ವ್ಯಕ್ತಿಯ ಮನಃಸ್ಥಿತಿ ಮತ್ತು ನಕಾರಾತ್ಮಕ ವಿಚಾರಗಳೊಂದಿಗೆ ಹೋರಾಡುವ ಕ್ಷಮತೆ ಇವುಗಳ ಮೇಲೆ ಆಧ್ಯಾತ್ಮಿಕ ಗುಣಗಳಿಂದಾಗುವ ಪರಿಣಾಮಗಳು

ದಿನವಿಡೀ ನಮ್ಮ ಮನಸ್ಸಿನ ಸ್ಥಿತಿಯು ಒಂದೇ ರೀತಿಯಲ್ಲಿರುವುದಿಲ್ಲ. ದೈನಂದಿನ ಜೀವನದಲ್ಲಿ ಘಟಿಸುವ ಪ್ರಸಂಗಗಳಿಗನುಸಾರ ನಮ್ಮ ಮನಸ್ಸಿನ ಸ್ಥಿತಿಯು ಬದಲಾಗುತ್ತಿರುತ್ತದೆ. ಬಾಹ್ಯ ಕಾರಣಗಳಿಂದ ಹೆಚ್ಚಾಗುವ ಮನಸ್ಸಿನ ಮೇಲಿನ ಒತ್ತಡ, ವ್ಯಕ್ತಿತ್ವದಲ್ಲಾಗುವ ಬದಲಾವಣೆ ಮತ್ತು ಸ್ವಭಾವವನ್ನು ಬದಲಾಯಿಸಲು ಉಂಟಾಗುವ ಮಾನಸಿಕ ವಿರೋಧಗಳಿಂದಾಗಿ ನಮ್ಮ ಮನಸ್ಸಿನ ಸ್ಥಿತಿಯಲ್ಲಿ ಏರಿಳಿತಗಳು ಬರುತ್ತಿರುತ್ತವೆ. ಆಶೆ-ನಿರಾಶೆ ಮತ್ತು ಉತ್ಸಾಹ-ನಿರುತ್ಸಾಹ ಇವು ಈ ಏರಿಳಿತದ ಲಕ್ಷಣಗಳಾಗಿವೆ. ಮನಸ್ಸಿನ ಏರಿಳಿತಗಳಿಂದ ಒತ್ತಡವನ್ನು ಸಹಿಸಿಕೊಳ್ಳುವ ಮನಸ್ಸಿನ ಕ್ಷಮತೆಯು ಕಡಿಮೆಯಾದರೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯಲ್ಲಿನ ಆರಂಭಿಕ ಹಂತದಲ್ಲಿ ಪ್ರತಿಕೂಲ ಪ್ರಸಂಗಗಳು ಘಟಿಸಿದರೆ ಸ್ವಭಾವದೋಷಗಳು ಹೆಚ್ಚು ಉಕ್ಕಿಬಂದಂತೆ ಅನಿಸುತ್ತವೆ. ಆದುದರಿಂದ ಪ್ರಕ್ರಿಯೆಯು ಎರಡು-ಮೂರು ಹೆಜ್ಜೆ ಮುಂದೆ ಮತ್ತು ಒಂದು ಹೆಜ್ಜೆ ಹಿಂದೆ ಹೀಗೆ ನಡೆದಿರುತ್ತದೆ. ಇಂತಹ ಸಮಯದಲ್ಲಿ ಹತಾಶರಾಗುವ ಬದಲು ಜಿಗುಟುತನದಿಂದ ಮತ್ತು ನಿಯಮಿತವಾಗಿ ಸೂಚನಾಸತ್ರಗಳನ್ನು ಮಾಡುವುದರೊಂದಿಗೆ ಪ್ರಕ್ರಿಯೆಗೆ ಆಧ್ಯಾತ್ಮಿಕ ಪ್ರಯತ್ನಗಳನ್ನು ಜೋಡಿಸಿದರೆ ಕೆಲವು ದಿನಗಳಲ್ಲಿ ದೋಷಗಳು ಉಕ್ಕಿಬರುವ ಪ್ರಮಾಣವು ಕಡಿಮೆಯಾಗುತ್ತದೆ.

೧.  ಮನಸ್ಸಿನ ಸಾಮಾನ್ಯ ಸ್ಥಿತಿ

ಅಂತರ್ಮನಸ್ಸಿನಲ್ಲಿರುವ (ಚಿತ್ತದಲ್ಲಿನ) ಸಂಸ್ಕಾರ ಕೇಂದ್ರಗಳಿಂದ ಬರುವ ಸಂವೇದನೆಗಳಿಗನುಸಾರ ಮನಸ್ಸಿನಲ್ಲಿ ವಿಚಾರಲಹರಿಗಳು ಉತ್ಪನ್ನವಾಗುತ್ತವೆ. ಈ ವಿಚಾರಲಹರಿಗಳ ಸ್ವರೂಪಕ್ಕನುಸಾರ ಪರಿಣಾಮವು ನಿಶ್ಚಿತವಾಗುತ್ತದೆ. ಮನಸ್ಸಿನ ಸಾಮಾನ್ಯ ಸ್ಥಿತಿಯಲ್ಲಿ ಬಾಹ್ಯಮನಸ್ಸಿನಿಂದ ನಕಾರಾತ್ಮಕ ಸಂವೇದನೆಯು ಅಂತರ್ಮನಸ್ಸಿನಲ್ಲಿ ಬಂದ ನಂತರ, ಒಂದು ನಕಾರಾತ್ಮಕ ವಿಚಾರವು ನಿರ್ಮಾಣವಾಗುತ್ತದೆ. ಆ ಸಂವೇದನೆಯಿಂದ ಅಂತರ್ಮನಸ್ಸಿನಲ್ಲಿನ ಸಂಸ್ಕಾರ ಕೇಂದ್ರದಲ್ಲಿನ ಸ್ವಭಾವದೋಷದ ಸಂಸ್ಕಾರಕ್ಕನುಸಾರ ನಕಾರಾತ್ಮಕ ವಿಚಾರವು ಉತ್ಪನ್ನವಾಗುತ್ತದೆ. ಅನಂತರ ಅಂತರ್ಮನಸ್ಸಿನಲ್ಲಿನ ಸಂಸ್ಕಾರದ ತೀವ್ರತೆಗನುಸಾರ ನಕಾರಾತ್ಮಕ ವಿಚಾರಗಳ ಸರಣಿಯೇ ಪ್ರಾರಂಭವಾಗುತ್ತದೆ. ಬಾಹ್ಯ ಮನಸ್ಸಿನಿಂದ ಅಂತರ್ಮನದೆಡೆಗೆ ಬರುವ ನಕಾರಾತ್ಮಕ ಸಂವೇದನೆಯಿಂದ ನಕಾರಾತ್ಮಕ ವಿಚಾರವು ಉತ್ಪನ್ನವಾಗುವುದು, ಬಳಿಕ ಇಂತಹ ವಿಚಾರಗಳ ಸರಣಿಯು ತಯಾರಾಗುವುದು, ಇದು ಅಂತರ್ಮನದಲ್ಲಿನ ಸಂಸ್ಕಾರಕೇಂದ್ರದಿಂದ ಬರುವ ಸಂವೇದನೆಯ ಮೇಲೆ ಅವಲಂಬಿಸಿರುತ್ತದೆ. ಆ ವಿಚಾರದೊಂದಿಗೆ ಹೋರಾಡಿ ಈ ಸರಣಿಯನ್ನು ತಡೆಗಟ್ಟಲು ಮನಸ್ಸಿನ ಶಕ್ತಿಯು ಖರ್ಚಾಗುತ್ತದೆ. ಇದರಿಂದ ನಿರುತ್ಸಾಹ ಮತ್ತು ನಿರಾಶೆಯಂತಹ ಪರಿಣಾಮಗಳು ಕಂಡುಬರುತ್ತವೆ.

ವ್ಯಕ್ತಿಯ ಮನಃಸ್ಥಿತಿಯು ಚೆನ್ನಾಗಿಲ್ಲದಿದ್ದರೆ, ನಕಾರಾತ್ಮಕ ವಿಚಾರಗಳ ತೀವ್ರತೆ ಮತ್ತು ಅವುಗಳಿಂದ ಮನಸ್ಸಿನ ಮೇಲಾಗುವ ಪರಿಣಾಮವು ಕಡಿಮೆಯಾಗಲು ಬಹಳ ಸಮಯ ತಗಲುತ್ತದೆ.

೨.  ಕ್ಷಾತ್ರವೃತ್ತಿ ಜಾಗೃತವಾಗಿರುವಾಗಿನ ಮನಃಸ್ಥಿತಿ

ನಕಾರಾತ್ಮಕ ಸಂವೇದನೆಯು ಬಾಹ್ಯಮನಸ್ಸಿನಿಂದ ಅಂತರ್ಮನಸ್ಸಿನಲ್ಲಿ ಬಂದೊಡನೆ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರವು ಉತ್ಪನ್ನವಾದರೆ, ಕ್ಷಾತ್ರವೃತ್ತಿ ಜಾಗೃತವಾಗಿದ್ದಲ್ಲಿ ಬುದ್ಧಿಯ ದೃಢನಿಶ್ಚಯದಿಂದಾಗಿ ನಿರ್ಮಾಣವಾಗುವ ಸಕಾರಾತ್ಮಕ ವಿಚಾರದಿಂದ ಆ ನಕಾರಾತ್ಮಕ ವಿಚಾರದ ಜೊತೆಗೆ ಹೋರಾಡಿ ನಕಾರಾತ್ಮಕ ವಿಚಾರದ ಮುಂದಿನ ಸರಣಿಯನ್ನು ಕೂಡಲೇ ತಡೆಗಟ್ಟಬಹುದು. ಇದರಿಂದ ‘ಕ್ಷಾತ್ರವೃತ್ತಿ’ ಜಾಗೃತವಾಗಿರುವಾಗಿನ ಮನಸ್ಸಿನ ತುಲನೆಯನ್ನು ಸಾಮಾನ್ಯ ಮನಸ್ಸಿನ ಸ್ಥಿತಿಗೆ ತುಲನೆ ಮಾಡಿದರೆ ‘ಕ್ಷಾತ್ರವೃತ್ತಿ’ ಜಾಗೃತವಾಗಿರುವಾಗ ಖರ್ಚಾಗುವ ಮನಸ್ಸಿನ ಶಕ್ತಿಯು ಹೆಚ್ಚಿನಂಶ ಉಳಿತಾಯವಾಗುತ್ತದೆ. ಹಾಗೆಯೇ ಪ್ರತಿಕೂಲ ಪ್ರಸಂಗಗಳಿಂದ ಮನಸ್ಸಿನ ಮೇಲಾಗುವ ಪರಿಣಾಮವು ಕೂಡಲೇ ಕಡಿಮೆಯಾಗಿ ಮನಃಸ್ಥಿತಿಯು ಸುಧಾರಣೆಯಾಗಲು ಸಹಾಯವಾಗುತ್ತದೆ.

೩.  ಭಾವಜಾಗೃತವಾಗಿರುವಾಗಿನ ಮನಃಸ್ಥಿತಿ

ಈ ಸ್ಥಿತಿಯಲ್ಲಿ ಈಶ್ವರನ ಬಗೆಗಿನ ವಿಚಾರ ಅಥವಾ ಸಕಾರಾತ್ಮಕ ವಿಚಾರವು ಅಂತರ್ಮನದಲ್ಲಿರುವುದರಿಂದ ಬಾಹ್ಯ ಕಾರಣಗಳಿಂದ ನಕಾರಾತ್ಮಕ ಸಂವೇದನೆಯು ಬಾಹ್ಯ ಮನಸ್ಸಿನಲ್ಲಿ ಬಂದರೂ, ಅದು ಬಾಹ್ಯಮನಸ್ಸಿನಿಂದ ಅಂತರ್ಮನದಲ್ಲಿ ಪ್ರವೇಶಿಸಲಾರದು. ಇದರಿಂದ ಅಂತರ್ಮನದಲ್ಲಿನ ಸಂಸ್ಕಾರಕೇಂದ್ರದಲ್ಲಿರುವ ಸ್ವಭಾವದೋಷದ ಸಂಸ್ಕಾರಕ್ಕನುಸಾರ ನಕಾರಾತ್ಮಕ ವಿಚಾರವು ಉತ್ಪನ್ನವಾಗುವುದನ್ನು ಮತ್ತು ಮುಂದೆ ಇಂತಹ ವಿಚಾರಗಳ ಸರಣಿಯು ನಿರ್ಮಾಣವಾಗುವುದನ್ನು ತಡೆಗಟ್ಟಬಹುದು. ಇದರಿಂದ ಮನಃಸ್ಥಿತಿಯ ಮೇಲೆ ನಕಾರಾತ್ಮಕ ವಿಚಾರಗಳ ದುಷ್ಪರಿಣಾಮವಾಗಬಾರದೆಂದು ಇಂತಹ ವಿಚಾರಗಳ ಸರಣಿಯನ್ನು ತಡೆಗಟ್ಟಲು ಖರ್ಚಾಗುವ ಮನಸ್ಸಿನ ಶಕ್ತಿಯು ತಾನಾಗಿಯೇ ಉಳಿಯುತ್ತದೆ.

೪.  ಅಹಂ ಜಾಗೃತವಿಲ್ಲದಿರುವಾಗಿನ ಮನಃಸ್ಥಿತಿ

ಈ ಸ್ಥಿತಿಯಲ್ಲಿ ಸ್ವಂತದ ಅಸ್ತಿತ್ವದ ಅರಿವು ಕಡಿಮೆಯಿರುವುದರಿಂದ ಅಥವಾ ಈಶ್ವರನ ಬಗ್ಗೆ ವ್ಯಾಪಕ ಅರಿವಿರುವುದರಿಂದ ನಕಾರಾತ್ಮಕ ಸಂವೇದನೆಯು ಬಾಹ್ಯಮನಸ್ಸಿನಲ್ಲಿಯೂ ಸಹ ಪ್ರವೇಶಿಸಲಾರದು. ಈ ಸ್ಥಿತಿಯಲ್ಲಿ ಭಾವವು ಸತತವಾಗಿ ಜಾಗೃತವಾಗಿರುವುದರಿಂದ ಅಥವಾ ಭಾವಾವಸ್ಥೆಯು ಉಳಿಯುವ ಕಾಲಾವಧಿಯು ಹೆಚ್ಚಿರುವುದರಿಂದ ಅಂತರ್ಮನದಿಂದ ‘ಈಶ್ವರನ’ ಬಗ್ಗೆ ಮತ್ತು ಸಕಾರಾತ್ಮಕ ಸಂವೇದನೆಗಳು ಬರುವ ಪ್ರಮಾಣವು ಹೆಚ್ಚಿರುತ್ತದೆ. ಆದುದರಿಂದ ಈ ಸ್ಥಿತಿಯಲ್ಲಿಯೂ ಸಹ ನಕಾರಾತ್ಮಕ ವಿಚಾರಗಳನ್ನು ಎದುರಿಸಲು ಖರ್ಚಾಗುವ ಮನಸ್ಸಿನ ಶಕ್ತಿ ಮತ್ತು ಸಮಯವನ್ನು ಉಳಿಸಲು ಸಹಾಯವಾಗುತ್ತದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಭಾವದೋಷ ನಿರ್ಮೂಲನೆಗಾಗಿ ಆಧ್ಯಾತ್ಮಿಕ ಸ್ತರದಲ್ಲಿನ ಪ್ರಯತ್ನ’ ಗ್ರಂಥ)

1 thought on “ವ್ಯಕ್ತಿಯ ಮನಃಸ್ಥಿತಿ ಮತ್ತು ನಕಾರಾತ್ಮಕ ವಿಚಾರಗಳೊಂದಿಗೆ ಹೋರಾಡುವ ಕ್ಷಮತೆ ಇವುಗಳ ಮೇಲೆ ಆಧ್ಯಾತ್ಮಿಕ ಗುಣಗಳಿಂದಾಗುವ ಪರಿಣಾಮಗಳು”

Leave a Comment