ರಾಸಾಯನಿಕ ಅಥವಾ ಸಾವಯವ ಕೃಷಿಯನ್ನಲ್ಲ, ನೈಸರ್ಗಿಕ ಕೃಷಿಯನ್ನು ಅವಲಂಬಿಸಿ ! (ಭಾಗ ೪)

Article also available in :

Contents

ಹಿಂದಿನ ಭಾಗ

ಗುಜರಾತಿನ ಆಣಂದ ಎಂಬಲ್ಲಿ ನೈಸರ್ಗಿಕ ಕೃಷಿಗೆ ಸಂಬಂಧಿಸಿದ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಗುಜರಾತಿನ ಮಾ. ರಾಜ್ಯಪಾಲ ಆಚಾರ್ಯ ದೇವವ್ರತ ಇವರು ನೈಸರ್ಗಿಕ ಕೃಷಿಯ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಂಡರು. ಆ ಭಾಷಣದ ಆಯ್ದ ಭಾಗಗಳ ಕೊನೆಯ ಲೇಖನದಲ್ಲಿ ಆಚಾರ್ಯ ದೇವದ್ರತ ಮತ್ತು ಅವರ ಸಹಕಾರಿಗಳು ನೈಸರ್ಗಿಕ ಕೃಷಿಯ ಪ್ರಸಾರಕ್ಕಾಗಿ ಮಾಡಿದ ಕಾರ್ಯವನ್ನು ಅವರ ಶಬ್ದಗಳಲ್ಲಿಯೇ ತಿಳಿದುಕೊಳ್ಳೋಣ !

೨೧. ಆಚಾರ್ಯ ದೇವವ್ರತ ಮತ್ತು ಅವರ ಸಹಕಾರಿಗಳು ನೈಸರ್ಗಿಕ ಕೃಷಿಯ ಕ್ಷೇತ್ರದಲ್ಲಿ ಮಾಡಿದ ಕಾರ್ಯ

೨೧ ಅ. ಹಿಮಾಚಲ ಪ್ರದೇಶದಲ್ಲಿ ಸೇಬು (Apple) ಉತ್ಪಾದಕರ ಸಂಘಟನೆಯನ್ನು ಮಾಡಿ ಅವರಿಂದ ನೈಸರ್ಗಿಕ ಕೃಷಿಯನ್ನು ಮಾಡಿಸಿಕೊಳ್ಳುವುದು

ಗೌರವಾನ್ವಿತ ರಾಷ್ಟ್ರಪತಿಗಳು ನನ್ನ ಮೇಲೆ ಹಿಮಾಚಲ ಪ್ರದೇಶದ ರಾಜ್ಯಪಾಲರ ಜವಾಬ್ದಾರಿಯನ್ನು ಒಪ್ಪಿಸಿದ್ದರು. ಆಗ ನಾನು ನನ್ನೊಂದಿಗೆ ಕೃಷಿಯ ಅನುಭವವನ್ನೂ ತೆಗೆದುಕೊಂಡು ಹೋಗಿದ್ದೆನು. ಆಗ ಅಲ್ಲಿ ಸೇಬುಗಳ ಮೇಲೆ ೧೫-೧೬ ರಾಸಾಯನಿಕ ಸಿಂಪಡಿಕೆಗಳು ಆಗುತ್ತಿರುವುದನ್ನು ನಾನು ನೋಡಿದೆ. ಯಾವ ಹಣ್ಣುಗಳನ್ನು ನಾವು ಆರೋಗ್ಯದಾಯಕವಾಗಿವೆ ಎಂದು ತಿನ್ನುತ್ತೇವೆಯೋ, ಅವು ಈ ರಾಸಾಯನಿಕ ಸಿಂಪಡಿಕೆಯಿಂದ ವಿಷಭರಿತವಾಗಿರುತ್ತವೆ. ನಾನು ಜನರ ಸೇಬುಗಳ ತೋಟಗಳಿಗೆ ಹೋಗುತ್ತಿದ್ದೆ. ರೈತರನ್ನು ಒಟ್ಟುಗೂಡಿಸುತ್ತಿದ್ದೆ. ಅಂದಿನಿಂದ ಹಿಮಾಚಲ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಅಭಿಯಾನ ಆರಂಭವಾಯಿತು. ೨ ವರ್ಷಗಳಲ್ಲಿ ಸರಕಾರದ ಸಹಾಯ ಪಡೆದು ನಾನು ೫೦ ಸಾವಿರ ರೈತರನ್ನು ನೈಸರ್ಗಿಕ ಕೃಷಿ ಚಳುವಳಿಗೆ ಜೋಡಿಸಿದೆನು. ಆ ಕಾಲದಲ್ಲಿ, ನಾನು ಇದರ ಬಗ್ಗೆ ಪ್ರಬೋಧನೆ ಮಾಡುವಾಗ ಡಾ. ರಾಜೇಶ್ವರ ಚಂದೇಲ ಮತ್ತು ಶ್ರೀ. ರಾಕೇಶ ಕಂವರ (ಐ.ಎ.ಎಸ್. ಅಧಿಕಾರಿಗಳು) ಇವರಿಬ್ಬರೂ ನನ್ನ ಬೆಂಬಲಕ್ಕೆ ದೃಢವಾಗಿ ನಿಂತಿದ್ದರು ಮತ್ತು ಅವರು ‘ನಾವು ಈ ರಾಜ್ಯದಲ್ಲಿ ಈ ಚಳುವಳಿಯನ್ನು ಯಶಸ್ವಿಯಾಗಿ ನಡೆಸುವೆವು’, ಎಂಬ ಆಶ್ವಾಸನೆಯನ್ನೂ ನೀಡಿದ್ದರು. ಡಾ. ರಾಜೇಶ್ವರ ಚಂದೇಲ ಇವರು ವಿಜ್ಞಾನಿಯಾಗಿದ್ದಾರೆ. ಸದ್ಯ ಅವರು ಹಿಮಾಚಲ ಪ್ರದೇಶದ ನೌನಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ತಜ್ಞರಾಗಿ ಕಾರ್ಯವನ್ನು ಮಾಡುತ್ತಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿನ ತಜ್ಞರು ನನ್ನ ನಂತರ ಈ ಪರಂಪರೆಯನ್ನು ನಿಲ್ಲಿಸದೇ ಮುಂದುವರಿಸಿದರು ಮತ್ತು ಇಂದು ಹಿಮಾಚಲ ಪ್ರದೇಶದಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚು ರೈತರು ಮತ್ತು ತೋಟಗಾರರು ನೈಸರ್ಗಿಕ ಕೃಷಿಯನ್ನು ಮಾಡುತ್ತಿದ್ದಾರೆ, ಹಾಗೆಯೇ ಅವರ ಸಂಖ್ಯೆಯು ಶೀಘ್ರಗತಿಯಲ್ಲಿ ಹೆಚ್ಚಾಗುತ್ತಿದೆ. ನೈಸರ್ಗಿಕ ಕೃಷಿಯಿಂದ ರೈತರ ಉತ್ಪನ್ನ ಹೆಚ್ಚಾಗಿದೆ. ನೀರಿನ ಬಳಕೆ ಕಡಿಮೆಯಾಗಿದೆ. ಮೊದಲು ರೈತರ ಶರೀರದ ಮೇಲೆ ರಾಸಾಯನಿಕ ಔಷಧಿಗಳ ಸಿಂಪಡಿಕೆಯಿಂದ ದುಷ್ಪರಿಣಾಮವಾಗುತ್ತಿತ್ತು, ಅದು ಈಗ ಸಿಂಪಡಿಕೆಯನ್ನು ನಿಲ್ಲಿಸಿದುದರಿಂದ ಶರೀರಿಕ ಸಮಸ್ಯೆಗಳೂ ನಿಂತಿವೆ ಮತ್ತು ಅದರಿಂದ ತೋಟಗಾರರು ಆನಂದದಿಂದಿದ್ದಾರೆ.

೨೧ ಆ. ಆಂಧ್ರಪ್ರದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಅವಲಂಬಿಸಿದ್ದರಿಂದ ಆದ ಲಾಭ

ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿಗಳಾದ ಟಿ. ವಿಜಯಕುಮಾರ ಇವರು ನೈಸರ್ಗಿಕ ಕೃಷಿಯ ಮಾಧ್ಯಮದಿಂದ ಆಂಧ್ರಪ್ರದೇಶದಲ್ಲಿ ೫ ಲಕ್ಷ ರೈತರನ್ನು ಒಟ್ಟುಗೂಡಿಸಿದ್ದಾರೆ. ನೀರಿಲ್ಲದ ಭಾಗಗಳಲ್ಲಿಯೂ ಈ ನೈಸರ್ಗಿಕ ಕೃಷಿಯಿಂದ ಈಗ ವರ್ಷದಲ್ಲಿ ಮೂರು ಮೂರು ಬೆಳೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.

೨೧ ಇ. ಕೃಷಿ ತಜ್ಞರಿಂದ ನೈಸರ್ಗಿಕ ಕೃಷಿಯ ಬಗ್ಗೆ ಸಂಶೋಧನೆ ಮಾಡಿಸಿಕೊಳ್ಳುವುದು

ನಿಮಗೆ ನೈಸರ್ಗಿಕ ಕೃಷಿಯ ಯೋಜನೆಯನ್ನು ನೋಡಿ ಆಶ್ಚರ್ಯವೆನಿಸಬಹುದು. ‘ಇದು ಹೀಗೆ ಹೇಗೆ ಆಗಬಹುದು’, ಎಂಬ ಪ್ರಶ್ನೆ ನಿಮಗೆ ಬರಬಹುದು. ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದೇ, ನಾವು ಈ ಯೋಜನೆಯಲ್ಲಿ ವಿವಿಧ ತಜ್ಞರನ್ನು, ಹಾಗೆಯೇ ಅಸಂಖ್ಯ ರೈತರನ್ನು ಜೋಡಿಸಿಕೊಂಡಿದ್ದೇವೆ. ತಜ್ಞರು ಮಾಡಿದ ಸಂಶೋಧನೆಯ ಸಂಶೋಧನಾಪ್ರಬಂಧಗಳು ತಯಾರಾಗಿವೆ.

೨೧ ಈ. ಭಾರತದ ಮೊದಲ ಶೇ. ೧೦೦ ರಷ್ಟು ನೈಸರ್ಗಿಕ ಕೃಷಿಯಿರುವ ಜಿಲ್ಲೆ

ಕೊರೊನಾದ ಕಾಲದಲ್ಲಿಯೂ ನಾವು ಗುಜರಾತನಲ್ಲಿ ೨ ಲಕ್ಷ ರೈತರ ಸಂಘಟನೆಯನ್ನು ಮಾಡಿದೆವು. ಇಲ್ಲಿನ ರೈತರಿಗೆ ೨ ಲಕ್ಷ ದೇಶಿ ಗೋವುಗಳನ್ನು ನೀಡಲಾಗಿದ್ದು ಗುಜರಾತ ರಾಜ್ಯದ ‘ಡಾಂಗ್’ ಜಿಲ್ಲೆಯು ಶೇ. ೧೦೦ ರಷ್ಟು ನೈಸರ್ಗಿಕ ಕೃಷಿ ಇರುವ ಭಾರತದ ಮೊದಲ ಜಿಲ್ಲೆಯೆಂದು ಘೋಷಿಸಲಾಗಿದೆ ಮತ್ತು ಇದರ ಬಹುಮಾನವು ಗುಜರಾತ ರಾಜ್ಯಕ್ಕೆ ದೊರಕಿದೆ. ಇದರಿಂದ ಇಂದು ನನಗೆ ಬಹಳ ಆನಂದವಾಗಿದೆ.

೨೨. ನೈಸರ್ಗಿಕ ಕೃಷಿಯಿಂದ ಭಾರತೀಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಆಗುವುದು !

ಇಂದಿನ ದಿನವು ಕೃಷಿಕರ, ಹಾಗೆಯೇ ದೇಶದಲ್ಲಿನ ಜನರ ಜೀವನದಲ್ಲಿ ಬದಲಾವಣೆಯನ್ನು ತರುವ ದಿನವಾಗುವುದು ! ಇಂದು ಜಾಗತಿಕ ತಾಪಮಾನದ ಹೆಚ್ಚಳವು (ಗ್ಲೋಬಲ್ ವಾರ್ಮಿಂಗ್) ಒಂದು ದೊಡ್ಡ ಸವಾಲಾಗಿದೆ. ನೈಸರ್ಗಿಕ ಕೃಷಿ ಅನುಸರಿಸಿ ನೀವು ಅದರಿಂದ ಮುಕ್ತರಾಗುವಿರಿ. ಇಂದು ನೀರಿನ ದೊಡ್ಡ ಸಮಸ್ಯೆ ಉದ್ಭವಿಸಿದೆ. ಕುಡಿಯುವ ನೀರಿನ ಬಾಟಲಿಯನ್ನು ತೆಗೆದುಕೊಂಡು ತಿರುಗಾಡಬೇಕಾಗುತ್ತಿದೆ. ಅದರಿಂದಲೂ ಬಿಡುಗಡೆಯಾಗುವುದು. ೨೦ ವರ್ಷಗಳ ಹಿಂದೆ ಹೇಗೆ ನಾವು ನೀರನ್ನು ಎಲ್ಲಿಯೂ ಸಹ ಕುಡಿಯಬಹುದಾಗಿತ್ತೋ, ಈಗ ಮತ್ತೇ ಅದೇ ರೀತಿ ಆಗುವುದು. ಮೊದಲು ದೇಶಿ ಗೋವುಗಳು ಕೇವಲ ಪೂಜೆಗಾಗಿ ಚಿತ್ರಗಳಲ್ಲಿ ಕಾಣಿಸುತ್ತಿದ್ದವು ಈಗ ಅವುಗಳಿಗೆ ಮನೆಮನೆಗಳಲ್ಲಿ ಗೌರವದ ಸ್ಥಾನ ಸಿಗುತ್ತಿದೆ. ಇದರಿಂದ ಜನರ ಆರೋಗ್ಯ ಸುರಕ್ಷಿತವಾಗಿರಲಿದೆ.

೨೩. ನೈಸರ್ಗಿಕ ಕೃಷಿಯಲ್ಲಿ ಸಾವಯವ ಗೊಬ್ಬರಗಳನ್ನು ಖರೀದಿಸುವ ಆವಶ್ಯಕತೆ ಇಲ್ಲದಿರುವುದು

ನೈಸರ್ಗಿಕ ಕೃಷಿಯಲ್ಲಿ ರೈತರಿಗೆ ಯಾವುದೇ ಖರ್ಚು ಇರುವುದಿಲ್ಲ. ಈ ನೈಸರ್ಗಿಕ ಕೃಷಿಯಲ್ಲಿ ಸಾವಯವ ಗೊಬ್ಬರಗಳ ಆವಶ್ಯಕತೆಯೇ ಇರುವುದಿಲ್ಲ. ಆದುದರಿಂದ ರಸಗೊಬ್ಬರಗಳು (ರಾಸಾಯನಿಕ ಗೊಬ್ಬರಗಳು), ಅವುಗಳ ಕಾರಖಾನೆಗಳು ಇತ್ಯಾದಿಗಳ ಆವಶ್ಯಕತೆಯೇ ಉಳಿಯುವುದಿಲ್ಲ. ರೈತರಿಗೆ ಗೊಬ್ಬರಕ್ಕಾಗಿ ಮಾರುಕಟ್ಟೆಗೆ ಹೋಗುವ ಆವಶ್ಯಕತೆಯೇ ಇಲ್ಲ; ಏಕೆಂದರೆ ಗೋವು ಅವರ ಮನೆಯಲ್ಲಿಯೇ ಇರುತ್ತದೆ. ಬೆಲ್ಲವನ್ನು ಹೊಲದಲ್ಲಿಯೇ ತಯಾರಿಸಬಹುದು. ಹೊಲದಲ್ಲಿ ಬೇಳೆಗಳನ್ನು ಬೆಳೆಸಲಾಗುತ್ತದೆ. ಮಣ್ಣಂತೂ ಇದ್ದೇ ಇರುತ್ತದೆ. ಇವುಗಳನ್ನು ಬಿಟ್ಟು ನೈಸರ್ಗಿಕ ಕೃಷಿಗೆ ಬೇರೆ ಏನೂ ಬೇಕಾಗುವುದಿಲ್ಲ.

೨೪. ಎಮ್ಮೆಯ ಅಥವಾ ವಿದೇಶಿ ವಂಶದ ಗೋವುಗಳ ಸೆಗಣಿಯಿಂದ ಜೀವಾಮೃತವನ್ನು ತಯಾರಿಸಲು ಸಾಧ್ಯವಿಲ್ಲ !

ನೈಸರ್ಗಿಕ ಕೃಷಿಯ ಚಳುವಳಿಯನ್ನು ಪ್ರಾಮಾಣಿಕತೆಯಿಂದ ನಡೆಸಬೇಕು. ಇದರಲ್ಲಿ ಏನಾದರೂ ಗಡಿಬಿಡಿ ಮಾಡಿದರೆ, ಅಪೇಕ್ಷಿತ ಫಲ ಸಿಗುವುದಿಲ್ಲ. ‘ದೇಶಿ ಗೋವುಗಳ ಬದಲಿಗೆ ಎಮ್ಮೆಯ ಅಥವಾ ಜರ್ಸಿಯಂತಹ ವಿದೇಶಿ ಗೋವುಗಳ ಸೆಗಣಿಯನ್ನು ಉಪಯೋಗಿಸಿ’ ಎಂದು ಯಾರಾದರೂ ಹೇಳಬಹುದು, ಆದರೆ ಅದರಿಂದ ಫಲ ಸಿಗಲಾರದು. ಕೃಷಿಗಾಗಿ ಪೂರಕ ಜೀವಾಣುಗಳಿರುವ ಗುಣಧರ್ಮವು ಕೇವಲ ಮತ್ತು ಕೇವಲ ದೇಶಿ ಗೋವುಗಳ ಸೆಗಣಿಯಲ್ಲಿಯೇ ಇದೆ. ಇತರ ಯಾವುದೇ ಪ್ರಾಣಿಯ ಮಲದಲ್ಲಿ ಈ ಗುಣಧರ್ಮ ಸಿಗುವುದಿಲ್ಲ. ನಾವು ರಸ್ತೆಯ ಮೇಲೆ ತಿರುಗಾಡುವ ಬರಡು ಗೋವಿನ ಸೆಗಣಿಯನ್ನು ಪರೀಕ್ಷೆ ಮಾಡಿ ನೋಡಿದೆವು. ನಮಗೆ ಕೊಟ್ಟಿಗೆಯಲ್ಲಿ ಕಟ್ಟಿದ ದೇಶಿ ಗೋವಿನ ೧ ಗ್ರಾಮ್ ಸೆಗಣಿಯಲ್ಲಿ ೩೦೦ ಕೋಟಿ ಜೀವಾಣುಗಳು ಕಂಡು ಬಂದವು; ಆದರೆ ರಸ್ತೆಯ ಮೇಲೆ ತಿರುಗಾಡುವ ಬರಡು ಗೋವಿನ ೧ ಗ್ರಾಮ್ ಸೆಗಣಿಯಲ್ಲಿ ೫೦೦ ಕೋಟಿ ಜೀವಾಣುಗಳು ದೊರಕಿದವು; ಏಕೆಂದರೆ ಬರಡು ಗೋವುಗಳ ಶಕ್ತಿಯು ಹಾಲು ತಯಾರಿಸಲು ಉಪಯೋಗವಾಗದೇ, ಕೇವಲ ಜೀವಾಣುಗಳನ್ನು ತಯಾರಿಸಲು ಉಪಯೋಗವಾಗುತ್ತದೆ. ‘ನೀಮಾಸ್ತ್ರ’, ‘ಬ್ರಹ್ಮಾಸ್ತ್ರ’, ‘ಸೂಂಠಾಸ್ತ್ರ’ ಇವು ನೈಸರ್ಗಿಕ ಕೃಷಿಯಲ್ಲಿ ಬಳಸಲಾಗುವ ನೈಸರ್ಗಿಕ ಕೀಟ ಪ್ರತಿಬಂಧಕ ಔಷಧಿಗಳಾಗಿವೆ. ಈ ಔಷಧಿಗಳನ್ನು ಯಾರೂ ಸ್ವತಃ ತಯಾರಿಸಬಹುದು. ಇವುಗಳ ಬಗ್ಗೆ ಮಾಹಿತಿ ನನ್ನ ಪುಸ್ತಕದಲ್ಲಿ ನೀಡಲಾಗಿದೆ.

೨೫. ನೈಸರ್ಗಿಕ ಕೃಷಿಯೆಂದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಭೂಮಿಯ ಫಲವತ್ತತೆಯನ್ನು ಅತಿಹೆಚ್ಚು ಪ್ರಮಾಣದಲ್ಲಿ ಹೆಚ್ಚಿಸುವ ವಿಧಾನ

ನನ್ನ ಸ್ವಂತ ಹೊಲವು ಈಗ ರೋಗಮುಕ್ತವಾಗಿದೆ. ನನ್ನ ಉತ್ಪನ್ನವು ಹೆಚ್ಚಾಗುತ್ತಿದೆ. ಈ ವರ್ಷ ನನ್ನ ಪಕ್ಕದ ರೈತನು ರಾಸಾಯನಿಕ ಕೃಷಿಯ ಮೂಲಕ ಒಂದು ಎಕರೆ ಹೊಲದಲ್ಲಿ ೨೮ ರಿಂದ ೩೦ ಕ್ವಿಂಟಲ್ ಭತ್ತದ ಉತ್ಪನ್ನವನ್ನು ಪಡೆದನು ಮತ್ತು ನಾನು ನೈಸರ್ಗಿಕ ಕೃಷಿಯನ್ನು ಮಾಡಿ ಒಂದು ಎಕರೆಗೆ ಸರಾಸರಿ ೩೩ ಕ್ವಿಂಟಲ್ ಉತ್ಪನ್ನವನ್ನು ಪಡೆದೆನು. ನನ್ನ ಖರ್ಚು ಒಂದು ಎಕರೆಗೆ ಕೇವಲ ೧ ಸಾವಿರ ರೂಪಾಯಿಗಳಷ್ಟಿತ್ತು ಮತ್ತು ರಾಸಾಯನಿಕ ಕೃಷಿಗೆ ಒಂದು ಎಕರೆಗೆ ೧೨ ರಿಂದ ೧೪ ಸಾವಿರದಷ್ಟು ಖರ್ಚಾಗಿತ್ತು. ಇದು ಕೇವಲ ಒಂದು ಬೆಳೆಯ ಸಂದರ್ಭದಲ್ಲಿರದೇ, ಎಲ್ಲ ಬೆಳೆಗಳ ಸಂದರ್ಭದಲ್ಲಿ ಹೀಗೆಯೇ ಇದೆ. ನನ್ನ ಭೂಮಿಯ ಗುಣಮಟ್ಟವು ಹೆಚ್ಚಾಗಿದೆ. ಕೃಷಿ ವಿಶ್ವವಿದ್ಯಾಲಯದ ತಜ್ಞರು ನನ್ನ ಮತ್ತು ನನ್ನ ಪಕ್ಕದವರ ಹೊಲದ ಮಣ್ಣಿನ ಪರೀಕ್ಷಣೆಯನ್ನು ಮಾಡಿದರು. ರಾಸಾಯನಿಕ ಕೃಷಿ ಮಾಡಿದ ಪಕ್ಕದ ಹೊಲದ ಮಣ್ಣಿನಲ್ಲಿ ೧ ಗ್ರಾಂಗೆ ೩೧ ಲಕ್ಷ ಜೀವಾಣುಗಳು ಕಂಡು ಬಂದವು. ತದ್ವಿರುದ್ಧ ನೈಸರ್ಗಿಕ ಕೃಷಿ ಇರುವ ನನ್ನ ಭೂಮಿಯ ಮಣ್ಣಿನಲ್ಲಿ ೧ ಗ್ರಾಂಗೆ ೧೬೧ ಕೋಟಿ ಜೀವಾಣುಗಳು ದೊರಕಿದವು. ‘ಯಾವ ಪದ್ಧತಿಯು ಹೆಚ್ಚು ಉತ್ಪನ್ನವನ್ನು ಕೊಡುವುದು ’ ಎಂಬುದನ್ನು ಈಗ ನೀವೇ ಹೇಳಬೇಕು. ನೈಸರ್ಗಿಕ ಕೃಷಿಯೋ ಅಥವಾ ರಾಸಾಯನಿಕ ಕೃಷಿಯೋ ?

೨೬. ಭಾರತೀಯ ರೈತರೇ, ಭಾರತ ಮಾತೆಯನ್ನು ವಿಷಮುಕ್ತ ಮಾಡಲು ನೈಸರ್ಗಿಕ ಕೃಷಿರೂಪಿ ಕ್ರಾಂತಿಯಲ್ಲಿ ಪಾಲ್ಗೊಳ್ಳಿರಿ

ಆದುದರಿಂದಲೇ ನಾನು ಭಾರತದ ರೈತರಿಗೆ ಕರೆ ನೀಡುತ್ತೇನೆ. ಮಾನ್ಯ ಪ್ರಧಾನಮಂತ್ರಿಗಳು ನಮ್ಮೆಲ್ಲರ ಕಲ್ಯಾಣಕ್ಕಾಗಿ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡುವ ಒಂದು ದೊಡ್ಡ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ನೀವು ಸಹ ಮುಂದೆ ಬನ್ನಿ. ಇಂದು ಈ ನೈಸರ್ಗಿಕ ಕೃಷಿಯನ್ನು ಮಾಡಿ ರೈತರು ಸ್ವಾವಲಂಬಿಯಾದರೆ ನಮ್ಮ ದೇಶವು ಸ್ವಾವಲಂಬಿಯಾಗುವುದು. ಇದರಿಂದ ಬಹುದೊಡ್ಡ ಕ್ರಾಂತಿಯಾಗುವುದು, ಎಂದು ನನಗೆ ಖಾತ್ರಿ ಇದೆ. ಈ ಅಭಿಯಾನವನ್ನು ಜನಾಂದೋಲನ ಮಾಡಲು ಪ್ರಯತ್ನದ ಪರಾಕಾಷ್ಠೆಯನ್ನು ಮಾಡೋಣ ! ನಮ್ಮ ತಾಯಿಯಾಗಿರುವ ಈ ಭಾರತದ ಭೂಮಿಯನ್ನು ವಿಷಮುಕ್ತ ಮಾಡೋಣ ! ಧನ್ಯವಾದಗಳು !

– ಆಚಾರ್ಯ ದೇವವ್ರತ ಇವರ ಅನುಭವದ ಆಯ್ದ ಭಾಗ

Leave a Comment