ಸತ್ಯನಾರಾಯಣ ಕಥೆಯ ಉಗಮ ಕ್ಷೇತ್ರವಾಗಿರುವ ‘ನೈಮಿಷಾರಣ್ಯ’ ಈ ತೀರ್ಥಕ್ಷೇತ್ರದ ಮಹಾತ್ಮೆ !

ಮೊಟ್ಟಮೊದಲು ಸತ್ಯನಾರಾಯಣನ ಕಥೆಯನ್ನು ಶ್ರೀಮಹಾವಿಷ್ಣುವು ನಾರದ ಮಹರ್ಷಿಗಳಿಗೆ ಹೇಳಿದ್ದರು. ದ್ವಾಪರಯುಗದ ಕೊನೆಯಲ್ಲಿ ಶೌನಕಾದಿ ಎಲ್ಲ ಋಷಿ-ಮುನಿಗಳು ‘ಮುಂಬರುವ ಭೀಕರ ಕಲಿಯುಗದಲ್ಲಿ ಮನುಷ್ಯನಿಗೆ ಉಪಾಯವೆಂದು ಯಾವ ವ್ರತ ಮಾಡಬೇಕು ?’ ಎಂದು ಸೂತಋಷಿಗಳಿಗೆ ಕೇಳುತ್ತಾರೆ. ಆಗ ಸೂತಋಷಿಗಳು ‘ನೈಮಿಷಾರಣ್ಯ’ ಕ್ಷೇತ್ರದಲ್ಲಿ ‘ಸತ್ಯನಾರಾಯಣನ ವ್ರತ’ವನ್ನು ಹೇಳಿ ಅದರ ಕಥೆಯನ್ನೂ ಹೇಳುತ್ತಾರೆ. ಇಂತಹ ಪವಿತ್ರ ನೈಮಿಷಾರಣ್ಯ ಕ್ಷೇತ್ರದ ಮಹಾತ್ಮೆಯನ್ನು ಮುಂದೆ ಕೊಡಲಾಗಿದೆ. 

ಯಾವ ಸ್ಥಳದಲ್ಲಿ ಬ್ರಹ್ಮದೇವನ ಚಕ್ರವು ಅಪ್ಪಳಿಸಿ ನೀರು ಚಿಮ್ಮಿತೋ, ಅದೇ ಈ ಚಕ್ರತೀರ್ಥ

೧. ಸ್ಥಳ ಮತ್ತು ಮಹತ್ವ

ನೈಮಿಷಾರಣ್ಯವು ಉತ್ತರಪ್ರದೇಶ ರಾಜ್ಯದ ರಾಜಧಾನಿಯಾದ ಲಕ್ಷ್ಮಣಪುರಿ (ಲಖನೌ)ಯಿಂದ ೯೦ ಕಿ.ಮೀ. ದೂರದಲ್ಲಿರುವ ಸೀತಾಪೂರ ಜಲ್ಲೆಯಲ್ಲಿದೆ. ಅದು ಗಂಗಾನದಿಯ ಉಪನದಿಯಾಗಿರುವ ಗೋಮತಿ ನದಿಯ ಎಡ ತೀರದಲ್ಲಿದೆ. ನೈಮಿಷಾರಣ್ಯಕ್ಕೆ ‘ನೀಮಸಾರ’ ಅಥವಾ ‘ನೈಮಿಷಾ’ ಎಂದೂ ಕರೆಯುತ್ತಾರೆ. ನೈಮಿಷಾರಣ್ಯವು ಸತ್ಯಯುಗದಲ್ಲಿನ ತೀರ್ಥಕ್ಷೇತ್ರವಾಗಿದ್ದು ಪೃಥ್ವಿಯ ಮೊಟ್ಟಮೊದಲ ತೀರ್ಥಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ನಿತ್ಯ ೩೩ ಕೋಟಿ ದೇವತೆಗಳ ಮತ್ತು ೮೮ ಸಾವಿರ ಋಷಿ-ಮುನಿಗಳ ವಾಸವಿರುತ್ತದೆ. ಆದ್ದರಿಂದ ಇದು ಎಲ್ಲಕ್ಕಿಂತ ಪವಿತ್ರ ಸ್ಥಾನವೆಂದು ತಿಳಿಯಲಾಗಿದೆ. ಈ ಸ್ಥಳದಲ್ಲಿ ಮಾಡಿದ ಪ್ರತಿಯೊಂದು ಕರ್ಮಗಳು ಫಲಪ್ರದವಾಗುತ್ತವೆ.

೨. ‘ನೈಮಿಷಾರಣ್ಯ’ ಹೆಸರಿನ ಇತಿಹಾಸ

ನೈಮಿಷಾರಣ್ಯಕ್ಕೆ ‘ನೇಮಿಷಾರಣ್ಯ’, ಎಂದೂ ಕರೆಯುತ್ತಾರೆ. ‘ನೇಮಿ’ ಅಂದರೆ ಚಕ್ರದ (ಅಂಚು) ತುದಿ. ಈ ಸ್ಥಳದಲ್ಲಿ ಬ್ರಹ್ಮನ ‘ಮನೋಮಯ’ ಚಕ್ರವು ಅಪ್ಪಳಿಸಿತ್ತು. ಪೃಥ್ವಿಯ ಮೇಲೆ ಯಾವ ಸ್ಥಳದಲ್ಲಿ ಈ ಚಕ್ರವು ಬಿದ್ದಿತೋ, ಆ ಸ್ಥಳವೆಂದರೆ ‘ನೈಮಿಷಾರಣ್ಯ !’ ಯಾವ ಸ್ಥಳದಲ್ಲಿ ಚಕ್ರದ ತುದಿ ಭೂಮಿಯ ಮೇಲೆ ಅಪ್ಪಳಿಸಿತು, ಆ ಸ್ಥಳವು ‘ಚಕ್ರತೀರ್ಥ (ಚಕ್ರದ ಆಕಾರದಲ್ಲಿರುವ ತೀರ್ಥಕ್ಷೇತ್ರ)’ ಎಂಬ ಹೆಸರಿನಿಂದ ಮತ್ತು ಅದರ ಸುತ್ತಮುತ್ತಲಿರುವ ಅರಣ್ಯವು ‘ನೈಮಿಷಾರಣ್ಯ’ ವೆಂದು ಪ್ರಸಿದ್ಧವಾಯಿತು.

೨ ಅ. ನೈಮಿಷಾರಣ್ಯ ಕ್ಷೇತ್ರದಲ್ಲಾದ ಚಕ್ರತೀರ್ಥದ ನಿರ್ಮಾಣ : ವಿಶ್ವದ ಉತ್ಪತ್ತಿಯಾದನಂತರ ಎಲ್ಲ ಋಷಿಮುನಿಗಳು ಬ್ರಹ್ಮದೇವನ ಬಳಿಗೆ ಹೋದರು ಮತ್ತು ಅವರು ‘ಎಲ್ಲ ಪಾಪಗಳಿಂದ ಮುಕ್ತರಾಗುವುದು, ನಿರಂತರ ಸಾಧನೆ ಮಾಡುವುದು, ಜ್ಞಾನಪ್ರಾಪ್ತಿ ಮಾಡಿಕೊಳ್ಳುವುದು ಇವುಗಳಿಗಾಗಿ, ಹಾಗೆಯೇ ಸಂಪೂರ್ಣ ಮನುಕುಲದ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ವಿಧಿ ಮಾಡಲು ಯೋಗ್ಯ ಸ್ಥಳ ಯಾವುದಿದೆ ?’ ಅದನ್ನು ಹೇಳಬೇಕೆಂದು ಪ್ರಾರ್ಥಿಸಿದರು. ಆಗ ಬ್ರಹ್ಮದೇವನು ‘ನಾನು ‘ಮನೋಮಯ’ ಚಕ್ರವನ್ನು ಕಳುಹಿಸುತ್ತೇನೆ. ಅದು ನಿಮ್ಮನ್ನು ಸರಿಯಾದ ಸ್ಥಳಕ್ಕೆ ಕರೆದುಕೊಂಡು ಹೋಗುವುದು. ಯಾವ ಸ್ಥಳದಲ್ಲಿ ಅದು ಬೀಳುತ್ತದೋ, ಆ ಸ್ಥಳ ನಿಮ್ಮ ಪವಿತ್ರ ಸ್ಥಳದ ಕೇಂದ್ರಬಿಂದು ಆಗುವುದು’, ಎಂದು ಹೇಳಿ ಅವರು ಚಕ್ರವನ್ನು ಬಿಟ್ಟರು. ಎಲ್ಲ ಋಷಿಮುನಿಗಳು ಆ ಚಕ್ರದ ಹಿಂದೆ ಹೋದರು. ಸಂಪೂರ್ಣ ಜಗತ್ತಿನ ಸುತ್ತಲೂ ಅನೇಕ ಪ್ರದಕ್ಷಿಣೆ ಹಾಕಿದ ನಂತರ ಕೊನೆಗೆ ಆ ಚಕ್ರವು ಒಂದು ನಿರ್ಜನ ಸ್ಥಳದಲ್ಲಿ ನಿಂತಿತು. ಆ ಶಕ್ತಿಶಾಲಿಯಾದ ಚಕ್ರವು ಮಿಂಚಿನ ವೇಗದಲ್ಲಿ ಪೃಥ್ವಿಯ ಮೇಲೆ ಅಪ್ಪಳಿಸಿದ್ದರಿಂದ ಪಾತಾಳಲೋಕವು ವಿಭಜಿತವಾಯಿತು ಮತ್ತು ಅದರಿಂದ ದೊಡ್ಡ ಪ್ರಮಾಣದಲ್ಲಿ ನೀರು ಪುಟಿದೆದ್ದಿತು. ಆಗ ಬ್ರಹ್ಮದೇವನು ಲಲಿತಾದೇವಿಗೆ ಆ ಮನೋಮಯಚಕ್ರವನ್ನು ನಿಲ್ಲಿಸಲು ಹೇಳಿದನು. ಲಲಿತಾದೇವಿಯು ತನ್ನ ದಿವ್ಯ ಶಕ್ತಿಯಿಂದ ಆ ಚಕ್ರವನ್ನು ನಿಲ್ಲಿಸಿದಳು ಮತ್ತು ಅವಳು ಆ ಸ್ಥಳದಲ್ಲಿ ಲಿಂಗಧಾರಿಣಿಯ ರೂಪದಲ್ಲಿ ಸ್ಥಿರವಾದಳು. ಅಂದಿನಿಂದ ಬ್ರಹ್ಮದೇವನ ‘ಮನೋಮಯ’ ಚಕ್ರ ಬಿದ್ದಿರುವ ಸ್ಥಳಕ್ಕೆ ಮತ್ತು ಅದರ ಸುತ್ತಮುತ್ತಲಿನ ಅರಣ್ಯಕ್ಕೆ ‘ನೇಮಿಷಾರಣ್ಯ’ ಅಥವಾ ‘ನೈಮಿಷಾರಣ್ಯ’ ಎಂದು ಗುರುತಿಸತೊಡಗಿದರು. ಯಾವ ಸ್ಥಳದಲ್ಲಿ ಆ ಚಕ್ರವು ಪೃಥ್ವಿಯ ಮೇಲೆ ಅಪ್ಪಳಿಸಿತೋ ಮತ್ತು ಅಲ್ಲಿಂದ ನೀರು ಚಿಮ್ಮಿತೋ, ಅದೇ ‘ಚಕ್ರತೀರ್ಥ’ವಾಯಿತು. ಈ ಸ್ಥಾನವು ‘ಜಗತ್ತಿನ ಕೇಂದ್ರವಾಗಿದೆ’, ಎಂದು ಹೇಳುತ್ತಾರೆ. ನಂತರ ಅದು ಎಲ್ಲ ಯುಗಗಳಲ್ಲಿನ ಎಲ್ಲ ಸಂತರ ಮತ್ತು ಋಷಿಮುನಿಗಳ ಧ್ಯಾನಧಾರಣೆಯ ಕೇಂದ್ರಸ್ಥಾನವಾಯಿತು.

೩. ‘ನೈಮಿಷಾರಣ್ಯ’ದ ಸ್ಥಾನಮಹಾತ್ಮೆ

ಅ. ನೈಮಿಷಾರಣ್ಯದಲ್ಲಿ ವ್ಯಾಸ ಮಹರ್ಷಿಗಳು ೪ ವೇದ, ೬ ಶಾಸ್ತ್ರಗಳು ಮತ್ತು ೧೮ ಪುರಾಣಗಳನ್ನು ಬರೆದರು. ಅಲ್ಲಿಯೇ ಅವರು ತಮ್ಮ ಪ್ರಿಯ ಶಿಷ್ಯರಾದ ಜೈಮಿನಿ ಮಹರ್ಷಿಗೆ ಸಾಮವೇದವನ್ನು ಕಲಿಸಿದರು.

ಆ. ಶ್ರೀ ಸತ್ಯನಾರಾಯಣ ವ್ರತದ ಆರಂಭ ನೈಮಿಷಾರಣ್ಯದಲ್ಲಿಯೇ ಆಯಿತು.

ಇ. ಇದೊಂದು ಶಕ್ತಿಪೀಠವಿದ್ದು ಇಲ್ಲಿ ನೈಮಿಷಾರಣ್ಯದ ಪ್ರಮುಖ ದೇವತೆಯೆಂದು ಶ್ರೀ ಲಲಿತಾದೇವಿಯ ಪೂಜೆ ಮಾಡಲಾಗುತ್ತದೆ. ಸೋಮವಾರದಂದು ಬರುವ ಅಮವಾಸ್ಯೆ ಅಥವಾ ಹುಣ್ಣಿಮೆಯ ತಿಥಿಯಂದು ಚಕ್ರತೀರ್ಥದಲ್ಲಿ ಸ್ನಾನ ಮಾಡಿ ಶ್ರೀ ಲಲಿತಾದೇವಿಗೆ ಅರ್ಪಣೆ ನೀಡಿದರೆ (ಅಥವಾ ಹವನ ಮಾಡಿದರೆ) ವ್ಯಕ್ತಿಯಿಂದ ಜೀವನವಿಡಿ ಘಟಿಸಿದ ಎಲ್ಲ ಪಾಪಕರ್ಮಗಳಿಂದ ಅವನಿಗೆ ಮುಕ್ತಿ ಸಿಗುತ್ತದೆ.-

ಸಂಗ್ರಹ : ಶ್ರೀ. ವಿನಾಯಕ ಶಾನಬಾಗ, ದೆಹಲಿ (೨೭.೪.೨೦೧೯)

Leave a Comment