ಸೇತುಬಂಧ ರಾಮೇಶ್ವರ ಮಹಾತ್ಮೆ

ಭಾರತದ ದಕ್ಷಿಣ-ಪೂರ್ವ ದಂಡೆಯ ಮೇಲಿರುವ ಮಹತ್ವಪೂರ್ಣ ತೀರ್ಥ ಕ್ಷೇತ್ರವೆಂದರೆ ರಾಮೇಶ್ವರಂ ! ರಾಮೇಶ್ವರಂ ದರ್ಶನಕ್ಕೆ ಹಿಂದೂ ಧರ್ಮ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ.

೧. ಇತಿಹಾಸ

ದಶಗ್ರಂಥಿ ಬ್ರಾಹ್ಮಣನಾಗಿದ್ದ ರಾವಣನ ವಧೆಯ ಬಳಿಕ ಅಗಸ್ತೀ ಋಷಿಗಳು ಪ್ರಭು ಶ್ರೀರಾಮನಿಗೆ ಬ್ರಹ್ಮಹತ್ಯೆಯ ಪಾಪದಿಂದ ಮುಕ್ತನಾಗಲು ಸಾಗರತೀರದಲ್ಲಿ ಜ್ಯೇಷ್ಠ ಶುದ್ಧ ದಶಮಿಯ ಮುಹೂರ್ತದಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಆದೇಶಿಸಿದರು. ಈ ಕಾರಣದಿಂದ ಶಿವನ ದಿವ್ಯಲಿಂಗವನ್ನು ತರಲು ಮಾರುತಿಯು ಕೈಲಾಸಕ್ಕೆ ಹೋದನು. ಆದರೆ ಶಿವನ ದರ್ಶನವಾಗದ ಕಾರಣ ಮಾರುತಿಯು ತಪಸ್ಸನ್ನು ಪ್ರಾರಂಭಿಸಿದನು. ಕಾಲಾಂತರದಲ್ಲಿ ಶಿವನು ಪ್ರಕಟಗೊಂಡು ಮಾರುತಿಗೆ ತನ್ನ ದಿವ್ಯಲಿಂಗವನ್ನು ನೀಡಿದನು. ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ಮಾರುತಿಗೆ ಮುಹೂರ್ತದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಸೀತೆಯು ಮರಳಿನಿಂದ ಒಂದು ಲಿಂಗವನ್ನು ತಯಾರಿಸಿ ಕೊಟ್ಟಳು. ಋಷಿಗಳ ಆದೇಶ ಪಡೆದು ನಂತರ ರಾಮನು ಅದರ ಸ್ಥಾಪನೆಯನ್ನೇ ಮಾಡಿದನು. ಇದೇ ಆ ರಾಮೇಶ್ವರದ ಲಿಂಗವಾಗಿದೆ. ಸ್ಥಳೀಯ ಜನರು ಅದನ್ನು ರಾಮನಾಥಸ್ವಾಮಿ ಎಂದು ಕರೆಯುತ್ತಾರೆ.

ಮಾರುತಿಯು ಮರಳಿ ಬಂದಾಗ ಅವನಿಗೆ ಶ್ರೀರಾಮನು ಲಿಂಗವನ್ನು ಸ್ಥಾಪಿಸಿರುವುದನ್ನು ಕಂಡು ಬಹಳ ದುಃಖವಾಯಿತು. ಆಗ ರಾಮನು ಮಾರುತಿಗೆ ತಾನು ಸ್ಥಾಪಿಸಿದ ಲಿಂಗದ ಹತ್ತಿರವೇ ಅವನು ತಂದ ಲಿಂಗವನ್ನು ಸ್ಥಾಪಿಸಲು ಹೇಳಿದನು. ಅಲ್ಲದೇ, ಮಾರುತಿ ಸ್ಥಾಪಿಸಿದ ಲಿಂಗದ ದರ್ಶನ ಪಡೆಯದೇ ಇದ್ದರೆ ಭಕ್ತರಿಗೆ ರಾಮೇಶ್ವರ ದರ್ಶನದ ಫಲ ದೊರೆಯಲಾರದು ಎಂದೂ ಹೇಳಿದನು. ಈ ಲಿಂಗಕ್ಕೆ ಕಾಶಿವಿಶ್ವನಾಥ ಅಥವಾ ಹನುಮದೀಶ್ವರ ಎಂದು ಕರೆಯುತ್ತಾರೆ.

೨. ಕ್ಷೇತ್ರ ಮಹಾತ್ಮೆ

೨. ಅ. ಕಾಶಿಯಾತ್ರೆಗೆ ಪೂರ್ಣತ್ವವನ್ನು ನೀಡುವ ತೀರ್ಥಸ್ಥಾನ ! : ಉತ್ತರ ಭಾರತದಲ್ಲಿ ಕಾಶಿ ಕ್ಷೇತ್ರಕ್ಕೆ ಧಾರ್ಮಿಕ ಮಹತ್ವವಿರುವಂತೆ, ದಕ್ಷಿಣ ಭಾರತದಲ್ಲಿ ರಾಮೇಶ್ವರಂ ಕ್ಷೇತ್ರಕ್ಕೆ ಮಹತ್ವವಿದೆ. ಧರ್ಮಗ್ರಂಥಕ್ಕನುಸಾರ ಕಾಶಿಯ ತೀರ್ಥಯಾತ್ರೆಯು ಬಂಗಾಳದ ಉಪಸಾಗರ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಸಂಗಮದ ಬಳಿಯಿರುವ ಧನುಷ್ಕೋಡಿಯಲ್ಲಿ ಸ್ನಾನ ಮಾಡಿದ ನಂತರ ಮತ್ತು ಬಳಿಕ ಕಾಶಿಯ ಗಂಗಾಜಲದಿಂದ ರಾಮೇಶ್ವರನಿಗೆ ಅಭಿಷೇಕ ಮಾಡಿದ ನಂತರವೇ ಪೂರ್ಣವಾಗುತ್ತದೆ.

೨ ಆ. ಚಾರ್‌ಧಾಮ (ನಾಲ್ಕು) ಯಾತ್ರೆಗಳಲ್ಲಿನ ಒಂದು ಧಾಮ ! : ರಾಮೇಶ್ವರಂ ಹಿಂದೂಗಳ ಪವಿತ್ರ ಚಾರ್‌ಧಾಮ ಯಾತ್ರೆಗಳಲ್ಲಿನ ದಕ್ಷಿಣಧಾಮವಾಗಿದೆ. ಹಿಂದೂಗಳ ಜೀವನಯಾತ್ರೆಯು ಬದ್ರಿನಾಥ, ದ್ವಾರಕಾ, ಪುರಿ ಮತ್ತು ರಾಮೇಶ್ವರಂ ಹೀಗೆ ಈ ಚಾರ್‌ಧಾಮಗಳ ಯಾತ್ರೆಯ ಬಳಿಕವೇ ಪೂರ್ಣಗೊಳ್ಳುತ್ತದೆ.

೨ ಇ. ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದು ಜ್ಯೋತಿರ್ಲಿಂಗ ! : ರಾಮೇಶ್ವರವು ಭಾರತದಲ್ಲಿರುವ ೧೨ ಪ್ರಮುಖ ಜ್ಯೋತಿರ್ಲಿಂಗಗಳಲ್ಲಿ ಒಂದು ಜ್ಯೋತಿರ್ಲಿಂಗವಾಗಿದೆ.

೩. ದೇವಸ್ಥಾನದ ವೈಶಿಷ್ಟ್ಯಪೂರ್ಣ ಸ್ಥಾನಗಳು

೩ ಅ. ರಾಮೇಶ್ವರ (ರಾಮನಾಥಸ್ವಾಮಿ) : ಸೀತೆಯು ಮರಳಿನಿಂದ ತಯಾರಿಸಿದ ಈ ಶಿವಲಿಂಗವು ಮುಖ್ಯ ದರ್ಶನ ಸ್ಥಾನವಾಗಿದೆ.

೩ ಆ. ವಿಶ್ವನಾಥ (ಹನುಮದೀಶ್ವರ) : ಇದು ಮಾರುತಿಯು ತಂದ ಶಿವನ ಆತ್ಮಲಿಂಗವಾಗಿದೆ.

೩ ಇ. ಆತ್ಮಲಿಂಗೇಶ್ವರ : ಪ್ರಭು ಶ್ರೀರಾಮನ ಪೂಜೆಗಾಗಿ ಆತ್ಮಲಿಂಗವನ್ನು ಬೇಡುವಾಗ, ಮಾರುತಿಯು ಶಿವನಲ್ಲಿ ತನಗಾಗಿಯೂ ಒಂದು ಆತ್ಮಲಿಂಗವನ್ನು ಬೇಡಿದನು. ಈ ಶಿವಲಿಂಗವು ಆತ್ಮಲಿಂಗೇಶ್ವರ ಎಂದು ಗುರುತಿಸಲ್ಪಡುತ್ತದೆ.

೩ ಈ. ನಂದಿದೇವ : ರಾಮೇಶ್ವರಲಿಂಗದ ಎದುರಿಗೆ ಮೃಣ್ಮಯ (ಮಣ್ಣಿನಿಂದ ತಯಾರಿಸಿದ) ಮತ್ತು ಶ್ವೇತವರ್ಣದ ನಂದಿದೇವರ ದೊಡ್ಡ ಮೂರ್ತಿಯಿದೆ. ಈ ಮೂರ್ತಿಯ ಎತ್ತರ ೨೨ ಅಡಿಗಳಷ್ಟಿದ್ದು, ಉದ್ದವು ೧೭ ಅಡಿ ಇದೆ. ಇದಕ್ಕಾಗಿ ದೇವಸ್ಥಾನದ ಒಳಗೆ ಒಂದು ಮಂಟಪವೂ ಇದೆ. ಈ ನಂದಿಯ ಎತ್ತರ, ಉದ್ದ ಮತ್ತು ಅಗಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸದ್ಯ ಅದರ ಶಿರವು ಮಂಟಪದ ಮೇಲ್ಛಾವಣಿಯನ್ನು ಮುಟ್ಟಿದೆ. ೧೯೭೪ ರಲ್ಲಿ ಈ ನಂದಿಯ ಎತ್ತರವು ೧೩ ಅಡಿ ಮತ್ತು ಉದ್ದ ೮ ಅಡಿ ಇತ್ತು.

೩ ಉ. ಗರುಡಸ್ತಂಭ : ನಂದಿದೇವರ ಹತ್ತಿರವೇ ಬಂಗಾರದ ತಗಡಿನ ಹೊದಿಕೆಯಿರುವ ಗರುಡಸ್ತಂಭವಿದೆ.

೩ ಊ. ಆಂಜನೇಯನ ದೇವಸ್ಥಾನ : ಇಲ್ಲಿ ೧೬ ಅಡಿ ಎತ್ತರದ ಮಾರುತಿಯ ಸ್ವಯಂಭೂ ಮೂರ್ತಿಯಿದೆ. ಮೂರ್ತಿಯ ಕೆಳಗಿನ ೮ ಅಡಿಗಳಷ್ಟು ಭಾಗ ಹಿಂದೂ ಮಹಾಸಾಗರದಲ್ಲಿದ್ದು, ಮೇಲಿನ ೮ ಅಡಿಗಳ ಭಾಗವು ದೇವಸ್ಥಾನದಲ್ಲಿ ದರ್ಶನಕ್ಕಾಗಿ ಕಾಣಿಸುತ್ತದೆ. (ದೇವಸ್ಥಾನವು ಸಮುದ್ರದ ದಂಡೆಯ ಮೇಲಿರುವುದರಿಂದ ದೇವಸ್ಥಾನದ ಕೆಳಗಿನ ಭಾಗದಲ್ಲಿ ಸಮುದ್ರದ ನೀರಿದೆ.)

೩ ಎ. ಇಪ್ಪತ್ತೆರಡು ತೀರ್ಥಗಳು : ರಾಮೇಶ್ವರ ದೇವಸ್ಥಾನದಲ್ಲಿ ಒಟ್ಟು ೨೨ ತೀರ್ಥಗಳಿದ್ದು, ಅವುಗಳಲ್ಲಿ ೬ ತೀರ್ಥಗಳು ಎಲ್ಲಕ್ಕಿಂತ ಹೊರಗಿನ ಮೂರನೆಯ ಹೊರಾಂಗಣದಲ್ಲಿವೆ. ಈ ಎಲ್ಲ ತೀರ್ಥಗಳ ಸ್ನಾನವನ್ನು ಮಾಡಿದ ಬಳಿಕವೇ ರಾಮೇಶ್ವರನ ಪೂಜೆ, ಅರ್ಚನೆ ಮತ್ತು ದರ್ಶನವನ್ನು ಮಾಡಬೇಕಾಗುತ್ತದೆ.

೨೨ ತೀರ್ಥಗಳಲ್ಲಿನ ಒಂದು ನೀಲ ತೀರ್ಥ

೩ ಏ. ರಾಮಕುಂಡ, ಸೀತಾಕುಂಡ ಮತ್ತು ಲಕ್ಷ್ಮಣಕುಂಡ : ಈ ಕುಂಡಗಳು ದೇವಸ್ಥಾನದ ಹೊರಗಿವೆ. ಇವೇ ಕುಂಡಗಳಲ್ಲಿ ಯಾತ್ರಿಕರು ಸ್ನಾನ, ಶ್ರಾದ್ಧವಿಧಿ ಇತ್ಯಾದಿ ಧಾರ್ಮಿಕ ಕೃತಿಗಳನ್ನು ಮಾಡುತ್ತಾರೆ.

ರಾಮೇಶ್ವರದಲ್ಲಿ ಇರುವ ರಾಮಕುಂಡ

೪. ಯಾತ್ರಾವಿಧಿ

ಯಾತ್ರಿಕ ಭಕ್ತರು ಇಲ್ಲಿಯ ಎಲ್ಲ ಪವಿತ್ರ ತೀರ್ಥಗಳಲ್ಲಿ ಅನುಕ್ರಮವಾಗಿ ಸ್ನಾನವನ್ನು ಮಾಡುತ್ತಾರೆ ಮತ್ತು ಬಳಿಕ ರಾಮೇಶ್ವರನಿಗೆ ಕಾಶಿಯಿಂದ ತಂದಿರುವ ಗಂಗಾಜಲದಿಂದ ಅಭಿಷೇಕವನ್ನು ಮಾಡುತ್ತಾರೆ. ಹಾಗೆಯೇ ರಾಮೇಶ್ವರದಿಂದ ೧೨ ಮೈಲಿ ದೂರದಲ್ಲಿರುವ ಸೇತುವೆಯ ಮೇಲಿನ ಮರಳನ್ನು ತಂದು ಅದನ್ನು ಸೇತೂ ರಾಮೇಶ್ವರನ ದೇವಸ್ಥಾನದಲ್ಲಿರುವ ಸೇತುಮಾಧವನ ಹತ್ತಿರವಿಟ್ಟು ಅದನ್ನು ಪೂಜಿಸುತ್ತಾರೆ. ಈ ಮರಳನ್ನು ಪ್ರಯಾಗದ ತ್ರಿವೇಣಿಸಂಗಮದಲ್ಲಿ ವಿಧಿಪೂರ್ವಕವಾಗಿ ವಿಸರ್ಜಿಸಿದ ಬಳಿಕವೇ ಈ ಯಾತ್ರೆಯು ನಿಜವಾದ ಅರ್ಥದಲ್ಲಿ ಪೂರ್ಣಗೊಳ್ಳುತ್ತದೆ.

೫. ಹಿಂದೂಗಳ ಐಕ್ಯತೆಯನ್ನು ಸಾಧ್ಯಗೊಳಿಸುವ ಪುಣ್ಯಸ್ಥಳ !

೫ ಅ. ಸಾಂಪ್ರದಾಯಿಕ ಐಕ್ಯತೆಯ ಪ್ರತೀಕ ! : ಭಾರತದಲ್ಲಿರುವ ಎಲ್ಲ ಧಾರ್ಮಿಕ ಸ್ಥಳಗಳು ಶೈವ ಮತ್ತು ವೈಷ್ಣವ ಸಂಪ್ರದಾಯಗಳಲ್ಲಿ ವಿಭಜಿಸಲ್ಪಟ್ಟಿವೆ. ರಾಮೇಶ್ವರಂ ಮಾತ್ರ ಇದಕ್ಕೆ ಅಪವಾದವಾಗಿದೆ. ಏಕೆಂದರೆ ರಾಮೇಶ್ವರಂ ಇದು ಶೈವ ಮತ್ತು ವೈಷ್ಣವ ಈ ಎರಡೂ ಸಂಪ್ರದಾಯಗಳಿಗೆ ಪೂಜನೀಯ ಸ್ಥಳವಾಗಿದೆ. ವಿಷ್ಣುವಿನ ಏಳನೆಯ ಅವತಾರವಾಗಿರುವ ಪ್ರಭು ಶ್ರೀರಾಮನು ಸಾಕ್ಷಾತ್ ರಾಮೇಶ್ವರನ ಸ್ಥಾಪನೆ ಮಾಡಿರುವುದರಿಂದ ಈ ಸ್ಥಾನವು ಶೈವಕ್ಷೇತ್ರವಾಗಿದ್ದರೂ, ವೈಷ್ಣವರಿಗೂ ಪೂಜನೀಯವಾಗಿದೆ. ಪ್ರಭು ಶ್ರೀರಾಮನು ಸ್ಥಾಪಿಸಿರುವುದರಿಂದ ಇಲ್ಲಿಯ ಶಿವಲಿಂಗಕ್ಕೆ ‘ರಾಮೇಶ್ವರ’ ಎಂದು ಕರೆಯುತ್ತಾರೆ.

೫ ಆ. ರಾಷ್ಟ್ರೀಯ ಐಕ್ಯತೆಯ ಪ್ರತೀಕ ! : ರಾಮಾಯಣ ಕಾಲದಿಂದ ಇಂದಿನವರೆಗೆ ರಾಮೇಶ್ವರವು ಭಾರತದ ಏಕಾತ್ಮತೆಯ ಪ್ರತೀಕವಾಗಿರುವ ಪುಣ್ಯಸ್ಥಳವಾಗಿದೆ. ಏಕೆಂದರೆ ಕಾಶಿಯ ವಿಶ್ವೇಶ್ವರನ ಯಾತ್ರೆಯು ರಾಮೇಶ್ವರನ ದರ್ಶನವಿಲ್ಲದೇ ಪೂರ್ಣವಾಗುವುದಿಲ್ಲ. ಇದನ್ನು ಗಮನಿಸಿದಾಗ ಹಿಂದೂ ಧರ್ಮದಲ್ಲಿ ಭಾರತವನ್ನು ಒಂದು ಸೂತ್ರದಲ್ಲಿ ಬಂಧಿಸುವ ಅದ್ಭುತ ಪರಂಪರೆಯಿದೆ ಎಂಬುದು ಗಮನಕ್ಕೆ ಬರುತ್ತದೆ. ಈ ಪರಂಪರೆಯಿಂದಲೇ ಈ ಸ್ಥಳವು ಹನ್ನೆರಡೂ ತಿಂಗಳು ಯಾತ್ರಿಕರಿಂದ ತುಂಬಿರುತ್ತದೆ ಮತ್ತು ಆಸೇತುಹಿಮಾಚಲ ಭಾರತದ ಐಕ್ಯತೆಯು ಅಪಾರ ಆಘಾತಗಳನ್ನು ಸಹಿಸಿಯೂ ಸಾವಿರಾರು ವರ್ಷಗಳಿಂದ ಸ್ಥಿರವಾಗಿದೆ.

೬. ರಾಮೇಶ್ವರ ದೇವಸ್ಥಾನ

೬ ಅ. ಇತಿಹಾಸ : ಈ ದೇವಸ್ಥಾನದ ಸ್ಥಾಪನೆಯನ್ನು ಪ್ರಮುಖವಾಗಿ ರಾಮನಾಡಿನ (ಇಂದಿನ ರಾಮನಾಥಪೂರದ) ಸೇತುಪತಿ ರಾಜಮನೆತನವು ಮಾಡಿದೆ. ಈ ಪುರಾತನ ದೇವಸ್ಥಾನವನ್ನು ೧೪೧೪ ರಲ್ಲಿ ಉದಯನ ಸೇತುಪತಿ ರಾಜನು ಲಂಕೆಯ ರಾಜಾಧಿಪತಿ ಪರ ರಾಜಶೇಖರನ ಸಹಾಯದಿಂದ ಕಟ್ಟಿಸಿದನು ಮತ್ತು ಮುಂದೆ ಮೂರುವರೆ ನೂರು ವರ್ಷಗಳ ವರೆಗೆ ಸೇತುಪತಿ ಮನೆತನದ ರಾಜಪುರುಷರೇ ಅದರ ವಿಸ್ತಾರ ಮಾಡಿದರು. ದೇವರ ಮೊದಲ ಪೂಜೆಯನ್ನು ಇದೇ ರಾಜ ಮನೆತನದವರು ಮಾಡುತ್ತಾರೆ. ಇಲ್ಲಿಯ ಪೂಜಾರಿಗಳು ಮಹಾರಾಷ್ಟ್ರದ ಬ್ರಾಹ್ಮಣರಾಗಿದ್ದಾರೆ.

೬ ಆ. ದೇವಸ್ಥಾನದ ವಾಸ್ತುವಿನ ಭವ್ಯದಿವ್ಯತೆ : ಈ ದೇವಸ್ಥಾನವು ಪ್ರಚಂಡವಾಗಿದ್ದು ಅದರ ವಿಸ್ತಾರ ಮತ್ತು ಭವ್ಯತೆಗೆ ಸರಿಸಮವಾಗಿರುವಂತಹ ಇನ್ಯಾವುದೇ ದೇವಸ್ಥಾನ ಭಾರತದಲ್ಲಿಲ್ಲ. ದೇವಸ್ಥಾನವನ್ನು ದ್ರಾವಿಡ ಶಿಲ್ಪಪದ್ಧತಿಯಲ್ಲಿ ಕಟ್ಟಲಾಗಿದೆ. ದೇವಸ್ಥಾನದ ಕ್ಷೇತ್ರಫಲ ಸುಮಾರು ೧೫ ಎಕರೆಗಳಷ್ಟಿದೆ. ದೇವಸ್ಥಾನದ ಆವರಣವು ಅತಿ ಎತ್ತರವಾದ ಗೋಡೆಗಳಿಂದ ಆವರಿಸಲ್ಪಟ್ಟಿದೆ. ಈ ಆವರಣದ ಪೂರ್ವ-ಪಶ್ಚಿಮ ಉದ್ದವು ಸುಮಾರು ೮೨೫ ಅಡಿ ಮತ್ತು ದಕ್ಷಿಣೋತ್ತರ ಅಗಲವು ೬೫೭ ಅಡಿಗಳಷ್ಟಿದೆ. ದೇವಸ್ಥಾನದ ನಾಲ್ಕೂ ಬದಿಗಳಲ್ಲಿ ನಾಲ್ಕು ಗೋಪುರಗಳಿವೆ. ಇವುಗಳಲ್ಲಿ ಪೂರ್ವದ್ವಾರದ ಮೇಲಿರುವ ಗೋಪುರಕ್ಕೆ ಹತ್ತು ಮಹಡಿಗಳಿದ್ದು, ಪಶ್ಚಿಮ ದ್ವಾರದ ಮೇಲಿನ ಗೋಪುರಕ್ಕೆ ಏಳು ಮಹಡಿಗಳಿವೆ. ನಾಲ್ಕೂ ಗೋಪುರಗಳ ಮೇಲೆ ಅಸಂಖ್ಯಾತ ಮೂರ್ತಿಗಳನ್ನು ಕೆತ್ತಲಾಗಿದೆ. ದೇವಸ್ಥಾನದ ಒಳಗೆ ವಿಸ್ತಾರವಾದ ಮೂರು ಒಳಾಂಗಣಗಳಿವೆ. ಈ ಒಳಾಂಗಣಗಳು ಭವ್ಯ ಸ್ತಂಭಗಳ ಸಾಲುಗಳಿಂದ ಬೇರ್ಪಡಿಸಲ್ಪಟ್ಟಿವೆ. ಇವುಗಳ ಎತ್ತರ ಎಷ್ಟಿದೆಯೆಂದರೆ ದೇವರ ಉತ್ಸವಮೂರ್ತಿ ಆನೆಯ ಅಂಬಾರಿಯ ಮೇಲೆ ಮೆರವಣಿಗೆಯಲ್ಲಿ ಹೋಗುವಾಗಲೂ ಅದರ ಮೇಲ್ಛಾವಣಿಗಿರುವ ಮಡಿಕೆ ಮತ್ತು ತೂಗು ದೀಪಗಳಿಗೆ ಅಂಬಾರಿಯು ತಗಲುವುದಿಲ್ಲ. ಪ್ರತಿಯೊಂದು ಒಳಾಂಗಣದ ಉದ್ದ ೪೦೦ ಅಡಿಗಳಷ್ಟಿದ್ದು, ಅಗಲ ೧೭ ರಿಂದ ೨೧ ಅಡಿಗಳಷ್ಟಿದೆ. ಈ ಒಳಾಂಗಣದ ನಿರ್ಮಾಣಕ್ಕಾಗಿ ಉಪಯೋಗಿಸಲ್ಪಟ್ಟ ಅನೇಕ ಕಲ್ಲುಗಳು ಸುಮಾರು ೪೦ ಅಡಿ ಉದ್ದವಾಗಿವೆ.

– ಶ್ರೀ. ಚೇತನ ರಾಜಹಂಸ, ಸನಾತನ ಆಶ್ರಮ, ರಾಮನಾಥಿ, ಗೋವಾ.

1 thought on “ಸೇತುಬಂಧ ರಾಮೇಶ್ವರ ಮಹಾತ್ಮೆ”

Leave a Comment