ಮನೆಯಲ್ಲೇ ಶುಂಠಿ ಬೆಳೆಸಿ !

Article also available in :

ಅತ್ಯುತ್ತಮ ಔಷಧೀಯ ಗುಣಧರ್ಮವಿರುವ ಗೆಡ್ಡೆಗೆಣಸು ವರ್ಗದ ಒಂದು ಬೆಳೆ ಅಂದರೆ ಶುಂಠಿ. ಇದರ ನಿಯಮಿತ ಸೇವನೆಯಿಂದ ಬಹಳಷ್ಟು ರೋಗಗಳು ದೂರವಾಗುತ್ತವೆ. ಶುಂಠಿಯನ್ನು ಚಹಾದಲ್ಲಿ ಹಾಕಿ ಅಥವಾ ಇದರ ರಸವನ್ನು ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯುವುದರಿಂದ ಚರ್ಮವು ನಯವಾಗುತ್ತದೆ; ಜೊತೆಗೆ ತೂಕವು ಸಹ ಹತೋಟಿಯಲ್ಲಿರುತ್ತದೆ. ಇಂತಹ ಈ ಬಹುಗುಣಿ ಶುಂಠಿಯನ್ನು ನಾವು ನಮ್ಮ ಮನೆಯ ತೋಟದಲ್ಲಿ ಹೂಕುಂಡದಲ್ಲಿಯೂ ಬೆಳೆಸಬಹುದು. ತೀರಾ ಸಜ್ಜಾದಲ್ಲಿರುವ (ಬಾಲ್ಕನಿಯಲ್ಲಿರುವ) ಚಿಕ್ಕ ತೋಟದಲ್ಲಿಯೂ ಇದನ್ನು ಬೆಳೆಸಬಹುದು ! ಕಡಿಮೆ ಶ್ರಮದಿಂದ ಮನೆಯಲ್ಲಿ ಯಾವಾಗಲೂ ಬೇಕಾಗುವ ಶುಂಠಿಯನ್ನು ಪ್ರತಿಯೊಬ್ಬರು ಮನೆಯಲ್ಲಿ ಬೆಳೆಸಲೇಬೇಕು.

೧. ಶುಂಠಿಯ ಕೃಷಿಯನ್ನು ಮಾಡುವ ಯೋಗ್ಯ ಸಮಯ

ಒಂದು ವೇಳೆ ಶುಂಠಿಯನ್ನು ವ್ಯಾವಸಾಯಿಕ ದೃಷ್ಟಿಯಿಂದ ಬೆಳೆಸಲಿಕ್ಕಿದ್ದರೆ, ಎಪ್ರಿಲ್ ತಿಂಗಳ ಮೊದಲ ಹದಿನೈದು ದಿನಗಳಲ್ಲಿಯೇ ನೆಡಬೇಕು. ತೀರಾ ತಡವಾದರೆ, ಮುಂದಿನ ಹದಿನೈದು ದಿನಗಳಲ್ಲಿ ನೆಡಬೇಕು; ಆದರೆ ಅದಕ್ಕಿಂತಲೂ ತಡಮಾಡಬಾರದು. ಒಂದು ವೇಳೆ, ನಾವು ಒಂದೆರಡು ಕುಂಡಗಳಲ್ಲಿಯೇ ಶುಂಠಿಯನ್ನು ಬೆಳೆಸಲಿಕ್ಕಿದ್ದರೆ, ಅದನ್ನು ವರ್ಷದಾದ್ಯಂತ ಯಾವಾಗಲೂ ನೆಡಬಹುದು.

೨. ಶುಂಠಿಯ ಕೃಷಿಗಾಗಿ ಕುಂಡಗಳ ಆಯ್ಕೆ

ಶುಂಠಿಯು ಮಣ್ಣಿನಲ್ಲಿ ಸಾಮಾನ್ಯವಾಗಿ ೬ ರಿಂದ ೮ ಇಂಚುಗಳ ಆಳದವರೆಗೆ ತಯಾರಾಗುತ್ತದೆ. ಆದ್ದರಿಂದ ಒಂದು ಅಡಿ ಆಳದ ಕುಂಡವು ಸಾಕಾಗುತ್ತದೆ. ಶುಂಠಿ ಹೆಚ್ಚು ಅಡ್ಡ ಹಬ್ಬುವುದರಿಂದ ಕುಂಡವು ದೊಡ್ಡ ವ್ಯಾಸದ ಅಥವಾ ಸಾಧ್ಯವಿದ್ದಷ್ಟು ಆಯತಾಕಾರವಾಗಿರಬೇಕು. ಮಾವಿನಹಣ್ಣು ಸಿಗುವ ಮರದ ಪೆಟ್ಟಿಗೆಯನ್ನು ತೆಗೆದುಕೊಂಡರೂ ಉತ್ತಮವೇ. ಶುಂಠಿಗೆ ಇಂತಹ ಪೆಟ್ಟಿಗೆಯಲ್ಲಿ ಬೆಳೆಸಲು ಬಹಳಷ್ಟು ಜಾಗ ಸಿಗುವುದು ಮತ್ತು ಚೆನ್ನಾಗಿ ಗಾಳಿಯಾಡುವುದರಿಂದ ಬೆಳವಣಿಗೆಯೂ ಚೆನ್ನಾಗಿ ಆಗುವುದು. ಮಣ್ಣಿನಲ್ಲಿಯೇ ಶುಂಠಿಯು ಹೆಚ್ಚು ಬೆಳೆದು ಹಬ್ಬುವುದರಿಂದ ಸಹಜವಾಗಿಯೇ ಮಣ್ಣು ತೆರವಾಗಿರಬೇಕು. ಆದುದರಿಂದ ಮಣ್ಣಿನಲ್ಲಿ ಒಣಗಿದ ಗಿಡಗಳ ಎಲೆ, ಕಡ್ಡಿಗಳನ್ನು, ಸೆಗಣಿಯ ಗೊಬ್ಬರ ಅಥವಾ ಕಂಪೋಸ್ಟ್‌ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಬೇಕು. ಕೆಳಗಡೆ ಇಟ್ಟಿಗೆಗಳ ತುಂಡುಗಳನ್ನು, ಮೇಲೆ ಒಣಗಿದ ಎಲೆ-ಕಡ್ಡಿಗಳು, ಅದರ ಮೇಲೆ ಕಂಪೋಸ್ಟ್ ಅಥವಾ ಸೆಗಣಿ ಗೊಬ್ಬರ, ಅದರ ಮೇಲೆ ಬೇವಿನ ಹಿಂಡಿಯನ್ನು ತೆಳ್ಳಗೆ ಹರಡಬೇಕು, ಮೇಲೆ ಸ್ವಲ್ಪ ಮಣ್ಣು ಮತ್ತು ಪುನಃ ಇನ್ನೊಮ್ಮೆ ಅಂತಹುದೇ ಪದರನ್ನು ಮಾಡಿ ಕುಂಡವನ್ನು ತುಂಬಿಸಬೇಕು. ಹತ್ತಿರದಲ್ಲಿ ಕಹಿಬೇವಿನ ಗಿಡವಿದ್ದರೆ ಅದರ ಸೊಪ್ಪು ಸಹಜ ಸಿಗುತ್ತದೆ. ಇಂತಹ ಹಸಿರು ಅಥವಾ ಒಣಗಿದ ಎಲೆಗಳನ್ನು ಬಹಳಷ್ಟು ಪ್ರಮಾಣದಲ್ಲಿ ಬಳಸಿದರೆ ಗೊಬ್ಬರವೂ ಆಗುವುದು ಮತ್ತು ಹುಳಗಳೂ ಆಗಲಾರದು.

(ಸೆಗಣಿಯ ಗೊಬ್ಬರ ಅಥವಾ ಕಂಪೋಸ್ಟ್ ಇವುಗಳ ಅಭಾವವಿದ್ದಾಗ ಜೀವಾಮೃತವನ್ನು ಬಳಸಬೇಕು. ಒಣಗಿದ ಎಲೆಕಡ್ಡಿಗಳ ಮೇಲೆ ಜೀವಾಮೃತವನ್ನು ಸಿಂಪಡಿಸಿ ಅದು ಕೊಳೆತಾಗ ತಯಾರಾದ ‘ಹ್ಯೂಮಸ್’ (ಫಲವತ್ತಾದ ಮಣ್ಣು) ಶುಂಠಿಯ ಕೃಷಿಗಾಗಿ ಅತ್ಯಂತ ಪೋಷಕವಾಗಿರುತ್ತದೆ. ‘ಹ್ಯೂಮಸ್’ ಉತ್ತಮವಾಗಿದ್ದರೆ ಮತ್ತು ನಾವು ನಿಯಮಿತವಾಗಿ ಒಣಗಿದ ಎಲೆಕಡ್ಡಿಗಳು, ಆಚ್ಛಾದನೆ(ಹೊದಿಕೆ) ಮಾಡಿ ಜೀವಾಮೃತವನ್ನು ನೀಡುತ್ತಿದ್ದರೆ ಇತರ ಯಾವುದೇ ಗೊಬ್ಬರದ ಆವಶ್ಯಕತೆ ಇರಲಾರದು. – ಸಂಕಲನಕಾರರು)

೩. ಶುಂಠಿಯ ಕೃಷಿ

ಶುಂಠಿಯ ಕೊಂಬು ಇರುವ ಭಾಗವನ್ನು ಛಾಯಾಚಿತ್ರದಲ್ಲಿ ಗೋಲಾಕಾರದಲ್ಲಿ ತೋರಿಸಲಾಗಿದೆ.

ನಾವು ಯಾವಾಗಲೂ ಮಾರುಕಟ್ಟೆಯಿಂದ ತರುವ ಶುಂಠಿಗಳ ಪೈಕಿಯೇ ಕಣ್ಣುಗಳಿರುವ ಶುಂಠಿಯ ಕೆಲವು ತುಂಡುಗಳನ್ನು ಕೃಷಿಗಾಗಿ ಬಳಸಬಹುದು. ಆದ್ದರಿಂದ ಬೀಜಗಳನ್ನು ತರುವ ಆವಶ್ಯಕತೆಯೇ ಇರಲಾರದು. ‘ಕಣ್ಣುಗಳು’ ಅಂದರೆ ‘ಶುಂಠಿಯ ಮೇಲ್ಭಾಗದಲ್ಲಿ ಎಲ್ಲಿ ಗೆರೆ ಇರುತ್ತದೋ ಮತ್ತು ಕೆಲವು ಭಾಗ ದಪ್ಪವಿರುತ್ತದೋ’, ಆ ಭಾಗ ಮೇಲೆ ಛಾಯಾಚಿತ್ರದಲ್ಲಿ ಗೋಲಾಕಾರದಲ್ಲಿ ತೋರಿಸಿದಂತೆ ಶುಂಠಿಯ ಅಷ್ಟು ಕೊಂಬು ಇರುವ ಭಾಗವನ್ನು ಕತ್ತರಿಸಿ ತೆಗೆದು ಅದನ್ನು ಕುಂಡದಲ್ಲಿ ಕುಂಡದ ಆಕಾರದಲ್ಲಿ; ಆದರೆ ಬದಿಯಿಂದ ೨-೩ ಇಂಚು ಭಾಗವನ್ನು ಬಿಟ್ಟು ಮಣ್ಣಿನಲ್ಲಿ ೨ ರಿಂದ ಎರಡೂವರೆ ಇಂಚು ಆಳಕ್ಕೆ ಹೂಳಬೇಕು. ಹೂತ ನಂತರ ಮಣ್ಣು ಒದ್ದೆಯಾಗುವಷ್ಟೇ ನೀರನ್ನು ಹಾಕಬೇಕು. ಶುಂಠಿಯ ಕೊಂಬಿರುವ ಭಾಗವನ್ನು ಕತ್ತರಿಸುತ್ತಿರುವುದರಿಂದ, ಕೆಲವು ಭಾಗದಲ್ಲಿ ಶುಂಠಿಯು ತೆರೆದುಕೊಳ್ಳುತ್ತದೆ. ಆದುದರಿಂದ ಆರಂಭದಲ್ಲಿ ಹೆಚ್ಚು ನೀರಿನಿಂದಾಗಿ ಶುಂಠಿ ಕೊಳೆಯುವ ಸಾಧ್ಯತೆ ಇರುತ್ತದೆಯೆಂದು ಮಣ್ಣು ಒದ್ದೆಯಾಗುವ ಮಟ್ಟಿಗೆ ನೀರನ್ನು ಹಾಕಬೇಕು. ಅನಂತರವೂ ನೀರನ್ನು ಇದೇ ಪದ್ಧತಿಯಲ್ಲಿ ಹಾಕಬೇಕು.

೪. ಬಿಸಿಲಿನ ಆವಶ್ಯಕತೆ

ಶುಂಠಿಗೆ ಹೆಚ್ಚು ಬಿಸಿಲು ಬೇಕಾಗುವುದಿಲ್ಲ. ಆದುದರಿಂದ ದಿನದಲ್ಲಿ ೨ ರಿಂದ ಎರಡೂವರೆ ಗಂಟೆ ಬಿಸಿಲು ಸಿಕ್ಕಿದರೂ, ಬಹಳಷ್ಟಾಗುತ್ತದೆ. ಕುಂಡವನ್ನು ಸಾಧ್ಯವಿದ್ದಷ್ಟು ಬೆಳಗ್ಗೆಯಿಂದ ಮಧ್ಯಾಹ್ನ ೧೨ ಗಂಟೆಯ ವರೆಗೆ ಬಿಸಿಲು ಬೀಳುವಂತಹ ಸ್ಥಳದಲ್ಲಿಟ್ಟರೆ ಉತ್ತಮ.

೫. ಶುಂಠಿಯ ಗಡ್ಡೆಯ ಕೊಯ್ಲು

ಶುಂಠಿ ತಯಾರಾಗಲು ಸಾಮಾನ್ಯವಾಗಿ ೬-೭ ತಿಂಗಳುಗಳು ಬೇಕಾಗುತ್ತವೆ. ಒಣ ಶುಂಠಿಯನ್ನು ತಯಾರಿಸಲು ಹಸಿ ಶುಂಠಿಯನ್ನು ಬಳಸುವುದಿದ್ದರೆ, ಅವುಗಳನ್ನು ೮ ರಿಂದ ೧೦ ತಿಂಗಳುಗಳ ನಂತರ ಕೊಯ್ದರೂ ನಡೆಯುತ್ತದೆ; ಆದರೆ ಮನೆಯ ಬಳಕೆಗಾಗಿ ೬ – ೭ ತಿಂಗಳುಗಳಲ್ಲಿ ತೆಗೆಯಬೇಕು, ಇಲ್ಲದಿದ್ದರೆ ಅದರಲ್ಲಿ ಹೆಚ್ಚು ನಾರು ರೂಪುಗೊಂಡು ಕಡಿಮೆ ರಸ ಸಿಗುತ್ತದೆ. ಎಲೆಗಳು ಹಳದಿಯಾಗತೊಡಗಿದರೆ, ಶುಂಠಿ ತಯಾರಾಗಿದೆ ಎಂದು ತಿಳಿಯಬೇಕು. ಶುಂಠಿಯ ಕೆಲವು ವಿಧಗಳಲ್ಲಿ ಕೆಲವೊಮ್ಮೆ ಸಸಿಗಳಿಗೆ ಹೂವು ಸಹ ಬಿಡುತ್ತವೆ. ಮೊಗ್ಗಿನ ರೂಪದಲ್ಲಿರುವ ಹೂವು ಕಣದಂತೆ ಕಾಣಿಸುತ್ತದೆ. ಮನೆಯಲ್ಲಿ ಉಪಯೋಗಿಸುವುದಿದ್ದರೆ, ೨-೩ ದಿನಕ್ಕಾಗುವಷ್ಟೇ ಶುಂಠಿಯನ್ನು ಕುಂಡದಿಂದ ತೆಗೆಯಬೇಕು ಮತ್ತು ಉಳಿದದ್ದನ್ನು ಮಣ್ಣಿನಲ್ಲಿ ಹಾಗೆಯೇ ಬಿಡಬೇಕು, ಅಂದರೆ ಹೊಸ ಮೊಳಕೆಗಳು ಬರತೊಡಗುತ್ತವೆ.

೬. ನೀರು ಮತ್ತು ಗೊಬ್ಬರದ ನಿರ್ವಹಣೆ

ಎಪ್ರಿಲ್‌ನಲ್ಲಿ ಶುಂಠಿಯನ್ನು ನೆಟ್ಟರೆ ಆರಂಭದಲ್ಲಿ ೩-೪ ದಿನಗಳ ನಂತರ ನೀರನ್ನು ಹಾಕಬೇಕು. ನಂತರ ಮಳೆಯ ನೀರು ಶುಂಠಿಗೆ ಸಾಕಾಗುತ್ತದೆ. ಸಾಮಾನ್ಯವಾಗಿ ಮಣ್ಣು ಒಣಗಿದೆ ಎಂದೆನಿಸಿದರೆ ಮಾತ್ರ ನೀರು ಹಾಕಬೇಕು. ಪ್ರತಿ ೧೫ ದಿನಗಳ ನಂತರ ಕಂಪೋಸ್ಟ್ ಮತ್ತು ಸೆಗಣಿಯ ಗೊಬ್ಬರವನ್ನು ಸರತಿಯಂತೆ ನೀಡಬೇಕು. ನಡುನಡುವೆ ಸ್ವಲ್ಪ ಕಹಿಬೇವಿನ ಹಿಂಡಿಯನ್ನು ಹಾಕಿದರೆ ಇತರ ಯಾವುದೇ ಗೊಬ್ಬರದ ಆವಶ್ಯಕತೆ ಇರುವುದಿಲ್ಲ. ಕಹಿಬೇವಿನ ಹಿಂಡಿಯನ್ನು (ಅಥವಾ ಕಹಿಬೇವಿನ ತೊಪ್ಪಲು) ಬಳಸುವುದರಿಂದ ಶುಂಠಿಗೆ ಯಾವುದೇ ರೋಗವಾಗುವುದಿಲ್ಲ.

೭. ಇತರ ಮುಂಜಾಗ್ರತೆಯ ಕ್ರಮಗಳು

ಮಳೆಗಾಲದಲ್ಲಿ ಎಲ್ಲೆಡೆಗಿರುವ ತೊಂದರೆಯೆಂದರೆ ಎಲೆಗಳನ್ನು ತಿನ್ನುವ ಹುಳಗಳು; ಆದರೆ ಅವುಗಳಿಂದ ಶುಂಠಿಗೆ ಯಾವುದೇ ರೀತಿಯ ಅಪಾಯವಾಗುವುದಿಲ್ಲ. ಕೇವಲ ದುಂಬಿಯಂತಹ ಹುಳ ಇತ್ಯಾದಿ ಇಲ್ಲವಲ್ಲ, ಎಂದು ನಡುನಡುವೆ ನೋಡುತ್ತಿರಬೇಕು. ಇಲ್ಲದಿದ್ದರೆ ಒಂದು ಬಾರಿ ನೆಟ್ಟರೆ ೬ ತಿಂಗಳು ಕಾಲ ಪುನಃ ನೋಡುವ ಆವಶ್ಯಕತೆಯೂ ಇಲ್ಲದ ಬೆಳೆಯಾಗಿದೆ.

೮. ಶುಂಠಿಯಲ್ಲಿ ಅಂತರಬೆಳೆ

ಮೇಲ್ಮೈ ಜಾಗವು ಬಿತ್ತನೆಯಿಂದ ಕೊಯ್ಲು ಮಾಡುವವರೆಗೆ ಮುಕ್ತವಾಗಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಯಾವುದಕ್ಕೆ ರೈತರು ಅಂತರಬೆಳೆ ಅನ್ನುವರೋ, ಅದನ್ನು ಪಡೆಯಬಹುದು, ಅಂದರೆ ಸೊಪ್ಪುತರಕಾರಿ ಅಥವಾ ಟೊಮೆಟೊ, ಬದನೆಕಾಯಿ ಇತ್ಯಾದಿ. ಇದರಿಂದ ಅಷ್ಟೇ ಗೊಬ್ಬರದಲ್ಲಿ ಮತ್ತು ನೀರಿನಲ್ಲಿ ಎರಡು ಬೆಳೆಗಳನ್ನು ತೆಗೆದು ಸಹ ಜಾಗ, ಗೊಬ್ಬರ, ನೀರು ಮತ್ತು ಪರಿಶ್ರಮ ಈ ಎಲ್ಲವುಗಳ ಉಳಿತಾಯವಾಗುತ್ತದೆ.

– ಶ್ರೀ. ರಾಜನ ಲೋಹಗಾಂವಕರ

Leave a Comment