ಮನೆಯಲ್ಲೇ ಕೊತ್ತುಂಬರಿ ಮತ್ತು ಪುದೀನ ಬೆಳೆಸಿ !

Article also available in :

೧. ಕೊತ್ತುಂಬರಿ

೧ ಅ. ಕೊತ್ತುಂಬರಿ ಬೀಜವನ್ನು ಬಿತ್ತುವ ವಿವಿಧ ಪದ್ಧತಿಗಳು

ಕೊತ್ತುಂಬರಿಯು ಬೀಜದಿಂದ ಆಗುತ್ತಿದ್ದರೂ, ಈ ಬೀಜಗಳನ್ನು ನಮಗೆ ಯಾವುದೇ ಸಸ್ಯ ಉತ್ಪಾದನಾ ಕೇಂದ್ರದಿಂದ ಖರೀದಿಸಿ ತರುವ ಆವಶ್ಯಕತೆ ಇರುವುದಿಲ್ಲ. ನಮ್ಮ ಅಡುಗೆ ಮನೆಯಲ್ಲಿಯೇ ಆ ಬೀಜಗಳು ಇರುತ್ತವೆ. ಕೊತ್ತುಂಬರಿಯ ಬೀಜವೆಂದರೆ ‘ಹವೀಜಕಾಳು’. ಇವನ್ನು ಬಿತ್ತುವ ವಿವಿಧ ಪದ್ಧತಿಗಳಿವೆ. ಕೆಲವರು ಅದನ್ನು ಚಪ್ಪಲಿಯಿಂದ ಅಥವಾ ಲಟ್ಟಣಿಗೆಯಿಂದ ಲಟ್ಟಿಸಿ ಎರಡು ಭಾಗ ಮಾಡಿ ಬಿತ್ತುತ್ತಾರೆ. ಇನ್ನೂ ಕೆಲವರು ಇಡೀ ಕಾಳನ್ನು ಬಿತ್ತುತ್ತಾರೆ. ಇನ್ನೂ ಕೆಲವರು ಭಾಗ ಮಾಡಿದ ಅಥವಾ ಇಡೀ ಕಾಳನ್ನು ೧೦ ರಿಂದ ೧೨ ಗಂಟೆ ನೀರಿನಲ್ಲಿ ನೆನೆಸಿ ನಂತರ ಬಿತ್ತುತ್ತಾರೆ, ಇನ್ನೂ ಕೆಲವರು ಒಣಕಾಳನ್ನು ಬಿತ್ತುತ್ತಾರೆ. ಯಾರಿಗೆ ಯಾವ ಪದ್ಧತಿಯಿಂದ ಯಶಸ್ಸು ದೊರೆಯುತ್ತದೆಯೋ, ಅದೇ ಅವರಿಗೆ ಸೂಕ್ತವಾದ ಪದ್ಧತಿಯಾಗಿರುತ್ತದೆ. ಅಂದರೆ ‘ಇದಕ್ಕಾಗಿ ಒಂದೇ ರೀತಿಯ ಪದ್ಧತಿ ಯೋಗ್ಯವಾಗಿದೆ’, ಎಂದೇನಿಲ್ಲ; ಆದರೆ ಸಾಮಾನ್ಯವಾಗಿ ಹವೀಜಕಾಳನ್ನು ಹಗುರವಾಗಿ ಎರಡು ಕೈಗಳಿಂದ ಉಜ್ಜಿ ಅಥವಾ ತಿಕ್ಕಿ ಅದರ ಎರಡು ಭಾಗ ಮಾಡಿ ಅದನ್ನು ಬಿತ್ತುತ್ತಾರೆ. ತಿಕ್ಕುವಾಗ ಬಹಳ ಶಕ್ತಿ ಉಪಯೋಗಿಸದೇ ಬೀಜಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು.

೧ ಆ. ಕೊತ್ತುಂಬರಿಯ ಬಿತ್ತನೆ

ಕೊತ್ತುಂಬರಿಯ ಬೇರುಗಳು ಮಣ್ಣಿನಲ್ಲಿ ಆಳವಾಗಿ ಹೋಗುವುದಿಲ್ಲ. ಆದುದರಿಂದ ೬ ಇಂಚು ಆಳವಾದ ಕುಂಡಗಳು ಅಥವಾ ಪೆಟ್ಟಿಗೆಯಂತಹದ್ದು ಏನಾದರೂ ಇದ್ದರೂ ಸಾಕಾಗುತ್ತದೆ. ಯಾವುದರಲ್ಲಿ ನೀವು ಕೊತ್ತುಂಬರಿಯನ್ನು ಬೆಳೆಸುವವರಿದ್ದಿರೋ,  ಅದರಲ್ಲಿ ಹೆಚ್ಚಿನ ನೀರು ಹರಿದು ಹೋಗಲು ಸರಿಯಾದ ಮಾರ್ಗ ಮಾಡಿಕೊಡಬೇಕು. ಮೇಲಿನಿಂದ ೨ ರಿಂದ ಎರಡೂವರೆ ಇಂಚು ಜಾಗವನ್ನು ಬಿಟ್ಟು, ಕುಂಡವನ್ನು ‘ಪಾಟಿಂಗ ಮಿಕ್ಸ್’ನಿಂದ (ಸಾವಯವ ಗೊಬ್ಬರವನ್ನು ಹಾಕಿರುವ ಮಣ್ಣು) ತುಂಬಿಕೊಳ್ಳಬೇಕು. (ಟಿಪ್ಪಣಿ) ಕುಂಡವನ್ನು ತುಂಬಿದ ಬಳಿಕ ಸ್ವಲ್ಪ ನೀರು ಹರಿದು ಹೋಗುವ ವರೆಗೆ ಎಲ್ಲ ಮಣ್ಣು ಒದ್ದೆ ಮಾಡಿಕೊಳ್ಳಬೇಕು. ಈ ಕುಂಡವನ್ನು ೧ ದಿನ ಹಾಗೆಯೇ ಇಡಬೇಕು. ಮರುದಿನ ಜಾಗರೂಕತೆಯಿಂದ ಎರಡು ಭಾಗ ಮಾಡಿರುವ ಕೊತ್ತುಂಬರಿ ಬೀಜಗಳನ್ನು ಸಮತಟ್ಟುಗೊಳಿಸಿರುವ ಮೇಲ್ಭಾಗದಲ್ಲಿ ವ್ಯವಸ್ಥಿತವಾಗಿ ಹರಡಬೇಕು. ಸಾಲಾಗಿ ಹಾಕುವುದಾದರೆ ಆ ಸಾಲುಗಳಲ್ಲಿ ಅಥವಾ ಎಲ್ಲ ಕುಂಡಗಳಲ್ಲಿ ಹೇಗೆ ಬೇಕೋ ಹಾಗೆ ಹರಡಬೇಕು. ಅದರ ಮೇಲೆ ಅರ್ಧದಿಂದ ಮುಕ್ಕಾಲು ಇಂಚಿನ ವರೆಗೆ ಪಾಟಿಂಗ ಮಿಕ್ಸ್‌ನ ಒಂದು ಪದರು ಹರಡಬೇಕು. ಬೀಜಗಳನ್ನು ಸಂಪೂರ್ಣವಾಗಿ ಮುಚ್ಚಬೇಕು. ಸಾಧ್ಯವಾದಷ್ಟು ನೀರನ್ನು ಹನಿಹನಿಯಾಗಿ ಚಿಮುಕಿಸಬೇಕು. ಬೀಜಗಳ ಮೇಲೆ ಹರಡಿರುವ  ಮಣ್ಣು ಅಲುಗಾಡಿ ಅದು ಹೊರಗೆ ಬೀಳದಂತೆ ಜಾಗ್ರತೆ ವಹಿಸಬೇಕು. ಮಣ್ಣು ನಿರಂತರವಾಗಿ ಒದ್ದೆಯಿರುವಂತೆ ಜಾಗರೂಕತೆ ವಹಿಸಬೇಕು. ಮಣ್ಣು ಒಣಗಿದೆ ಎಂದು ಅನಿಸಿದರೆ, ನೀರು ಹಾಕಬೇಕು. ಅದೂ ಕೂಡ ಹನಿಹನಿಯಾಗಿ ಹಾಕಬೇಕು. ಬೀಜ ಮೊಳಕೆಯೊಡೆದು ಹೊರಗೆ ಬರಲು ಸಮಯ ಬೇಕಾಗುತ್ತದೆ. ಕೆಲವೊಮ್ಮೆ ೧೫ ರಿಂದ ೨೦ ದಿನಗಳೂ ಬೇಕಾಗಬಹುದು. ಆಗ ನಿಧಾನವಾಗಿ ನೀರು ಹನಿಹನಿಯಾಗಿ ಚಿಮುಕಿಸಬೇಕು. ಈ ಕಾಲಾವಧಿಯಲ್ಲಿ ಕೇವಲ ಮಣ್ಣನ್ನು ಒದ್ದೆಯಿಡಬೇಕಾಗುತ್ತದೆ. ನೀರು ಹೆಚ್ಚಾಗದಂತೆ ನೋಡಬೇಕು.

(ಟಿಪ್ಪಣಿ – ‘ಪಾಟಿಂಗ ಮಿಕ್ಸ್’ ಬದಲಾಗಿ ಸಾವಯವ ಪದ್ಧತಿಯಿಂದ ಜೀವಾಮೃತವನ್ನು ಉಪಯೋಗಿಸಿ ತರಗೆಲೆಗಳನ್ನು ಕೊಳೆಸಿ ತಯಾರಿಸಿದ ಹ್ಯೂಮಸ ಕೂಡ (ಮಣ್ಣು) ಉಪಯೋಗಿಸಬಹುದು. – ಸಂಕಲನಕಾರರು)

೧ ಇ. ಮಳೆಗಾಲದಲ್ಲಿ ಸಸಿ ನೆಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

ಮಳೆ ಜಾಸ್ತಿಯಿರುವ ಕಾಲದಲ್ಲಿ ಕೊತ್ತುಂಬರಿ ಮೊಳಕೆಯೊಡೆಯಲು ಸಮಯ ಬೇಕಾಗುತ್ತದೆ. ಈ ಕಾಲಾವಧಿಯಲ್ಲಿ ಸೂರ್ಯನ ದರ್ಶನವಾಗುವುದಿಲ್ಲ ಮತ್ತು ಗಾಳಿಯೂ ಹೆಚ್ಚಿರುತ್ತದೆ. ಆದುದರಿಂದ ಸಸಿಗಳ ಬೇರು ನೆಲದೊಳಗೆ ಇಳಿದು ಬಂದರೂ, ಅವುಗಳು ಅಡ್ಡ ಬೀಳುತ್ತವೆ. ಆದುದರಿಂದ ಮಳೆಗಾಲದಲ್ಲಿ ಕೊತ್ತುಂಬರಿ ನೆಡಲು ಪ್ರಯತ್ನಿಸಲು ಅಡ್ಡಿಯೇನಿಲ್ಲ, ಆದರೆ ಪ್ರಯತ್ನದಲ್ಲಿ ವೈಫಲ್ಯ ಬಂದರೆ ಹಿಂಜರಿಯಬಾರದು ಮತ್ತು ಹವಾಮಾನ ಬದಲಾದರೆ ಅಥವಾ ಮಳೆ ಕಡಿಮೆಯಾದ ನಂತರ ಪುನಃ ಪ್ರಯತ್ನಿಸಬೇಕು.

೧ ಈ. ಸಸಿಯನ್ನು ನೆಟ್ಟ ನಂತರದ ಕ್ರಮ

ಮೊಳಕೆಯೊಡೆದ ಕೂಡಲೇ ನಿಯಮಿತವಾಗಿ ನೀರು ಸಿಂಪಡಿಸಬೇಕು. ‘ಪಾಟಿಂಗ ಮಿಕ್ಸ್’ನಲ್ಲಿ ಹಾಕಿರುವ ಗೊಬ್ಬರ ಸಾಕಾಗುತ್ತದೆ, ಆದರೆ ಬೇಕೆನಿಸಿದರೆ, ಕಂಪೋಸ್ಟ್ ಟಿ (ಒಂದು ರೀತಿಯ ಸಾವಯವ ಗೊಬ್ಬರ), ಜೀವಾಮೃತ ಇತ್ಯಾದಿ ಮತ್ತಿನ್ನೇನು ಸಾಧ್ಯವಿದೆಯೋ, ಅದನ್ನೆಲ್ಲ ಸಾಧ್ಯವಿದ್ದಷ್ಟು ದ್ರವರೂಪದಲ್ಲಿ ಕೊಡಬೇಕು. ಸೆಗಣಿ ಅಥವಾ ಸೆಗಣಿಯ ‘ಸ್ಲರಿ’ ಬೇಡ. ಮೊಳಕೆಯೊಡೆದು ಮೇಲೆ ಬಂದ ಮೇಲೆ ೩-೪ ವಾರಗಳಲ್ಲಿ ಕುಂಡವು ತುಂಬುವುದು. ಪ್ರತಿದಿನ ಬೇಕಾದಷ್ಟು ಕೊತ್ತುಂಬರಿಯನ್ನು ಚಿವುಟಿ ತೆಗೆದುಕೊಳ್ಳಬೇಕು. ಆಗ ಹೊಸ ಚಿಗುರು ಬರುತ್ತವೆ. ಹೀಗೆ ೩-೪ ಸಲ ಆದ ಬಳಿಕ ಹೂ ಬರುತ್ತವೆ. ಹೂ ಬರುತ್ತಿದ್ದರೆ, ಸಸಿಗಳಿಗೆ ಅವುಗಳ ಜೀವನಕಾಲ ಪೂರ್ಣಗೊಳಿಸಲು ಬಿಡಬೇಕು. ಹೂಗಳಿಂದಲೇ ಹಣ್ಣು, ಅಂದರೆ ಹವೀಜ ಸಿದ್ಧವಾಗುತ್ತದೆ. ಪೂರ್ಣ ಸಿದ್ಧಗೊಂಡ ಬೀಜಗಳನ್ನು ಮುಂದೆ ಸಸಿ ಮಾಡಲು ಸ್ವಲ್ಪ ಇಟ್ಟುಕೊಂಡು ಉಳಿದವುಗಳನ್ನು ಅಡುಗೆಗೆ ಪ್ರತಿದಿನ ಉಪಯೋಗಿಸಬಹುದು. ಬಳಿಕ ಎಲ್ಲ ಸಸಿಗಳನ್ನು ತೆಗೆದು ಕಂಪೋಸ್ಟನಲ್ಲಿ ಹಾಕಬೇಕು. ಮಣ್ಣನ್ನು ವ್ಯವಸ್ಥಿತವಾಗಿ ಬಿಡಿಸಿಕೊಳ್ಳಬೇಕು. ೨-೩ ದಿನ ಹಾಗೆಯೇ ಇಟ್ಟು, ಬಳಿಕವೇ ಉಪಯೋಗಿಸಬೇಕು. ಆದರೆ ಪುನಃ ಅದೇ ಮಣ್ಣಿನಲ್ಲಿ ಕೊತ್ತುಂಬರಿಯನ್ನು ಬೆಳೆಸಬಾರದು. ಕೊತ್ತುಂಬರಿಗೆ ಹುಳವಾಗುವುದಿಲ್ಲ. ಆದುದರಿಂದ ಕೀಟನಾಶಕ ಸಿಂಪಡಣೆಯ ಅವಶ್ಯಕತೆಯಿರುವುದಿಲ್ಲ.

೨. ಪುದೀನಾ

೨ ಅ. ಎಲ್ಲಕ್ಕಿಂತ ಸುಲಭವಾಗಿರುವ ಪುದೀನ ಕೃಷಿ

ಪುದೀನದಂತಹ ಸುಲಭವಾದ ಬೆಳೆ ಮತ್ತೊಂದಿಲ್ಲ! ಕುಂಡದಲ್ಲಿ ಈ ಬೆಳೆಯನ್ನು ತೆಗೆಯುವುದು ಅತ್ಯಂತ ಸುಲಭ. ನಾನು ಹೇಳುವುದೇನೆಂದರೆ, ಈ ಕೆಲಸವನ್ನು ಮನೆಯ ಚಿಕ್ಕಮಕ್ಕಳಿಗೆ ಕೊಡಬೇಕು. ಇದರಿಂದ ಅವರಲ್ಲಿ  ಕೈದೋಟ ಮಾಡುವುದರಲ್ಲಿ ಆಸಕ್ತಿ ಮೂಡುವುದು. ಪುದೀನ ಬೆಳೆಯಲ್ಲಿ ಯಶಸ್ಸು ಸಿಗುವ ಸಾಧ್ಯತೆ ಶೇ. ೯೯ ಕ್ಕಿಂತ ಅಧಿಕವಿದೆ. ಇದರ ಪರಿಣಾಮ ೯ ರಿಂದ ೧೦ ದಿನಗಳಲ್ಲಿಯೇ ಕಂಡು ಬರುತ್ತದೆ.

೨ ಆ. ಪುದೀನ ಬೆಳೆಯಲು ಸರಿಯಾದ ಕಡ್ಡಿಗಳನ್ನು ಆಯ್ಕೆ ಮಾಡುವುದು

ಪುದೀನ ಬೀಜಗಳು ಸಸ್ಯಪಾಲನ ಕೇಂದ್ರದಲ್ಲಿ ದೊರೆಯುತ್ತಿದ್ದರೂ, ಅದನ್ನು ಖರೀದಿಸುವ ಅಗತ್ಯವಿಲ್ಲ. ಮಾರುಕಟ್ಟೆಯಿಂದ ನಾವು  ತರುವ ಪುದೀನ ಕಟ್ಟಿನಿಂದಲೇ ಬಾಲ್‌ಪೆನ್‌ನ ರಿಫಿಲ್‌ನಷ್ಟು ದಪ್ಪನೆಯ ಕಡ್ಡಿಯನ್ನು ಅಥವಾ ಊದುಬತ್ತಿಯಷ್ಟು ದಪ್ಪನೆಯ ಮಣ್ಣಿನ ಬಣ್ಣದ ಕಡ್ಡಿಗಳನ್ನು ಬೇರೆ ತೆಗೆದಿಡಬೇಕು. ಅದರ ದೊಡ್ಡ ಎಲೆಯನ್ನು ತೆಗೆದು ಹಾಕಬೇಕು. ಇಂತಹ ಕಡ್ಡಿಗಳಲ್ಲಿ ಸಾಮಾನ್ಯವಾಗಿ  ಕೆಳಗಿನ ಎಲೆಗಳು ಬಲಿತಿರುತ್ತವೆ. ಕೆಲವೊಮ್ಮೆ ಮಾತ್ರ ಹುಳ ಹತ್ತಿದಾಗ ಎಲೆಗಳ ಮೇಲೆ ತೂತಾಗಿರುತ್ತವೆ. ಇಂತಹ ಎಲೆಗಳನ್ನು ತೆಗೆದು ಹಾಕಬೇಕು. ತುದಿಯಲ್ಲಿರುವ ಚಿಗುರೆಲೆಗಳನ್ನು ಹಾಗೆಯೇ ಇಡಬೇಕು.

೨ ಇ. ಪುದೀನ ಬಿತ್ತನೆಯ ೨ ಪರ್ಯಾಯಗಳು

ಈಗ ಎರಡು ಪರ್ಯಾಯಗಳು ನಮ್ಮ ಮುಂದಿವೆ.

ಮೊದಲನೇ ಪದ್ಧತಿಯಲ್ಲಿ ಈ ಕಡ್ಡಿಗಳನ್ನು ಒಂದು ಲೋಟ ನೀರಿನಲ್ಲಿ ಇಟ್ಟು ಬಿಸಿಲು ತಾಗದಂತೆ, ಆದರೆ ಸೂರ್ಯಪ್ರಕಾಶ ಸಿಗುವಂತಹ ಸ್ಥಳದಲ್ಲಿ ಇಡಬೇಕು. ಒಂದು ದಿನ ಬಿಟ್ಟು ನೀರನ್ನು ಬದಲಾಯಿಸಬೇಕು. ಕಡ್ಡಿಗಳನ್ನು ಸಾಧ್ಯವಾದಷ್ಟು ಧಕ್ಕೆಯಾಗದಂತೆ, ಅಂದರೆ ಕಡ್ಡಿಗಳ ಬುಡವನ್ನು ಕೈಯಲ್ಲಿ ಹಿಡಿದು ಲೋಟವನ್ನು ಅಡ್ಡ ಮಾಡಿ ನೀರನ್ನು ಸುರಿಯಬೇಕು ಮತ್ತು ಹಗುರವಾಗಿ ಕೈಯಿಂದ ಲೋಟದಲ್ಲಿ ಪುನಃ ನೀರನ್ನು ಹಾಕಬೇಕು. ೫-೬ ದಿನಗಳಲ್ಲಿ ಕಡ್ಡಿಗಳ ತುದಿಯಲ್ಲಿ ಪುಟ್ಟದಾದ ಎಲೆಗಳು ಕಂಡು ಬರುತ್ತದೆ ಮತ್ತು ಲೋಟದಲ್ಲಿರುವ ಬುಡದಲ್ಲಿ ಚಿಕ್ಕ ಬಿಳಿಯ ಬೇರುಗಳು ಕಂಡು ಬರಬಹುದು. ಈ ಚಿಕ್ಕ ಸಸಿಗಳನ್ನು ಕುಂಡದಲ್ಲಿ ನೆಡಬೇಕು.

ಇನ್ನೊಂದು ಪರ್ಯಾಯವೆಂದರೆ ಆರಿಸಿ ಪಕ್ಕಕ್ಕೆ ತೆಗೆದಿರಿಸಿರುವ ಕಡ್ಡಿಗಳನ್ನು ನೇರವಾಗಿ ಮಣ್ಣಿನಲ್ಲಿ ನೆಡಬೇಕು. ಉಳಿದ ಕೆಲಸವನ್ನು ಕಡ್ಡಿ ಮತ್ತು ಮಣ್ಣು ಪರಸ್ಪರರ ಸಹಾಯದಿಂದ ಮಾಡಿಕೊಳ್ಳುತ್ತವೆ.

೨ ಈ. ಕುಂಡದ ಯೋಗ್ಯ ಆಕಾರ

ಪುದೀನದ ಸಸಿಗಳ ಬುಡ ಬಹಳ ಆಳದವರೆಗೆ ಹೋಗುವುದಿಲ್ಲ. ಇದರಿಂದ ಸಾಧಾರಣ ೬ ಇಂಚು ಆಳವಾದ ಕುಂಡ ಸಾಕಾಗುತ್ತದೆ. ಪುದೀನ ಮಳೆಗಾಲದಲ್ಲಿ ಅಂಗಳದಲ್ಲಿ ಬೆಳೆಯುವ ಹುಲ್ಲಿನಂತೆ ಅಡ್ಡ ಬೆಳೆಯುವುದರಿಂದ ಕುಂಡವು ಅಗಲವಾಗಿದ್ದರೆ ಯಾವಾಗಲೂ ಒಳ್ಳೆಯದು. ಇದರಿಂದ ಕುಂಡದ ಬದಲಾಗಿ ಅಗಲವಾದ ಟಬ್ ಇತ್ಯಾದಿ ಉಪಯೋಗಿಸಿದರೆ ಒಳ್ಳೆಯದು.

೨ ಉ. ಕುಂಡದಲ್ಲಿ ಕಡ್ಡಿಗಳನ್ನು ನೆಡುವ ಪದ್ಧತಿ

ಕುಂಡದಲ್ಲಿ ಎಂದಿನಂತೆ ‘ಪಾಟಿಂಗ ಮಿಕ್ಸ್’ ತುಂಬಿ ಸಮರ್ಪಕವಾಗಿ ಒದ್ದೆ ಮಾಡಬೇಕು. ಇದರಲ್ಲಿ ಬೇರು ಬಂದಿರುವ ಕಡ್ಡಿಗಳನ್ನು ಅಥವಾ ಬೇರೆ ಪರ್ಯಾಯವನ್ನು ಆಯ್ಕೆ ಮಾಡುವವರಿದ್ದರೆ ಬೆರಳಿನಿಂದ ಗುಂಡಿ ಮಾಡಿ ಅದರಲ್ಲಿ ಕಡ್ಡಿಗಳನ್ನು ನೆಡಬೇಕು. ಚಿಗುರು ಅಧಿಕ ಮತ್ತು ಬೇಗ ಬರಲು ಮಣ್ಣಿನ ಮಟ್ಟದಿಂದ ೪೫ ಡಿಗ್ರಿ ಅಂಶದ ಕೋನದಲ್ಲಿ ಅಡ್ಡವಾಗಿ ನೆಡಬೇಕು. ಇಂತಹ ಸಂದರ್ಭದಲ್ಲಿ ಅರ್ಧ ಭಾಗ ಮಣ್ಣಿನಲ್ಲಿ ಹೋಗುವಂತಿರಬೇಕು. ಹೀಗೆ ಮಾಡುವುದರಿಂದ ಬಹಳ ಬೇರುಗಳು ಬಂದು ಹೆಚ್ಚು ಎಲೆಗಳು ಬರುತ್ತವೆ ಮತ್ತು ಪರ್ಯಾಯವಾಗಿ ಪುದೀನ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ.

೨ ಊ. ನೀರು ಮತ್ತು ಇತರ ಆವಶ್ಯಕತೆಗಳು

ಮಣ್ಣು ಒಣಗಿದೆ ಎಂದು ಅನಿಸಿದ ಕೂಡಲೇ ‘ಸ್ಪ್ರೇ’ ಉಪಯೋಗಿಸಿ ನೀರನ್ನು ಸಿಂಪಡಿಸುತ್ತಿರಬೇಕು.

ಸಾಧಾರಣವಾಗಿ ೧ ರಿಂದ ಒಂದೂಕಾಲು ತಿಂಗಳಿನಲ್ಲಿ ಕುಂಡವು ಪುದೀನದಿಂದ ತುಂಬಿ ಹೋಗುವುದು. ನಮ್ಮ ಆವಶ್ಯಕತೆಗನುಸಾರ ಪುದೀನ ಎಲೆಗಳನ್ನು ಮುರಿದುಕೊಳ್ಳಬೇಕು. ಸಾಧ್ಯವಾಗುತ್ತಿದ್ದರೆ, ಮೇಲಿನ ತುದಿಯನ್ನು ಕೂಡ ಕೊಯ್ಯಬೇಕು. ಹಾಗೆ ಮಾಡುವುದರಿಂದ ಹೊಸ ಹೊಸ ಚಿಗುರು ಒಡೆಯುತ್ತಿರುತ್ತದೆ.

– ಶ್ರೀ. ರಾಜನ ಲೋಹಗಾಂವಕರ

1 thought on “ಮನೆಯಲ್ಲೇ ಕೊತ್ತುಂಬರಿ ಮತ್ತು ಪುದೀನ ಬೆಳೆಸಿ !”

Leave a Comment