ಗುರುದೀಕ್ಷೆ, ಅನುಗ್ರಹ, ಗುರುವಾಕ್ಯ ಮತ್ತು ಗುರುಕೀಲಿಕೈ (ಮಾಸ್ಟರ್ ಕೀ)

ಅ. ಗುರುದೀಕ್ಷೆ

‘ದೀಯತೇ ಸಮ್ಯಕ್ ಈಕ್ಷಣಂ ಯಸ್ಯಾಂ ಸಾ |’ ಅಂದರೆ ಯಾವುದರಿಂದಾಗಿ ಸಮ್ಯಕ್ (ಯಥಾರ್ಥ) ದೃಷ್ಟಿಯನ್ನು ಕೊಡಲಾಗುತ್ತದೆಯೋ ಅದೇ ದೀಕ್ಷೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗುರುದೀಕ್ಷೆ ಎಂದರೆ ಗುರುಗಳು ಹೇಳಿರುವ ಸಾಧನೆ. ದೀಕ್ಷೆಯ ಸಮಯದಲ್ಲಿ ಹೆಚ್ಚಾಗಿ ಗುರುಮಂತ್ರವನ್ನು ಕೊಡಲಾಗುತ್ತದೆ.

ಅ ೧. ವಿಧಗಳು

ಅ ೧ ಅ. ಶಬ್ದದೀಕ್ಷೆ : ಯಾವಾಗ ಗುರುಗಳ ಶಬ್ದದೊಂದಿಗೆ ಶಕ್ತಿ ಸಂಕ್ರಮಿತವಾಗಿ ಶಿಷ್ಯನಲ್ಲಿ ‘ನಾನು ಬ್ರಹ್ಮನಾಗಿದ್ದೇನೆ’ ಎಂಬ ಭಾವ ನಿರ್ಮಾಣವಾಗುತ್ತದೆಯೋ, ಆಗ ಶಬ್ದದೀಕ್ಷೆ ಘಟಿಸುತ್ತದೆ. ಈ ಪದ್ಧತಿಯಲ್ಲಿ ಗುರುಗಳು ಶಿಷ್ಯನನ್ನು ತಮ್ಮ ಬಳಿ ಕರೆದು ಅವನ ಕಿವಿಯಲ್ಲಿ ಯಾವುದಾದರೊಂದು ಮಂತ್ರವನ್ನು ಹೇಳುತ್ತಾರೆ.

ಅ ೧ ಆ. ಸ್ಪರ್ಶದೀಕ್ಷೆ : ಈ ವಿಧದಲ್ಲಿ ಯಾವುದೇ ರೀತಿಯಲ್ಲಿ ಸ್ಪರ್ಶವನ್ನು ಮಾಡಲಾಗುತ್ತದೆ. ಕೆಲವೊಮ್ಮೆ ಗುರುಗಳು ಹಸ್ತಸ್ಪರ್ಶವನ್ನು ಮಾಡುತ್ತಾರೆ, ಕೆಲವೊಮ್ಮೆ ಆಜ್ಞಾಚಕ್ರವಿರುವ ಭೂಮಧ್ಯ ಸ್ಥಾನವನ್ನು ಬೆರಳುಗಳಿಂದ ಗಟ್ಟಿಯಾಗಿ ಹಿಡಿಯುತ್ತಾರೆ ಅಥವಾ ಕೆಲವೊಮ್ಮೆ ಯಾವುದಾದರೊಂದು ವಸ್ತುವನ್ನು ಮೈಮೇಲೆ ಎಸೆಯುತ್ತಾರೆ.

ಅ ೧ ಇ. ದರ್ಶನ ದೀಕ್ಷೆ : ಗುರುಗಳ ದರ್ಶನವಾದ ಕೂಡಲೆ ದೀಕ್ಷೆಯು ಸಿಗುತ್ತದೆ. ಪರಮ ಪೂಜ್ಯ ಭಕ್ತರಾಜ ಮಹಾರಾಜರಿಗೆ ಅವರ ಗುರುಗಳಾದ ಶ್ರೀ ಅನಂತಾನಂದ ಸಾಯೀಶರ ಪ್ರಥಮ ದರ್ಶನವಾದ ಕೂಡಲೆ ಅವರು (ಭಕ್ತರಾಜ ಮಹಾರಾಜರು) ಭಾವಾವಸ್ಥೆಗೆ ಹೋದರು.

ಅ ೧ ಈ. ದೃಕ್‌ದೀಕ್ಷೆ : ಈ ದೀಕ್ಷಾಪದ್ಧತಿಯಲ್ಲಿ ಗುರುಗಳು ತಮ್ಮ ಕೃಪಾದೃಷ್ಟಿಯಿಂದ ತಮ್ಮ ಅಂತರ್ಶಕ್ತಿಯನ್ನು ಶಿಷ್ಯನಲ್ಲಿ ಸಂಕ್ರಮಿಸುತ್ತಾರೆ. ಇದನ್ನೇ ‘ಮಯೂರ ದೀಕ್ಷೆ’ ಎಂದೂ ಕರೆಯುತ್ತಾರೆ.

ಅ ೧ ಉ. ತೀರ್ಥದೀಕ್ಷೆ : ಶಿಷ್ಯನಿಗೆ ತೀರ್ಥವನ್ನು ಕುಡಿಯಲು ಕೊಟ್ಟು ಆ ಮೂಲಕ ದೀಕ್ಷೆಯನ್ನು ಕೊಡಲಾಗುತ್ತದೆ.

ಅ ೧ ಊ. ಪತ್ರದೀಕ್ಷೆ : ಗುರುಗಳು ಬರೆದಿರುವ ಪತ್ರವನ್ನು ನೋಡಿದಾಗ ಅಥವಾ ಓದಿದಾಗ ಶಿಷ್ಯನಿಗೆ ದೀಕ್ಷೆಯು ಸಿಗುತ್ತದೆ.

ಅ ೧ ಎ. ಸಂಕಲ್ಪದೀಕ್ಷೆ (ಅನುಗ್ರಹ, ಕೃಪಾದೀಕ್ಷೆ) : ಈ ದೀಕ್ಷೆಯು ಗುರುಗಳ ಸಂಕಲ್ಪಮಾತ್ರದಿಂದಲೇ ಶಿಷ್ಯನಿಗೆ ಪ್ರಾಪ್ತವಾಗುತ್ತದೆ.

ಯಥಾ ಕೂರ್ಮಃ ಸ್ವತನಯಾನ್ ಧ್ಯಾನಮಾತ್ರೇಣ ಪೋಷಯೇತ್ |
ವೇಧದೀಕ್ಷೋಪದೇಶಶ್ಚ ಮಾನಸಃ ಸ್ಯಾತ್ ತಥಾವಿಧಃ || – ಕುಲಾರ್ಣವತಂತ್ರ, ಉಲ್ಲಾಸ ೧೪, ಶ್ಲೋಕ ೩೭

ಅರ್ಥ : ಯಾವ ರೀತಿ ಆಮೆಯು ಕೇವಲ ಮನಸ್ಸಿನಿಂದ ಚಿಂತನೆ ಮಾಡಿ ಭೂಮಿಯ ಕೆಳಗಿಟ್ಟಿರುವ ಮೊಟ್ಟೆಗಳಿಗೆ ಕಾವು ಕೊಡುತ್ತದೆ, ಮರಿಗಳನ್ನು ಬೆಳೆಸುತ್ತದೆ ಮತ್ತು ಅವುಗಳ ಪೋಷಣೆ ಮಾಡುತ್ತದೆಯೋ, ಹಾಗೆಯೇ ಗುರುಗಳು ಸಂಕಲ್ಪಮಾತ್ರದಿಂದ ಶಿಷ್ಯನ ಶಕ್ತಿಯನ್ನು ಜಾಗೃತಗೊಳಿಸುತ್ತಾರೆ ಮತ್ತು ಅವನಲ್ಲಿ ಶಕ್ತಿಯ ಸಂಚಾರವನ್ನು ಮಾಡುತ್ತಾರೆ.

ಅ ೧ ಏ. ಸ್ವಪ್ನದೃಷ್ಟಾಂತದ ಮೂಲಕ ದೀಕ್ಷೆ 

ಆ. ಅನುಗ್ರಹ (ಆಶೀರ್ವಾದ, ಕೃಪೆ)

‘ಅನು (ಪಶ್ಚಾತ್) ಗೃಹ್ಣಾಮಿ ಇತಿ |’ ಇಲ್ಲಿ ‘ಪಶ್ಚಾತ್ ಗೃಹ್ಣಾಮಿ |’ ಅಂದರೆ ಗುರುಗಳಿಂದ ನಂತರ ತೆಗೆದುಕೊಳ್ಳುವುದು. ವಿದ್ಯೆಯು ಪೂರ್ಣವಾದ ನಂತರ ಆ ವಿದ್ಯೆಯು ಫಲದ್ರೂಪವಾಗಬೇಕೆಂದು ಗುರುಗಳಿಂದ ದೊರಕಿದ ಆಶೀರ್ವಾದವೆಂದರೆ ಅನುಗ್ರಹ. ಶ್ರೀ ಗುರುಗಳ ಅನುಗ್ರಹಶಕ್ತಿಗೆ ‘ಗುರುಪದ’ ಎನ್ನುತ್ತಾರೆ. ಅದು ಉಪೇಯವಾಗಿದೆ, ಅಂದರೆ ಉಪಾಯಗಳ ಸಹಯೋಗದಿಂದ ಅದರ ಪ್ರಾಪ್ತಿಯಾಗುತ್ತದೆ; ಶ್ರೀ ಗುರುಗಳೇ ಪ್ರತ್ಯಕ್ಷ ಉಪಾಯವಾಗಿದ್ದಾರೆ !

‘ಅಭೀಷ್ಟಸಂಪಾದನೇಚ್ಛಾರೂಪಃ ಪ್ರಸಾದಃ |’ ಅಂದರೆ ‘ಮನೋವಾಂಚ್ಛಿತ ವಸ್ತುವನ್ನು ಸಂಪಾದನೆ ಮಾಡುವುದರ ಬಗ್ಗೆ (ಭಗವಂತನ) ಇಚ್ಛಾರೂಪ ಪ್ರಸಾದವೆಂದರೆ ಅನುಗ್ರಹ.’ (ನ್ಯಾಯಕೋಶ) ಗುರುಗಳೆಂದರೆ ಭಗವಂತ ಮತ್ತು ಭಗವಂತನೆಂದರೆ ಗುರುಗಳು. ಭಗವಂತನ ಕೃಪೆಯಾಗುವುದೆಂದರೆ ಅನುಗ್ರಹ. ಎಲ್ಲ ಸಂಪ್ರದಾಯಗಳಲ್ಲಿ ಭಗವಂತನ ಅನುಗ್ರಹರೂಪದ ಕೃಪೆಗೆ ಮಹತ್ವವನ್ನು ಕೊಡಲಾಗಿದೆ. ಶ್ರೀಮದ್ಭಗವದ್ಗೀತೆಯ ೧೮ ನೇ ಅಧ್ಯಾಯದ ೫೬ ನೇ ಶ್ಲೋಕದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ‘ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಂ |’, ಅಂದರೆ ‘ನನ್ನ ಭಕ್ತನು ನನ್ನ ಕೃಪೆಯಿಂದ ಶಾಶ್ವತ ಪದವನ್ನು ಪ್ರಾಪ್ತ ಮಾಡಿಕೊಳ್ಳುತ್ತಾನೆ’, ಈ ಶಬ್ದಗಳಲ್ಲಿ ಅನುಗ್ರಹದ ಮಹತ್ವವನ್ನು ಹೇಳಲಾಗಿದೆ. ಎಲ್ಲ ಭಕ್ತಿ ಸಂಪ್ರದಾಯಗಳಲ್ಲಿ ಅನನ್ಯ ಭಕ್ತಿಯಿಂದ ಭಗವಂತನ ಕೃಪೆಯನ್ನು ಅಂದರೆ ಅನುಗ್ರಹವನ್ನು ಪಡೆದರೆ ಪರಮ ಕಲ್ಯಾಣವನ್ನು ಸಾಧಿಸಬಹುದು ಎಂದು ನಂಬಲಾಗಿದೆ.

ಇ. ಗುರುವಾಕ್ಯ

ಶಿಷ್ಯನಲ್ಲಿ ನಿಷ್ಠೆಯಿದ್ದರೆ ವಿವೇಕದ (ಬುದ್ಧಿಯ) ಅಪೇಕ್ಷೆಯಿಲ್ಲದೆ ಆತ್ಮಜ್ಞಾನವನ್ನು ಮಾಡಿಕೊಡುವ ಶಬ್ದಸಮೂಹವೆಂದರೆ ಗುರುವಾಕ್ಯ.

ಈ. ಗುರುಕೀಲಿಕೈ

ಎಲ್ಲ ಬಾಗಿಲುಗಳನ್ನು, ಅಂದರೆ ಕಾಲದ ಬಾಗಿಲನ್ನೂ ತೆರೆಯುವ ಶಕ್ತಿ ಎಂದರೆ ಗುರುಕೀಲಿಕೈ (ಮಾಸ್ಟರ್ ಕೀ).

(ಆಧಾರ : ಸನಾತನ ನಿರ್ಮಿತ ‘ಗುರುಗಳ ವಿಧಗಳು ಮತ್ತು ಗುರುಮಂತ್ರ’ ಗ್ರಂಥ)

Leave a Comment