ದೇಶದಲ್ಲಿ ಯುದ್ಧಜನ್ಯ ಪರಿಸ್ಥಿತಿ ಉದ್ಭವಿಸಿದರೆ ನಾಗರಿಕರಾಗಿರುವ ನಿಮ್ಮ ಕರ್ತವ್ಯಗಳನ್ನು ಪಾಲಿಸಿ ರಾಷ್ಟ್ರಪ್ರೇಮ ತೋರಿಸಿ
೧. ಶತ್ರುರಾಷ್ಟ್ರವು ಮಾಡಿದ ಆಕ್ರಮಣ, ಆ ಕುರಿತಾದ ದೇಶದ ನಿರ್ಣಯಗಳು ಇತ್ಯಾದಿಗಳ ಬಗ್ಗೆ ಅಪಪ್ರಚಾರ ಮಾಡುವ ವರದಿಗಳು; ಶತ್ರುರಾಷ್ಟ್ರಕ್ಕೆ ಪೂರಕವಾಗಿ ಬಂದ ಕಿರುಸಂದೇಶಗಳು, ಚಿತ್ರಪಟಗಳು (ವೀಡಿಯೊಗಳು) ಇತ್ಯಾದಿಗಳನ್ನು ಇತರರಿಗೆ ಕಳುಹಿಸಬೇಡಿ.
೨. ಸರ್ಕಾರದ ಯುದ್ಧನೀತಿ ಅಥವಾ ಸೈನ್ಯದ ಚಲನವಲನದ ಬಗ್ಗೆ ಸಮಾಜದಲ್ಲಿ ವಿನಾಕಾರಣ ಗೊಂದಲ ಹಬ್ಬಿಸಬೇಡಿ; ಏಕೆಂದರೆ ಶತ್ರುರಾಷ್ಟ್ರಕ್ಕೆ ಅದರ ಲಾಭವಾಗಬಹುದು. ಯುದ್ಧದ ಸಮಯದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು, ಮಾಧ್ಯಮಗಳು ಇತ್ಯಾದಿಗಳು ಸಾಮರಸ್ಯದಿಂದ ವರ್ತಿಸಿ ಸೈನ್ಯ ಮತ್ತು ಸರ್ಕಾರಕ್ಕೆ ತಮ್ಮ ಕೆಲಸವನ್ನು ಮಾಡಲು ಬಿಡುವುದು ರಾಷ್ಟ್ರದ ಸುರಕ್ಷತೆಯ ದೃಷ್ಟಿಯಿಂದ ಆವಶ್ಯಕವಾಗಿದೆ.
೩. ಸಂಚಾರ ನಿರ್ಬಂಧ (ಕರ್ಫ್ಯೂ) ಸಮಯದಲ್ಲಿ ಮನೆಯಿಂದ ಹೊರಗೆ ಬರುವುದು, ರಾಷ್ಟ್ರದ ಗಡಿಗಳನ್ನು ದಾಟುವುದು, ಸರ್ಕಾರವು ನೀಡಿದ ‘ಬ್ಲ್ಯಾಕ್ ಔಟ್’ನ (ಮುನ್ನೆಚರಿಕೆಯಾಗಿ ಎಲ್ಲ ರೀತಿಯ ದೀಪಗಳನ್ನು ಆರಿಸುವುದು) ಆದೇಶವನ್ನು ಮುರಿಯುವುದು ಇತ್ಯಾದಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುವ ಕೃತಿಗಳನ್ನು ತಡೆಯಿರಿ!
೪. ಶತ್ರುರಾಷ್ಟ್ರದ ಹಸ್ತಕರು (ಉದಾ. ‘ಸ್ಲೀಪರ್ ಸೆಲ್’ ಅಥವಾ ಗೂಢಚಾರರು) ಎಲ್ಲಿಯಾದರೂ ಕಾರ್ಯನಿರತರಾಗಿರಬಹುದು. ಆದ್ದರಿಂದ ಪ್ರಮುಖ ಮಾಹಿತಿ (ಉದಾ. ಅಪರಿಚಿತ ವ್ಯಕ್ತಿಗಳ ಸಂಶಯಾಸ್ಪದ ಚಲನವಲನಗಳು ಕಂಡುಬರುವುದು, ಶತ್ರುರಾಷ್ಟ್ರವು ದೇಶದ್ರೋಹಿಗಳಿಗಾಗಿ ಶಸ್ತ್ರಾಸ್ತ್ರಗಳನ್ನು ಕಳುಹಿಸಿರುವುದು ತಿಳಿಯುವುದು) ತಿಳಿದರೆ, ಅದನ್ನು ಕೇವಲ ಅಧಿಕೃತ ಸರ್ಕಾರಿ ಅಧಿಕಾರಿಗಳು ಅಥವಾ ಪೊಲೀಸರಿಗೆ ತಿಳಿಸಿ.
೫. ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಇತ್ಯಾದಿಗಳ ಮೂಲಕ ರಾಷ್ಟ್ರಭಕ್ತಿಯ ಪ್ರಚಾರ ಮಾಡುವುದು ಮತ್ತು ನಮ್ಮ ಸೈನಿಕರಿಗೆ ಬೆಂಬಲ ನೀಡುವುದು ನಮ್ಮ ರಾಷ್ಟ್ರೀಯ ಹೊಣೆಗಾರಿಕೆಯಾಗಿದೆ.
ನೆನಪಿಡಿ, ರಾಷ್ಟ್ರನಿಷ್ಠ ನಾಗರಿಕನೇ ರಾಷ್ಟ್ರದ ನಿಜವಾದ ಶಕ್ತಿ! ಯುದ್ಧದ ಸ್ಥಿತಿಯಲ್ಲಿ ಪ್ರತಿಯೊಬ್ಬ ನಾಗರಿಕನು ‘ಸೈನಿಕ’ನಾಗಿ ಕರ್ತವ್ಯನಿರತನಾದರೆ ಆ ರಾಷ್ಟ್ರವು ವಿಜಯಿಯಾಗುತ್ತದೆ!
ಯುದ್ಧಕಾಲದಲ್ಲಿ ಮಿತವ್ಯಯ ಮತ್ತು ಆಜ್ಞಾಪಾಲನೆ ಮಾಡಿ ಹಾಗೂ ಸಂಯಮವಿಟ್ಟು ಸಂಘಟಿತವಾಗಿ ವರ್ತಿಸುವುದು ರಾಷ್ಟ್ರಕರ್ತವ್ಯವೇ ಆಗಿದೆ!
ಮಿತವ್ಯಯ ಮತ್ತು ತ್ಯಾಗ ಮಾಡುವುದು!
ಭಾರತೀಯರಿಗೆ ಶಾಂತಿಯ ಸಮಯದಲ್ಲಿ ಯುದ್ಧದ ಸಿದ್ಧತೆ ಮಾಡುವ ಅನುಭವವಿಲ್ಲ ಅಥವಾ ಅಂತಹ ಶಿಕ್ಷಣವನ್ನು ನೀಡಲಾಗಿಲ್ಲ ಮತ್ತು ನಮ್ಮ ಮೇಲೆ ಅಂತಹ ಸಂಸ್ಕಾರಗಳೂ ಆಗಿಲ್ಲ. ಆದ್ದರಿಂದ ಯುದ್ಧದ ಸಮಯದಲ್ಲಿ ನಾವು ಏನನ್ನಾದರೂ ಮಾಡಬೇಕಾಗುತ್ತದೆ ಎಂಬುದೂ ನಮಗೆ ತಿಳಿದಿಲ್ಲ. ಆದ್ದರಿಂದ ಈಗ ನಾವು ಅದನ್ನು ತಿಳಿದುಕೊಳ್ಳಬೇಕು. ಅದರಲ್ಲೂ ದೀರ್ಘಕಾಲದ ಯುದ್ಧ ನಡೆದರೆ, ಭಾರತೀಯರು ಮಿತವ್ಯಯ ಮಾಡುವುದರ ಜೊತೆಗೆ ಅನೇಕ ರೀತಿಯ ತ್ಯಾಗಗಳನ್ನು ಮಾಡಲು ಸಿದ್ಧರಿರಬೇಕಾಗುತ್ತದೆ ಎಂಬ ಅರಿವು ಇಂದಿನಿಂದಲೇ ಇರಲಿ. ಅನಿವಾರ್ಯವಾಗಿ ಭಾರತದ ಮೇಲೆ ಯುದ್ಧ ಹೇರಲ್ಪಟ್ಟರೆ ಮತ್ತು ಅದು ದೀರ್ಘಕಾಲದವರೆಗೆ ಮುಂದುವರಿದರೆ, ‘ಅದನ್ನು ನಾಗರಿಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ನಮ್ಮ ಇಂದಿನ ಸ್ಥಿತಿಯನ್ನು ನೋಡಿ ಹೇಳಬಹುದು. ಇದರಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಇಂಧನದ ಬಳಕೆ. ಭಾರತದಲ್ಲಿ ಇಂಧನದ ಉತ್ಪಾದನೆಯು ಅಪೇಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ. ಭಾರತವು ಅರಬ್ ದೇಶಗಳಿಂದ ಇಂಧನವನ್ನು ಖರೀದಿಸಬೇಕಾಗುತ್ತದೆ.
ತಿಳಿದು ಪ್ರಾರಂಭವಾದ ಯುದ್ಧದಲ್ಲಿ ಅಂತಹ ದಾಸ್ತಾನು ಮಾಡಿ ಇಡಲು ಸಾಧ್ಯವಾಗುತ್ತದೆ ಮತ್ತು ಅದರ ಮಿತ ಬಳಕೆ ಮಾಡಬೇಕಾಗುತ್ತದೆ; ಆದರೆ ಇದ್ದಕ್ಕಿದ್ದಂತೆ ಆಕ್ರಮಣವಾದಾಗ ಅಂತಹ ಯಾವುದೇ ಸೌಲಭ್ಯ ಮಾಡಿಕೊಂಡಿರುವುದಿಲ್ಲ. ಅಂತಹ ಸಮಯದಲ್ಲಿ ದೇಶದಲ್ಲಿ ಲಭ್ಯವಿರುವ ಇಂಧನವನ್ನು ಸೈನ್ಯಕ್ಕೆ ಆದ್ಯತೆಯ ಮೇರೆಗೆ ನೀಡಬೇಕಾಗುತ್ತದೆ. ಇದರಿಂದ ನಾಗರಿಕರಿಗೆ ಇಂಧನದ ಕೊರತೆ ಉಂಟಾಗುತ್ತದೆ. ಆ ಸಮಯದಲ್ಲಿ ಸಂಯಮದಿಂದ ನೋಡಬೇಕಾಗುತ್ತದೆ ಮತ್ತು ಸಿಗುವ ಇಂಧನವನ್ನು ಮಿತವಾಗಿ ಬಳಸಬೇಕಾಗುತ್ತದೆ. ಇಂಧನದ ಕೊರತೆಯಿಂದಾಗಿ ಅನ್ನಧಾನ್ಯಗಳ ಸಾಗಾಣಿಕೆಯ ಮೇಲೆಯೂ ಪ್ರಭಾವ ಬೀರುತ್ತದೆ. ಆದ್ದರಿಂದ ಅವು ಕೂಡ ಜನರಿಗೆ ಸಿಗುವುದು ಕಠಿಣವಾಗಲು ಸಾಧ್ಯವಿದೆ. ಅಂತಹ ಸಮಯದಲ್ಲಿ ‘ಹಣವಿದ್ದರೂ ಆಹಾರ ಪದಾರ್ಥಗಳು ಸಿಗುವುದಿಲ್ಲ’ ಎಂಬ ಸ್ಥಿತಿ ನಿರ್ಮಾಣವಾಗಬಹುದು.
ವಿದ್ಯುತ್ ಮತ್ತು ನೀರಿನ ಮಿತ ಬಳಕೆ
ನೀರಿನ ಸಾಗಾಣಿಕೆಯೂ ಇಂಧನದಿಂದ ಚಲಿಸುವ ಪಂಪುಗಳ ಮೂಲಕ ನಡೆಯುತ್ತದೆ, ಅಂತಹ ಸಮಯದಲ್ಲಿ ನೀರಿನ ಬಳಕೆಯ ಮೇಲೂ ಮಿತಿ ಬರಬಹುದು. ವಿದ್ಯುತ್ ತಯಾರಿಕೆಗೆ ಬೇಕಾದ ಕಲ್ಲಿದ್ದಲಿನ ಸಾಗಾಣಿಕೆ ಮಾಡಲು ಇಂಧನ ಕಡಿಮೆಯಾದರೆ ವಿದ್ಯುತ್ ಉತ್ಪಾದನೆಯಲ್ಲೂ ಇಳಿಕೆಯಾಗಬಹುದು. ಆದ್ದರಿಂದ ನೀರಿನ ಬಳಕೆಯ ಜೊತೆಗೆ ವಿದ್ಯುತ್ ಬಳಕೆಯನ್ನು ಕೂಡ ಮಿತವಾಗಿ ಮಾಡಬೇಕಾಗುತ್ತದೆ. ಅದರಲ್ಲಿಯೂ ಶತ್ರುಗಳು ನದಿಗಳ ಮೇಲಿನ ಅಣೆಕಟ್ಟುಗಳನ್ನು ಗುರಿಯಾಗಿಸಿ ಅವುಗಳನ್ನು ಧ್ವಂಸಗೊಳಿಸಿದರೆ, ಅವುಗಳನ್ನು ಅವಲಂಬಿಸಿರುವವರ ಮೇಲೆ ದೊಡ್ಡ ಹೊಡೆತ ಬೀಳುತ್ತದೆ.
ಈ ಸ್ಥಿತಿಯನ್ನು ನೋಡಿದರೆ ಶಾಂತಿಕಾಲದಲ್ಲಿ ಕೆರೆಗಳು ಮತ್ತು ಬಾವಿಗಳನ್ನು ಬಳಸಲು ಯೋಗ್ಯ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ಆವಶ್ಯಕತೆಯಿದೆ. ಭಾರತದ ಹಳ್ಳಿಗಳಲ್ಲಿ ಇದನ್ನು ಸಾಧಿಸಲು ಸಾಧ್ಯವಾಗುತ್ತದೆ; ಆದರೆ ಪ್ರಸ್ತುತ ದೇಶದ ದೊಡ್ಡ ಮಹಾನಗರಗಳಲ್ಲಿ ಹಾಗೂ ‘ಸ್ಮಾರ್ಟ್ ಸಿಟಿ’ಗಳಲ್ಲಿ ಅಂತಹ ವ್ಯವಸ್ಥೆ ಮಾಡುವುದು ಈಗ ಅಸಾಧ್ಯವೇ ಆಗಿದೆ. ಆದ್ದರಿಂದ ಯಾವ ನಗರಗಳು ಅಂತಹ ಅಣೆಕಟ್ಟುಗಳ ನೀರನ್ನು ಅವಲಂಬಿಸಿವೆಯೋ, ಅಲ್ಲಿನ ಜನರಿಗೆ ನಗರವನ್ನು ಬಿಡುವುದನ್ನು ಹೊರತುಪಡಿಸಿ ಬೇರೆ ಪರ್ಯಾಯವೇ ಇರುವುದಿಲ್ಲ.
ಶತ್ರುಗಳು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನೇ ಧ್ವಂಸಗೊಳಿಸಿದರೆ ಇನ್ನೂ ದೊಡ್ಡ ಹೊಡೆತ ಬೀಳುತ್ತದೆ. ಎರಡನೇ ಮಹಾಯುದ್ಧದಲ್ಲಿ ಅಣೆಕಟ್ಟುಗಳು ಮತ್ತು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಗುರಿಯಾಗಿಸಲಾಗಿತ್ತು. ಎರಡನೇ ಮಹಾಯುದ್ಧದಲ್ಲಿ ಜರ್ಮನಿಯು ಫ್ರಾನ್ಸ್‌ನ ಕೆಲವು ಭಾಗಗಳನ್ನು ಗೆದ್ದುಕೊಂಡು ಅಲ್ಲಿನ ಕಾರ್ಖಾನೆಗಳಿಂದ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಆರಂಭಿಸಿತ್ತು. ಅವರಿಗೆ ಆವಶ್ಯಕವಾದ ವಿದ್ಯುತ್ ಅಣೆಕಟ್ಟುಗಳ ನೀರಿನ ಮೂಲಕ ನಿರ್ಮಾಣವಾಗುತ್ತಿತ್ತು. ಆಗ ಫ್ರಾನ್ಸ್ ತನ್ನದೇ ಆದ, ಆದರೆ ಜರ್ಮನಿಯ ವಶದಲ್ಲಿದ್ದ ಈ ಅಣೆಕಟ್ಟುಗಳನ್ನು ಧ್ವಂಸಗೊಳಿಸಿತ್ತು ಎಂಬುದನ್ನೂ ನೆನಪಿಡಬೇಕು. ರಷ್ಯಾ ಕೂಡ ಜರ್ಮನಿಯಿಂದ ಹಿಂದೆ ಸರಿಯುವಾಗ ತನ್ನ ದೇಶದ ರಸ್ತೆ, ಅಣೆಕಟ್ಟುಗಳನ್ನು ಧ್ವಂಸಗೊಳಿಸಿತ್ತು.
ಬ್ಲ್ಯಾಕ್-ಔಟ್‌ನ ಕಟ್ಟುನಿಟ್ಟಾದ ಆಜ್ಞಾಪಾಲನೆ ಮಾಡಿ
ಯುದ್ಧ ನಡೆಯುತ್ತಿರುವಾಗ ರಾತ್ರಿಯ ಸಮಯದಲ್ಲಿ ಮುನ್ನೆಚರಿಕೆಯಾಗಿ ಎಲ್ಲ ರೀತಿಯ ದೀಪಗಳನ್ನು ಆರಿಸುವ ಆದೇಶ ಹೊರಡಿಸಲಾಗುತ್ತದೆ. ಶತ್ರು ವಿಮಾನಗಳು ದೇಶದೊಳಗೆ ನುಗ್ಗಿದರೆ ದೀಪಗಳಿದ್ದರೆ ಅಥವಾ ಬೆಳಕಿದ್ದರೆ ಅವುಗಳಿಗೆ ತಮ್ಮ ಗುರಿಯನ್ನು ಹುಡುಕಲು ಸುಲಭವಾಗುತ್ತದೆ. ಆದ್ದರಿಂದ ರಾತ್ರಿ ದೀಪ ಹಚ್ಚಿ ಯಾವುದೇ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ಇಂತಹ ಯುದ್ಧ ನಡೆದರೆ ನೀರು ಮತ್ತು ವಿದ್ಯುತ್ ಕೊರತೆಯಿಂದಾಗಿ ನಾಗರಿಕರು ಬಹಳ ತೊಂದರೆ ಅನುಭವಿಸಬೇಕಾಗುತ್ತದೆ ಮತ್ತು ‘ಅಂತಹ ಯುದ್ಧ ೧ – ೨ ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ನಡೆದರೆ ಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಲು ಸಾಧ್ಯವಿದೆ’ ಎಂಬುದು ಅರಿವಿಗೆ ಬರುತ್ತದೆ.
ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾ ಸಮಾಜಬಾಂಧವರಿಗೆ ಸಹಾಯ ಮಾಡಿ ಸಂಘಟಿತರಾಗಿರಿ
ಈ ಸಮಯದಲ್ಲಿ ಉದ್ಯೋಗದ ಅನೇಕ ಮಾರ್ಗಗಳು ಸ್ಥಗಿತಗೊಳ್ಳುತ್ತವೆ ಮತ್ತು ಅದರ ಪರಿಣಾಮವು ಆದಾಯದ ಮೇಲಾಗುತ್ತದೆ. ಇದು ಎಲ್ಲಕ್ಕಿಂತ ದೊಡ್ಡ ಪರಿಣಾಮವಾಗಿರುತ್ತದೆ. ಅಂತಹ ಸಮಯದಲ್ಲಿ ಹಿಂದೆ ಮಾಡಿದ ಉಳಿತಾಯವನ್ನು ಬಳಸಬೇಕಾಗುತ್ತದೆ. ಯಾರಲ್ಲಿ ಪರ್ಯಾಯ ಉಳಿತಾಯವಿಲ್ಲವೋ ಅವರಿಗೆ ಬಹಳ ತೊಂದರೆಯಾಗಬಹುದು. ಅದರಲ್ಲಿಯೂ ಯುದ್ಧವು ದೀರ್ಘಕಾಲದ ವರೆಗೆ ಮುಂದುವರಿದರೆ ಸರ್ಕಾರವು ‘ಬ್ಯಾಂಕ್’ನಿಂದ ಮಿತವಾಗಿ ಹಣವನ್ನಷ್ಟೇ ಪಡೆಯುವ ನಿರ್ಬಂಧಗಳನ್ನು ಹೇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಂತಹ ಸ್ಥಿತಿಯಲ್ಲಿ ಬದುಕುವುದು ಮತ್ತಷ್ಟು ಕಠಿಣವಾಗುತ್ತದೆ. ಅಂತಹ ಸಮಯದಲ್ಲಿ ಸರ್ಕಾರ ಮತ್ತು ಆಡಳಿತದಿಂದ ಸಹಾಯ ಸಿಗುವ ಅಪೇಕ್ಷೆ ಮಾಡಲು ಸಾಧ್ಯವಿಲ್ಲ. ಆಗ ನಾಗರಿಕರೇ ಪರಸ್ಪರರಿಗೆ, ನೆರೆಯವರಿಗೆ ಸಹಾಯ ಮಾಡಬೇಕಾಗುತ್ತದೆ. ಅದರಲ್ಲಿಯೂ ಗಡಿಯಲ್ಲಿ ಯುದ್ಧ ಮಾಡುವ ಸೈನಿಕರ ಕುಟುಂಬದವರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ರಾಷ್ಟ್ರಬಂಧುತ್ವದ ಪರೀಕ್ಷೆಯ ಸಮಯವಿದು! ಈ ಸಮಯದಲ್ಲಿ ಎಲ್ಲರೂ ಸಂಘಟಿತರಾಗಿರುವುದು ಆವಶ್ಯಕವಾಗಿರುತ್ತದೆ. ಆಗ ಗಟ್ಟಿಯಾದ ಮಾನಸಿಕತೆ ಹೊಂದುವುದರೊಂದಿಗೆ ಹಸಿದಿರಬೇಕಾದ ಸಿದ್ಧತೆಯನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಕಾಯಿಲೆಯಿಂದಿರುವ ಜನರ ಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆಯಿರುತ್ತದೆ.
ಸಂಕಲನಕಾರರು: ಶ್ರೀ. ಪ್ರಶಾಂತ್ ಕೋಯಂಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಮಾರ್ಚ್ ೨೦೧೯)
ಜೈವಿಕ ಆಕ್ರಮಣವಾದರೆ ಅಥವಾ ಸಾಂಕ್ರಾಮಿಕ ರೋಗ ಹರಡಿದಾಗ ಏನು ಮಾಡಬೇಕು
೧. ವಿಷಾಣುಗಳ ಸೋಂಕಿನಿಂದ ರಕ್ಷಣೆಯಾಗಲು ಸತತವಾಗಿ ಜಂತುನಾಶಕವನ್ನು ಸಿಂಪಡಿಸಬೇಕು ಮತ್ತು ಜಂತುಗಳನ್ನು ನಾಶಪಡಿಸಬೇಕು.
೨. ರಾತ್ರಿ ಮಲಗುವಾಗ ಸೊಳ್ಳೆಪರದೆಗಳನ್ನು ಬಳಸಬೇಕು.
೩. ಸ್ನಾನಕ್ಕಾಗಿ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಹೇರಳವಾಗಿ ನೀರನ್ನು ಸಂಗ್ರಹಿಸಿಡಬೇಕು.
೪. ರೋಗದ ಸೋಂಕು ಹರಡಿರುವ ದೇಶಗಳಿಗೆ ಪ್ರಯಾಣಿಸುವುದನ್ನು ತಡೆಯಬೇಕು.
೫. ನಾವು ಬಳಸುತ್ತಿರುವ ವಸ್ತುಗಳ ಮೇಲ್ಮೈಯನ್ನು ಶೇಕಡಾ ೧ ರಷ್ಟು ‘ಲೈಸೋಲ್’ ದ್ರಾವಣದಿಂದ ಸೋಂಕುರಹಿತಗೊಳಿಸಬೇಕು.
೬. ಸಾಕಷ್ಟು ನಿದ್ದೆ ಮಾಡಬೇಕು, ಸಾಕಷ್ಟು ನೀರು ಕುಡಿಯಬೇಕು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು.
೭. ಗಂಟಲು ನೋವು ಕಾಣಿಸಿಕೊಂಡರೆ ಅಥವಾ ಕೆಮ್ಮು ಇದ್ದರೆ ಒಂದು ಲೋಟ (೨೦೦ ಮಿ.ಲೀ.) ಉಗುರು ಬೆಚ್ಚಗಿನ ನೀರಿಗೆ ಉಪ್ಪು ಮತ್ತು ಅರಿಶಿನ ಹಾಕಿ ಆ ನೀರಿನಿಂದ ಪ್ರತಿ ೩-೪ ಗಂಟೆಗೊಮ್ಮೆ ಮುಕ್ಕಳಿಸಬೇಕು.
೮. ವಿಷಾಣುಗಳು ಹರಡಿರುವುದು ತಿಳಿದರೆ ಮನೆಯಲ್ಲೇ ಇರಿ.
೯. ಸೊಪ್ಪು ತರಕಾರಿಗಳು ಮತ್ತು ಆಹಾರ ಸೇವಿಸುವಾಗ ಜಾಗರೂಕತೆಯಿಂದಿರಿ. ಹಳಸಿದ ಆಹಾರವನ್ನು ಸೇವಿಸಬೇಡಿ.
ಸಂಕಲನ : ಡಾ. ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ.
ವೈಮಾನಿಕ ಆಕ್ರಮಣವಾದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು?
ಇವನ್ನು ಮಾಡಿ
೧. ಶಾಂತವಾಗಿರಿ, ಸಹಾಯ ಮಾಡುವ ಮೊದಲು ವ್ಯವಸ್ಥಿತವಾಗಿ ಪರಿಶೀಲನೆ ಮಾಡಿ.
೨. ಮೆಟ್ಟಿಲುಗಳ ಹತ್ತಿರವಿದ್ದರೆ ಗೋಡೆಯ ಹತ್ತಿರ ಹೋಗಿ ನಿಂತುಕೊಳ್ಳಿ.
೩. ಕಬ್ಬಿಣದ ಪತ್ರೆಯ ಸಹಾಯದಿಂದ ಕುಸಿತವನ್ನು ತಡೆಯಿರಿ. ಇದರಿಂದ ಜನರು ಗಾಯಗೊಳ್ಳುವುದು ತಪ್ಪುತ್ತದೆ.
೪. ಗಾಯಾಳುಗಳ ಮೂಗು-ಬಾಯಿಯಲ್ಲಿ ಸೇರಿದ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಿ. ಇದರಿಂದ ಅವರ ಶ್ವಾಸೋಚ್ಛ್ವಾಸವು ಸರಿಯಾಗಿ ನಡೆಯಲು ಸಾಧ್ಯವಾಗುತ್ತದೆ.
ಇವನ್ನು ಮಾಡಬೇಡಿ
೧. ಗಾಬರಿಗೊಳ್ಳಬೇಡಿ.
೨. ಕುಸಿತವಾಗಿರುವ ಭಾಗದ ಮರಮಟ್ಟುಗಳನ್ನು ತೆಗೆಯಬೇಡಿ. ಇದರಿಂದ ಮತ್ತಷ್ಟು ಕುಸಿತವಾಗಿ ಗಾಯಗೊಳ್ಳುವ ಸಾಧ್ಯತೆಯಿದೆ.
೩. ನೇತಾಡುತ್ತಿರುವ ವೈರ್ ಗಳನ್ನು ಮುಟ್ಟಬೇಡಿ.
೪. ಕಲ್ಲು-ಮಣ್ಣಿನ ರಾಶಿಯ ಮೇಲೆ ಅಥವಾ ಹಾನಿಯಾದ ಸ್ಥಳದಲ್ಲಿ ತೆವಳುತ್ತಾ ಹೋಗಬೇಡಿ.’
(ಸಂದರ್ಭ ಪುಸ್ತಕ: ‘ಆಪತ್ತು ನಿರ್ವಹಣಾ ಮಾರ್ಗದರ್ಶಿಕೆ’, ಪ್ರಾದೇಶಿಕ ಆಪತ್ತು ನಿರ್ವಹಣಾ ಕೇಂದ್ರ)
ಯುದ್ಧಕಾಲದಲ್ಲಿ ದೇಶದಲ್ಲಿ ಯಾವ ಬದಲಾವಣೆಗಳಾಗಲು ಸಾಧ್ಯವಿದೆ?
೧. ಖಾಸಗಿ ಕಾರ್ಖಾನೆಗಳಿಂದ ಶಸ್ತ್ರಾಸ್ತ್ರ ಉತ್ಪಾದನೆ
ಪ್ರತ್ಯಕ್ಷ ಯುದ್ಧ ಆರಂಭವಾದಾಗ ಮತ್ತು ಅದು ದೀರ್ಘಕಾಲದವರೆಗೆ ಮುಂದುವರಿದರೆ ಶಸ್ತ್ರಾಸ್ತ್ರಗಳ ಕೊರತೆ ಉಂಟಾಗಬಹುದು. ಅಂತಹ ಸಮಯದಲ್ಲಿ ಸರ್ಕಾರವು ಶಸ್ತ್ರಾಸ್ತ್ರ ಉತ್ಪಾದಿಸುವ ಸರ್ಕಾರಿ ಕಾರ್ಖಾನೆಗಳೊಂದಿಗೆ ಇತರ ಖಾಸಗಿ ಕಾರ್ಖಾನೆಗಳಿಂದಲೂ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಆರಂಭಿಸಬಹುದು. ಅಥವಾ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನು ಇಲ್ಲಿ ತಯಾರಿಸುವಂತೆ ಆದೇಶ ಹೊರಡಿಸಬಹುದು.
೨. ರಕ್ತದ ಅವಶ್ಯಕತೆ
ಯುದ್ಧ ಆರಂಭವಾಯಿತೆಂದರೆ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಳ್ಳುತ್ತಾರೆ. ಅವರಿಗೆ ರಕ್ತದ ಆವಶ್ಯಕತೆಯಿರುತ್ತದೆ. ಅದಕ್ಕಾಗಿ ಸರ್ಕಾರದಿಂದ ರಕ್ತದಾನಕ್ಕಾಗಿ ಕರೆ ನೀಡಲಾಗುತ್ತದೆ. ಈ ಸಮಯದಲ್ಲಿ ದೇಶಭಕ್ತ ನಾಗರಿಕರು ಮುಂದೆ ಬಂದು ರಕ್ತ ನೀಡಬೇಕು. ಆಸ್ಪತ್ರೆಗಳನ್ನೂ ಸೈನಿಕರಿಗಾಗಿ ಕಾಯ್ದಿರಿಸಬೇಕಾಗುತ್ತದೆ.
೩. ಸೈನ್ಯ ಭರ್ತಿ
ಸೈನ್ಯವನ್ನು ಸೇರಲು ಕೂಡ ಕರೆ ನೀಡಲಾಗುತ್ತದೆ. ಅಂತಹ ಸಮಯದಲ್ಲಿ ಯುವಕರು ಅದಕ್ಕೆ ಆದ್ಯತೆ ನೀಡಿ ಸೈನ್ಯವನ್ನು ಸೇರುವ ಆವಶ್ಯಕತೆಯಿದೆ. ಅದರಲ್ಲಿಯೂ ಈ ಕುರಿತು ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ.
೪. ಬ್ಲ್ಯಾಕ್ ಔಟ್
ವರ್ಷ ೧೯೭೧ ರ ಯುದ್ಧದ ಸಮಯದಲ್ಲಿ ಅನೇಕ ನಗರಗಳಲ್ಲಿ ‘ಬ್ಲ್ಯಾಕ್-ಔಟ್’ ಮಾಡಲಾಗಿತ್ತು; ಏಕೆಂದರೆ ಭಾರತದ ನೌಕಾದಳವು ಕರಾಚಿ ಬಂದರಿನ ಮೇಲೆ ಭೀಕರ ಆಕ್ರಮಣ ಮಾಡಿತ್ತು. ಆದ್ದರಿಂದ ಪಾಕಿಸ್ತಾನವು ಮುಂಬೈ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಯಿತ್ತು.
ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!
ಮುದ್ರೆ ಎಂದರೇನು?
ಪುಷ್ಪೌಷಧಿ (Bach Flower Remedies)
ರೋಗ ನಿವಾರಣೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ
ಅನೇಕ ಕಾಯಿಲೆಗಳನ್ನು ಆಹ್ವಾನಿಸುವ ಮಾನಸಿಕ ಒತ್ತಡ!
ಪ್ರಾಣಶಕ್ತಿವಹನ ಉಪಾಯಪದ್ಧತಿ ಬಗ್ಗೆ ಪ್ರಶ್ನೋತ್ತರ