ಹಂದಿಜ್ವರ (ಸ್ವೈನ್ ಫ್ಲೂ) ಮತ್ತು ಆಯುರ್ವೇದೀಯ ಉಪಚಾರ

೧. ಹಂದಿಜ್ವರ ಅಂದರೆ ಏನು ?

ಹಂದಿಜ್ವರವು ಚರ್ಚೆಯ ಒಂದು ದೊಡ್ಡ ವಿಷಯವಾಗಿದೆ. ಈ ರೋಗವು ‘ಸ್ವೈನ್ A (H1N1)’ ಎಂಬ ರೋಗಾಣುಗಳಿಂದ (ವೈರಸ್‌ನಿಂದ) ಆಗುತ್ತದೆ. ಈ ರೋಗಾಣುಗಳು ಸಾಮಾನ್ಯವಾಗಿ ಹಂದಿಗಳಲ್ಲಿರುತ್ತವೆ. ಆದ್ದರಿಂದ ಈ ರೋಗಕ್ಕೆ ‘ಹಂದಿಜ್ವರ’ ಎಂದು ಹೇಳುತ್ತಾರೆ; ಆದರೆ ಹಂದಿಯ ಮಾಂಸ ತಿನ್ನುವುದು ಮತ್ತು ಹಂದಿ ಜ್ವರ ಇವುಗಳಿಗೆ ಯಾವ ಸಂಬಂಧವೂ ಇಲ್ಲ. ಈ ರೋಗಕ್ಕೊಳಗಾದ ವ್ಯಕ್ತಿ ಕೆಮ್ಮಿದರೆ ಅಥವಾ ಸೀನಿದರೆ ಗಾಳಿಯಲ್ಲಿ ಹರಡುವ ತುಂತುರ ಹನಿಗಳಲ್ಲಿ ಈ ರೋಗಾಣುಗಳಿರುತ್ತವೆ. ಈ ರೋಗಾಣುಗಳು ಗಾಳಿಯಲ್ಲಿ ೮ ಗಂಟೆಯ ವರೆಗೆ ಜೀವಂತವಿರಬಹುದು. ಆಧುನಿಕ ವೈದ್ಯಕೀಯ ಶಾಸ್ತ್ರವು ರೋಗಪ್ರತಿಕಾರಕ ಶಕ್ತಿ ಕಡಿಮೆಯಿರುವ ವ್ಯಕ್ತಿಯ ಮೂಗು, ಕಣ್ಣು, ಬಾಯಿ ಮುಂತಾದ ಭಾಗಗಳಿಗೆ ವಿಷಾಣುಗಳ ಸಂಪರ್ಕವಾದರೆ ವಿಷಾಣುಗಳ ಸಂಕ್ರಮಣವಾಗುತ್ತದೆ ಎಂದು ಹೇಳುತ್ತದೆ.

೨. ಹಂದಿಜ್ವರದ ಲಕ್ಷಣಗಳು

ಹಂದಿಜ್ವರದ ಲಕ್ಷಣಗಳು ಸಾಮಾನ್ಯವಾಗಿ ಇತರ ಜ್ವರಗಳಂತೆಯೇ ಇರುತ್ತವೆ. ಇದರಲ್ಲಿ ಚಳಿಯಾಗುವುದು, ೧೦೦ ಅಂಶ ಫ್ಯಾ. ಕ್ಕಿಂತ ಹೆಚ್ಚು ಜ್ವರ ಬರುವುದು, ನೆಗಡಿ, ಕೆಮ್ಮು, ಗಂಟಲು ನೋವು, ಮೈಕೈನೋವು ಇತ್ಯಾದಿ ಲಕ್ಷಣಗಳು ಕಾಣಿಸುತ್ತವೆ. ಕೆಲವೊಮ್ಮೆ ಹೊಟ್ಟೆ ನೋವು, ಹೊಟ್ಟೆತೊಳೆಸಿದಂತಾಗುವುದು, ವಾಂತಿ, ಭೇದಿ ಇತ್ಯಾದಿ ಲಕ್ಷಣಗಳೂ ಕಂಡುಬರುತ್ತವೆ.

೩. ಹಂದಿಜ್ವರವನ್ನು ಪತ್ತೆ ಹಚ್ಚುವುದು ಹೇಗೆ ?

ಆಧುನಿಕ ವೈದ್ಯರು ಪ್ರಾರಂಭದಲ್ಲಿ ‘ರ‍್ಯಾಪಿಡ್ ಡೈಗ್ನಾಸ್ಟಿಕ್ ಟೆಸ್ಟ್’ ಮಾಡಲು ಹೇಳಬಹುದು; ಈ ಟೆಸ್ಟ್ ಸಕಾರಾತ್ಮಕವಾಗಿದ್ದರೂ (ಪಾಸಿಟಿವ್) ನಮಗೆ ‘ಹಂದಿಜ್ವರ ಇಲ್ಲ’ ಎಂದು ಸಿದ್ಧವಾಗುವುದಿಲ್ಲ. ಕೇವಲ ಪ್ರಯೋಗಶಾಲೆಯಲ್ಲಿ ಮಾಡಿದ ನಿರೀಕ್ಷಣೆಯಿಂದ ಹಂದಿಜ್ವರ ಇದೆ ಅಥವಾ ಇಲ್ಲ, ಎಂಬುದು ಸ್ಪಷ್ಟವಾಗುತ್ತದೆ. ಸ್ಥಳೀಯ ಆರೋಗ್ಯಕೇಂದ್ರಗಳಲ್ಲಿ ಇಂತಹ ಪತ್ತೆ ಹಚ್ಚುವ ಪದ್ಧತಿಗಳು ಲಭ್ಯವಿರುತ್ತವೆ.

೪. ಹಂದಿಜ್ವರ – ಆಯುರ್ವೇದೀಯ ವಿಚಾರ

ಈಗ ವಸಂತ ಋತು ಪ್ರಾರಂಭವಾಗಿದೆ. ವಸಂತ ಋತುವಿನಲ್ಲಿ ಸೂರ್ಯನ ಉಷ್ಣತೆಯಿಂದ ಕಫ ತೆಳುವಾಗುತ್ತದೆ ಮತ್ತು ಜೀರ್ಣಶಕ್ತಿ ಮಂದವಾಗುತ್ತದೆ. ‘ರೋಗಾಃ ಸರ್ವೇಪಿ ಮಂದೇಗ್ನೌ ‘ ಅಂದರೆ ‘ಜೀರ್ಣಶಕ್ತಿ ಮಂದಾಗುವುದರಿಂದ ಎಲ್ಲ ರೋಗಗಳು ಉಂಟಾಗುತ್ತವೆ’ ಎಂದು ಆಯುರ್ವೇದ ಹೇಳುತ್ತದೆ; ಏಕೆಂದರೆ ರೋಗಪ್ರತೀಕಾರಕ ಶಕ್ತಿಯು ಜೀರ್ಣಶಕ್ತಿಯನ್ನು ಅವಲಂಬಿಸಿರುತ್ತದೆ. ಹಂದಿಜ್ವರ ಇದಕ್ಕೆ ಅಪವಾದವಲ್ಲ.

೫. ಹಂದಿಜ್ವರಕ್ಕೆ ಆಯುರ್ವೇದೀಯ ಉಪಚಾರ

ಆಯುರ್ವೇದದಲ್ಲಿ ಜ್ವರಗಳ ಅಸಂಖ್ಯಾತ ವಿಧಗಳನ್ನು ಹೇಳಲಾಗಿದ್ದು ಅವುಗಳ ಚಿಕಿತ್ಸೆಯನ್ನೂ ಹೇಳಲಾಗಿದೆ. ಹಂದಿಜ್ವರವೂ ಒಂದು ರೀತಿಯ ಜ್ವರವೇ ಆಗಿದೆ. ಯಾವುದೇ ರೀತಿಯ ಜ್ವರ ಅಥವಾ ನೆಗಡಿಯಾಗಿದ್ದಲ್ಲಿ ಹೆದರದೆ ಮುಂದಿನ ಉಪಚಾರಗಳನ್ನು ಮಾಡಬೇಕು ಮತ್ತು ಅದರ ಜೊತೆಗೆ ಪಥ್ಯವನ್ನು ಪಾಲಿಸಬೇಕು. ಈ ಉಪಚಾರಗಳಿಂದ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ, ಆದುದರಿಂದ ಹೆದರಬಾರದು.

೫ ಅ. ಲಂಘನ (ಉಪವಾಸ) : ಮೈಯಲ್ಲಿ ಜ್ವರವಿದ್ದಾಗ ಜೀರ್ಣಶಕ್ತಿ ಮಂದವಾಗುತ್ತದೆ. ಇಂತಹ ಸಮಯದಲ್ಲಿ ಜೀರ್ಣವಾಗಲು ಜಡವಾಗಿರುವ (ಕಠಿಣವಾಗಿರುವ) ಆಹಾರಪದಾರ್ಥಗಳನ್ನು ತಿನ್ನಬಾರದು. ಇಂತಹ ಸಮಯದಲ್ಲಿ ಸಂಪೂರ್ಣ ಉಪವಾಸ ಮಾಡಿದರೆ ಉತ್ತಮ; ಆದರೆ ಅದು ಸಾಧ್ಯವಿಲ್ಲದಿದ್ದರೆ ಜ್ವರ ಕಡಿಮೆಯಾಗುವ ತನಕ ಅರಳು ಅಥವಾ ಚುರಮರಿ (ಮಂಡಕ್ಕಿ), ರಾಜಗಿರಿಯ ಲಾಡು, ಹೆಸರು ಬೇಳೆಯನ್ನು ಕುದಿಸಿದ ನೀರು ಇಂತಹ ಜೀರ್ಣಿಸಲು ಹಗುರವಾದ ಆಹಾರವನ್ನು ತೆಗೆದುಕೊಳ್ಳಬೇಕು. ಬಿಸಿ ಅನ್ನದ ಗಂಜಿಯಿಂದಲೂ ಲಾಭವಾಗುತ್ತದೆ.

೫ ಆ. ಶುಂಠಿನೀರನ್ನು ಕುಡಿಯಬೇಕು : ಒಂದು ಲೀಟರ ಕುಡಿಯುವ ನೀರಿನಲ್ಲಿ ಕಾಲು ಚಮಚ ಶುಂಠಿಯ ಪುಡಿ (ಒಣಗಿಸಿದ ಹಸಿ ಶುಂಠಿಯ ಪುಡಿ) ಯನ್ನು ಹಾಕಿ ಅದನ್ನು ಕುದಿಸಿ, ಆರಿಸಿ ಕುಡಿಯಬೇಕು.

೫ ಇ. ಹಬೆ ತೆಗೆದುಕೊಳ್ಳುವುದು : ನೆಗಡಿಯಾಗಿದ್ದರೆ ಕರ್ಪೂರದ ತುಂಡನ್ನು ಬಿಸಿ ನೀರಿನಲ್ಲಿ ಹಾಕಿ ಅದರ ಆವಿ (ಹಬೆ, ಉಗಿ) ತೆಗೆದುಕೊಳ್ಳಬೇಕು.

೫ ಈ. ಔಷಧಿಯ ಕಷಾಯ

೧. ಒಂದು ಮುಷ್ಠಿಯಷ್ಟು ತುಳಸಿಯ ಎಲೆ, ೧ ಸೆಂ.ಮೀ. ದಪ್ಪದ ಶುಂಠಿ ಅಥವಾ ಹಸಿ ಶುಂಠಿಯ ತುಂಡು, ೫-೬ ಕಪ್ಪು ಮೆಣಸಿನ ಕಾಳು, ಒಂದು ಚಮಚದಷ್ಟು ಕೊತ್ತಂಬರಿ ಕಾಳುಗಳನ್ನು ತೆಗೆದುಕೊಂಡು ಅವುಗಳನ್ನು ಜಜ್ಜಿ ೪ ಲೋಟ ನೀರಿನಲ್ಲಿ ಹಾಕಿ ೧ ಲೋಟದಷ್ಟು ಆಗುವ ತನಕ ಕುದಿಸಿ ಕಷಾಯವನ್ನು ತಯಾರಿಸಬೇಕು. ಈ ಕಷಾಯವನ್ನು ಬೆಳಗ್ಗೆ – ಸಾಯಂಕಾಲ ಅರ್ಧ ಲೋಟದಂತೆ ಬಿಸಿ ಮಾಡಿ ಕುಡಿಯಬೇಕು.

೨. ಒಂದು ಚಮಚದಷ್ಟು ಲವಂಗ ಹಾಕಿ ಮೇಲಿನಂತೆ ಕಷಾಯ ಮಾಡಿಕೊಳ್ಳುವುದೂ ಲಾಭದಾಯಕವಾಗಿದೆ.

೫ ಉ. ಏನು ಮಾಡಬೇಕು ಮತ್ತು ಏನು ಮಾಡಬಾರದು ?

೧. ಸೀನುವಾಗ, ಕೆಮ್ಮುವಾಗ, ಆಕಳಿಕೆ ಬಂದಾಗ, ನಗುವಾಗ ಬಾಯಿ ಮೇಲೆ ಕರವಸ್ತ್ರವನ್ನು ಇಟ್ಟುಕೊಳ್ಳಬೇಕು.

೨. ತಮ್ಮ ಮನೆಯ ಪರಿಸರದಲ್ಲಿ ಹಂದಿಜ್ವರವಿರುವ ರೋಗಿಗಳು ಕಂಡುಬಂದರೆ ಕೆಲವು ದಿನಗಳ ತನಕ ಪ್ರತಿಬಂಧಕ ಉಪಾಯವೆಂದು ಮನೆಯಿಂದ ಹೊರಗೆ ಹೋಗುವಾಗ ಮೂಗಿನ ಮೇಲೆ ಸ್ವಚ್ಛ ಬಟ್ಟೆಯನ್ನು ಕಟ್ಟಿಕೊಳ್ಳಬೇಕು ಅಥವಾ ಮಾಸ್ಕ್ಅನ್ನು ಉಪಯೋಗಿಸಬೇಕು.

೩. ಪ್ರತಿದಿನ ಬೆಳಗ್ಗೆ ಕೊಬ್ಬರಿ ಎಣ್ಣೆ ಅಥವಾ ತಾಜಾ ತುಪ್ಪದ ೨-೨ ಹನಿಗಳನ್ನು ಮೂಗಿನ ಎರಡೂ ಹೊರಳೆಗಳಲ್ಲಿ ಹಾಕಬೇಕು, ಹಾಗೆಯೇ ಮನೆಯಿಂದ ಹೊರಗೆ ಹೋಗುವಾಗ ಕಿರುಬೆರಳನ್ನು ಎಣ್ಣೆ ಅಥವಾ ತುಪ್ಪದಲ್ಲಿ ಮುಳುಗಿಸಿ ಅದಕ್ಕೆ ತಾಗಿದ ಎಣ್ಣೆ ಅಥವಾ ತುಪ್ಪವನ್ನು ಮೂಗಿನ ಎರಡೂ ಹೊಳ್ಳೆಗಳಲ್ಲಿ (ಮೂಗಿನೊಳಗೆ) ಹಚ್ಚಿಕೊಳ್ಳಬೇಕು.

೪. ಜ್ವರವಿದ್ದಾಗ ಸ್ನಾನ ಮಾಡಬಾರದು. ಅದರ ಬದಲು ಒದ್ದೆ ಬಟ್ಟೆಯಿಂದ ಮೈಒರೆಸಿ ತಕ್ಷಣ ಒಣಗಿಸಬೇಕು.

೫. ಏನಾದರೂ ತಿನ್ನುವ ಅಥವಾ ಕುಡಿಯುವ ಮೊದಲು ಕೈಗಳನ್ನು ಸಾಬೂನಿನಿಂದ ಸ್ವಚ್ಛ ತೊಳೆದುಕೊಳ್ಳಬೇಕು.

೬. ಪ್ರತಿದಿನ ವ್ಯಾಯಾಮ ಮಾಡುವುದು ಒಳ್ಳೆಯದು; ಆದರೆ ಜ್ವರವಿರುವಾಗ ಮಾತ್ರ ವ್ಯಾಯಾಮ ಮಾಡಬಾರದು.

೬. ರೋಗ ಹರಡಬಾರದೆಂದು ಧರ್ಮಾಚರಣೆ ಮಾಡುವುದು ಆವಶ್ಯಕ !

ಆಯುರ್ವೇದದಲ್ಲಿ ಸಂಕ್ರಾಮಿಕ ರೋಗಗಳ ಹಿಂದೆ ‘ಅಧರ್ಮವೇ ಮೂಲ ಕಾರಣವಾಗಿರುತ್ತದೆ’ ಎನ್ನಲಾಗಿದೆ. ಧರ್ಮಾಚರಣೆಯಿಂದ ಇಂತಹ ರೋಗಗಳನ್ನು ತಡೆಗಟ್ಟುವುದು ಸಾಧ್ಯವಿದೆ. ಆದುದರಿಂದ ಹಿಂದೂ ಧರ್ಮದಲ್ಲಿ ಹೇಳಿದ ಆಚರಣೆಗಳನ್ನು ಪಾಲಿಸುವುದು, ಎಲ್ಲ ರೋಗಗಳನ್ನು ತಡೆಗಟ್ಟುವ ಉತ್ತಮ ಉಪಾಯವಾಗಿದೆ. ಈ ವಿಷಯದಲ್ಲಿ ಜಂತುಗಳ (ಬ್ಯಾಕ್ಟೇರಿಯಾ) ಸಂಸರ್ಗಕ್ಕೆ ಕಾರಣವಾಗಿರುವ ಪಾಶ್ಚಾತ್ಯರ ಶೇಕ್ ಹ್ಯಾಂಡ್‌ಗಿಂತ ಹಿಂದೂ ಧರ್ಮದಲ್ಲಿ ಹೇಳಿದ ನಮಸ್ಕಾರ ಲಾಭದಾಯಕವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ಫೋಂಡಾ, ಗೋವಾ.

ನೆಗಡಿ, ಕೆಮ್ಮು, ಸೀನಿನಂತಹ ಲಕ್ಷಣಗಳಿಗೆ ಆಯುರ್ವೇದೀಯ ಭೀಮಸೇನಿ ಕರ್ಪೂರವನ್ನು ಉಪಯೋಗಿಸಿರಿ !

ಇತ್ತೀಚೆಗೆ ಹಂದಿಜ್ವರದಿಂದ ರೋಗಿಯ ಮೃತ್ಯುವಾಯಿತು ಎಂಬ ವಾರ್ತೆಯನ್ನು ಕೇಳಿ ಅಥವಾ ಓದಿ, ನೆಗಡಿ, ಕೆಮ್ಮು ಬಂದರೂ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುವುದು ಕಂಡುಬರುತ್ತಿದೆ. ಇಂತಹ ಸಮಯದಲ್ಲಿ ಭಯ ಪಡದೆ ಆಯುರ್ವೇದೀಯ ಭೀಮಸೇನಿ ಕರ್ಪೂರವನ್ನು ಉಪಯೋಗಿಸಬೇಕು. ಕರ್ಪೂರವು ಜಂತುನಾಶಕವಾಗಿದ್ದರಿಂದ ರೋಗಾಣುಗಳಿಗೆ ನಿರ್ಬಂಧ ಬರುತ್ತದೆ; ಆದರೆ ಕರ್ಪೂರವನ್ನು ತಿನ್ನಬಾರದು. ಕರ್ಪೂರವನ್ನು ಮುಂದಿನಂತೆ ಉಪಯೋಗಿಸಿರಿ.

೧. ಕರ್ಪೂರ ಪುಡಿಯ ವಾಸನೆ ತೆಗೆದುಕೊಳ್ಳುವುದು : ಕೈಯಲ್ಲಿ ಕರ್ಪೂರದ ಚಿಕ್ಕ ತುಂಡನ್ನು ತೆಗೆದುಕೊಂಡು ಅದನ್ನು ಚಿಟಿಕೆಯಿಂದ ಪುಡಿ ಮಾಡಬೇಕು. ಈ ಪುಡಿಯನ್ನು ಅಂಗೈಯಲ್ಲಿ ತೆಗೆದುಕೊಂಡು ಅಂಗೈಗಳನ್ನು ಒಂದರ ಮೇಲೆ ಒಂದನ್ನಿಟ್ಟು ೪-೫ ಸಲ ತಿಕ್ಕಬೇಕು. ನಂತರ ಕೈಗಳ ಬೊಗಸೆಯನ್ನು ಮಾಡಿ ೪-೫ ಸಲ ಬೊಗಸೆಯಲ್ಲಿ ಕಣ್ಣುಗಳನ್ನು ಮುಚ್ಚುವುದು ತೆರೆಯುವುದು ಮಾಡಬೇಕು. ಮೂಗನ್ನು ಬೊಗಸೆಯಲ್ಲಿ ಹಿಡಿದು ೩-೪ ಸಲ ದೀರ್ಘ ಶ್ವಾಸವನ್ನು ತೆಗೆದುಕೊಳ್ಳಬೇಕು. ನೆಗಡಿ, ಕೆಮ್ಮಿರುವಾಗ ಈ ಉಪಾಯವನ್ನು ಪ್ರತಿ ಗಂಟೆಗೆ ೧-೨ ಬಾರಿ ಮಾಡಬೇಕು. ಇತರ ಸಮಯದಲ್ಲಿ ಇದನ್ನು ದಿನದಲ್ಲಿ ೫ ರಿಂದ ೮ ಸಲ ಮಾಡಬೇಕು.

೨. ಕರ್ಪೂರದ ತುಂಡನ್ನು ಬಟ್ಟೆಯಲ್ಲಿ ಸುತ್ತಿ ಮೂಗಿನ ಮೇಲೆ ಕಟ್ಟಿಕೊಳ್ಳಬೇಕು : ಸತತವಾಗಿ ಮೂಗು ಸೋರುತ್ತಿದ್ದರೆ ಬಟ್ಟೆಯಲ್ಲಿ ಕರ್ಪೂರದ ತುಂಡನ್ನಿಟು, ಆ ತುಂಡು ಮೂಗಿನ ರಂಧ್ರಗಳ ಮೇಲೆ ಬರುವಂತೆ; ಆದರೆ ಉಸಿರಾಡಲು ತೊಂದರೆ ಆಗದಂತೆ ಕಟ್ಟಬೇಕು. ಬಟ್ಟೆಯ ಗಂಟು ತಲೆಯ ಹಿಂದೆ ಬರುವಂತೆ ಮಾಡಬೇಕು. ಮೂಗು ಸೋರುವುದು ನಿಲ್ಲುವ ತನಕ ಬಾಯಿ ತೆಗೆಯಲು ಆಗುವಂತೆ ಬಟ್ಟೆಯನ್ನು ಮೂಗಿನ ಮೇಲೆ ಕಟ್ಟಿಕೊಳ್ಳಬೇಕು.

೩. ಹಬೆ ತೆಗೆದುಕೊಳ್ಳುವುದು : ಬಿಸಿ ನೀರಿನಲ್ಲಿ ಕರ್ಪೂರದ ತುಂಡು ಹಾಕಿ ದಿನದಲ್ಲಿ ೧-೨ ಸಲ ಹಬೆಯನ್ನು ತೆಗೆದುಕೊಳ್ಳಬೇಕು.

ಈ ಉಪಾಯಗಳನ್ನು ಮಾಡಲು ಸಾಮಾನ್ಯ ಕರ್ಪೂರವನ್ನು ಉಪಯೋಗಿಸದೆ, ಭೀಮಸೇನಿ ಕರ್ಪೂರವನ್ನು ಉಪಯೋಗಿಸಬೇಕು. ಆಯುರ್ವೇದಿಯ ಭೀಮಸೇನಿ ಕರ್ಪೂರದ ಔಷಧಿ ಮಹತ್ವವನ್ನು ಅರಿತು ಬಹಳ ಹಿಂದಿನಿಂದಲೇ ಸನಾತನದ ಸಾತ್ತ್ವಿಕ ಉತ್ಪಾದನೆಗಳಲ್ಲಿ ಈ ಕರ್ಪೂರವನ್ನು ಸೇರಿಸಲಾಗಿದೆ.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಫೋಂಡಾ, ಗೋವಾ (೬.೩.೨೦೧೫)

(ಆಧಾರ : ಸಾಪ್ತಾಹಿಕ “ಸನಾತನ ಪ್ರಭಾತ”)

Leave a Comment