ವ್ಯಕ್ತಿ ಮೃತನಾದ ನಂತರ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ಅವನ ಕ್ರಿಯಾಕರ್ಮಗಳನ್ನು ಪುರೋಹಿತರಿಂದ ಮಾಡಿಸಿಕೊಳ್ಳುತ್ತೇವೆ. ಬಹಳಷ್ಟು ಕಡೆ ಅಂತ್ಯಸಂಸ್ಕಾರದ ಬಗ್ಗೆ ಜ್ಞಾನವಿರುವ ಪುರೋಹಿತರು ಬೇಗನೇ ಸಿಗುವುದು ಕಠಿಣವಾಗಿರುತ್ತದೆ. ಇಂತಹ ಸಮಯದಲ್ಲಿ ಪುರೋಹಿತರು ಬರುವ ತನಕ ಮುಂದಿನ ಕೆಲವು ಕೃತಿಗಳನ್ನು ಮಾಡಬಹುದು. ಉಳಿದ ಕೃತಿಗಳನ್ನು ಮಾಡಲು ಪುರೋಹಿತರು ಮಾರ್ಗದರ್ಶನ ಮಾಡಿಯೇ ಮಾಡುತ್ತಾರೆ, ಆದರೆ ನಮಗೂ ಅವುಗಳನ್ನು ಯಾವಾಗ ಮತ್ತು ಹೇಗೆ ಮಾಡಬೇಕು ಎಂದು ತಿಳಿದಿದ್ದರೆ ಆ ಕೃತಿಗಳನ್ನು ಮಾಡಲು ಸುಲಭವಾಗುತ್ತದೆ.
ಸೂಚನೆ : ಇವುಗಳಲ್ಲಿನ ಕೆಲವು ಕೃತಿಗಳಲ್ಲಿ ಅಪವಾದ, ಹಾಗೆಯೇ ಪ್ರಾಂತ / ಪರಂಪರೆಗನುಸಾರ ವ್ಯತ್ಯಾಸ ಇರಬಹುದು. ಅಂತಹ ವ್ಯತ್ಯಾಸಗಳು ಕಂಡುಬಂದಲ್ಲಿ ತಮ್ಮ ಪುರೋಹಿತರ ಸಲಹೆಯನ್ನು ಪಡೆಯಬೇಕು.
ಆಧ್ಯಾತ್ಮಿಕ ಮಹತ್ವ : ವ್ಯಕ್ತಿಯ ಮರಣದ ನಂತರ ಮಾಡುವ ಕ್ರಿಯಾಕರ್ಮಗಳನ್ನು ಸಂಬಂಧಿಕರು ಶ್ರದ್ಧೆಯಿಂದ ಮತ್ತು ವಿಧಿವತ್ತಾಗಿ ಮಾಡಿದರೆ, ಮೃತ ವ್ಯಕ್ತಿಯ ಲಿಂಗದೇಹವು ಭೂಲೋಕದಲ್ಲಿ ಅಥವಾ ಮರ್ತ್ಯಲೋಕದಲ್ಲಿ ಸಿಲುಕಿಕೊಳ್ಳದೆ, ಅದಕ್ಕೆ ಸದ್ಗತಿ ದೊರೆತು ಮುಂದಿನ ಲೋಕಕ್ಕೆ ಹೋಗಲು ಸಾಧ್ಯವಾಗುತ್ತದೆ. ಇದರಿಂದಾಗಿ, ಅವರಿಂದ (ಪೂರ್ವಜರಿಂದ) ಕುಟುಂಬದವರಿಗೆ ತೊಂದರೆಯಾಗುವ, ಹಾಗೂ ಅಂತಹ ಲಿಂಗದೇಹವು ಕೆಟ್ಟ ಶಕ್ತಿಗಳ ನಿಯಂತ್ರಣಕ್ಕೆ ಹೋಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
Contents
ವ್ಯಕ್ತಿಯು ಮೃತನಾದ ನಂತರ 13 ದಿನಗಳವರೆಗೆ ಮಾಡಬೇಕಾದ ಮಹತ್ವದ ಕೃತಿಗಳು
ವ್ಯಕ್ತಿಯು ಮೃತನಾದ ನಂತರ ಆರಂಭದಲ್ಲಿ ಮಾಡಬೇಕಾದ ಕೃತಿಗಳು
1. ಮೃತನನ್ನು ನೆಲದ ಮೇಲಿಡುವುದು
ವ್ಯಕ್ತಿಯು ಮರಣ ಹೊಂದುವ ಮೊದಲೇ ಅವನನ್ನು ನೆಲದ ಮೇಲೆ ಮಲಗಿಸಿರದಿದ್ದರೆ, ಮೃತನಾದ ನಂತರ ಕೂಡಲೇ ಮೃತದೇಹವನ್ನು ನೆಲದ ಮೇಲಿಡಬೇಕು. ಇದಕ್ಕಾಗಿ ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ ಏನು ಮಾಡಬೇಕು? ಲೇಖನದಲ್ಲಿ ಕೊಟ್ಟಿರುವ ಕೃತಿಗಳನ್ನು ಮಾಡಬೇಕು. ಮೃತ್ಯುವಿನ ಮೊದಲು ವ್ಯಕ್ತಿಯನ್ನು ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಿಸುವುದು ಅಪೇಕ್ಷಿತವಿದ್ದರೂ, ಮೃತ್ಯುವಿನ ನಂತರ ಮಾತ್ರ ಮೃತದೇಹವನ್ನು ಇಡುವಾಗ ಅದರ ಕಾಲುಗಳನ್ನು ಆಯಾ ಪ್ರಾಂತ್ಯದ ಪದ್ಧತಿಗನುಸಾರ ದಕ್ಷಿಣದ ಕಡೆಗೆ, ಉತ್ತರದ ಕಡೆಗೆ ಅಥವಾ ಪಶ್ಚಿಮದ ಕಡೆಗೆ ಮಾಡಬೇಕು.
2. ಗಂಗಾಜಲ ಹಾಕುವುದು
ಮೃತನ ಬಾಯಿಯಲ್ಲಿ ಸಾಧ್ಯವಿದ್ದಲ್ಲಿ ಗಂಗಾಜಲ ಹಾಕಬೇಕು ಮತ್ತು ಅವನ ಬಾಯಿ ಮುಚ್ಚಬೇಕು.
3. ತುಳಸಿಯನ್ನಿಡುವುದು
ಮೃತನ ಬಾಯಿಯ ಮೇಲೆ ತುಳಸಿ ಎಲೆಯನ್ನಿಡಬೇಕು. ಅವನ ಕಿವಿ ಮತ್ತು ಮೂಗುಗಳಲ್ಲಿ ತುಳಸಿ ಎಲೆಯ ಗೊಂಚಲನ್ನಿಟ್ಟು ಅವನ್ನು ಮುಚ್ಚಬೇಕು. ವೈದ್ಯಕೀಯ ದೃಷ್ಟಿಯಿಂದ ಆವಶ್ಯಕವಿದ್ದಲ್ಲಿ ಬಾಯಿ, ಕಿವಿ ಮತ್ತು ಮೂಗುಗಳಲ್ಲಿ ತುಳಸಿ ಎಲೆಯನ್ನಿಡುವ ಮೊದಲು ಹತ್ತಿಯನ್ನು ಹಾಕಬೇಕು.
4. ಕೈ-ಕಾಲುಗಳ ಹೆಬ್ಬೆರಳನ್ನು ಕಟ್ಟುವುದು
ಮೃತನ ಕೈ-ಕಾಲು ಮತ್ತು ಕುತ್ತಿಗೆಯನ್ನು ನೇರಗೊಳಿಸಬೇಕು. ಕಣ್ಣುಗಳನ್ನು ಮುಚ್ಚಬೇಕು. ಎರಡೂ ಕಾಲುಗಳ ಹೆಬ್ಬೆರಳುಗಳನ್ನು ಪರಸ್ಪರ ಕಟ್ಟಬೇಕು. ಎರಡೂ ಕೈಗಳನ್ನು ದೇಹದ ಮುಂದಿನ ಭಾಗಕ್ಕೆ ತಂದು ಹೆಬ್ಬೆರಳುಗಳನ್ನು ಒಟ್ಟಿಗೆ ಕಟ್ಟಬೇಕು. ಮರಣಾನಂತರ ಸ್ವಲ್ಪ ಸಮಯದ ನಂತರ ದೇಹವು ಬಿಗಿಯಾಗುವುದರಿಂದ, ನಂತರ ಇದನ್ನು ಮಾಡುವುದು ಕಷ್ಟವಾಗುತ್ತದೆ. (ಈ ಕೃತಿಗಳು ಧರ್ಮಗ್ರಂಥಗಳಲ್ಲಿ ಕಂಡುಬರುವುದಿಲ್ಲ. ಇದು ಒಂದು ವ್ಯಾವಹಾರಿಕ ಕೃತಿಯಾಗಿದೆ.)
5. ಭಸ್ಮ ಅಥವಾ ವಿಭೂತಿ ಹಾಕುವುದು
ಮೃತನ ಸುತ್ತಲೂ ಸ್ವಲ್ಪ ಅಂತರ ಬಿಟ್ಟು ಅಪ್ರದಕ್ಷಿಣ ಮಾರ್ಗದಲ್ಲಿ (ಗಡಿಯಾರದ ಮುಳ್ಳುಗಳ ವಿರುದ್ಧ ದಿಕ್ಕಿನಲ್ಲಿ) ನಡೆದು ಭಸ್ಮ ಅಥವಾ ವಿಭೂತಿಯನ್ನು ಹಾಕಬೇಕು.
6. ಎಣ್ಣೆ ದೀಪ ಹಚ್ಚುವುದು
ಕುಟುಂಬದ ವ್ಯಕ್ತಿ ಮೃತಪಟ್ಟರೆ ತಕ್ಷಣ ಮನೆಯಲ್ಲಿ ಎಣ್ಣೆ ದೀಪ ಹಚ್ಚುವ ಸಂಪ್ರದಾಯ ಪ್ರಚಲಿತದಲ್ಲಿದೆ. (ಆದರೆ ಧರ್ಮಶಾಸ್ತ್ರದ ಪ್ರಕಾರ ದೀಪ ಹಚ್ಚುವುದು ಕಡ್ಡಾಯವಲ್ಲ.) ಮೃತದೇಹದ ತಲೆಯಿಂದ ಸ್ವಲ್ಪ ದೂರದಲ್ಲಿ, ನೆನೆಸಿದ ಗೋಧಿ ಹಿಟ್ಟಿನ ಉಂಡೆಯ ಮೇಲೆ ಕೇವಲ ಒಂದೇ ಬತ್ತಿ ಇರುವ ಎಣ್ಣೆ ದೀಪವನ್ನು ಹಚ್ಚಬೇಕು. ಈ ದೀಪದಲ್ಲಿ ಸಾಮಾನ್ಯವಾಗಿ ಹಾಕುವಂತೆ 2 ಬತ್ತಿಗಳನ್ನು ಹಾಕಬಾರದು. ಈ ದೀಪಕ್ಕಾಗಿ ಮಣ್ಣಿನ ಹಣತೆ, ಹಿತ್ತಾಳೆಯ ನೀಲಾಂಜನ ಇತ್ಯಾದಿಗಳಲ್ಲಿ ಯಾವುದನ್ನಾದರೂ ಬಳಸಬಹುದು. ಈ ದೀಪದ ಜ್ಯೋತಿಯು ದಕ್ಷಿಣ ದಿಕ್ಕಿನತ್ತ ಇರಬೇಕು. ಮೃತದೇಹವನ್ನು ಅಲ್ಲಿಂದ ತೆಗೆದ ನಂತರವೂ ಈ ದೀಪವನ್ನು ಹತ್ತನೇ ದಿನದವರೆಗೆ ಉರಿಸಿಡಬೇಕು.
7. ಪ್ರಾರ್ಥನೆ ಮತ್ತು ನಾಮಜಪ ಮಾಡುವುದು
ಕುಟುಂಬದವರು ಮೃತ ವ್ಯಕ್ತಿಯ ಲಿಂಗದೇಹವನ್ನು ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಿಸಲು ಆಗಾಗ ದತ್ತ ದೇವರಿಗೆ ಪ್ರಾರ್ಥನೆ ಮಾಡಬೇಕು –
ಹೇ ದತ್ತಾತ್ರೇಯ, ………… (ಮೃತ ವ್ಯಕ್ತಿಯ ಹೆಸರು ಹೇಳಿ) ಇವರ ಲಿಂಗದೇಹದ ಸುತ್ತಲೂ ಸತತವಾಗಿ ನಿನ್ನ ರಕ್ಷಾ ಕವಚವು ಇರಲಿ. ಅವರಿಗೆ ಮುಂದಿನ ಗತಿಯನ್ನು ಕೊಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.
ಶ್ರೀ ಗುರುದೇವ ದತ್ತ | ನಾಮಜಪವನ್ನು ಮಾಡುತ್ತಾ ಮುಂದಿನ ಎಲ್ಲ ಕ್ರಿಯಾಕರ್ಮಗಳನ್ನು ಮಾಡಬೇಕು.
8. ದತ್ತನ ನಾಮಜಪದ ಧ್ವನಿಮುದ್ರಣವನ್ನು ಹಾಕಿಡುವುದು
ಸಾತ್ತ್ವಿಕ ವಾಣಿಯಲ್ಲಿನ ದತ್ತನ ನಾಮಜಪ sanatan.org/kannada/audio-gallery ಈ ಕೊಂಡಿಯಲ್ಲಿ ಲಭ್ಯವಿದೆ.
9. ಕ್ರಿಯಾಕರ್ಮದ ಸಾಮಗ್ರಿಗಳ ಸಿದ್ಧತೆ
| 1. ಕರ್ತೃ ಧರಿಸಲು ಹೊಸ ಧೋತಿ | 2. ಮೃತದೇಹಕ್ಕೆ ಹಚ್ಚಲು ತುಳಸಿಗಿಡದ ಬುಡದ ಮಣ್ಣು, ಭಸ್ಮ ಅಥವಾ ವಿಭೂತಿ ಮತ್ತು ಗೋಪಿಚಂದನ | 3. ಮೃತದೇಹವನ್ನು ಮುಚ್ಚಲು ಬಿಳಿ ಬಟ್ಟೆ | 4. ಒಂದು ಬಟ್ಟಲು ಮೊಸರು ಮತ್ತು ಒಂದು ಬಟ್ಟಲು ತುಪ್ಪದ ಮಿಶ್ರಣ | 5. ಒಂದು ಬಟ್ಟಲು ಪಂಚಗವ್ಯ |
| 6. ಸಜ್ಜೆ / ಅಕ್ಕಿ ಹಿಟ್ಟಿನ 7 ಉಂಡೆಗಳು | 7. 250 ಗ್ರಾಂ ಕಪ್ಪು ಎಳ್ಳು | 8. 500 ಗ್ರಾಂ ತುಪ್ಪ | 9. ಎಳ್ಳು, ಹೂವು ಇತ್ಯಾದಿ ಸಾಮಗ್ರಿಗಳನ್ನು ಇಡಲು 4-5 ಪತ್ರಾವಳಿಗಳು, 8-9 ದೊನ್ನೆಗಳು | 10. ಕರ್ತೃ ಮತ್ತು ಪುರೋಹಿತರು ಕುಳಿತುಕೊಳ್ಳಲು ತಲಾ 1 ಆಸನ |
| 11. ಪಂಚಪಾತ್ರೆ-ಉದ್ಧರಣೆ, ತಂಬಿಗೆ ಮತ್ತು ತಟ್ಟೆ | 12. ಚಟ್ಟಕ್ಕಾಗಿ ಬಿದಿರು | 13. ಚಟ್ಟವನ್ನು ಕಟ್ಟಲು ತೆಂಗಿನ ನಾರಿನ ಹಗ್ಗ (ಸುಮಾರು ಒಂದು ಕಿಲೋ) ಮತ್ತು ಕತ್ತಿ | 14. ಅಗ್ನಿಯನ್ನು ಒಯ್ಯಲು ಒಂದು ಸಣ್ಣ ಮಡಕೆ, ಹಾಗೆಯೇ ಬೆರಣಿ, ಮರದ ಸಣ್ಣ ತುಂಡುಗಳು, ಊದುಗೊಳವೆ ಮತ್ತು ಬೆಂಕಿಪೊಟ್ಟಣ | 15. ನೀರು ತುಂಬಿರುವ ಒಂದು ದೊಡ್ಡ ಮಡಕೆ |
| 16. ಮೃತದೇಹಕ್ಕೆ ಹಾಕಲು ಕಪ್ಪು ಲಾವಂಚದ ಬೇರುಗಳ ಹಾರ (ಸಾಧ್ಯವಿದ್ದಲ್ಲಿ) ಮತ್ತು ದಾಸವಾಳದ ಹೂವಿನ ಹಾರ (ಸಾಧ್ಯವಿದ್ದಲ್ಲಿ) | 17. ಮೃತದೇಹಕ್ಕೆ ಹಾಕಲು ತುಳಸಿ ಹಾರ, ಸಂಬಂಧಿಕರ ಸಂಖ್ಯೆಗನುಸಾರ ಬೇಕಾದಷ್ಟು ಹೂವಿನ ಹಾರಗಳು, ಬಿಳಿ ಹೂವುಗಳು, ಚೆಂಡು ಹೂವುಗಳು, 5-10 ತುಳಸಿ ಗೊಂಚಲುಗಳು; | 18. ಮೃತದೇಹದ ಅವಯವಗಳ ಮೇಲೆ ಇಡಲು 7 ಮತ್ತು ಚಿತೆಯ ಕೆಳಗೆ ಇಡಲು 1, ಹೀಗೆ ಒಟ್ಟು 8 ಚಿನ್ನದ ತುಂಡುಗಳು (ಸಾಧ್ಯವಿದ್ದಲ್ಲಿ) | 19. ಪಾಚಿ | 20. ಶಮೀ ಗಿಡದ ಸಣ್ಣ ಕೊಂಬೆ |
| 21. ದರ್ಭೆ | 22. ಚಿತೆಯನ್ನು ರಚಿಸಲು ಮಾವು, ಹಲಸು ಇತ್ಯಾದಿ ಮರಗಳ ಕಟ್ಟಿಗೆಗಳು, ಹಾಗೆಯೇ ಬೆರಣಿಗಳು | 23. ಚಿತೆ ಚೆನ್ನಾಗಿ ಪ್ರಜ್ವಲಿಸಲು ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ನೈಸರ್ಗಿಕ ಘಟಕಗಳಿಂದ ತಯಾರಿಸಿದ ಇತರೆ ಎಣ್ಣೆ ಅಥವಾ ತುಪ್ಪ (ಸುಮಾರು 4-5 ಲೀಟರ್) | 24. 100 ಗ್ರಾಂ ಕರ್ಪೂರ | 25. ಗಂಗಾಜಲ (5-10 ಮಿ.ಲೀ.) |
ಟಿಪ್ಪಣಿ :
ಬಿಳಿ ಬಟ್ಟೆ : ಮೃತದೇಹವನ್ನು ಮುಚ್ಚಿದ ನಂತರ ಆ ಬಿಳಿ ಬಟ್ಟೆಯ ಕಾಲು ಭಾಗವು ಕರ್ತೃವು ಉತ್ತರೀಯವಾಗಿ ಬಳಸಲು ಉಳಿಯಬೇಕು
ಪಂಚಗವ್ಯ : ಗೋಮೂತ್ರ, ಗೋಮಯ, ಹಾಲು, ಮೊಸರು ಮತ್ತು ತುಪ್ಪದ ಮಿಶ್ರಣ
ಬಿದಿರು : ಇವುಗಳ ಉದ್ದ ಮತ್ತು ಸಂಖ್ಯೆಯನ್ನು ಸ್ಥಳೀಯ ರೂಢಿಗನುಸಾರ ನಿರ್ಧರಿಸಬೇಕು
ದರ್ಭೆ : ಇವುಗಳನ್ನು ಪುರೋಹಿತರು ತರುತ್ತಾರೆ. ಮೃತ ವ್ಯಕ್ತಿಯ ದೇಶ-ಕಾಲಕ್ಕನುಗುಣವಾಗಿ ಎಷ್ಟು ದರ್ಭೆ ಬಳಸಬೇಕು ಎಂಬುದು ನಿರ್ಧಾರವಾಗುತ್ತದೆ
10. ಮೃತ ವ್ಯಕ್ತಿಯ ಕ್ರಿಯಾಕರ್ಮ ಮಾಡುವವರು
ಮೃತನಿಗೆ ಅಗ್ನಿಯನ್ನು ಕೊಡುವುದರಿಂದ ಹಿಡಿದು ಕಾರ್ಯ ಮುಗಿಯುವ ವರೆಗಿನ ವಿಧಿಗಳನ್ನು ಮಾಡುವ ಅಧಿಕಾರವು ಮೃತ ವ್ಯಕ್ತಿಯ ಹಿರಿಯ ಮಗನಿಗಿರುತ್ತದೆ. ಕೆಲವು ಅನಿವಾರ್ಯ ಕಾರಣಗಳಿಂದಾಗಿ ಹಿರಿಯ ಮಗನಿಗೆ ಕ್ರಿಯಾಕರ್ಮವನ್ನು ಮಾಡಲು ಸಾಧ್ಯವಿಲ್ಲದಿದ್ದಲ್ಲಿ, ಕಿರಿಯ ಮಗನು ಕ್ರಿಯಾಕರ್ಮವನ್ನು ಮಾಡಬೇಕು. ಅವನೂ ಇಲ್ಲದಿದ್ದರೆ ಕ್ರಮವಾಗಿ ಮಧ್ಯದ ಯಾವುದೇ ಮಗ, ಅಳಿಯ ಅಥವಾ ಇತರ ಆಪ್ತೇಷ್ಟರು ಕ್ರಿಯಾಕರ್ಮ ಮಾಡಬಹುದು. ಕ್ರಿಯಾಕರ್ಮ ಮಾಡುವ ಪುರುಷನನ್ನು ‘ಕರ್ತೃ’ (ಕರ್ತ) ಎನ್ನುತ್ತಾರೆ.
ಅವಿವಾಹಿತ ಪುರುಷ / ಸ್ತ್ರೀ, ಹಾಗೆಯೇ ಪುತ್ರರಿಲ್ಲದ ವ್ಯಕ್ತಿ ಮುಂತಾದವರ ಕ್ರಿಯಾಕರ್ಮವನ್ನು ಕ್ರಮವಾಗಿ ಅವರ ನಂತರದ ಸಹೋದರ, ತಂದೆ ಅಥವಾ ಹಿರಿಯಣ್ಣ, ಯಾರೂ ಇಲ್ಲದಿದ್ದರೆ ಆಪ್ತೇಷ್ಟರು ಮಾಡಬಹುದು.
11. ಕರ್ತನು ಕ್ಷೌರ ಮಾಡಬೇಕು ಮತ್ತು ಉಗುರು ಕತ್ತರಿಸಬೇಕು
12. ಕರ್ತನು ಸ್ನಾನ ಮಾಡಿ ಶುಭ್ರ ವಸ್ತ್ರ, ಉದಾ. ಧೋತಿಯನ್ನು ಉಡಬೇಕು. ಆದರೆ ಮೈಮೇಲೆ ಉತ್ತರೀಯವನ್ನು ತೆಗೆದುಕೊಳ್ಳಬಾರದು.
13. ಮೃತನಿಗೆ ಸ್ನಾನ ಮಾಡಿಸಬೇಕು
14. ಮೃತನಿಗೆ ಹೊಸ ಬಟ್ಟೆಗಳನ್ನು ತೊಡಿಸಬೇಕು
15. ಮೃತನಿಗೆ ಅನುಲೇಪನ ಮಾಡುವುದು
ವಾಸ್ತವವಾಗಿ ಸ್ನಾನದ ನಂತರ ತುಳಸಿಯ ಬುಡದ ಮಣ್ಣಿನಿಂದ (ಭಸ್ಮ, ಚಂದನದಂತೆ) ಸರ್ವಾಂಗಕ್ಕೂ ಅನುಲೇಪನ ಮಾಡಬೇಕು ಎಂಬ ವಿಧಿಯಿದೆ; ಆದರೆ ಸಾಮಾಜಿಕ ದೃಷ್ಟಿಯಿಂದ ಸ್ನಾನದ ನಂತರ ಬಟ್ಟೆಗಳನ್ನು ಹಾಕುವುದು ಮುಖ್ಯವಾಗಿರುತ್ತದೆ; ಏಕೆಂದರೆ ಕೆಲವರು ಈ ಸ್ನಾನವನ್ನು ಎಲ್ಲರ ಮುಂದೆ ಅಂಗಳದಲ್ಲಿ ಮಾಡಿಸುತ್ತಾರೆ. ಆದ್ದರಿಂದ ಮೃತನಿಗೆ ಮೊದಲು ವಸ್ತ್ರಗಳನ್ನು ತೊಡಿಸಿ ನಂತರ ಹಣೆ, ಕೈಗಳಿಗೆ, ಹೊಟ್ಟೆಗೆ, ಕಾಲುಗಳಿಗೆ ಗೋಪಿಚಂದನ, ಭಸ್ಮ / ವಿಭೂತಿ ಮತ್ತು ತುಳಸಿಯ ಬುಡದ ಮಣ್ಣನ್ನು ಲೇಪಿಸಬೇಕು.
16. ಮೃತನ ಕೊರಳಿಗೆ ಹಾರ ಹಾಕುವುದು
ಮೃತದೇಹದ ಕೊರಳಿಗೆ ದಾಸವಾಳದ, ಕಪ್ಪು ಲಾವಂಚದ ಬೇರುಗಳ ಹಾರವನ್ನು ಹಾಕಬೇಕು ಮತ್ತು ಇವೆರಡೂ ಲಭ್ಯವಿಲ್ಲದಿದ್ದರೆ ಯಾವುದೇ ಹೂವುಗಳ ಹಾರವನ್ನು ಹಾಕಬೇಕು. ತಮ್ಮ ತಮ್ಮ ಪದ್ಧತಿಗಳಿಗನುಸಾರವಾಗಿ ಪಾರ್ಥಿವ ಶರೀರವನ್ನು ಅಲಂಕರಿಸಬೇಕು.
17. ಮೃತನನ್ನು ಬಿಳಿ ವಸ್ತ್ರದಿಂದ ಮುಚ್ಚುವುದು
ಇದರ ನಂತರ ಮೃತದೇಹದ ಪಾದಗಳನ್ನು ತೆರೆದಿಟ್ಟು, ಉಳಿದ ಮೃತದೇಹವನ್ನು ಅಖಂಡ ಹೊಸ ಬಿಳಿ ವಸ್ತ್ರದಿಂದ ಮುಚ್ಚಬೇಕು. ಅದರ ಮುಖದ ಮೇಲಿನ ವಸ್ತ್ರದ ಭಾಗಕ್ಕೆ ಒಂದು ಸೀಳು ಮಾಡಿ ಮುಖವನ್ನು ತೆರೆದಿಡಬೇಕು. ಪಾದಗಳ ಕಡೆಗಿನ ವಸ್ತ್ರದ ಭಾಗವನ್ನು (ಒಟ್ಟು ವಸ್ತ್ರದ ಕಾಲು ಭಾಗ) ಕತ್ತರಿಸಿ ಕರ್ತನು ಅದನ್ನು ಉತ್ತರೀಯವಾಗಿ 12 ನೇ ದಿನದವರೆಗೆ ಬಳಸಬೇಕು. ಈ ಉತ್ತರೀಯವನ್ನು ಕಳೆದುಹಾಕಬಾರದು. ಈ ಉತ್ತರೀಯವನ್ನು 12 ನೇ ದಿನದಂದು ಸಪಿಂಡೀಕರಣ ಶ್ರಾದ್ಧ ಮಾಡುವಾಗ ಪುರೋಹಿತರ ಸೂಚನೆಗನುಸಾರ ವಿಸರ್ಜಿಸಬೇಕು.
ಮುಂದಿನ ಕೃತಿಗಳ ಬಗ್ಗೆ ಎಚ್ಚರವಿರಲಿ!
ಅ. ವ್ಯಕ್ತಿ ಮೃತಪಟ್ಟಾಗ ಅವರ ಹೆಸರಿನಲ್ಲಿ ಅಥವಾ ನೆನಪಿನಲ್ಲಿ ಜೋರಾಗಿ ಅಳುವುದು, ಆಲಾಪ, ಎದೆ ಬಡಿದುಕೊಳ್ಳುವುದು ಮುಂತಾದ ಕೃತಿಗಳನ್ನು ಮಾಡಬಾರದು. ಮೃತ ವ್ಯಕ್ತಿಗೆ ಮುಂದಿನ ಗತಿ ಸಿಗಲು ಮೃತ್ಯುವಿನ ನಂತರದ ಕ್ರಿಯಾಕರ್ಮಗಳನ್ನು ಮಾಡಬೇಕು. ಸಂಬಂಧಿಕರು ಜೋರಾಗಿ ಅಳುವಂತಹ ಕೃತಿಗಳನ್ನು ಮಾಡಿದರೆ ಮೃತ ವ್ಯಕ್ತಿಯ ಲಿಂಗದೇಹವು ಸಂಬಂಧಿಕರ ಭಾವನೆಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇದರಿಂದ ಅವನಿಗೆ ಮುಂದಿನ ಗತಿ ಸಿಗಲು ಅಡ್ಡಿಯಾಗಬಹುದು.
ಆ. ಅನೇಕ ಕಡೆ ಪತಿ ಮೃತಪಟ್ಟರೆ ಪತ್ನಿಯು ಮಂಗಳಸೂತ್ರದ ಮುಹೂರ್ತಮಣಿ, ಹಾಗೆಯೇ ಚಿನ್ನದ ತಂತಿಯಲ್ಲಿ ಪೋಣಿಸಿದ ಕಪ್ಪು ಮಣಿಗಳನ್ನು ಬೇರ್ಪಡಿಸಿ ಪತಿಯ ಮೃತದೇಹದೊಂದಿಗೆ ಚಿತೆಯ ಮೇಲೆ ಇಡಲು ನೀಡುವ ಪದ್ಧತಿಯಿದೆ. ಅಂತಹ ಸಮಯದಲ್ಲಿ ಮಂಗಳಸೂತ್ರದ ಇತರ ಚಿನ್ನ ಮತ್ತು ಸೌಭಾಗ್ಯಾಲಂಕಾರಗಳನ್ನು ತೆಗೆದು ಸುರಕ್ಷಿತವಾಗಿ ಇಡಲಾಗುತ್ತದೆ. ಈ ವಿಷಯದಲ್ಲಿ ತಮ್ಮ ಪ್ರಾಂತ್ಯದ ಪದ್ಧತಿಗನುಸಾರವಾಗಿ ಮಾಡಬೇಕು.
ಇ. ಮೃತದೇಹವನ್ನು ಯಾರೂ ಅನಾವಶ್ಯಕವಾಗಿ ಸ್ಪರ್ಶಿಸಬಾರದು.
ಮಕ್ಕಳು, ಅವಿವಾಹಿತರು, ಸಂನ್ಯಾಸಿಗಳು, ದುರ್ಮರಣ ಪಡೆದವರ ಬಗ್ಗೆ
ಮುಂದಿನ ಯಾವುದಾದರೂ ಒಂದು ವರ್ಗಕ್ಕೆ ಸೇರಿದ ವ್ಯಕ್ತಿಯು ಮೃತಪಟ್ಟರೆ, ಅವರ ಅಂತ್ಯಸಂಸ್ಕಾರವನ್ನು ಪುರೋಹಿತರನ್ನು ಕೇಳಿ ಮಾಡಬೇಕು.
ಅ. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು
ಆ. ರಜಸ್ವಲಾ ಅವಸ್ಥೆಯಲ್ಲಿ ಮೃತಪಟ್ಟ ಸ್ತ್ರೀಯರು
ಇ. ಅವಿವಾಹಿತ ಸ್ತ್ರೀಯರು ಅಥವಾ ಪುರುಷರು
ಈ. ಸಂನ್ಯಾಸಿಗಳು
ಉ. ಮೃತದೇಹವು ಛಿದ್ರಗೊಂಡಿರುವ ವ್ಯಕ್ತಿಗಳು
ಊ. ಪ್ರವಾಹ, ಕಾಡ್ಗಿಚ್ಚು ಇತ್ಯಾದಿ ದುರ್ಘಟನೆಗಳಲ್ಲಿ ಮೃತಪಟ್ಟವರು; ಆದರೆ ವಿಧಿಗಾಗಿ ಮೃತದೇಹ ಲಭ್ಯವಿಲ್ಲದ ವ್ಯಕ್ತಿಗಳು
ಋ. ಮೇಲಿನ ಪರಿಸ್ಥಿತಿಗಳಲ್ಲದೆ ಬೇರೆ ಯಾವುದೇ ಅಸಾಧಾರಣ ಸನ್ನಿವೇಷಗಳಲ್ಲಿ ಮೃತಪಟ್ಟ ವ್ಯಕ್ತಿಗಳು
ಅಂತ್ಯಯಾತ್ರೆಯ ಸಿದ್ಧತೆ
ಅ. ಸ್ಮಶಾನಕ್ಕೆ ಹೋಗುವಾಗ, ಅಂತ್ಯಯಾತ್ರೆಯಲ್ಲಿ ಭಾಗವಹಿಸಿದ ಯಾರಾದರೊಬ್ಬರು ಉರಿಯುತ್ತಿರುವ ಮಡಕೆಯನ್ನು ತನ್ನ ಬಲಗೈಯಲ್ಲಿ ಹಿಡಿದು ಶವದ ಮುಂದೆ ಸಾಗಬೇಕು. ಅಂದರೆ ಅಂತ್ಯಯಾತ್ರೆಯಲ್ಲಿ ಮುಂದೆ ಅಗ್ನಿಯಿರುವ ಮಡಕೆಯನ್ನು ಹಿಡಿದ ವ್ಯಕ್ತಿ ಮತ್ತು ಅವನ ಹಿಂದೆ ಚಟ್ಟವಿರಬೇಕು. ಅಗ್ನಿ ಮತ್ತು ಚಟ್ಟದ ನಡುವೆ ಯಾರೂ ಇರಬಾರದು. ಎಲ್ಲರೂ ಚಟ್ಟದ ಹಿಂದೆ ಸಾಗಬೇಕು.
ಆ. ಕರ್ತನು ಚಟ್ಟಕ್ಕೆ ಹೆಗಲು ಕೊಡಬೇಕು. ಅವನೊಂದಿಗೆ ಇತರ ಕುಟುಂಬದವರು, ಸಂಬಂಧಿಕರು ಮತ್ತು ಅವರು ಲಭ್ಯವಿಲ್ಲದಿದ್ದರೆ ನೆರೆಹೊರೆಯವರು ಚಟ್ಟಕ್ಕೆ ಹೆಗಲು ನೀಡಬೇಕು. ನಾಲ್ಕು ಜನರು ಚಟ್ಟವನ್ನು ಹೊತ್ತುಕೊಳ್ಳಬೇಕು.
ಇ. ಅಂತ್ಯಯಾತ್ರೆಯಲ್ಲಿ ಮೃತದೇಹದ ತಲೆ ಮುಂದಿನ ಬದಿಯಲ್ಲಿರಬೇಕು.
ಈ. ಅಂತ್ಯಯಾತ್ರೆಯಲ್ಲಿ ಭಾಗವಹಿಸುವ ಯಾರಾದರೊಬ್ಬರು ನೀರು ತುಂಬಿದ ಮಡಕೆಯನ್ನು ತೆಗೆದುಕೊಳ್ಳಬೇಕು.
ಉ. ಅಂತ್ಯಯಾತ್ರೆ ಸ್ಮಶಾನವನ್ನು ತಲುಪುವವರೆಗೆ, ಧರ್ಮಶಾಸ್ತ್ರದಲ್ಲಿ ಹೇಳಿದಂತೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಅಥವಾ ‘ನಾರಾಯಣ’ ಎಂಬ ನಾಮಜಪವನ್ನು ಜೋರಾಗಿ ಮಾಡುವುದು ಯೋಗ್ಯ.
ಅಧ್ಯಾತ್ಮಶಾಸ್ತ್ರದ ಪ್ರಕಾರ ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪವನ್ನು ಜೋರಾಗಿ ಮಾಡುವುದು ಹೆಚ್ಚು ಸೂಕ್ತವಾಗಿದ್ದರೂ, ತಮ್ಮ ತಮ್ಮ ಶ್ರದ್ಧೆಗನುಸಾರ ಶ್ರೀರಾಮ ಅಥವಾ ನಾರಾಯಣನ ನಾಮಜಪ ಮಾಡಿದರೂ ನಡೆಯುತ್ತದೆ.
ಊ. ಅಂತ್ಯಯಾತ್ರೆ ಅರ್ಧ ದಾರಿಗೆ ಬಂದಾಗ, ಚಟ್ಟವನ್ನು ಕೆಳಗಿಡಬೇಕು.
ಋ. ಕರ್ತನು ಪುರೋಹಿತರ ಸಲಹೆಯಂತೆ ಪಿಂಡವನ್ನು ಅರ್ಪಿಸುವ ವಿಧಿಯನ್ನು ಮಾಡಬೇಕು.
ಎ. ಅನಂತರ ಪುನಃ ಚಟ್ಟವನ್ನು ಹೆಗಲಿನ ಮೇಲೆ ತೆಗೆದುಕೊಳ್ಳುವಾಗ, ಅದನ್ನು ಹೊತ್ತುಕೊಳ್ಳುವವರು ಭುಜವನ್ನು ಬದಲಾಯಿಸಬೇಕು. ಇದರರ್ಥ, ಚಟ್ಟವನ್ನು ಕೆಳಗಿಡುವ ಮೊದಲು ಎಡ ಭುಜದ ಮೇಲೆ ಹೊತ್ತ ಇಬ್ಬರು, ಮತ್ತೆ ಹೊತ್ತಾಗ ಅದನ್ನು ಬಲ ಭುಜದ ಮೇಲೆ ತೆಗೆದುಕೊಳ್ಳಬೇಕು. ಉಳಿದ ಇಬ್ಬರು ಕೂಡ ಇದೇ ರೀತಿ ತಮ್ಮ ಭುಜಗಳನ್ನು ಬದಲಾಯಿಸಬೇಕು. ನಂತರ ಚಟ್ಟವನ್ನು ಮುಂದೆ ಕೊಂಡೊಯ್ಯಬೇಕು.
ಇನ್ನುಳಿದ ಕ್ರಿಯಾಕರ್ಮಗಳ ಬಗ್ಗೆ ಮಾಹಿತಿಗಾಗಿ ಮುಂದಿನ ಲೇಖನ ಓದಿ…
ಆಷಾಢ ಏಕಾದಶಿ
ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ
ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಾಮಾನ್ಯವಾಗಿ ಪಾಲಿಸಬೇಕಾದ ನಿಯಮಗಳು !
ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?
ಮೃತ್ಯುನಂತರದ ಕ್ರಿಯಾಕರ್ಮಗಳು (13 ನೇ ದಿನದ ಕರ್ಮಗಳ ವರೆಗೆ)
ಪಿತೃಲೋಕದ ವ್ಯಾಖ್ಯೆ ಮತ್ತು ಅದರ ವಿಧಗಳು