ಶ್ರದ್ಧೆ ಮತ್ತು ಭಕ್ತಿಯ ಸರ್ವೋಚ್ಚ ದರ್ಶನವನ್ನು ನೀಡುವ ಜಗನ್ನಾಥ ರಥೋತ್ಸವ !

ಪುರಿ (ಒಡಿಸಾ) ದ ಜಗತ್ಪ್ರಸಿದ್ಧ ಜಗನ್ನಾಥ ರಥೋತ್ಸವವೆಂದರೆ ಭಗವಾನ ಶ್ರೀ ಜಗನ್ನಾಥನ ಅಂದರೆ ಜಗದೋದ್ಧಾರಕ ಭಗವಾನ ಶ್ರೀಕೃಷ್ಣನ ಭಕ್ತರಿಗಾಗಿ ಮಹಾಪರ್ವವೇ ಆಗಿದೆ !

ಜಗತ್ಪ್ರಸಿದ್ಧ ಜಗನ್ನಾಥ ರಥೋತ್ಸವವೆಂದರೆ ಜಗತ್ತಿನಾದ್ಯಂತದ ಭಾವಿಕರ ಶ್ರದ್ಧೆ ಮತ್ತು ಭಕ್ತಿ ಇವುಗಳ ಉತ್ಕಟ ದರ್ಶನ ಪಡೆಯುವ ಸಂಧಿ. ಈ ನಿಮಿತ್ತ ರಥೋತ್ಸವದ ಹಾಗೂ ದೇವಾಲಯದ ಕೆಲವು ವೈಶಿಷ್ಟ್ಯಗಳನ್ನು ಈಗ ನೋಡೋಣ..

ಶ್ರೀ ಬಲರಾಮನ ‘ತಾಲಧ್ವಜ’ ರಥ, ಮಧ್ಯಭಾಗದಲ್ಲಿ ದೇವಿ ಸುಭದ್ರೆಯ ‘ದರ್ಪದಲನ’ ಅಥವಾ ‘ಪದ್ಮರಥ’ ಮತ್ತು ಭಗವಾನ ಶ್ರೀ ಜಗನ್ನಾಥನ ‘ನಂದಿಘೋಷ’ ಅಥವಾ ‘ಗರುಡಧ್ವಜ’

೧. ರಥೋತ್ಸವದಲ್ಲಿ ಮೊದಲಿಗೆ ಶ್ರೀ ಬಲರಾಮ, ಮಧ್ಯದಲ್ಲಿ ಸುಭದ್ರಾ-ದೇವಿ ಮತ್ತು ಕೊನೆಯಲ್ಲಿ ಭಗವಾನ ಜಗನ್ನಾಥ ಈ ರೀತಿ ರಥಗಳ ಕ್ರಮವಾಗಿರುತ್ತದೆ !

ಪುರಿಯ ಜಗನ್ನಾಥ ದೇವಸ್ಥಾನವು ಭಾರತದ ೪ ಪವಿತ್ರ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ. ಭಗವಾನ ಶ್ರೀಕೃಷ್ಣನು ಜಗನ್ನಾಥನ ರೂಪದಲ್ಲಿ ವಿರಾಜಮಾನವಾಗಿರುವ ಇಂದಿನ ದೇವಸ್ಥಾನವು ೮೦೦ ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ. ಇಲ್ಲಿ ಭಗವಾನ ಶ್ರೀಕೃಷ್ಣನೊಂದಿಗೆ ಅಣ್ಣ ಶ್ರೀ ಬಲರಾಮ ಮತ್ತು ತಂಗಿ ಸುಭದ್ರಾದೇವಿ ಇವರ ಪೂಜೆಯನ್ನೂ ಮಾಡಲಾಗುತ್ತದೆ. ಪುರಿಯಲ್ಲಿ ರಥೋತ್ಸವಕ್ಕಾಗಿ ಶ್ರೀ ಬಲರಾಮ, ಶ್ರೀಕೃಷ್ಣ ಮತ್ತು ದೇವಿ ಸುಭದ್ರಾ ಇವರಿಗಾಗಿ ೩ ಬೇರೆಬೇರೆ ರಥಗಳನ್ನು ಸಿದ್ಧಪಡಿಸಲಾಗುತ್ತದೆ. ಈ ರಥೋತ್ಸವದಲ್ಲಿ ಎಲ್ಲಕ್ಕಿಂತ ಮುಂದೆ ಶ್ರೀ ಬಲರಾಮದ ರಥ, ಮಧ್ಯದಲ್ಲಿ ಸುಭದ್ರಾದೇವಿ ಮತ್ತು ಎಲ್ಲಕ್ಕಿಂತ ಕೊನೆಯದಾಗಿ ಭಗವಾನ ಜಗನ್ನಾಥನ (ಶ್ರೀಕೃಷ್ಣನ) ರಥವಿರುತ್ತದೆ.

೨. ಮೂರು ರಥಗಳಿಗಿರುವ ವೈಶಿಷ್ಟ್ಯಪೂರ್ಣ ಹೆಸರುಗಳು ಮತ್ತು ಅವುಗಳ ಅನನ್ಯ ವೈಶಿಷ್ಟ್ಯಗಳು !

ಅ. ಶ್ರೀ ಬಲರಾಮನ ರಥಕ್ಕೆ ‘ತಾಲಧ್ವಜ’ ಎಂದು ಕರೆಯಲಾಗುತ್ತದೆ. ಈ ರಥದ ಬಣ್ಣವು ಕೆಂಪು ಮತ್ತು ಹಸಿರು ಇರುತ್ತದೆ. ದೇವಿ ಸುಭದ್ರೆಯ ರಥವನ್ನು ‘ದರ್ಪದಲನ’ ಅಥವಾ ‘ಪದ್ಮರಥ’ ಎಂದು ಕರೆಯಲಾಗುತ್ತದೆ. ಅದು ಕಪ್ಪು ಅಥವಾ ನೀಲಿ ಅಥವಾ ಕೆಂಪು ಬಣ್ಣದ್ದಾಗಿರುತ್ತದೆ. ಭಗವಾನ ಜಗನ್ನಾಥನ ರಥಕ್ಕೆ ‘ನಂದಿಘೋಷ’ ಅಥವಾ ‘ಗರುಡಧ್ವಜ’ ಎಂದು ಕರೆಯಲಾಗುತ್ತದೆ. ಆ ರಥದ ಬಣ್ಣವು ಕೆಂಪು ಅಥವಾ ಹಳದಿಯಾಗಿರುತ್ತದೆ.

ಆ. ಶ್ರೀ ಬಲರಾಮನ ರಥವು ೪೫ ಅಡಿಗಳಷ್ಟು ಎತ್ತರ, ಸುಭದ್ರಾ ದೇವಿಯ ರಥವು ೪೪.೬ ಅಡಿಗಳಷ್ಟು ಎತ್ತರ, ಭಗವಾನ ಜಗನ್ನಾಥನ ನಂದಿಘೋಷ ರಥವು ೪೫.೬ ಅಡಿಗಳಷ್ಟು ಎತ್ತರವಿರುತ್ತದೆ.

ಇ. ಈ ಮೂರು ರಥಗಳನ್ನು ಬೇವಿನ ಪವಿತ್ರ ಮತ್ತು ಪರಿಪಕ್ವವಾಗಿರುವ ಕಟ್ಟಿಗೆಗಳಿಂದ ಸಿದ್ಧಪಡಿಸಲಾಗುತ್ತದೆ. ಇದಕ್ಕಾಗಿ ಆರೋಗ್ಯಕರ ಮತ್ತು ಶುಭ ಬೇವಿನ ಮರವನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕಾಗಿ ಒಂದು ವಿಶೇಷ ಸಮಿತಿಯನ್ನು ಸ್ಥಾಪಿಸಲಾಗಿದೆ. ಈ ರಥದ ಸಿದ್ಧತೆಯಲ್ಲಿ ಯಾವುದೇ ರೀತಿಯ ಮೊಳೆಗಳು ಅಥವಾ ಇತರ ಯಾವುದೇ ಧಾತುಗಳ ಉಪಯೋಗವನ್ನು ಮಾಡಲಾಗುವುದಿಲ್ಲ, ಇದು ಅದರ ಇನ್ನೊಂದು ವೈಶಿಷ್ಟ್ಯವಾಗಿದೆ.

ಈ. ರಥಕ್ಕಾಗಿ ಬೇಕಾಗುವ ಕಟ್ಟಿಗೆಗಳ ಆಯ್ಕೆಯನ್ನು ಒಳ್ಳೆಯ ಮುಹೂರ್ತದಲ್ಲಿ ಮಾಡಲಾಗುತ್ತದೆ. ಅದಕ್ಕಾಗಿ ವಸಂತ ಪಂಚಮಿಯ ದಿನವನ್ನು ಆಯ್ಕೆ ಮಾಡಲಾಗಿದೆ. ಅಂದಿನಿಂದ ಈ ಕಟ್ಟಿಗೆಗಳನ್ನು ಆಯ್ಕೆ ಮಾಡಲು ಪ್ರಾರಂಭಿಸಲಾಗುತ್ತದೆ. ಪ್ರತ್ಯಕ್ಷ ರಥದ ನಿರ್ಮಾಣ ಕಾರ್ಯವನ್ನು ಅಕ್ಷಯ ತೃತಿಯಾ (ತದಿಗೆ) ದಂದು ಪ್ರಾರಂಭಿಸಲಾಗುತ್ತದೆ.

ಉ. ಈ ಮೂರು ರಥಗಳನ್ನು ಸಿದ್ಧಪಡಿಸಿದ ನಂತರ ‘ಛರ ಪಹನರಾ’ ಎಂಬ ಅನುಷ್ಠಾನವನ್ನು ಮಾಡಲಾಗುತ್ತದೆ. ಇದರಲ್ಲಿ ಪುರಿಯ ಗಜಪತಿ ರಾಜನು ಪಲ್ಲಕ್ಕಿಯಲ್ಲಿ ಬಂದು ಈ ಮೂರು ರಥಗಳ ವಿಧಿಪೂರ್ವಕವಾಗಿ ಪೂಜೆಯನ್ನು ಮಾಡುತ್ತಾನೆ. ಈ ಸಮಯದಲ್ಲಿ ಬಂಗಾರದ ಪೊರಕೆಯಿಂದ ರಥದ ಮಂಟಪದ ಮತ್ತು ರಸ್ತೆಯ ಸ್ವಚ್ಛತೆ ಮಾಡುವ ಪದ್ಧತಿಯಿದೆ.

ಊ. ತದನಂತರ ರಥದ ನಿರ್ಗಮನವಾಗುತ್ತದೆ. ಆಷಾಢ ಶುಕ್ಲ ಪಕ್ಷ ದ್ವಿತೀಯಾದಂದು ರಥೋತ್ಸವ ಆರಂಭವಾಗುತ್ತದೆ. ಈ ದಿನ ಡೋಲು, ನಗಾರಿ, ತುತ್ತೂರಿ ಮತ್ತು ಶಂಖಗಳ ನಾದದಲ್ಲಿ ಭಕ್ತಜನರು ಈ ರಥವನ್ನು ಎಳೆಯುತ್ತಾರೆ. ಯಾರಿಗೆ ರಥವನ್ನು ಎಳೆಯುವ ಅವಕಾಶವನ್ನು ಸಿಗುತ್ತದೆಯೋ, ಅವರು ಪುಣ್ಯವಂತರಾಗಿರುತ್ತಾರೆ, ಎಂಬ ಭಾವಿಕರ ಶ್ರದ್ಧೆಯಾಗಿದೆ. ಈ ರಥವನ್ನು ಎಳೆಯುವ ಭಾಗ್ಯವಂತರಿಗೆ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬ ಪೌರಾಣಿಕ ನಂಬಿಕೆಯಿದೆ.

೩. ಚಿಕ್ಕಮ್ಮನ ‘ಮನೆಯಲ್ಲಿ’ ೭ ದಿನ ನಿವಾಸ ಮಾಡುವ ಭಗವಾನ ಜಗನ್ನಾಥ !

ಅ. ಜಗನ್ನಾಥನ ದೇವಸ್ಥಾನದಿಂದ ಈ ರಥ ಯಾತ್ರೆಯು ಪ್ರಾರಂಭವಾದ ನಂತರ ಪುರಿ ನಗರದಲ್ಲೆಲ್ಲ ಸುತ್ತಿ ಗುಂಡಿಚಾ ದೇವಸ್ಥಾನವನ್ನು ತಲುಪುತ್ತದೆ. ಇಲ್ಲಿ ಭಗವಾನ ಜಗನ್ನಾಥ, ಶ್ರೀಬಲರಾಮ ಮತ್ತು ಸುಭದ್ರಾದೇವಿಯು ೭ ದಿನ ವಾಸ ಮಾಡುತ್ತಾರೆ.

ಆ. ಗುಂಡಿಚಾ ದೇವಸ್ಥಾನಕ್ಕೆ ‘ಗುಂಡಿಚಾ ಬಾಡಿ’ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಇದು ಭಗವಾನ ಜಗನ್ನಾಥನ ಚಿಕ್ಕಮ್ಮನ ಮನೆಯಾಗಿದೆ. ಇಲ್ಲಿ ವಿಶ್ವಕರ್ಮನು ಭಗವಾನ ಜಗನ್ನಾಥ, ಶ್ರೀ ಬಲರಾಮ ಮತ್ತು ಸುಭದ್ರಾದೇವಿಯ ಮೂರ್ತಿಗಳನ್ನು ನಿರ್ಮಿಸಿದ್ದನು.

ಇ. ರಥೋತ್ಸವದ ಮೂರನೇ ದಿನದಂದು ಅಂದರೆ ಪಂಚಮಿಗೆ ದೇವಿ ಲಕ್ಷ್ಮೀ ಭಗವಾನ ಜಗನ್ನಾಥನನ್ನು ಹುಡುಕುತ್ತ ಇಲ್ಲಿಗೆ ಬರುತ್ತಾಳೆ. ಆಗ ದ್ವಾರಪಾಲಕರು ಬಾಗಿಲು ಮುಚ್ಚುತ್ತಾರೆ. ಆದುದರಿಂದ ದೇವಿಯು ಕೋಪಗೊಂಡು ರಥದ ಕಾಲನ್ನು ಮುರಿಯುತ್ತಾಳೆ ಮತ್ತು ಹೇರಾ ಗೋಹಿರಿ ಸಾಹಿ (ಈ ಸ್ಥಳವು ಪುರಿಯಲ್ಲಿಯೇ ಇದೆ) ಪರಿಸರದಲ್ಲಿರುವ ಲಕ್ಷ್ಮೀ ದೇವಸ್ಥಾನಕ್ಕೆ ಮರಳಿ ಹೋಗುತ್ತಾಳೆ.

ಈ. ತದನಂತರ ಸ್ವತಃ ಭಗವಾನ ಜಗನ್ನಾಥ ಮುನಿಸಿಕೊಂಡಿರುವ ದೇವಿ ಲಕ್ಷ್ಮೀಯ ಮನವೊಲಿಸುವ ಪರಂಪರೆಯಿದೆ. ಈ ಉತ್ಸವದ ಮಾಧ್ಯಮದಿಂದ ಈ ರೀತಿ ಒಂದು ಅದ್ಭುತ ಭಕ್ತಿರಸವು ಉತ್ಪನ್ನವಾಗುತ್ತದೆ.

ಉ. ಆಷಾಢ ಮಾಸದ ೧೦ ನೇ ದಿನದಂದು ಈ ರಥವು ಪುನಃ ಮುಖ್ಯ ದೇವಸ್ಥಾನದ ಕಡೆಗೆ ನಿರ್ಗಮಿಸುತ್ತದೆ. ರಥಗಳು ಹಿಂತಿರುಗುವ ಈ ಜಾತ್ರೆಗೆ ‘ಬಹುಡಾ ಜಾತ್ರೆ’ ಎಂದು ಕರೆಯುತ್ತಾರೆ.

ಊ. ಶ್ರೀ ಜಗನ್ನಾಥ ದೇವಸ್ಥಾನಕ್ಕೆ ಹಿಂತಿರುಗಿದ ನಂತರ ಎಲ್ಲ ಮೂರ್ತಿಗಳು ರಥದಲ್ಲಿಯೇ ಇರುತ್ತವೆ. ಅವರಿಗಾಗಿ ದೇವಸ್ಥಾನದ ಬಾಗಿಲುಗಳನ್ನು ಮರುದಿನ ಅಂದರೆ ಏಕಾದಶಿಯಂದು ತೆರೆಯಲಾಗುತ್ತದೆ. ಆಗ ವಿಧಿಪೂರ್ವಕವಾಗಿ ಸ್ನಾನ ಮಾಡಿಸಿ ವೈದಿಕ ಮಂತ್ರೋಪಚಾರದಿಂದ ಈ ಮೂರ್ತಿಗಳ ಪುನರ್ಪ್ರತಿಷ್ಠಾಪನೆಯನ್ನು ಮಾಡಲಾಗುತ್ತದೆ.

ಎ. ಪುರಿಯ ರಥೋತ್ಸವವು ಸಾಮೂಹಿಕ ಉತ್ಸವವಾಗಿದೆ. ಈ ಕಾಲದಲ್ಲಿ ಪುರಿಯಲ್ಲಿರುವ ಭಾವಿಕರು ಉಪವಾಸವನ್ನು ಮಾಡುವುದಿಲ್ಲ.

ಸಮುದ್ರ ತೀರದಲ್ಲಿರುವ ಪುರಿಯಲ್ಲಿ ಆಗುವ ಭಗವಾನ ಜಗನ್ನಾಥನ ಜಗದ್ವಿಖ್ಯಾತವಾಗಿರುವ ರಥೋತ್ಸವದ ಸಾಕ್ಷೀದಾರರು ಆಗುವುದೆಂದರೆ ಪರಮಭಾಗ್ಯವೆಂದು ತಿಳಿಯಲಾಗುತ್ತದೆ. ವರ್ಷವಿಡೀ ಮನಸ್ಸಿನಲ್ಲಿ ಭಾವ-ಭಕ್ತಿಯನ್ನು ಸಂಗ್ರಹಿಸಿ ಆತುರತೆಯಿಂದ ಮುಂದಿನ ವರ್ಷದ ರಥೋತ್ಸವದ ದಾರಿಯನ್ನು ಕಾಯುತ್ತಾರೆ.

ರಥೋತ್ಸವದ ನಿಮಿತ್ತದಿಂದ ನೋಡಲು ಸಿಗುವ ಇಂತಹ ಶ್ರದ್ಧೆ ಮತ್ತು ಭಕ್ತಿಯು ಜಗತ್ತಿನಾದ್ಯಂತ ಎಲ್ಲಿಯೂ ನೋಡಲು ಸಿಗಲಾರದು. ಆದುದರಿಂದಲೇ ಈ ಸಮಾರಂಭವು ವಿರಳ ಮತ್ತು ಅದ್ವಿತೀಯವಾಗಿದೆ.

ಶ್ರೀ ಜಗನ್ನಾಥ ದೇವಾಲಯದ ಅದ್ಭುತ ಮತ್ತು ಬುದ್ಧಿಗೆ ನಿಲುಕದ ವೈಶಿಷ್ಟ್ಯಗಳು!

800 ವರ್ಷಗಳಷ್ಟು ಹಳೆಯದಾಗಿದೆ ಎಂದು ಅಂದಾಜಿಸಲಾಗಿರುವ ಈ ದೇವಾಲಯದ ವಾಸ್ತುಶಿಲ್ಪವು ತುಂಬಾ ಭವ್ಯವಾಗಿದ್ದು, ಪ್ರಪಂಚದಾದ್ಯಂತದ ವಾಸ್ತುಶಿಲ್ಪಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶ್ರೀ ಜಗನ್ನಾಥ ದೇವಾಲಯವು 214 ಅಡಿಗಳಷ್ಟು ಎತ್ತರವಾಗಿದೆ. ದೇವಾಲಯದ ವಿಸ್ತೀರ್ಣ 4 ಲಕ್ಷ ಚದರ ಅಡಿಗಳಷ್ಟಿದೆ. ಪುರಿಯ ಯಾವುದೇ ಸ್ಥಳದಿಂದ ದೇವಾಲಯದ ಕಲಶದ ಮೇಲಿರುವ ಸುದರ್ಶನ ಚಕ್ರವನ್ನು ನೋಡಿದಾಗ ಅದು ತಮ್ಮ ಮುಂದೆಯೇ ಇರುವಂತೆ ಕಂಡುಬರುತ್ತದೆ. ದೇವಾಲಯದ ಧ್ವಜವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ನಿರಂತರವಾಗಿ ಹಾರುತ್ತದೆ. ಪ್ರತಿದಿನ ಸಂಜೆಯಾದಂತೆ ದೇವಸ್ಥಾನದ ಧ್ವಜವನ್ನು ಬದಲಾಯಿಸಲಾಗುತ್ತದೆ. ಸಾಮಾನ್ಯವಾಗಿ ದಿನದಲ್ಲಿ ಗಾಳಿಯು ಸಮುದ್ರದಿಂದ ಭೂಮಿಯೆಡೆಗೆ ಮತ್ತು ಸಂಜೆ ಅದರ ವಿರುದ್ಧ ದಿಕ್ಕಿನಲ್ಲಿ ಬೀಸುತ್ತದೆ; ಆದರೆ ಪುರಿಯಲ್ಲಿ ವಿರುದ್ಧ ಪ್ರಕ್ರಿಯೆ ನಡೆಯುತ್ತದೆ. ಮುಖ್ಯ ಗುಂಬಜಿನ ನೆರಳು ದಿನದ ಯಾವುದೇ ಸಮಯದಲ್ಲಿ ಅಗೋಚರವಾಗಿರುತ್ತದೆ. ಹಕ್ಕಿಗಳು ಮತ್ತು ವಿಮಾನಗಳು ಹಾರುವಾಗ ಇಲ್ಲಿ ಎಂದಿಗೂ ಕಾಣಿಸುವುದಿಲ್ಲ. ಅನ್ನಸಂತರ್ಪಣೆಗೆಂದು ವರ್ಷವಿಡೀ ಬೇಕಾಗುವಷ್ಟು ಆಹಾರ ಸಾಮಗ್ರಿಗಳ ಸಂಗ್ರಹವು ದೇವಾಲಯದಲ್ಲಿರುತ್ತದೆ. ವಿಶೇಷವೆಂದರೆ ಇಲ್ಲಿನ ಮಹಾಪ್ರಸಾದ ಎಂದಿಗೂ ವ್ಯರ್ಥವಾಗುವುದಿಲ್ಲ. ಈ ದೇವಾಲಯದ ಪಾಕಶಾಲೆಯು ವಿಶ್ವದ ಇತರ ದೇವಾಲಯಗಳ ಪಾಕಶಾಲೆಗಿಂತ ದೊಡ್ಡದಾಗಿದೆ. ಇಲ್ಲಿ, ಮಹಾಪ್ರಸಾದ ತಯಾರಿಸುವಾಗ, ಮಡಕೆಗಳನ್ನು ಒಂದರ ಮೇಲೊಂದರಂತೆ ಇಡಲಾಗುತ್ತದೆ. ಎಲ್ಲ ಆಹಾರವನ್ನು ಕಟ್ಟಿಗೆಗಳ ಒಲೆಯ ಮೇಲೆಯೇ ಬೇಯಿಸಲಾಗುತ್ತದೆ. ಈ ಪಾಕಶಾಲೆಯಲ್ಲಿ ಒಂದೇ ಸಮಯಕ್ಕೆ 500 ಅಡಿಗೆಭಟ್ಟರು ಮತ್ತು ಅವರ 300 ಸಹಾಯಕರು ಸೇವೆ ಸಲ್ಲಿಸುತ್ತಾರೆ.

1 thought on “ಶ್ರದ್ಧೆ ಮತ್ತು ಭಕ್ತಿಯ ಸರ್ವೋಚ್ಚ ದರ್ಶನವನ್ನು ನೀಡುವ ಜಗನ್ನಾಥ ರಥೋತ್ಸವ !”

Leave a Comment