ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 5)

Article also available in :

22. ಪಾರಿಜಾತ

22 ಅ. ಮಹತ್ವ

ಜ್ವರ ಮತ್ತು ಸಂಧಿವಾತದಲ್ಲಿ ಪಾರಿಜಾತವು ಬಹಳ ಉಪಯೋಗಿಯಾಗಿದೆ. ಮನೆಯ ಪಕ್ಕದಲ್ಲಿ ಒಂದಾದರೂ ಮರವಿರಬೇಕು.

22 ಆ. ತೋಟಗಾರಿಕೆ

ಇದನ್ನು ಟೊಂಗೆಗಳಿಂದ ಬೆಳೆಸಬಹುದು (ಕಸಿ ಮಾಡಬಹುದು). ಫೆಬ್ರವರಿ – ಮಾರ್ಚ್ ತಿಂಗಳುಗಳಲ್ಲಿ ಇದರ ಟೊಂಗೆಗಳನ್ನು ಮರಳಿನಲ್ಲಿ ಹೂಳಿಟ್ಟರೆ ಜೂನ್‌ ವರೆಗೆ ಒಳ್ಳೆಯ ಸಸಿಗಳು ತಯಾರಾಗುತ್ತವೆ ಮತ್ತು ಅವುಗಳನ್ನು ಮಳೆಗಾಲದಲ್ಲಿ ನೆಡಬಹುದು.

23. ಲಾವಂಚ (ಲಾಮಂಚ, ಬಾಳ)

23 ಅ. ಮಹತ್ವ

ಇದರ ಬೇರುಗಳಿಗೆ ಬಹಳ ಸುಗಂಧ ಬರುತ್ತದೆ ಮತ್ತು ಅವು ಬಹಳ ತಂಪಾಗಿರುತ್ತವೆ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಇದರ ಉಪಯೋಗವಾಗುತ್ತದೆ. ಲಾವಂಚದ ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದರಿಂದ ಮಣ್ಣು ನೀರಿನೊಂದಿಗೆ ಹರಿದು ಹೋಗುವುದಿಲ್ಲ. ಲಾವಂಚದ ಬೇರುಗಳನ್ನು ಬೇಸಿಗೆಯಲ್ಲಿ ಒಣಗಿಸಿದ ಬಳಿಕ ಪ್ಲಾಸ್ಟಿಕ ಚೀಲದಲ್ಲಿ ಹಾಕಿ ಬಟ್ಟೆಗಳನ್ನಿಡುವ ಕಪಾಟಿನಲ್ಲಿ ಇಟ್ಟರೆ 5-6 ವರ್ಷಗಳ ವರೆಗೆ ಬಾಳಿಕೆ ಬರುತ್ತವೆ. ಇದರಿಂದ ಬಟ್ಟೆಗಳಿಗೂ ಸುಗಂಧ ಬರುತ್ತದೆ ಮತ್ತು ಆವಶ್ಯಕವಿದ್ದಾಗ ನಾವು ಬೇರುಗಳನ್ನು ಹೊರತೆಗೆದು ಉಪಯೋಗಿಸಬಹುದು.

1. ಲಾವಂಚದ ಪೊದೆ 2. ಲಾವಂಚದ ಬೇರು

23 ಆ. ತೋಟಗಾರಿಕೆ

ಲಾವಂಚದ ಸಸಿಗಳು ನರ್ಸರಿಗಳಲ್ಲಿ ಮಾರಾಟಕ್ಕೆ ಸಿಗುತ್ತವೆ. ಮಜ್ಜಿಗೆ ಹುಲ್ಲಿನಂತೆಯೇ ಲಾವಂಚದ ಪೊದೆಗಳು ನಿರ್ಮಾಣವಾಗುತ್ತವೆ. ಯಾರ ಬಳಿಯಾದರೂ ಲಾವಂಚದ ಪೊದೆ ಇದ್ದರೆ, ಮಜ್ಜಿಗೆ ಹುಲ್ಲಿನ ಬೇರನ್ನು ತೆಗೆದು ಬೆಳೆಸುವಂತೆಯೇ, ಲಾವಂಚದ ಬೇರುಗಳನ್ನು ತೆಗೆದು ಬೆಳೆಸಬಹುದು. ಲಾವಂಚವನ್ನು ನೆಲದಲ್ಲಿ ಬೆಳೆಸಿದರೆ ಅದರ ಬೇರುಗಳನ್ನು ಅಗೆದು ತೆಗೆಯುವಾಗ ಅವು ತುಂಡಾಗಿ ವ್ಯರ್ಥವಾಗುತ್ತವೆ. ಹಾಗಾಗಬಾರದೆಂದು ಲಾವಂಚವನ್ನು ಪ್ಲಾಸ್ಟಿಕಿನ ಗೋಣಿಚೀಲಗಳಲ್ಲಿ ಬೆಳೆಸಬೇಕು. ಇದಕ್ಕಾಗಿ 25 ಕಿಲೋ. ಧಾನ್ಯದ ಖಾಲಿ ಗೋಣಿಚೀಲಗಳನ್ನು ಉಪಯೋಗಿಸಬೇಕು. ಬುಡದಲ್ಲಿ ಕೊಳೆತ ಸೆಗಣಿ ಗೊಬ್ಬರವನ್ನು ಹಾಕಬೇಕು ಮತ್ತು ಮರಳುಮಿಶ್ರಿತ ಮಣ್ಣನ್ನು ಗೋಣಿಚೀಲದಲ್ಲಿ ತುಂಬಿ ಮೇಲೆ ಲಾವಂಚದ ಬೇರುಗಳನ್ನು ನೆಡಬೇಕು. ಕೆಳಗೆ ಸೆಗಣಿ ಗೊಬ್ಬರವಿರುವುದರಿಂದ ಪೋಷಕಾಂಶಗಳನ್ನು ಪಡೆಯಲು ಲಾವಂಚದ ಬೇರುಗಳು ಉದ್ದ ಬೆಳೆಯುತ್ತವೆ ಮತ್ತು ಸಾಧಾರಣ ಒಂದು- ಒಂದೂವರೆ ವರ್ಷದಲ್ಲಿ ಚೀಲದ ತುಂಬಾ ಲಾವಂಚದ ಬೇರುಗಳು ಸಿಗುತ್ತವೆ. ಲಾವಂಚದ ಬೇರುಗಳನ್ನು ತೆಗೆಯುವಾಗ ಅವುಗಳನ್ನು ಮಣ್ಣಿನೊಂದಿಗೆ ನೀರಿನಲ್ಲಿ ಸ್ಚಲ್ಪ ಸಮಯದವರೆಗೆ ನೆನೆಸಿಡಬೇಕು ಮತ್ತು ನಂತರ ನೀರಿನಲ್ಲಿ ಜಾಲಾಡಿಸಿ ಮಣ್ಣನ್ನು ತೆಗೆಯಬೇಕು. ಇದರಿಂದ ಸ್ವಚ್ಛ ಬೇರುಗಳು ಸಿಗುತ್ತವೆ.

24. ಚೆಂಡುಹೂ (ಚೆಂಡುಮಲ್ಲಿಗೆ)

ಮನೆಯ ಸುತ್ತಲೂ ಚೆಂಡು ಹೂವಿನ ಗಿಡಗಳಿದ್ದರೆ ಸೊಳ್ಳೆಗಳ ಸಮಸ್ಯೆ ಕಡಿಮೆಯಾಗುತ್ತದೆ. ಗಾಯ ತುಂಬಿ ಬರಲು ಚೆಂಡು ಹೂವಿನ ರಸ ಉಪಯೋಗವಾಗುತ್ತದೆ. ಹೂವಿನ ದಳಗಳನ್ನು ಒಣಗಿಸಿ ಬೀಜಗಳೆಂದು ಉಪಯೋಗಿಸಬಹುದು.

25. ಅಶ್ವಗಂಧ (ಅಂಗರಗಡ್ಡೆ, ಪೆನ್ನೇರು)

25 ಅ. ಮಹತ್ವ

ಇದು ಬದನೆಕಾಯಿ ಜಾತಿಯ ವನಸ್ಪತಿಯಾಗಿದೆ. ಇದರ ಬೇರುಗಳು ಶಕ್ತಿವರ್ಧಕವಾಗಿವೆ. ಇದು ಬಹಳ ಹೆಚ್ಚು ಬಳಸಲಾಗುವ ಔಷಧಿಯಾಗಿದೆ.

25 ಆ. ತೋಟಗಾರಿಕೆ

ಇದು 6 ತಿಂಗಳ ಬೆಳೆಯಾಗಿದೆ. ಮಳೆಗಾಲದ ಮುಗಿದು ಭತ್ತದ ಕೊಯ್ಲಿನ ನಂತರ ಭತ್ತದ ಹೊಲದಲ್ಲಿ ಅಶ್ವಗಂಧದ ತೋಟಗಾರಿಕೆಯನ್ನು ಮಾಡಿಕೊಳ್ಳಬಹುದು. ಇದು ಇಬ್ಬನಿಯ ಸಹಾಯದಿಂದ ಬೆಳೆಯುತ್ತದೆ. ಆದುದರಿಂದ ಇದಕ್ಕೆ ಬೇರೆ ನೀರಿನ ಆವಶ್ಯಕತೆ ಇರುವುದಿಲ್ಲ. ಇದರ ಕೃಷಿಯನ್ನು ಬೀಜಗಳಿಂದ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ವ್ಯಾವಸಾಯಿಕ ಸ್ತರದಲ್ಲಿ ಕೃಷಿಯನ್ನು ಮಾಡುವುದಿದ್ದರೆ ‘ನಾಗೋರಿ’ ಜಾತಿಯ ಅಶ್ವಗಂಧದ ಬೀಜಗಳನ್ನು ಉಪಯೋಗಿಸಬೇಕು. ಈ ಜಾತಿಯ ಗಿಡಗಳ ಬೇರುಗಳು ಹೆಬ್ಬೆರಳಿನಷ್ಟು ದಪ್ಪಾಗಿರುತ್ತವೆ. ಇದನ್ನು ಮನೆಯಲ್ಲಿ ಬೇಳೆಸುವುದಿದ್ದರೆ ಕನಿಷ್ಠ 3 ರಿಂದ 4 ಸಸಿಗಳನ್ನು ನೆಡಬೇಕು. ಮನೆಯ ಸುತ್ತಲೂ ಜಾಗವಿದ್ದರೆ 50 ರಿಂದ 100 ಸಸಿಗಳನ್ನು ನೆಟ್ಟರೂ ಸಹ ಅವುಗಳ ಉಪಯೋಗವಾಗುತ್ತದೆ. ಹಣ್ಣುಗಳು ಬಿಟ್ಟಾಗ ಅವುಗಳ ಬಣ್ಣ ಕೆಂಪಾಗುತ್ತದೆ ಮತ್ತು ಎಲೆಗಳು ಉದುರತೊಡಗುತ್ತವೆ. ಆಗ ಬೇರುಗಳನ್ನು ಅಗೆದು ತೆಗೆಯಬೇಕು. ಬೇರುಗಳನ್ನು ತೊಳೆದು ಒಣಗಿಸಿ ಅವುಗಳ ಪುಡಿ ಮಾಡಿಡಬೇಕು. ಹಣ್ಣುಗಳಲ್ಲಿ ಸಿಗುವ ಬೀಜಗಳಿಂದ ಈ ವನಸ್ಪತಿಯ ಕೃಷಿಯನ್ನು ಪುನಃ ಮಾಡಲು ಬರುತ್ತದೆ. ವನಸ್ಪತಿಯ ಮೇಲಿನ ಭಾಗವನ್ನು ದನಕರುಗಳಿಗೆ ಖಾದ್ಯವೆಂದು ಕೂಡ ಉಪಯೋಗಿಸಬಹುದು.

26. ಸೊಗದೆ ಬೇರು (ಅನಂತಮೂಲ, ನನ್ನಾರಿ, ಸುಗಂಧಿ)

26 ಅ. ಮಹತ್ವ

ಇದು ರಕ್ತಶುದ್ಧಿಯನ್ನು ಮಾಡುವ ಒಂದು ಶ್ರೇಷ್ಠ ಔಷಧಿಯಾಗಿದೆ. ಇದರ ಬೇರುಗಳನ್ನು ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಈ ಬೇರುಗಳಿಗೆ ಬಹಳ ಒಳ್ಳೆಯ ಸುಗಂಧ ಬರುತ್ತದೆ. ಇದರ ನಿತ್ಯ ಸೇವನೆಯಿಂದ ಗರ್ಭಾಶಯದಲ್ಲಿನ ಗಂಟುಗಳು ಕರಗಲು ಸಹಾಯವಾಗುತ್ತದೆ. ಈ ವನಸ್ಪತಿಯು ಕೊಂಕಣ ಭಾಗದಲ್ಲಿ ಬಹಳಷ್ಟು ಕಂಡು ಬರುತ್ತದೆ; ಆದರೆ ಈಗ ಇದು ನಾಶವಾಗುವ ಮಾರ್ಗದಲ್ಲಿದೆ. ಸಾಧ್ಯವಿದ್ದಷ್ಟು ಹೆಚ್ಚು ಪ್ರಮಾಣದಲ್ಲಿ ಈ ವನಸ್ಪತಿಯನ್ನು ಬೆಳೆಸಬೇಕು.

26 ಆ. ತೋಟಗಾರಿಕೆ

ಈ ವನಸ್ಪತಿಯ ಎಲೆಗಳನ್ನು ಕಿತ್ತಾಗ ಬಿಳಿ ಬಣ್ಣದ ಹಾಲು (ರಸ) ಬರುತ್ತದೆ. ಎಲೆಗಳು ಚೂಪು ಮತ್ತು ಹಸಿರು ಬಣ್ಣದ್ದಾಗಿರುತ್ತವೆ. ಅವುಗಳ ಮೇಲೆ ಬಿಳಿ ಬಣ್ಣದ ಅಡ್ಡ-ಉದ್ದ ಗೆರೆಗಳಿರುತ್ತವೆ. ಇದರ ಬೇರುಗಳು ಆಳದಲ್ಲಿರುತ್ತವೆ. ಬೇರುಗಳನ್ನು ಅಗೆದು ದೊರಕುವ ಸಸಿಗಳನ್ನು ಮನೆಗೆ ತಂದು ನೆಡಬೇಕು. ಸಸಿಗಳು ಎಲ್ಲಿ ಸಿಗುತ್ತವೆ ಅಲ್ಲಿಂದ ಅವುಗಳನ್ನು ಅಗೆದು ತಂದು ನೆಡಬೇಕು. ಇದರ ಕಾಂಡಗಳ ಅಥವಾ ಬೇರಿನ ತುಂಡುಗಳಿಂದಲೂ ಗಿಡಗಳನ್ನು ಬೆಳೆಸಬಹುದು. 2 ವರ್ಷಗಳ ನಂತರ ಇದರ ಬೇರುಗಳನ್ನು ಔಷಧಿಗಳಲ್ಲಿ ಉಪಯೋಗಿಸಲು ಪಕ್ವವಾಗುತ್ತವೆ.

ಆಪತ್ಕಾಲದ ದೃಷ್ಟಿಯಿಂದ ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಯಲ್ಲಿಯೇ ಹೇಗೆ ಬೆಳೆಸಬೇಕು ? ಎಂದು ಹೇಳುವ ಈ ಲೇಖನಮಾಲೆಯನ್ನು ಸಾಧಕರು ಮತ್ತು ವಾಚಕರು ಸಂಗ್ರಹಿಸಿಡಬೇಕು.

ದೊಡ್ಡ ಪ್ರಮಾಣದಲ್ಲಿ ಔಷಧಿ ವನಸ್ಪತಿಗಳ ಸಸಿಗಳು ಅಥವಾ ಬೀಜಗಳು ದೊರಕುವ ಸ್ಥಳಗಳು

1. ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ, ಸಸ್ಯಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ, ಪುಣೆ. ಸಂಪರ್ಕ ಕ್ರಮಾಂಕ: 9021086125

ಈ ಕೇಂದ್ರದ ಮೂಲಕ ರೈತರಿಗೆ ಔಷಧಿ ವನಸ್ಪತಿಗಳ ಕೃಷಿಯ ವಿಷಯದಲ್ಲಿ ಸವಿಸ್ತಾರ ಮಾರ್ಗದರ್ಶನವನ್ನು ಮಾಡಲಾಗುತ್ತದೆ. ಡಾ. ದಿಗಂಬರ ನಭು ಮೋಕಾಟ, ಸಹಾಯಕ ಪ್ರಾಧ್ಯಾಪಕರು, ಸಸ್ಯಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ, ಪುಣೆ ವಿದ್ಯಾಪೀಠ, ಪುಣೆ ಇವರು ಈ ಕೇಂದ್ರದ ಪ್ರಮುಖ ಸಂಚಾಲಕರಾಗಿದ್ದಾರೆ. ರೈತರು ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡಬೇಕೆಂದು ಅವರು ಕಳೆದ 20 ವರ್ಷಗಳಿಂದ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಕಾರ್ಯವನ್ನು ಮಾಡುತ್ತಿದ್ದಾರೆ.

2. ಔಷಧಿ ಮತ್ತು ಸುಗಂಧಿ ವನಸ್ಪತಿ ಸಂಶೋಧನ ಸಂಚಾಲನಾಲಯ, ಬೋರಿಯಾವಿ, ಗುಜರಾತ. (02692-271602)

ದೊಡ್ಡ ಪ್ರಮಾಣದಲ್ಲಿ ತುಳಸಿ, ನೆಲಬೇವು, ಶತಮೂಲಿ ಮತ್ತು ಅಶ್ವಗಂಧ ಇವುಗಳ ಕೃಷಿಯನ್ನು ಮಾಡುವುದಿದ್ದರೆ ಅವುಗಳ ಬೀಜಗಳು ಇಲ್ಲಿ ಸಿಗುತ್ತವೆ. ಲೋಳೆಸರ, ಬ್ರಾಹ್ಮಿ, ಮಜ್ಜಿಗೆ ಹುಲ್ಲು, ಆಡುಸೋಗೆ ಮತ್ತು ಅಮೃತ ಬಳ್ಳಿ ಇವುಗಳ ಸಸಿಗಳೂ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟಕ್ಕೆ ಸಿಗುತ್ತವೆ. ಆಸಕ್ತ ವಾಚಕರು ಇವರನ್ನು ಸಂಪರ್ಕಿಸಿ ಕೊರಿಯರ್ ಮೂಲಕ ಬೀಜಗಳು ಲಭ್ಯವಾಗಬಹುದೇ ? ಎಂದು ವಿಚಾರಿಸಬಹುದು. ಈ ಸ್ಥಳದಲ್ಲಿ ಲಭ್ಯವಿರುವ ಔಷಧಿ ವನಸ್ಪತಿಗಳ ಸಸಿಗಳು ಅಥವಾ ಬೀಜಗಳ ಮಾಹಿತಿಯು ಮುಂದಿನ ಜಾಲತಾಣದಲ್ಲಿ ಲಭ್ಯವಿದೆ. https://dmapr.icar.gov.in/HeadPage/Pricelist.html

3. ದೊಡ್ಡ ಪ್ರಮಾಣದಲ್ಲಿ ಔಷಧಿ ವನಸ್ಪತಿಗಳು ಬೇಕಾಗಿದ್ದರೆ ಅವು ಮುಂದಿನ ಸ್ಥಳಗಳಲ್ಲಿಯೂ ದೊರಕಬಹುದು.
https://aranya.gov.in/Enursery/Home/DashBoardLocation.aspx

ಸಂಕಲನಕಾರರು

ಶ್ರೀ. ಮಾಧವ ರಾಮಚಂದ್ರ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಮಾರ್ಗದರ್ಶಕರು

ಡಾ. ದಿಗಂಬರ ನಭು ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ, ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

Leave a Comment