ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು!

ಜ್ಞಾನಯೋಗಿ ಪೂ. ಅನಂತ ಆಠವಲೆ
ಪೂ. ಅನಂತ ಆಠವಲೆ

ಸಿದ್ಧ ಸಂತ-ಮಹಾತ್ಮರು, ಗುರುಗಳು, ಈಶ್ವರನ ಅವತಾರ, ಸ್ವತಃ ಈಶ್ವರ ತಮ್ಮ ದೈವೀ ಸಾಮರ್ಥ್ಯದಿಂದ ಮನುಷ್ಯನ ಮನಸ್ಸಿನ ವಿಚಾರಗಳನ್ನು ಬದಲಾಯಿಸುವ, ಬುದ್ಧಿಯ ನಿರ್ಣಯವನ್ನು ಬದಲಾಯಿಸುವ ಕೆಲಸ ಮಾಡುವುದಿಲ್ಲ. ಉದಾಹರಣೆಗೆ ಸಂತ ತುಕಾರಾಮ, ಸಂತ ಜ್ಞಾನೇಶ್ವರ, ಆದಿಶಂಕರಾಚಾರ್ಯ ಮುಂತಾದ ಶ್ರೇಷ್ಠ ಸಂತ-ಮಹಾತ್ಮರು ತಮಗೆ ತೊಂದರೆ ನೀಡುವವರ ದುರ್ಬುದ್ಧಿಯನ್ನು ಸುಬುದ್ಧಿಯನ್ನಾಗಿ ಬದಲಾಯಿಸಲಿಲ್ಲ. ಮಹರ್ಷಿ ವ್ಯಾಸರು ದುರ್ಯೋಧನನ ಅತಿಯಾದ ದುರಾಸೆಯನ್ನು ನಾಶ ಮಾಡಲಿಲ್ಲ. ಇವಾದವು ಮಹಾತ್ಮರ ಉದಾಹರಣೆಗಳು. ಈಶ್ವರನ ಉದಾಹರಣೆಗಳನ್ನು ನೋಡುವುದಾದರೆ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಯುದ್ಧವು ಆರಂಭವಾಗುವ ಮೊದಲು ಅರ್ಜುನನ ಮನಸ್ಸಿನಲ್ಲಿ ಗೊಂದಲ ಉಂಟಾಗಿ ಯುದ್ಧ ಮಾಡಬಾರದು ಎಂದು ಅವನಿಗೆ ಅನಿಸಿತು. ಪೂರ್ಣಾವತಾರ ಆಗಿರುವ ಭಗವಾನ ಶ್ರೀಕೃಷ್ಣರು ತಮ್ಮ ದೈವೀ ಸಾಮರ್ಥ್ಯದಿಂದ ಅರ್ಜುನನ ಬುದ್ಧಿಯನ್ನು ಬದಲಾಯಿಸಿ ಒಂದು ಕ್ಷಣದಲ್ಲಿ ಅವನನ್ನು ಯುದ್ಧಕ್ಕೆ ಸಿದ್ಧ ಮಾಡಿದ್ದಲ್ಲ. ಅವರು ಅರ್ಜುನನಿಗೆ 574 ಶ್ಲೋಕಗಳ ಉಪದೇಶ ನೀಡಿದರು, ಯಾವುದು ಯೋಗ್ಯವಿದೆ ಮತ್ತು ಯಾವುದು ಅಯೋಗ್ಯವಿದೆ ಎಂದು ತಿಳಿಸಿ ಹೇಳಿದರು, ನಿಜವಾದ ಶಾಶ್ವತ ಕಲ್ಯಾಣ ಯಾವುದರಲ್ಲಿದೆ ಮತ್ತು ಅದು ಹೇಗೆ ಸಾಧ್ಯವಾಗುತ್ತದೆ, ಎಂದು ಹೇಳಿದರು. ಇಷ್ಟೆಲ್ಲ ಹೇಳಿಯಾದ ನಂತರ ಮುಂದೆ ಏನು ಮಾಡಬೇಕು, ಎಂಬುದರ ನಿರ್ಣಯವನ್ನು ತೆಗೆದುಕೊಳ್ಳಲು ಅರ್ಜುನನಿಗೆ ಹೇಳಿದರು. ಪ್ರಭು ಶ್ರೀರಾಮ ರಾವಣನ ಬುದ್ಧಿಯನ್ನು ಸುಧಾರಿಸಲಿಲ್ಲ, ಭಗವಾನ ನರಸಿಂಹ ಹಿರಣ್ಯಕಶ್ಯಪುವಿನ ಮನಸ್ಸನ್ನು (ಚಿತ್ತವೃತ್ತಿಯನ್ನು) ಬದಲಾಯಿಸಲಿಲ್ಲ. ಮಹಾತ್ಮರಿರಲಿ ಈಶ್ವರನೇ ಇರಲಿ, ಮನುಷ್ಯನ ಸ್ವಭಾವದಲ್ಲಿರುವ ದೋಷಗಳನ್ನು ತೆಗೆದುಹಾಕುವುದಿಲ್ಲ, ಅವರು ಚಿತ್ತಶುದ್ಧಿಯನ್ನು ಮಾಡುವುದಿಲ್ಲ. ಅವರೆಲ್ಲರೂ ಕೇವಲ ಯಾವುದು ಯೋಗ್ಯವಿದೆ ಎಂದು ಹೇಳುತ್ತಾರೆ, ಮಾರ್ಗದರ್ಶನ ಮಾಡುತ್ತಾರೆ.

ನಮ್ಮ ಸ್ಥಿತಿಯೂ ಸಹ ಹಾಗೇ ಇದೆ. ಯಾವುದೇ ಗುರು ಅಥವಾ ಈಶ್ವರ ಬಂದು ನಮ್ಮಿಂದಾದ ತಪ್ಪುಗಳನ್ನು, ಪಾಪಗಳ ಪರಿಣಾಮವನ್ನು ನಾಶ ಮಾಡುವುದಿಲ್ಲ, ನಮ್ಮ ಸ್ವಭಾವವನ್ನು ಸುಧಾರಿಸುವುದಿಲ್ಲ. ನಾವು ಭಾಗ್ಯಶಾಲಿಗಳಾಗಿದ್ದೇವೆ, ನಮಗೆ ಗ್ರಂಥಗಳಿಂದ, ಗುರುಗಳಿಂದ ಮಾರ್ಗದರ್ಶನ ಸಿಗುತ್ತಿದೆ. ಇನ್ನು ಮುಂದೆ ನಮ್ಮ ಚಿತ್ತಶುದ್ಧಿಯನ್ನು ನಾವೇ ಮಾಡಿಕೊಳ್ಳಬೇಕಾಗಿದೆ, ನಾವೇ ಮಾಡಿಕೊಳ್ಳಬೇಕಾಗಿದೆ!

ಭಗವದ್ಗೀತೆಯಲ್ಲಿ ಭಗವಾನ ಶ್ರೀಕೃಷ್ಣನು ಹೇಳುತ್ತಾನೆ –

ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬನ್ಧುರಾತ್ಮೈವ ರಿಪುರಾತ್ಮನಃ || (ಅ 6 ಶ್ಲೋಕ 5)

ಅರ್ಥ – ನಮ್ಮ ಉದ್ಧಾರವನ್ನು ಸ್ವತಃ ನಾವೇ ಮಾಡಿಕೊಳ್ಳಬೇಕು, ನಮ್ಮ ಅಧೋಗತಿಯನ್ನು ಮಾಡಿಕೊಳ್ಳಬಾರದು. ನಾವೇ ನಮ್ಮ ಆಪ್ತರಿದ್ದೇವೆ, ನಮ್ಮ ಶತ್ರುಗಳೂ ನಾವೇ ಆಗಿದ್ದೇವೆ.

ಯಾರು ನಮ್ಮ ಹಿತವನ್ನು ಬಯಸುವರೋ, ಅವರು ನಮ್ಮ ಆಪ್ತರಾಗಿರುತ್ತಾರೆ. ದೊರಕಿದ ಮಾರ್ಗದರ್ಶನಕ್ಕನುಸಾರ ನಾವು ನಡೆದುಕೊಂಡರೆ ನಮಗೆ ಹಿತವಾಗುವುದು, ಅಂದರೆ ನಾವೇ ನಮ್ಮ ಹಿತವನ್ನು ಮಾಡಿಕೊಂಡರೆ, ನಾವೇ ನಮ್ಮ ಆಪ್ತರಾಗುತ್ತೇವೆ. ಯಾರು ನಮ್ಮ ಕೆಟ್ಟದ್ದನ್ನು ಬಯಸುವರೋ, ನಮ್ಮ ಅಹಿತವನ್ನು ಬಯಸುವರೋ, ಅವರು ನಮ್ಮ ಶತ್ರುಗಳಾಗಿರುತ್ತಾರೆ. ಮಾರ್ಗದರ್ಶನಕ್ಕನುಸಾರ ನಾವು ಸನ್ಮಾರ್ಗದಿಂದ ನಡೆಯದಿದ್ದರೆ ನಾವೇ ನಮ್ಮ ಅಧೋಗತಿಯನ್ನು ಮಾಡಿಕೊಳ್ಳುತ್ತೇವೆ, ನಾವೇ ನಮ್ಮ ಶತ್ರುಗಳಾಗುತ್ತೇವೆ. ನಾವು ನಮ್ಮ ಹಿತವನ್ನು ಸಾಧಿಸಬೇಕಿದೆ, ಉದ್ಧಾರ ಮಾಡಿಕೊಳ್ಳಬೇಕಿದೆ; ಅಧೋಗತಿ ಅಲ್ಲ. ಆದರೆ ಮೊದಲು ಹೇಳಿದಂತೆ ಮುಖ್ಯ ವಿಷಯವೆಂದರೆ ಗುರು ಅಥವಾ ಈಶ್ವರ ಬಂದು ನಮಗಾಗಿ ಇದನ್ನು ಮಾಡಲಾರರು. ಇದನ್ನು ನಮಗಾಗಿ ನಾವೇ ಮಾಡಿಕೊಳ್ಳಬೇಕು, ಇದಕ್ಕೆ ಪರ್ಯಾಯವಿಲ್ಲ.

– ಅನಂತ ಆಠವಲೆ ೨೨.೦೪.೨೦೨೩

Leave a Comment