ಶಿಷ್ಯಭಾವ ಏಕೆ ಮಹತ್ವದ್ದಾಗಿದೆ? ಸಾಧನೆ ಮಾಡುವಾಗ ಸಾಧಕನು ಶಿಷ್ಯನ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಅತಿ ಆವಶ್ಯಕವಾಗಿರುತ್ತದೆ. ಸಾಧಕನು ಶಿಷ್ಯನಾದ ಮೇಲೆ, ಅವನ ಮುಂದಿನ ಪ್ರಗತಿಯು ಗುರುಕೃಪೆಯಿಂದ ವೇಗವಾಗಿ ಆಗುತ್ತಾ ಹೋಗುತ್ತದೆ. ಶಿಷ್ಯನಾದ ಮೇಲೆಯೇ ಗುರುಗಳು ನಿಜವಾದ ಅರ್ಥದಲ್ಲಿ ಸಾಧಕನ ಸರ್ವಾಂಗೀಣ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೆ. ಅವನು ಸಾಧನೆಯ ಪಥದಲ್ಲಿ ಜಾರಿ ಬೀಳಬಾರದು ಎಂದು ಅವನಿಗೆ ಸತತವಾಗಿ ಮಾರ್ಗದರ್ಶನ ನೀಡುತ್ತಾರೆ. ಹಾಗೆಯೇ ಅವನು ವಿಚಲಿತನಾದಾಗ ಅವನಿಗೆ ಪುನಃ ಆಧಾರ ನೀಡಿ ಮುಂದೆ ಕರೆದೊಯ್ಯುತ್ತಾರೆ. ಇವೆಲ್ಲವನ್ನೂ ಅವರು ಅತ್ಯಂತ ಪ್ರೀತಿಯಿಂದ ಮಾಡುತ್ತಾರೆ; ಏಕೆಂದರೆ ಗುರುಗಳ ಜೀವನದಲ್ಲಿ ಶಿಷ್ಯರ ಪ್ರಗತಿ ಮಾಡಿಸುವುದನ್ನು ಬಿಟ್ಟು ಬೇರೆ ಧ್ಯೇಯವೇ ಇರುವುದಿಲ್ಲ.
ಶಿಷ್ಯನಾದ ನಂತರ ಸಾಧಕನು ತನ್ನ ಶಿಷ್ಯಭಾವವನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ, ಆಗ ಮಾತ್ರ ಅವನು ವೇಗವಾಗಿ ಮುಂದಿನ ಪ್ರಗತಿಯನ್ನು ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಮಹತ್ವದ ಕಾರಣವೆಂದರೆ ಶೇ. ೧೦೦ ಆಧ್ಯಾತ್ಮಿಕ ಮಟ್ಟದವರೆಗೆ ಸಾಧಕನು ಸತತವಾಗಿ ಕಲಿಯುತ್ತಲೇ ಮುಂದೆ ಸಾಗಬೇಕಾಗುತ್ತದೆ. ಅವನು ಅಧ್ಯಯನವನ್ನು ಹೆಚ್ಚಿಸಬೇಕಾಗುತ್ತದೆ. ಸಾಧನೆಯನ್ನು ಹೆಚ್ಚು ಉತ್ತಮ ರೀತಿಯಲ್ಲಿ ಮತ್ತು ಹಂಬಲದಿಂದ ಮಾಡಬೇಕಾಗುತ್ತದೆ. ಹಾಗೆಯೇ ತನ್ನ ದೋಷ ಮತ್ತು ಅಹಂ ಇವುಗಳ ಸಮೂಲ ನಿರ್ಮೂಲನೆಯಾಗುವವರೆಗೆ ಸತತವಾಗಿ ಜಾಗರೂಕನಾಗಿರಬೇಕಾಗುತ್ತದೆ. ಇದಕ್ಕಾಗಿ ಶಿಷ್ಯನು ಸಂತನಾದರೂ ಸಹ, ಅವನು ಸತತವಾಗಿ ಶಿಷ್ಯಭಾವದಲ್ಲಿ ಇರುವುದು ಆವಶ್ಯಕವಾಗಿರುತ್ತದೆ. ಈ ಲೇಖನದಲ್ಲಿ ಶಿಷ್ಯಭಾವದ ಮಹತ್ವ ಮತ್ತು ಪ.ಪೂ. ಡಾ. ಆಠವಲೆಯವರ ಶಿಷ್ಯಭಾವ ಎಂಬ ಅಂಶಗಳನ್ನು ನೋಡೋಣ.
೧. ಶಿಷ್ಯಭಾವದ ಮಹತ್ವ
೧ ಅ. ಸೇವಾಭಾವ ನಿರ್ಮಾಣವಾಗುವುದು ಮತ್ತು ಅದು ಉಳಿಯುವುದು
ಶಿಷ್ಯಭಾವದಿಂದ ಸಾಧಕನಲ್ಲಿ ಸೇವಾಭಾವ ನಿರ್ಮಾಣವಾಗಲು ಮತ್ತು ಅದು ಉಳಿಯಲು ಸಹಾಯವಾಗುತ್ತದೆ. ಸೇವೆಯಿಂದಲೇ ಗುರುಗಳು ಹೆಚ್ಚು ಪ್ರಸನ್ನರಾಗುವುದರಿಂದ, ಶಿಷ್ಯನಿಗೆ ಸತತವಾಗಿ ಸೇವೆಯ ಹಂಬಲವಿರುವುದು ಅಪೇಕ್ಷಿತವಾಗಿರುತ್ತದೆ. ನಿರಂತರ ಸೇವೆಯಿಂದ ಅವನ ದೇಹಗಳೆಲ್ಲವೂ ಶುದ್ಧವಾಗುತ್ತವೆ. ಹಾಗೆಯೇ ಸೇವೆಯಿಂದ ಅವನಿಗೆ ನಿರಂತರವಾಗಿ ಗುರುಗಳ ಅನುಸಂಧಾನ ಇರುತ್ತದೆ. ಸೇವೆಯಿಂದಲೇ ಅವನಿಂದ ಗುರುಗಳ ನಿರ್ಗುಣ ರೂಪದ ಸಾಧನೆಯಾಗಿ ಅವನು ಬೇಗನೆ ನಿರ್ಗುಣದತ್ತ ಹೋಗಲು ಸಾಧ್ಯವಾಗುತ್ತದೆ. ಇದರ ಮೂಲಕ ಗುರುಗಳು ಅವನ ಪ್ರಗತಿ ಶೀಘ್ರವಾಗಿ ಮಾಡಿಸುತ್ತಾರೆ.
೧ ಆ. ಸಂತರಾದ ಮೇಲೆಯೂ ಶಿಷ್ಯಭಾವದಲ್ಲಿ ಇರುವುದರಿಂದ ಅಹಂಭಾವವು ಬೇಗನೆ ಕಡಿಮೆಯಾಗಿ ಮುಂದಿನ ಪ್ರಗತಿಯು ಶೀಘ್ರವಾಗಿ ಆಗುವುದು
ಸಾಧಕನು ಸಂತನಾದ ಮೇಲೆಯೂ ಶಿಷ್ಯಭಾವದಲ್ಲಿ ಇರುವುದರಿಂದ ಅವನ ಅಹಂಭಾವವು ಬೇಗನೆ ಕಡಿಮೆಯಾಗುತ್ತದೆ. ಮುಂದಿನ ಹಂತಗಳಲ್ಲಿ ಅಹಂಭಾವ ಅಲ್ಪವಾಗುವುದೇ ಮಹತ್ವದ್ದಾಗಿರುತ್ತದೆ. ಇದರಿಂದ ಮುಂದಿನ ಪ್ರಗತಿಯು ಶೀಘ್ರವಾಗಿ ಆಗುತ್ತದೆ. ತನ್ನನ್ನು ಇತರರಿಗಿಂತ ಬೇರೆಯೆಂದು ತಿಳಿಯುವುದರಿಂದ ಅಹಂಭಾವ ಹೆಚ್ಚುವ ಸಾಧ್ಯತೆಯಿರುತ್ತದೆ. ಹಾಗೆಯೇ ‘ನನ್ನ ಪ್ರಗತಿಯಾಗಿದೆ’ ಎಂಬ ವಿಚಾರದಿಂದಲೂ ಸೇವಾಭಾವ ಅಲ್ಪವಾಗಬಹುದು. ಆದುದರಿಂದ ತಾನು ‘ಕೊನೆಯ ಕ್ಷಣದವರೆಗೆ ಗುರುಗಳು ಹೇಳುವ ಸೇವೆಯನ್ನು ಮಾಡುತ್ತಿರಬೇಕು’, ಎಂಬ ವಿಚಾರದಿಂದ ಸಾಧಕನು ಸತತವಾಗಿ ಸೇವೆಯಲ್ಲಿ ನಿರತನಾಗಿರುತ್ತಾನೆ. ಸಂತರಾದ ಮೇಲೆ ಅವನ ಸೂಕ್ಷ್ಮ ಸ್ತರದಲ್ಲಿ ಕಾರ್ಯ ಮಾಡುವ ಕ್ಷಮತೆಯೂ ಹೆಚ್ಚಿರುತ್ತದೆ. ಆದ್ದರಿಂದ ಅವನು ಈಗ ಅಧಿಕ ವ್ಯಾಪಕವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಗುರುಸೇವೆಯನ್ನು ಮಾಡಬಹುದು. ಶಿಷ್ಯಭಾವದಲ್ಲಿ ಇರುವುದರಿಂದ ಅವನು ಸತತವಾಗಿ ಹೊಸ ಅಂಶಗಳನ್ನು ಕಲಿಯುತ್ತಿರುತ್ತಾನೆ ಮತ್ತು ಅದರ ಮೂಲಕ ಅಧಿಕ ಗುರುಸೇವೆ ಮಾಡಲು ಪ್ರಾರಂಭಿಸುತ್ತಾನೆ.
೧ ಇ. ಶಿಷ್ಯಭಾವದಲ್ಲಿ ಇರುವುದರಿಂದ ಇತರ ಸಾಧಕರಿಗೂ ಕಲಿಯಲು ಸಾಧ್ಯವಾಗುವುದು
ಶಬ್ದಗಳ ಮೂಲಕ ಮಾರ್ಗದರ್ಶನ ಪಡೆದು ಕಲಿಯುವುದಕ್ಕಿಂತ ಹೆಚ್ಚಾಗಿ, ಸಾಧಕರು ಕೃತಿಯಿಂದ ಬೇಗನೆ ಕಲಿಯುತ್ತಾರೆ. ಅದರ ಸಂಸ್ಕಾರವು ಸಾಧಕರ ಮನಸ್ಸಿನ ಮೇಲೆ ಬೇಗನೆ ಆಗುತ್ತದೆ ಮತ್ತು ಅವರು ಬೇಗನೆ ಕಲಿತು ಮುಂದೆ ಸಾಗಲು ಸಾಧ್ಯವಾಗುತ್ತದೆ. ಶಿಷ್ಯಭಾವದಲ್ಲಿರುವ ಸಂತರು ಇತರ ಸಾಧಕರಂತೆಯೇ ಸೇವೆಯನ್ನು ಮಾಡುತ್ತಿರುತ್ತಾರೆ. ಇದರಿಂದ ಸಾಧಕರಿಗೆ ಹೆಚ್ಚು ಕಲಿಯಲು ಸಿಗುತ್ತದೆ. ಹಾಗೆಯೇ ಪ್ರಗತಿಯಾದರೂ ಸತತವಾಗಿ ಸೇವೆಯಲ್ಲಿ ಇರುವುದರಿಂದ ನಮ್ಮ ಕ್ಷಮತೆ ಹೆಚ್ಚಿ ಅಹಂಭಾವವೂ ಅಲ್ಪವಾಗುತ್ತದೆ ಎಂಬುದು ಸಾಧಕರಿಗೆ ಕಲಿಯಲು ಸಿಗುತ್ತದೆ. ಇದಕ್ಕಾಗಿ ಸಂತರಾದ ಮೇಲೆಯೂ ಸತತವಾಗಿ ಸೇವೆ ಮಾಡುವುದಕ್ಕೆ ಬಹಳ ಮಹತ್ವವಿದೆ. ಇದರಿಂದ ಇತರರಿಗೂ ನಾವು ಅವರಲ್ಲೊಬ್ಬರು ಎಂದು ಅನಿಸುತ್ತದೆ. ಆದ್ದರಿಂದ ನಾವು ಅವರೊಂದಿಗೆ ಬೇಗನೆ ಆಪ್ತತೆಯನ್ನು ಬೆಳೆಸಲು ಸಾಧ್ಯವಾಗುತ್ತದೆ.
೨. ಪ.ಪೂ. ಡಾಕ್ಟರರ ಶಿಷ್ಯಭಾವ
ಪ.ಪೂ. ಡಾಕ್ಟರರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ‘ಪರಾತ್ಪರ ಗುರು’ಗಳಾಗಿದ್ದಾರೆ, ಆದರೂ ಅವರು ನಿರಂತರವಾಗಿ ಶಿಷ್ಯಭಾವದಲ್ಲಿ ಇರುತ್ತಾರೆ. ಆದ್ದರಿಂದ ಅವರಿಂದಲೇ ಸಾಧಕರಿಗೆ ‘ಉತ್ತಮ ಶಿಷ್ಯನಾಗುವುದು ಹೇಗೆ’ ಎಂದು ಕಲಿಯಲು ಸಾಧ್ಯವಾಗುತ್ತದೆ. ಅದರ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ –
ಅ. ಪ.ಪೂ. ಡಾಕ್ಟರರು ತಮ್ಮ ಸೇವೆಯನ್ನು ಇತರ ಸಾಧಕರಿಗೆ ಮಾಡಲು ಬಿಡುವುದಿಲ್ಲ. ಅವರಿಗೆ ಎಷ್ಟು ಸಾಧ್ಯವಿದೆಯೋ ಅಷ್ಟನ್ನೆಲ್ಲಾ ಅವರು ಸ್ವತಃ ಮಾಡುತ್ತಾರೆ.
ಆ. ಅವರು ಸಾಧಕರಿಗೆ ಸಾಧನೆಗಾಗಿ ಪೂರಕ ವಾತಾವರಣ ಸಿಗಲಿ ಮತ್ತು ಅವರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲಿ ಎಂದು ಆಶ್ರಮಗಳನ್ನು ಸ್ಥಾಪಿಸಿದ್ದಾರೆ. ಹೀಗಿದ್ದರೂ, ಆಶ್ರಮದಲ್ಲಿ ಇರುವಾಗ ಪ.ಪೂ. ಡಾಕ್ಟರರ ಭಾವವು ‘ನಾನು ನನ್ನ ಗುರುಗಳ ಆಶ್ರಮದಲ್ಲಿ ಇರುತ್ತಿದ್ದೇನೆ ಮತ್ತು ನಾನೂ ಇಲ್ಲಿ ಅವರ ಸೇವೆಯನ್ನು ಮಾಡಬೇಕಾಗಿದೆ’ ಎಂದಿರುತ್ತದೆ. ಆದ್ದರಿಂದ ಅವರು ಇತರ ಎಲ್ಲ ಸಾಧಕರಂತೆ ಸತತವಾಗಿ ಸೇವೆಯಲ್ಲಿ ಇರುತ್ತಾರೆ.
ಇ. ಹಾಗೆಯೇ ಆಶ್ರಮದಲ್ಲಿ ಇರುವ ವಿವಿಧ ಕಾರ್ಯಪದ್ಧತಿಗಳನ್ನು, ಉದಾ. ಸೇವೆಯ ಸಮಯ, ಊಟದ ಸಮಯ ಇತ್ಯಾದಿಗಳನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
ಈ. ತಮ್ಮ ತಪ್ಪುಗಳನ್ನು ಸಹ ಅವರು ಇತರರ ಮುಂದೆ ಅತ್ಯಂತ ಸಹಜವಾಗಿ ಹೇಳುತ್ತಾರೆ.
ಉ. ತಾವು ಅಷ್ಟು ದೊಡ್ಡ ಸಂತರಾಗಿದ್ದರೂ ಅವರು ತಮಗೆ ಯಾವುದೇ ವಿನಾಯಿತಿಯನ್ನು ತೆಗೆದುಕೊಳ್ಳುವುದಿಲ್ಲ.
ಊ. ಸಾಧಕರಿಗೆ ಬಂದ ವೈಶಿಷ್ಟ್ಯಪೂರ್ಣ ಅನುಭೂತಿಗಳು ಮತ್ತು ಅವರು ಮಾಡಿದ ಉತ್ತಮ ಪ್ರಯತ್ನಗಳಿಂದ ‘ನನಗೂ ಕಲಿಯಲು ಸಿಕ್ಕಿತು’ ಎಂದು ಪ.ಪೂ. ಡಾಕ್ಟರರು ಹೇಳುತ್ತಾರೆ.
ಋ. ಸಾಧಕರ ಸೇವೆ ಮಾಡುವುದು
ತಾವು ಅಷ್ಟು ದೊಡ್ಡ ಸಂತರಾಗಿದ್ದರೂ ಸಾಧಕರು ತಮ್ಮನ್ನು ಗುರುಸ್ಥಾನದಲ್ಲಿ ನಂಬಿ ತಮ್ಮ ಮಾತು ಕೇಳಬೇಕು, ಸತತವಾಗಿ ತಮ್ಮ ಸೇವೆ ಮಾಡಬೇಕು ಎಂಬ ಯಾವುದೇ ಅಪೇಕ್ಷೆ ಅವರಿಗಿರುವುದಿಲ್ಲ. ಬದಲಾಗಿ ಅವರೇ ಸಾಧಕರ ಸೇವೆಯನ್ನು ಮಾಡುತ್ತಾರೆ! ಅದರ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ:
೧. ಹಿಂದೆ ಅವರು ತಡರಾತ್ರಿಯ ವರೆಗೆ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗಾಗಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡುತ್ತಿದ್ದರು. ಸಾಧಕನಿಗೆ ಬಹಳ ತೊಂದರೆಯಾಗುತ್ತಿದ್ದರೆ, ಅವರು ಅವನ ಕೋಣೆಗೆ ಸ್ವತಃ ಹೋಗಿ ಉಪಾಯಗಳನ್ನು ಮಾಡುತ್ತಿದ್ದರು.
೨. ಅವರಿಗಾಗಿ ತಯಾರಿಸಿದ ಊಟವನ್ನು ಅವರು ಹಲವಾರು ಬಾರಿ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗೆ ನೀಡುತ್ತಾರೆ. ಅದರ ಮೂಲಕ ಅವರಿಗೆ ಚೈತನ್ಯ ಸಿಕ್ಕಿ ಅವರ ತೊಂದರೆ ಕಡಿಮೆಯಾಗಲಿ ಎನ್ನುವುದು ಅವರ ಉದ್ದೇಶವಾಗಿರುತ್ತದೆ.
೩. ಸಾಧಕರ ಮನಸ್ಸು ಮತ್ತು ಬುದ್ಧಿಯ ಮೇಲೆ ಬಂದಿರುವ ಕಪ್ಪು ಆವರಣವು ನಾಶವಾಗಿ ಅವರ ಸೇವೆ ಚೆನ್ನಾಗಿ ಆಗಲಿ ಮತ್ತು ಸಾಧಕರಿಗೆ ಸೇವೆಗಾಗಿ ಶಕ್ತಿ ಸಿಗಲಿ ಎಂಬ ಉದ್ದೇಶದಿಂದ ಅವರು ಸಾಧಕರಿಗೆ ಆಗಾಗ ತಿನ್ನಲು ಏನನ್ನಾದರೂ (ಪ್ರಸಾದ) ನೀಡುತ್ತಾರೆ.
೪. ರೋಗಪೀಡಿತ ಸಾಧಕರ ಬಗ್ಗೆ ಅವರು ಸತತವಾಗಿ ವಿಚಾರಿಸುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಅವರನ್ನು ಭೇಟಿಯಾಗಲು ಸಹ ಹೋಗುತ್ತಾರೆ.
೫. ಸಾಧಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಅವರು ಕಾಳಜಿ ವಹಿಸುತ್ತಾರೆ.
ಎ. ತಮ್ಮನ್ನು ಸಾಧಕರಿಗಿಂತ ಬೇರೆಯೆಂದು ತಿಳಿಯದಿರುವುದು
೧. ಪ.ಪೂ. ಡಾಕ್ಟರರು ಹಿಂದೆ ತಮ್ಮ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಜೊತೆಗೆ ಸಂಚರಿಸುತ್ತಿದ್ದಾಗ ಇತರ ಸಾಧಕರಂತೆಯೇ ಸೇವೆಯನ್ನು ಮಾಡುತ್ತಿದ್ದರು. ಪ.ಪೂ. ಭಕ್ತರಾಜ ಮಹಾರಾಜರು ಯಾವ ಭಕ್ತರ ಮನೆಯಲ್ಲಿ ಇರುತ್ತಿದ್ದರೋ, ಅಲ್ಲಿಯೂ ಅವರು ಸೇವೆಯನ್ನು ಮಾಡುತ್ತಿದ್ದರು.
೨. ಹಿಂದೆ ಪ.ಪೂ. ಡಾಕ್ಟರರು ವಿವಿಧ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿದ್ದಾರೆ. ಆಗ ಅವರಿಗಾಗಿ ಯಾವ ಊಟವನ್ನು ತಯಾರಿಸಲಾಗುತ್ತಿತ್ತೋ, ಅದೇ ಊಟ ಎಲ್ಲ ಸಾಧಕರಿಗೂ ಇದೆಯಲ್ಲವೇ ಎಂದು ಅವರು ಖಚಿತಪಡಿಸಿಕೊಳ್ಳುತ್ತಿದ್ದರು. ಅವರ ವಿಷಯದಲ್ಲಿ ಬೇರೆ ವರ್ತನೆ ಕೂಡ ಇಷ್ಟವಾಗುತ್ತಿರಲಿಲ್ಲ.
೩. ಬಹಳ ಹಿಂದೆ ಶಿವ ಸೇವಾಕೇಂದ್ರದಲ್ಲಿ ಕೆಲವು ಸಾಧಕರು ಕೆಲವು ದಿನಗಳ ಕಾಲ ಇದ್ದು ಸೇವೆ ಮಾಡುತ್ತಿದ್ದರು. ಆಗ ಸನಾತನದ ಬಟ್ಟೆಯ ಫಲಕಗಳು, ಪೋಸ್ಟರ್‌ಗಳು ಇತ್ಯಾದಿಗಳ ಮೇಲಿನ ಬರಹವನ್ನು ಸಾತ್ತ್ವಿಕ ಅಕ್ಷರಗಳಲ್ಲಿ ಬರೆಯುವ ಸೇವೆಯಿತ್ತು. ಹಲವಾರು ಬಾರಿ ಸಾಧಕರು ಸೇವೆಯ ನಂತರ ಬಣ್ಣದ ಡಬ್ಬಿಗಳು, ಬ್ರಷ್ ಇತ್ಯಾದಿಗಳನ್ನು ಹಾಗೆಯೇ ಬಿಟ್ಟು ಹೋಗುತ್ತಿದ್ದರು. ಪ.ಪೂ. ಡಾಕ್ಟರರು ಅದೆಲ್ಲವನ್ನೂ ಜೋಡಿಸಿಡುತ್ತಿದ್ದರು.
೪. ಪ.ಪೂ. ಡಾಕ್ಟರರು ಎಲ್ಲಿಗೇ ಹೋದರೂ, ಸಾಧಕರ ಮನೆ ಕಟ್ಟಡದ ೩ ನೇ – ೪ ನೇ ಮಹಡಿಯಲ್ಲಿದ್ದರೆ ಮತ್ತು ಜೊತೆಗೆ ಬಹಳ ಸಾಹಿತ್ಯವಿದ್ದರೆ, ಚಾಲಕ ಸಾಧಕನು ಹೆಚ್ಚು ಬಾರಿ ಅಲೆದಾಡುವಂತೆ ಆಗಬಾರದು ಎಂಬ ಕಾರಣಕ್ಕೆ ತಾವೇ ಕೆಲವು ಸಾಹಿತ್ಯಗಳನ್ನು ಮೇಲೆ ಹೊತ್ತುಕೊಂಡು ಹೋಗುತ್ತಿದ್ದರು.
ಏ. ಶಿಷ್ಯಭಾವದಿಂದ ಇತರ ಸಂತರ ಸೇವೆಯನ್ನು ಮಾಡುವುದು
೧. ಪ.ಪೂ. ಡಾಕ್ಟರರು ಈ ವಯಸ್ಸಿನಲ್ಲೂ ಪ.ಪೂ. ಶ್ಯಾಮರಾವ್ ಮಹಾರಾಜರ ಸೇವೆ ಮಾಡಿ ಅವರ ಮನಸ್ಸನ್ನು ಗೆದ್ದರು. ಹಾಗೆಯೇ ‘ಆದರ್ಶ ಶಿಷ್ಯ ಹೇಗಿರಬೇಕು’ ಎಂಬುದಕ್ಕೆ ಒಂದು ಪಾಠವನ್ನೇ ಸಾಧಕರ ಮುಂದೆ ಇಟ್ಟರು. ಪ.ಪೂ. ಡಾಕ್ಟರರು ಅವರ ಸೇವೆಗೆ ಹೋದಾಗ ಪ್ರತಿದಿನ ಮೊದಲು ಅವರ ಚಪ್ಪಲಿಗಳನ್ನು ತೊಳೆದು ಇಡುತ್ತಿದ್ದರು. ಒಮ್ಮೆ ಪ.ಪೂ. ಶ್ಯಾಮರಾವ್ ಮಹಾರಾಜರು ಸ್ವೆಟರ್ ಹಾಕಿಕೊಳ್ಳುತ್ತಿದ್ದರು. ಅವರಿಗೆ ಅದನ್ನು ಸರಿಯಾಗಿ ಹಾಕಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆಗ ಪ.ಪೂ. ಡಾಕ್ಟರರು ಬೇಗನೆ ಎದ್ದು ಅವರಿಗೆ ಸ್ವೆಟರ್ ಅನ್ನು ವ್ಯವಸ್ಥಿತವಾಗಿ ಹಾಕಿಕೊಟ್ಟರು. ಆಗ ಪ.ಪೂ. ಶ್ಯಾಮರಾವ್ ಮಹಾರಾಜರು, ‘‘ಪ.ಪೂ. ಡಾಕ್ಟರರು ನಮ್ಮ ಮನಸ್ಸನ್ನು ಗೆದ್ದಿದಾರೆ’’ ಎಂದು ಹೇಳಿದರು.
೨. ಪ.ಪೂ. ದಾಸ ಮಹಾರಾಜರ ಕಾಲಿನ ಮೂಳೆ ಮುರಿತ ಮತ್ತು ಶಸ್ತ್ರಚಿಕಿತ್ಸೆಯಾದಾಗ ಪ.ಪೂ. ಡಾಕ್ಟರರು ಅವರನ್ನು ರಾಮನಾಥಿ ಆಶ್ರಮಕ್ಕೆ ಕರೆಸಿಕೊಂಡಿದ್ದರು. ಆಗ ಅವರು ಸಾಧಕರಿಗೆ ಸಂತಸೇವೆಯ ಅವಕಾಶವನ್ನು ಮಾಡಿಕೊಟ್ಟರು ಮತ್ತು ಅವರು ಸ್ವತಃ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು.
ಐ. ಗುರುಪದವಿಯಲ್ಲಿದ್ದರೂ ಗುರುಪೂರ್ಣಿಮೆಗೆ ತಮ್ಮ ಪೂಜೆಯನ್ನು ಮಾಡಿಸಿಕೊಳ್ಳದ ಪ.ಪೂ. ಡಾಕ್ಟರರು
ಪ.ಪೂ. ಡಾಕ್ಟರರ ಮಾರ್ಗದರ್ಶನದಂತೆ ವಿಶ್ವದಾದ್ಯಂತ ಸಹಸ್ರಾರು ಸಾಧಕರು ಸಾಧನೆ ಮಾಡುತ್ತಿದ್ದಾರೆ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನೂ ಮಾಡುತ್ತಿದ್ದಾರೆ. ಹಾಗೆಯೇ ಅವರ ಕೃಪೆಯಿಂದಲೇ ಸನಾತನದಲ್ಲಿ ಅತ್ಯಂತ ಅಲ್ಪ ಅವಧಿಯಲ್ಲಿ ಅನೇಕು ಸಂತರು ಆಗಿದ್ದಾರೆ ಮತ್ತು ನೂರಾರು ಸಾಧಕರು ಶೇ. ೬೦ ಮಟ್ಟವನ್ನು ತಲುಪಿದ್ದಾರೆ. ಹೀಗಿದ್ದರೂ ಅವರು ಗುರುಪೂರ್ಣಿಮೆಯಂದು ತಮ್ಮ ಪೂಜೆಯನ್ನು ಮಾಡಿಸಿಕೊಳ್ಳುವುದಿಲ್ಲ. ತಮ್ಮ ಪಾದಪೂಜೆ ಇತ್ಯಾದಿಗಳನ್ನು ಮಾಡಿಸಿಕೊಳ್ಳುವುದಿಲ್ಲ. ಅವರು ಸಾಧಕರಿಗೆ ತಮಗೆ ನಮಸ್ಕರಿಸಲು ಕೂಡ ಬಿಡುವುದಿಲ್ಲ. ಅವರು ಸಾಧಕರಿಗೂ ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ಮಾಡಲು ಹೇಳುತ್ತಾರೆ. ಸನಾತನದ ದೇಶ-ವಿದೇಶಗಳ ಎಲ್ಲ ಗುರುಪೂರ್ಣಿಮಾ ಮಹೋತ್ಸವಗಳಲ್ಲಿ ಕೇವಲ ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆಯೇ ನಡೆಯುತ್ತದೆ.
– ಸೌ. ರಾಜಶ್ರೀ ಖೊಲ್ಲಮ್ (೩೦.೭.೨೦೧೦)
ಗುರುಗಳೇ ಶಿಷ್ಯನಿಗೆ ಸರ್ವಸ್ವ!
‘ಗುರು’ ಎಂಬ ಶಬ್ದವನ್ನು ಉಚ್ಚರಿಸಿದ ಕೂಡಲೇ ಮನಸ್ಸಿನಲ್ಲಿ ಗೌರವದ ಭಾವನೆ ಮೂಡಿ ಶರಣಾಗತ ಭಾವವು ನಿರ್ಮಾಣವಾಗುತ್ತದೆ. ಗುರುಗಳ ಮುಂದೆ ಶಿಷ್ಯನು ತಾನಾಗಿಯೇ ನಮಸ್ಕರಿಸುತ್ತಾನೆ. ಗುರುಗಳ ಸ್ಥಾನವು ಶಿಷ್ಯನಿಗೆ ಸರ್ವಸ್ವವಾಗಿದೆ; ಏಕೆಂದರೆ ಗುರುಗಳು ಅವನ ಮಾತಾ, ಪಿತಾ, ಬಂಧು, ಸಖ ಮಾತ್ರವಲ್ಲ ಅವನ ಸರ್ವಸ್ವವಾಗಿದ್ದಾರೆ. ಶಿಷ್ಯನು ಗುರುಗಳಿಗೆ ತನ್ನ ತನು, ಮನ, ಧನವನ್ನು ಅರ್ಪಿಸುವುದರಿಂದ ಶಿಷ್ಯ ಮತ್ತು ಗುರುಗಳ ನಡುವೆ ಭೇದವೇ ಉಳಿಯುವುದಿಲ್ಲ. ಗುರುಗಳು ಸಹ ಶಿಷ್ಯನನ್ನು ತಮ್ಮಂತೆಯೇ ಮಾಡಿಕೊಳ್ಳುತ್ತಾರೆ. ಸ್ಪರ್ಶಮಣಿ ಕಬ್ಬಿಣವನ್ನು ಚಿನ್ನ ಮಾಡುತ್ತದೆ ಆದರೆ ಆ ಕಬ್ಬಿಣ ಸ್ಪರ್ಶಮಣಿಯಾಗಿ ಪರಿವರ್ತಿಸುವುದಿಲ್ಲ; ಆದರೆ ಗುರುಗಳು ಶಿಷ್ಯನಿಗೆ ಗುರುಪದವಿಯನ್ನೇ ನೀಡುತ್ತಾರೆ. ಅವರ ಈ ಮಹಿಮೆಯು ಅಗಾಧವಾಗಿದೆ. ಶಿಷ್ಯನ ಉನ್ನತಿಯಾಗಲಿ ಎಂದು ಗುರುಗಳ ಪ್ರೇಮದ ಮಳೆ ಶಿಷ್ಯನ ಮೇಲೆ ಸುರಿಯುತ್ತಿರುತ್ತದೆ. ಇದರಿಂದ ಕೇವಲ ಗುರುಗಳ ಸ್ಮರಣೆಯಾದರೂ ಶಿಷ್ಯನ ಅಷ್ಟಸಾತ್ತ್ವಿಕ ಭಾವಗಳು ಜಾಗೃತವಾಗುತ್ತವೆ. ಸಹಸ್ರಾರು ಜನ್ಮ-ಮರಣಗಳ ಸುಳಿಯಿಂದ ತಪ್ಪಿಸಿಕೊಳ್ಳಲು ಭಗವಂತನು ಅವನಿಗೆ ಈ ಜನ್ಮದಲ್ಲಿ ಅವಕಾಶ ನೀಡಿದ್ದಾನೆ. ಗುರುಗಳಿಂದಲೇ ಅವನ ಉದ್ಧಾರವಾಗುತ್ತದೆ ಮತ್ತು ಅವನು ಈ ಜನ್ಮ-ಮರಣದ ಸುಳಿಯಿಂದ ಮುಕ್ತನಾಗುತ್ತಾನೆ. ಯಾರಿಗೆ ಇಂತಹ ಗುರುಗಳು ಲಭಿಸಿ ಕಲ್ಯಾಣವಾಗಿದೆಯೋ, ಅವನು ನಿಜಕ್ಕೂ ಅದೃಷ್ಟವಂತನು. – ಪ.ಪೂ. ಪರಶರಾಮ ಮಾಧವ ಪಾಂಡೆ ಮಹಾರಾಜ್, ಸನಾತನ ಆಶ್ರಮ, ದೇವದ, ಪನವೇಲ.
ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ಏನು ಮಾಡಬೇಕು?
ಶಿಕ್ಷಕ ಮತ್ತು ಗುರು
ದೇವರು ವಿವರಿಸಿದ ಗುರುಗಳ ಮಹತ್ವ
‘ಗುರುಮಂತ್ರವನ್ನು ಗುಪ್ತವಾಗಿಡಬೇಕು’ ಎಂದು ಏಕೆ ಹೇಳುತ್ತಾರೆ ?
ಗುರುಮಂತ್ರ