ರಜರಪ್ಪಾದ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ

ಛಿನ್ನಮಸ್ತಿಕಾದೇವಿಯ ಚಿತ್ರ

ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೆಯವಳಾಗಿದ್ದು ಝಾರಖಂಡದ ರಾಜಧಾನಿಯಾದ ರಾಂಚಿ ನಗರದಿಂದ ಸುಮಾರು ೮೦ ಕಿಲೋಮೀಟರ್ ದೂರದಲ್ಲಿ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ. ಭೈರವಿಭೇಡಾ ಮತ್ತು ದಾಮೋದರ ನದಿಗಳ ಸಂಗಮದಲ್ಲಿ ನೆಲೆಸಿರುವ ಈ ದೇವಸ್ಥಾನವು ವಿಶ್ವದ ಎರಡನೇ ಖ್ಯಾತ ಶಕ್ತಿಪೀಠವಾಗಿದೆ. ಈ ದೇವಸ್ಥಾನದಲ್ಲಿ ದೇವಿಯ ಮೂರ್ತಿಯ ಬದಲು ಪೀಠವಿದೆ.

ಶ್ರೀ ಛಿನ್ನಮಸ್ತಿಕಾದೇವಿಯ ರೂಪದ ವರ್ಣನೆ

ದೇವಸ್ಥಾನದ ಉತ್ತರದಲ್ಲಿ ಒಂದು ಗೋಡೆಗೆ ಒರಗಿರುವ ವಿಶಾಲ ಶಿಲೆಯ ಮೇಲೆ ಶ್ರೀ ಛಿನ್ನಮಸ್ತಿಕಾದೇವಿಯ ದಿವ್ಯ ರೂಪವು ವಿರಾಜಮಾನವಾಗಿದೆ. ಶ್ರೀ ಛಿನ್ನಮಸ್ತಿಕಾ ದೇವಸ್ಥಾನದ ಒಳಗಿರುವ ಶಿಲೆಯಲ್ಲಿ ದೇವಿಯ ೩ ನೇತ್ರಗಳಿವೆ. ಎಡಗಾಲನ್ನು ಮುಂದೆ ಮಾಡಿದ ದೇವಿಯು ಕಮಲಪುಷ್ಪದ ಮೇಲೆ ನಿಂತಿದ್ದಾಳೆ. ಅವಳ ಕಾಲಿನ ಕೆಳಗೆ ಕಾಮದೇವ ಮತ್ತು ರತಿದೇವಿ ಇವರು ರತಿಮುದ್ರೆಯಲ್ಲಿದ್ದಾರೆ. ಶ್ರೀ ಛಿನ್ನಮಸ್ತಿಕಾದೇವಿಯ ಕೊರಳು ಸರ್ಪಮಾಲೆ ಮತ್ತು ರುಂಡಮಾಲೆಗಳಿಂದ ಸುಶೋಭಿತವಾಗಿದೆ. ಹರಡಿದ ಕೂದಲು, ಹೊರಗೆ ತೆಗೆದಿರುವ ನಾಲಿಗೆ ಮತ್ತು ಅಲಂಕಾರ ಇವುಗಳಿಂದ ಶೃಂಗಾರಗೊಂಡಿರುವ ದೇವಿಯು ದಿವ್ಯ ರೂಪದಲ್ಲಿದ್ದಾಳೆ. ಬಲಗೈಯಲ್ಲಿ ಖಡ್ಗ ಮತ್ತು ಎಡಗೈಯಲ್ಲಿ ತನ್ನ ಸ್ವಂತ ರುಂಡವಿದೆ. ದೇವಿಯ ಅಕ್ಕಪಕ್ಕದಲ್ಲಿ ಡಾಕಿನಿ ಮತ್ತು ಶಾಕಿನಿಯರು ನಿಂತಿದ್ದಾರೆ. ದೇವಿಯ ಕೊರಳಿನಿಂದ ರಕ್ತದ ೩ ಧಾರೆ ಚಿಮ್ಮುತ್ತಿದ್ದು ದೇವಿಯು ಡಾಕಿನಿ ಮತ್ತು ಶಾಕಿನಿ ಇವರಿಗೆ ರಕ್ತಪಾನ ಮಾಡಿಸುತ್ತಿದ್ದಾಳೆ. ಒಂದು ರಕ್ತದ ಧಾರೆಯು ದೇವಿಯ ಮಸ್ತಕವು ಸ್ವತಃ ಗ್ರಹಣ ಮಾಡುತ್ತಿದೆ. ಈ ೩ ರಕ್ತಧಾರೆಗಳು ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ಸಮತೋಲನದಿಂದ ಯೋಗಮಾರ್ಗದಲ್ಲಿ ಸಿದ್ಧಿ ಪ್ರಾಪ್ತಿಯಾದುದರ ಪ್ರತೀಕವಾಗಿವೆ.

ಶ್ರೀ ಛಿನ್ನಮಸ್ತಿಕಾ ದೇವಸ್ಥಾನ ಮತ್ತು ಅಲ್ಲಿನ ಪರಿಸರ ಇವುಗಳ ವೈಶಿಷ್ಟ್ಯಗಳು

ದೇವಸ್ಥಾನದ ಎದುರಿಗೆ ಬಲಿಯ ಸ್ಥಾನವಿದೆ. ದೇವಸ್ಥಾನದ ದಿಶೆಯಿಂದ ಮುಂಡನ ಕುಂಡವಿದೆ. ಪೂರ್ವಕ್ಕೆ ಭೈರವಿ ನದಿಯ ತೀರದಲ್ಲಿ ಒಂದು ದೊಡ್ಡ ವಟವೃಕ್ಷವಿದೆ. ಇಲ್ಲಿ ಮುಂಡನ ಕುಂಡ, ವಾಯು ಕುಂಡ, ಅಗ್ನಿಕೋನ ಕುಂಡ ಇವುಗಳಂತಹ ಅನೇಕ ಕುಂಡಗಳಿವೆ. ದಾಮೋದರ ನದಿಯ ಘಟ್ಟಕ್ಕೆ ‘ತಾಂತ್ರಿಕ ಘಟ್ಟ’ ಎನ್ನುತ್ತಾರೆ. ಇಲ್ಲಿಂದ ಭಕ್ತಗಣವು ದಾಮೋದರ ನದಿಯಲ್ಲಿ ಸ್ನಾನವನ್ನು ಮಾಡಿ ದೇವಸ್ಥಾನಕ್ಕೆ ಹೋಗಬಹುದು. ಅಷ್ಟೇ ಅಲ್ಲದೇ ರುದ್ರ ಭೈರವ ದೇವಸ್ಥಾನದ ಹತ್ತಿರ ಒಂದು ಕುಂಡವಿದೆ. ಸಂಗಮದ ಮಧ್ಯದಲ್ಲಿ ಪಾಪನಾಶಿನಿ ಕುಂಡವಿದೆ. ಆ ಕುಂಡದಲ್ಲಿ ಶ್ರದ್ಧೆಯಿಂದ ಸ್ನಾನ ಮಾಡಿದರೆ ರೋಗಮುಕ್ತರಾದ ಅನುಭೂತಿ ಅನೇಕರಿಗೆ ಬಂದಿದೆ.

ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ದೇವಸ್ಥಾನವು ಮಧ್ಯರಾತ್ರಿಯ ವರೆಗೆ ತೆರೆದಿರುತ್ತದೆ. ಅಸ್ಸಾಮಿನ ಕಾಮಾಖ್ಯಾ ದೇವಿ ಮತ್ತು ಬಂಗಾಲದ ತಾರಾ ದೇವಿಯ ನಂತರ ಶ್ರೀ ಛಿನ್ನಮಸ್ತಿಕಾ ದೇವಸ್ಥಾನವು ತಂತ್ರ ವಿದ್ಯೆಯ ಉಪಾಸಕರಿಗೆ ಮುಖ್ಯ ಸ್ಥಾನವಾಗಿದೆ.

ದಾಮೋದರ ಮತ್ತು ಭೈರವಿ ನದಿಗಳ ಸಂಗಮ

ಶ್ರೀ ದಾಮೋದರ ಮತ್ತು ಭೈರವಿ ನದಿಗಳ ಸಂಗಮವು ಅತ್ಯಂತ ಸುಂದರವಾಗಿದೆ. ಭೈರವ ನದಿಯು ಸ್ತ್ರೀರೂಪವಾಗಿದ್ದರೆ, ದಾಮೋದರ ನದಿಯು ಪುರುಷನ ಪ್ರತೀಕವಾಗಿದೆ. ಭೈರವ ನದಿಯು ದಾಮೋದರ ನದಿಯನ್ನು ಎಲ್ಲಿ ಸೇರುತ್ತದೋ, ಆ ಸ್ಥಳದ ಆಳವು ಇದುವರೆಗೂ ಯಾರಿಗೂ ಗೊತ್ತಿಲ್ಲ.

ಸಂತಾನವಿಲ್ಲದ ರಾಜನಿಗೆ ಪುತ್ರಪ್ರಾಪ್ತಿಯ ವರವನ್ನು ನೀಡುವ ಶ್ರೀ ಛಿನ್ನಮಸ್ತಿಕಾದೇವಿ !

ಪ್ರಾಚೀನ ಕಾಲದಲ್ಲಿ ಈ ಸ್ಥಳದಲ್ಲಿ ರಜ ಎಂಬ ಹೆಸರಿನ ರಾಜನು ರಾಜ್ಯವಾಳುತ್ತಿದ್ದನು. ರಾಜನ ಪತ್ನಿಯ ಹೆಸರು ರೂಪಮಾ ಎಂದಿತ್ತು. ಈ ಎರಡು ಹೆಸರಿನಿಂದಾಗಿ ಈ ಸ್ಥಾನಕ್ಕೆ ಹೆಸರು ರಜರೂಪಮಾ ಎಂಬ ಹೆಸರು ಬಂದಿದೆ ಮತ್ತು ನಂತರ ಅದು ರಜರಪ್ಪಾ ಎಂದಾಯಿತು. ಒಂದು ಕಥೆಗನುಸಾರ ರಾಜ ಮತ್ತು ರಾಣಿ ಇವರಿಗೆ ಸಂತಾನವಿರಲಿಲ್ಲ. ಅವರು ರಾತ್ರಿಯ ಸಮಯದಲ್ಲಿ ಬೇಟೆಗಾಗಿ ಭೈರವ ನದಿಯ ಸಂಗಮಸ್ಥಳಕ್ಕೆ ತಲುಪಿದರು. ರಾತ್ರಿ ರಾಜನು ವಿಶ್ರಾಂತಿಯನ್ನು ತೆಗೆದುಕೊಳ್ಳುವಾಗ ನದಿಯ ಪಾತ್ರದಿಂದ ಛಿನ್ನಮಸ್ತಿಕಾದೇವಿಯು ಪ್ರಕಟವಾದಳು. ದೇವಿಯು, “ಹೇ ರಾಜನ್, ನಾನು ಶ್ರೀ ಛಿನ್ನಮಸ್ತಿಕಾದೇವಿಯಾಗಿದ್ದೇನೆ. ನಾನು ಈ ಅರಣ್ಯದಲ್ಲಿ ಪ್ರಾಚೀನಕಾಲದಿಂದಲೂ ಗುಪ್ತ ರೂಪದಲ್ಲಿ ಇರುತ್ತಿದ್ದೇನೆ.

ಇಂದಿನಿಂದ ಒಂಬತ್ತನೆ ತಿಂಗಳಿನಲ್ಲಿ ನಿನಗೆ ಪುತ್ರಪ್ರಾಪ್ತಿಯಾಗುವುದು. ಹೇ ರಾಜನ್, ನಿನಗೆ ಸಂಗಮದ ಹತ್ತಿರ ಒಂದು ದೇವಸ್ಥಾನವು ಕಾಣುವುದು. ಈ ದೇವಸ್ಥಾನದ ಒಳಗೆ ಶಿಲೆಯ ಮೇಲೆ ನನ್ನ ಪ್ರತಿಮೆಯ ಗುರುತು ಇದೆ. ಬೆಳಗ್ಗೆ ನೀವು ನನ್ನ ಪೂಜೆಯನ್ನು ಮಾಡಿ ಅಲ್ಲಿ ಬಲಿಯ ದಾನವನ್ನು ನೀಡಿರಿ” ಎಂದು ಹೇಳಿ ದೇವಿಯು ಮಾಯವಾದಳು. ಅಂದಿನಿಂದ ಈ ಸ್ಥಳವು ಪವಿತ್ರ ತೀರ್ಥ ರಜರಪ್ಪಾ ಎಂದು ಪ್ರಸಿದ್ಧವಾಗಿದೆ.

ಶ್ರೀ ಛಿನ್ನಮಸ್ತಿಕಾದೇವಿಯ ಪೌರಾಣಿಕ ಕಥೆ

ಮಾರ್ಕಂಡೇಯ ಪುರಾಣ ಮತ್ತು ಶಿವ ಪುರಾಣಗಳಲ್ಲಿ ದೇವಿಯ ಈ ರೂಪವನ್ನು ಸವಿಸ್ತಾರವಾಗಿ ವರ್ಣಿಸಲಾಗಿದೆ. ಛಿನ್ನಮಸ್ತಿಕಾದೇವಿಗೆ ‘ಚಿಂತಾಪೂರ್ಣಿ’ ಮಾತೆಯೆಂದು ಗುರುತಿಸಲಾಗುತ್ತದೆ. ಪುರಾಣಗಳಿಗನುಸಾರ ದೇವಿಯು ಯಾವಾಗ ಚಂಡಿಯ ರೂಪವನ್ನು ಧಾರಣೆ ಮಾಡಿ ರಾಕ್ಷಸರ ವಧೆಯನ್ನು ಮಾಡುತ್ತಾಳೋ, ಆಗ ರಾಕ್ಷಸರನ್ನು ಸೋಲಿಸಿ ದೇವತೆಗಳಿಗೆ ವಿಜಯವನ್ನು ದೊರಕಿಸಿಕೊಟ್ಟಳು; ಆದರೆ ದೇವಿಯ ದಾಹವು ಶಾಂತವಾಗಲಿಲ್ಲ. ಆಗ ಶಿವನ ಕೋರಿಕೆಯ ಮೇರೆಗೆ ದೇವಿಯು ತನ್ನದೇ ಶಿರಚ್ಛೇದ ಮಾಡಿ ತನ್ನ ಹಾಗೂ ಸಹಾಯಕರಾದ ಶಾಕಿನಿ ಮತ್ತು ಡಾಕಿನಿಯರ ರಕ್ತದ ದಾಹವನ್ನು ಶಾಂತಗೊಳಿಸಲು ಅವರಿಗೆ ರಕ್ತಪಾನ ಮಾಡಿಸಿದಳು. ಆದುದರಿಂದ ದೇವಿಗೆ ‘ಛಿನ್ನಮಸ್ತಿಕಾದೇವಿ’ ಎಂದು ಕರೆಯಲಾಗುತ್ತದೆ. ಎಲ್ಲಿ ಛಿನ್ನಮಸ್ತಿಕಾದೇವಿಯ ವಾಸವಿರುತ್ತದೋ, ಅಲ್ಲಿ ಭಗವಾನ ಶಿವನ ಸ್ಥಾನವೂ ಇರುತ್ತದೆ, ಎಂದು ನಂಬಲಾಗುತ್ತದೆ.

(ಆಧಾರ : ವಿವಿಧ ಜಾಲತಾಣಗಳು)

Leave a Comment