ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ (ನೀರಮಾನ್ವಿ, ರಾಯಚೂರು)

ಶ್ರೀ ಯಲ್ಲಮ್ಮ ದೇವಿ ದೇವಸ್ಥಾನವು ನೀರಮಾನ್ವಿಯಲ್ಲಿದೆ ಇದು ಮಾನ್ವಿ ತಾಲ್ಲೂಕು ರಾಯಚೂರು ಜಿಲ್ಲೆಯಲ್ಲಿದೆ. ಈ ದೇವಸ್ಥಾನಕ್ಕೆ ೨೦೦ ವರ್ಷಗಳ ಇತಿಹಾಸವಿದೆ.

ಇತಿಹಾಸ

ಸುಮಾರು ೨೦೦ ವರ್ಷಗಳ ಹಿಂದೆ ಎತ್ತು ಮಾರಾಟ ಮಾಡುವ ವ್ಯಾಪಾರಿಗಳು ಮಾನ್ವಿಯಿಂದ ರಾಯಚೂರಿಗೆ ಹೋಗುವ ರಸ್ತೆಯಲ್ಲಿ ನೀರಮಾನ್ವಿಯ ಹೊರವಲಯದಲ್ಲಿ ರಾತ್ರಿ ತಂಗಲು ಕೆಲವೊಂದು ಗಿಡ ಮರಗಳ ಕೆಳಗೆ ಇಳಿಯುತ್ತಿದ್ದರು. ಅಂತಹ ಸಮಯದಲ್ಲಿ ಎತ್ತುಗಳನ್ನು ಗಿಡಕ್ಕೆ ಕಲ್ಲಿಗೆ ಕಟ್ಟುತ್ತಿದ್ದರು. ಹಾಗೊಂದು ಸಾರಿ ಒಂದು ಕಲ್ಲಿಗೆ ಎತ್ತುಗಳನ್ನು ಕಟ್ಟಿ ಮಲಗಿದವರಿಗೆ ಬೆಳಕು ಹರಿದಾಗ ಕಣ್ಣು ಕಾಣಿಸದಂತಾಯಿತು. ಇದೇನು ವಿಚಿತ್ರವೆಂದು ಊರವರನ್ನು ವಿಚಾರಿಸಿದಾಗ ಎತ್ತು ಎಲ್ಲಿ ಕಟ್ಟಿದ್ದಿರಿ ಎಂದು ಕೇಳಿದಾಗ ಸಹಜವಾಗಿ ಕಲ್ಲಿಗೆ ಕಟ್ಟಿದ ಸ್ಥಳವನ್ನು ತೋರಿಸುತ್ತಾರೆ. ಊರಿನ ವಯೋವೃದ್ಧರು ಅದು ಶ್ರೀ ಯಲ್ಲಮ್ಮ ದೇವಿಯ ಉದ್ಭವ ಮೂರ್ತಿ, ಎತ್ತುಗಳನ್ನು ಕಟ್ಟಿ ತಪ್ಪು ಎಸಗಿರುವಿರಿ, ಆದ್ದರಿಂದ ‘ಏನಾದರೂ ಕಾಣಿಕೆ ಒಪ್ಪಿಸುತ್ತೇನೆ’ ಎಂದು ಬೇಡಿಕೊಳ್ಳಿರಿ ಎಂದು ಹೇಳಿದಾಗ, ಅವರು ಕಣ್ಣು ಮರಳಿ ಬಂದರೆ ದೇವಸ್ಥಾನ ಕಟ್ಟಿಸುತ್ತೇವೆ ಎಂದು ಬೇಡಿಕೊಂಡರು. ನಂತರ ಅವರಿಗೆ ಕಣ್ಣು ಮರಳಿ ಬಂದವಂತೆ.

ಅಂದಿನಿಂದ ಇಂದಿನವರೆಗೆ ಜನ ಸಾಗರಪೋದಿಯಲ್ಲಿ ಶ್ರೀ ಯಲ್ಲಮ್ಮ ದೇವಿಯನ್ನು ಪೂಜಿಸಲು ಬರುತ್ತಾರೆ. ಭಾರತ ಹುಣ್ಣಿಮೆ ಆದ ಐದು ದಿನಕ್ಕೆ ಇಲ್ಲಿ ರಥೋತ್ಸವ ಇರುತ್ತದೆ. ಈ ರಥೋತ್ಸವ ವೀಕ್ಷಿಸಲು ಮುಂಬಯಿ, ಪೂನಾ, ಅಮರನಾಥ, ಸೊಲ್ಲಾಪುರ ಮತ್ತು ಇತರ ಸ್ಥಳಗಳಿಂದಲು ಭಕ್ತರು ಆಗಮಿಸುತ್ತಾರೆ.

ಹಬ್ಬಗಳು ಮತ್ತು ಉತ್ಸವಗಳು

ಜಾತ್ರಾ ಉತ್ಸವ

ಭಾರತ ಹುಣ್ಣಿಮೆಯಾದ (ಫೆಬ್ರುವರಿ ತಿಂಗಳಲ್ಲಿ ಬರುತ್ತದೆ) ಐದು ದಿನಕ್ಕೆ ಅಂದರೆ ಪಂಚಮಿ ತಿಥಿಯಂದು ವರ್ಷದ ಜಾತ್ರೆ ನಡೆಯುತ್ತದೆ. ಅಮಾವಾಸ್ಯೆಯಾದ ಪ್ರಥಮ ಮಂಗಳವಾರ ರಥವನ್ನು ರಥದ ಮನೆಯಿಂದ ಹೊರಗೆ ತೆಗೆಯಲಾಗುತ್ತದೆ.

ಭಾರತ ಹುಣ್ಣಿಮೆಯ ಮಾರನೇ ದಿನ ಉತ್ಸವಮೂರ್ತಿ ಮತ್ತು ಪಲ್ಲಕ್ಕಿಯನ್ನು ಊರೊಳಗಿನಿಂದ ಗುಡಿಗೆ ಮಂಗಳಾವಾದ್ಯಗಳೊಡನೆ ಕಳಸ ತರಲಾಗುತ್ತದೆ. ಸಾಯಂಕಾಲ ಊರೊಳಗಿನಿಂದ ಮಂಗಳಾವಾದ್ಯಗಳೊಡನೆ “ಕುಂಭ” ತರಲಾಗುವುದು. “ಕುಂಭ” ಬಂದ ನಂತರ ವಿಶೇಷ ಪೂಜೆಗಳು ದೇವಿಗೆ ನಡೆಯುತ್ತವೆ. ರಥವನ್ನು ಶುದ್ಧಗೊಳಿಸಿ ಉತ್ಸವ ಮೂರ್ತಿಯನ್ನು ರಥದೊಳಗೆ ಕೂರಿಸಿ ನಂತರ ರಥೋತ್ಸವ ನೆರೆವೇರುತ್ತದೆ. ರಥೋತ್ಸವ ನಡೆದ ಐದು ದಿನಗಳ ನಂತರ “ಕಳಸ” ಇಳಿಸಿ ಉತ್ಸವ ಮೂರ್ತಿ ಮತ್ತು ಕಳಸ ಊರೊಳಗಿನ ಮನೆಗೆ ರಾತ್ರಿ ಮಂಗಳಾವಾದ್ಯಗಳೊಡನೆ ಹಿಂತಿರುಗುತ್ತದೆ.

ದಿನದ ಪೂಜೆ

ಪ್ರತಿ ದಿನ ಪ್ರಾತಃಕಾಲ ತುಂಬಿದ ಕೊಡದಲ್ಲಿ ನೀರು ತಂದು ಮಡಿಯಲ್ಲಿ ಗುಡಿಯೊಳಕ್ಕೆ ಹೋಗಿ, ದೇವರನ್ನು ತುಂಬಿದ ಕೊಡದ ನೀರಿನಿಂದ ತೊಳೆದು ಅಭಿಷೇಕವನ್ನು ಮಾಡಿ ನಂತರ ಪತ್ರ ಹೂವುಗಳಿಂದ ಅಲಂಕರಿಸಿ,  ಮಂಗಳಾರತಿ ಮಾಡಲಾಗುತ್ತದೆ. ನಂತರ ಕಾಯಿ-ಕರ್ಪೂರ ಅರ್ಪಿಸಲಾಗುತ್ತದೆ. ವಿಶೇಷವಾಗಿ ಅಮರೆ ಗಿಡದ ಹೂವುಗಳನ್ನು ಪೂಜೆಗೆ ಬಳಸಲಾಗುತ್ತದೆ. ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ದೀಪಾವಳಿ ಪೂಜೆ

ದೀಪಾವಳಿಯ ದಿನ ಯಲ್ಲಮ್ಮ ದೇವಿಯನ್ನು ತುಂಗಭದ್ರ ನದಿಗೆ ತೆಗೆದುಕೊಂಡು ಹೋಗಲಾಗುತ್ತದೆ ಇದು ದೇವಸ್ಥಾನದಿಂದ ೧೦ ಕಿ.ಮೀ ದೂರದಲ್ಲಿದೆ. ಡೊಳ್ಳು ಮತ್ತು ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ತುಂಗಭದ್ರ ನದಿಯ ಹತ್ತಿರ ತರಲಾಗುವುದು. ಭಕ್ತಾಧಿಗಳು ಆ ರಾತ್ರಿ ಅಲ್ಲೆ ತಂಗುತ್ತಾರೆ. ಮಾರನೇ ದಿನ ಬೆಳಿಗ್ಗೆ ಉತ್ಸವ ಮೂರ್ತಿ ಮತ್ತು ಆಭರಣಗಳನ್ನು ತುಂಗಭದ್ರ ನದಿಯಲ್ಲಿ ತೊಳೆದು ನಂತರ ದೇವಿಗೆ ವಿಶೇಷ ಪೂಜೆಗಳನ್ನು ಮಾಡಲಾಗುವುದು. ಹೋಗುವಾಗ ಮತ್ತು ಬರುವಾಗ ಊರು ದಾಟಿ ಮನೆಗೆ ಕಳಸದವರು ಹೋಗುತ್ತಾರೆ. ತುಂಗಭದ್ರ ನದಿಯಿಂದ ದೇವಸ್ಥಾನಕ್ಕೆ ಹಿಂತಿರುಗಿದ ದೇವಿ ಮತ್ತು ಕಳಸವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ.

ಶ್ರಾವಣ ಮಾಸ ಪೂಜೆ

ಮಂಗಳವಾರ ದಿನ ಯಲ್ಲಮ್ಮದೇವಿಯನ್ನು ದರ್ಶನ ಮಾಡಿದರೆ ತುಂಬ ಒಳ್ಳೆಯದು. ಶ್ರಾವಣಮಾಸದ ಪ್ರತಿ ಮಂಗಳವಾರದಂದು ಶ್ರೀ ಯಲ್ಲಮ್ಮ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಶ್ರಾವಣಮಾಸದ ಮೂರನೇ ಮಂಗಳವಾರ ಶ್ರೀ ಯಲ್ಲಮ್ಮ ದೇವಿಗೆ ವಿಶೇಷವಾಗಿ ವಿಶೇಷ ಪೂಜೆಗಳು ನಡೆಯುತ್ತವೆ. ಆ ದಿನ ತುಂಗಭದ್ರ ನದಿಯಿಂದ ನೀರನ್ನು ತರಲಾಗುತ್ತದೆ ತುಂಗಭದ್ರ ನದಿಯು ದೇವಸ್ಥಾನದಿಂದ ೧೦ ಕಿ.ಮೀ ದೂರದಲ್ಲಿದೆ. ನಂತರ ತುಂಗಭದ್ರ ನದಿಯಿಂದ ತಂದ ನೀರಿನಿಂದ ಶ್ರೀ ಯಲ್ಲಮ್ಮ ದೇವಿಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಶ್ರೀ ಯಲ್ಲಮ್ಮ ದೇವಿಗೆ ಎಲ್ಲಾ ರೀತಿಯ ಆಭರಣ ಮತ್ತು ಹೂವಿನಿಂದ ಅಲಂಕರಿಸಲಾಗುತ್ತದೆ. ನಂತರ ಶ್ರೀ ಯಲ್ಲಮ್ಮ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ನಂತರ ತೀರ್ಥ ಪ್ರಸಾದ ವಿನಿಯೋಗವಾಗುತ್ತದೆ.

ಆಧಾರ : ಕರ್ನಾಟಕ ಟೆಂಪಲ್ ಇನ್ಫಾರ್ಮಶನ್ ಸಿಸ್ಟಮ್

Leave a Comment