ಕವಳೆ, ಗೋವಾ ಇಲ್ಲಿನ ನಯನಮನೋಹರ ಮತ್ತು ಜಾಗೃತ ಶ್ರೀ ಶಾಂತಾದುರ್ಗಾ ದೇವಸ್ಥಾನ !


ಶ್ರೀ ಶಾಂತಾದುರ್ಗಾ ದೇವಿಯ ಮನಮೋಹಕ ರೂಪ

ಕವಳೆ, ಗೋವಾ ಇಲ್ಲಿನ ಭವ್ಯ ಶ್ರೀ ಶಾಂತಾದುರ್ಗಾ ದೇವಸ್ಥಾನ

ಕವಳೆ, ಗೋವಾ ಇಲ್ಲಿ ನೆಲೆಸಿರುವ ಶ್ರೀ ಶಾಂತಾದುರ್ಗಾದೇವಿಯು ಆ ಜಗದಂಬೆಯ ರೂಪವೇ! ಇದು ಗೋವಾ ರಾಜ್ಯದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ದೇವಸ್ಥಾನ. ಶ್ರೀ ಶಾಂತಾದುರ್ಗಾ ದೇವಿ ಮತ್ತು ದೇವಿಯ ವಿವಿಧ ರೂಪಗಳ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳೋಣ ಬನ್ನಿ.

೧. ಶ್ರೀ ಶಾಂತಾದುರ್ಗಾ ದೇವಿಯ ಪೌರಾಣಿಕ ಕಥೆ

ಒಮ್ಮೆ ಯಾವುದೊ ಕಾರಣದಿಂದ ಶಿವ ಮತ್ತು ವಿಷ್ಣುವಿನ ಮಧ್ಯೆ ಯುದ್ಧವಾಯಿತು, ಇದರಿಂದ ಪ್ರಳಯ ಸಂಭವಸಿತು. ಆಗ ಎಲ್ಲ ದೇವತೆಗಳು, ಮಾನವರು, ಋಷಿಗಳು ಆರ್ತತೆಯಿಂದ ತಾಯಿ ಜಗದಾಂಬೆಗೆ ಶರಣಾಗಿ ಪ್ರಾರ್ಥಿಸಿದರು, ಜಗದಂಬೆಯು ತನ್ನ ಮಹಾಕಾಯ ರೂಪದಲ್ಲಿ ಅವತರಿಸಿ ಹರಿ ಹರರನ್ನು ಶಾಂತಗೊಳಿಸಿ ಬಾಲರೂಪದಲ್ಲಿ ಇಬ್ಬರ ಕೈಹಿಡಿದಳು. ‘ಕೃದ್ಧೌ ಶಾಂತಿಯುತೌ ಕೃತೌ ಹರಿಹರೌ’ ಅಂದರೆ ಕ್ರೋಧಿತರಾದ ಹರಿ ಹರರನ್ನು ಶಾಂತಗೊಳಿಸಿದಳು ಎಂದು ಜಗದಂಬೆಯು ‘ಶಾಂತಾದುರ್ಗಾ’ ಆಡಲು. ಕರ್ದಲೀವನ (ಇಂದಿನ ಸಾಶಷ್ಠಿ ತಾಲೂಕಿನ ಕೆಳಶಿ) ಇದು ಶಾಂತಾದುರ್ಗಾ ದೇವಿಯ ಮುಕ್ಲ್ಯಾ ಸ್ಥಾನ. ಇಲ್ಲಿ ಸುಮಾರು ೧೬ನೇ ಶತಕದ ವರೆಗೆ ದೇವಿಯ ದೇವಸ್ಥಾನವಿತ್ತು. ಪರಶುರಾಮನ ಸಮಯದಲ್ಲಿ ಪರಶುರಾಮನು ಗೋಮಾಂತಕ ಪ್ರದೇಶಕ್ಕೆ ಕರೆತಂದಿದ್ದ ದಶಗೋತ್ರಿ ಬ್ರಾಹ್ಮಣರಲ್ಲಿ ಕೌಶಿಕ ಗೋತ್ರದ ಲೋಮಶರ್ಮ ಎಂಬ ಬ್ರಾಹ್ಮಣನಿಗೆ ಈ ಕರ್ದಲೀಪುರ ಅಗ್ರಹಾರವಾಗಿ ದೊರೆತಿತ್ತು. ಈ ಲೋಮಶರ್ಮನೇ ಇಲ್ಲಿ ಶಾಂತಾದುರ್ಗಾ ದೇವಿಯನ್ನು ಇಲ್ಲಿ ಸ್ಥಾಪಿಸಿದನು ಎಂಬ ಮಾಹಿತಿಯನ್ನು ಪೌರಾಣಿಕ ಗ್ರಂಥಗಳಲ್ಲಿ ನೀಡಲಾಗಿದೆ.

೨. ಶ್ರೀ ಶಾಂತಾದುರ್ಗಾ ದೇವಿಯ ದೇವಸ್ಥಾನದ ಇತಿಹಾಸ

ಕೆಳಶಿಯ ಶ್ರೀ ಶಾಂತಾದುರ್ಗಾ ದೇವಿಯ ದೇವಸ್ಥಾನವನ್ನು ಶೇಣವಿ ಮಾನೆ ಎಂಬ ಹೆಸರಾಂತ ವ್ಯಾಪಾರಿಯು ಕಟ್ಟಿಸಿದ್ದನು ಎಂಬ ದಾಖಲೆಗಳಿವೆ. ನಂತರ, ಏನಂದ್ರೆ ೧೬ನೇ ಶತಮಾನದಲ್ಲಿ ಪೋರ್ತುಗೀಜರು ಸಾಶಷ್ಠಿಯ ಮೇಲೆ ಆಕ್ರಮಣ ಮಾಡಿ ಹಿಂದೂಗಳ ದೇವಾಲಯಗಳನ್ನು ಕೆಡವಿಹಾಕಿದರು. ಆ ಸಮಯದಲ್ಲಿ ಕೆಲವು ಭಕ್ತರು ದೇವಿಯ ಮೂರ್ತಿಯನ್ನು ಕೈವಲ್ಯಪುರಕ್ಕೆ (ಕವಳೆ) ಸ್ಥಳಾಂತರಿಸಿದರು. ಕವಳೆಯಲ್ಲಿರುವ ದೇವಸ್ಥಾನವನ್ನು ಮೊದಲಿಗೆ ಯಾವ ವರ್ಷದಲ್ಲಿ ಕಟ್ಟಲಾಯಿತು ಎಂಬುವುದರ ದಾಖಲೆಗಳು ಲಭ್ಯವಿಲ್ಲ. ನಂತರ ಸುಮಾರು ೧೭೧೩ ಇಂದ ೧೭೩೮ ಕಾಲಾವಧಿಯಲ್ಲಿ ಈಗಿರುವ ದೇವಸ್ಥಾನವನ್ನು ನಿರ್ಮಿಸಲಾಯಿತು ಎಂಬ ದಾಖಲೆಗಳಿವೆ.

ನಾರೋರಾಮ ಮಂತ್ರಿಗೆ ಈ ದೇವಸ್ಥಾನವನ್ನು ನಿರ್ಮಿಸುವ ಪ್ರೇರಣೆಯನ್ನು ಸಾಕ್ಷಾತ್ ಶಾಂತಾದುರ್ಗಾದೇವಿಯೇ ನೀಡಿದಳು. ಸರದಾರ ನಾರೋರಾಮ ಶೇಣವಿ ರೆಗೆ ಇವರು ಸಿಂಧುದುರ್ಗ ಜಿಲ್ಲೆಯ ಕೊಚಾರ್ ಎಂಬ ಊರಿನವರಾಗಿದ್ದರು. ೧೭೧೩ ರಲ್ಲಿ ಅವರು ಛತ್ರಪತಿ ಶಾಹುವಿನ ಆಸ್ಥಾನದಲ್ಲಿ ಮಂತ್ರಿಯಾದರು. ಆವರಿಗೆ ‘ದೇವಿಯು ತನಗೆ ಐಶ್ವರ್ಯ, ಸಂಪತ್ತು ನೀಡಿದ್ದಾಳೆ’ ಎಂಬ ಬಲವಾದ ಶ್ರದ್ಧೆ ಇತ್ತು, ಆದುದರಿಂದ ಅವರು ದೇವಿಗೊಂದು ದೇವಸ್ಥಾನವನ್ನು ಕಟ್ಟಿಸಬೇಕು ಎಂದು ತೀರ್ಮಾನಿಸಿ, ೧೭೩೦ ರಲ್ಲಿ ತನ್ನದೇ ದುಡ್ಡಿನಲ್ಲಿ ಈಗಿರುವ ಶ್ರೀ ಶಾಂತದುರ್ಗಾ ದೇವಿಯ ಭವ್ಯ ಮತ್ತು ಸುಂದರ ದೇವಸ್ಥಾನವನ್ನು ಕಟ್ಟಿಸಿದರು.

೩. ದೇವಸ್ಥಾನದ ಮಾಹಿತಿ

ಪುರ್ವಾಭಿಮುಖವಾಗಿರುವ ಶ್ರೀ ಶಾಂತಾದುರ್ಗಾ ದೇವಿಯ ದೇವಸ್ಥಾನದ ಮುಂದೆ ಒಂದು ನಯನಮನೋಹರ ದೀಪಸ್ತ೦ಭ ಇದೆ. ದೇವಸ್ಥಾನದ ಮುಂದೆ ಒಂದು ಕೊಳ ಇದೆ. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ವಾದ್ಯವೃಂದದವರು ಕುಳಿತುಕೊಳ್ಳಲು ಚಾವಡಿ ಇದೆ. ಗರ್ಭಗೃಹದ ಮೇಲೆ ಚಿನ್ನದ ಕಲಶ ಶೋಭಿಸುತ್ತದೆ. ಗರ್ಭಗೃಹದಲ್ಲಿ ಶಾಂತಾದುರ್ಗಾದೇವಿಯು ಚತುರ್ಭುಜ ರೂಪದಲ್ಲಿ ದರ್ಶನವನ್ನು ನೀಡುತ್ತಾಳೆ. ಅವಳ ಒಂದು ಕೈಯಲ್ಲಿ ಶಿವ ಮತ್ತು ಇನ್ನೊಂದು ಕೈಯಲ್ಲಿ ವಿಷ್ಣು ಇದ್ದಾರೆ. ಈ ಮೂರ್ತಿಯ ಪಕ್ಕದಲ್ಲಿ ೬ ಇಂಚಿನಷ್ಟು ಕರಿಕಲ್ಲಿನ ಒಂದು ಶಿವಲಿಂಗ ಇದೆ. ಈ ದೇವಸ್ಥಾನದ ಎಡಬದಿಗೆ ಹತ್ತಿರದಲ್ಲೇ ಶ್ರೀ ನಾರಾಯಣನ ದೇವಸ್ಥಾನವಿದೆ. ಈ ದೇವಸ್ಥಾನದ ಮುಖ್ಯ ಪೀಠದಲ್ಲಿ ಶ್ರೀ ನಾರಾಯಣ ಮತ್ತು ಶ್ರೀ ಗಣಪತಿಯು ವಿರಾಜಮಾನರಾಗಿದ್ದಾರೆ. ಇದರ ಪಕ್ಕದಲ್ಲೇ ಒಂದು ಪಾರಿಜಾತ ಮರದ ಕಟ್ಟೆ ಇದೆ. ಅದರ ಮೇಲೆ ಶ್ರೀ ಭಗವತಿಯ ಒಂದು ಮೂರ್ತಿ ಮತ್ತು ಓರ್ವ ಅಜ್ಞಾತ ಸನ್ಯಾಸಿಯ ಪಾದುಕೆಗಳು ಕೂಡ ಇವೆ. ದೇವಸ್ಥಾನದ ಮುಂದೆ ಶ್ರೀ ಕ್ಷೇತ್ರಪಾಲಕರ ಶಿಲೆ ಇದೆ. ದೇವಾಲಯದ ಹಿಂದೆ ಮ್ಹಾರು ದೇವರ ಶಿಲೆ ಇದೆ. ಅದಲ್ಲದೆ ದೇವಸ್ಥಾನದ ಪಕ್ಕದಲ್ಲಿ ಒಂದು ಚಿಕ್ಕ ಗುಡಿ ಇದ್ದು, ಅದರಲ್ಲಿ ಮೂಲ ಪುರುಷರಾದ ಕೌಶಿಕ ಗೋತ್ರದ ಲೋಮಶರ್ಮ ಇವರ ಕಲ್ಲಿನ ಮೂರ್ತಿಯನ್ನು ಸ್ಥಾಪಿಸಲಾಗಿದೆ.

೪. ಜಾತ್ರೆ

ಮಾಘ ಶುಕ್ಲಪಕ್ಷ ಪಂಚಮಿಯಂದು ಪರ್ವಕಾಲ ಪ್ರಾರಂಭವಾಗುತ್ತದೆ. ಮಾಘ ಶುಕ್ಲ ಪಕ್ಷ ಷಷ್ಠಿಯಂದು ಮುಂಜಾನೆ ಶ್ರೀ ದೇವಿಯು ಪಲ್ಲಕ್ಕಿಯಲ್ಲಿ ವಿರಾಜಮಾನಳಾಗಿ ಮೆರವಣಿಗೆಯಲ್ಲಿ ಹೊರಬರುತ್ತಾಳೆ. ಇದರೊಂದಿಗೆ ಈ ಪರ್ವಕಾಲದ ಮುಖ್ಯ ಉತ್ಸವ ಪೂರ್ಣಗೊಳ್ಳುತ್ತದೆ. ಈ ಮೆರವಣಿಗೆಯು ಹೊರಡುವ ಮೊದಲು ದೇವಿಯು ರಥಾರೂಢಳಾದ ಮೇಲೆ ಅವಳಿಗೆ ಆರತಿಯನ್ನು ಮಾಡಿ ದೇವಸ್ಥಾನದಲ್ಲಿ ತೆಂಗಿನ ಕಾಯಿಯನ್ನು ಹೊಡೆಯುತ್ತಾರೆ. ಈ ದೇವಸ್ಥಾನದಲ್ಲಿ ಪ್ರತಿ ತಿಂಗಳೇನೇ ಶುಕ್ಲ ಮತ್ತು ಕೃಷ್ಣ ಪಕ್ಷದ ಪಂಚೆಮಿಯಂದು ನಿತ್ಯೋತ್ಸವ ನಡೆಯುತ್ತದೆ. ಈ ದಿನಗಳಂದು ರಾತ್ರಿ ಪುರಾಣ-ಕೀರ್ತನೆ ಮುಂತಾದ ಕಾರ್ಯಕ್ರಮಗಳು ಆದಮೇಲೆ ದೇವಿಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ.

೫. ಪ್ರಾರ್ಥನೆ

ಭಕ್ತನಿಗೆ ಇಹ ಪರದಲ್ಲಿ ಬರುವ ದುಃಖ, ಕಷ್ಟಗಳನ್ನು ಜಗದಂಬೆಯು ನಿವಾರಿಸುತ್ತಾಳೆ. ತನ್ನನ್ನು ಆರಾಧಿಸುವವನ ಎಲ್ಲಾ ಇಚ್ಛೆಗಳನ್ನೂ ಪೂರ್ಣಗೊಳಿಸುತ್ತಾಳೆ. ಹಾಹಾಗಿ ಉಪಾಸಕರು ‘ಹೇ ದೇವಿ, ನನಗೆ ಸದ್ಬುದ್ಧಿಯನ್ನು ನೀಡು. ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು.

ಸಂಕಲಕರು : ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ ಫಲಿತ ವಿಶಾರದೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ.

Leave a Comment