ಸಾಧಕರೇ, ಸುಖಭೋಗಗಳಲ್ಲಿ ರಮಿಸಿ ಸಾಧನೆಯ ಹಾನಿಯನ್ನು ಮಾಡಿಕೊಳ್ಳಬೇಡಿ

(ಪೂ.) ಶ್ರೀ. ಸಂದೀಪ ಆಳಶಿ

ಕೆಲವು ಸಾಧಕರು ದಿನವಿಡಿ ಸಾಧನೆಯನ್ನು ಮಾಡುತ್ತಾರೆ ಮತ್ತು ರಾತ್ರಿ ಮಲಗುವ ಮೊದಲು  ಮನಸ್ಸು ಮತ್ತು ಬುದ್ಧಿಗೆ ಸ್ವಲ್ಪ ಸುಖದಾಯಕ ಬದಲಾವಣೆ ಸಿಗಬೇಕೆಂದು ಸಂಚಾರವಾಣಿಯಲ್ಲಿ ಮನೋರಂಜನೆಯ ಕಾರ್ಯಕ್ರಮಗಳನ್ನು ನೋಡುತ್ತಾರೆ. ಕೆಲವು ಸಾಧಕರು ನಕಾರಾತ್ಮಕತೆ ಅಥವಾ ನಿರಾಶೆಯನ್ನು ದೂರಗೊಳಿಸಲು ಸಹ ಈ ಮಾರ್ಗವನ್ನು ಅವಲಂಬಿಸುತ್ತಾರೆ. ಕೆಲವು ಸಾಧಕರು ಆಗಾಗ ಭೂತಕಾಲದ ಸುಖದ ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತಾರೆ ಅಥವಾ ಭವಿಷ್ಯತ್ತಿನ ಸುಖಕರ ಕಲ್ಪನೆಗಳ ಮನೋರಾಜ್ಯದಲ್ಲಿ ವಿಹರಿಸುತ್ತಾರೆ. ಭೂತಕಾಲ ಅಥವಾ ಭವಿಷ್ಯತ್ಕಾಲದಲ್ಲಿ ರಮಿಸುವುದೆಂದರೆ ವರ್ತಮಾನ ಕಾಲದ ಪರಿಸ್ಥಿತಿ ಸ್ವೀಕರಿಸಲು ತಿಳಿಯದಿರುವುದು. ಸದ್ಯ ತೀವ್ರ ಆಪತ್ಕಾಲ ನಡೆಯುತ್ತಿರುವುದರಿಂದ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಗಿದ್ದು ಅವು ಸಾಧಕರ ಮನಸ್ಸು ಮತ್ತು ಬುದ್ಧಿಯ ಮೇಲೆ ಆವರಣ ಹಾಕಿ ಮೇಲಿನಂತೆ ಮಾಯೆಯಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿವೆ.

ಸುಖೋಪಭೋಗಗಳಿಂದ ಮನಸ್ಸು ವಿಕಾರಗಳಲ್ಲಿ ಸಿಕ್ಕಿಕೊಳ್ಳುತ್ತದೆ, ವೃತ್ತಿ ಬಹಿರ್ಮುಖವಾಗುತ್ತದೆ, ಹಾಗೆಯೇ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲೆ ರಜ-ತಮದ ಆವರಣ ಬರುತ್ತದೆ. ಇವೆಲ್ಲವುಗಳಿಂದ ಕೆಟ್ಟ ಶಕ್ತಿಗಳ ತೊಂದರೆಯೂ ಹೆಚ್ಚಾಗುತ್ತದೆ. ‘ಈಶ್ವರಪ್ರಾಪ್ತಿ’ಯ ಏಕೈಕ ಉದ್ದೇಶದಿಂದ ಸಾಧಕರು ಸಾಧನೆಯನ್ನು ಆರಂಭಿಸಿದ್ದರಿಂದ ಅವರು ಸುಖೋಪಭೋಗಗಳಲ್ಲಿ ಸುಖಪಡುವುದೆಂದರೆ, ಸಾಧನೆಯ ಮೂಲ ಉದ್ದೇಶದಿಂದ ದೂರ ಹೋಗುವುದಾಗಿದೆ.

‘ಮನಸ್ಸು ಮತ್ತು ಬುದ್ಧಿಗೆ ಸುಖಕರ ಬದಲಾವಣೆ ಸಿಗಬೇಕೆಂದು ಮನೋರಂಜನೆಯ ಕಾರ್ಯಕ್ರಮಗಳನ್ನು ನೋಡುವುದು ಅಥವಾ ಮನೋರಾಜ್ಯದಲ್ಲಿ ವಿಹರಿಸುವುದು’, ಇದರ ಅರ್ಥ ನಮಗೆ ಸಾಧನೆ ಮತ್ತು ಸೇವೆಗಳಿಂದ ಅಷ್ಟೊಂದು ಆನಂದ ಸಿಗುವುದಿಲ್ಲ ಎಂದಾಗುತ್ತದೆ. ಸುಖೋಪಭೋಗಗಳಿಗೆ ಅಧೀನವಾಗಿರುವುದರಿಂದ ನಾವು ನಿಜವಾದ ಆನಂದದಿಂದ ಇನ್ನೂ ದೂರ ಹೋಗುತ್ತೇವೆ. ನಿಜವಾಗಿ ನೋಡಿದರೆ ಸಾಧನೆ ಮತ್ತು ಸೇವೆಗಳಿಂದ ದೊರಕುವ ಆನಂದದಿಂದ ಮನಸ್ಸು ತುಂಬಿ ಹೋದರೆ, ಬಾಹ್ಯ ಸುಖದತ್ತ ಮನಸ್ಸು ಧಾವಿಸುವುದೇ ಇಲ್ಲ. ಹಾಗಾಗಿ ಸಾಧನೆಯ ಪ್ರಯತ್ನ ಮತ್ತು ನಾವು ಮಾಡುತ್ತಿರುವ ಪ್ರತಿಯೊಂದು ಸೇವೆಯಿಂದ, ತೀರಾ ಶೌಚಾಲಯದ ಸ್ವಚ್ಛತೆ ಮಾಡುವ ಸೇವೆಯಿಂದಲೂ ಆನಂದ ಪಡೆಯಲು ಪ್ರಯತ್ನಿಸಬೇಕು.

ಮನಸ್ಸು ಮತ್ತು ಬುದ್ಧಿಗೆ ಬದಲಾವಣೆ ಬೇಕೆನಿಸಿದಾಗ, ಸಂತರ ಭಜನೆಗಳಲ್ಲಿ ಮನಸ್ಸನ್ನು ತೊಡಗಿಸುವುದು, ನಾಮಜಪವನ್ನು ಏಕಾಗ್ರತೆಯಿಂದ ಮಾಡಿ ಆನಂದ ಪಡೆಯಲು ಪ್ರಯತ್ನಿಸುವುದು, ಚಿಕ್ಕಪುಟ್ಟ ಭಾವಪ್ರಯೋಗಗಳನ್ನು (ಉದಾ. ‘ಗುರುಗಳ ಕೈ ನನ್ನ ತಲೆಯ ಮೇಲಿದೆ’, ಎಂಬ ಭಾವವನ್ನಿಟ್ಟುಕೊಳ್ಳುವುದು) ಮಾಡುವುದು ಇವುಗಳಂತಹ ಕೃತಿಗಳನ್ನು ಮಾಡಿ ಭಗವಂತನ ಅನುಸಂಧಾನದಲ್ಲಿರಲು ಪ್ರಯತ್ನಿಸಬೇಕು. ಈ ಪ್ರಯತ್ನಗಳನ್ನು ಸಾಧಿಸಲು ಆವಶ್ಯಕತೆಗನುಸಾರ ಮನಸ್ಸಿಗೆ ಸ್ವಯಂಸೂಚನೆಗಳನ್ನೂ ಕೊಡಬೇಕು. ಆಧ್ಯಾತ್ಮಿಕ ತೊಂದರೆಗಳಿಂದ ಮನಸ್ಸು ಮಾಯೆಯ ಕಡೆಗೆ ಹೋಗುತ್ತಿದ್ದರೆ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಬೇಕು ಅಥವಾ ಮಾಡುತ್ತಿರುವ ಉಪಾಯಗಳನ್ನು ಹೆಚ್ಚಿಸಬೇಕು.

ಅನೇಕ ಜನ್ಮಗಳ ಸಂಸ್ಕಾರಗಳಿಂದ ಮನಸ್ಸು ಮಾಯೆಯ ವಿಷಯಗಳಲ್ಲಿ ಸುಖ ಹುಡುಕಲು ಪ್ರಯತ್ನಿಸುತ್ತಿರುತ್ತದೆ. ನಾವು ಮನಸ್ಸನ್ನು ಪ್ರಯತ್ನಪೂರ್ವಕವಾಗಿ ಭಗವಂತನ ಅನುಸಂಧಾನದಲ್ಲಿರಿಸಿದರೆ, ನಿಧಾನವಾಗಿ ಮನಸ್ಸಿಗೆ ಆ ಪ್ರಯತ್ನಗಳಿಂದ ಆನಂದವನ್ನು ಪಡೆಯುವ ಅಭ್ಯಾಸವಾಗುತ್ತದೆ. ಒಮ್ಮೆ ಹೀಗಾದರೆ, ಮನಸ್ಸು ಮಾಯೆಯಲ್ಲಿನ ಸುಖಗಳತ್ತ ಹೊರಳುವುದಿಲ್ಲ.

ಸಾಧಕರೇ, ದಿನವಿಡಿ ಸಾಧನೆಯ ಪ್ರಯತ್ನಗಳಿಂದ ದೊರಕಿದ ಚೈತನ್ಯವನ್ನು ಮೇಲಿನ ರೀತಿಯಲ್ಲಿ ಮಾಯೆಯಲ್ಲಿನ ವಿಷಯಗಳಲ್ಲಿ ಖರ್ಚು ಮಾಡಿದರೆ ನಮ್ಮ ಸಾಧನೆಯಲ್ಲಿನ ಪ್ರಗತಿ ಹೇಗೆ ಆಗುವುದು? ಆದುದರಿಂದ ಸುಖೋಪಭೋಗಗಳಲ್ಲಿ ಸುಖಪಡಲು ಪ್ರಯತ್ನಿಸಬೇಡಿ! ಅದರ ಬದಲು ಸಾಧನೆಯನ್ನು ಹೆಚ್ಚಿಸಿ ಆನಂದವನ್ನು ಪಡೆಯಿರಿ! ನಮಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಂತಹ ಮೋಕ್ಷಗುರುಗಳು ಲಭಿಸಿದ್ದಾರೆ, ಇದರ ಲಾಭ ಪಡೆದು ಇದೇ ಜನ್ಮದಲ್ಲಿ ಮೋಕ್ಷಪ್ರಾಪ್ತಿ ಮಾಡಿಕೊಳ್ಳಿ!

– (ಪೂ.) ಸಂದೀಪ ಆಳಶಿ (೬.೩.೨೦೨೩)

Leave a Comment