ಭಾರತದ ವೈಶಿಷ್ಟ್ಯವನ್ನು ಅತೀ ಕಡಿಮೆ ಪದಗಳಲ್ಲಿ ಹೇಳುವುದಾದರೆ ಅದು ‘ಗುರು-ಶಿಷ್ಯ ಪರಂಪರೆ’! ಗುರುಗಳಿಲ್ಲದೆ ಬೇರೆ ಪರಿಹಾರವಿಲ್ಲ. ಶಿಷ್ಯನ ಜೀವನದಲ್ಲಿರುವ ಅಂಧಕಾರ ನಾಶ ಮಾಡಿ ಅವನನ್ನು ಪರಬ್ರಹ್ಮನೊಂದಿಗೆ ವಿಲೀನಗೊಳಿಸುವ ಕಾರ್ಯವನ್ನು ಗುರುಗಳು ಮಾಡುತ್ತಾರೆ. ಈಶ್ವರನ ಸಗುಣ ರೂಪವೆಂದರೆ ಗುರು ಮತ್ತು ಗುರುಗಳ ನಿರ್ಗುಣ ರೂಪವೆಂದರೆ ಈಶ್ವರ. ಹೀಗೆ ಅನೇಕ ವೈಶಿಷ್ಟ್ಯಗಳನ್ನು ಗುರುಗಳ ಬಗ್ಗೆ ಹೇಳಬಹುದು. ಗುರು ಎಂದರೆ ಏನು, ಜೀವನದಲ್ಲಿರುವ ಗುರುಗಳ ಮಹತ್ವ, ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
೧. ಗುರು ಎಂಬ ಪದದ ವ್ಯುತ್ಪತ್ತಿ, ವ್ಯಾಖ್ಯೆ ಮತ್ತು ಅರ್ಥ
ಅ. ವ್ಯುತ್ಪತ್ತಿ
ಗು ಶಬ್ದಸ್ತು ಅಂಧಕಾರಃ ಸ್ಯಾತ್ ರು ಶಬ್ದಸ್ತನ್ನಿರೋಧಕಃ ।
ಅಂಧಕಾರನಿರೋಧತ್ವಾತ್ ಗುರು ಇತಿ ಅಭಿಧೀಯತೇ ।।
ಅರ್ಥ: ‘ಗು’ಕಾರವೆಂದರೆ ಅಜ್ಞಾನರೂಪಿ ಅಂಧಕಾರ ಮತ್ತು ‘ರು’ಕಾರವೆಂದರೆ ಆ ಅಂಧಕಾರವನ್ನು ನಾಶ ಮಾಡುವ ಜ್ಞಾನರೂಪಿ ತೇಜಸ್ಸು; ಆದ್ದರಿಂದ ಗುರು ಎಂದರೆ ಅಜ್ಞಾನರೂಪಿ ಅಂಧಕಾರವನ್ನು ಹೋಗಲಾಡಿಸುವವನು.
ಆ. ವ್ಯಾಖ್ಯೆ ಮತ್ತು ಅರ್ಥ
ಗುರು ಶಬ್ದದ ಕೆಲವು ವ್ಯಾಖ್ಯೆಗಳು ಮತ್ತು ಅರ್ಥಗಳು ಈ ಕೆಳಗಿನಂತಿವೆ.
೧. ಶಿಷ್ಯನ ಅಜ್ಞಾನವನ್ನು ಹೋಗಲಾಡಿಸಿ, ಅವನ ಆಧ್ಯಾತ್ಮಿಕ ಉನ್ನತಿಯಾಗಲು ಯಾರು ಅವನಿಗೆ ಸಾಧನೆಯನ್ನು ಹೇಳಿ ಅದನ್ನು ಮಾಡಿಸಿಕೊಳ್ಳುತ್ತಾರೆಯೋ ಮತ್ತು ಅನುಭೂತಿಯನ್ನು ನೀಡುತ್ತಾರೆಯೋ, ಅವರನ್ನು ಗುರು ಎಂದು ಕರೆಯುತ್ತಾರೆ. ಗುರುಗಳ ಗಮನ ಶಿಷ್ಯನ ಐಹಿಕ ಸುಖದ ಕಡೆಗೆ ಇರುವುದಿಲ್ಲ (ಏಕೆಂದರೆ ಅದು ಪ್ರಾರಬ್ಧಕ್ಕನುಸಾರವಾಗಿರುತ್ತದೆ), ಕೇವಲ ಆಧ್ಯಾತ್ಮಿಕ ಉನ್ನತಿಯತ್ತ ಮಾತ್ರ ಇರುತ್ತದೆ.
೨. ಈಶ್ವರ ಮತ್ತು ಭಕ್ತರು ಬೇರೆ ಬೇರೆಯಾಗಿರುವುದಿಲ್ಲ; ಆದರೆ ಈಶ್ವರನು ನಿರ್ಗುಣನಾಗಿರುವುದರಿಂದ ಅವನಿಗೆ ದೇಹಭಾವವಿರುವ ಭಕ್ತನೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ; ಆದ್ದರಿಂದ ಅವನು ತನ್ನ ಕಾರ್ಯಬ್ರಹ್ಮನೊಂದಿಗೆ ಭಕ್ತನ ಭೇಟಿಯನ್ನು ಮಾಡಿಸುತ್ತಾನೆ. ಆ ಕಾರ್ಯಬ್ರಹ್ಮನನ್ನೇ ಗುರು ಎಂದು ಕರೆಯುತ್ತಾರೆ; ಅಂದರೆ ಗುರುಗಳ ರೂಪದಲ್ಲಿ ಅವನೇ ಮಾತನಾಡುತ್ತಿರುತ್ತಾನೆ.’ – ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾಂವ್, ಮಹಾರಾಷ್ಟ್ರ.
೨. ಗುರುಪರಂಪರೆಯ ಇತಿಹಾಸ
ಅ. ಆಚಾರ್ಯರ ಉದಯ
ಮಂತ್ರಗಳ ಸಂಹಿತೆಗಳನ್ನು ತಯಾರಿಸುವ ಕಾಲದಲ್ಲಿ ಅವುಗಳ ಅಧ್ಯಯನ, ಅಧ್ಯಾಪನ, ಸ್ವಾಧ್ಯಾಯ ಮತ್ತು ವಿನಿಯೋಗದ ಶಿಕ್ಷಣ ನೀಡುವ ಗುರುಸಂಸ್ಥೆಯ ಆವಶ್ಯಕತೆ ಉಂಟಾಯಿತು. ಹಂತಹಂತವಾಗಿ ಯಜ್ಞಕರ್ಮಗಳು ವಿಸ್ತೃತ ಮತ್ತು ಜಟಿಲವಾಗತೊಡಗಿದವು ಮತ್ತು ಆ ವಿದ್ಯೆಯಲ್ಲಿ ಪ್ರಾವೀಣ್ಯ ಪಡೆಯಲು ವಿಶೇಷ ಅಧ್ಯಯನದ ಅಗತ್ಯ ನಿರ್ಮಾಣವಾಯಿತು. ಇದರಿಂದಾಗಿಯೂ ತಿಳಿದಿರುವ ಆಚಾರ್ಯರ ಸುತ್ತಲೂ ಶಿಷ್ಯವೃಂದವು ಒಟ್ಟುಗೂಡಿತು. ಆ ಕಾಲದ ಇಂತಹ ಅನೇಕ ಆಚಾರ್ಯರ ಹೆಸರುಗಳು ಇಂದು ಲಭ್ಯವಿವೆ. ಅಂಗಿರಸ, ಗರ್ಗ, ಅತ್ರಿ, ಬೃಹಸ್ಪತಿ, ವಸಿಷ್ಠ ಇವರು ಅಂದಿನ ಪ್ರಮುಖ ಆಚಾರ್ಯರಾಗಿದ್ದಾರೆ.
ಆ. ಗುರು ಜನಕ ಮತ್ತು ಯಾಜ್ಞವಲ್ಕ್ಯ
ಶ್ರೌತಕರ್ಮದ ಬಗ್ಗೆ ಯಾರ ಮನಸ್ಸಿನಲ್ಲಿ ಅನಾಸ್ಥೆ, ಅಶ್ರದ್ಧೆ ನಿರ್ಮಾಣವಾಯಿತೋ, ಆ ವರ್ಗವು ಆರಣ್ಯಕರದ್ದಾಗಿದೆ. ಈ ವರ್ಗದಲ್ಲಿ ಅಧ್ಯಾತ್ಮ ವಿಷಯದ ಜೋಪಾಸನೆಯಾಗತೊಡಗಿತು ಮತ್ತು ಆ ವಿಷಯಗಳನ್ನು ಪರಂಪರೆಯಿಂದ ಉಪದೇಶಿಸುವ ಗುರುಗಳೂ ಉತ್ಪನ್ನವಾಗತೊಡಗಿದರು. ಈ ಗುರುಗಳಲ್ಲಿ ಜನಕ ಮತ್ತು ಯಾಜ್ಞವಲ್ಕ್ಯರ ಹೆಸರುಗಳನ್ನು ಮುಖ್ಯವಾಗಿ ಹೇಳಬಹುದು.
೩. ಗುರುಕೃಪೆ
ಅ. ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ?
‘ಸಂಕಲ್ಪ’ ಮತ್ತು ‘ಅಸ್ತಿತ್ವ’ ಎಂಬ ಎರಡು ಪ್ರಕಾರಗಳಿಂದ ಗುರುಕೃಪೆಯು ಕಾರ್ಯ ಮಾಡುತ್ತದೆ.
೧. ಸಂಕಲ್ಪ (ಸೂಕ್ಷ್ಮತಮ)
‘ಯಾವುದಾದರೂ ಒಂದು ವಿಷಯವು ನೆರವೇರಲಿ’ ಎಂಬ ವಿಚಾರವಷ್ಟೇ ಓರ್ವ ಉನ್ನತ ಮಟ್ಟದ ವ್ಯಕ್ತಿಯ ಮನಸ್ಸಿನಲ್ಲಿ ಬಂದರೆ, ಅದು ನಡೆಯುತ್ತದೆ. ಇದಲ್ಲದೆ ಅವರು ಬೇರೇನನ್ನೂ ಮಾಡಬೇಕಾಗಿರುವುದಿಲ್ಲ. ಶೇ. ೮೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಉನ್ನತರ ವಿಷಯದಲ್ಲಿ ಇದು ಸಾಧ್ಯವಾಗುತ್ತದೆ. ‘ಶಿಷ್ಯನ ಆಧ್ಯಾತ್ಮಿಕ ಉನ್ನತಿಯಾಗಲಿ’, ಎಂಬ ಸಂಕಲ್ಪವು ಗುರುಗಳ ಮನಸ್ಸಿನಲ್ಲಿ ಬಂದರೆ ಮಾತ್ರ ಶಿಷ್ಯನ ನಿಜವಾದ ಉನ್ನತಿಯಾಗುತ್ತದೆ. ಇದನ್ನೇ ಗುರುಕೃಪೆ ಎನ್ನುತ್ತಾರೆ.
೨. ಅಸ್ತಿತ್ವ (ಸೂಕ್ಷ್ಮಾತಿಸೂಕ್ಷ್ಮ)
ಈ ಅಂತಿಮ ಹಂತದಲ್ಲಿ ಸಂಕಲ್ಪವನ್ನೂ ಮಾಡಬೇಕಾಗಿರುವುದಿಲ್ಲ. ಕೇವಲ ಗುರುಗಳ ಅಸ್ತಿತ್ವದಿಂದ, ಸಾನ್ನಿಧ್ಯದಿಂದ ಅಥವಾ ಸತ್ಸಂಗದಿಂದ ಶಿಷ್ಯನ ಸಾಧನೆ ಮತ್ತು ಉನ್ನತಿಯು ತಾನಾಗಿಯೇ ಆಗುತ್ತದೆ.
ಜ್ಞಾನೇಶ್ವರಿಯಲ್ಲಿ ಮಂದಿನಂತೆ ಹೇಳಲಾಗಿದೆ – ‘ಇದು ನನ್ನಿಂದಾಯಿತು; ಆದರೆ ನಾನು ಮಾಡಲಿಲ್ಲ. ಇದನ್ನು ಯಾರು ಗುರುತಿಸಿದರೋ, ಅವರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾದರು’. ಇಲ್ಲಿನ ನನ್ನಿಂದಾಯಿತು, ಎಂದರೆ ನನ್ನ ಅಸ್ತಿತ್ವದಿಂದ ಆಯಿತು, ಇಲ್ಲಿನ ‘ನಾನು’ ಎಂಬುದು ಪರಮೇಶ್ವರನದ್ದಾಗಿದೆ; ಆದರೆ ನಾನು ಮಾಡಲಿಲ್ಲ ಎಂದರೆ ಕರ್ತೃತ್ವವು ನನ್ನ ಬಳಿಯಿಲ್ಲ! ಇದಕ್ಕೊಂದು ಸುಂದರ ಉದಾಹರಣೆಯೆಂದರೆ ಸೂರ್ಯನು ಉದಯಿಸಿದಾಗ ಎಲ್ಲರೂ ಏಳುತ್ತಾರೆ, ಹೂವುಗಳು ಅರಳುತ್ತವೆ ಇತ್ಯಾದಿ. ಇದು ಕೇವಲ ಸೂರ್ಯನ ಅಸ್ತಿತ್ವದಿಂದ ಆಗುತ್ತದೆ. ಸೂರ್ಯನು ಪ್ರತಿಯೊಬ್ಬರಿಗೂ ಬಂದು ‘ಏಳಿ’ ಎಂದು ಹೇಳುವುದಿಲ್ಲ ಅಥವಾ ಹೂವುಗಳಿಗೆ ‘ಅರಳಿ’ ಎಂದು ಹೇಳುವುದಿಲ್ಲ. ಶೇ. ೯೦ ಕ್ಕಿಂತ ಹೆಚ್ಚು ಮಟ್ಟದ ಗುರುಗಳ ಕಾರ್ಯವು ಈ ರೀತಿಯದ್ದಾಗಿರುತ್ತದೆ.
ಆ. ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ಏನು ಮಾಡಬೇಕು?
ತೀವ್ರ ಮುಮುಕ್ಷುತ್ವ ಅಥವಾ ಈಶ್ವರಪ್ರಾಪ್ತಿಯ ತೀವ್ರ ಹಂಬಲ ಎಂಬ ಈ ಒಂದು ಗುಣದಿಂದ ಗುರುಪ್ರಾಪ್ತಿಯು ಬೇಗನೆ ಆಗುತ್ತದೆ ಮತ್ತು ಗುರುಕೃಪೆಯು ನಿರಂತರವಾಗಿ ಉಳಿಯುತ್ತದೆ. ತಾರುಣ್ಯದಲ್ಲಿ ಹುಡುಗಿಯೊಬ್ಬಳು ತನ್ನನ್ನು ಪ್ರೀತಿಸಲಿ ಎಂದು ತರುಣನೊಬ್ಬ ಹಗಲಿರುಳು ಅವಳದ್ದೇ ಧ್ಯಾಸ ಹಿಡಿದು ‘ನಾನು ಏನು ಮಾಡಿದರೆ ಅವಳಿಗೆ ಖುಷಿಯಾಗುತ್ತದೆ’ ಎಂಬ ದೃಷ್ಟಿಯಿಂದ ಪ್ರಯತ್ನಿಸುತ್ತಾನೆ. ಹಾಗೆಯೇ ಯಾರಾದರೂ ಗುರುಗಳು ತನ್ನನ್ನು ‘ನನ್ನವನು’ ಎಂದು ಕರೆಯಲಿ, ಅವರ ಕೃಪೆಯಾಗಲಿ ಎಂಬುದಕ್ಕಾಗಿ ಹಗಲಿರುಳು ಅದೇ ವಿಷಯದ ಧ್ಯಾಸ ಹಿಡಿದು ‘ನಾನು ಏನು ಮಾಡಿದರೆ ಅವರು ಪ್ರಸನ್ನರಾಗುತ್ತಾರೆ’ ಎಂಬ ದೃಷ್ಟಿಯಿಂದ ಪ್ರಯತ್ನಿಸುವುದು ಆವಶ್ಯಕವಾಗಿರುತ್ತದೆ. ಕಲಿಯುಗದಲ್ಲಿ ಹಿಂದಿನ ಮೂರು ಯುಗಗಳಷ್ಟು ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗುವುದು ಕಠಿಣವಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗುರುಕೃಪೆಯಿಲ್ಲದೆ ಗುರುಪ್ರಾಪ್ತಿಯಾಗುವುದಿಲ್ಲ. ಭವಿಷ್ಯದಲ್ಲಿ ಯಾರು ತನ್ನ ಶಿಷ್ಯರಾಗಲಿದ್ದಾನೆ ಎಂಬುದು ಗುರುಗಳಿಗೆ ಮೊದಲೇ ತಿಳಿದಿರುತ್ತದೆ.
ಇ. ಗುರುಕೃಪೆಯ ತುಲನಾತ್ಮಕ ಮಹತ್ವ
ಮುಂದಿನ ಕೋಷ್ಟಕದಲ್ಲಿ ಶಿಷ್ಯನ ಯಾವ ಕೃತಿಯಿಂದ ಎಷ್ಟು ಪ್ರಮಾಣದಲ್ಲಿ ಗುರುಕೃಪೆಯಾಗಲು ಸಾಧ್ಯವಿದೆ ಎಂಬುದನ್ನು ನೀಡಲಾಗಿದೆ
| ಅನು. ಕ್ರ. | ಶಿಷ್ಯನ ಕೃತಿ | ಗುರುಕೃಪೆ (%) |
|---|---|---|
| ೧. | ಕೇವಲ ದರ್ಶನ ಪಡೆಯುವುದು | ೨ |
| ೨. | ಕೇವಲ ಅಧ್ಯಾತ್ಮ ವಿಷಯಕ ಪ್ರಶ್ನೆಗಳನ್ನು ಕೇಳುವುದು | ೧೦ |
| ೩. | ಆಶ್ರಮದ ಕೆಲಸಗಳನ್ನು ಮಾಡುವುದು | ೪೦ |
| ೪. | ಅಧ್ಯಾತ್ಮದ ಪರಿಣಾಮಕಾರಿ ಪ್ರಸಾರ* ಮಾಡುವುದು (ಅರೆಕಾಲಿಕ) | ೭೦ |
| ೫. | ಅಧ್ಯಾತ್ಮದ ಪರಿಣಾಮಕಾರಿ* ಪ್ರಸಾರ ಮಾಡುವುದು (ಪೂರ್ಣಾವಧಿ) | ೧೦೦ |
* ಪರಿಣಾಮಕಾರಿ ಪ್ರಸಾರ ಮಾಡುವವರಲ್ಲಿ ಶಿಷ್ಯನ ಎಲ್ಲ ಗುಣಗಳಿರಬೇಕಾಗುತ್ತದೆ. ಕೇವಲ ರಾಜಕೀಯ ಅಥವಾ ಸಾಮಾಜಿಕ ಪ್ರಚಾರಕರಂತೆ ಕೆಲಸ ಮಾಡಿದರೆ ಆಗುವುದಿಲ್ಲ.
೪. ಗುರುತತ್ತ್ವ ಒಂದೇ ಆಗಿರುವುದು
ಎಲ್ಲ ಗುರುಗಳು ಬಾಹ್ಯತಃ (ಸ್ಥೂಲದೇಹದಿಂದ) ಬೇರೆ ಬೇರೆಯಾಗಿದ್ದರೂ, ಒಳಗಿನಿಂದ ಮಾತ್ರ ಅವರು ಒಂದೇ ಆಗಿರುತ್ತಾರೆ. ಯಾವ ರೀತಿ ಯಾವುದೇ ಹಸುವಿನ ಕೆಚ್ಚಲಿನಿಂದ ಸಮಾನವಾಗಿ ಶುದ್ಧ ಮತ್ತು ನಿರ್ಮಲ ಹಾಲು ಬರುತ್ತದೆಯೋ, ಅದೇ ರೀತಿ ಪ್ರತಿಯೊಬ್ಬ ಗುರುಗಳಲ್ಲಿನ ಗುರುತತ್ತ್ವವು ಒಂದೇ ಆಗಿರುವುದರಿಂದ ಅವರಿಂದ ಬರುವ ಆನಂದದ ಲಹರಿಗಳು ಒಂದೇ ರೀತಿಯದ್ದಾಗಿರುತ್ತದೆ.
೫. ಗುರುಗಳ ಬಳಿ ಏನು ಕೇಳಬೇಕು?
ಅ. ಗುರುಗಳ ದುರುಪಯೋಗ ಬೇಡ
ಒಬ್ಬ ಸಿನಿಮಾ ಟಿಕೆಟ್‌ಗಳು ಸಿಗಲಿ ಎಂದು ಗುರುಗಳಲ್ಲಿ ಪ್ರಾರ್ಥಿಸಿದನಂತೆ! ನಿಜವಾದ ಶಿಷ್ಯನು ಖಂಡಿತವಾಗಿಯೂ ಗುರುಗಳ ಬಳಿ ಇಂತಹ ವ್ಯವಹಾರಿಕ ವಿಷಯಗಳನ್ನು ಕೇಳುವುದಿಲ್ಲ. ಹೊಸ ಶಿಷ್ಯರು ಮಾತ್ರ ತಮಾಷೆಗಾಗಿಯೂ ಇಂತಹ ವಿಚಾರವನ್ನು ಮನಸ್ಸಿನಲ್ಲಿ ತರಬಾರದು.
ಆ. ನನ್ನ ಬಳಿ ಸುಖ ಕೇಳಬೇಡಿ, ದುಃಖ ಸಹಿಸುವ ಶಕ್ತಿ ಕೇಳಿ
ಭಾವಾರ್ಥ: ಸುಖವು ಪ್ರಕೃತಿಯ ಅಂಗವಾಗಿರುವುದರಿಂದ ಅಶಾಶ್ವತವಾಗಿರುತ್ತದೆ, ಆದ್ದರಿಂದ ಗುರುಗಳ ಬಳಿ ಸುಖವನ್ನು ಕೇಳಬಾರದು. ಶಾಶ್ವತ ಆನಂದವನ್ನು ಕೊಡಿಸುವುದೇ ಗುರುಗಳ ನಿಜವಾದ ಕಾರ್ಯವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಪ್ರಾರಬ್ಧದಲ್ಲಿ ದುಃಖವನ್ನು ಅನುಭವಿಸಬೇಕಾಗಿ ಬಂದರೆ, ಆ ದುಃಖದಾಯಕ ಪ್ರಸಂಗಗಳಿಂದ ಉಂಟಾಗುವ ದುಃಖವನ್ನು ಸಹಿಸುವ ಶಕ್ತಿಯನ್ನು ಮಾತ್ರ ಗುರುಗಳು ಖಂಡಿತವಾಗಿ ನೀಡುತ್ತಾರೆ; ಆದ್ದರಿಂದ ಅದನ್ನು ಕೇಳಲು ಅಡಚಣೆಯಿಲ್ಲ (ಕೇಳಬಹುದು).
ಇ. ಗುರು: ಏನು ಬೇಕು?
ಶಿಷ್ಯ: ನನ್ನ ನೆನಪು ತಮ್ಮ (ತಮ್ಮ ನೆನಪು ನನ್ನ) ಹೃದಯದಲ್ಲಿ ಅಖಂಡವಾಗಿರಲಿ.
ಈ. ಶ್ರೀ ಶಂಕರಾಚಾರ್ಯರ ಜೀವನದ ಘಟನೆ
“ನಿಮಗೆ ಏನಾದರೂ ಕೇಳುವುದಿದ್ದರೆ ಕೇಳಿ” ಎಂದು ಶಂಕರಾಚಾರ್ಯರು ಹೇಳಿದರು. ಪದ್ಮಪಾದರ ಕಣ್ಣೀರು ಹರಿಯತೊಡಗಿತು. ಕೈ ಮುಗಿದು, “ಆಚಾರ್ಯದೇವರೇ, ಈಗ ಕೇಳಲು ಏನು ಉಳಿದಿಲ್ಲ. ಸಂಪೂರ್ಣ ಜೀವನದುದ್ದಕ್ಕೂ ಪರಿಶ್ರಮ ಪಟ್ಟು ತಾವು ಯಾವ ಮಾರ್ಗವನ್ನು ರೂಪಿಸಿಕೊಟ್ಟಿದ್ದೀರೋ, ತಮ್ಮ ಆಶೀರ್ವಾದದಿಂದ ನಾವು ಅದೇ ಮಾರ್ಗವನ್ನು ತುಳಿಯುತ್ತೇವೆ. ತಾವೇ ನಮ್ಮ ಜೀವನಪಥದಲ್ಲಿನ ಪ್ರಕಾಶಜ್ಯೋತಿಯಾಗಿದ್ದೀರಿ. ತಮ್ಮ ಪದಚಿಹ್ನೆಗಳನ್ನು ಅನುಸರಿಸುವ ಸಾಮರ್ಥ್ಯವು ನಮ್ಮಲ್ಲಿ ಉತ್ಪನ್ನವಾಗಲಿ ಎಂಬ ಆಶೀರ್ವಾದವನ್ನು ದಯಪಾಲಿಸಿ” ಎಂದು ಹೇಳಿದರು.
ಉ. ಗುರುಗಳ ಬಳಿ ಏನನ್ನೂ ಕೇಳಬಾರದು
ನಮ್ಮ ಗುರುಗಳು ಸರ್ವಜ್ಞರಾಗಿದ್ದಾರೆ. ನಮಗೆ ಏನು ಆವಶ್ಯಕ ಮತ್ತು ಉಪಯುಕ್ತವಾಗಿದೆ ಎಂಬುದು ನಮಗಿಂತ ಅವರಿಗೆ ಹೆಚ್ಚು ತಿಳಿಯುತ್ತದೆ ಎಂಬ ಶ್ರದ್ಧೆಯಿಂದ ಕೇವಲ ಸಾಧನೆಯನ್ನು ಮಾಡುತ್ತಲೇ ಇರಬೇಕು. ನಮ್ಮ ಪಾತ್ರತೆಯಿಲ್ಲದಿದ್ದಾಗ ನಾವು ಏನನ್ನಾದರೂ ಕೇಳಿದರೆ ಅವರು ನೀಡುವುದಿಲ್ಲ. ನಮ್ಮ ಪಾತ್ರತೆಯಿದ್ದು ನಾವು ಏನನ್ನೂ ಕೇಳದಿದ್ದರೂ ಅವರು ನೀಡೇ ನೀಡುತ್ತಾರೆ. ಹಾಗಾದರೆ ಅವರ ಬಳಿ ಏನನ್ನಾದರೂ ಕೇಳುವುದಾದರೂ ಏಕೆ?
ಊ. ತನು, ಮನ, ಧನ ಮತ್ತು ಪ್ರಾಣವನ್ನು ಗುರುಗಳಿಗೆ ಅರ್ಪಿಸಿದ ಮೇಲೆ ಅವರ ಬಳಿ ಕೇಳುವಂತಹದ್ದು ಏನೂ ಉಳಿಯುವುದಿಲ್ಲ.
ಋ. ಏಕನಾಥ ಮಹಾರಾಜರ ಪ್ರಕಾರ ಶಿಷ್ಯನ ಶ್ರದ್ಧೆ ಹೇಗಿರುತ್ತದೆ
ಏಕನಾಥಿ ಭಾಗವತದಲ್ಲಿ ಮುಂದಿನಂತೆ ಹೇಳಲಾಗಿದೆ (ಅಧ್ಯಾಯ ೨೪, ಓವಿ ೩೪೧) – ಜೀವದ ಮೇಲೆ ಎಷ್ಟೇ ಘೋರ ವಿಘ್ನ ಬಂದರೂ, ನಿಜವಾದ ಸಾಧಕನು ಸದ್ಗುರುಗಳಿಗೂ ಪ್ರಾರ್ಥನೆ ಸಲ್ಲಿಸುವುದಿಲ್ಲ; ಏಕೆಂದರೆ ನಾಮಜಪದ (ಗುರುಗಳು ಹೇಳಿರುವ ಸಾಧನೆ) ಮುಂದೆ ವಿಘ್ನವು ಏನೂ ಮಾಡದು ಎಂಬ ಧೃಡನಿಶ್ಚಿಯ ಅವನಿಗೆ ಇರುತ್ತದೆ.
ಆಧಾರ : ಸನಾತನದ ‘ಗುರುಕೃಪಾಯೋಗ’ ಮತ್ತು ‘ಆದರ್ಶ ಶಿಷ್ಯ: ಖಂಡ ೧’ ಗ್ರಂಥಗಳು.
ಶಿಷ್ಯಭಾವದ ಮಹತ್ವ
ಶಿಕ್ಷಕ ಮತ್ತು ಗುರು
ದೇವರು ವಿವರಿಸಿದ ಗುರುಗಳ ಮಹತ್ವ
‘ಗುರುಮಂತ್ರವನ್ನು ಗುಪ್ತವಾಗಿಡಬೇಕು’ ಎಂದು ಏಕೆ ಹೇಳುತ್ತಾರೆ ?
ಗುರುಮಂತ್ರ
ಗುರುದೀಕ್ಷೆ, ಅನುಗ್ರಹ, ಗುರುವಾಕ್ಯ ಮತ್ತು ಗುರುಕೀಲಿಕೈ (ಮಾಸ್ಟರ್ ಕೀ)