ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 3)

Article also available in :

12. ವೀಳ್ಯದೆಲೆ

12 ಅ. ಮಹತ್ವ

ಮಳೆಗಾಲದ ದಿನಗಳಲ್ಲಿ ಊಟದ ನಂತರ ವೀಳ್ಯದೆಲೆಯನ್ನು ತಿಂದರೆ ಊಟ ಜೀರ್ಣವಾಗಲು ಸಹಾಯವಾಗುತ್ತದೆ. ಕೆಮ್ಮು, ಕಫ, ಪಚನಶಕ್ತಿ ಮಂದವಾಗಿರುವುದು ಇವುಗಳಿಗಾಗಿ ಇದು ಉಪಯುಕ್ತವಾಗಿದೆ. 4 ಜನರ ಕುಟುಂಬಕ್ಕಾಗಿ ಒಂದು ವೀಳ್ಯದೆಲೆಯ ಬಳ್ಳಿ ಸಾಕಾಗುತ್ತದೆ.

12 ಆ. ತೋಟಗಾರಿಕೆ

ದೊಡ್ಡ ಬಳ್ಳಿಯ ರೆಂಬೆಗಳನ್ನು ಕತ್ತರಿಸಿ ನೆಟ್ಟರೆ ಅವು ಬೆಳೆಯುತ್ತವೆ. ಈ ಬಳ್ಳಿಗಳು ಹೆಚ್ಚಿನ ಜನರ ಮನೆಗಳಲ್ಲಿ ಇರುತ್ತವೆ. ಇದರ ಸಸಿಗಳು ಸಸ್ಯಶಾಲೆಗಳಲ್ಲಿ (ನರ್ಸರಿಗಳಲ್ಲಿ) ಮಾರಾಟಕ್ಕೂ ಸಿಗುತ್ತವೆ. ಈ ಬಳ್ಳಿಗೆ ಆಧಾರ ಬೇಕಾಗುತ್ತದೆ. ಆದುದರಿಂದ ಈ ಬಳ್ಳಿಗಳನ್ನು ನುಗ್ಗೆಕಾಯಿ, ಪೊಂಗಾರ (ಪಂಗೇರಿ, Erythrina variegata), ಅಗಸೆ, ತೆಂಗು, ಅಡಿಕೆ ಇವುಗಳಂತಹ ಗಿಡಗಳ ಬುಡದಲ್ಲಿ ನೆಡಬೇಕು. ಒಂದು ಬಾರಿ ಬಳ್ಳಿಯು ಬೆಳೆಯಿತೆಂದರೆ ಅದು ತುಂಬಾ ದೊಡ್ಡದಾಗುತ್ತದೆ.

13. ಕಾಡುಬಸಳೆ (ಪರ್ಣಬೀಜ)

13. ಅ ಮಹತ್ವ

ಇದು ಮೂತ್ರ ಕಲ್ಲುಗಳಿಗೆ ಒಳ್ಳೆಯ ಔಷಧಿಯಾಗಿದೆ. 4 ಜನರ ಕುಟುಂಬಕ್ಕಾಗಿ ಒಂದು ಗಿಡ ಸಾಕಾಗುತ್ತದೆ.

13 ಆ. ತೋಟಗಾರಿಕೆ

ಇದರ ಎಲೆಯನ್ನು ನೆಟ್ಟಗೆ ಮಣ್ಣಿನಲ್ಲಿ ಒಂದು ಚತುರ್ಥಾಂಶದಿಂದ ಅರ್ಧದಷ್ಟು ಹೂಳಬೇಕು. ಇದರಿಂದ ಆ ಎಲೆಗೆನೇ ಹೊಸ ಸಸಿಗಳು ಬರುತ್ತವೆ. ಎಲೆಗಳಿಂದ ಹೊಸ ಸಸಿಗಳು ಬರುತ್ತವೆ ಎಂದು ಇದಕ್ಕೆ ಪರ್ಣಬೀಜ (ಪರ್ಣ = ಎಲೆ, ಬೀಜ) ಎಂದು ಹೇಳುತ್ತಾರೆ. ಬಹುತೇಕ ಜನರ ಮನೆಗಳಲ್ಲಿ ಈ ಗಿಡವಿರುತ್ತದೆ ಅಥವಾ ಇದರ ಸಸಿಗಳು ಸಸ್ಯಶಾಲೆಗಳಲ್ಲಿ (ನರ್ಸರಿಗಳಲ್ಲಿ) ಖರೀದಿಗೆ ಸಿಗುತ್ತವೆ.

14. ಭೃಂಗರಾಜ

14 ಅ. ಮಹತ್ವ

ಹೊಟ್ಟೆಗೆ ಸಂಬಂಧಿಸಿದ ರೋಗಗಳು, ಕೆಮ್ಮು, ದಮ್ಮು, ಹಾಗೆಯೇ ಕೂದಲುಗಳಿಗೆ ಸಂಬಂಧಿಸಿದ ರೋಗಗಳಿಗೆ ಇದು ತುಂಬಾ ಒಳ್ಳೆಯ ಔಷಧಿಯಾಗಿದೆ. ಭೃಂಗರಾಜ ಮಹಾಲಯ ಪಕ್ಷದಲ್ಲಿ ಬೆಳೆಯುತ್ತದೆ. ಆದುದರಿಂದ ಬಹಳಷ್ಟು ಜನರು ಇದನ್ನು ಮನೆಯಲ್ಲಿ ಬೆಳೆಸುತ್ತಾರೆ. 4 ಜನರ ಕುಟುಂಬಕ್ಕಾಗಿ 8 ರಿಂದ 10 ಗಿಡಗಳಿದ್ದರೆ ಸಾಕಾಗುತ್ತದೆ.

14 ಆ. ತೋಟಗಾರಿಕೆ

ಮಳೆ ಬಿದ್ದನಂತರ ಭೃಂಗರಾಜದ ಸಸಿಗಳು ತಾವಾಗಿಯೇ ಹುಟ್ಟುತ್ತವೆ. ರಸ್ತೆಯ ಬದಿಗೆ, ಕೆಲವು ಸ್ಥಳಗಳಲ್ಲಿ (ನಗರಗಳಲ್ಲಿಯೂ) ಚರಂಡಿಗಳ ಅಥವಾ ಗಟಾರುಗಳ ಬದಿಗೆ ಭೃಂಗರಾಜದ ಸಸಿಗಳು ಸಿಗುತ್ತವೆ. ಇದು ಒಂದು ರೀತಿಯ ಹುಲ್ಲಾಗಿದ್ದು ಭತ್ತದ ಹೊಲದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ಮಳೆಗಾಲದ ನಂತರ ನೀರು ಸಿಗದಿದ್ದರೆ ಈ ಹುಲ್ಲು ಒಣಗುತ್ತದೆ. ಆದುದರಿಂದ ಅದು ಯಾವಾಗ ಸಿಗುತ್ತದೆ, ಆಗ ಅದನ್ನು ತಂದು ಮನೆಯ ಪರಿಸರದಲ್ಲಿ ಬೆಳೆಸಬೇಕು. ಮಳೆಗಾಲದ ನಂತರ ಇದಕ್ಕೆ ನಿಯಮಿತವಾಗಿ ನೀರುಣಿಸಬೇಕು.

15. ದಾಸವಾಳ (ಜಾಸ್ವಂದ)

ಕೂದಲುಗಳ ಆರೋಗ್ಯಕ್ಕಾಗಿ ದಾಸವಾಳವು ಬಹಳ ಉಪಯುಕ್ತವಾಗಿದೆ. ರೆಂಬೆಗಳನ್ನು (ಟೊಂಗೆಗಳನ್ನು) ನೆಟ್ಟರೆ ಗಿಡಗಳು ಬೆಳೆಯುತ್ತವೆ. ದೇಶಿ ದಾಸವಾಳವನ್ನು ನೆಡಬೇಕು. 4 ಜನರ ಕುಟುಂಬಕ್ಕಾಗಿ 1 ಗಿಡವಿದ್ದರೆ ಸಾಕಾಗುತ್ತದೆ.

16. ಕೊಮ್ಮೆ (ವೃಷ, ಗನಿಜೆಲೆ, ಶವಾಟ)

16 ಅ. ಮಹತ್ವ

ಮೂತ್ರಪಿಂಡಳ ವೈಫಲ್ಯವಾಗುತ್ತಿದ್ದರೆ (ಕಿಡ್ನಿ ಫೇಲ್ಯೂರ) ಅಂತಹ ರೋಗಿಗಳಿಗೆ ಈ ಔಷಧಿಯು ಸಂಜೀವಿನಿಯಾಗಿದೆ. ಮೂತ್ರ ಕಲ್ಲು, ಮಲಬದ್ಧತೆ, ಊತ (ಬಾವು) ಇವುಗಳಿಗೆ ಇದು ಅತ್ಯಂತ ಗುಣಕಾರಿಯಾಗಿದೆ. ತುಪ್ಪದ ಒಗ್ಗರಣೆ ಹಾಕಿ ತಯಾರಿಸಿದ ಕೊಮ್ಮೆಯ ಎಳೆಯ ಎಲೆಗಳ ಪಲ್ಯವನ್ನು ವರ್ಷದಲ್ಲಿ ಒಂದು ಬಾರಿಯಾದರೂ ತಿನ್ನಬೇಕು ಎಂದು ಹೇಳುತ್ತಾರೆ. ಇದರಿಂದ ಹೊಟ್ಟೆಯಲ್ಲಿನ ವಿಷಕಾರಿ ಘಟಕಗಳು ಹೊರಗೆ ಹೋಗಲು ಸಹಾಯವಾಗುತ್ತದೆ. ಮನೆಯ ಸುತ್ತಲೂ ಜಾಗವಿದ್ದರೆ ಹೆಚ್ಚು ಗಿಡಗಳನ್ನು ಬೆಳೆಸಬಹುದು.

16 ಆ. ಗುರುತು ಮತ್ತು ತೋಟಗಾರಿಕೆ

ಮಳೆಗಾಲದಲ್ಲಿ ಈ ಗಿಡಗಳು ತಾವಾಗಿಯೇ ಹುಟ್ಟುತ್ತವೆ. ನಗರಗಳಲ್ಲಿಯೂ ಈ ವನಸ್ಪತಿಯು ಚರಂಡಿಗಳ ಅಥವಾ ರಸ್ತೆಯ ಬದಿಗಳಲ್ಲಿ ಕಂಡು ಬರುತ್ತದೆ. ಕಾಂಡವು ನಸುಗೆಂಪಾಗಿರುತ್ತದೆ. ಎಲೆಗಳು ಗಾಢ ಹಸಿರುಬಣ್ಣದ್ದಾಗಿರುತ್ತವೆ. ಈ ವನಸ್ಪತಿಯು ಹಬ್ಬುತ್ತಾ ಹೋಗುತ್ತದೆ. ಇದಕ್ಕೆ ಗುಲಾಬಿ ಬಣ್ಣದ ಹೂವುಗಳು ಬರುತ್ತವೆ. ಮಳೆಗಾಲದ ನಂತರ ನೀರು ಸಿಗದಿದ್ದರೆ ಗಿಡಗಳು ಒಣಗುತ್ತವೆ; ಆದರೆ ಬೇರು ಜೀವಂತವಾಗಿರುತ್ತದೆ. ಪುನಃ ಮಳೆಗಾಲದಲ್ಲಿ ನೀರು ಸಿಕ್ಕಾಗ ಗಿಡವು ಚಿಗುರುತ್ತದೆ. ಆದುದರಿಂದ ಇದನ್ನು ‘ಪುನರ್ನವಾ’ (ಪುನಃ ಜೀವಿತವಾಗುವ) ಎಂದೂ ಕರೆಯುತ್ತಾರೆ. ಇದರ 3-4 ಸಸಿಗಳನ್ನು ನೆಟ್ಟರೂ ಒಂದು ವರ್ಷದಲ್ಲಿ ಅದು 10 ರಿಂದ 12 ಚದರ ಮೀಟರ್ ಪರಿಸರದಲ್ಲಿ ಹಬ್ಬುತ್ತದೆ. ಈ ವನಸ್ಪತಿಯ ಬೇರುಗಳು ಬಹಳ ಆಳದಲ್ಲಿರುತ್ತವೆ. ಆದುದರಿಂದ ಈ ವನಸ್ಪತಿಯು ಸಿಕ್ಕರೆ, ಅದನ್ನು ಕಿತ್ತು ತೆಗೆಯದೇ ಅಗೆದು ತೆಗೆಯಬೇಕು ಮತ್ತು ಅದನ್ನು ಮನೆಯ ಸಮೀಪ ಲಭ್ಯವಿರುವ ಜಾಗದಲ್ಲಿ ನೆಡಬೇಕು.

ಸಂಕಲನಕಾರರು

ಶ್ರೀ. ಮಾಧವ ರಾಮಚಂದ್ರ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಮಾರ್ಗದರ್ಶಕರು

ಡಾ. ದಿಗಂಬರ ನಭು ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ, ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

Leave a Comment