ಶ್ರೀ ಮಂಜುನಾಥ ದೇವಸ್ಥಾನ, ಕದ್ರಿ (ಮಂಗಳೂರು)

ಇತಿಹಾಸ

ಮಂಗಳೂರಿನ ಕದ್ರಿಯು ಒಂದು ಹಳೆಯ ಕಾಲದ ಭಕ್ತಿಪರ ದೇವಸ್ಥಾನ. ಈ ಸ್ಥಳ ಪುರಾಣದಲ್ಲಿರುವ ಭಾರದ್ವಾಜ ಸಂಹಿತೆ ಮತ್ತು ಕದಲಿವನಕ್ಷೇತ್ರ ಮಹಾತ್ಮೆಯು ಕದ್ರಿಗೆ ಸಂಬಧಪಟ್ಟಿದ್ದು, ಪರಶುರಾಮ ಕ್ಷೇತ್ರವಾಗಿದೆ. ಈ ಸ್ಥಳವು ಪ್ರಶಾಂತವಾಗಿದ್ದು ಸುತ್ತಲು ಕೆರೆಗಳು ಮತ್ತು ಜರಿಗಳು ಹುಟ್ಟುವ ಸ್ಥಳವಾಗಿದೆ. ಆದ್ದರಿಂದ ಈ ಸ್ಥಳವು ಋಷಿಮುನಿಗಳನ್ನು ಮತ್ತು ನಾಥ ಯೋಗಿಗಳಾಗಿರುವ ಮತ್ಸ್ಯೇಂದ್ರನಾಥ ಮತ್ತು ಗೋರಕ್ಷನಾಥರನ್ನು ಆಕರ್ಷಿಸಿತು. ರುದ್ರ (ಶಿವ) ತನ್ನ ಸಿಂಬೆಯಲ್ಲಿ ಗಂಗೆಯನ್ನು ಇರಿಸಿಕೊಂಡು ಮತ್ತು ಈ ಸ್ಥಳವನ್ನು ಪವಿತ್ರ ಸ್ಥಳವನ್ನಾಗಿಸಿದ್ದಾನೆ. ವಿಭೀಷಣನು ತನ್ನ ಅಣ್ಣನ ಹತ್ಯೆಗೆ ತಾನು ಕಾರಣನಾದ ಕಾರಣ ಈ ಸ್ಥಳಕ್ಕೆ ಪಾಪ ಪರಿಹಾರಕ್ಕಾಗಿ ಬಂದಿದ್ದನೆಂದು ಹೇಳಲಾಗಿದೆ. ಈ ದೇವಸ್ಥಾನವು ಮಂಗಳೂರಿನ ದಕ್ಷಿಣಕ್ಕೆ ಕದ್ರಿ ಗುಡ್ಡದಲ್ಲಿದೆ. ಈ ಸ್ಥಳವು ಶೈವರಿಗೆ, ಬೌದ್ಧಧರ್ಮ ಮತ್ತು ಶಕ್ತಿಧರ್ಮಗಳಿಗೆ ಒಂದು ಪವಿತ್ರ ಸ್ಥಳವಾಗಿದ್ದು ಇದಕ್ಕೆ ಆಧಾರವಾಗಿ ಇಲ್ಲಿ ಶಿಲ್ಪಕಲೆಗಳು ಮತ್ತು ಶಾಸನಗಳು ಇವೆ.

ಇತಿಹಾಸದಲ್ಲಿ ಈ ಸ್ಥಳಕ್ಕೆ ಅಲ್ಪ ಆಧಾರಗಳಿವೆ ಆದರೆ ಇಟಾಲಿಯನ್ ಪ್ರವಾಸಿಗ ಡೆಲ್ಲಾವಲ್ಲೆ ಕದ್ರಿಗೆ ಕ್ರಿ.ಶ.೧೬೨೩ ರಲ್ಲಿ ಆಗಮಿಸಿದ್ದು ದೇವಸ್ಥಾನಲ್ಲಿ ಆರಾಧನೆ ಮತ್ತು ಉಜ್ವಲತೆ ಬಗ್ಗೆ ಬರೆದಿದ್ದಾರೆ. ಜೋಗಿಮಠದ ನಾಥ ಸಂಪ್ರದಾಯವು ಇರುವುದರಿಂದ ಈ ದೇವಸ್ಥಾನವನ್ನು ಮತ್ಸ್ಯೇಂದ್ರನಾಥ ಮತ್ತು ಅವರ ಅನುಯಾಯಿಗಳು ಕ್ರಿ.ಶ ೧೦-೧೧ ಕಾಲದಲ್ಲಿ ಕಟ್ಟಿಸಿದ್ದು, ಉದ್ಭವ ಮೂರ್ತಿಯಾದ ಶಿವಲಿಂಗವು ಇದಕ್ಕಿಂತ ಹಳೆಯದಿರಬಹುದೆಂದು ಪರಿಗಣಿಸಲಾಗಿದೆ.

ದೇವಸ್ಥಾನದ ರಚನೆ

ನಾಥ ಸಂಸ್ಕೃತಿಯು ನೇಪಾಳದ ದಿಕ್ಕಿನಲ್ಲಿ ಹುಟ್ಟಿರುವುದರಿಂದ ಈ ದೇವಸ್ಥಾನವು ನೇಪಾಳದ ವಾಸ್ತುಶಿಲ್ಪದ ತರಹ ಇದ್ದು ಇದರ ತಗ್ಗಿನಲ್ಲಿರುವ ಮುಕ್ತ ಮಂಟಪ, ದ್ವಾರಪಾಲಕರು, ಶೈವರು, ದ್ರಾವಿಡರ ಶಿಖರ, ಉತ್ತರವಾದ ಹಿತ್ತಾಳೆಯ ದೀಪಸ್ತಂಭ ಮತ್ತು ಪಂಚಲೋಹದ ಇತರೆ ವಿಗ್ರಹಗಳು (ಅವುಗಳಲ್ಲಿ ತ್ರಿಲೋಕೆಶ್ವರ ವಿಗ್ರಹವು ಭಾರತದಲ್ಲೇ ಒಂದು ಅಪೂರ್ವ ವಿಗ್ರಹವಾಗಿದೆ) ಆಕರ್ಷಣೆಗೆ ಪಾತ್ರವಾಗಿವೆ. ಕ್ರಿ.ಶ ೯೬೮ ರಲ್ಲಿ ಮಂಜುಶ್ರೀಬುದ್ದ, ವ್ಯಾಸಮುನಿ ಮತ್ತು ಇತರರ ಪ್ರಕಾರ ಮನೆ ಕ್ಷೇತ್ರದೈವ, ಮಲರಾಯ ಮತ್ತು ಅಣ್ಣಪ್ಪ ವಂಜುರ್ಲಿ ಇತರೆ ದೇವರುಗಳು ಎಂದರೆ ಗಣಪತಿ, ಶಾಸ್ತಾವು, ಮತ್ತು ದುರ್ಗ ಇವರುಗಳನ್ನು ಪರಿವಾರ ದೇವರುಗಳು ಎಂದು ಕರೆಯುವರು. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಮತ್ಸ್ಯೇಂದ್ರನಾಥರ, ಗೋರಕ್ಷನಾಥರ, ಮತ್ತು ಶ್ರೀಂಗಿನಾಥರ ಪ್ರತಿಬಿಂಬಗಳು ದಕ್ಷಿಣ, ಪಶ್ಚಿಮ ಮತ್ತು ಉತ್ತರಭಾಗಗಳಿವೆ. ಉದ್ಭವ ಲಿಂಗವು ನೆಲದ ಸಮದಲ್ಲಿದೆ, ಮತ್ತು ಇದು ಸುತ್ತಲು ನೀರಿನಿಂದ ಕೂಡಿದೆ. ಈ ನೀರಿನ ಉದ್ಭವ ಮಾತ್ರ ತಿಳಿದು ಬಂದಿಲ್ಲ. ಉತ್ಸವ ಮೂರ್ತಿಯು ಕಂಚಿನದ್ದಾಗಿದ್ದು ೧ ಅಡಿ ಎತ್ತರವಾಗಿದ್ದು ಇದು ಸಮಭಾಗ ರೀತಿಯಲ್ಲಿದೆ. ಶಂಕ ಮತ್ತು ಅಕ್ಷಮಾಲವು ಮೇಲುಗೈಯಲ್ಲಿದ್ದು, ಅಭಯ ಮತ್ತು ವರದ ಕೆಳಗೈಯಲ್ಲಿದೆ. ಈ ದೇವಸ್ಥಾನದ ಹಿಂಭಾಗದಲ್ಲಿ ಹಳೆಯ ದುರ್ಗಿಯ ವಿಗ್ರಹವಿದೆ.

ಹಬ್ಬಗಳು ಮತ್ತು ಉತ್ಸವಗಳು

ನಾಗರ ಪಂಚಮಿ

ಶ್ರೀ ಮಂಜುನಾಥ ದೇವರ ಒಳಾಂಗಣದಲ್ಲಿರುವ ನಾಗದೇವರ ಸನ್ನಿಧಿಯಲ್ಲಿ ಗ್ರಾಮದ ಎಲ್ಲ ಭಕ್ತಾದಿಗಳು ಬೆಳಗ್ಗೆ ೮.೩೦ ಗಂಟೆಯಿಂದ ೧೦.೩೦ ಗಂಟೆಯವರೆಗೆ ಬಂದು ದೇವರಿಗೆ ನಾಗಪೂಜೆ (ಹಾಲು ಹಾಗೂ ಪಂಚಾಮೃತದಿಂದ) ಮಾಡುತ್ತಾರೆ.

ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ

ಕೃಷ್ಣಜನ್ಮಾಷ್ಟಮಿ ದಿನದಂದು ಸಂಜೆ ೫ ಗಂಟೆ ನಂತರ ಕೃಷ್ಣ ಮಹೋತ್ಸವ ಸಮಿತಿ ಕದ್ರಿ ಇವರು ದೇವಸ್ಥಾನದಲ್ಲಿರುವ ಗಂಧದ ಕೃಷ್ಣನ ಮೂರ್ತಿಯನ್ನು ಮಂಟಪದಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆಯಲ್ಲಿ ಕದಿರಿ ಕಂಬಳದ ಶ್ರೀ ಗೋಪಾಲ ಕೃಷ್ಣ ಮಠಕ್ಕೆ ಕೊಂಡೊಯ್ದು ಅಲ್ಲಿ ಆ ದಿನದಂದು ಪೂಜೆ ಮಾಡುತ್ತಾರೆ. ಸಂಜೆ ೬ ಗಂಟೆಯ ನಂತರ ಮರುದಿನ ಹಾಗೆ ಕೊಂಡು ಹೋದ ಕೃಷ್ಣನ ಮೂರ್ತಿಯನ್ನು ಅದೇ ಮಂಟಪದಲ್ಲಿ ಕುಳ್ಳಿರಿಸಿಕೊಂಡು ಗೋಪಾಲ ಕೃಷ್ಣಮಠದಿಂದ ಅತಿ ವಿಜೃಂಭಣೆಯಿಂದ ಸ್ತಬ್ದ ಚಿತ್ರಗಳು, ಡೊಳ್ಳು ಕುಣಿತ, ಕರಗ, ನೃತ್ಯ ಹಾಗು ಇನ್ನಿತರ ಮನರಂಜನೆಯೊಂದಿಗೆ ಹಾಗೂ ಕೃಷ್ಣನ ಕುರುಹಾದ ಮಡಕೆ ಒಡೆಯುವ ಕಾರ್ಯಕ್ರಮದೊಂದಿಗೆ ಮೆರವಣಿಗೆಯಲ್ಲಿ ಪುನಃ ಶ್ರೀ ಕದ್ರಿ ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನದ ರಾಜಾಂಗಣದಲ್ಲಿ ಜರುಗುತ್ತವೆ.

ಕಾರ್ತಿಕ ಸೋಮವಾರ

ಕಾರ್ತಿಕ ಮಾಸವು ಶಿವನ ಆರಾಧನೆಗೆ ಅತ್ಯಂತ ಮಹತ್ವದ್ದಾಗಿರುವುದರಿಂದ ಈ ಮಾಸದಲ್ಲಿ ಬರುವ ಪ್ರತಿ ಸೋಮವಾವಾರದಂದು ಶಿವನ ಅತ್ಯಂತ ಪ್ರೀತಿಯಾದ ಪಂಚಾಮೃತ ಸಹಿತವಾದ ಶತರುದ್ರಾಭಿಷೇಕ ಸೇವೆಯನ್ನು ಭಕ್ತ ಜನರ ಸಹಕಾರದೊಂದಿಗೆ ಸಾಮೂಹಿಕವಾಗಿ ನೆರವೇರಿಸಲಾಗುತ್ತದೆ.

ಲಕ್ಷ ದೀಪೋತ್ಸವ

ಅಂದು ಬೆಳಗ್ಗೆ ಮತ್ತು ಮಧ್ಯಾಹ್ನ ವಿಶೇಷ ಅಲಂಕಾರದೊಂದಿಗೆ ಮಂಜುನಾಥ ದೇವರಿಗೆ ಮಹಾಪೂಜೆ ನಡೆಯುತ್ತದೆ. ಅಲ್ಲದೆ ಬೆಳಗ್ಗೆ ಶ್ರೀ ಅಯ್ಯಪ್ಪ ದೇವರಿಗೆ ಸೀಯಾಳ (ಏಳನೀರು) ಅಭಿಷೇಕ ಮಾಡಿ ನಂತರ ಮಧ್ಯಾಹ್ನ ಮಹಾಪೂಜೆ ಜರುಗಿ ಅನ್ನ ಸಂತರ್ಪಣೆ ನಡೆಯುವುದು. ನಂತರ ರಾತ್ರಿ ದೇವರ ಬಲಿ ಪ್ರದಕ್ಷಿಣೆ ಹೊರಟು ದೇವರ ಮುಂಭಾಗದಲ್ಲಿರುವ ದೀಪಸ್ತಂಭದಲ್ಲಿ ಐದು ಅಂಕಣ ದೀಪವನ್ನು ಹಾಗೂ ದೇವಸ್ಥಾದ ಒಳಗೆ ಹಾಗೂ ಹೊರಗೆ ಇರುವ ದಳಿಗಳಲ್ಲಿ ಹಣತೆಗಳನ್ನಿಟ್ಟು ದೀಪವನ್ನು ಉರಿಸಲಾಗುವುದು ನಂತರ ಕದ್ರಿ ಮಠಾಧೀಶರ ಜೊತೆಗೂಡಿ ಶ್ರೀದೇವರ ಬಲಿಯನ್ನು ಕದ್ರಿ ಮಠದ ಕಟ್ಟೆಯ ಬಳಿಯಲ್ಲಿ ರಚಿಸಲಾದ ತಾತ್ಕಾಲಿಕ ಮಂಟಪದವರೆಗೆ ದಾರಿಯ ಇಕ್ಕೆಡೆಗಳಲ್ಲಿ ಹಣತೆ ಉರಿಸಿಕೊಂಡು ಉತ್ಸವ ಮೆರವಣಿಗೆಯನ್ನು ಅಲ್ಲಿಯವರೆಗೆ ಕೊಂಡೊಯ್ದು ತಾತ್ಕಾಲಿಕ ಮಂಟಪದಲ್ಲಿ ದೇವರನ್ನು ಕುಳ್ಳಿರಿಸಿ ಪೂಜಿಸಿದ ನಂತರ ಪುನಃ ಹಿಂತಿರುಗಿ ಬಂದು ರಾಜಾಂಗಣದಲ್ಲಿ ಉತ್ಸವಗಳು ನಡೆದು ಕೊನೆಯದಾಗಿ ಅಲಂಕಾರ ಮಾಡಿದ ಸಣ್ಣ ರಥದಲ್ಲಿ ದೇವರನ್ನು ಕುಳ್ಳಿರಿಸಿ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ತಂದು ಲಕ್ಷ ದೀಪೋತ್ಸವ ಆಚರಿಸಲಾಗುವುದು.

ಮಹಾ ಶಿವರಾತ್ರಿ

ಆದಿನ ಬೆಳಗ್ಗೆಯಿಂದ ಹಲವಾರು ಭಕ್ತರು ಅನೇಕ ಸಂಖ್ಯೆಯಲ್ಲಿ ಬಂದು ವಿಶೇಷ ಸೇವೆಯೆಂದ ರುದ್ರಾಭಿಷೇಕ ಹಾಗೂ ಶಿವ ಪೂಜೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ನಂತರ ರಾತ್ರಿ ಸುಮಾರು ೯:೩೦ ರಿಂದ ೧೦:೦೦ ಗಂಟೆಯ ಹೊತ್ತಿಗೆ ದೇವರಿಗೆ ರಂಗಪೂಜೆ ಸೇವೆ ನಡೆದ ನಂತರ ದೇವರ ಬಲಿಪ್ರದಕ್ಷಿಣೆ ಹೊರಡುತ್ತದೆ. ಹೀಗೆ ಶಿವರಾತ್ರಿಯ ನಾಲ್ಕು ಜಾವ ಪೂಜೆ ನಡೆದ ನಂತರ ಶಿವರಾತ್ರಿ ಮಹೋತ್ಸವ ಮುಗಿಯುತ್ತದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮವು ಬೆಳಗ್ಗೆಯ ತನಕ ನೆಡೆಯುತ್ತದೆ.

ಕಂಬಳ

ಈ ಹಬ್ಬವು ಡಿಸೆಂಬರ್‌ನಲ್ಲಿ ಜರುಗುವುದು. ಇದಕ್ಕೆ ದೇವರ ಕಂಬಳ ಎಂದು ಕರೆಯುತ್ತಾರೆ. ಲಕ್ಷದೀಪೋತ್ಸವಕ್ಕೆ ಮುಂಚೆ ಡಿಸೆಂಬರ್‌ನಲ್ಲಿ ಜರುಗುತ್ತದೆ. ಮಂಜುನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವರ ತೀರ್ಥವನ್ನು ಕೊಂಡುಹೋಗಿ ಅಲ್ಲಿ ಕಂಬಳ ಅಂಕಣಕ್ಕೆ ಹಾಕಿದ ನಂತರ ಕದ್ರಿಯ ಅರಸರು ಕಂಬಳಕ್ಕೆ ಚಾಲನೆ ನೀಡುವರು. ಅಲ್ಲಿ ಎರಡು ಕಂಬಳ ಅಂಕಣಗಳಿದ್ದು ಗೋರಕ್ಷನಾಥ ಕರೆ, ಮಚ್ಚೇಂದ್ರನಾಥ ಕರೆ ಎಂದು ಕರೆಯುವರು. ಗೆದ್ದಂತಹ ಕೋಣದ ಜೊತೆಗೆ ಬಹುಮಾನ ವಿತರಿಸಲಾಗುವುದು.

ವಾರ್ಷಿಕ ಜಾತ್ರೆ

ವಾರ್ಷಿಕ ಜಾತ್ರೆಯನ್ನು ೯ ದಿವಸಗಳ ಕಾಲ ಮಾಡುವರು. ಜಾತ್ರೆಯು ಪುಷ್ಯ ಬಹುಳ ಮಕರ ಮಾಸದಲ್ಲಿ ನಡೆಯುತ್ತದೆ. ಜಾತ್ರೆಯು ಪ್ರಾರಂಭವಾಗುವ ಮುಂಚೆ ದೇವರ ಮಹಾಪೂಜೆ ನಂತರ ಯಾಗಶಾಲೆಗೆ ಬರುತ್ತಾರೆ. ಜಾತ್ರೆಯ ಪ್ರತಿದಿವಸ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಪ್ರಥಮ ದಿನ ಮತ್ತು ಏಳನೇ ದಿನದಂದು ದೀಪದ ಬಲಿ, ಕಂಚೀಲು ಸೇವೆ ಉತ್ಸವ ಮಾಡುವರು (ಕಂಚೀಲು ಸೇವೆಯೆಂದರೆ ಮಕ್ಕಳು ವಧುವರರು ಅಲಂಕಾರವನ್ನು ಮಾಡುಕೊಂಡು ಉತ್ಸವ ಮೂರ್ತಿಯ ಮುಂದೆ ಅವರೂ ಕೂಡಾ ಪ್ರದಕ್ಷಿಣೆ ಮಾಡುತ್ತಾರೆ). ಆರನೇ ದಿವಸ ಕೆರೆ ದೀಪೋತ್ಸವ ಇರುತ್ತದೆ. ಕೆರೆ ದೀಪೋತ್ಸವ ಎಂದರೆ ಉತ್ಸವ ಮೂರ್ತಿಯನ್ನು ತುಳಸಿ ಕಟ್ಟೆಯ ಮುಂದೆ ಇಟ್ಟು ವಿಶೇಷ ಪೂಜೆ ಮಾಡಿ, ದೇವರು ಕೆರೆಯ ಸುತ್ತ ಪ್ರದಕ್ಷಿಣೆ ಹಾಕಿ ವಾಪಸ್ಸು ಆಗುವುದು. ೮ನೇ ದಿವಸ ಶ್ರೀ ಮನ್ಮಹ ರಥೋತ್ಸವವನ್ನು ಆಚರಿಸುತ್ತಾರೆ. ಬೆಳಗ್ಗೆ ೧೦ ಗಂಟೆಗೆ ರಥಾಲಂಕಾರ ಮಾಡುತ್ತಾರೆ. ನಂತರ ರಥ ಕಲಶ ಪೂಜೆ ಅಂದರೆ ರಥದ ಶುದ್ಧೀಕರಣವನ್ನು ಮಾಡುತ್ತಾರೆ. ಮಹಾಪೂಜೆಯ ನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನದ ಸುತ್ತಲು ತಂದು ಅದನ್ನು ಕದ್ರಿ ಯೋಗೇಶ್ವರ ಮಠಾಧೀಶರ ಸಮ್ಮುಖದಲ್ಲಿ ರಥದಲ್ಲಿ ಇಡುವರು. ಸಾಯಂಕಾಲ ೬ ಗಂಟೆಗೆ ರಥೋತ್ಸವವನ್ನು ಮಾಡುವರು. ಈ ರಥವನ್ನು ಅಶ್ವಾರೂಢರಾದ ಕದ್ರಿ ಮಠಾಧೀಶರು “ಆವೋ ಬೇಟ ಮಂಜುನಾಥ” ಎಂದು ಕರೆದ ನಂತರ ಎಳೆಯುವರು. ಇದಾದ ನಂತರ ಬೆಳ್ಳಿ ರಥ, ಚಂದ್ರ ಮಂಡಲದಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡುವರು. ರಾತ್ರಿ ಮಹಾಪೂಜೆಯ ನಂತರ ಭೂತ ಬಲಿ ಸೇವೆ, ಶಯನ ಗೃಹ ಪೂಜೆ ಮಾಡುತ್ತಾರೆ. ಶಯನ ಗೃಹ ಸೇವೆಯೆಂದರೆ ಮಂಚ ಮತ್ತು ಹಾಸಿಗೆಯನ್ನು ಹಾಸಿ ದೇವರನ್ನು ಅಲ್ಲಿ ಇಟ್ಟು ಬಾಗಿಲನ್ನು ಮುಚ್ಚುವುದು. ೯ನೇ ದಿನ ೧೦ ಗಂಟೆಗೆ ಸೂರ್ಯನ ಕಿರಣಗಳು ದೇವರ ಮೇಲೆ ಬೀಳುವ ಹಾಗೆ ಕನ್ನಡಿ ಹಿಡಿಯುತ್ತಾರೆ. ಇದನ್ನು ದರ್ಪಣ ಸೇವೆ ಎನ್ನುತ್ತಾರೆ. “ಕದ್ರಿ ಕಂಬಳ” ಅಂದರೆ ಕೋಣಗಳ ಓಟ ಸ್ವರ್ಧೆ ಡಿಸೆಂಬರ್ ತಿಂಗಳಲ್ಲಿ ಏರ್ಪಡಿಸುತ್ತಾರೆ. ಈ ಓಟವು ಸಾವಿರಾರು ಜನಗಳನ್ನು ಆಕರ್ಷಿಸುತ್ತದೆ.

ಕದ್ರಿ ದೇವಸ್ಥಾನದ ಇನ್ನೊಂದು ವೈಶಿಷ್ಟ್ಯವೆಂದರೆ, ಈ ದೇವಸ್ಥಾನದಲ್ಲಿ ಭಕ್ತಾದಿಗಳು ಧರ್ಮಸ್ಥಳ ದೇವಸ್ಥಾನದ ಹರಕೆಯನ್ನು ಕೂಡ ಇಲ್ಲೇ ಕಟ್ಟುವುದು.

ಆಧಾರ : ಕರ್ನಾಟಕ ಟೆಂಪಲ್ ಇನ್ಫಾರ್ಮಶನ್ ಸಿಸ್ಟಮ್

Leave a Comment