ವಿವಿಧ ಆಪತ್ಕಾಲೀನ ಪ್ರಸಂಗದಲ್ಲಿ ಮಾಡಬೇಕಾದ ಪ್ರಥಮೋಪಚಾರ ಮತ್ತು ಇತರ ಉಪಾಯಯೋಜನೆ

೧. ಪ್ರಥಮ ಚಿಕಿತ್ಸೆಯ ವ್ಯಾಖ್ಯೆ

ಆಕಸ್ಮಿಕವಾಗಿ ರೋಗಿಯಾದ (ಅನಾರೋಗ್ಯವಾದ) / ಅಪಘಾತದಿಂದಾಗಿ ಗಾಯಗೊಂಡ ವ್ಯಕ್ತಿಗೆ ಡಾಕ್ಟರ್, ವೈದ್ಯ ಅಥವಾ ಆಂಬುಲೆನ್ಸ್ ಲಭ್ಯವಾಗುವವರೆಗೆ ಮಾಡಬೇಕಾದ ತಾತ್ಕಾಲಿಕ ಅಥವಾ ಪ್ರಾಥಮಿಕ ಸ್ವರೂಪದ ಚಿಕಿತ್ಸೆಗೆ ‘ಪ್ರಥಮ ಚಿಕಿತ್ಸೆ’ ಎನ್ನುತ್ತಾರೆ. ಪ್ರಥಮ ಚಿಕಿತ್ಸೆಯಲ್ಲಿ ವೈದ್ಯಕೀಯ ಚಿಕಿತ್ಸೆಗಳು (ಮೆಡಿಕಲ್ ಟ್ರೀಟ್‌ಮೆಂಟ್) ಒಳಗೊಂಡಿರುವುದಿಲ್ಲ.

೨. ಮೂಲಭೂತ ಉದ್ದೇಶಗಳು

ಅ. ರೋಗಿಯ ಪ್ರಾಣಾಪಾಯವನ್ನು ದೂರಗೊಳಿಸುವುದು

ಆ. ರೋಗಿಯ ಸ್ಥಿತಿ ಹೆಚ್ಚು ಗಂಭೀರವಾಗಲು ಬಿಡದಿರುವುದು

ಇ. ರೋಗಿಯು ಬೇಗನೆ ಗುಣಮುಖನಾಗಲು ಪ್ರಯತ್ನಿಸುವುದು

ಈ. ರೋಗಿಗೆ ಶೀಘ್ರ ವೈದ್ಯಕೀಯ ಸಹಾಯ ಸಿಗುವಂತೆ ಮಾಡುವುದು

ವಿಷಬಾಧೆ

ಯಾವ ವಿಷ ರೋಗಿಯ ಹೊಟ್ಟೆಯಲ್ಲಿ ಹೋಗಿದೆ ಎಂಬುದರ ಮಾಹಿತಿ ಪಡೆಯಲು ಪ್ರಯತ್ನಿಸಿ. ಆ ವಿಷಯದ ಮಾಹಿತಿಯನ್ನು ನೀಡುವ ಕೈಪಿಡಿ ಲಭ್ಯವಿದ್ದರೆ ಅದನ್ನು ಓದಿರಿ. ಅದರಲ್ಲಿ ಆ ವಿಷದಿಂದ ತೊಂದರೆಯಾದರೆ ಮಾಡಬೇಕಾದ ಉಪಚಾರದ ಬಗ್ಗೆ ಮಾಹಿತಿ ಸಿಗಬಹುದು.

೧. ವಿಷ ಸೇವಿಸಿದ ನಂತರ ಯಾವ ತೊಂದರೆಗಳು ಪ್ರಾರಂಭವಾದವು ಎಂದು ರೋಗಿಗೆ ಕೇಳಿ.

೨. ರೋಗಿಯು ಸೇವಿಸಿದ ವಿಷವು ಆಗಷ್ಟೇ (ಸಾಧಾರಣವಾಗಿ ೩೦ ನಿಮಿಷಕ್ಕಿಂತ ಕಡಿಮೆ ಕಾಲಾವಧಿಯಲ್ಲಿ) ಹೊಟ್ಟೆಯಲ್ಲಿ ಹೋಗಿದ್ದರೆ ಮತ್ತು ಆ ವಿಷವು ‘ಚುರುಚುರು ಮಾಡುವ ಮತ್ತು ಉರಿಯುವ (ಕರೋಸಿವ್) ವಿಷವಲ್ಲ ಎಂದು ಖಾತರಿಯಿದ್ದರೆ ರೋಗಿಗೆ ವಾಂತಿಮಾಡಿಸಿ. ವಾಂತಿಯಾಗಲು ರೋಗಿಯ ಗಂಟಲಿನ ಒಳಗಿನ ಹಿಂಭಾಗಕ್ಕೆ ಚಮಚ ಹಾಕಿ ಅಲ್ಲಾಡಿಸಿ ಅಥವಾ ಅವನಿಗೆ ಎರಡು ಚಮಚ ಉಪ್ಪು ಹಾಕಿ ಕರಗಿದ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಲು ಕೊಡಿ.

೩. ರೋಗಿಯಿಂದ ವಾಂತಿ ಮಾಡಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ, ಅವನು ತೆಗೆದುಕೊಂಡ ವಿಷ ಜೀರ್ಣಾಂಗವ್ಯೂಹದ ಮೂಲಕ ಶರೀರವು ಹೀರಿಕೊಳ್ಳುವ ವೇಗವನ್ನು ತಗ್ಗಿಸಲು ಮುಂದಿನ ಪೈಕಿ ಯಾವುದಾದರೊಂದು ಕೃತಿ ಮಾಡಿ.

ಅ. ರೋಗಿಗೆ ಸಾಕಷ್ಟು ತಣ್ಣೀರು (ಸಾಧ್ಯವಿದ್ದರೆ ಮಂಜುಗಡ್ಡೆ ನೀರು) ಕುಡಿಯಲು ಕೊಡಿ.

ಆ. ರೋಗಿಗೆ ಒಂದು ಲೋಟ ಎಳನೀರು ಕುಡಿಯಲು ಕೊಡಿ.

ಇ. ರೋಗಿಗೆ ಒಂದು ಲೋಟ ಹಾಲು ಕುಡಿಯಲು ಕೊಡಿ.

ಈ. ಒಂದು ಮೊಟ್ಟೆಯನ್ನು ಒಡೆದು ಅದನ್ನು ನೀರಿನಲ್ಲಿ ಕಲಸಿ ಆ ನೀರನ್ನು ರೋಗಿಗೆ ಕುಡಿಯಲು ಕೊಡಿ.

ನಾಯಿ ಕಡಿತ

ಕೇಂದ್ರ ಸರಕಾರವು ತಯಾರಿಸಿದ ‘ನ್ಯಾಶನಲ್ ಗೈಡ್‌ಲೈನ್ಸ್ ಫಾರ್ ಮ್ಯಾನೇಜ್‌ಮೆಂಟ್ ಆಫ್ ಎನಿಮಲ್ ಬೈಟ್ಸ್’ ಅನ್ನು ಆಧರಿಸಿದ ಪ್ರಥಮ ಚಿಕಿತ್ಸೆಯನ್ನು ಮುಂದೆ ಕೊಡುತ್ತಿದ್ದೇವೆ. ಈ ಪ್ರಥಮ ಚಿಕಿತ್ಸೆಯನ್ನು ನಾಯಿ ಅಥವಾ ಇತರ ಬಿಸಿ ರಕ್ತದ ಪ್ರಾಣಿಗಳು ಕಚ್ಚಿದಾಗ ನೀಡಬೇಕು.

೧. ನಾಯಿ ಕಚ್ಚಿದಾಗ ಎಲ್ಲಿಯವರೆಗೆ ‘ಅದಕ್ಕೆ ಹುಚ್ಚು ಹಿಡಿದಿಲ್ಲ ಎಂದು ಖಾತರಿಯಾಗುವುದಿಲ್ಲವೋ, ಅಲ್ಲಿಯವರೆಗೆ ‘ಹುಚ್ಚು ನಾಯಿ ಕಚ್ಚಿದೆ ಎಂದು ಊಹಿಸಿ ಎಲ್ಲ ಪ್ರಥಮ ಚಿಕಿತ್ಸೆಗಳನ್ನು ನೀಡಬೇಕು.

೨. ರೋಗಿಯ ಗಾಯವನ್ನು ತಕ್ಷಣ ಸಾಬೂನಿನಿಂದ (ಲಭ್ಯವಿದ್ದರೆ ‘ಲೈಫ್‌ಬಾಯ್ ನಂತಹ ‘ಕಾರ್ಬೋಲಿಕ್ ಆಮ್ಲವಿರುವ ಸಾಬೂನಿನಿಂದ) ನಿಧಾನವಾಗಿ ತೊಳೆಯಿರಿ. ನಂತರ ಗಾಯಕ್ಕೆ ಹರಿಯುವ ನೀರನ್ನು (ಉದಾ. ನಲ್ಲಿ ನೀರು) ಕನಿಷ್ಟ ೧೦ ನಿಮಿಷಗಳ ಕಾಲ ಸತತವಾಗಿ ಬಿಟ್ಟು ಗಾಯವನ್ನು ತೊಳೆಯಿರಿ. ನಾಯಿ ಕಚ್ಚಿದ ಮೇಲೆ ಆದಷ್ಟು ಬೇಗ ರೋಗಿಯ ಗಾಯವನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ನಾಯಿ ಕಚ್ಚಿದಾಗ ಗಾಯದಲ್ಲಿ ಹೋಗಿರುವ ರೋಗಾಣುಗಳು ಶರೀರದಿಂದ ಹೊರಗೆ ಹೋಗುತ್ತವೆ ಮತ್ತು ಅವುಗಳಿಗೆ ಶರೀರದಲ್ಲಿ ಹರಡಲು ಅವಕಾಶ ಸಿಗುವುದಿಲ್ಲ. ನಾಯಿ ಕಚ್ಚಿದ ಮೇಲೆ ಗಾಯವನ್ನು ತೊಳೆಯಲು ತಡವಾದರೂ ಗಾಯವನ್ನು ತೊಳೆಯಬೇಕು. ಇದರಿಂದ ಗಾಯದಲ್ಲಿ ಉಳಿದ ಅಲ್ಪಸ್ವಲ್ಪ ರೋಗಾಣುಗಳಾದರೂ ಶರೀರದಿಂದ ಹೊರಗೆ ಹೋಗುತ್ತವೆ.

೩. ರೋಗಿಯ ಗಾಯವನ್ನು ತೊಳೆಯುವಾಗ ಗಾಯವನ್ನು ನಿಮ್ಮ ಕೈಯಿಂದ ಸ್ಪರ್ಶಿಸಬೇಡಿ. (ಹಾಗೊಂದು ವೇಳೆ ಗಾಯವನ್ನು ಮುಟ್ಟಲೇ ಬೇಕಾಗಿದ್ದರೆ ಬಳಸಿ ಎಸೆಯುವ (ಡಿಸ್ಪೋಸೆಬಲ್) ಕೈಗವಸುಗಳನ್ನು ಬಳಸಿ.)

೪. ರೋಗಿಯ ಗಾಯಕ್ಕೆ ಮಣ್ಣು, ಮೆಣಸು ಇತ್ಯಾದಿಗಳನ್ನು ಹಚ್ಚಲು ಬಿಡಬೇಡಿ.

೫. ಮುಂದಿನ ಉಪಚಾರಕ್ಕಾಗಿ ರೋಗಿಯನ್ನು ಆದಷ್ಟು ಬೇಗ ಆಸ್ಪತ್ರೆಗೆ ಕಳುಹಿಸಿ.

ಹಾವು ಕಡಿತ

೧. ಉದ್ದಕ್ಕೆ ಬೆಳೆದ ಹುಲ್ಲಿನ ಜಾಗದಲ್ಲಿ ಹಾವು ಕಚ್ಚಿದ್ದರೆ ಅಥವಾ ಇತರ ಅಡಚಣೆಯಿರುವ ಜಾಗದಲ್ಲಿರುವ ರೋಗಿಯನ್ನು ಅಲ್ಲಿಂದ ಹತ್ತಿರದಲ್ಲಿರುವ ತೆರೆದ ಮತ್ತು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಿರಿ.

೨. ರೋಗಿಯ ಕಾಲಿಗೆ ಕಚ್ಚಿದ್ದರೆ ಅವನನ್ನು ನಡೆಸಬೇಡಿ.

೩. ರೋಗಿಗೆ ನೆಲದ ಮೇಲೆ ಅಥವಾ ಮಂಚದ ಮೇಲೆ ಮಲಗಲು ಹೇಳಿ / ಮಲಗಿಸಿ.

೪. ರೋಗಿಗೆ ಮಾನಸಿಕ ಆಧಾರ ಕೊಡಿ.

೫. ರೋಗಿಯ ಕೈಗೆ ಹಾವು ಕಚ್ಚಿದ್ದರೆ ಅವನ ಕೈಯಲ್ಲಿರುವ ಉಂಗುರ, ಕೈಗಡಿಯಾರ, ಬಳೆ, ಹಾಗೆಯೇ ಕಾಲಿಗೆ ಹಾವು ಕಚ್ಚಿದ್ದರೆ ಪಾದರಕ್ಷೆ, ಕಾಲುಂಗುರ, ಗೆಜ್ಜೆ ಇತ್ಯಾದಿಗಳನ್ನು ತೆಗೆದು ಅವರ ಸಂಬಂಧಿಕರಿಗೆ ಒಪ್ಪಿಸಿ; ಏಕೆಂದರೆ ಹಾವು ಕಚ್ಚಿದ ಭಾಗ ಊದಿಕೊಂಡರೆ ಇಂತಹ ವಸ್ತುಗಳಿಂದ ರೋಗಿಯ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತವೆ.

೬. ಹಾವು ಕಚ್ಚಿದ ಅವಯವದ ಚಲನವಲನವಾಗದಂತೆ ನೋಡಿಕೊಳ್ಳಿ. ರೋಗಿಗೂ ಹಾಗೆ ಚಲನವಲನ ಮಾಡಬಾರದೆಂದು ಹೇಳಿ.

೭. ಹಾವು ಕಡಿತದಿಂದ ಆಗಿರುವ ಗಾಯಕ್ಕೆ ಸೋಂಕುನಿರೋಧಕ (ಸ್ಟರಾಯ್ಲ) ಗಾಜ್ ಡ್ರೆಸಿಂಗ್ (ಇದು ಲಭ್ಯವಿಲ್ಲದಿದ್ದರೆ ಸಾದಾ ಡ್ರೆಸಿಂಗ್, ಕರವಸ್ತ್ರ ಇತ್ಯಾದಿ) ಇಟ್ಟು ಅಲ್ಲಿ ಅಂಟುಪಟ್ಟಿ ಹಚ್ಚಿ.

೮. ಕೈ ಅಥವಾ ಕಾಲಿಗೆ ಹಾವು ಕಚ್ಚಿದ್ದರೆ ಆ ಅವಯವದ ಕಚ್ಚಿರುವ ಸ್ಥಾನದ ಎರಡೂ ಬದಿಗಳ ಸಂದುಗಳು ಅಲುಗಾಡದಂತೆ ಸಂಬಂಧಿತ ಅವಯವಕ್ಕೆ ಆಧಾರಕ್ಕಾಗಿ ಹಲಗೆಯನ್ನು ಕಟ್ಟಿ.

೯. ರೋಗಿಗೆ ಮಲಗಲು ಬಿಡಬೇಡಿ. ಅವನಿಗೆ ನಿದ್ರೆ ತಗಲಿದರೆ ಅವನ ಲಕ್ಷಣಗಳಲ್ಲಿ ಅಥವಾ ಅವನಿಗಾಗುತ್ತಿರುವ ತೊಂದರೆಗಳಲ್ಲಿ ಏನಾದರೂ ಬದಲಾವಣೆಯಾಗುತ್ತಿದ್ದರೆ ಗೊತ್ತಾಗುವುದಿಲ್ಲ.

೧೦. ಪ್ರಥಮ ಚಿಕಿತ್ಸೆ ನೀಡಲು ತುಂಬಾ ಸಮಯವನ್ನು ತೆಗೆದುಕೊಳ್ಳದೇ ರೋಗಿಯನ್ನು ಆದಷ್ಟು ಬೇಗನೇ ಹಾವು ಕಡಿತದ ವಿಷ ನಿರೋಧಕ ಲಸಿಕೆ ಲಭ್ಯವಿರುವ ಆಸ್ಪತ್ರೆಗೆ ಕಳುಹಿಸಿ. ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಾಗ ‘ಹಾವು ಕಚ್ಚಿರುವ ಅವನ ಅವಯವವು ಹೃದಯದ ಮಟ್ಟಕ್ಕಿಂತ ಕೆಳಗಿರುವಂತೆ ನೋಡಿಕೊಳ್ಳಿ.

ಅಸ್ತಮಾದಿಂದ (ಉಬ್ಬಸದಿಂದ) ಉಸಿರುಗಟ್ಟಿದ ರೋಗಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆ

ಉಬ್ಬಸ (ಬ್ರೋಂಕಿಯಲ್ ಅಸ್ತಮಾ) ರೋಗವು ಚಿಕ್ಕ ಮಕ್ಕಳು, ಪ್ರೌಢರು, ವೃದ್ಧರು ಇಂತಹ ಯಾವುದೇ ವಯಸ್ಸಿನ ವ್ಯಕ್ತಿಗಳಿಗೂ ಆಗಬಹುದು. ಶ್ವಾಸಕೋಶದಲ್ಲಿನ ಶ್ವಾಸನಾಳಗಳು ಅತಿಯಾಗಿ ಆಕುಂಚನಗೊಂಡಾಗ ಈ ರೋಗವುಂಟಾಗುತ್ತದೆ. ಈ ರೋಗದಲ್ಲಿ ಶ್ವಾಸವನ್ನು ಹೊರಗೆ ಬಿಡಲು ರೋಗಿಗೆ ಹೆಚ್ಚು ಕಷ್ಟಕರವಾಗುತ್ತದೆ.

ಅ. ಉಬ್ಬಸದಿಂದ ಉಂಟಾದ ಏದುಸಿರು ಬೇಗನೇ ಹತೋಟಿಗೆ ಬರದಿದ್ದರೆ ರೋಗಿಗೆ ತುಂಬಾ ಆಯಾಸವಾಗುತ್ತದೆ. ಆದುದರಿಂದ ರೋಗಿಗೆ ಯಾವ ಶಾರೀರಿಕ ಸ್ಥಿತಿಯಲ್ಲಿ ಆರಾಮವೆನಿಸುತ್ತದೆಯೋ ಆ ಸ್ಥಿತಿಯಲ್ಲಿರಲು ಹೇಳಿ. (ಉಬ್ಬಸದ ರೋಗಿಗಳಿಗೆ ಕುಳಿತುಕೊಂಡ ಸ್ಥಿತಿಯಲ್ಲಿ ಹೆಚ್ಚು ಆರಾಮವೆನಿಸುತ್ತದೆ.)

ಆ. ರೋಗಿಗೆ ಮಾನಸಿಕ ಆಧಾರ ಕೊಡಿ.

ಇ. ರೋಗಿಯ ಬಳಿ ಮಾತ್ರೆ ಅಥವಾ ಔಷಧಿಯಿದ್ದಲ್ಲಿ ಅವನಿಗೆ ಅದನ್ನು ತಕ್ಷಣ ತೆಗೆದುಕೊಳ್ಳಲು ಹೇಳಿ. ಅವನಲ್ಲಿ ‘ಇನ್‌ಹೇಲರ್ ಇದ್ದರೆ ಅವನಿಗೆ ಅದರ ಔಷಧಿಯ ಸ್ಪ್ರೇಯನ್ನು ಬಾಯಿಂದ ಉಸಿರಾಟದ ಮೂಲಕ ಒಳಗೆಳೆಯಲು ಹೇಳಿ. (ಹೆಚ್ಚಿನ ಉಬ್ಬಸ ರೋಗಿಗಳು ಹಠಾತ್ತಾಗಿ ಏದುಸಿರು ಬಂದರೆ ಉಪಯೋಗಿಸಲು ಉಬ್ಬಸದ ಔಷಧಿ, ಮಾತ್ರೆ, ‘ಇನ್‌ಹೇಲರ್ ಇತ್ಯಾದಿಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ.)

ಈ. ರೋಗಿಯನ್ನು ವೈದ್ಯರಲ್ಲಿಗೆ ಕಳುಹಿಸಿ.

ಅಧಿಕ ಒತ್ತಡದ ವಿದ್ಯುತ್ ಆಘಾತವಾಗುವುದು

ಎತ್ತರದಲ್ಲಿರುವ ವಿದ್ಯುತ್ ತಂತಿಗಳಲ್ಲಿ ಅಧಿಕ ಒತ್ತಡದ ವಿದ್ಯುತ್ ಪ್ರವಾಹ (ಹೈ ವೋಲ್ಟೇಜ್ ಕರೆಂಟ್) ಹರಿಯುತ್ತಿರುತ್ತದೆ. ಈ ವಿದ್ಯುತ್ಪ್ರವಾಹವು ಅತ್ಯಂತ ಅಪಾಯಕಾರಿಯಾಗಿರುತ್ತದೆ. ಇಂತಹ ತಂತಿಗಳ ಸಂಪರ್ಕಕ್ಕೆ ಬಂದ ವ್ಯಕ್ತಿಯು ಗಂಭೀರ ರೀತಿಯಲ್ಲಿ ಸುಟ್ಟುಕೊಳ್ಳುತ್ತಾನೆ. ಅವನ ಶರೀರದ ಸ್ನಾಯುಗಳು ಆಕುಂಚನಗೊಳ್ಳುವುದರಿಂದ ಅವನು ದೂರಕ್ಕೆ ಎಸೆಯಲ್ಪಡಬಹುದು, ಹಾಗೆಯೇ ಅವನ ಹೃದಯಕ್ರಿಯೆ ಮತ್ತು ಉಸಿರಾಟ ನಿಲ್ಲಬಹುದು.

೧. ವಿದ್ಯುತ್ಪ್ರವಾಹವನ್ನು ಕಡಿತಗೊಳಿಸಲಾಗಿದೆ ಅಥವಾ ಸ್ಥಗಿತ ಗೊಳಿಸಲಾಗಿದೆ ಎಂಬುದು ಖಾತರಿಯಾಗುವವರೆಗೆ ಅಪಘಾತ ಪೀಡಿತ ವ್ಯಕ್ತಿಯ ಹತ್ತಿರ ಹೋಗಬೇಡಿರಿ. (ಅಧಿಕ ಒತ್ತಡದ ತಂತಿಗಳಿಂದ ಕನಿಷ್ಟ ೧೮ ಮೀಟರ್ ದೂರವಿರಿ; ಏಕೆಂದರೆ ಅಧಿಕ ಒತ್ತಡದ ತಂತಿಗಳಲ್ಲಿರುವ ವಿದ್ಯುತ್ಪ್ರವಾಹವು ೧೮ ಮೀಟರ್ ಅಂತರದ ವರೆಗಿನ ವ್ಯಕ್ತಿಯ ವರೆಗೆ ಬರಬಹುದು.)

೨. ವಿದ್ಯುತ್ಪ್ರವಾಹವನ್ನು ಕಡಿತಗೊಳಿಸಲಾಗಿದೆ ಅಥವಾ ಸ್ಥಗಿತಗೊಳಿಸಲಾಗಿದೆ ಎಂಬುದು ಖಾತರಿಯಾದ ನಂತರವೇ ರೋಗಿಯನ್ನು ಪರಿಶೀಲಿಸಿರಿ

೩. ಆಂಬುಲೆನ್ಸ್ ಕರೆಸಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿ.

ವೆಲ್ಡಿಂಗ್ ಮಾಡುವಾಗ ಕಣ್ಣುಗಳು ಸುಟ್ಟಿದ್ದರೆ ನೀಡಬೇಕಾದ ಪ್ರಥಮ ಚಿಕಿತ್ಸೆ

ವೆಲ್ಡಿಂಗ್ ಮಾಡುವಾಗ ಕಣ್ಣುಗಳುಸುಟ್ಟರೆ ತೀವ್ರ ವೇದನೆಗಳಾಗುತ್ತವೆ. ವೆಲ್ಡಿಂಗ್‌ನ ಕಿಡಿಗಳಲ್ಲಿ ಅಲ್ಟ್ರಾ-ವಯಲೆಟ್ ಕಿರಣಗಳಿರುತ್ತವೆ. ಅವು ಕಣ್ಣುಗಳ ಸಂಪರ್ಕಕ್ಕೆ ಬಂದರೆ ರೋಗಿಯ ದೃಷ್ಟಿಯ ಮೇಲೆಯೂ ಪರಿಣಾಮವಾಗ ಬಲ್ಲದು.

೧. ನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯ ಪಟ್ಟಿಯನ್ನು / ಕರವಸ್ತ್ರವನ್ನು ಕಣ್ಣುಗಳ ಮೇಲಿಡಿ.

೨. ರೋಗಿಯನ್ನು ತಕ್ಷಣ ನೇತ್ರತಜ್ಞರ ಬಳಿ ಕಳುಹಿಸಿ.

Leave a Comment