ಬನ್ನಿ, ಆಧ್ಯಾತ್ಮಿಕ ಶಿಲ್ಪಿಗಳಾಗೋಣ!

ಶಿಲ್ಪಿಯು ಕಲ್ಲಿನಿಂದ ಮೂರ್ತಿಯನ್ನು ತಯಾರಿಸುತ್ತಾನೆ. ವಾಸ್ತವವಾಗಿ ನೋಡಿದರೆ ಅವನು ಮೂರ್ತಿಯನ್ನು ತಯಾರಿಸುತ್ತಿರುವುದಿಲ್ಲ. ಮೂರ್ತಿ ಕಲ್ಲಿನಲ್ಲಿಯೇ ಇರುತ್ತದೆ. ಶಿಲ್ಪಿಯು ಉಳಿ, ಸುತ್ತಿಗೆ ಇತ್ಯಾದಿ ಸಲಕರಣೆಗಳನ್ನು ಬಳಸಿ ಮೂರ್ತಿಯ ಸುತ್ತಲಿನ ಕಲ್ಲಿನ ಭಾಗವನ್ನು ತೆಗೆಯುತ್ತಾನೆ, ನಂತರ ಉಳಿಯುವುದೇ ಮೂರ್ತಿ! ಶಿಲ್ಪಿಯು ಮೊದಲು ದೂರದ ಭಾಗಗಳನ್ನು ತೆಗೆದು ಹಾಕುತ್ತಾನೆ, ನಂತರ ಹತ್ತಿರದ ಭಾಗಗಳನ್ನು ತೆಗೆಯುತ್ತಾನೆ. ಅನಂತರ ತೀರ ಹತ್ತಿರದಲ್ಲಿರುವ ಭಾಗವನ್ನು ನಿಧಾನವಾಗಿ ಕಾಳಜಿಯಿಂದ ತೆಗೆದಾಗ ಮೂರ್ತಿ ಸ್ಪಷ್ಟವಾಗಿ ಕಾಣಿಸುತ್ತದೆ.

ಸಾಧನೆಯಲ್ಲಿ ಈಶ್ವರಪ್ರಾಪ್ತಿಯ ಮಾರ್ಗವೂ ಹೀಗೆಯೇ ಇರುತ್ತದೆ. ಒಂದೇ ವ್ಯತ್ಯಾಸವೆಂದರೆ ಮೂರ್ತಿಯು ಸ್ಥೂಲದ್ದಾಗಿರುತ್ತದೆ ಮತ್ತು ತೆಗೆದು ಹಾಕಿದ ಭಾಗವೂ ಸ್ಥೂಲದ್ದಾಗಿರುತ್ತದೆ, ಆದರೆ ಈಶ್ವರನ ಸಾಕ್ಷಾತ್ಕಾರ ಮಾಡುವ ಕೆಲಸವು ಸೂಕ್ಷ್ಮದ್ದಾಗಿರುತ್ತದೆ. ಈಶ್ವರನ ಅಂಶವಾದ ಆತ್ಮವು ನಮ್ಮಲ್ಲಿಯೇ ಇರುತ್ತದೆ. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಇತ್ಯಾದಿ ಬೇರೆಬೇರೆ ಸಾಧನಾಮಾರ್ಗಗಳು ಉಳಿ ಮತ್ತು ಸುತ್ತಿಗೆಯ ಕೆಲಸವನ್ನು ಮಾಡುತ್ತವೆ. ಆ ಸಾಧನೆಯಿಂದ ನಾವು ಮೊದಲು ಆತ್ಮವನ್ನು ಮಾಯೆಯಲ್ಲಿ ಸಿಲುಕಿಸುವ ದೂರದ ಭಾಗಗಳನ್ನು ತೆಗೆದುಹಾಕುತ್ತೇವೆ. ಆ ಭಾಗಗಳೆಂದರೆ ನಮ್ಮ ಊರು, ನಮ್ಮ ಸಂಪರ್ಕದಲ್ಲಿರುವ ಜನರು, ವಿವಿಧ ಬಟ್ಟೆಗಳು, ನಿಸರ್ಗಸೌಂದರ್ಯ, ಮನೋರಂಜನೆಯ ಉಪಕರಣಗಳು, ಪರಿಮಳ, ಆಕರ್ಷಣೆಯ ದೃಶ್ಯಗಳು, ಒಳ್ಳೆಯ ಹಾಡುಗಳು, ರುಚಿಕರ ತಿನಿಸು, ಸುಖಕರ ಸ್ಪರ್ಶ ಇತ್ಯಾದಿ ಅನೇಕಾನೇಕ ವಿಷಯಗಳ ಆಕರ್ಷಣೆ, ಅವುಗಳಲ್ಲಿರುವ ಅಭಿರುಚಿ. ಸಾಧನೆಯಿಂದ ನಾವು ಇವುಗಳಲ್ಲಿನ ಆಸಕ್ತಿಯನ್ನು ತೆಗೆದುಹಾಕುತ್ತೇವೆ.

ಅನಂತರ ಹೆಚ್ಚು ಹತ್ತಿರದ ಭಾಗಗಳನ್ನು ತೆಗೆಯಲಿಕ್ಕಿರುತ್ತದೆ. ಆ ಭಾಗಗಳೆಂದರೆ ನಮ್ಮ ಆಸ್ತಿ, ಸಂಬಂಧಿಕರು, ಮನೆ-ಮಠ, ವಾಹನ, ವ್ಯವಸಾಯ ಇತ್ಯಾದಿಗಳು. ಸಾಧನೆಯಿಂದ ಇವುಗಳ ಮಮತ್ವವನ್ನು, ಆಸಕ್ತಿಯನ್ನು ತೆಗೆದುಹಾಕಬೇಕಾಗುತ್ತದೆ. ಕೊನೆಗೆ ತೀರ ಹತ್ತಿರವಿರುವ ಭಾಗಗಳನ್ನು ಕಾಳಜಿಯಿಂದ, ಜಾಗರೂಕತೆಯಿಂದ ತೆಗೆಯಬೇಕಾಗುತ್ತದೆ. ಅವೆಂದರೆ ಮನಸ್ಸು ಮತ್ತು ಬುದ್ಧಿಯಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಮಮಕಾರ ಮತ್ತು ಅಹಂಕಾರ, ಪ್ರಶಂಸೆ, ಮಾನ-ಸನ್ಮಾನದ ಇಚ್ಛೆ, ನಮ್ಮೊಂದಿಗೆ ಕೆಟ್ಟದಾಗಿ ನಡೆದು ಕೊಳ್ಳುವವರ ಬಗೆಗಿನ ಸಿಟ್ಟು, ಹೆಚ್ಚು ಧನಪ್ರಾಪ್ತಿಯ ಲೋಭ, ವ್ಯಸನಗಳ ಮೋಹ, ನಮ್ಮ ಶಕ್ತಿಯ, ಉಚ್ಚ ಪದವಿಯ, ಸೌಂದರ್ಯದ, ಧನದ ಮದ, ಇತರರ ಸಮೃದ್ಧಿಯಿಂದ ಬರುವ ಅಸೂಯೆ, ಪತಿ / ಪತ್ನಿ, ಮಕ್ಕಳು, ಮೊಮ್ಮಕ್ಕಳು ಮುಂತಾದವರಲ್ಲಿನ ಮಮಕಾರ, ನಮ್ಮ ಶರೀರದ ಬಗೆಗಿನ ‘ನಾನು, ನನ್ನದು, ಈಶ್ವರನಿಂದ ಬೇರೆ ಅನಿಸುವ ಭಾವ ಇಂತಹ ಅನೇಕ ರೂಪಗಳಿಂದ ತಗಲಿಕೊಂಡೇ ಇರುವಂತಹ ಭಾಗಗಳು ನಮ್ಮಿಂದ ವ್ಯಕ್ತವಾಗುತ್ತಿರುತ್ತವೆ. ಇವುಗಳನ್ನು ‘ತೀರ ಹತ್ತಿರವಿರುವ’ ಎಂದು ಏಕೆ ಹೇಳಲಾಗಿದೆ ಎಂದರೆ ಅವು ಸ್ವಭಾವದಲ್ಲಿಯೇ ಇರುತ್ತವೆ ಮತ್ತು ಆ ಸಂಸ್ಕಾರಗಳು ಹಿಂದಿನ ಜನ್ಮಗಳಿಂದಲೂ ಬಂದಿರುತ್ತವೆ. ಮನಸ್ಸು ಮತ್ತು ಬುದ್ಧಿಯನ್ನು ತೆಗೆದುಹಾಕಲಿಕ್ಕಿರುವುದಿಲ್ಲ ಮತ್ತು ತೆಗೆದುಹಾಕಲು ಆಗುವುದಿಲ್ಲ. ಮನಸ್ಸಿನಲ್ಲಿನ ವಿಚಾರ-ಸಂಕಲ್ಪ ಮತ್ತು ಬುದ್ಧಿಯ ನಿರ್ಣಯಗಳಿಗೆ ಯೋಗ್ಯ ತಿರುವನ್ನು ನೀಡಬೇಕಾಗುತ್ತದೆ.

ನಾವು ಈಶ್ವರನನ್ನು ಪ್ರಾಪ್ತಮಾಡಿಕೊಳ್ಳುವುದೇ ಇಲ್ಲ! ಅವನು ನಮ್ಮಲ್ಲಿಯೇ ಇರುತ್ತಾನೆ. ನಮ್ಮ ಸಾಧನಾರೂಪಿ ಸಲಕರಣೆಗಳಿಂದ ಈಶ್ವರನನ್ನು ಪ್ರಕಟಿಸುವಲ್ಲಿ ಬರುವ ಅಡತಡೆಗಳನ್ನು ತೆಗೆದುಹಾಕುತ್ತಿರುತ್ತೇವೆ. ಮೇಲೆ ಹೇಳಿದಂತೆ ತೀರ ಹತ್ತಿರವಿರುವ ಭಾಗಗಳನ್ನೂ ತೆಗೆದುಹಾಕಿದಾಗ ಕೊನೆಗೆ ಏನಾಗುವುದು? ಕೇವಲ ಶುದ್ಧ ಆತ್ಮದ ಅಂದರೆ ಈಶ್ವರನ ಸಾಕ್ಷಾತ್ಕಾರ!

ಬನ್ನಿ, ಉತ್ತಮ ಆಧ್ಯಾತ್ಮಿಕ ಶಿಲ್ಪಿಗಳಾಗೋಣ !

– (ಪೂ.) ಅನಂತ ಆಠವಲೆ (೩.೧೨.೨೦೨೩)

Leave a Comment