ಸರ್ವ ಪಾಪನಾಶಕ ವಸಿಷ್ಠ ಕುಂಡ

ಸದ್ಗುರು (ಸೌ.) ಅಂಜಲಿ ಗಾಡಗೀಳ್

ಹಿಮಾಚಲ ಪ್ರದೇಶದ ಮನಾಲಿಯಲ್ಲಿ, ಸಮುದ್ರ ಮಟ್ಟಕ್ಕಿಂತ ಸುಮಾರ ೧೦೦೦೦ ಅಡಿ ಎತ್ತರದಲ್ಲಿ ವಸಿಷ್ಠ ಋಷಿಗಳು ತಪಸ್ಸನ್ನಾಚರಿಸಿದ ಸ್ಥಾನವಿದೆ. ಅಲ್ಲಿ ಒಂದು ಬಿಸಿನೀರಿನ ಕೊಳವಿದೆ. ಇದನ್ನು ‘ವಸಿಷ್ಠ ಕುಂಡ’ ಎಂದು ಕರೆಯುತ್ತಾರೆ. ಅಷ್ಟು ಎತ್ತರದಲ್ಲಿರುವುದರಿಂದ, ತಾಪಮಾನ ಕಡಿಮೆಯಾದಾಗ ಅಕ್ಕಪಕ್ಕದಲ್ಲಿ ಹಿಮವಿದ್ದರೂ ಕೂಡ, ಈ ಕೊಳದ ನೀರು ಮಾತ್ರ ಬಿಸಿಯಾಗಿಯೇ ಇರುತ್ತದೆ, ಇದೇ ಈ ಕೋಳದ ವೈಶಿಷ್ಟ್ಯ! ಈ ಕೊಳದಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ಕೊಳದ ಇತಿಹಾಸವನ್ನು ತಿಳಿದುಕೊಳ್ಳೋಣ ಬನ್ನಿ..

ಅನೇಕ ವರ್ಷಗಳ ಹಿಂದೆ, ವಸಿಷ್ಠ ಋಷಿಗಳು ವಿಪಾಶಾ ನದಿ (ಇದನ್ನು ಬಿಯಾಸ್ ಎಂದು ಕೂಡ ಕರೆಯುತ್ತಾರೆ) ತೀರದಲ್ಲಿ ತಪಸ್ಸನ್ನು ಆಚರಿಸುತ್ತಿದ್ದರು. ವಸಿಷ್ಠ ಋಷಿಗಳು ರಘುವಂಶದ ಕುಲ ಗುರುಗಳಾಗಿದ್ದರೆ. ರಾವಣನನ್ನು ವಧಿಸಿ ಅಯೋಧ್ಯೆಗೆ ಮರಳಿದ ಶ್ರೀ ರಾಮನಿಗೆ ಬ್ರಹ್ಮಹತ್ಯೆಯ ಪಾಪ ತಗುಲಿತ್ತು. ಅದರಿಂದ ಮುಕ್ತನಾಗಲು ಶ್ರೀರಾಮನು ಒಂದು ಅಶ್ವಮೇಧ ಯಜ್ಞ ಮಾಡಲು ನಿರ್ಧರಿಸಿದನು. ಋಷಿ-ಮುನಿಗಳೊಂದಿಗೆ ಇದರ ಬಗ್ಗೆ ವಿಚಾರ-ವಿಮರ್ಶೆ ಮಾಡುವಾಗ, ಕುಲಗುರುಗಳಾದ ವಸಿಷ್ಠ ಋಷಿಗಳನ್ನು ಕರೆತರುವ ಜವಾಬ್ದಾರಿಯನ್ನು ಲಕ್ಷ್ಮಣನಿಗೆ ಒಪ್ಪಿಸಲಾಯಿತು. ಲಕ್ಷ್ಮಣನು ವಸಿಷ್ಠ ಋಷಿಗಳನ್ನು ಹುಡುಕುತ್ತ ಇದೇ ವಿಪಾಶಾ ನದಿ ತೀರಕ್ಕೆ ಬಂದು ಸೇರಿದನು. ಅಲ್ಲಿ ಅವನಿಗೆ ವಸಿಷ್ಠ ಋಷಿಗಳು ಸಿಕ್ಕಿದರು. ಚಳಿಗಾಲವಿತ್ತು, ಆದುದರಿಂದ ಲಕ್ಷ್ಮಣನು ತನ್ನ ಅಗ್ನಿಬಾಣದಿಂದ ಅಲ್ಲಿ ಭೂಮಿಯಲ್ಲೇ ಒಂದು ಬಿಸಿನೀರಿನ ಕೊಳವನ್ನು ನಿರ್ಮಿಸಿ ವಸಿಷ್ಠ ಋಷಿಗಳಿಗೆ ಸ್ನಾನಾದಿ ಕರ್ಮಗಳನ್ನು ನೆರವೇರಿಸಲು ಪ್ರಾರ್ಥಿಸಿದನು. ವಸಿಷ್ಠ ಋಷಿಗಳು ತಪಸ್ವಿಗಳು, ಅವರಿಗೆ ಬಿಸಿ ನೀರಿನ ಅವಶ್ಯಕತೆ ಎಲ್ಲಿ! ಅವರನ್ನು ಹುಡುಕಿ ಬಂದು ದಣಿದಿರುವ ಲಕ್ಷ್ಮಣನಿಗೆ ವಸಿಷ್ಠ ಋಷಿಗಳು ಮೊದಲು ಆ ಕೊಳದಲ್ಲಿ ಸ್ನಾನ ಮಾಡಲು ಹೇಳಿದರು. ಮಾತ್ರವಲ್ಲ, ‘ಯಾವ ಭಕ್ತನು ಅಲ್ಲಿ ಶ್ರದ್ಧೆಯಿಂದ ಸ್ನಾನ ಮಾಡುವನೋ, ಅವನ ದಣಿವು ದೂರವಾಗುವುದಲ್ಲದೆ ಅವನ ಸಕಲ ಪಾಪಗಳು ನಾಶವಾಗಲಿ, ಚರ್ಮ ರೋಗಗಳು ಗುಣವಾಗಲಿ’ ಎಂದು ಆ ಕೊಳಕ್ಕೆ ಒಂದು ವರವನ್ನಿತ್ತರು!

ಮನಾಲಿ (ಹಿಮಾಚಲ ಪ್ರದೇಶ) ಯಲ್ಲಿರುವ ಶ್ರೀ ವಸಿಷ್ಠ ಋಷಿಗಳು ತಪಸ್ಸನ್ನಾಚರಿಸಿದ ಸ್ಥಾನ (ವಸಿಷ್ಠ ಕುಂಡ)

ವಸಿಷ್ಠ ಋಷಿಗಳ ಮೂರ್ತಿಯ ಭಾವಪೂರ್ಣ ದರ್ಶನವನ್ನು ಪಡೆಯೋಣ

ಶ್ರೀರಾಮ ದೇವಸ್ಥಾನ

ವಸಿಷ್ಠ ಕುಂಡದ ಹತ್ತಿರದಲ್ಲಿಯೇ ಶ್ರೀರಾಮನ ಒಂದು ದೇವಸ್ಥಾನವಿದೆ. ಸುಮಾರು ೪೦೦೦ ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವನ್ನು ರಾಜಾ ಜನಮೇಜಯನು ಕಟ್ಟಿಸಿದ್ದನು. ತನ್ನ ತಂದೆ ರಾಜಾ ಪರೀಕ್ಷಿತನು ನಿಧನ ಹೊಂದಿದ ನಂತರ ಅವನ ಆತ್ಮಕ್ಕೆ ಶಾಂತಿ ಸಿಗಲೆಂದು ಜನಮೇಜಯನು ಅನೇಕ ಸ್ಥಳಗಳಲ್ಲಿ ಶ್ರೀರಾಮನ ದೇವಸ್ಥಾನಗಳನ್ನು ಕಟ್ಟಿಸಿದನು. ಈ ದೇವಸ್ಥಾನವು ಅವುಗಳಲ್ಲಿ ಒಂದಾಗಿದೆ. ಕಾಲ ಕೆಟ್ಟಂತೆ ಆ ದೇವಸ್ಥಾನದಿಂದ ದೇವರ ವಿಗ್ರಹಗಳನ್ನು ಕದಿಯಲಾಯಿತು. ೧೬೦೦ ರಲ್ಲಿ ರಾಜಾ ಜಗತಸಿಂಘನು ಕುಲ್ಲು ಪ್ರದೇಶದಲ್ಲಿ ವೈಷ್ಣವಧರ್ಮದ ಪ್ರಚಾರ ಪ್ರಾರಂಭಿಸಿದನು. ರಾಜಾ ತನ್ನ ದೂತರನ್ನು ಅಯೋಧ್ಯೆಗೆ ಕಳುಹಿಸಿ, ಅಲ್ಲಿಂದ ‘ಶ್ರೀರಾಮನು ಅಶ್ವಮೇಧ ಯಜ್ಞಕ್ಕಾಗಿ ತಯಾರಿಸಿದ ಮೂರ್ತಿಗಳನ್ನು’ ತರಲು ಹೇಳಿದನು. ಆದರೆ ಆ ದೂತರಿಗೆ ಮೂರ್ತಿಗಳ ಗುರುತು ಸಿಗದ ಕರಣ, ಎರೆಡೆರಡು ಬಾರಿ ಬೇರಯೇ ಮೂರ್ತಿಗಳನ್ನು ತಂದರು. ಈ ಎರಡು ಜೊತೆ ಮೂರ್ತಿಗಳನ್ನು ರಾಜನು ವಸಿಷ್ಠ ಕುಂಡ ಮತ್ತು ಮಾಣಿಕರ್ಣ್ ಎಂಬಲ್ಲಿ ಇರುವ ಶ್ರೀರಾಮ ದೇವಸ್ಥಾನಗಳಲ್ಲಿ ಇರಿಸಿ, ಆ ದೇವಸ್ಥಾನಗಳಿಗೆ ರಾಜಾಶ್ರಯ ನೀಡಿದನು. ಇಂದಿಗೂ ಆ ದೇವಸ್ಥಾನಗಳನ್ನು ಅದೇ ಪರಂಪರೆಗನುಸಾರ ನೋಡಿಕೊಳ್ಳಲಾಗುತ್ತದೆ.

– ಸದ್ಗುರು (ಸೌ.) ಅಂಜಲಿ ಗಾಡಗೀಳ್, ಸನಾತನ ಆಶ್ರಮ, ಗೋವಾ.

Leave a Comment