ಒಂದು ರಾತ್ರಿಯಲ್ಲಿಯೇ ದಿಕ್ಕು ಬದಲಾಯಿಸಿದ ಬಿಹಾರದ ಸೂರ್ಯಮಂದಿರ !

ಸೂರ್ಯಮಂದಿರ

ಬಿಹಾರದ ಔರಂಗಾಬಾದ್‌ನಲ್ಲಿನ ಪಶ್ಚಿಮಾಭಿಮುಖ ಸೂರ್ಯಮಂದಿರ ‘ಭಾರತದಲ್ಲಿ ಸೂರ್ಯನ ಅನೇಕ ದೇವಸ್ಥಾನಗಳಿವೆ. ಅವುಗಳಲ್ಲಿ ಕೊಣಾರ್ಕ್‌ನ ಜಗತ್ಪ್ರಸಿದ್ಧವಾದ ಸೂರ್ಯಮಂದಿರವು ಚಿರಪರಿಚಿತವಾಗಿದೆ. ಅಂತಹ ಒಂದು ಕಲಾತ್ಮಕ ದೇವಸ್ಥಾನವು ಬಿಹಾರದ ಔರಂಗಾಬಾದ್‌ನಲ್ಲಿನ ದೇವ ಎಂಬಲ್ಲಿ ಇದೆ. ಅದರ ವೈಶಿಷ್ಟ್ಯವೆಂದರೆ, ದೇಶದ ಎಲ್ಲ ಸೂರ್ಯಮಂದಿರಗಳು ಪೂರ್ವಾಭಿಮುಖವಾಗಿರುವಾಗ ಇದೊಂದೇ ಸೂರ್ಯ ಮಂದಿರವು ಪಶ್ಚಿಮಾಭಿಮುಖವಾಗಿದೆ. ೧೦೦ ಅಡಿ ಎತ್ತರದ ಈ ಸೂರ್ಯಮಂದಿರವು ಸಾವಿರಾರು ವರ್ಷಗಳಷ್ಟು ಪುರಾತನವಾಗಿದೆಯೆಂದು ಹೇಳಲಾಗುತ್ತದೆ. ಕೊಣಾರ್ಕ್ ಮಂದಿರದ ಹಾಗೆಯೇ ಇಲ್ಲಿಯೂ ಸೂರ್ಯರಥವಿದೆ. ಈ ದೇವಸ್ಥಾನದ ೭ ರಥಗಳ ಮೇಲೆ ಕಲ್ಲಿನಲ್ಲಿ ಸುಂದರವಾದ ಕೆತ್ತನೆಯ ಕೆಲಸ ಹಾಗೂ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ. ಕಪ್ಪು ಕಲ್ಲುಗಳಲ್ಲಿ ಉದಯಿಸುತ್ತಿರುವ, ಮಧ್ಯಾಹ್ನದ ಹಾಗೂ ಅಸ್ತದ ಸೂರ್ಯನ ಅಪ್ರತಿಮ ಪ್ರತಿಮೆಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಶಿಲ್ಪಗಳು ಒಡಿಶಾದ ಜಗನ್ನಾಥ ಮಂದಿರದೊಂದಿಗೆ ಹೋಲುತ್ತದೆ. ಸೂರ್ಯಪುರಾಣದಲ್ಲಿ ಈ ದೇವಸ್ಥಾನದ ಉಲ್ಲೇಖವು ಕಂಡು ಬರುತ್ತದೆ.
ಇದರ ಕಥೆಗನುಸಾರ ಈ ದೇವಸ್ಥಾನವನ್ನು ಕೊಳ್ಳೆಹೊಡೆಯಲು ದರೋಡೆಕೋರರ ಗುಂಪು ಬಂದಿತ್ತು. ಆಗ ದೇವಸ್ಥಾನದ ಪುರೋಹಿತರು ‘ದೇವಸ್ಥಾನವನ್ನು ಧ್ವಂಸಗೊಳಿಸಬೇಡಿ ಎಂದು ದರೋಡೆಕೋರರಿಗೆ ವಿನಂತಿಸಿದರು. ಆಗ ದರೋಡೆಕೋರರ ಮುಖಂಡನು ‘ಈ ದೇವಸ್ಥಾನದಲ್ಲಿ ನಿಜವಾಗಿಯೂ ದೇವರೇನಾದರೂ ಇದ್ದರೆ, ಅವನು ತನ್ನ ಶಕ್ತಿಯನ್ನು ತೋರಿಸಲಿ. ಒಂದೇ ರಾತ್ರಿಯಲ್ಲಿ ಈ ದೇವಸ್ಥಾನದ ಮುಖ ಪೂರ್ವದಿಂದ ಪಶ್ಚಿಮದ ಕಡೆಗೆ ತಿರುಗಿದರೆ, ದೇವಸ್ಥಾನವನ್ನು ನಾವು ಒಡೆಯುವುದಿಲ್ಲ ಎಂದು ಹೇಳಿದನು. ಅನಂತರ ಪುರೋಹಿತರು ರಾತ್ರಿ ಇಡೀ ದೇವರನ್ನು ಅತ್ಯಂತ ತಳಮಳದಿಂದ ಆರಾಧನೆಯನ್ನು ಮಾಡಿದರು ಹಾಗೂ ಆಶ್ಚರ್ಯವೆಂದರೆ, ಬೆಳಗಾಗುವಾಗ ಆ ದೇವಸ್ಥಾನವು ಪಶ್ಚಿಮಾಭಿಮುಖವಾಗಿತ್ತು. ಇದರಿಂದ ದರೋಡೆಕೋರರು ದೇವಸ್ಥಾನವನ್ನು ಕೊಳ್ಳೆಹೊಡೆಯದೇ ಹಾಗೆಯೇ ಹೊರಟು ಹೋದರು.

Leave a Comment