ಬಂದ್‌ ಬಾಟಲಿಗಳ ನೀರನ್ನು ಅವಲಂಬಿಸಿರುವುದು ಅಪಾಯಕಾರಿ !

ಇಂದಿನವರೆಗೆ ಬಂದ್ ಬಾಟಲಿಗಳ ಕುಡಿಯುವ ನೀರನ್ನು ಸಾದಾ ನೀರಿನ ತುಲನೆಯಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತಿತ್ತು; ಆದರೆ ಇತ್ತೀಚೆಗಿನ ಸಮೀಕ್ಷೆಗನುಸಾರ ರಾಜಧಾನಿ ದೆಹಲಿಯಲ್ಲಿ ಮಾರಾಟವಾಗುವ ವಿವಿಧ ಬ್ರ್ಯಾಂಡ್’ಗಳ ಕುಡಿಯುವ ನೀರಿನ ಬಂದ್ ಬಾಟಲಿಗಳು ಶರೀರಕ್ಕೆ ಹಾನಿಕರವಾಗಿವೆ ಎಂದು ಕಂಡುಬಂದಿದೆ. ಈ ನೀರಿನ ಗುಣಮಟ್ಟವನ್ನು ನೀರನ್ನು ಶುದ್ಧಪಡಿಸಲು ಉಪಯೋಗಿಸುವ ರಾಸಾಯನಿಕಗಳಿಂದ ನಿರ್ಧರಿಸಲಾಗುತ್ತದೆ. ಭಾರತದ ಸಮೀಕ್ಷೆಯ ಹೊರತು ಅಂತರರಾಷ್ಟ್ರೀಯ ಸಂಸ್ಥೆಗಳು ಈ ವಿಷಯದಲ್ಲಿ ಮಾಡಿದ ಸಮೀಕ್ಷೆಗಳಿಂದ ನಳ್ಳಿಯ ನೀರಿನ ತುಲನೆಯಲ್ಲಿ ಬಂದ್ ಬಾಟಲಿಗಳಲ್ಲಿನ ನೀರು ಹೆಚ್ಚು ಮಲಿನ ಹಾಗೂ ಹಾನಿಕರವಾಗಿವೆ ಎಂಬುದು ಸ್ಪಷ್ಟವಾಗಿದೆ. ನದಿಗಳ ನೀರು ಮತ್ತು ಅಂತರ್ಜಲ ಕೂಡ ಮಲಿನವಾಗಿರುವುದರಿಂದ ನೀರಿನಲ್ಲಿ ಘಾತಕ ಜೀವಾಣುಗಳ (ಬ್ಯಾಕ್ಟೇರಿಯಾಗಳ) ಹೆಚ್ಚಳವಾಗುತ್ತಿದೆ. ನೀರಿನ ಈ ಮೂಲಗಳನ್ನು ಮಲಿನಮುಕ್ತಗೊಳಿಸಲು ಯಾವುದೇ ಯೋಗ್ಯ ನಿವಾರಣೋಪಾಯಗಳನ್ನು ಮಾಡಲಾಗಿಲ್ಲ ಎಂದು ಈ ಸಮೇಕ್ಷೆಗಳು ತಿಳಿಸಿವೆ.

ಬಂದ್ ಬಾಟಲಿಯ ನೀರಿನ ಉದ್ಯಮವು ಪ್ರತಿವರ್ಷ ೧೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿದೆ. ಈಗಿರುವ ಮಾಹಿತಿಯ ಆಧಾರದಲ್ಲಿ ಮಾಡಿದ ಸಮೀಕ್ಷೆಯಿಂದ ದೇಶದ ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಕುಡಿಯಲು ಯೋಗ್ಯವಾಗಿಲ್ಲ, ಹಾಗಾಗಿ ಬಂದ್‌ಬಾಟಲಿಯ ನೀರಿನ ಉದ್ಯಮ ಇನ್ನಷ್ಟು ಬೆಳೆದಿದೆ.

೧. ಅಂತರ್ಜಲದ ಮಾಲಿನ್ಯದಿಂದ ಗಂಭೀರ ರೋಗಗಳಾಗುವುದು

ಪಂಜಾಬ್‌ನ ಭಟಿಂಡಾ ಜಿಲ್ಲೆಯಲ್ಲಿ ಮಾಡಿದ ಒಂದು ಸಮೀಕ್ಷೆಯಿಂದ ಅಂತರ್ಜಲ ಮತ್ತು ಮಣ್ಣಿನಲ್ಲಿ ವಿಷಯುಕ್ತ ರಾಸಾಯನಿಕಗಳ ಪ್ರಮಾಣ ತುಂಬಾ ಹೆಚ್ಚಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ನೀರನ್ನು ಕುಡಿಯಲು ಉಪಯೋಗಿಸುವ ಇಲ್ಲಿನ ಜನರು ಹೃದಯ ಮತ್ತು ಪುಪ್ಪುಸದ ಗಂಭೀರ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಈ ಹಿಂದೆ ಉತ್ತರಪ್ರದೇಶ ಮತ್ತು ಬಿಹಾರದಲ್ಲಿನ ಗಂಗಾನದಿಯ ತೀರದ ಅಂತರ್ಜಲ ವಿಷಯುಕ್ತವಾಗಿರುವುದು ಕಂಡುಬಂದಿತ್ತು. ನರೋರಾ ಪರಮಾಣು ಕೇಂದ್ರದ ತ್ಯಾಜ್ಯ ಗಂಗಾನದಿಯಲ್ಲಿ ಬಿಟ್ಟು ಗಂಗೆಯ ನೀರನ್ನು ವಿಷಯುಕ್ತವಾಗಿತ್ತು. ಕಾನಪೂರದ ೪೦೦ ಕ್ಕಿಂತಲೂ ಹೆಚ್ಚು ಕಾರ್ಖಾನೆಗಳಲ್ಲಿನ ತ್ಯಾಜ್ಯ ನೀರನ್ನು ಮೊದಲಿನಿಂದಲೂ ಗಂಗಾನದಿಗೆ ಬಿಡಲಾಗುತ್ತಿದ್ದು ಅದರಿಂದ ನದಿಯು ಅತ್ಯಂತ ಮಲಿನವಾಗಿದೆ. ಗಂಗೆಗಿಂತಲೂ ಯಮುನಾ ನದಿಯ ಸ್ಥಿತಿ ಹೆಚ್ಚು ಭಯಂಕರವಾಗಿದೆ. ಆದ್ದರಿಂದ ಅದಕ್ಕೆ ‘ಮೃತ ನದಿ’ ಎಂದು ಹೇಳಲಾಗುತ್ತದೆ. ಯಮುನೋತ್ರಿಯಿಂದ ಪ್ರಯಾಗದ ಸಂಗಮ ಸ್ಥಳದವರೆಗೆ ಈ ನದಿಯು ಸುಮಾರು ೧ ಸಾವಿರದ ೪೦೦ ಕಿ.ಮೀ.ಗಿಂತ ಹೆಚ್ಚು ದೂರದವರೆಗೆ ಹರಿಯುತ್ತದೆ. ಧಾರ್ಮಿಕ ದೃಷ್ಟಿಯಲ್ಲಿ ಪವಿತ್ರವಾಗಿರುವ ಈ ನದಿಯ ಹೆಚ್ಚಿನ ಭಾಗವು ಒಂದು ಚರಂಡಿಯಂತಾಗಿದೆ. ಅದನ್ನು ಶುದ್ಧೀಕರಣಗೊಳಿಸಲು ಇಂದಿನವರೆಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ; ಆದರೆ ನದಿಯ ಸ್ಥಿತಿ ಹೇಗಿತ್ತೋ ಹಾಗೆಯೇ ಇದೆ.

೨. ಯಮುನಾ ನದಿಯ ಮಲಿನ ಜಲದಿಂದ ಮಥುರಾದ ಸುತ್ತಮುತ್ತಲಿನ ಹೊಲಗಳು ಮತ್ತು ಪಶುಗಳ ಮೇವು ವಿಷಯುಕ್ತವಾಗುವುದು

ನದಿಗಳಲ್ಲಿ ಚರಂಡಿಗಳ ನೀರು ಮತ್ತು ತ್ಯಾಜ್ಯವಸ್ತುಗಳನ್ನು ಬಿಡುವ ಕಾರ್ಯವು ಇನ್ನೂ ನಿಂತಿಲ್ಲ. ಯಮುನಾ ನದಿಗೆ ಬಿಡುವ ಶೇ. ೭೦ ರಷ್ಟು ತ್ಯಾಜ್ಯವು ದೆಹಲಿಯ ನಿವಾಸಿಗಳದ್ದಾಗಿರುತ್ತದೆ. ಇನ್ನು ಉಳಿದ ಅಲ್ಪಸ್ವಲ್ಪ ನೀರು ಹರಿಯಾಣಾ ಮತ್ತು ಉತ್ತರಪ್ರದೇಶದಿಂದ ಬರುವ ತ್ಯಾಜ್ಯದಿಂದ ಕೆಡುತ್ತದೆ. ಮಲಿನವಾದ ನೀರನ್ನು ಶುದ್ಧಮಾಡಲು ಅಳವಡಿಸಿದ ಯಂತ್ರಗಳು ತಮ್ಮ ಕ್ಷಮತೆಯ ಶೇ. ೫೦ ರಷ್ಟು ಕೂಡ ಕಾರ್ಯವನ್ನು ಮಾಡುವುದಿಲ್ಲ. ಆದ್ದರಿಂದಲೆ ಮಥುರೆಯ ಸಮೀಪವಿರುವ ಪ್ರದೇಶಗಳಲ್ಲಿ ಯಮುನೆಯ ಮಲಿನ ನೀರಿನಿಂದ ಚರ್ಮರೋಗ, ಚರ್ಮದ ಅರ್ಬುದರೋಗದಂತಹ ಕಾಯಿಲೆಗಳು ಜನರನ್ನು ಕಾಡುತ್ತಿವೆ. ಪಶುಗಳು ಮತ್ತು ಕೃಷಿಕ್ಷೇತ್ರಗಳು ಕೂಡ ಈ ಮಾಲಿನ್ಯದಿಂದ ಅಸುರಕ್ಷಿತವಾಗಿವೆ. ಈ ಪರಿಸರದಲ್ಲಿ ಬೆಳೆಯುವ ಆಹಾರಧಾನ್ಯಗಳು ಮತ್ತು ಪಶುಗಳ ಮೇವು ಕೂಡ ವಿಷಯುಕ್ತವಾಗಿವೆ ಎಂದು ಒಂದು ಪರೀಕ್ಷೆಯಲ್ಲಿ ಕಂಡುಬಂದಿದೆ.

೩. ಮಿತಿಮೀರಿದ ಕೀಟನಾಶಕಗಳ ಉಪಯೋಗದಿಂದ ಮಾಲಿನ್ಯಗೊಂಡ ಅಂತರ್ಜಲ

ನದಿಗಳ ನೀರನ್ನು ತಪಾಸಣೆ ಮಾಡಿದಾಗ ನೀರಿನಲ್ಲಿ ಕ್ಯಾಲ್ಸಿಯಮ್, ಮ್ಯಾಗ್ನೇಶಿಯಮ್ ಕ್ಲೋರೈಡ್, ಆಮ್ಲತೆ (ಪಿ.ಎಚ್), ಬಿ.ಓ.ಡಿ. (ಬಯೋಲಾಜಿಕಲ್‌ಆಕ್ಸಿಜನ್ ಡಿಮಾಂಡ್), ಕ್ಷಾರದ ಪ್ರಮಾಣ (ಅಲ್ಕಲೈನಿಟಿ) ದಂತಹ ತತ್ತ್ವಗಳ ಪ್ರಮಾಣವು ಆವಶ್ಯಕತೆಗಿಂತ ಹೆಚ್ಚಾಗಿದೆ ಎಂದು ಪರೀಕ್ಷೆಯಲ್ಲಿ ಕಂಡುಬಂದಿದೆ. ಕೀಟನಾಶಕಗಳ ಮಿತಿಮೀರಿದ ಉಪಯೋಗ ಮತ್ತು ಕಾರ್ಖಾನೆಗಳಿಂದ ಹೊರಬರುವ ವಿಷಯುಕ್ತ ನೀರು ಮತ್ತು ತ್ಯಾಜ್ಯಗಳಿಗಾಗಿ ಯೋಗ್ಯ ರೀತಿಯಲ್ಲಿ ವ್ಯವಸ್ಥೆ ಮಾಡದಿರುವುದರಿಂದ ನದಿಗಳ ನೀರಿನಲ್ಲಿ ಈ ಮೇಲಿನ ಬದಲಾವಣೆಯಾಗುತ್ತಿದೆ. ಕಳೆದ ಅನೇಕ ವರ್ಷಗಳಲ್ಲಿ ಜಿಎಮ್ (ಜೆನೆಟಿಕಲಿ ಮಾಡಿಫೈಡ್ ಅಂದರೆ ಜೆನೆಟಿಕ (ಜೈವಿಕ) ಬದಲಾವಣೆ ಮಾಡಿದ) ಬೀಜಗಳ ಉಪಯೋಗ ಹೆಚ್ಚಾಗಿರುವುದರಿಂದ ರಾಸಾಯನಿಕ ದ್ರವ್ಯಗಳ ಮತ್ತು ಕೀಟನಾಶಕಗಳ ಅವಶ್ಯಕತೆ ಹೆಚ್ಚಾಗಿದೆ. ಈ ರಸಾಯನಿಕಗಳು ಮಣ್ಣು ಮತ್ತು ನೀರಿನಲ್ಲಿ ಸೇರಿ ಬಂದ್ ಬಾಟಲಿಯಲ್ಲಿನ ನೀರಿನ ಭಾಗವಾಗುತ್ತಿವೆ ಮತ್ತು ಈ ನೀರು ಶುದ್ಧತೆಯ ಹೆಸರಿನಲ್ಲಿ ಜನರ ಆರೋಗ್ಯವನ್ನು ಕೆಡಿಸುವ ಕಾರ್ಯವನ್ನು ಮಾಡುತ್ತಿದೆ. ಕೀಟನಾಶಕದ ಸ್ವರೂಪದಲ್ಲಿ ಉಪಯೋಗಿಸುವ ಎಂಡೋಸಲ್ಫಾನ್ನಿಂದಲೂ ದೊಡ್ಡ ಪ್ರಮಾಣದಲ್ಲಿ ಅಂತರ್ಜಲ ಮಲಿನವಾಗುತ್ತಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಇಲ್ಲಿಯವರೆಗೆ ೧ ಸಾವಿರ ಜನರ ಪ್ರಾಣ ಹೋಗಿದೆ ಹಾಗೂ ೧೦ ಸಾವಿರಕ್ಕಿಂತಲೂ ಹೆಚ್ಚು ಜನರು ಇದರಿಂದ ಗಂಭೀರ ರೀತಿಯಲ್ಲಿ ರೋಗಪೀಡಿತರಾಗಿದ್ದಾರೆ.

೪. ತಮ್ಮ ಲಾಭಕ್ಕಾಗಿ ನೀರನ್ನು ಉಪಯೋಗಿಸುವುದು ದೌರ್ಭಾಗ್ಯದ ಸಂಗತಿ

ನಮ್ಮಲ್ಲಿರುವ ಎಲ್ಲ ಬಂದ್ ಬಾಟಲಿ ನೀರಿನ ಕಾರ್ಖಾನೆಗಳು ಈ ನದಿಯ ಮಲಿನ ನೀರನ್ನು ಶುದ್ಧಗೊಳಿಸಲು ಅನೇಕ ರಸಾಯನಿಕಗಳನ್ನು ಉಪಯೋಗಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಈ ಮಲಿನ ನೀರಿನಲ್ಲಿ ರಸಾಯನಿಕಗಳನ್ನು ಸೇರಿಸಲಾಗುತ್ತದೆ, ಇವು ಮಾನವನ ಶರೀರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಈ ಕಾರ್ಖಾನೆಗಳಲ್ಲಿ ತುಂಬಾ ಪ್ರಮಾಣದಲ್ಲಿ ದುರ್ವ್ಯವಹಾರ ನಡೆಯುತ್ತದೆ. ಅನೇಕ ಜನರು ಅನುಮತಿಯಿಲ್ಲದೆಯೇ ಈ ನೀರನ್ನು ಮಾರಾಟ ಮಾಡುತ್ತಾರೆ ಹಾಗೂ ಅನೇಕ ಜನರಲ್ಲಿ ಈ ರೀತಿ ಮಾರಾಟ ಮಾಡಲು ಭಾರತೀಯ ಪ್ರಮಾಣ ಸಂಸ್ಥೆಗಳ ಪ್ರಮಾಣಪತ್ರಗಳಿಲ್ಲ. ಆದ್ದರಿಂದ ಅವುಗಳ ಗುಣಮಟ್ಟವು ಸಂದೇಹಾಸ್ಪದವಾಗಿದೆ. ನಾವು ಯಾವ ದೇಶಗಳ ಔದ್ಯೋಗೀಕರಣದ ಮಾದರಿಯನ್ನು ಅವಲಂಬಿಸಿದ್ದೇವೆಯೋ, ಆ ದೇಶಗಳಿಂದ ನಾವು ‘ಅವರು ಅವರ ನೈಸರ್ಗಿಕ ಸಂಪನ್ಮೂಲಗಳನ್ನು (ರಿಸೋರ್ಸ್) ಹೇಗೆ ರಕ್ಷಿಸಿದ್ದಾರೆ’ ಎಂಬುದನ್ನು ಕಲಿಯಲಿಲ್ಲ. ಆದ್ದರಿಂದಲೆ ಅಲ್ಲಿನ ನದಿ, ಸರೋವರ ಮತ್ತು ಆಣೆಕಟ್ಟುಗಳು ನಮ್ಮ ದೇಶಕ್ಕಿಂತಲೂ ಹೆಚ್ಚು ಶುದ್ಧ ಮತ್ತು ನಿರ್ಮಲವಾಗಿವೆ. ‘ಕುಡಿಯುವ ಶುದ್ಧ ನೀರು ದೇಶದಲ್ಲಿನ ನಾಗರಿಕರ ಸಾಂವಿಧಾನಿಕ ಅಧಿಕಾರವಾಗಿದೆ’; ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದನ್ನು ಸಾಕಾರಗೊಳಿಸುವ ಬದಲು ಅದನ್ನು ಲಾಭಕ್ಕೋಸ್ಕರ ಇರುವ ಇನ್ನೊಂದು ಸಂಪನ್ಮೂಲದ ಹಾಗೆ ಪರಿಗಣಿಸಿವೆ. ಈ ಸ್ಥಿತಿಯು ದೇಶಕ್ಕೆ ದುರದೃಷ್ಟಕರ ಎಂದು ಹೇಳಬಹುದು.

– ಪ್ರಮೋದ ಭಾರ್ಗವ (ಆಧಾರ : ಸಾಪ್ತಾಹಿಕ ‘ಹಿಂದೂ ಸಭಾ ವಾರ್ತಾ, ೧೦ ರಿಂದ ೧೬ ಡಿಸೆಂಬರ್ ೨೦೧೪)

Leave a Comment