ಭಾರತದ ಅಧಿಕೃತ ಪಂಚಾಂಗ : ಭಾರತೀಯ ಸೌರ ಕಾಲಗಣನೆ !

Article also available in :

‘ಭಾರತೀಯ ಸೌರ ಕಾಲಗಣನೆ’ಯ ಮಾಹಿತಿ ಸಿಗಲೆಂದು ಈ ಲೇಖನ. ಭಾರತೀಯ ಸೌರ ಕಾಲಗಣನೆಯನ್ನು ಚೈತ್ರ ಪಾಡ್ಯದಂದು ೧೮೭೯ (೨೨ ಮಾರ್ಚ್ ೧೯೫೭) ಭಾರತ ಸರಕಾರವು ಅಂಗೀಕರಿಸಿತು. ಆದರೆ ಇಂದಿಗೂ ಸಾರ್ವತ್ರಿಕವಾಗಿ ಈ ಪಂಚಾಂಗ ಅಂಗೀಕಾರವಾಗಿಲ್ಲ. ಕನಿಷ್ಠ ಪಕ್ಷ ಹಿರಿಯ ವ್ಯಕ್ತಿಗಳಿಗಾದರೂ ಈ ಕಾಲಗಣನೆಯ ಮಾಹಿತಿ ಇರಬೇಕೆಂದು ಆಶಿಸುತ್ತೇವೆ.

೧. ೬೦ ವಿವಿಧ ಪಂಚಾಂಗಗಳ ಅಧ್ಯಯನ ಮಾಡಿ ರಚಿಸಲಾಗಿರುವ ಕಾಲಗಣನೆ

೧೯೪೭ ರಲ್ಲಿ ಭಾರತವು ಆಂಗ್ಲರ  ದಾಸ್ಯದಿಂದ ಮುಕ್ತವಾಯಿತು ಮತ್ತು ಒಂದು ಸ್ವತಂತ್ರ ದೇಶವೆಂದು ತನ್ನ ರಾಷ್ಟ್ರೀಯ ಪ್ರತೀಕಗಳನ್ನು ನಿರ್ಮಿಸಲು ಉತ್ಸಾಹದಿಂದ ಪ್ರಾರಂಭಿಸಿತು, ಉದಾ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಇತ್ಯಾದಿ. ಅವುಗಳೊಂದಿಗೆ ನಮ್ಮದೊಂದು ಸ್ವತಂತ್ರ ರಾಷ್ಟ್ರೀಯ ಕಾಲಗಣನೆ ಇರಬೇಕು ಎನ್ನುವ ವಿಚಾರವು ಮುಂದೆ ಬಂದಿತು. ಆಗಿನ ಪ್ರಧಾನಮಂತ್ರಿ ಜವಾಹರಲಾಲ ನೆಹರೂರವರ ಸಲಹೆಯ ಮೇರೆಗೆ ಭಾರತದ ವೈಜ್ಞಾನಿಕ ಮತ್ತು ಔದ್ಯೋಗಿಕ ಮಂಡಳಿಗಳು ನವೆಂಬರ್ ೧೯೫೨ ರಲ್ಲಿ ಈ ವಿಷಯದ ಬಗ್ಗೆ ಅಧ್ಯಯನ ಮಾಡಲು ‘ಕ್ಯಾಲೆಂಡರ ರಿಫಾರ್ಮ’ ಎಂಬ ಒಂದು ಸಮಿತಿಯನ್ನು ಸ್ಥಾಪಿಸಿದವು. ಪ್ರಸಿದ್ಧ ಭೌತವಿಜ್ಞಾನಿ ಡಾ. ಮೇಘನಾಥ ಸಾಹಾರವರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ಭಾರತದಲ್ಲಿ ಆ ಸಮಯದಲ್ಲಿ ಉಪಯೋಗದಲ್ಲಿದ್ದ ಎಲ್ಲ ಪಂಚಾಂಗಗಳನ್ನು ಪರಿಶೀಲಿಸಿ, ಭಾರತಕ್ಕಾಗಿ  ಸರಕಾರಿ ಪದ್ಧತಿಯ ಆಧಾರದ ಮೇಲೆ ಮತ್ತು ನಿಖರವಾದ ಪಂಚಾಂಗವನ್ನು ಸಿದ್ಧಪಡಿಸುವ ಕೆಲಸವನ್ನು ಈ ಸಮಿತಿಗೆ ಒಪ್ಪಿಸಲಾಯಿತು. ಅದಕ್ಕನುಸಾರ ಈ ಸಮಿತಿಯು ದೇಶದ ವಿವಿಧ ಪಂಚಾಂಗಗಳನ್ನು ನಿರ್ಮಿಸುವವರಿಗೆ ಮತ್ತು ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಕರೆ ನೀಡಿತು. ಅದಕ್ಕನುಸಾರ ಸಮಿತಿಗೆ ಒಟ್ಟು ೬೦ ಪಂಚಾಂಗಗಳು ಪ್ರಾಪ್ತವಾದವು. ಅವೆಲ್ಲವುಗಳ ಅಧ್ಯಯನ ಮಾಡಿ ಭಾರತದ ಅಧಿಕೃತ ಪಂಚಾಂಗವನ್ನು ತಯಾರಿಸಲಾಯಿತು.

೨೨ ಮಾರ್ಚ್ ಭಾರತೀಯ ಸೌರ ಕಾಲಗಣನೆಯ ವರ್ಷದ ಆರಂಭ ಎಂದು ನಿರ್ಧರಿಸಲಾಯಿತು. ೨೨ ಮಾರ್ಚ್‌ ವಿಷುವತ್ತು ದಿನವಾಗಿದೆ (equinox). ಸೂರ್ಯನು ಪ್ರತಿದಿನ ಸರಾಸರಿ ೧ ಡಿಗ್ರಿ ಪೂರ್ವದ ಕಡೆಗೆ ಸರಿಯುತ್ತಾನೆ ಮತ್ತು ೧ ವರ್ಷದಲ್ಲಿ ಒಂದು ಪ್ರದಕ್ಷಿಣೆಯನ್ನು ಪೂರ್ಣಗೊಳಿಸುತ್ತಾನೆ. ‘ಇದಕ್ಕೆ ಸೂರ್ಯನ ಭಾಸಮಾನ ಭ್ರಮಣವಾಗಿದೆ’, ಎನ್ನುತ್ತಾರೆ. ಇದಕ್ಕೆ ಕಾರಣ ಸೂರ್ಯನು ವಾಸ್ತವದಲ್ಲಿ ಸ್ಥಿರವಾಗಿರುತ್ತಾನೆ. ಪೃಥ್ವಿಯು ತನ್ನ ಸುತ್ತಲೂ ಪಶ್ಚಿಮದಿಂದ ಪೂರ್ವದ ಕಡೆ ತಿರುಗುತ್ತಿರುವುದರಿಂದ ನಮಗೆ ‘ಸೂರ್ಯನು ಉದಯಿಸಿದನು ಅಥವಾ ಅಸ್ತವಾದನು’, ಎಂದು ಅನಿಸುತ್ತದೆ.

೨. ಪ್ರತಿ ಮೂರು ತಿಂಗಳಿಗೆ ಒಂದು ಪ್ರಾರಂಭದ ದಿನ

೨೨ ಮಾರ್ಚ್‌ನಂದು ವಿಷುವತ್ತು ಆಗಿರುವುದರಿಂದ ಹಗಲು ಮತ್ತು ರಾತ್ರಿ ಸಮನಾಗಿ ೧೨ ಗಂಟೆಗಳದ್ದೇ ಆಗಿರುತ್ತದೆ. ತದನಂತರ ಸೂರ್ಯನು ಉತ್ತರದ ಕಡೆಗೆ ಸರಿಯುತ್ತಾ ಜೂನ್ ೨೨ ರಂದು ಕರ್ಕವೃತ್ತದ ಮೇಲೆ ಬರುತ್ತಾನೆ. ಅಲ್ಲಿಂದ ಅವನ ದಕ್ಷಿಣಾಯನ ಪ್ರಾರಂಭವಾಗುತ್ತದೆ ಮತ್ತು ಸಪ್ಟೆಂಬರ್ ೨೩ ರಂದು ಸೂರ್ಯನು ಪುನಃ ವಿಷುವವೃತ್ತದ ಮೇಲೆ ಬರುತ್ತಾನೆ. ಆ ದಿನವೂ, ಹಗಲು ಮತ್ತು  ರಾತ್ರಿ ಸಮನಾಗಿ ೧೨ ಗಂಟೆಗಳದ್ದೇ ಆಗಿರುತ್ತದೆ. ತದನಂತರ ಸೂರ್ಯನು ದಕ್ಷಿಣಾಯನವನ್ನು ಮಾಡುತ್ತಾ ಡಿಸೆಂಬರ್ ೨೨ ರಂದು ಮಕರವೃತ್ತದ ಮೇಲೆ ಬರುತ್ತಾನೆ. ತದನಂತರ ಸೂರ್ಯನು ಉತ್ತರಾಯಣವನ್ನು ಮಾಡುತ್ತಾ ಮಾರ್ಚ್ ೨೨ ರಂದು ವಿಷುವವೃತ್ತದ ಮೇಲೆ ಬರುತ್ತಾನೆ. ಈ ರೀತಿ ೧ ವರ್ಷ ಪೂರ್ಣವಾಗುತ್ತದೆ. ಇದೇ ಭಾಸಮಾನ ಭ್ರಮಣಕ್ಕೆ ಸಂಬಂಧಿತ ದಿನವನ್ನು ಪ್ರತಿ ಮೂರು ತಿಂಗಳಿಗೆ ಪ್ರಾರಂಭದ ದಿನವೆಂದು ನಿರ್ಧರಿಸಿ, ಈ ದಿನದರ್ಶಿಕೆಯನ್ನು ಖಗೋಳದ ಘಟನೆಗಳಿಗೆ ಸಂಬಂಧವನ್ನು ಜೋಡಿಸಲಾಗಿದೆ.

೩. ಸೌರ ಕಾಲಗಣನೆಯ ಸಂದರ್ಭದಲ್ಲಿನ ಕೆಲವು ಸರಕಾರಿ ನಿರ್ಣಯಗಳು

೩೬೫ ದಿನಗಳನ್ನು ತಿಂಗಳುಗಳಿಗನುಸಾರ ವಿಭಜಿಸುವಾಗ ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ ಈ ಐದು ತಿಂಗಳುಗಳು ೩೧ ದಿನಗಳನ್ನು, ಅಂದರೆ ೩೧ x ೫ = ೧೫೫ ದಿನಗಳು. ಆಶ್ವಯುಜ, ಕಾರ್ತಿಕ, ಅಗ್ರಹಾಯಣ, ಪುಷ್ಯ, ಮಾಘ, ಫಾಲ್ಗುಣ, ಚೈತ್ರ ಈ ೭ ತಿಂಗಳುಗಳು  ಪ್ರತಿಯೊಂದು ತಿಂಗಳು ೩೦ ದಿನಗಳ ಅಂದರೆ  ೩೦ x ೭ = ೨೧೦ ದಿನಗಳು. ಒಟ್ಟು ವರ್ಷದಲ್ಲಿ ೩೬೫ ದಿನಗಳು. ಅಧಿಕ ವರ್ಷದಲ್ಲಿ ಮಾತ್ರ ಚೈತ್ರ ಮಾಸವನ್ನು ೩೦ ದಿನಗಳ ಬದಲು ೩೧ ದಿನಗಳದ್ದಾಗಿ ಮಾಡುತ್ತಾರೆ. ಇದರಿಂದ ಅಧಿಕ ವರ್ಷದಲ್ಲಿ ೩೬೫ ರ ಬದಲು ೩೬೬ ದಿನಗಳು ಬರುತ್ತವೆ.

‘ಕ್ಯಾಲೆಂಡರ್ ರಿಫಾರ್ಮ ಸಮಿತಿ’ಯು ತಯಾರಿಸಿದ ಹೊಸ ಕಾಲಗಣನೆಯನ್ನು ಸರಕಾರವು ಚೈತ್ರ ಪಾಡ್ಯ ೧೮೭೯, ಅಂದರೆ ೨೨ ಮಾರ್ಚ್ ೧೯೫೭ ರಿಂದ ಸ್ವೀಕರಿಸಿತು. ಆ ಸಮಯದಲ್ಲಿ ಸರಕಾರವು ಮುಂದಿನಂತೆ ನಿರ್ಣಯವನ್ನು ತೆಗೆದುಕೊಂಡಿತು.

ಅ. ಭಾರತದ ಗೆಝೆಟ್‌ನಲ್ಲಿ ಆಂಗ್ಲ ದಿನಾಂಕದೊಂದಿಗೆ ಭಾರತೀಯ ಸೌರ ದಿನಾಂಕವನ್ನೂ ಮುದ್ರಿಸಲಾಗುವುದು

ಆ. ಆಕಾಶವಾಣಿಯಿಂದ (ಹಾಗೆಯೇ ಸದ್ಯ ಎಲ್ಲ ದೂರದರ್ಶನವಾಹಿನಿಗಳಿಂದ) ವಿವಿಧ ಪ್ರಾದೇಶಿಕ ವಾರ್ತೆಗಳನ್ನು ಹೇಳುವಾಗ ಆಂಗ್ಲ ದಿನಾಂಕದೊಂದಿಗೆ ಹೊಸ ಭಾರತೀಯ ಸೌರ ದಿನಾಂಕವನ್ನು ಹೇಳಲಾಗುವುದು.

ಇ. ಸರಕಾರಿ ದಿನದರ್ಶಿಕೆಯಲ್ಲಿ ಆಂಗ್ಲ ದಿನಾಂಕದೊಂದಿಗೆ ಹೊಸ ಭಾರತೀಯ ಸೌರ ದಿನಾಂಕವನ್ನೂ ತೋರಿಸಲಾಗುವುದು. ಭಾರತೀಯ ಸೌರ ದಿನಾಂಕಗಳನ್ನು (ರಾಷ್ಟ್ರೀಯ ದಿನಾಂಕ) ಕೆಳಗಿನಂತೆ ಓದಲಾಗುತ್ತದೆ.

ಉದಾ :  ೧ ಜನವರಿ ೨೦೧೮ ಈ ದಿನದಂದು ರಾಷ್ಟ್ರೀಯ ದಿನಾಂಕವನ್ನು ೧೧ ಪುಷ್ಯ ೧೯೪೦ ಎಂದು ಓದಬೇಕು.

ಇತರ ರಾಷ್ಟ್ರಗಳೊಂದಿಗೆ ಪತ್ರವ್ಯವಹಾರವನ್ನು ಮಾಡುವಾಗ, ಕರಾರುಪತ್ರಗಳ ಮೇಲೆ ಭಾರತೀಯ ಸೌರ ದಿನಾಂಕದ ಉಲ್ಲೇಖವಿದ್ದರೆ ಆ ಕಾಗದಪತ್ರಗಳನ್ನು ಅಧಿಕೃತವೆಂದು ತಿಳಿಯಲಾಗುವುದು. ಇದಲ್ಲದೇ ಸೌರ ದಿನಾಂಕ ಬರೆದಿರುವ ಚೆಕ್  ಸ್ವೀಕರಿಸುವಂತೆ ರಿಸರ್ವ ಬ್ಯಾಂಕ್ ದೇಶದಲ್ಲಿರುವ ಎಲ್ಲ ಬ್ಯಾಂಕುಗಳಿಗೆ ಸ್ಪಷ್ಟ ಆದೇಶ ನೀಡಿದೆ. ನಮ್ಮಲ್ಲಿನ ಪ್ರತಿಯೊಬ್ಬರೂ ಈ ಸೌರ ದಿನದರ್ಶಿಕೆಯನ್ನು ಉಪಯೋಗಿಸಲು ನಿರ್ಧರಿಸಿದರೆ ಖಂಡಿತವಾಗಿಯೂ ಅದು ಹೆಚ್ಚೆಚ್ಚು ಜನರ ವರೆಗೆ ತಲುಪಬಹುದು ಎಂದು ಅನಿಸುತ್ತದೆ.

– ಶ್ರೀ. ಭಾಲಚಂದ್ರ ಪಾಂಡಕರ (ಆಧಾರ : ಜ್ಯೇಷ್ಠ ಪ್ರಜ್ಯೋತ, ಮೇ ೨೦೧೯)

ಸೌರ ಕಾಲಗಣನೆಯ ತಿಂಗಳುಗಳು
ಚೈತ್ರ, ವೈಶಾಖ ಈ ತಿಂಗಳುಗಳ ಹೆಸರುಗಳು ಭಾರತದಲ್ಲಿ ಎಲ್ಲೆಡೆ ಪ್ರಚಲಿತವಾಗಿರುವುದರಿಂದ ಮಾರ್ಗಶಿರವನ್ನು ಹೊರತುಪಡಿಸಿ ಇತರ ಎಲ್ಲ ತಿಂಗಳುಗಳಿಗೆ ಆ ಹೆಸರುಗಳನ್ನೇ ಇಡಲಾಗಿದೆ. ಮಾರ್ಗಶಿರದ ಬದಲಾಗಿ ‘ಅಗ್ರಹಾಯಣ’ ಎಂಬ ಹೆಸರನ್ನು ಇಡಲಾಗಿದೆ.

ಈ ದಿನದರ್ಶಿಕೆಗನುಸಾರ ವರ್ಷದಲ್ಲಿ ಬರುವ ಮಹತ್ವದ ದಿನಗಳು

೨೨ ಮಾರ್ಚ್ – ಚೈತ್ರ ಪಾಡ್ಯ – ಸೂರ್ಯನು ವಿಷುವವೃತ್ತದ ಮೇಲಿರುತ್ತಾನೆ

೨೨ ಜೂನ್ – ಆಷಾಢ ಪಾಡ್ಯ – ದಕ್ಷಿಣಾಯನ ಪ್ರಾರಂಭಬಿಂದು

೨೩ ಸಪ್ಟೆಂಬರ್ – ಆಶ್ವಯುಜ ಪಾಡ್ಯ – ಸೂರ್ಯನು ವಿಷುವವೃತ್ತದ ಮೇಲಿರುತ್ತಾನೆ

೨ ಡಿಸೆಂಬರ್ – ಪುಷ್ಯ ಪಾಡ್ಯ – ಉತ್ತರಾಯಣದ ಪ್ರಾರಂಭದಿನ

ಸೌರ ಕಾಲಗಣನೆಯಲ್ಲಿನ ಋತುಗಳು

ಸೌರ ಕಾಲಗಣನೆಯಲ್ಲಿ ತಿಂಗಳುಗಳಂತೆ ಕೆಳಗಿನಂತೆ ಋತುಗಳು ಇರುತ್ತವೆ..

೧. ವಸಂತ ಋತು – ಫಾಲ್ಗುಣ, ಚೈತ್ರ

೨. ಗ್ರೀಷ್ಮ ಋತು – ವೈಶಾಖ, ಜ್ಯೇಷ್ಠ

೩. ವರ್ಷಾ ಋತು – ಆಷಾಢ, ಶ್ರಾವಣ

೪. ಶರದ ಋತು – ಭಾದ್ರಪದ, ಆಶ್ವಯುಜ

೫. ಹೇಮಂತ ಋತು – ಕಾರ್ತಿಕ, ಮಾರ್ಗಶಿರ (ಹೊಸ ಹೆಸರು ಅಗ್ರಹಾಯಣ)

೬. ಶಿಶಿರ ಋತು – ಪುಷ್ಯ, ಮಾಘ

Leave a Comment