ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು

ಇತಿಹಾಸ

ದೇವಿಯು ಶುಂಭ ನಿಶುಂಭ, ಅರುಣಾಸುರ ಈ ಮಂತ್ರಿಗಳನ್ನು ಸ್ಥಾನ ಪಲ್ಲಟದಿಂದ ಯುದ್ದ ಭೂಮಿಯಿಂದ ರಕ್ಷಿಸಿದಳು. ನಂತರ ಅರುಣಾಸುರನು ರಾಕ್ಷಸರ ದೊರೆಯಾದನು. ಇವನು ಋಷಿಮುನಿಗಳ ಯಜ್ಞಯಾಗಾದಿಗಳಿಗೆ ತಡೆಯುಂಟು ಮಾಡುತ್ತಿದ್ದನು. ಇದರಿಂದ ದೇವತೆಗಳು ಮಳೆಯನ್ನು ಸುರಿಸಲಿಲ್ಲ; ಬರಗಾಲದಿಂದ ಜನರು ನೀರಿಲ್ಲದೆ, ಬೆಳೆಯಿಲ್ಲದೆ ತತ್ತರಿಸಿದರು. ಆಗ ಮಹರ್ಷಿ ಜಾಬಿಲಿಯು ಯಜ್ಞವನ್ನು ಮಾಡಲು ನಿರ್ಧರಿಸಿದನು. ಮಹರ್ಷಿ ಜಾಬಿಲಿಯು ದೇವೇಂದ್ರನನ್ನು ಕಾಮಧೇನುವನ್ನು ಕಳುಹಿಸಲು ಬೇಡಿಕೊಂಡು; ಕಾಮಧೇನುವು ವರುಣನ ಲೋಕದಲ್ಲಿತ್ತು. ದೇವೇಂದ್ರನು ಋಷಿಗೆ ನಂದಿನಿಯನ್ನು ಕರೆದುಕೊಂಡು ಹೋಗಲು ಅನುಮತಿ ನೀಡಿದನು. ನಂದಿನಿಯು ಕಾಮಧೇನುವಿನ ಮಗಳು. ಆದರೆ ನಂದಿನಿ ಜಾಬಲಿ ಜೊತೆ ಬರುವುದಿಲ್ಲ ಎಂದು ಹಠ ಹಿಡಿದಳು. ಆಗ ಜಾಬಲಿಗೆ ಕೋಪಬಂದು ಅವಳಿಗೆ ಭೂಮಿಯಲ್ಲಿ ನದಿಯಾಗಿ ಹರಿಯುವಂತೆ ಶಾಪವಿತ್ತನು. ಆಗ ನಂದಿನಿಗೆ ತನ್ನ ತಪ್ಪಿನ ಅರಿವಾಗಿ ಋಷಿಯಲ್ಲಿ ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡಳು. ಆಗ ಮುನಿಗೆ ಕರುಣೆ ಬಂದು ನಂದಿನಿಗೆ ಶಾಪ ವಿಮೋಚನೆಯಾಗಲು ಆದಿಶಕ್ತಿಯನ್ನು ಪೂಜಿಸುವಂತೆ ಹೇಳಿದಳು. ಆಗ ನಂದಿನಿಯು ಆದಿಶಕ್ತಿಯನ್ನು ಪ್ರಾರ್ಥಿಸಿದಳು. ಅವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷಳಾಗಿ ನಂದಿನಿಗೆ ಶಾಪ ಹಿಂತೆಗೆದುಕೊಳ್ಳಲು ಆಗುವುದಿಲ್ಲ; ಕಾರಣ ಋಷಿ ಮುನಿಗಳು ಕೊಟ್ಟ ಶಾಪಕ್ಕೆ ವಿಮೋಚನೆವಿದೆಯೇ ಹೊರತು ಹಿಂತೆಗೆದುಕೊಳ್ಳಲು ಆಗುವುದಿಲ್ಲ ಎಂದಳು. ಆದರೆ ನಾನು ನಿನ್ನ ಮಗಳಾಗಿ ಜನಿಸಿ ಈ ಶಾಪದಿಂದ ಮುಕ್ತಗೊಳಿಸುತ್ತೇನೆ ಎಂದು ಹೇಳಿದಳು. ಈ ಮಾತನ್ನು ಕೇಳಿ ನಂದಿನಿಗೆ ಸಮಾಧಾನವಾಯಿತು. ಆಗ ನಂದಿನಿಯು ಭೂಮಿಯಲ್ಲಿ ಕನಕಗಿರಿಯ ಹತ್ತಿರ ಮಾಘ ಪೌರ್ಣಿಮೆಯ ದಿವಸ ನದಿಯಾಗಿ ಹರಿದಳು.

ಅರುಣಾಸುರನು ಬ್ರಹ್ಮನಿಂದ ವರವನ್ನು ಪಡೆದನು. ಆದ್ದರಿಂದ ಸಾವಿನ ಭಯವಿರಲಿಲ್ಲ. ದೇವತೆಗಳಿಂದ, ಮನುಷ್ಯರಿಂದ, ಹೆಂಗಸರಿಂದ ಎರಡು ಕಾಲು, ನಾಲ್ಕು ಕಾಲು ಇರುವ ಪ್ರಾಣಿಗಳಿಂದಲೂ, ಯಾರಿಂದಲೂ ಸಾವು ಬಾರದಂತೆ ವರ ಬೇಡಿದ ಸರಸ್ವತಿಯು ಕೂಡ ಇವನಿಗೆ ಗಾಯಿತ್ರಿ ಮಂತ್ರವನ್ನು ಹೇಳಿಕೊಟ್ಟಳು. ಇವೆಲ್ಲದರಿಂದ ಇವನಿಗೆ ಅತಿಯಾದ ಶಕ್ತಿ ಬಂತು. ಇದರಿಂದ ಅವನು ದೇವತೆಗಳನ್ನು ಮತ್ತು ದೇವಲೋಕವನ್ನು ವಶಪಡಿಸಿಕೊಂಡನು. ದೇವತೆಗಳೆಲ್ಲ ಆದಿಶಕ್ತಿಯ ಹತ್ತಿರ ಹೋಗಿ ತಮ್ಮನ್ನು ಅರುಣಾಸುರನಿಂದ ಬಿಡುಗಡೆ ಮಾಡಿಸುವಂತೆ ಬೇಡಿಕೊಂಡರು. ಅರುಣಾಸುರನು ಗಾಯಿತ್ರಿ ಮಂತ್ರವನ್ನು ಪಠಿಸುವುದನ್ನು ನಿಲ್ಲಿಸುವರೆಗೂ ತಾನು ಏನು ಮಾಡಲು ಸಾಧ್ಯವಿಲ್ಲ ಎಂದು ದೇವಿಯು ಹೇಳಿದಳು. ಅವಳು ಒಂದು ಉಪಾಯವನ್ನು ದೇವತೆಗಳಿಗೆ ಹೇಳಿದಳು. ಏನೆಂದರೆ ದೇವತೆಗಳ ಗುರುವಾದ ಬೃಹಸ್ಪತಿಯನ್ನು ಕಳುಹಿಸಿ ಗಾಯಿತ್ರಿ ಮಂತ್ರವನ್ನು ಪಠಿಸುವುದನ್ನು ನಿಲ್ಲಿಸುವಂತೆ ಮಾಡಬೇಕು ಆಗ ಮಾತ್ರ ನಾನು ಅವನನ್ನು ವಧಿಸಬಹುದು ಎಂದು. ಬೃಹಸ್ಪತಿಯು ಅರುಣಾಸುರನ ಬಳಿ ಹೋಗಿ ಅವನನ್ನು ಅತಿಯಾಗಿ ಹೊಗಳಿ ಅವನಿಗೆ ಮನಸ್ಸನ್ನು ಕೆಡಿಸಿ ಆ ಮಂತ್ರವನ್ನು ಪಠಿಸುವುದನ್ನು ನಿಲ್ಲಿಸುವಂತೆ ಮಾಡಿದರು.

ಆಗ ಆ ಹೊಗಳಿಕೆಯಿಂದ ದೇವರಿಗಿಂತ ತಾನೇ ಮೇಲೆಂದುಕೊಂಡ ಅರುಣಾಸುರನು ಋಷಿಮುನಿಗಳನ್ನು, ಯಜ್ಞಗಳನ್ನು ನಾಶಮಾಡುತ್ತಾ ಬಂದನು. ಆಗ ದೇವತೆಗಳೆಲ್ಲರು ಆದಿಶಕ್ತಿಯನ್ನು ಬೇಡಿಕೊಂಡರು ಆಗ ಆದಿಶಕ್ತಿಯು ಸುಂದರಿಯಾದ ಯುವತಿಯ ರೂಪದಲ್ಲಿ (ಮೋಹಿನಿ) ಪ್ರತ್ಯಕ್ಷವಾದಳು. ಅರುಣಾಸುರನು ಇವಳನ್ನು ನೋಡಿ ಅವಳನ್ನು ಮದುವೆಯಾಗಬೇಕೆಂದು ಆಸೆ ಉಂಟಾಯಿತು. ಮೋಹಿನಿ ಹತ್ತಿರ ಹೋಗಿ ಮದುವೆಯಾಗುವಂತೆ ಒತ್ತಾಯಿಸಿದನು. ಆದರೆ ಅವಳು ಅವನ ಮಾತಿಗೆ ಕಿವಿಗೊಡಲಿಲ್ಲ ಮತ್ತು ಅವನನ್ನು ಹಂಗಿಸಿದಳು. ಇದರಿಂದ ಕೋಪಗೊಂಡ ಅರುಣಾಸುರನು ಮೋಹಿನಿಯನ್ನು ಹಿಡಿಯಲು ಹೋದನು. ಆಗ ದೇವತೆಯು ಒಂದು ಕಲ್ಲನ್ನು ಸೇರಿಕೊಂಡಳು. ಅರುಣಾಸುರನು ಆ ಬಂಡೆಯನ್ನು ತನ್ನ ಕತ್ತಿಯಿಂದ ಸೀಳಿದನು. ಆಗ ಅಲ್ಲಿ ದೇವತೆಯು ಭ್ರಮರ ರೂಪದಲ್ಲಿ ಕಾಣಿಸಿದಳು. ಅವನನ್ನು ಕೊಂದಳು. ಆಗ ದೇವತೆಗಳು ಮತ್ತು ಋಷಿಮುನಿಗಳು ಜಾಬಲಿಗೆ ದೇವಿಗೆ ಅಭಿಷೇಕ ಮಾಡುವಂತೆ ಹೇಳಿದರು. ಆಗ ದೇವಲೋಕದಿಂದ ಕಲ್ಪವೃಕ್ಷವನ್ನು (ತೆಂಗಿನ ಮರ) ತರಿಸಿ ಎಳನೀರಿನಿಂದ ಅಭಿಷೇಕ ಮಾಡಿ ದೇವಿಯನ್ನು ಸೌಮ್ಯರೂಪಕ್ಕೆ ತಂದರು. ಆದ್ದರಿಂದ ದೇವಿಯು ಲಿಂಗರೂಪದಲ್ಲಿ (ಕಲ್ಲಿನ ರೂಪದಲ್ಲಿ) ನಂದಿನಿ ನದಿಯ ಮಧ್ಯದಲ್ಲಿ ನೆಲೆನಿಂತಳು. ಆದ್ದರಿಂದ ಇವಳನ್ನು ಶ್ರೀ ದುರ್ಗಾಪರಮೇಶ್ವರಿ ಎಂದು ಕರೆದರು. ಕಟಿ ಎಂದರೆ ನಡು ಮತ್ತು ಭೂಮಿ ಎಂದರ್ಥ. ಆದ್ದರಿಂದ ಕಟೀಲನ್ನು ಭೂಮಿಯ ಭಾಗ ಎಂದು ಕರೆಯುತ್ತಾರೆ. ಇದರಿಂದ ನಂದಿನಿಯು ಸಹ ತನ್ನ ಶಾಪವನ್ನು ಕಳೆದುಕೊಂಡಳು.

ಹಬ್ಬಗಳು ಮತ್ತು ಉತ್ಸವಗಳು

ವಾರ್ಷಿಕೋತ್ಸವ

ಮೇಷ ಸಂಕ್ರಮಣ ಹಿಂದಿನ ರಾತ್ರಿಯೇ ದೇವಸ್ಥಾನದ ಆವರಣವನ್ನು ಅಲಂಕರಿಸುತ್ತಾರೆ. ಉತ್ಸವವಾಂಗ, ಅಂಕುರಾರೋಪಣ ಮತ್ತು ಉತ್ಸವಬಲಿ ಕಾರ್ಯಕ್ರಮಗಳು ನಡೆಯುತ್ತವೆ.

ಧ್ವಜಾರೋಹಣ

ಇದು ಮೇಷ ಸಂಕ್ರಮಣದ ದಿನದಂದು ನಡೆಯುತ್ತದೆ. ಇದು ವಾರ್ಷಿಕೋತ್ಸವ ಪ್ರಾರಂಭದ ಚಿಹ್ನೆ, ೮ ದಿನಗಳ ಕಾಲ ನಡೆಯುತ್ತದೆ. ಧ್ವಜಾರೋಹಣವು ಎಲ್ಲರ ಸಮಕ್ಷಮದಲ್ಲಿ ನಡೆಯುತ್ತದೆ. ಧ್ವಜಾರೋಹಣದ ನಂತರ ದರ್ಶನ ಬಲಿಯು ದೇವರಿಗೆ ಮತ್ತು ಕೊಡಮಣಿತಾಯ ದೈವಕ್ಕೆ ನಡೆಯುತ್ತದೆ. ನಂತರ ದೇವರ ಅನ್ನದ ರಾಶಿಯ ಮುಂದೆ ಇಟ್ಟು ಪೂಜೆಯನ್ನು ಮಾಡುತ್ತಾರೆ. ನಂತರ ಅನ್ನ ಸಂತರ್ಪಣೆ ನಡೆಯುತ್ತದೆ. ಅಷ್ಟಾವಧಾನ (ಅಂದರೆ ೮ ಸೇವೆಗಳು ) ದೇವರಿಗೆ ವಸಂತ ಮಂಟಪದಲ್ಲಿ ನಡೆಯುತ್ತದೆ.

ಧ್ವಜಾರೋಹಣದ ದಿನದಿಂದ ಹಿಡಿದು ರಥೋತ್ಸವದ ದಿನದವರೆಗೂ ಅಂದರೆ ೭ ದಿನದವರೆಗೂ ಬಲಿ ಪೂಜೆ ಉತ್ಸವ ಸಾಯಂಕಾಲ ೭:೩೦ ಕ್ಕೆ ನಡೆಯುತ್ತದೆ. ವಿಧವಿಧವಾದ ವಾದ್ಯಗೋಷ್ಠಿಗಳೊಂದಿಗೆ ಬಲಿ ಪೂಜೆಯನ್ನು ಮಾಡುತ್ತಾರೆ. ಇದರಲ್ಲಿ ವಿಧವಿಧವಾದ ಸುತ್ತುಗಳಿದ್ದು ಒಂದೊಂದು ವಾದ್ಯವನ್ನು ಒಂದೊಂದು ಸಾರಿ ಉಪಯೋಗಿಸಬಹುದು.  ಕ್ಷೇತ್ರಪಾಲ ಪೂಜೆಯ ನಂತರ ಪ್ರಸಾದವನ್ನು ಹಂಚುತ್ತಾರೆ. ದೇವರನ್ನು ಬೆಳ್ಳಿಯ ರಥದಲ್ಲಿ ಕೂರಿಸಿ ಗರ್ಭಗುಡಿಯ ಸುತ್ತಲೂ ಬರುತ್ತಾರೆ. ಪಲ್ಲಕ್ಕಿ ಉತ್ಸವವು ವಾರ್ಷಿಕೋತ್ಸವದ ವಿಶೇಷವಾಗಿರುತ್ತದೆ. ಸಂಗೀತ ಕಛೇರಿ, ನೃತ್ಯ, ಯಕ್ಷಗಾನ, ಮುಂತಾದ ಕಾರ್ಯಕ್ರಮಗಳನ್ನು ಸ್ಥಳೀಯರಿಂದ ಮತ್ತು ವಿವಿಧ ಸ್ಥಳಗಳಿಂದ ಬಂದ ಕಲಾವಿದರಿಂದ ನಡೆಸುತ್ತಾರೆ. ನಂತರ ಬಲಿ ಪೂಜೆ ಮತ್ತು ಮಹಾಪೂಜೆ ನಡೆಯುತ್ತದೆ.

ಪೂರ್ವಾಭಿಮುಖದ ಮೆರವಣಿಗೆ (ಮೌಡು ಸವಾರಿ)

ದೇವರನ್ನು ಸಣ್ಣ ರಥದಲ್ಲಿ ಅಂದರೆ ಚಂದ್ರಮಂಡಲದಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಸಾಗುತ್ತಾರೆ. ಇದು ದೇವಸ್ಥಾನದ ಪೂರ್ವಕ್ಕೆ ೧/೨ ಕಿ.ಮೀ ದೂರದಲ್ಲಿದೆ. ಈ ಸ್ಥಳವನ್ನು ಚಪ್ಪರ ತೋರಣ ಮತ್ತು ಹೂವಿನಿಂದ ಅಲಂಕರಿಸುತ್ತಾರೆ. ಪೂರ್ವಾಭಿಮುಖವಾಗಿರುವುದರಿಂದ ಇದನ್ನು ‘ಮೂಡುಸವಾರಿ’ ಎಂದು ಕರೆಯುತ್ತಾರೆ.

ರಜತ ರತೋತ್ಸವ

ದೇವರನ್ನು ಬೆಳ್ಳಿಯ ರಥದಲ್ಲಿ ಕೂರಿಸಿ ರಥೋತ್ಸವವನ್ನು ನಡೆಸುತ್ತಾರೆ. ವಿಶೇಷ ವಾದ್ಯದ ಕಲಾವಿದರು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪಶ್ಚಿಮಾಭಿಮುಖವಾಗಿ ಮೆರವಣಿಗೆ (ಪಡುಸವಾರಿ)

ಪೂರ್ವದ ವಿರುದ್ದ ದಿಕ್ಕಿನಲ್ಲಿ ಮೆರವಣಿಗೆಯು ನಡೆಯುತ್ತದೆ. ಮಧ್ಯಾಹ್ನ ಮಹಾಪೂಜೆಯ ನಂತರ ಈ ದಿನದಂದು ವಿಶೇಷ ಭೋಗ ಸೇವೆಯನ್ನು ಬ್ರಹ್ಮನಿಗೆ ಅರ್ಪಿಸುತ್ತಾರೆ.

ರಥೋತ್ಸವ

ಪಟಾಹ ಮತ್ತು ಉಡುಕು (ಸಂಗೀತ ವಾದ್ಯಗಳು) ಗಳೊಂದಿಗೆ ದೇವರನ್ನು ಬೀದಿಯಲ್ಲಿ ಮೆರವಣಿಗೆ ತೆಗೆದುಕೊಂಡು ಹೋಗುತ್ತಾರೆ. ದೊಡ್ಡ ರಥೋತ್ಸವವನ್ನು “ಬ್ರಹ್ಮ ರಥೋತ್ಸವ”ವೆಂದು ಕರೆಯುತ್ತಾರೆ. ದೇವರನ್ನು ರಥದಲ್ಲಿ ಕೂರಿಸಿದ ನಂತರ ರಥದಲ್ಲಿ ಹೂವಿನ ಪೂಜೆಯನ್ನು ಮಾಡುತ್ತಾರೆ. ಭಕ್ತಾದಿಗಳಿಲ್ಲಾ ಸೇರಿ ರಥಬೀದಿಯಲ್ಲಿ ರಥವನ್ನು ಎಳೆಯುತ್ತಾರೆ. ಅಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇದರ ನಂತರ ದೇವರನ್ನು ದೇವಸ್ಥಾನದ ಆವರಣಕ್ಕೆ ತರುತ್ತಾರೆ. ಅಲ್ಲಿ ವಿಶೇಷ ಪೂಜೆ ನಡೆಯುತ್ತದೆ. ನಂತರ ಪ್ರಸಾದ ಹಂಚಿಕೆ, ಬಲಿಮೂರ್ತಿಯ ಪೂಜೆ, ಮಧ್ಯಾಹ್ನದ ಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ ಮಾಮೂಲಿಯಂತೆ ಬಲಿ ದೇವರನ್ನು ಬೆಳ್ಳಿಯ ರಥದಲ್ಲಿ ಕೂರಿಸಿ ಮತ್ತು ಪಲ್ಲಕ್ಕಿಯಲ್ಲಿ ಕೂರಿಸಿ ವಿಶೇಷ ಉತ್ಸವ ನಡೆಯುತ್ತದೆ. ೪ ಯಕ್ಷಗಾನ ಮೇಳದವರು ರಾಧಕೃಷ್ಣನ ಪಾತ್ರಗಳ ವೇಷಗಳು ಪಲ್ಲಕ್ಕಿ ಉತ್ಸವದಲ್ಲಿ ನರ್ತನೆ ಮಾಡುತ್ತಾರೆ. ದೇವರನ್ನು ಗರ್ಭಗುಡಿಗೆ ತಂದ ನಂತರ ಮಹಾಪೂಜೆ ನಡೆಯುತ್ತದೆ. ಇದೆಲ್ಲ ಆದ ನಂತರ ವಿಶೇಷವಾದ ಬಲಿ ಅಂದರೆ ಭೂತಬಲಿ ನಡೆಯುತ್ತದೆ. ಇದಾದ ನಂತರ ಭಕ್ತಾದಿಗಳಿಗೆ ಪ್ರಸಾದ ಹಂಚಿಕೆ ನಂತರ ಶಯನೋತ್ಸವ ಅಂದರೆ ಹೂವಿನಿಂದಲೇ ಅಲಂಕರಿಸಿದ ಹಾಸಿಗೆಯ ಮೇಲೆ ದೇವರನ್ನು ಮಲಗಿಸಿ ಬಾಗಿಲನ್ನು ಮುಚ್ಚುವುದು.

ಅವಭೃತ

೮ನೇ ದಿನದ ಬೆಳಿಗ್ಗೆ ೬:೩೦ಕ್ಕೆ ಗರ್ಭಗುಡಿಯ ಬಾಗಿಲನ್ನು ತೆಗೆಯುವುದು. ನಂತರ ದೇವರಿಗೆ ೧೬ ಸೇವೆಗಳನ್ನು ಮಾಡುವುದು. ಹಿಂದಿನ ದಿನ ಶಯನಕ್ಕೆ ಹಾಸಿದ ಹೂವುಗಳನ್ನು ಪ್ರಸಾದವಾಗಿ ಹಂಚುವುದು. ಇದಾದ ನಂತರ ತುಲಾಭಾರ ಸೇವೆ ನಡೆಯುತ್ತದೆ. ಸಾಯಂಕಾಲ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಎಕಾರು (ತಾಂಗಡಿ – ಈ ಸ್ಥಳವು ದೇವಸ್ಥಾನದಿಂದ ೨ ಕಿ.ಮೀ ದೂರದಲ್ಲಿದ್ದು) ಇಲ್ಲಿಗೆ ತರುವರು. ಇಲ್ಲಿಗೆ ಬಂದ ನಂತರ ದೇವರಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ನೆಗರಗುಂಡಿಯ ಹತ್ತಿರ ದೇವರು ಕೂಡ ಮಣಿತ್ತಾಯ ದೈವವನ್ನು ಸಂಧಿಸುವುದು. ದೇವರನ್ನು ವಿಜೃಂಭಣೆಯಿಂದ ಮೆರೆವಣಿಗೆ ಮಾಡುತ್ತಾರೆ. ರಾತ್ರಿಯಲ್ಲಿ ರಥೋತ್ಸವವು ಹೂವಿನಿಂದ ಅಲಂಕರಿಸಿದ ದೊಡ್ಡರಥದಲ್ಲಿ ನಡೆಯುತ್ತದೆ. ನಂತರ ದೇವರನ್ನು ಕೆಳಗಿಳಿಸಿ ಚಂದ್ರಮಂಡಲ (ಚಿಕ್ಕರಥ) ದಲ್ಲಿ ಕೂರಿಸಿ ನಂದಿನಿ ನದಿಯ ಹತ್ತಿರ ವಿಧಿವತ್ತಾಗಿ ಉತ್ಸವವನ್ನು ನಡೆಸುವರು. ಇದಾದ ನಂತರ ಸಿಡಿಮದ್ದುಗಳ ಪ್ರದರ್ಶನ. ದೇವರನ್ನು ಕಟ್ಟೆಯಲ್ಲಿ ಪೂಜಿಸಿ ವಿಶಿಷ್ಟ ತೂಟೆದಾರ (ಅಗ್ನಿ ಕೇಳಿ) ಸೇವೆ ನಡೆದ ನಂತರ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ದೇವಸ್ಥಾನದ ಒಳಗೆ ಬಂದು ದರ್ಶನ ಬಲಿ ಮಾಡುತ್ತಾರೆ. ಈ ಉತ್ಸವವು ಬೆಳಿಗ್ಗೆ ೬ ರವರೆಗೆ ನಡೆಯುತ್ತದೆ. ನಂತರ ಧ್ವಜ ಅವರೋಹಣ ನಡೆಯುತ್ತದೆ.

ಪತ್ತನಾಜೆ: (ವೃಷಭ ಮಾಸದ ೧೦ನೇ ದಿವಸ)

ವೃಷಭ ತಿಂಗಳ ಈ ದಿನದಂದು ವರ್ಷದ ಕೊನೆಯ ಹಬ್ಬದ ಆಚರಣೆಯು ಉತ್ಸವ ಬಲಿ ನಡೆಯುತ್ತದೆ. ೪ ಯಕ್ಷಗಾನ ತಂಡದವರಿಂದ ಸೇವೆಯಾಟ ಈ ದಿನ ಮುಕ್ತಾಯವಾಗುತ್ತದೆ. ಈ ತಂಡದವರಿಂದ ಮುಖ್ಯ ಬೀದಿಯಲ್ಲಿ ವಿಜೃಂಭಣೆಯಿಂದ ಕೊನೆಯ ಕಾರ್ಯಕ್ರಮ ನಡೆಯುತ್ತದೆ.

ಸಿಂಹ ಸಂಕ್ರಮಣ

ಸಿಂಹಸಂಕ್ರಮಣದಿಂದ (ಆಗಸ್ಟ್-ಸೆಪ್ಟಂಬರ್) ಒಂದು ತಿಂಗಳು ದೇವರಿಗೆ ವಿಶೇಷ ಪೂಜೆಗಳು ನಡೆಯುತ್ತದೆ, ಈ ತಿಂಗಳಲ್ಲಿ ಬರುವ ಮಂಗಳವಾರ ಮತ್ತು ಶುಕ್ರವಾರದಂದು ಅತೀ ಹೆಚ್ಚು ಹೂವಿನ ಪೂಜೆ ನಡೆಯುತ್ತದೆ.

ತೆನೆ ಹಬ್ಬ ಮತ್ತು ನವಾನ್ನ ಪ್ರಾಶನ

ಭಾದ್ರಪದ ಮಾಸದಲ್ಲಿ ಪೌರ್ಣಮಿಯಲ್ಲಿ ಹಸ್ತ ನಕ್ಷತ್ರ ದಿನದಂದು ವಿಶೇಷ ಹಬ್ಬವನ್ನು ಆಚರಿಸುತ್ತಾರೆ. ಈ ದಿನದಂದು ಸೂರ್ಯೋದಯದಲ್ಲಿ ಭತ್ತದ ತೆನೆಯ ತುದಿಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಈ ಭತ್ತದ ತೆನೆಯ ತುದಿಗಳನ್ನು ಮೆರವಣಿಗೆಯಲ್ಲಿ ವಾದ್ಯಗೋಷ್ಠಿಗಳಿಂದ ಒಡಗೂಡಿ ದೇವಳಕ್ಕೆ ತಂದು ಪೂಜಿಸಿ ನಂತರ ಇದನ್ನು ಮನೆಗೆ ತೆಗೆದು ಕೊಂಡು ಹೋಗಿ ಮನೆಯ ಬಾಗಿಲಿಗೆ ಕಟ್ಟುತ್ತಾರೆ. ಮಧ್ಯಾಹ್ನ ವಿಶೇಷ ಪೂಜೆ, ನವಾನ್ನ ಪ್ರಾಶನ (ಹೊಸ್ತೂಟ) ಜರಗುತ್ತದೆ.

ಶರನ್ನವರಾತ್ರಿ

ಆಶ್ವಿಜ ಮಾಸದಲ್ಲಿ ಮೊದಲನೆ ದಿವಸದಿಂದ ೯ ದಿವಸಗಳ ಕಾಲ ಹಬ್ಬವನ್ನು ಆಚರಿಸುತ್ತಾರೆ (ನವರಾತ್ರಿ). ಈ ದಿನಗಳಲ್ಲಿ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ರಾತ್ರಿ ೪ ರಂಗಪೂಜೆ ನಡೆಯುತ್ತದೆ.

ಲಲಿತಾ ಪಂಚಮಿ

ನವರಾತ್ರಿಯ ೫ನೇ ದಿವಸ ವಿಶೇಷ ಚಂಡಿಕಾ ಹೋಮ ಮಾಡುತ್ತಾರೆ. ರಾತ್ರಿ ಸುವಾಸಿನಿ ಪೂಜೆ ಮಾಡುತ್ತಾರೆ.

ಮಹಾನವಮಿ

ಈ ದಿನ ನವರಾತ್ರಿಯ ಕೊನೆಯ ದಿನ ದೇವರಿಗೆ ಕಡುಬುನ್ನು ನೈವೇದ್ಯ ಮಾಡುತ್ತಾರೆ. ಒಂದು ರಂಗಪೂಜೆಯನ್ನು ಮಾಡುತ್ತಾರೆ. ಅಲ್ಲಿನ ಭಕ್ತಾದಿಗಳೇ ಆರತಿಯನ್ನು ತರುತ್ತಾರೆ. ಪೂಜೆಯು ದೀರ್ಘ ಕಾಲ ನಡೆಯುತ್ತದೆ. ಈ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತ ಭರತನಾಟ್ಯ, ಮತ್ತು ಯಕ್ಷಗಾನ ಇವೆಲ್ಲವು ೯ ದಿನಗಳ ಕಾಲ ನಡೆಯುತ್ತದೆ.

ವಿಜಯದಶಮಿ

ಈ ದಿನದಂದು ಮಧ್ವ ಜಯಂತಿ ನಡೆಯುತ್ತದೆ. ಈ ದಿನದಂದು ಸಾಂಪ್ರದಾಯಿಕವಾಗಿ ವಿಶೇಷ ಸಭೆ ಉಪನ್ಯಾಸ ನಡೆಯುತ್ತದೆ.

ನರಕ ಚತುದರ್ಶಿ

ಆಶ್ವಿಜ ಮಾಸದಲ್ಲಿ ಬಹುಳ ಚತುರ್ದಶಿ ದಿವಸ ಈ ಹಬ್ಬವು ನಡೆಯುತ್ತದೆ. ಈ ದಿನದಂದು ಬಡವರಿಗೆ ಎಣ್ಣೆಯನ್ನು ವಿತರಣೆ ಮಾಡುತ್ತಾರೆ. ಜನರು ಇದನ್ನು ಉಪಯೋಗಿಸಿಕೊಂಡು ಎಣ್ಣೆ ಸ್ನಾನ ಮಾಡುತ್ತಾರೆ.

ದೀಪಾವಳಿ ಬಲಿಪಾಡ್ಯಮಿ

ಆಶ್ವಿಜ ಅಮಾವಾಸ್ಯೆ ದಿನ ದೀಪಾವಳಿ ಹಬ್ಬದ ಪ್ರಯುಕ್ತ ಚಂಡಿಕಾ ಹವನವನ್ನು ಮುಖ್ಯ ಆರ್ಚಕರು ತಮ್ಮ ಕುಟುಂಬದವರೊಂದಿಗೆ ಮಾಡುತ್ತಾರೆ. ರಾತ್ರಿ ಉತ್ಸವ ಬಲಿ ಪೂಜೆ ಮಾಡುತ್ತಾರೆ. ಇದರ ನಂತರದ ದಿವಸ ಬಲಿಪಾಡ್ಯ.

ತುಳಸಿ ಪೂಜೆ

ಕಾರ್ತಿಕ ಮಾಸದ ಮೊದಲ ದಿವಸದಿಂದ ಉತ್ತಾನ ದ್ವಾದಶಿ ತನಕ. ತುಳಸಿ ಪೂಜೆಯನ್ನು ಪ್ರತಿ ದಿವಸ ರಾತ್ರಿ ಮಹಾಪೂಜೆ ನಂತರ ಮಾಡುತ್ತಾರೆ. ದ್ವಾದಶಿಯಂದು ವಿಶೇಷ ಪೂಜೆ “ಕ್ಷೀರಾಭ್ದಿ” (ಅಂದರೆ ಹಾಲಿನ ಸಮುದ್ರ) ಪೂಜೆ ಮಾಡುವುದು.

ದೀಪೋತ್ಸವ

ಕಾರ್ತಿಕ ಮಾಸದ ಬಹುಳ ಪಂಚಮಿ ದಿವಸ ದೀಪೋತ್ಸವವನ್ನು ಆಚರಿಸುತ್ತಾರೆ. ಉತ್ಸವ ಬಲಿಯನ್ನು ಮಾಡುತ್ತಾರೆ. ತರಕಾರಿಗಳು, ಲತಾ ಕುಂಜ ಹಣ್ಣುಗಳು ಮತ್ತು ಹೂವುಗಳಿಂದ ಮಂಟಪ ನಿರ್ಮಿಸಿ ಅದರಲ್ಲಿ ದೇವರ ಪೂಜೆ ಮಾಡುತ್ತಾರೆ.

ಭಜನ ಮಂಗಳೋತ್ಸವ

ದೀಪಾವಳಿಯ ದಿವಸ ಭಜನೆ ಕಾರ್ಯಕ್ರಮವನ್ನು ಆರಂಭಿಸಿ ೨೪ ದಿವಸ ಕಾಲ ಪ್ರತಿ ಸಂಜೆ ಏರ್ಪಡಿಸುತ್ತಾರೆ. ಕೊನೆ ದಿನ ಮಂಗಲೋತ್ಸವದಲ್ಲಿ ವಿವಿಧ ಸ್ಥಳಗಳಿಂದ ಬಂದಿರುವ ತಂಡಗಳಿಂದ ಭಜನಾ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ಯಕ್ಷಗಾನ ಮೇಳಗಳು

ದೀಪೋತ್ಸವದ ನಂತರ ಯಕ್ಷಗಾನದ ಕಾರ್ಯಕ್ರಮದ ದಿವಸವನ್ನು ನಿಗದಿಪಡಿಸುತ್ತಾರೆ. ಆ ದಿನದಂದು ೪ ಮೇಳಗಳು ಸೇರಿ ಆರಂಭದ ಪ್ರದರ್ಶನವನ್ನು ನೀಡುತ್ತಾರೆ.

ತೆಂಗಿನ ಕಾಯಿ ಎಳನೀರಿನ ಅಭಿಷೇಕ

ಈ ದೇವಿಯು ಅರುಣಾಸುರನನ್ನು ಭ್ರಮರರೂಪದಲ್ಲಿ ವಧಿಸಲು ರೌದ್ರಾವತಾರವನ್ನು ತಾಳಿರುತ್ತಾಳೆ. ಜಾಬಾಲಿ, ಋಷಿ ಹಾಗು ದೇವತೆಗಳು ಮೊರೆಯಿಟ್ಟು ದೇವಿಯನ್ನು ಶಾಂತಿಗೊಳಿಸಲು ಕಲ್ಪವೃಕ್ಷವನ್ನು ಭೂಮಿಗೆ ತರಿಸಿ ಅದರ ಎಳನೀರಿನಿಂದ ಅಭೀಷೇಕವನ್ನು ಮಾಡುತ್ತಾರೆ. ಅದೇ ಎಳೆನೀರಿನ ಅಭಿಷೇಕವಾಗಿದೆ. ದೇವಸ್ಥಾನ ಆವರಣದಲ್ಲಿ ಎಳನೀರು ಕುಡಿಯುವುದನ್ನು ನಿಷೇಧಿಸಲಾಗಿದೆ.

ಆಧಾರ : ಕರ್ನಾಟಕ ಟೆಂಪಲ್ ಇನ್ಫಾರ್ಮಶನ್ ಸಿಸ್ಟಮ್

Leave a Comment