ತರಕಾರಿಗಳಿಗೆ ಬಿಸಿಲಿನ ಆವಶ್ಯಕತೆ

Article also available in :

ಹೆಚ್ಚಾಗಿ ಹೊಸದಾಗಿ ಕೈದೋಟ ಪ್ರಾರಂಭಿಸಿದವರಿಗೆ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಲೇಖನವು ಬಿತ್ತನೆಯಿಂದ ತರಕಾರಿಗಳನ್ನು ಕೊಯ್ಲು ಮಾಡುವವರೆಗೆ ಇಡೀ ಚಕ್ರದಲ್ಲಿ ತರಕಾರಿ ಗಿಡಗಳಿಗೆ ಏನು ಬೇಕು ಎಂಬ ಪ್ರಶ್ನೆಯನ್ನು ಉತ್ತರಿಸುತ್ತದೆ. ಹಾಗಾಗಿ ಲಭ್ಯವಿರುವ ಬಿಸಿಲು ಅಥವಾ ಸೂರ್ಯಪ್ರಕಾಶದಲ್ಲಿ ನಾವು ಯಾವ ತರಕಾರಿಗಳನ್ನು ಬೆಳೆಸಬಹುದು? ಎಂದು ತಿಳಿದುಕೊಳ್ಳೋಣ..

ಶ್ರೀ. ರಾಜನ್ ಲೋಹಗಾಂವ್ಕರ್

ಅ. ಬಿಸಿಲಿನ ಬದಲಾಗುವ ಪ್ರಮಾಣ ಮತ್ತು ಅದರ ಕಾರಣಗಳು

ನಿಮ್ಮ ತೋಟದಲ್ಲಿ ದಿನವಿಡೀ ಬೀಳುವ ಬಿಸಿಲಿನ ಸಮಯ, ಪ್ರಮಾಣ, ಸ್ಥಳ ಮತ್ತು ತೀವ್ರತೆ ಎಲ್ಲವೂ ಬದಲಾಗುತ್ತಿರುತ್ತವೆ. ಉತ್ತರಾಯಣ ಮತ್ತು ದಕ್ಷಿಣಾಯನ ಇವುಗಳಿಂದ ವರ್ಷವಿಡೀ ನಿರಂತರವಾಗಿ ಬದಲಾವಣೆಗಳಿರುತ್ತವೆ; ಮಾತ್ರವಲ್ಲ ಅಕ್ಕಪಕ್ಕದ ನಿರ್ಮಾಣ ಕಾರ್ಯಗಳು ಮತ್ತು ಹೊರಗಿರುವ ಅಥವಾ ನಿಮ್ಮ ಸ್ವಂತ ತೋಟದಲ್ಲಿ ನೆಟ್ಟ ಗಿಡಮರಗಳ ನಿರಂತರ ಬೆಳವಣಿಗೆಯಿಂದಾಗಿ, ಬಿಸಿಲಿನ ಗಂಟೆಗಳು ಹೆಚ್ಚು-ಕಡಿಮೆ ಆಗುತ್ತವೆ ಮತ್ತು ಅದರ ತೀವ್ರತೆಯೂ ಹೆಚ್ಚು-ಕಡಿಮೆ ಆಗುತ್ತದೆ. ಅದರ ಮೇಲೆ ನಮಗೆ ನಿಯಂತ್ರಣವಿಲ್ಲ. ಹೆಚ್ಚೆಂದರೆ ನಮ್ಮ ತೋಟದಲ್ಲಿ ಬೆಳೆಯುವ ಮರಗಳ ಕೊಂಬೆಗಳನ್ನು ಕತ್ತರಿಸಬಹುದು; ಆದರೆ ಇತರ ಸಂದರ್ಭಗಳಲ್ಲಿ ನೀವು ನೆಟ್ಟ ಗಿಡಗಳು ಪಡೆಯಬಹುದಾದಷ್ಟು ಬಿಸಿಲು ಮತ್ತು ಸೂರ್ಯನ ಬೆಳಕನ್ನೇ ಪೂರೈಸಿಕೊಳ್ಳಬೇಕಾಗುತ್ತದೆ.

ಸಾಂಕೇತಿಕ ಚಿತ್ರ

ಆ. ಬಿಸಿಲಿನ ಆವಶ್ಯಕತೆಗೆ ಅನುಗುಣವಾಗಿ ತರಕಾರಿಗಳ ವರ್ಗೀಕರಣ

ನಾವು ಎಷ್ಟು ಬಿಸಿಲಿನಲ್ಲಿ ಯಾವ್ಯಾವ ತರಕಾರಿಗಳನ್ನು ಬೆಳೆಸಬಹುದು ಎಂದು ನೋಡೋಣ. ಇದಕ್ಕಾಗಿ ನಾವು ತರಕಾರಿಗಳನ್ನು 3 ಮುಖ್ಯ ಗುಂಪುಗಳಾಗಿ ವಿಂಗಡಿಸುತ್ತೇವೆ. ಅವು –

೧. ೬ ರಿಂದ ೮ ಗಂಟೆಗಳ ಬಿಸಿಲು ಅಗತ್ಯವಿರುವ ತರಕಾರಿಗಳು

೨. ೪ ರಿಂದ ೬ ಗಂಟೆಗಳ ಬಿಸಿಲು ಅಗತ್ಯವಿರುವ ತರಕಾರಿಗಳು

೩. ೨ ರಿಂದ ೪ ಗಂಟೆಗಳ ಬಿಸಿಲು ಅಗತ್ಯವಿರುವ ತರಕಾರಿಗಳು

ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಯಾವುದೇ ಸಸ್ಯದ ಬೆಳವಣಿಗೆಗೆ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಬಿಸಿಲು ಆವಶ್ಯಕವಾಗಿದೆ. ಅದರಿಂದಲೇ ಹಣ್ಣುಗಳು ರುಚಿ ಮತ್ತು ಹೂವುಗಳು ಬಣ್ಣವನ್ನು ಪಡೆಯುತ್ತವೆ; ಆದರೆ ಕೆಲವು ತರಕಾರಿಗಳು ಕಡಿಮೆ ಬಿಸಿಲಿನಲ್ಲಿ ಕೂಡ ಬೆಳೆದು ಅರಳುತ್ತವೆ ಮತ್ತು ಫಲ ನೀಡುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಂತಹ ತರಕಾರಿಗಳು ಬಿಸಿಲಿನಲ್ಲಿದ್ದರೆ ಮತ್ತು ನಾವು ಅವುಗಳನ್ನು ಸಂಪೂರ್ಣ ಕಾಳಜಿಯಿಂದ ಬೆಳೆಸಿದರೆ, ಆಗ ಅವುಗಳ ಬಣ್ಣದಲ್ಲಿ ಮತ್ತು ರುಚಿಯಲ್ಲಿ ಅಂತರವಿರುತ್ತಿತ್ತು; ಆದರೂ ಕಡಿಮೆ ಬಿಸಿಲಿದ್ದರೆ ‘ಏನೂ ಇಲ್ಲ, ಅದಕ್ಕಿಂತ ಇಷ್ಟಾದರೂ ಸರಿ’ ಎಂಬಂತೆ ಬೆಳೆದು ತಮ್ಮ ಆಹಾರದ ಅಗತ್ಯಗಳನ್ನು ಪೂರೈಸಿಕೊಳ್ಳುತ್ತವೆ.

ಆ ೧. ೬ ರಿಂದ ೮ ಗಂಟೆಗಳ ನೇರ ಬಿಸಿಲು ಅಗತ್ಯವಿರುವ ತರಕಾರಿಗಳು

ಟೊಮ್ಯಾಟೊ, ಬದನೆ, ಸೌತೆಕಾಯಿ, ಮೆಣಸು, ಜೋಳ, ಹಾಲುಗುಂಬಳ, ಕೆಂಪು ಕುಂಬಳಕಾಯಿ, ಬೆಂಡೆಕಾಯಿ, ಕಡಲೆ ಮತ್ತು ಇತರ ದ್ವಿದಳ ಧಾನ್ಯಗಳು, ಬಳ್ಳಿಗಳ ಮೇಲೆ ಬೆಳೆಯುವ ಎಲ್ಲ ತರಕಾರಿಗಳಿಗೆ ಬಿಸಿಲು ಹೆಚ್ಚು ಪಡೆದಷ್ಟು ಅವುಗಳ ಬೆಳವಣಿಗೆ ಉತ್ತಮವಾಗಿರುತ್ತದೆ. ತೀವ್ರ ಬೇಸಿಗೆಯ ದಿನಗಳಲ್ಲಿ ಮಧ್ಯಾಹ್ನ, ಅಂದರೆ ಬೆಳಗ್ಗೆ ಹನ್ನೊಂದೂವರೆ ಮತ್ತು ಮಧ್ಯಾಹ್ನ ಮೂರರ ನಡುವೆ ಈ ತರಕಾರಿಗಳ ಮೇಲೆ ನೆರಳು ವ್ಯವಸ್ಥೆ ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಬಿಸಿಲು ಹೆಚ್ಚಾದರೆ ನೀರಿನ ಆವಶ್ಯಕತೆಯೂ ಹೆಚ್ಚಾಗುತ್ತದೆ ಎಂಬ ಗಣಿತವು ನೆನಪಿನಲ್ಲಿಡಬಹುದು; ಏಕೆಂದರೆ ಕುಂಡದಲ್ಲಿ ನೆಟ್ಟಿರುವ ತರಕಾರಿಗಳು ನೀರಿಗಾಗಿ ನಮ್ಮನ್ನೇ ಅವಲಂಬಿಸಬೇಕು. ಆದ್ದರಿಂದ, ಈ ತರಕಾರಿಗಳ ಮೇಲೆ ನೀರಿನ ಕೊರತೆಯ ಒತ್ತಡವನ್ನು ಬಾರದಂತೆ ನೋಡಬೇಕು. (ನೀರಿನ ಕೊರತೆಯಿಂದ ಸಸ್ಯಗಳು ಒಣಗಲು ಬಿಡಬಾರದು.)

ಆ ೨. ೪ ರಿಂದ ೬ ಗಂಟೆಗಳ ಬಿಸಿಲು ಅಗತ್ಯವಿರುವ ತರಕಾರಿಗಳು

ಬೀಟ್‌ರೂಟ್, ಎಲೆಕೋಸು, ಹೂಕೋಸು, ಬ್ರೋಕೊಲಿ, ಕ್ಯಾರೆಟ್, ಈರುಳ್ಳಿ, ಬೆಳ್ಳುಳ್ಳಿ, ಬಟಾಣಿ, ಆಲೂಗಡ್ಡೆ (ಬಟಾಟೆ), ಮೂಲಂಗಿ, ಶುಂಠಿ ಮುಂತಾದ ತರಕಾರಿಗಳು, ಅಂದರೆ, ಹೆಚ್ಚಿನ ಗೆಡ್ಡೆಗಳು ಅರೆ ನೆರಳಿನಲ್ಲಿ ಚೆನ್ನಾಗಿ ಬೆಳೆಯುತ್ತವೆ. ತೀವ್ರ ಬಿಸಿಲು ಅಥವಾ ಅಗತ್ಯಕ್ಕಿಂತ ಹೆಚ್ಚು ಬಿಸಿಲು ಇದ್ದರೆ, ಅವು ಚೆನ್ನಾಗಿ ಬೆಳೆಯುವುದಿಲ್ಲ. ಎಲೆಕೋಸು ಮತ್ತು ಹೂಕೋಸುಗಳಂತಹ ತರಕಾರಿಗಳ ಬೆಳವಣಿಗೆಯು ತೀವ್ರ ಶಾಖದಲ್ಲಿ ತುಂಬಾ ಕಡಿಮೆಯಾಗುತ್ತದೆ; ಮಾತ್ರವಲ್ಲ ಅವುಗಳ ರುಚಿಯಲ್ಲಿಯೂ ವ್ಯತ್ಯಾಸ ಬರುತ್ತದೆ. ಬಿಸಿಲು ಬಲವಾಗಿರುವ ಪ್ರದೇಶಗಳಲ್ಲಿ ದೊಡ್ಡ ಮರಗಳ ನೆರಳಿನಲ್ಲಿ ಅವುಗಳನ್ನು ನೆಟ್ಟರೆ, ಲಭ್ಯವಿರುವ ಸ್ಥಳವನ್ನು ಬಳಸಿದಂತಾಗುತ್ತದೆ ಮತ್ತು ತರಕಾರಿಗಳನ್ನೂ ಪಡೆಯಬಹುದು.

ಆ ೩. ೨ ರಿಂದ ೪ ಗಂಟೆಗಳ ಬಿಸಿಲು ಅಗತ್ಯವಿರುವ ತರಕಾರಿಗಳು

ಮೆಂತ್ಯ, ಪಾಲಕ, ಸಬ್ಬಸಿಗೆ, ಕೊತ್ತುಂಬರಿ ಇತ್ಯಾದಿ ಎಲ್ಲಾ ಎಲೆಯುಳ್ಳ ತರಕಾರಿಗಳಿಗೆ, ಹಾಗೆಯೇ ಲೆಟಿಸ್‍ನಂತಹ ವಿದೇಶಿ ತರಕಾರಿಗಳಿಗೆ, ಸ್ವಲ್ಪವೇ ಬಿಸಿಲಿದ್ದರೆ ಅವುಗಳ ಬೆಳವಣಿಗೆ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ, ಎಲೆಯುಳ್ಳ ತರಕಾರಿಗಳನ್ನು ಅವು ಎಳಸಾಗಿರುವಾಗ ತಿನ್ನುತ್ತಾರೆ. ಆದ್ದರಿಂದ ಅವುಗಳನ್ನು ಕಡಿಮೆ ಬಿಸಿಲಿನಲ್ಲಿ ಬೆಳೆಸಿದರೆ, ಅವುಗಳ ಎಲ್ಲಾ ಗುಣಗಳು ಮತ್ತು ರುಚಿ ಹಾಗೇ ಉಳಿಯುತ್ತವೆ.

ಇ. ಕೈದೋಟದಲ್ಲಿ ಎಲ್ಲಿ, ಯಾವಾಗ ಮತ್ತು ಎಷ್ಟು ಬಿಸಿಲು ಬರುತ್ತದೆ ಎಂಬುವುದರ ಅಭ್ಯಾಸ ಮಾಡಿ ಗಿಡ ನೆಡಬೇಕು

ನಿಮ್ಮ ತೋಟದಲ್ಲಿ ಎಷ್ಟು ಬಿಸಿಲು ಬರುತ್ತದೆ, ದಿನದ ಯಾವ ಸಮಯದಲ್ಲಿ, ತೋಟದ ಯಾವ ಭಾಗದಲ್ಲಿ ಮತ್ತು ಎಷ್ಟು ತೀವ್ರತೆಯ ಬಿಸಿಲಿರುತ್ತದೆ ಎಂಬ ಅಧ್ಯಯನವನ್ನು ಮೊದಲ ಕೆಲವು ದಿನಗಳಲ್ಲಿ ಮಾಡಬೇಕು, ಹಾಗೆಯೇ ವರ್ಷದ ವಿವಿಧ ಋತುಗಳಲ್ಲಿ ಮಾಡಬೇಕು. ಹೀಗೆ ಮಾಡಿ ಯಾವ ಜಾಗದಲ್ಲಿ ಯಾವ ಗಿಡಗಳನ್ನು ನೆಡಬೇಕು ಮತ್ತು ಯಾವಾಗ ನೆಡಬೇಕು ಎಂಬುವುದನ್ನು ನಿಶ್ಚಯಿಸಬೇಕು. ನಾವು ಎಷ್ಟೇ ಅಭ್ಯಾಸ ಮಾಡಿದರೂ, ನಿಯೊಜನೆ ಮಾಡಿ ಗಿಡ ನೆಟ್ಟರೂ ಕೊನೆಗೆ ಪ್ರಕೃತಿಯ ಮೇಲೆಯೇ ಎಲ್ಲ ಅವಲಂಬಿಸಿದೆ! ಆದ್ದರಿಂದ ಪ್ರಕೃತಿ ಮತ್ತು ಸುತ್ತಮುತ್ತಲಿನ ಕಟ್ಟಡಗಳು, ದೊಡ್ಡ ಮರಗಳು ಇತ್ಯಾದಿಗಳಿಂದಾಗಿ ಎಲ್ಲಾ ದಿನಗಳಲ್ಲೂ ಒಂದೇ ಪ್ರಮಾಣದ ಬಿಸಿಲು ಸಿಗುವುದಿಲ್ಲ. ಇದಕ್ಕಾಗಿ ಲಭ್ಯವಿರುವ ಜಾಗಕ್ಕೆ ಅನುಗುಣವಾಗಿ ಮರ, ಕುಂಡಗಳನ್ನು ಜೋಡಿಸಿ, ಲಭ್ಯವಿರುವ ಬಿಸಿಲು ಮತ್ತು ನೆರಳಿನಲ್ಲಿ ತರಕಾರಿಗಳನ್ನು ನೆಟ್ಟು ಬಿಸಿಲಿನ ಅಗತ್ಯವನ್ನು ಪೂರೈಸಿಕೊಳ್ಳಬಹುದು.

ತೆರೆದ ಜಾಗದಲ್ಲಿ ಹೆಚ್ಚು ಬಿಸಿಲು ಬೇಕಾಗುವ ಗಿಡಗಳನ್ನು ನೆಟ್ಟು ಅಥವಾ ಅವುಗಳ ಕುಂಡಗಳನ್ನಿಡಬಹುದು, ಹಾಗೆಯೇ ಮರಗಳ ನೆರಳಿನಲ್ಲಿ ಕಡಿಮೆ ಬಿಸಿಲು ಬೇಕಾಗುವ ಗಿಡಗಳನ್ನು ಬೆಳೆಸಿ ಅವುಗಳ ಆವಶ್ಯಕತೆಯನ್ನೂ ಪೂರೈಸಬಹುದು. ತೋಟದಲ್ಲಿ ನೆರಳೇ ಹೆಚ್ಚಿರುವ ಜಾಗವೂ ಇರಬಹುದು. ಅಲ್ಲಿಯೂ ನೆರಳಿನಲ್ಲಿ ಒಳ್ಳೆಯದಾಗಿ ಬೆಳೆಯುವ ಗಿಡಗಳನ್ನು ನೆಡಬಹುದು. ನೇರ ಬಿಸಿಲು ಮಾತ್ರವಲ್ಲದೆ ಸೂರ್ಯಪ್ರಕಾಶವೂ ಕಡಿಮೆಯಿರುವ ತೋಟದ ಜಾಗದಲ್ಲಿ, ನಾವು ಹೂವುಗಳು ಅಥವಾ ಅಲಂಕಾರಿಕ ಸಸ್ಯಗಳನ್ನು ನೆಡಬಹುದು. ಇಂತಹ ಸ್ಥಳಗಳಲ್ಲಿ ಅಲಂಕಾರಿಕ ಅಥವಾ ಒಳಾಂಗಣ ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ.

ಬಹಳಷ್ಟು ಬಿಸಿಲು ಅಗತ್ಯವಿರುವ ಮತ್ತು ಸಾಲಾಗಿ ನೆಡಬಹುದಾದ ತರಕಾರಿಗಳನ್ನು ಉತ್ತರ-ದಕ್ಷಿಣವಾಗಿ ಸಾಲುಗಳಲ್ಲಿ ಬೆಳೆಸಿದರೆ ಎಲ್ಲಾ ಮರಗಳಿಗೆ ಬೆಳಗ್ಗೆಯಿಂದ ಸಂಜೆಯವರೆಗೆ ಒಂದೇ ಸಮಾನ ಬಿಸಿಲು ಸಿಗುತ್ತದೆ.

ನೆರಳಿನಲ್ಲಿ ಬೆಳೆಯುವ ತರಕಾರಿಗಳನ್ನು ಬಿಸಿಲಿನ ಆವಶ್ಯಕತೆಯಿರುವ ತರಕಾರಿ ಗಿಡಗಳ ತಳದಲ್ಲಿ (ಶೇ.೫೦ ನೆರಳು ಸಿಗುವಷ್ಟು) ಮಡಕೆಯಲ್ಲಿ ನೆಟ್ಟರೆ, ಕಡಿಮೆ ಜಾಗದಲ್ಲಿ ಹೆಚ್ಚು ತರಕಾರಿ ಪಡೆಯಬಹುದು.

ಈ. ಬಿಸಿಲಿನ ಕೊರತೆಯಿಂದಾಗಿ ಬೆಳೆ ಕಡಿಮೆಯಾದರೂ ಕಷ್ಟಪಟ್ಟು ಬೆಳೆಸಿರುವುದರಿಂದ ಅದಕ್ಕೆ ಮಹತ್ವ ಹೆಚ್ಚಿದೆ

ಹೆಚ್ಚು ಬಿಸಿಲಿನ ಆವಶ್ಯಕತೆಯಿರುವ ತರಕಾರಿಗಳನ್ನು ಮಧ್ಯಮ ಬಿಸಿಲಿನಲ್ಲಿ ಮತ್ತು ಮಧ್ಯಮ ಬಿಸಿಲಿನ ಆವಶ್ಯಕತೆಯಿರುವ ತರಕಾರಿಗಳನ್ನು ಕಡಿಮೆ ಬಿಸಿಲಿನಲ್ಲಿ ಅಥವಾ ನೆರಳಿನಲ್ಲಿ ಬೆಳೆಸಿದರೆ ಅವು ಬೆಳೆ ಕೊಡುವುದೇ ಇಲ್ಲ ಎಂದೇನಿಲ್ಲ. ಬೆಳೆ ಸಿಗುವುದು, ಬಣ್ಣ ಮತ್ತು ಆಕಾರದಲ್ಲಿ ಸ್ವಲ್ಪ ಚಿಕ್ಕದಾಗಿರಬಹುದು. ರುಚಿಯೂ ಬದಲಾಗುವುದಿಲ್ಲ, ಆದರೆ ಸಂಖ್ಯೆ ಕಡಿಮೆಯಿರಬಹುದು ಮತ್ತು ಮೊಗ್ಗಿನಿಂದ ಮಾಗಿದ ತರಕಾರಿ ಪಡೆಯುವ ಅವಧಿಯು ಹೆಚ್ಚು ಇರಬಹುದು. ಅದಕ್ಕೆ ಕಾರಣ ಇಷ್ಟೇ – ‘ಬೆಳವಣಿಗೆಗೆ ಅಗತ್ಯವಾದಷ್ಟು ಬಿಸಿಲು ಕಡಿಮೆ ಪ್ರಮಾಣದಲ್ಲಿ ಸಿಗಿವುದು ಮತ್ತು ಆದ್ದರಿಂದ ಕಡಿಮೆ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಪಡೆಯುವುದು’. ರಸಗೊಬ್ಬರಗಳನ್ನು ಬಳಸಿ ಈ ಜೀವಸತ್ವಗಳ ಕೊರತೆಯನ್ನು ನೀವು ತುಂಬಲು ಸಾಧ್ಯವಿಲ್ಲ; ಆದ್ದರಿಂದ ಲಭ್ಯವಿರುವ ಸ್ಥಳಕ್ಕೆ ಅನುಗುಣವಾಗಿ ಏನು ನೆಡಬೇಕೆಂದು ನಿರ್ಧರಿಸಿ ಮತ್ತು ಅದರಿಂದ ಅಷ್ಟೇ ನಿರೀಕ್ಷಿಸಿ. ನಿಮ್ಮ ತೋಟದಲ್ಲಿ ಬೆಳೆಯುವ ಟೊಮೆಟೊಗಳು ಗದ್ದೆಯಲ್ಲಿರುವ ಟೊಮೆಟೊಗಳಂತೆ 2 ಇಂಚು ವ್ಯಾಸವನ್ನು ಹೊಂದಿರದಿದ್ದರೂ, ಅದನ್ನು ನೀವೇ ಬೆಳೆಸಿದ್ದೀರಿ ಮತ್ತು ಅದಕ್ಕೆ ಯಾವ ಗೊಬ್ಬರ ಮತ್ತು ಯಾವ ನೀರು ಕೊಟ್ಟಿದ್ದೀರಿ ಎಂದು ನಿಮಗೆ ತಿಳಿದಿದೆ ಎಂದು ನೆನಪಿಟ್ಟುಕೊಳ್ಳುವುದೇ ಮುಖ್ಯ!

– ರಾಜನ್ ಲೋಹಗಾಂವ್ಕರ್ (vaanaspatya.blogspot.com)

2 thoughts on “ತರಕಾರಿಗಳಿಗೆ ಬಿಸಿಲಿನ ಆವಶ್ಯಕತೆ”

Leave a Comment