ಮೇಲ್ಛಾವಣಿ ತೋಟಗಾರಿಕೆ (ಟೆರೆಸ್ ಗಾರ್ಡನಿಂಗ್ – Terrace Garden – 2)

Article also available in :

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಾತಿನಿಧಿಕ ಚಿತ್ರ

ಉ. ಗೊಬ್ಬರ

ಇಂತಹ ಕುಂಡಗಳಲ್ಲಿನ ಸಸಿಗಳಿಗೆ ತಿಂಗಳಿಗೊಮ್ಮೆಯಾದರೂ ಗೊಬ್ಬರವನ್ನು ಹಾಕಬೇಕು. ಎರೆಹುಳ ಗೊಬ್ಬರ, ಸೆಗಣಿ ಗೊಬ್ಬರ, ಜೀವಾಮೃತ ಅಥವಾ ಮನೆಯ ಅಡುಗೆಮನೆಯಲ್ಲಿನ ಕಸದಿಂದ (ತರಕಾರಿಗಳ ದೇಟುಗಳು, ಹಣ್ಣಿನ ಸಿಪ್ಪೆ, ಈರುಳ್ಳಿ- ಬೆಳ್ಳುಳ್ಳಿ ಸಿಪ್ಪೆ ಇತ್ಯಾದಿಗಳ ಕಸದಿಂದ) ತಯಾರಿಸಬಹುದಾದ ಕಂಪೋಸ್ಟ್‍ನ್ನು ನಾವು ಗೊಬ್ಬರವೆಂದು ಹಾಕಬಹುದು. ಅದಲ್ಲದೇ ವಾರಕ್ಕೊಮ್ಮೆ ೧೦-೨೦ ಮಿ.ಲೀ. ಗೋಮೂತ್ರವನ್ನು ನೀರಿನಲ್ಲಿ ಸೇರಿಸಿ ಆ ನೀರನ್ನು ಗಿಡಗಳಿಗೆ ಸಿಂಪಡಿಸಬಹುದು. ಮನೆಯಲ್ಲಿ ಹಸುಗಳು (ಆಕಳು) ಇದ್ದರೆ, ಜೀವಾಮೃತದಂತಹ ಉತ್ತಮ ಗೊಬ್ಬರವನ್ನು ಮನೆಯಲ್ಲಿಯೇ ತಯಾರಿಸಿ ಸಸಿಗಳಿಗೆ ಹಾಕಬಹುದು.

೧. ಜೀವಾಮೃತ

ಒಂದು ರೀತಿಯ ನೈಸರ್ಗಿಕ ದ್ರವಗೊಬ್ಬರ. ನೀರಿನಲ್ಲಿ ಸೆಗಣಿ, ಗೋಮೂತ್ರ, ಬೆಲ್ಲ ಅಥವಾ ತೊಗರಿಬೇಳೆ, ಕಡಲೆಬೇಳೆ, ಹೆಸರು, ಅಲಸಂದೆ ಇತ್ಯಾದಿ ದ್ವಿದಳ ಧಾನ್ಯಗಳ ಹಿಟ್ಟು ಮುಂತಾದವುಗಳನ್ನು ಸೇರಿಸಿ ಅದನ್ನು ತಯಾರಿಸಬಹುದು. ಇದರಿಂದ ಸಸಿಗಳ ಬೆಳವಣಿಗೆ ಮತ್ತು ವಿಕಸನ ಚೆನ್ನಾಗಿ ಆಗುತ್ತದೆ. ಹಾಗೆಯೇ ಮಣ್ಣಿನ ಗುಣಮಟ್ಟವೂ ಸುಧಾರಿಸುತ್ತದೆ.

೨. ಜೀವಾಮೃತವನ್ನು ತಯಾರಿಸುವ ಪದ್ಧತಿ

ಗೋಮೂತ್ರ, ಸೆಗಣಿ, ಬೆಲ್ಲ ಮತ್ತು ದ್ವಿದಳಧಾನ್ಯಗಳ ಹಿಟ್ಟು ಇವುಗಳಿಂದ ಜೀವಾಮೃತವನ್ನು ತಯಾರಿಸಲಾಗುತ್ತದೆ. ಸುಮಾರು ೨೦೦ ಲೀಟರ್ ನೀರಿನಲ್ಲಿ ೧೦ ಲೀಟರ್ ಗೋಮೂತ್ರ, ೧೦ ಕಿಲೋ ಸೆಗಣಿ, ೧ ಕಿಲೋ ಬೆಲ್ಲ (ಹಳದಿ ಬೆಲ್ಲ ಅಥವಾ ಕಪ್ಪು ಬೆಲ್ಲ) ಮತ್ತು ೧ ಕಿಲೋ ಧಾನ್ಯಗಳ ಹಿಟ್ಟು (ತೊಗರಿಬೇಳೆ, ಕಡಲೆಬೇಳೆ, ಹೆಸರು, ಅಲಸಂದೆ ಇತ್ಯಾದಿ ದ್ವಿದಳ ಧಾನ್ಯಗಳ ಹಿಟ್ಟು) ಇವುಗಳನ್ನು ಸೇರಿಸಿ ಮಾಡಿದ ಮಿಶ್ರಣವನ್ನು ೮ ದಿನ ಹಾಗೆಯೇ ಇಡಬೇಕು. ಈ ಮಿಶ್ರಣವನ್ನು ಪ್ರತಿದಿನ ಬೆಳಗ್ಗೆ ಸಾಯಂಕಾಲ ಕೋಲಿನಿಂದ ಸ್ವಲ್ಪ ಅಲುಗಾಡಿಸಬೇಕು. ನಮಗೆ ಕಡಿಮೆ ಪ್ರಮಾಣದಲ್ಲಿ ಜೀವಾಮೃತ ಬೇಕಿದ್ದರೆ ಮೇಲೆ ನೀಡಲಾದ ಪ್ರಮಾಣಕ್ಕನುಸಾರ ಆಯಾ ಘಟಕಗಳನ್ನು ಕಡಿಮೆ ಮಾಡಿ ತಯಾರಿಸಬಹುದು. ೮ ದಿನಗಳಲ್ಲಿ ಈ ಮಿಶ್ರಣದಲ್ಲಿ ಗಿಡಗಳಿಗೆ ಪೋಷಕವಾಗಿರುವ ಜೀವಾಣುಗಳು ಬಹಳಷ್ಟು ಪ್ರಮಾಣದಲ್ಲಿ ಕಂಡು ಬರುತ್ತವೆ. ಜೀವಾಮೃತ ಗೊಬ್ಬರದಿಂದ ಗಿಡಗಳಿಗೆ ಒಳ್ಳೆಯ ಪ್ರಮಾಣದಲ್ಲಿ ಪೋಷಕದ್ರವ್ಯಗಳು ಸಿಗುತ್ತವೆ. ಗಿಡಗಳಿಗೆ ಹುಳ ಅಥವಾ ರೋಗಗಳು ಬಂದರೆ, ಅವುಗಳ ಮೇಲೆ ಬೇವಿನ ಅಥವಾ ತಂಬಾಕು, ಬೆಳ್ಳುಳ್ಳಿ-ಮೆಣಸಿನಕಾಯಿಯ ಅರ್ಕವನ್ನು ಕೀಟನಾಶಕವೆಂದು ಸಿಂಪಡಿಸಬಹುದು. ಪ್ರತಿಸಲ ಒಂದೇ ರೀತಿಯ ಅರ್ಕವನ್ನು ಬಳಸದೇ ಈ ಅರ್ಕಗಳನ್ನು ಅದಲು-ಬದಲು ಮಾಡಿ ಬಳಸಬೇಕು.

ಊ. ಮಣ್ಣಿಲ್ಲದ ಕುಂಡಗಳು

ಕುಂಡಗಳಲ್ಲಿ ತರಕಾರಿಗಳನ್ನು ಬೆಳೆಸಲು ಯೋಗ್ಯ ಪ್ರಮಾಣದಲ್ಲಿ ಆರ್ದ್ರತೆ, ಗಾಳಿ, ಯೋಗ್ಯ ಪ್ರಮಾಣದಲ್ಲಿ ನೀರಿನ ಬಸಿಯುವಿಕೆ ಮತ್ತು ಬೇರುಗಳು ಸಹಜವಾಗಿ ಬೆಳೆಯುವುದು ಆವಶ್ಯಕವಾಗಿರುತ್ತದೆ. ಭೂಮಿಯಲ್ಲಿ (ನೆಲದಲ್ಲಿ) ಸಸಿಗಳನ್ನು ನೆಟ್ಟರೆ ಅವುಗಳಿಗೆ ಹಾಕಿದ ಹೆಚ್ಚುವರಿ ನೀರು ಭೂಮಿಯಲ್ಲಿ ಇಂಗುತ್ತದೆ; ಆದರೆ ಮೇಲ್ಛಾವಣಿ ತೋಟವನ್ನು ಮಾಡುವಾಗ ನಾವು ಕುಂಡಗಳಲ್ಲಿ ಮಣ್ಣು ಹಾಕಿದರೆ, ಕುಂಡಗಳಿಗೆ ಎಷ್ಟೇ ತೂತುಗಳಿದ್ದರೂ ಮಣ್ಣು ನೀರನ್ನು ಹಿಡಿದಿಡುತ್ತದೆ. ಇದರಿಂದ ಗಾಳಿಯಾಡಲು ಅಡಚಣೆ ನಿರ್ಮಾಣವಾಗಿ ಅದರಿಂದ ಸಸ್ಯಗಳ ಬೆಳವಣಿಗೆಯ ಮೇಲೆ ಪರಿಣಾಮವಾಗುತ್ತದೆ. ಇದನ್ನು ತಡೆಗಟ್ಟಲು ಮೇಲ್ಛಾವಣಿಯಲ್ಲಿ ಗಿಡಗಳನ್ನು ಬೆಳೆಸುವಾಗ ಸಾಧ್ಯವಿದ್ದಷ್ಟು ಕಡಿಮೆ ಮಣ್ಣನ್ನು ಬಳಸಿ ಹಸಿ ಮತ್ತು ಒಣ ಕಸವನ್ನು ಮಾಧ್ಯಮವೆಂದು ಬಳಸಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಮಣ್ಣು ಬಳಸದ (ಅಥವಾ ತೀರಾ ಕಡಿಮೆ ಪ್ರಮಾಣದಲ್ಲಿ ಮಣ್ಣಿನ ಬಳಕೆಯನ್ನು ಮಾಡಿ) ತೋಟಗಾರಿಕೆಯ ಸಂಕಲ್ಪನೆಯು ಜನಪ್ರಿಯವಾಗುತ್ತಿದೆ.

೧. ಮಣ್ಣು ಬಳಸದೇ ಗಿಡಗಳನ್ನು ಬೆಳೆಸುವಾಗ ಕುಂಡಗಳನ್ನು ತುಂಬಿಸಬೇಕಾದ ಆವಶ್ಯಕ ಘಟಕಗಳು

ಒಣ ಕಸ (ಉದಾ. ಕೈಗಳಿಂದ ಒಳ್ಳೆಯ ರೀತಿಯಲ್ಲಿ ಬಿಡಿಸಿದ ತೆಂಗಿನ ನಾರು, ಭತ್ತದ ಸಿಪ್ಪೆ, ಜ್ಯೂಸ್ ಸೆಂಟರ್‍ನಲ್ಲಿ ಸಿಗುವ ಕಬ್ಬಿನ ಚರಟ (ಸಿಪ್ಪೆ), ಒಣಗಿದ ಎಲೆಕಡ್ಡಿಗಳ ಕಸ, ಮರಳು, ಇಟ್ಟಂಗಿಗಳ ಚಿಕ್ಕ ತುಂಡುಗಳು), ಹಸಿ ಕಸ (ಚೆನ್ನಾಗಿ ಕೊಳೆತ ಕಂಪೋಸ್ಟ್ ಗೊಬ್ಬರ/ಎರೆಹುಳಗಳ ಗೊಬ್ಬರ, ಬೇವಿನ ಹಿಂಡಿ, ಬಯೋ-ಕಲ್ಚರ್, ಅಡುಗೆಮನೆಯ ಕಸ), ಕಲ್ಚರ್ (ಗೊಬ್ಬರ ತಯಾರಿಸುವ ಪ್ರಕ್ರಿಯೆಗೆ ವೇಗ ತರುವ ಘಟಕ, ಮೊಸರು ತಯಾರಿಸಲು ಹೇಗೆ ಹೆಪ್ಪು ಹಾಕುತ್ತೇವೆಯೋ, ಅದೇ ರೀತಿ ಗೊಬ್ಬರ ತಯಾರಿಸಲು ಕಲ್ಚರ್ ಹಾಕಿದರೆ, ಗೊಬ್ಬರವು ಬೇಗನೆ ತಯಾರಾಗುತ್ತದೆ.)

೨. ಕುಂಡಗಳನ್ನು ತುಂಬಿಸುವ ಪದ್ಧತಿ

ಕಂಪೋಸ್ಟ್ ತಯಾರಿಸಲು ಹಸಿ ಕಸವನ್ನು ಶೇ. ೩೦ ರಷ್ಟು ಮತ್ತು ಒಣ ಕಸವನ್ನು ಶೇ. ೭೦ ರಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಹಸಿ ಕಸದಲ್ಲಿ (ತೊಪ್ಪಲುಪಲ್ಲೆಗಳ ದೇಟುಗಳು, ಕೊಳೆತ ಎಲೆಗಳು, ಹಣ್ಣುಗಳ ಸಿಪ್ಪೆ, ಬೀಜಗಳು, ಚಹಾದ ಚರಟ, ಬುರುಸು ಅಥವಾ ಹುಳ ಹಿಡಿದ ಧಾನ್ಯಗಳು ಇತ್ಯಾದಿ) ತರಕಾರಿಗಳ ದೇಟುಗಳು, ತಂಗಳನ್ನ, ಹಣ್ಣುಗಳ ಕೊಳೆತ ಭಾಗ ಇವುಗಳನ್ನು ತೆಗೆದುಕೊಳ್ಳಬಹುದು.

ಎಣ್ಣೆಯುಕ್ತ, ತುಪ್ಪಯುಕ್ತ (ಜಿಡ್ಡಿರುವ) ಅಥವಾ ಮಸಾಲೆಯುಕ್ತ ತಂಗಳು (೧೨ ಗಂಟೆಗಳಿಗಿಂತ ಹೆಚ್ಚಾದ ಆಹಾರ ಪದಾರ್ಥಗಳು) ಪದಾರ್ಥಗಳನ್ನು ಹಸಿ ಕಸದಲ್ಲಿ ತೆಗೆದುಕೊಳ್ಳಬಾರದು. ಅವುಗಳನ್ನು ತೆಗೆದು ಕೊಳ್ಳುವುದಿದ್ದರೆ, ಆ ಪದಾರ್ಥಗಳನ್ನು ಜರಡಿಯಲ್ಲಿ (ಚಾಣಿಗೆಯಲ್ಲಿ) ತೆಗೆದುಕೊಂಡು ಅವುಗಳಲ್ಲಿನ ಎಣ್ಣೆ, ಉಪ್ಪು-ಮಸಾಲೆ ಮುಂತಾದವುಗಳು ಹೋಗುವಂತೆ ನೀರಿನಿಂದ ತೊಳೆದುಕೊಳ್ಳಬೇಕು; ನಂತರ ಆ ಪದಾರ್ಥಗಳನ್ನು ನಾವು ಹಸಿ ಕಸದಲ್ಲಿ ತೆಗೆದುಕೊಳ್ಳಬಹುದು.

ಒಣ ಕಸದಲ್ಲಿ ಗಿಡಗಳ ಕೆಳಗೆ ಬಿದ್ದಿರುವ ಕಸಕಡ್ಡಿ, ಒಣಗಿದ ಎಲೆ ಇತ್ಯಾದಿಗಳನ್ನು ತೆಗೆದುಕೊಳ್ಳಬಹುದು. ಕುಂಡಗಳಲ್ಲಿ ಎಲ್ಲಕ್ಕಿಂತ ಕೆಳಗೆ ಕಸಕಡ್ಡಿಗಳನ್ನು ಹಾಕಬೇಕು. ಕಸಕಡ್ಡಿಗಳ ಬದಲು ತೆಂಗಿನನಾರನ್ನು ಚೆನ್ನಾಗಿ ಬಿಡಿಸಿ ಸಹ ಹಾಕಬಹುದು. ಅದರ ಮೇಲೆ ಸ್ವಲ್ಪ ಕಲ್ಚರ್ ಹಾಕಬೇಕು. ದೇಶಿ ಹಸುವಿನ ತಾಜಾ ಸೆಗಣಿ ಒಂದು ಉತ್ತಮ ಕಲ್ಚರ್ ಆಗಿದೆ. ಕಲ್ಚರ್ಅನ್ನು ನೀರಿನಲ್ಲಿ ಸೇರಿಸಿ ಬಳಸಬೇಕು. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಲ್ಚರ್‍ಗಳು ಸಿಗುತ್ತಿದ್ದರೂ, ದೇಶಿ ಹಸುವಿನ ಸೆಗಣಿ ಅಥವಾ ಹುಳಿ ಮಜ್ಜಿಗೆ, ಮೊಸರು, ಬೆಲ್ಲದ ನೀರು ಈ ನೈಸರ್ಗಿಕ ಪದಾರ್ಥಗಳನ್ನು ಕಲ್ಚರ್ ಎಂದು ಉಪಯೋಗಿಸಬೇಕು. ಕಲ್ಚರ್ ಅನ್ನು ಹಾಕಿದ ನಂತರ ಅದರ ಮೇಲೆ ಹಸಿ ಕಸವನ್ನು ಹಾಕಬೇಕು. ಹಸಿ ಕಸವನ್ನು ಹಾಕುವಾಗ ಅದನ್ನು ಸಣ್ಣ ಆಕಾರ ಮಾಡಿ ಹಾಕಬೇಕು. ಅದರಿಂದ ಕಸ ಕೊಳೆಯುವ ಪ್ರಕ್ರಿಯೆ ವೇಗದಿಂದ ಆಗುತ್ತದೆ. ಅದರ ಮೇಲೆ ಒಣ ಕಸವನ್ನು ಹಾಕಬೇಕು. ನಂತರ ಪುನಃ ಕಲ್ಚರ್ ಹಾಕಬೇಕು. ಈ ರೀತಿ ಒಣ ಕಸ, ಕಲ್ಚರ್, ಹಸಿ ಕಸ ಹೀಗೆ ಒಂದರ ನಂತರ ಒಂದು ಈ ಪದ್ಧತಿಯಲ್ಲಿ ಕುಂಡಗಳು ತುಂಬುವವರೆಗೆ ಹಾಕಬೇಕು.

ಕುಂಡಗಳ ಮೇಲಿನ ೨ ಇಂಚು ಭಾಗವನ್ನು ಖಾಲಿ ಬಿಡಬೇಕು. ಅನಂತರ ಆ ಕುಂಡಗಳನ್ನು ಹತ್ತಿ (ನೂಲಿನ) ಬಟ್ಟೆಯಿಂದ ಮುಚ್ಚಬೇಕು. ಪ್ರತಿ ೩ ದಿನಗಳಿಗೊಮ್ಮೆ ಕಸವನ್ನು ಸ್ವಲ್ಪ ಮೇಲೆ-ಕೆಳಗೆ ಮಾಡಬೇಕು. ವಾರದಲ್ಲಿ ಒಂದೆರಡು ಬಾರಿ ಅವುಗಳಲ್ಲಿ ಹುಳಗಳು ಆಗಬಾರದೆಂದು ಕಹಿಬೇವಿನ ಎಲೆಗಳನ್ನು, ಹಾಗೂ ಕಲ್ಚರ್ ಹಾಕಬೇಕು. ಕಹಿಬೇವಿನ ಎಲೆಗಳು ಸಿಗದಿದ್ದರೆ, ಕಹಿಬೇವಿನ ಹಿಂಡಿಯನ್ನು ಹಾಕಬಹುದು. ಕಂಪೋಸ್ಟ್‍ಅನ್ನು ತಯಾರಿಸುವಾಗ ಹುಳಗಳಾದರೆ; ಅದರಲ್ಲಿ ಸ್ವಲ್ಪ ಒಣ ಕಸವನ್ನು ಹಾಕಬೇಕು. ಕುಂಡಗಳಲ್ಲಿ ಮಣ್ಣು ಹಾಕಲೇಬೇಕು ಎಂದಾದರೆ ತೆಂಗಿನ ನಾರುಗಳನ್ನು ಎಲ್ಲಕ್ಕಿಂತ ಕೆಳಗೆ ಹಾಕಿದ ನಂತರ ಅದರ ಮೇಲೆ ಮಣ್ಣನ್ನು ಹಾಕಬೇಕು; ಅನಂತರ ಮಣ್ಣನ್ನು ಬಳಸಬಾರದು. ನೈಸರ್ಗಿಕವಾಗಿ ಕೊಳೆಯುವುದು ಒಳ್ಳೆಯ ಸೂಕ್ಷ್ಮಜೀವಗಳಿಂದ ಆಗುತ್ತದೆ ಮತ್ತು ಅನೈಸರ್ಗಿಕ ಕೊಳೆಯುವುದು ಕೆಟ್ಟ ಸೂಕ್ಷ್ಮಜೀವಗಳ ಕಾರ್ಯವಾಗಿರುತ್ತದೆ. ಆಮ್ಲಜನಕ ಇದ್ದರೆ ಮಾತ್ರ ಕೊಳೆಯುವ ಪ್ರಕ್ರಿಯೆ ನೈಸರ್ಗಿಕವಾಗಿ ನಡೆಯುತ್ತದೆ (aerobic decomposition) ಮತ್ತು ಆಮ್ಲಜನಕ ಇಲ್ಲದಿದ್ದರೆ ಕೊಳೆಯುವ ಪ್ರಕ್ರಿಯೆ ಅನೈಸರ್ಗಿಕವಾಗಿ (anaerobic decomposition) ನಡೆಯುತ್ತದೆ. ನೈಸರ್ಗಿಕವಾಗಿ ಕೊಳೆತ ವಸ್ತುಗಳಿಗೆ ಅಷ್ಟು ಕೆಟ್ಟ ವಾಸನೆ ಬರುವುದಿಲ್ಲ; ಆದರೆ ಅನೈಸರ್ಗಿಕ ಕೊಳೆಯುವಾಗ ಕೆಟ್ಟ ವಾಸನೆ ಬರುತ್ತದೆ. ಹಾಗಾಗಿ  ಈ ಪ್ರಕ್ರಿಯೆಯಲ್ಲಿ ನಾವು ‘ನ್ಯಾಶನಲ್ ಸೆಂಟರ್ ಫಾರ್ ಆರ್ಗ್ಯಾನಿಕ್ ಫಾರ್ಮಿಂಗ್’ನ ವೇಸ್ಟ್ ಡಿಕಂಪೋಝರ್ಅನ್ನು ಕೂಡ ಬಳಸಬಹುದು. ಇದರಿಂದ ಕೊಳೆಯುವ ಪ್ರಕ್ರಿಯೆಗೆ ವೇಗ ಬರುತ್ತದೆ. ವಾಸನೆ ಬರುತ್ತಿದ್ದರೆ, ಅರ್ಧ ಚಮಚ ಅರಿಶಿಣ ಪುಡಿ ಅಥವಾ ಅರ್ಧ ಚಮಚ ಇಂಗನ್ನು ನೀರಿನಲ್ಲಿ ಸೇರಿಸಿ ಅದನ್ನು ಸ್ವಲ್ಪ ಸಿಂಪಡಿಸಬಹುದು.

ಈ ರೀತಿ ಸುಮಾರು ೨ ರಿಂದ ೩ ತಿಂಗಳುಗಳಲ್ಲಿ ಒಳ್ಳೆಯ ಕಂಪೋಸ್ಟ್ ಗೊಬ್ಬರ ತಯಾರಾಗುತ್ತದೆ. ಅದನ್ನು ೨ ರಿಂದ ೩ ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಚಾಣಿಗೆಯಿಂದ ಚಾಳಿಸಿ ತೆಗೆದುಕೊಳ್ಳಬೇಕು. ಕಂಪೋಸ್ಟ್ ತಯಾರಾದ ಮೇಲೆ ಅದಕ್ಕೆ ಹಸಿ ಮಣ್ಣಿನಂತೆ ಒಳ್ಳೆಯ ವಾಸನೆ ಬರುತ್ತದೆ. ಇದರಲ್ಲಿ ನಾವು ಸಸಿಗಳನ್ನು ನೆಡಬಹುದು ಅಥವಾ ಬೀಜಗಳನ್ನು ಹಾಕಬಹುದು. ಈ ಕಂಪೋಸ್ಟ್ ಅನ್ನು ಗೊಬ್ಬರವೆಂದೂ ಉಪಯೋಗಿಸಬಹುದು. ಆದುದರಿಂದ ಬೇರೆ ಗೊಬ್ಬರವನ್ನು ಹಾಕುವ ಆವಶ್ಯಕತೆ ಇರುವುದಿಲ್ಲ. ಈ ಪದ್ಧತಿಯಲ್ಲಿ ಕುಂಡಗಳಲ್ಲಿ ಹಾಕಿದ ಹಸಿ ಕಸಕ್ಕೆ ಯಾವುದೇ ದುರ್ಗಂಧ ಬರದಿರುವುದರಿಂದ, ಹಸಿ ಕಸದಿಂದ ಆಗುವ ಮಾಲಿನ್ಯವನ್ನೂ ತಡೆಗಟ್ಟಬಹುದು ಮತ್ತು ಪರಿಸರಕ್ಕೆ ಸಹಾಯ ಮಾಡಿದಂತಾಗುತ್ತದೆ. ಕುಂಡದಲ್ಲಿ ಹಾಕಲಾದ ಹಸಿ ಕಸವು ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದ ಕಡಿಮೆ ನೀರು ಸಾಕಾಗುತ್ತದೆ.

ಎ. ಬೀಜಗಳಿಂದ ಸಸಿಗಳನ್ನು ತಯಾರಿಸುವುದು

ಕುಂಡಗಳು ತಯಾರಾದ ನಂತರ ಅವುಗಳಲ್ಲಿ ಸಸಿಗಳನ್ನು ನೆಡಬೇಕು ಅಥವಾ ಬೀಜಗಳನ್ನು ಹಾಕಬೇಕು. ಬೀಜಗಳು ತೀರಾ ಚಿಕ್ಕದ್ದಾಗಿದ್ದರೆ, 2 ಚಿಟಿಕೆಯಷ್ಟು ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ಸಮಾನ ಅಂತರದಲ್ಲಿ ಬೀಳುವಂತೆ ಹಾಕಬೇಕು. ಅನಂತರ ಅದರ ಮೇಲೆ ಮಣ್ಣನ್ನು ಹಾಕಬೇಕು. ಬೀಜಗಳ ಆಕಾರದ ಮೂರು ಪಟ್ಟು ಮಣ್ಣನ್ನು ಹಾಕಬೇಕು. ಅನಂತರ ತಂಬಿಗೆಯಿಂದ ಕೈಯಲ್ಲಿ ನೀರು ತೆಗೆದುಕೊಂಡು ಸಿಂಪಡಿಸಬೇಕು.

ನೇರವಾಗಿ ಕುಂಡಗಳಲ್ಲಿ ಬೀಜಗಳನ್ನು ಹಾಕಬಹುದು ಅಥವಾ ಅವುಗಳನ್ನು ಮೊದಲು ‘ಟ್ರೆ’ಗಳಲ್ಲಿ ಬೆಳೆಸಿ ನಂತರ ಆ ಸಸಿಗಳನ್ನು ಕುಂಡಗಳಲ್ಲಿ ನೆಡಬಹುದು. ಸಸಿಗಳನ್ನು ‘ಟ್ರೆ’ಗಳಲ್ಲಿ ಬೆಳೆಸಿದರೆ, ಅವುಗಳಿಗೆ ೫-೬ ಎಲೆಗಳು ಬಂದ ನಂತರ, ಕುಂಡಗಳಲ್ಲಿ ನೆಡಬಹುದು.

ಸಸಿಗಳನ್ನು ಕುಂಡಗಳಲ್ಲಿ ನೆಡುವಾಗ ಸಾಧ್ಯವಿದ್ದಷ್ಟು ಅದನ್ನು ನೆರಳಿನಲ್ಲಿ ಮಾಡಬೇಕು. ಬಿಸಿಲಿನ ನೇರ ಸಂಪರ್ಕವನ್ನು ತಡೆಯಬೇಕು; ಏಕೆಂದರೆ ಬಿಸಿಲಿನಿಂದ ಬೇರುಗಳು ಒಣಗಿ ಸಾಯಬಹುದು. ಸಸಿಗಳನ್ನು ನೆಡುವಾಗ ಸಸಿಗಳನ್ನು ಮಣ್ಣಿನೊಂದಿಗೆ ಎತ್ತಿ ಕುಂಡಗಳಲ್ಲಿ ನೆಡಬೇಕು. ನೇರವಾಗಿ ನೆಡಬಹುದಾದಂತಹ ಗಿಡಗಳ ‘ಕಟ್ಟಿಂಗ್ಸ್’ ನಾವು ನೆಡಬಹುದು

(ಕಟ್ಟಿಂಗ್ಸ್ : ಸಸಿಗಳನ್ನು ಬೆಳೆಸಲು ಗಿಡದ ಟೊಂಗೆಗಳನ್ನು ವಿಶಿಷ್ಟ ರೀತಿಯಲ್ಲಿ ಕಸಿ ಮಾಡಿ ಬೆಳೆಸಿದ ಸಸಿಗಳು. ಗುಲಾಬಿ, ದಾಸವಾಳ ಮತ್ತು ಮಸಾಲೆಯ ಗಿಡಗಳನ್ನು ಬೀಜಗಳಿಂದ ಬೆಳೆಸಲು ಆಗುವುದಿಲ್ಲ. ಅದಕ್ಕಾಗಿ ಗಿಡಗಳ ಟೊಂಗೆಗಳನ್ನು ವಿಶಿಷ್ಟ ರೀತಿಯಲ್ಲಿ ಕತ್ತರಿಸಲಾಗುತ್ತದೆ. ಅವುಗಳನ್ನು ಭೂಮಿಯಲ್ಲಿ ನೆಟ್ಟಾಗ ಹೊಸ ಸಸಿಗಳು ತಯಾರಾಗುತ್ತವೆ.).

ಪಾರಂಪರಿಕ ಬೀಜಗಳ ಮಹತ್ವ

ಸದ್ಯ ಮಾರುಕಟ್ಟೆಯಲ್ಲಿ ಅನೇಕ ವಿಧದ ಬೀಜಗಳು ಸಿಗುತ್ತವೆ; ಆದರೆ ಅವುಗಳ ಬದಲು ಪಾರಂಪರಿಕ ಬೀಜಗಳನ್ನು ಉಪಯೋಗಿಸುವುದಕ್ಕೆ ಪ್ರಾಧಾನ್ಯ ನೀಡಬೇಕು. ಅನುವಂಶಿಕ ತಂತ್ರಜ್ಞಾನದ ಬಳಕೆಯನ್ನು ಮಾಡಿ ತಯಾರಿಸಲಾದ ಸಂಸ್ಕರಿತ (ಮಿಶ್ರತಳಿ) ಬೀಜಗಳಿಂದ ಹೆಚ್ಚು ಉತ್ಪನ್ನ ಸಿಗುತ್ತದೆ, ಆದರೆ ಈ ಸಂಸ್ಕರಿತ ಬೀಜಗಳು ನಿಸರ್ಗಕ್ಕೆ ಅನುಕೂಲವಾಗಿಲ್ಲ. ಸಂಸ್ಕರಿತ ಬೀಜಗಳು ಪಾರಂಪರಿಕ ಭಾರತೀಯ ಕೃಷಿಯನ್ನು ಪರಾವಲಂಬಿಯನ್ನಾಗಿಸುವ ಒಂದು ಷಡ್ಯಂತ್ರವಾಗಿದೆ. ಪಾರಂಪರಿಕ ಬೀಜಗಳಲ್ಲಿ ಸ್ಥಳೀಯ ವಾತಾವರಣದಲ್ಲಿ ಉಳಿಯಲು ಮೊದಲಿನಿಂದಲೇ ನಿಸರ್ಗದತ್ತ ವಂಶವಾಹಿಗಳಿರುತ್ತವೆ. ಪಾರಂಪರಿಕ ಬೀಜಗಳು ಹೆಚ್ಚು ಪೌಷ್ಠಿಕ ಮತ್ತು ಪೋಷಕವಾಗಿರುತ್ತವೆ. ಈ ಪಾರಂಪರಿಕ ಬೀಜಗಳು ನಮ್ಮ ಪ್ರದೇಶದಲ್ಲಿನ ಸ್ಥಳೀಯ ರೈತರ ಬಳಿ ಸಿಗುತ್ತವೆ. ಈ ಬೀಜಗಳು ಶುದ್ಧವಾಗಿದ್ದರೆ, ಸಸಿಗಳು ರೋಗಮುಕ್ತ ಮತ್ತು ಹಣ್ಣುಗಳು ರಸಭರಿತವಾಗಿರುತ್ತವೆ ಎಂದು ಅನೇಕರ ಅನುಭವವಾಗಿದೆ.

ಏ. ಸೂರ್ಯಪ್ರಕಾಶ

ತರಕಾರಿಗಳನ್ನು ಬೆಳೆಸುವಾಗ ವಾತಾವರಣದಲ್ಲಿ ಸ್ವಲ್ಪ ಉಷ್ಣತೆ ಇರಬೇಕು. ಸೂರ್ಯಪ್ರಕಾಶ ದೊರಕಿದರೆ, ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಹೀಗಿದ್ದರೂ ಸೂರ್ಯಪ್ರಕಾಶ ಸಾಕಷ್ಟು ಇರದಿದ್ದರೆ, ಗಿಡಗಳು ಬೆಳೆಯುವುದೇ ಇಲ್ಲ, ಎಂದೇನಿಲ್ಲ. ವಿಶೇಷವಾಗಿ ನಗರಗಳಲ್ಲಿ ಮೇಲ್ಛಾವಣಿಯಲ್ಲಿ (ಟೆರೇಸ್‍ನ ಮೇಲೆ) ಅಥವಾ ಕಿಟಕಿಗಳಲ್ಲಿ ಗಿಡಗಳನ್ನು ಬೆಳೆಸುವುದಿದ್ದರೆ, ಸೂರ್ಯಪ್ರಕಾಶದ ಅಡಚಣೆಯಿರುತ್ತದೆ. ಇಂತಹ ಸಮಯದಲ್ಲಿ ತರಕಾರಿಗಳನ್ನು ಬೆಳೆಸಬಹುದು; ಆದರೆ ಅವು ಸಾಕಷ್ಟು ಸೂರ್ಯಪ್ರಕಾಶದಲ್ಲಿ ಬೆಳೆಯುವ ತರಕಾರಿಗಳಿಗಿಂತ ಸ್ವಲ್ಪ ಕಡಿಮೆ ಪೌಷ್ಠಿಕವಾಗಿರುತ್ತವೆ. ಸೂರ್ಯಪ್ರಕಾಶ ಇರದಿದ್ದರೆ, ಗಿಡಗಳ ಎಲೆಗಳ ಆಕಾರವು ದೊಡ್ಡದಾಗುತ್ತದೆ, ಇದು ನಿಸರ್ಗದ ನಿಯಮವಾಗಿದೆ. ಕಡಿಮೆ ಸೂರ್ಯಪ್ರಕಾಶವಿದ್ದರೂ ಕೆಸವು, ಕಾಳುಮೆಣಸು, ವೀಳ್ಯದ ಎಲೆಯ ಬಳ್ಳಿ, ಕನಕಾಂಬರ ಇವುಗಳಂತಹ ಸಸಿಗಳು ಬೆಳೆಯಬಹುದು.

ಐ. ನೀರು

ಹೆಚ್ಚು ನೀರನ್ನು ಹಾಕಿದರೂ ಸಸಿಗಳು ಸಾಯುತ್ತವೆ. ಹೆಚ್ಚಿನ ಜನರಿಗೆ ಮನೆಯಲ್ಲಿನ ಕುಂಡಗಳಲ್ಲಿನ ಸಸಿಗಳಿಗೆ/ಗಿಡಗಳಿಗೆ ಮಗ್‍ನಿಂದ (ತಂಬಿಗೆಯಿಂದ) ಬಹಳಷ್ಟು ನೀರನ್ನು ಸುರಿಯುವ ರೂಢಿ ಇರುತ್ತದೆ. ಆದರೆ ಅಷ್ಟು ನೀರು ಹಾಕುವುದರ ಆವಶ್ಯಕತೆ ಇರುವುದಿಲ್ಲ. ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು ನಾವು ಗಿಡಗಳ ಮೇಲೆ ಸಿಂಪಡಿಸಬಹುದು. ನೀರು ಹಾಕಿದ ನಂತರ ಮರುದಿನ ಎಲೆಗಳ ತುದಿಗಳು ಸ್ವಲ್ಪ ಬಾಡಿದ ಹಾಗೆ ಕಾಣಿಸಿದರೆ, ನಾವು ಹಾಕಿದ ನೀರು ಸರಿಯಿದೆ, ಎಂದು ತಿಳಿದುಕೊಳ್ಳಬೇಕು. ಒಂದು ಕುಂಡಕ್ಕೆ ಸುಮಾರು ಅರ್ಧ ಲೋಟ (ಗ್ಲಾಸ್) ನೀರು ಸಾಕಾಗುತ್ತದೆ. ಆದರೂ ನಾವು ನಿರೀಕ್ಷಣೆಯನ್ನು ಮಾಡಿ ನೀರಿನ ಪ್ರಮಾಣವನ್ನು ಹೆಚ್ಚು-ಕಡಿಮೆ ಮಾಡಬಹುದು. ನೀರು ಎಷ್ಟು ಹಾಕಬೇಕು, ಎಂಬುದು ಹವಾಮಾನವನ್ನೂ ಅವಲಂಬಿಸಿರುತ್ತದೆ. ತುಂಬಾ ಬಿಸಿಲಿದ್ದರೆ, ನೀರು ಸ್ವಲ್ಪ ಹೆಚ್ಚು ಬೇಕಾಗುತ್ತದೆ. ಸಸಿ ಚಿಕ್ಕದಾಗಿದ್ದರೆ, ನಾವು ಚಿಕ್ಕ ಮಗುವಿಗೆ ಕೊಟ್ಟಂತೆ ಸ್ವಲ್ಪವೇ ನೀರು ಸಾಕಾಗುತ್ತದೆ, ಗಿಡ ದೊಡ್ಡದಾಗಿದ್ದರೆ, ಹೆಚ್ಚು ನೀರು ಬೇಕಾಗುತ್ತದೆ. ನಾವು ಗಿಡಗಳಿಗೆ ಎಷ್ಟು ಪ್ರೀತಿ ತೋರಿಸುತ್ತೇವೆಯೋ, ಅವುಗಳ ನಿರೀಕ್ಷಣೆ ಮಾಡುತ್ತೇವೆಯೋ, ಅಷ್ಟು ಈ ಅಂದಾಜು ಯೋಗ್ಯವಾಗುತ್ತದೆ.

ಕುಂಡದಲ್ಲಿ ಹಾಕಿದ ನೀರು ಹೆಚ್ಚಾಗಿದ್ದರೆ, ಕುಂಡದಲ್ಲಿ ಸ್ವಲ್ಪ ತೆಂಗಿನ ನಾರು, ಒಣಗಿದ ಎಲೆಗಳನ್ನು ಹಾಕಬೇಕು. ಗಿಡಗಳಿಗೆ ಬೆಳಗ್ಗೆ ನೀರು ಹಾಕಬೇಕು. ಸಾಯಂಕಾಲ ತಡವಾಗಿ ಗಿಡಗಳಿಗೆ ನೀರನ್ನು ಹಾಕಬಾರದು. ಗಿಡಗಳ ಎಲೆಗಳ ಮೇಲೆ ನೀರನ್ನು ಸುರಿಯಬಾರದು. ಗಿಡಗಳ ಎಲೆಗಳ ಮೇಲೆ ನೀರನ್ನು ಸಿಂಪಡಿಸುವುದಿದ್ದರೆ, ಎಲೆಗಳ ಮೇಲಿನ ನೀರು ಸಾಯಂಕಾಲದವರೆಗೆ ಒಣಗಿಹೋಗುವಂತೆ ಸಿಂಪಡಿಸಬೇಕು. ಬೇಸಿಗೆಯಲ್ಲಿ ಗಿಡಗಳಿಗೆ ದಿನದಲ್ಲಿ ಎರಡು ಬಾರಿ ನೀರನ್ನು ಹಾಕಬೇಕು. ಮಳೆ ಬೀಳುವಾಗ ಅಥವಾ ಮಳೆ ಬಿದ್ದುಹೋದ ಮರುದಿನ ಗಿಡಗಳಿಗೆ ನೀರು ಹಾಕಬಾರದು.

ಒ. ಸಮತೋಲ ಆಹಾರ

ನೀರಿನೊಂದಿಗೆ ಗಿಡಗಳಿಗೆ ಸಮತೋಲ ಆಹಾರದ ಆವಶ್ಯಕತೆ ಇರುತ್ತದೆ. ಬಹಳಷ್ಟು ಗೊಬ್ಬರ ಹಾಕಿದರೆ ಗಿಡಗಳು ಚೆನ್ನಾಗಿ ಬೆಳೆಯುತ್ತವೆ ಎಂದೇನಿಲ್ಲ. ಗಿಡಗಳಿಗೆ ಅವುಗಳ ಆವಶ್ಯಕತೆಗನುಸಾರ ಸಮತೋಲ ಪ್ರಮಾಣದಲ್ಲಿ ಗೊಬ್ಬರವನ್ನು ಹಾಕಬೇಕು. ಸಾಮಾನ್ಯವಾಗಿ ಜೀವಾಮೃತ ಅಥವಾ ಸಾವಯವ ಗೊಬ್ಬರದ ಮಾಧ್ಯಮದಿಂದ ಗಿಡಗಳಿಗೆ ಆವಶ್ಯಕ ಘಟಕಗಳು ಆವಶ್ಯಕ ಪ್ರಮಾಣದಲ್ಲಿ ಸಿಗುತ್ತವೆ. ಗೊಬ್ಬರವನ್ನು ಎಷ್ಟು ಹಾಕಬೇಕು ಅಥವಾ ಯಾವಾಗ ಹಾಕಬೇಕು, ಎಂಬುದನ್ನು ಅಧ್ಯಯನದಿಂದ ನಿಶ್ಚಯಿಸಬಹುದು ಅಥವಾ ಈ ಬಗ್ಗೆ ತಜ್ಞರ ಮಾರ್ಗದರ್ಶನವನ್ನು ಪಡೆಯಬಹುದು.

ಓ. ಲಾಭ

ಈ ರೀತಿ ನಾವು ಮನೆಯಲ್ಲಿಯೇ ಕೃಷಿ ಅಥವಾ ತರಕಾರಿಗಳ ಗಿಡಗಳನ್ನು ಬೆಳೆಸಿದರೆ ಮನೆಯಲ್ಲಿ ಬಳಸಲು ಆವಶ್ಯಕವಾಗಿರುವ ಸುಮಾರು ಶೇ.೫೦ ರಷ್ಟು ತರಕಾರಿಗಳನ್ನು ಬೆಳೆಸಬಹುದು. ಜಾಗದ ಲಭ್ಯತೆಗನುಸಾರ ಕುಟುಂಬಕ್ಕೆ ಆವಶ್ಯಕವಾಗಿರುವ ಎಲ್ಲ ತರಕಾರಿಗಳನ್ನು ನಾವು ಬೆಳೆಸಬಹುದು. ಈ ರೀತಿಯಲ್ಲಿ ಬೆಳಸಲಾಗಿರುವ ತರಕಾರಿಗಳು ಸಂಪೂರ್ಣ ವಿಷಮುಕ್ತ ಮತ್ತು ಪೌಷ್ಟಿಕವಾಗಿರುತ್ತವೆ. ನಾವು ಬೆಳೆಸಿದ ತರಕಾರಿಗಳಿಂದ ಪಲ್ಯವನ್ನು ತಯಾರಿಸಿ ತಿನ್ನುವುದರಲ್ಲಿ ಒಂದು ರೀತಿಯ ಆನಂದ ಮತ್ತು ಪ್ರೀತಿಯೂ ಇರುತ್ತದೆ. ಇದಕ್ಕೆ ಹೊರತಾಗಿ ನಮ್ಮ ಮನೆಯಲ್ಲಿನ ಕಸದ ವಿಲೇವಾರಿ ಮಾಡಿದುದರಿಂದ ಪರಿಸರದ ರಕ್ಷಣೆ ಸಹ ಆಗುತ್ತದೆ.

ಔ. ಇತರ ಮಹತ್ವಪೂರ್ಣ ಅಂಶಗಳು

ಮನೆಯಲ್ಲಿ ಗಿಡಗಳನ್ನು ಬೆಳೆಸುವಾಗ ಸಾಧ್ಯವಿದ್ದಷ್ಟು ಯೋಗ್ಯ ಕಾಲಕ್ಕನುಸಾರ ತರಕಾರಿಗಳ ಗಿಡಗಳನ್ನು ಬೆಳೆಸಬೇಕು. ನಾವು ನೆಟ್ಟ ಎಲ್ಲ ಗಿಡಗಳು ಬದುಕುಳಿಯುತ್ತದೆ ಎಂದೇನಿಲ್ಲ. ಅವುಗಳಲ್ಲಿನ ಕೆಲವು ಗಿಡಗಳಿಗೆ ಹುಳಗಳು ಹಿಡಿಯಬಹುದು; ಇದು ನೈಸರ್ಗಿಕವಾಗಿದೆ. ಹೇಗೆ ಹುಳಗಳು ತಾಗುವವೋ, ಹಾಗೆಯೇ ಹುಳಗಳನ್ನು ತಿನ್ನುವ ಜೀವಾಣುಗಳು ಅಥವಾ ಪಕ್ಷಿಗಳೂ ಬರುತ್ತವೆ ಮತ್ತು ನಿಸರ್ಗಚಕ್ರ ನಡೆದಿರುತ್ತದೆ.

ಯಾವ ಸಸಿಗಳ ಬೇರುಗಳು ಚಿಕ್ಕದಾಗಿರುತ್ತವೆಯೋ, ಅಂತಹ ಸಸಿಗಳನ್ನು ಸಾಧ್ಯವಿದ್ದಷ್ಟು ಮೇಲ್ಛಾವಣಿಯ ತೋಟಕ್ಕಾಗಿ ಆಯ್ಕೆ ಮಾಡಬೇಕು. ಮೊಟ್ಟಮೊದಲು ಯಾವ ಗಿಡಗಳನ್ನು ಬೆಳೆಸಬೇಕು, ಎಂಬುದನ್ನು ನಿಶ್ಚಯಿಸಬೇಕು. ಒಂದು ವೇಳೆ ಕಟ್ಟಡದ ಅಥವಾ ಮನೆಯ ಮೇಲ್ಛಾವಣಿ ದೊಡ್ಡ ಗಿಡಗಳ ಭಾರವನ್ನು ತಡೆದುಕೊಳ್ಳಬಹುದು ಎಂದಾದರೆ, ದೊಡ್ಡ (ನುಗ್ಗೆ, ತೊಗರಿ, ಮಾವು, ನೆಲ್ಲಿಕಾಯಿ ಇತ್ಯಾದಿ) ಗಿಡಗಳನ್ನೂ ಬೆಳೆಸಬಹುದು.

ಒಂದು ವೇಳೆ ಟೆರೇಸ್ ಮೇಲೆ ಮಣ್ಣು ಹಾಕಿ ಸಸಿಗಳನ್ನು ನೆಡುವುದಿದ್ದರೆ ಸೋರುವಿಕೆಯನ್ನು ತಡೆಗಟ್ಟುವ ದೃಷ್ಟಿಯಿಂದ ಟೆರೇಸ್‍ಅನ್ನು ವಾಟರ್ ಪ್ರೂಫ್ ಮಾಡಿಸಿಕೊಳ್ಳಬೇಕು. ವಾಟರ್ ಪ್ರೂಫ್ ಮಾಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅದರ ಬದಲು ನಾವು ತಾಡಪತ್ರಿಯನ್ನು ಬಳಸಬಹುದು ಅಥವಾ ಕುಂಡಗಳ ಕೆಳಗೆ ಇಡಲು ಬೇಕಾದ ತಟ್ಟೆಗಳು (ಪ್ಲೇಟ್ಸ್) ಮಾರುಕಟ್ಟೆಯಲ್ಲಿ ಸಿಗುತ್ತವೆ. ಅವುಗಳನ್ನು ಸಹ ಉಪಯೋಗಿಸಬಹುದು.

ಕುಂಡಗಳ ಕೆಳಗೆ ಇಡುವಂತಹ ತಟ್ಟೆ

ಮೇಲ್ಛಾವಣಿಯಲ್ಲಿ ಕುಂಡಗಳನ್ನಿಟ್ಟು ಅವುಗಳಲ್ಲಿ ಗಿಡಗಳನ್ನು ಬೆಳೆಸಲು ಬರುತ್ತದೆ. ಮೇಲ್ಛಾವಣಿ ತೋಟದ ಕೆಲಸವನ್ನು ಆರಂಭಿಸುವುದಿದ್ದರೆ, ಸಾಧ್ಯವಿದ್ದಷ್ಟು ಮಳೆಗಾಲದ ಮೊದಲು ಮತ್ತು ತೀವ್ರ ಬಿಸಿಲು ಮುಗಿದ ನಂತರ ಪ್ರಾರಂಭಿಸಬೇಕು. ಟೆರೇಸ್ ಮೇಲೆ ಬಹಳ ಬಿಸಿಲು ಬರುತ್ತಿದ್ದರೆ, ‘ಗಾರ್ಡನ್ ನೆಟ್’ ಅಥವಾ ಸೊಳ್ಳೆಪರದೆಯನ್ನು ಬಳಸಿ ಸಹ ಗಿಡಗಳಿಗೆ ನೆರಳನ್ನು ಮಾಡಿ ಕೊಡಬಹುದು. ಗಿಡಗಳಿಗೆ ನೀರು ಹಾಕಲು ಮೇಲ್ಛಾವಣಿಯಲ್ಲಿ ನೀರಿನ ಅನುಕೂಲತೆ ಇರುವುದು ಮಹತ್ವದ್ದಾಗಿದೆ. ನಾವು ಆರಂಭದಲ್ಲಿ ಪ್ರತಿದಿನ ೧ ಗಂಟೆಯ ಸಮಯವನ್ನು ತೋಟದ ಕೆಲಸಕ್ಕಾಗಿ ಕೊಟ್ಟರೂ ಮನೆಯಲ್ಲಿಯೇ ಉತ್ತಮ ರೀತಿಯ ತರಕಾರಿಗಳನ್ನು ಬೆಳೆಸಬಹುದು.

ಸಂಕಲನ : ಸೌ. ಗೌರಿ ನೀಲೇಶ ಕುಲಕರ್ಣಿ, ಸನಾತನ ಆಶ್ರಮ, ಗೋವಾ.

ಮೇಲ್ಛಾವಣಿ ತೋಟಗಾರಿಕೆಯನ್ನು ಹೇಗೆ ಮಾಡಬೇಕು ? ಎಂಬುದರ ಬಗ್ಗೆ ಹೆಚ್ಚಿನ ವಿವರವಾದ ಮಾಹಿತಿಯನ್ನು ಪಡೆಯಲು ಯೂಟ್ಯೂಬ್‌ನಲ್ಲಿನ ಕೆಳಗಿನ ನೀಡಲಾದ ಆಯ್ದ ಲಿಂಕ್‌ಗಳಲ್ಲಿ ವೀಡಿಯೊವನ್ನು ನೋಡಿರಿ. (ಸೂಚನೆ: ಕೆಳಗೆ ನೀಡಿರುವ ವೀಡಿಯೋ ತಯಾರಕರಿಗೆ ಮತ್ತು ಸನಾತಾನಕ್ಕೆ ಯಾವುದೇ ಸಂಬಂಧವಿಲ್ಲ. ಓದುಗರಿಗೆ ಅನುಕೂಲವಾಗಲಿ ಎಂದು ನೀಡಲಾಗಿದೆ. ಅದರಲ್ಲಿ ಆರ್ಥಿಕವಾದ ಯಾವುದೇ ಉದ್ದೇಶವಿಲ್ಲ.)

 

Leave a Comment