆ.

ಚಂಡಿಕಾ ಹೋಮ

ಈ ದೇವಸ್ಥಾನದಲ್ಲಿ ಚಂಡಿಕಾಹವನವು ಭಕ್ತರು ನಡೆಸುವ ವಿಶೇಷ ಸೇವೆಯಾಗಿರುತ್ತದೆ. ಶ್ರೀ ದೇವಿ ಮಹಾತ್ಮೆಯ ೭೦೦ ಶ್ಲೋಕಗಳನ್ನು ಓದಿ ಮತ್ತು ೭೦೦ ಮಂತ್ರಗಳನ್ನು ಹೇಳುತ್ತಾ, ೭೦೦ ಬಾರಿ ಪಾಯಸವನ್ನು ಅಗ್ನಿಗೆ ಅರ್ಪಿಸುತ್ತಾರೆ. ಈ ಸೇವೆಯು ಸುಮಾರು ೨ ಗಂಟೆಯದಾಗಿದ್ದು ೬ ರಿಂದ ೭ ಜನ ಪುರೋಹಿತರು ನೆರವೇರಿಸುತ್ತಾರೆ. ಪ್ರತಿದಿನ ದೇವಸ್ಥಾನದಲ್ಲಿ ೩ ರಿಂದ ೯ ಚಂಡಿಕಾ ಹೋಮ ಮಾಡಲಾಗುವುದು.

ಆಧಾರ : ಕರ್ನಾಟಕ ಟೆಂಪಲ್ ಇನ್ಫಾರ್ಮಶನ್ ಸಿಸ್ಟಮ್

2 thoughts on “ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ”

Leave a Comment