ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ (ಸವದತ್ತಿ, ಬೆಳಗಾವಿ)

ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ ಯಲ್ಲಮ್ಮ” ಅಂತಾ ರೂಢನಾಮದೊಂದಿಗೆ ಪ್ರಖ್ಯಾತಳಾಗಿ ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿ ಭಕ್ತರ ಆರಾಧ್ಯ ದೇವತೆಯಾಗಿ ಭಕ್ತರ ಕಾಮಧೇನುವಾಗಿ ಇಷ್ಟಾರ್ಥ ಸಿದ್ಧಿಗಳನ್ನು ನೀಡುವ ಕರುಣಾಮಯಿ ತಾಯಿಯಾಗಿರುತ್ತಾಳೆ.

ಇತಿಹಾಸ

ಕಾಮಧೇನುವಿನ ವೈಶಿಷ್ಟ್ಯ ನೋಡಿ ಅದನ್ನು ಪಡೆಯುವ ದುರಾಸೆಯಿಂದ ಮಹಿಸ್ಪತಿ ನಗರದ ಅರಸು ಕಾರ್ತವೀರ್ಯಾರ್ಜುನ ರಾಜನು ಶ್ರೀ ಜಮದಗ್ನಿ ಋಷಿಗಳ ಮೇಲೆ ೨೧ ಸಲ ಘೋರವಾದ ಹೊಡೆತದ ಕೊಟ್ಟು ಹತ್ಯೆ ಮಾಡಿ ಕಾಮಧೇನು ಪಡೆಯಲು ಹೋದಾಗ ಅದು ಮಾಯವಾಗಿ ಬಿಡುತ್ತವೆ. ಕಾರ್ತವೀರ್ಯಾರ್ಜುನನು ಬರಿಗೈಯಿಂದ ಹಿಂತಿರುಗುತ್ತಾನೆ.

ಶ್ರೀ ಜಮದಗ್ನಿ ಋಷಿಗಳ ಮಗನಾದ ರಾಮಭದ್ರನು ಮಾತೃಹತ್ಯೆ ವಿಮೋಚನೆಯಿಂದ ಮುಕ್ತನಾಗಿ ಶಿವನಿಂದ ಪರಶು ಅಸ್ತ್ರವನ್ನು ಪಡೆದು ಪರಶುರಾಮನೆಂದು ಖ್ಯಾತಿಹೊಂದಿ, ಶ್ರೀ ಪಾರ್ವತಿಯನ್ನು ಒಲಿಸಿಕೊಂಡು ಅಂಬಿಕಾಸ್ತ್ರವನ್ನು ಪಡೆದು ಪರಮ ಪರಾಕ್ರಮಿ ಎಂದೆನಿಸಿಕೊಳ್ಳುತ್ತಾನೆ. ಶ್ರೀ ಜಮದಗ್ನಿ ಋಷಿಯ ಆಶ್ರಮದಲ್ಲೆಲ್ಲಾ ಸ್ಮಶಾನ ಮೌನ ಆವರಿಸಿ ರೇಣುಕಾ ದೇವಿಯು ಜಮದಗ್ನಿ ಋಷಿಯ ಮೇಲೆ ಬಿದ್ದು ಹೊರಳಾಡುತ್ತಾ ತನ್ನ ಕಂಕಣ ಮಂಗಳ ಸೂತ್ರವನ್ನು ತೆಗೆದು ಹಾಕಿ ಕೈಲಾಸದ ಕಡೆಗೆ ಕೈ ಮಾಡಿ “ಪರಶುರಾಮಾ ಪರಶುರಾಮಾ” ಎಂದು ದುಃಖೋದ್ಗಾರದಿಂದ ಕೂಗಲು ತಕ್ಷಣವೇ ಆಶ್ರಮಕ್ಕೆ ಪ್ರತ್ಯಕ್ಷನಾದ ಪರಶುರಾಮನು ತಂದೆಯ ಹತ್ಯೆಯನ್ನು ನೋಡಿ ಕೋಪೋದ್ರಿಕ್ತನಾದ ಪರಶುರಾಮನು ನಡೆದ ಘಟನೆಯನ್ನು ತನ್ನ ತಾಯಿಯಿಂದ ತಿಳಿದುಕೊಂಡ ಕೂಡಲೇ ತನ್ನ ಪರಶುವನ್ನು ಮೇಲೆತ್ತಿ ತಾಯಿಯಾದ ಶ್ರೀ ರೇಣುಕಾ ದೇವಿಯ ಆಶೀರ್ವಾದ ಪಡೆದು ದುಷ್ಟ ಕ್ಷತ್ರಿಯನಾದ ಕಾರ್ತವೀರ್ಯಾರ್ಜುನನಲ್ಲದೇ ಭೂಮಂಡಲದಲ್ಲಿರುವ ಎಲ್ಲ ದುಷ್ಟ ಕ್ಷತ್ರಿಯರನ್ನು ತನ್ನ ತಂದೆಯ ಮೇಲೆರಗಿದ ೨೧ ಹೊಡೆತಗಳಂತೆ ೨೧ ಸಲ ಭೂಪ್ರದಕ್ಷಣೆ ಮಾಡಿ ಸಂಹರಿಸುತ್ತೇನೆ ಎಂಬ ಘನಘೋರ ಶಪಥಗೈಯಲು ಇಡೀ ಭೂಮಂಡಲವೇ ನಡುಗಿ, ಸಪ್ತ ಸಾಗರಗಳು ಉಕ್ಕಿ ಮೇಲೆದ್ದು, ಆಕಾಶದಲ್ಲಿ ಸಹಸ್ರಾರು ಮಿಂಚುಗಳು ಒಮ್ಮೆಲೇ ಸಂಚರಿಸಿದಾಗ ಭೂಮಂಡಲದಲ್ಲಿಯ ಎಲ್ಲ ದುಷ್ಟ ಕ್ಷತ್ರಿಯರು ಭಯಭೀತಿಯಿಂದೊಡಗೂಡಿ ಜೀವಭಯದಿಂದರಲು ಪರಶುರಾಮನು ದುಷ್ಟನಾದ ಕಾರ್ತವೀರ್ಯಾರ್ಜುನನ್ನು ಸಂಹಾರಮಾಡುತ್ತಾ ೨೧ ಸಲ ಭೂ ಪ್ರದಕ್ಷಿಣೆ ಮಾಡಿ ಭೂಮಂಡಲದಲ್ಲಿಯ ಎಲ್ಲ ದುಷ್ಟ ಕ್ಷತ್ರಿಯರನ್ನು ದಾನವರನ್ನು ಮತ್ತು ರಾಕ್ಷಸರನ್ನು ಸಂಹಾರಮಾಡುತ್ತಾನೆ.

ಶ್ರೀ ಜಮದಗ್ನಿ ಮುನಿಯ ಆಶ್ರಮದಲ್ಲಿ ತಂದೆಯಾದ ರುಚಿಕಮುನಿಗಳು ತಮ್ಮ ದಿವ್ಯ ಜ್ಞಾನದ ದೃಷ್ಟಿಯಿಂದ ತನ್ನ ಮಗನಿಗೆ ಬಂದ ಕಷ್ಟ ಪರಿಹಾರಕ್ಕಾಗಿ ತಮ್ಮೊಂದಿಗೆ ಅಗಸ್ತ್ಯ, ವಶಿಷ್ಠ, ವಿಠೋಭ ಹಾಗೂ ಶಿರಶೃಂಗ ಮುಂತಾದ ಮುನಿಗಳೊಂದಿಗೆ ರಾಮಶೃಂಗ ಪರ್ವತದಲ್ಲಿರುವ ಆಶ್ರಮಕ್ಕೆ ಬಂದು ಸಂಜೀವನಿ ಮಂತ್ರದಿಂದ ಆಭಿಮಂತ್ರಿಸಿ ಜಮದಗ್ನಿಗೆ ಪುನರ್ಜನ್ಮವನ್ನು ಒದಗಿಸಿಕೊಡುತ್ತಾರೆ. ಹೀಗೆ ನಾಲ್ಕು ದಿವಸ ಶ್ರೀ ರೇಣುಕಾ ದೇವಿಗೆ ಒದಗಿಬಂದ ವಿಧವಾ ಯೋಗವನ್ನು ಕಲಿಯುಗದಲ್ಲಿ ನಾಲ್ಕು ತಿಂಗಳು ಅಂದರೆ ಮಾರ್ಗಶಿರ್ಷ ಪೌರ್ಣಿಮಿಯಿಂದ ಚೈತ್ರ ಪೌರ್ಣಿಮಿ (ದವನದ ಹುಣ್ಣಿಮೆ) ವರೆಗೆ ಕಂಕಣ ಮಂಗಳ ಸೂತ್ರ ಇರುವುದಿಲ್ಲ.

ಪರಶುರಾಮನು ತನ್ನ ಶಪಥವನ್ನು ಪೂರ್ಣಮಾಡಿ ಭೂಮಂಡಲದ ಭಾರವನ್ನು ಇಳಿಸಿ ತಂದೆ-ತಾಯಿಗಳ ಸೇವೆಗಾಗಿ ಆಶ್ರಮದಲ್ಲಿರಲು “ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ” ಎಂಬ ಗಾದೆಯಂತೆ ಆಶ್ರಮದ ಸಮೀಪದಲ್ಲಿ ಎಡಾಸುರ ಮತ್ತು ಭೇಟಾಸುರರೆಂಬ ರಾಕ್ಷಸರು ನುಸುಳಿ ಸಜ್ಜನರನ್ನು ಪೀಡಿಸುತ್ತಾ ಮುನಿಗಳು ಮಾಡುವ ಶಾಂತಿ ಹೋಮಗಳಿಗೆ ಕಂಟಕ ವ್ಯತ್ಯಯ ತರುವುದನ್ನು ಅಲ್ಲಿರುವ ಋಷಿಗಳು ಜಮದಗ್ನಿ ರೇಣುಕಾ ದೇವಿಯ ಮೊರೆಹೋಗಲು ತಂದೆ ತಾಯಿಗಳ ಅಜ್ಞೆಯಂತೆ ಪರಶುರಾಮನು ಎಡಾಸುರ ಮತ್ತು ಭೇಟಾಸುರರೆಂಬ ರಾಕ್ಷಸರನ್ನು ಚಂಡಾಡಿ ಎಡಾಸುರನ ತಲೆಯ ಬುರುಡೆಯನ್ನು ಚೌಡಕಿ ಮಾಡಿ, ಭೇಟಾಸುರನ ನರಗಳನ್ನು ತಂತಿ ಮಾಡಿ, ಶ್ರೀ ರೇಣುಕಾ ದೇವಿಯ ಮಹಿಮೆಯನ್ನು ಹಾಡುತ್ತಾ ಆಶ್ರಮಕ್ಕೆ ಬರುತ್ತಾನೆ ಅಲ್ಲದೇ ಭೂಮಂಡಲದಲ್ಲಿದ್ದ ದೈತ್ಯರನ್ನು ಸಂಹಾರ ಮಾಡಿ ಅವರ ದಂತಗಳಿಂದ ಕವಡೆಯ ಸರವನ್ನು ಮಾಡಿ ಮಹಾತಾಯಿ ಜಗನ್ಮಾತೆಗೆ ಅರ್ಪಿಸುತ್ತಾನೆ. ಅಲ್ಲದೇ ಚುಳುಂಬಾ ಹಾಗೂ ಹಿರುಂಬಾ ಎಂಬ ರಾಕ್ಷಸರನ್ನು ಸಂಹಾರ ಮಾಡುತ್ತಾನೆ.

ಅಧಿತಿದೇವಿಯಾದ ಶ್ರೀ ರೇಣುಕಾ ದೇವಿಯು, ಶ್ರೀ ಮಹೇಶ್ವರನೇ ಆದ ಜಮದಗ್ನಿ ಮತ್ತು ಶ್ರೀಮನ್ ನಾರಾಯಣನೇ ಆದ ಪರಶುರಾಮ ಅವರೆಲ್ಲರೂ ಆಶ್ರಮದಲ್ಲಿ ಕುಳಿತು ಚರ್ಚಿಸುತ್ತಿರಲು ತಾವೆಲ್ಲರೂ ಈ ಭೂಲೋಕಕ್ಕೆ ಅವತರಿಸಿ ಬಂದು ಧರ್ಮಸಂಸ್ಥಾಪನೆ ಮಾಡಿ ಭೂಲೋಕಕ್ಕೆ ಅಂಟಿ ಕೊಂಡಿದ್ದ ಭೂಭಾರವನ್ನು ಕಡಿಮೆಗೊಳಿಸಿ ತಮ್ಮ ಕರ್ತವ್ಯಗಳಿಂದ ಮುಕ್ತರಾಗಿರುವುದರಿಂದ ಈ ದೇಹಗಳನ್ನು ಪರಿತ್ಯಾಗನ ಮಾಡುವ ಉದ್ದೇಶವನ್ನು ಹೊಂದಿ ಚರ್ಚಿಸುತ್ತಿರಲು, ಶ್ರೀ ರೇಣುಕಾ ದೇವಿಯು, ಮಗನಾದ ಪರಶುರಾಮನ್ನು ಕುರಿತು ಈಗ ನಾವೆಲ್ಲರೂ ಈ ದೇಹ ಪರಿತ್ಯಾಗ ಮಾಡುವ ಸಮಯ ಬಂದಿದ್ದರಿಂದ ನಮ್ಮ ಅಂತ್ಯ ಸಂಸ್ಕಾರದ ಹೊಣೆಯನ್ನು ನೀನೇ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಲು, ಪರಶುರಾಮನು ತಾಯಿಯನ್ನು ಉದ್ದೇಶಿಸಿ ಮಹಾತಾಯಿ ನೀನೇ ಹೋದ ಮೇಲೆ ನಾನಿಲ್ಲಿರುವುದು ಉಚಿತವೇ ಎಂದು ಕೇಳಲಾಗಿ ನಾನು ಈ ಅವತಾರವಾದ ರೇಣುಕಾ ದೇವಿ ಎಂಬ ಶರೀರವನ್ನು ಮಾತ್ರ ಪರಿತ್ಯಾಗ ಮಾಡುತ್ತೇನೆ ಹೊರತು ಆತ್ಮವನ್ನಲ್ಲ. ನಾನು ಈ ಮೊದಲೂ, ಈಗಲೂ ಮತ್ತು ಈ ನಂತರವೂ ಸಹಿತ ಆಧಿತಿ ದೇವಿಯೆ. ಹೀಗಾಗಿ ಭಯಪಡಬೇಡ. ನಾನು ದೇಹ ಪರಿತ್ಯಾಗ ಮಾಡಿದ ಕೂಡಲೇ ಈ ರಾಮಶ್ರಂಗ ಪರ್ವತದ ಏಳುಕೊಳ್ಳದ ಮಧ್ಯದಲ್ಲಿರುವ “ಮಲ್ಲಿಕಾಪುರ” ಎಂಬ ಗ್ರಾಮದಲ್ಲಿ ಉದ್ಭವಿಸಿ ಬರುತ್ತೇನೆ. ಇಲ್ಲಿಯೇ ನೆಲೆಯೂರಿ ಧರ್ಮಸಂಸ್ಥಾಪನೆ, ದುಷ್ಟನಿಗ್ರಹ, ಶಿಷ್ಟರಿಗೆ ಅನುಗ್ರಹ ನೀಡುತ್ತಾ ಅಭಯಾಸ್ತಳಾಗಿ ಸೂರ್ಯ ಚಂದ್ರಾದಿಗಳು ಇರುವವರೆಗೂ ಇರುತ್ತೇನೆ. ಹೀಗೆ ನನ್ನ ಕ್ಷೇತ್ರಕ್ಕೆ ಬಂದು ಹೋಗುವ ನನ್ನ ಭಕ್ತರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ರಕ್ಷಣೆಯನ್ನು ಕೊಡುವ ಭಾರ ನಿನ್ನದು ಅಂತ ಆಶೀರ್ವಚನ ನೀಡುತ್ತಾಳೆ.

ತದನಂತರ ಶ್ರೀ ಜಮದಗ್ನಿ, ರೇಣುಕಾ ದೇವಿಯವರು ದೇಹ ಪರಿತ್ಯಾಗ ಮಾಡಿದ ಕೂಡಲೇ ದತ್ತಾತ್ರೇಯ ಮುನಿಗಳ ಆದೇಶದಂತೆ ಪರಶುರಾಮನು ತನ್ನ ಬಾಣಗಳನ್ನು ಪ್ರಯೋಗಿಸಿ ಪವಿತ್ರ ಸಪ್ತಜಲಗಳನ್ನು ಒಂದೇ ಕುಂಡದಲ್ಲಿ ಉದ್ಭವಿಸಿ ಆ ಜಲದಿಂದ ತಂದೆ ತಾಯಿಯ ಅಂತ್ಯ ಕ್ರಿಯೆ ನಡೆಸುತ್ತಾನೆ. ತದನಂತರದ ಕ್ಷಣಗಳಲ್ಲಿಯೇ ಶ್ರೀ ರೇಣುಕಾ ದೇವಿಯು ಮಗನಿಗೆ ಪ್ರತ್ಯಕ್ಷಳಾಗಿ ತಾನು ನೀಡಿದ ವಚನದಂತೆ ಏಳುಕೊಳ್ಳದಲ್ಲಿ ಉದ್ಭವವಾಗುತ್ತಾಳೆ. ಈಗಲೂ ಸಹಿತ ಈ ಕ್ಷೇತ್ರದಲ್ಲಿ ಎಣ್ಣೆಹೊಂಡವೆಂಬ ತೀರ್ಥವು ಪವಿತ್ರ ಜಲವೆಂದು ಪ್ರಖ್ಯಾತಿ ಹೊಂದಿದೆ. ಈ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಜನರು ಈ ಕ್ಷೇತ್ರದ ಯಾತ್ರೆಯ ನಂತರ ತಮ್ಮ ತಮ್ಮ ಮನೆಗಳಿಗೆ ಮರಳಿದ ನಂತರದಲ್ಲಿ ತಮ್ಮೊಂದಿಗೆ ಪರಶುರಾಮನು ರಕ್ಷಣೆಗಾಗಿ ಬಂದಿರುತ್ತಾನೆಂದು ನಂಬಿ, ಮರಳಿ ಕ್ಷೇತ್ರಕ್ಕೆ ಅವರವರ ಮನೆಯಲ್ಲಿ ಪರಶುರಾಮನನ್ನು ಬೀಳ್ಕೊಡುವ ಕಾರ್ಯಕ್ರಮವು ಇಂದಿಗೂ ನಡೆದುಕೊಂಡು ಬಂದಿರುತ್ತದೆ.

ಈ ಪೌರಾಣಿಕ ಹಿನ್ನೆಲೆಯನ್ನು ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ವರ್ಷವಿಡೀ ದೇಶ ವಿದೇಶಗಳಿಂದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಾಶೀರ್ವಾದ ಪಡೆದುಕೊಳ್ಳುತ್ತಾರೆ ಮತ್ತು ಮಹಾಮಾತೆಯಲ್ಲಿ ತಮ್ಮ ತಮ್ಮ ಇಷ್ಟಾರ್ಥಗಳನ್ನು ಕೋರಿಕೊಳ್ಳುತ್ತಾರೆ.

ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿಯ ಎಣ್ಣೆಹೊಂಡದಲ್ಲಿ ವರ್ಷವಿಡೀ ಪವಿತ್ರ ತೀರ್ಥದ ನೀರು ಹರಿಯುತ್ತಿದ್ದು, ಇದರ ಉಗಮಸ್ಥಾನ ಎಲ್ಲಿ? ಎಂಬುದು ಇನ್ನೂ ಸಂಶೋಧಕರಿಗೆ ಪ್ರಶ್ನೆಯಾಗಿದೆ. ಈ ಪವಿತ್ರ ತೀರ್ಥ ಸ್ನಾನ ಮಾಡುವುದರಿಂದ ಅತೀ ಕ್ರೂರ ಚರ್ಮ ರೋಗಗಳಾದ ಕುಷ್ಠರೋಗ, ಬಿಳುಪು (ತೊನ್ನು) ಮುಂತಾದವುಗಳು ಗುಣಮುಖವಾಗುತ್ತವೆ ಎಂಬ ಪ್ರತೀತಿ ಇದೆ.

ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶ್ರೀ ಪರಶುರಾಮನ ದರ್ಶನದಿಂದ ಇಹಪರ ಇಷ್ಟಾರ್ಥಗಳು ಸಿದ್ದಿಸುವವು ಮತ್ತು ಈ ದೇವಸ್ಥಾನದಲ್ಲಿರಿಸಿದ ಪರಶುರಾಮನ ತೊಟ್ಟಿಲನ್ನು ತೂಗುವದರಿಂದ ಮಕ್ಕಳ ಭಾಗ್ಯ ಇಲ್ಲದವರೂ ಸಹಿತ ಮಕ್ಕಳ ಭಾಗ್ಯವನ್ನು ಪಡೆಯುತ್ತಾರೆ ಎಂಬ ಪ್ರತೀತಿ ಇದೆ.

ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಭಕ್ತರು ಜಾತಿ ಮತ ಬೇಧವಿಲ್ಲದೇ ಸದ್ಭಾವನೆಯಿಂದೊಡಗೂಡಿ ದೇವಿಗೆ ಪ್ರಾರ್ಥನೆ ಪೂಜೆ ಸಲ್ಲಿಸುತ್ತಾರೆ. ಶ್ರೀ ಮಾತೆಯು ಎಲ್ಲ ಜಾತಿಯ ಜನಾಂಗದ ಮನೆ ದೇವತೆಯಾಗಿದ್ದು, ಸರ್ವ ಧರ್ಮ ರಕ್ಷಕಳಾಗಿರುತ್ತಾಳೆ. ಶಿಶುನಾಳ ಷರೀಫರಂತಹ ಮಹಾನ್ ಸಾಧು ಸತ್ಪುರುಷರು ಶ್ರೀ ರೇಣುಕಾ ದೇವಿಯ ಮಹಾತ್ಮೆಯನ್ನು ಅರಿತುಕೊಂಡು “ಎಲ್ಲಿ ಕಾಣೆ ಎಲ್ಲಿ ಕಾಣೆ ಎಲ್ಲಮ್ಮನಂತಹ ದೇವಿಯನ್ನು ಎಲ್ಲಿ ಕಾಣೆ ಎಲ್ಲಿ ಕಾಣೆ” ಅಂತ ತಮ್ಮ ಹೃದಯಾಳದಿಂದ ದೇವಿಯ ಮಹ್ಮಾತೆಯನ್ನು ಕೊಂಡಾಡಿದ್ದಾರೆ.

ಈ ಕ್ಷೇತ್ರಕ್ಕೆ ಪ್ರತಿ ವರ್ಷ ಐದು ಹುಣ್ಣಿಮೆ ಅಂದರೆ ಆಶ್ವಿಜ ಮಾಸದಲ್ಲಿ ಬರುವ ಸೀಗೆ ಹುಣ್ಣಿಮೆಯಿಂದ ಮಾಘಮಾಸದಲ್ಲಿಯ ಭಾರತ ಹುಣ್ಣಿಮೆಯ ವರೆಗೆ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ರೇಣುಕಾ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾಗುತ್ತಾರೆ. ಅಲ್ಲದೇ ವರ್ಷವಿಡೀ ಬರುವ ಎಲ್ಲ ಹುಣ್ಣಿಮೆ, ಶುಕ್ರವಾರ, ಮಂಗಳವಾರ ಶ್ರೀ ದೇವಿಯ ದರ್ಶನಕ್ಕೆ ಸಹಸ್ರಾರು ಜನ ಭಕ್ತರು ಆಗಮಿಸುತ್ತಾರೆ. ಹೀಗೆ ಇಷ್ಟಾರ್ಥ ಸಿದ್ಧಿ ಅದಿದೇವತೆಯಾದ ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ಚರಿತ್ರೆಯನ್ನು ಓದಿ ಇಲ್ಲವೇ ಓದಿಸಿ ಕೇಳಿದವರಿಗೆ ಸಕಲ ಕಷ್ಟಗಳು ಪರಿಹಾರವಾಗಿ ಇಷ್ಟಾರ್ಥ ಸಿದ್ಧಿಯಾಗುತ್ತವೆ ಅಂತ ಶ್ರೀ ಮಾರ್ಕಂಡೇಯ ಮುನಿಗಳೇ ಹಿತವಚನ ನೀಡಿರುತ್ತಾರೆ.

ಹಬ್ಬಗಳು ಮತ್ತು ಉತ್ಸವಗಳು

ಅಶ್ವಿಜ ಮಾಸ ಶುಕ್ಲ ಪಕ್ಷ ಪ್ರತಿಪದೆಯ ದಿನ (ಅಮಾವಾಸ್ಯೆಯ ನಂತರದ ದಿನ)

ಅಶ್ವಿಜ ಮಾಸ, ಶುಕ್ಲಪಕ್ಷ ದಿನ (ಅಮಾವಾಸ್ಯೆ ನಂತರದ ದಿನ) ದೇವಸ್ಥಾನದಲ್ಲಿ ಮಹಾನವಮಿಯ ಕಾರ್ಯಕ್ರಮಗಳು ಪ್ರಾರಂಭಗೊಂಡು ಶ್ರೀದೇವಿಯ ಗುಡಿಯಲ್ಲಿ ನಂದಾದೀಪ ಘಟಸ್ಥಾಪನೆ ಜರುಗುತ್ತದೆ. ಪ್ರತಿ ದಿನ ಮುಂಜಾನೆ ಶ್ರೀದೇವಿಗೆ ವಿಶೇಷ ಪೂಜೆ, ಬೆಲೆಬಾಳುವ ಸೀರೆಗಳಿಂದ ಅಲಂಕಾರ, ಅಮೂಲ್ಯ ಆಭರಣಗಳನ್ನು ಧರಿಸಿ ಅಲಂಕಾರ ಮಾಡಲಾಗುವುದು. ಒಂಭತ್ತು ದಿನಗಳವರೆಗೆ ಈ ಕಾರ್ಯಕ್ರಮ ಮುಂದುವರೆಯುತ್ತದೆ. ಪ್ರತಿದಿನ ಸಾಯಂಕಾಲ ಸಂಗೀತ ಕಛೇರಿ ಜರುಗುವುದು. ಹತ್ತನೆಯ ದಿನ ಶ್ರೀದೇವಿಯ ಪೂಜೆಯನ್ನು ಖಂಡೆ ಆಯುಧಗಳೊಂದಿಗೆ ಮಾಡಿ, ಬನ್ನಿ ಮಂಟಪಕ್ಕೆ ಭಕ್ತಾದಿಗಳು ಬೃಹತ್ ಮೆರವಣಿಗೆಯಲ್ಲಿ ಹೋಗಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುವುದು.

ಸೀಗೆ ಹುಣ್ಣಿಮೆ

ಭಕ್ತಾಧಿಗಳು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಶೀಗಿಹುಣ್ಣಿಮೆಯಿಂದ ಮುಂದಿನ ೪ ಹುಣ್ಣಿಮೆಗಳಂದು ತಪ್ಪದೇ ದೇವಿಯ ದರ್ಶನಕ್ಕೆ ಬರುವುದು ವಾಡಿಕೆ. ಅಂತೆಯೆ ೫ ಹುಣ್ಣಿಮೆಗಳಲ್ಲಿ ಸೀಗೆ ಹುಣ್ಣಿಮೆಯೆ ಪ್ರಥಮವಾದದ್ದು. ಆದ್ದರಿಂದ ಭಕ್ತಾಧಿಗಳ ಜನಸ್ತೋಮ ಈ ಹುಣ್ಣಿಮೆಯಿಂದ ಪ್ರಾರಂಭಗೊಳ್ಳುತ್ತದೆ. ಅಂದು ಅಮ್ಮನವರಿಗೆ ಬೆಳಿಗ್ಗೆ ವಿಶೇಷ ಪೂಜೆ ಅಭಿಷೇಕ ಅಲಂಕಾರವಿರುತ್ತದೆ. ಸಂಜೆ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯುವುದು. ಆಶ್ವಿಜ ಮಾಸದಲ್ಲಿ ಈ ಹುಣ್ಣಿಮೆ ಬರುತ್ತದೆ.

ಲಕ್ಷದೀಪೋತ್ಸವ

ಕಾರ್ತಿಕ ಮಾಸದ ಕೊನೆಯ ಮಂಗಳವಾರದಂದು ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಸಲಾಗುವುದು. ಕ್ಷೇತ್ರದಲ್ಲಿಯ ಮುಖ್ಯ ಗುಡಿ ಹಾಗೂ ಪೌಳಿ (ಪ್ರಾಕಾರ) ಹಾಗೂ ಎಲ್ಲ ಪರಿವಾರ ದೇವರುಗಳ ಗುಡಿಗೆ ದೀಪದಿಂದ ಅಲಂಕಾರ ಮಾಡಲಾಗುವುದು. ಸಾಯಂಕಾಲದ ಸೂರ್ಯಾಸ್ತದ ಸಮಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಬೃಹತ್ ಸಂಖ್ಯೆಯಲ್ಲಿ ಸೇರಿರುವ ಭಕ್ತಾಧಿಗಳ ಸಮ್ಮುಖದಲ್ಲಿ ದೀಪಗಳನ್ನು ಬೆಳಗಿಸಲಾಗುವುದು.

ಹೊಸ್ತಿಲ ಹುಣ್ಣಿಮೆ

ಮಾರ್ಗಶಿರ ಮಾಸ ಚತುರ್ದಶಿಯಂದು ಶ್ರೀ ಅಮ್ಮನವರ ಪತಿಯಾದ ಜಮದಗ್ನಿ ಮುನಿಯನ್ನು ಕಾಮಧೇನು ಹಾಗೂ ಕಲ್ಪವೃಕ್ಷಗಳನ್ನು ಪಡೆದುಕೊಳ್ಳುವ ದುರಾಸೆಯಿಂದ ದುಷ್ಟರಾಜನಾದ ಕಾರ್ತವೀರಾರ್ಜುನನು ಹತ್ಯೆಗೈದ ಪ್ರಯುಕ್ತ ಶ್ರೀದೇವಿಯು ತನ್ನ ಮುತ್ತೈದೆತನವನ್ನು ಕಳೆದುಕೊಂಡು ದ್ಯೋತಕವಾಗಿ ಸಾಯಂಕಾಲ ಕಂಕಣ ಮಂಗಳ ಸೂತ್ರ ವಿಸರ್ಜನೆ ಕಾರ್ಯಕ್ರಮ ಜರುಗುತ್ತದೆ. ಅಂದಿನಿಂದ ಮುಂದೆ ಬರುವ (೪ ತಿಂಗಳ ನಂತರ) ಚೈತ್ರ ಮಾಸದ ಶುಕ್ಲ ಪಕ್ಷದ ಚತುರ್ದಶಿಯವರೆಗೆ ಅಮ್ಮನವರ ಪಲ್ಲಕ್ಕಿ ಉತ್ಸವ ಜರುಗುವುದಿಲ್ಲ. ಈ ಜಾತ್ರೆಗೆ ಅಂದಾಜು ೫ ಲಕ್ಷ ಜನ ಭಕ್ತಾಧಿಗಳು ಸೇರುತ್ತಾರೆ. ಇದಕ್ಕೆ ಹೊಸ್ತಿಲ ಹುಣ್ಣಿಮೆ ಎಂದು ಕರೆಯುತ್ತಾರೆ. ಹುಣ್ಣಿಮೆಯ ದಿನ ಮುಂಜಾನೆ ಮುಖ್ಯ ಗುಡಿಯಲ್ಲಿ ಅಮ್ಮನವರ ಸಮ್ಮುಖದಲ್ಲಿ ಶಾಂತಿ ಹೋಮ ಜರಗುತ್ತದೆ.

ಹರಕೆಗಳು

ಕ್ಷೇತ್ರಕ್ಕೆ ಆಗಮಿಸಿದ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಶುಚಿ ಹಾಗೂ ಭಯ ಭಕ್ತಿಯಿಂದ ಕ್ಷೇತ್ರದಲ್ಲಿ ಅಥವಾ ಅವರವರ ಮನೆಯಲ್ಲಿ ತಯಾರಿಸಿದ ನೈವೇದ್ಯವಾದ ಕಡುಬು, ಕಾಯಿ ಪಲ್ಯ, ಅನ್ನ ಸಾರು, ರೊಟ್ಟಿ ಹಾಗೂ ಇನ್ನಿತರ ಪೂಜಾ ವಸ್ತುಗಳನ್ನು ಗುಂಪಾಗಿ ಇಲ್ಲವೆ ಪ್ರತ್ಯೇಕವಾಗಿ ಅಮ್ಮನವರ ಪಡ್ಡಲಿಗೆಯಲ್ಲಿ ಅರ್ಪಿಸಿ, ನೈವೇದ್ಯ ಮಾಡುವ ಪದ್ಧತಿ ಇರುತ್ತದೆ. ಈ ಪದ್ಧತಿಯು ಎಲ್ಲ ಹುಣ್ಣಿಮೆಗಳಲ್ಲು ಹಾಗೂ ವರ್ಷವಿಡೀ ಆಗಮಿಸುವ ಯಾತ್ರಿಕರಿಂದ ಜರುಗುತ್ತದೆ ಹಾಗೂ ದೇವಿಗೆ ತೆಂಗು ಬಾಳೆಹಣ್ಣು, ಹಣ್ಣು ಹಂಪಲ ಕರ್ಪೂರ, ಎಣ್ಣೆ, ಪುಪ್ಪ (ಮಾಲೆ) ಇತ್ಯಾದಿಗಳೊಂದಿಗೆ ಶ್ರೀ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಭಕ್ತಾಧಿಗಳು ಮೊದಲೆ ಸಂಕಲ್ಪಿಸಿದ ಕಾರ್ಯಗಳಲ್ಲಿ ಯಶಸ್ಸುಪಡೆದು ತಾವು ಸಂಕಲ್ಪಿಸಿಕೊಂಡ ವಿವಿಧ ಸೇವೆಗಳನ್ನು ಮಾಡಿಸುತ್ತಾರೆ ಮತ್ತು ದೇಣಿಗೆಗಳಾದ ಸೀರೆ ಅರ್ಪಿಸುವುದು ಉಡಿ (ಮಡಿಲಕ್ಕಿ) ತುಂಬಿಸುವುದು, ಶಿಖರಕ್ಕೆ ಸೀರೆ ಧರಿಸುವುದು, ಕಾಯಿ ಕಟ್ಟುವುದು, ಅರಿಶಿನ ಕುಂಕುಮ ಹಾಗೂ ನಾಣ್ಯಗಳನ್ನು ಶಿಖರಕ್ಕೆ ಹಾರಿಸುವುದು, ಬೆಳ್ಳಿ ಬಂಗಾರ ತಾಮ್ರ, ಹಿತ್ತಾಳೆ, ದವಸ ಧಾನ್ಯ, ವಿದ್ಯುತ್ ಸಾಮಗ್ರಿ ಮುಂತಾದವುಗಳನ್ನು ದೇಣಿಗೆ ನೀಡುವುದು. ಉರುಳು ಸೇವೆ, ದೀರ್ಘ ದಂಡ ನಮಸ್ಕಾರ ಸೇವೆ ಮಾಡುವುದು, ಪ್ರಾಕಾರದಲ್ಲಿ (ಪೌಳಿ) ಕರ್ಪೂರ ಉರಿಸುವುದು ಮುಂತಾದ ಸೇವೆಗಳನ್ನು ಮಾಡುತ್ತಾರೆ.

ಆಧಾರ : ಕರ್ನಾಟಕ ಟೆಂಪಲ್ ಇನ್ಫಾರ್ಮಶನ್ ಸಿಸ್ಟಮ್

6 thoughts on “ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ (ಸವದತ್ತಿ, ಬೆಳಗಾವಿ)”

  1. ಎಂಥ ಅದ್ಭುತ ಕಥೆ…..ನಂಗೆ ತಿಳಿದಿರಲಿಲ್ಲ ನಾನು ಭೇಟಿ ನೀಡಿದ್ದೇನೆ.ಅಲ್ಲಿಯ ಪರಿಸರ ಸುಂದರ&ಅಲ್ಲಿಯ ಜನರು ಮುಗ್ದ ಮನಸ್ಸಿನವರು

    Reply

Leave a Comment