ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?

ಧರ್ಮಶಾಸ್ತ್ರ ಏನು ಹೇಳುತ್ತದೆ

ಮೃತ ವ್ಯಕ್ತಿಯು ಬಳಸಿದ ಬಟ್ಟೆ, ವಸ್ತು ಇತ್ಯಾದಿಗಳನ್ನು ಉಪಯೋಗಿಸುವ ಅಥವಾ ದಾನ ಮಾಡುವುದರ ಬಗ್ಗೆ ಧರ್ಮಶಾಸ್ತ್ರದಲ್ಲಿ ವಿಶೇಷ ವಿವರಣೆ ಇಲ್ಲ.

ಅಧ್ಯಾತ್ಮಶಾಸ್ತ್ರದ ದೃಷ್ಟಿಕೋನ

ಅಧ್ಯಾತ್ಮಶಾಸ್ತ್ರಕ್ಕನುಸಾರ ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಸಾಮಾನ್ಯ ವ್ಯಕ್ತಿಯ ಆಸಕ್ತಿ ಉಳಿದಿರುವ ಸಾಧ್ಯತೆಯಿರುತ್ತದೆ. ಹೀಗಾದರೆ ಮೃತ ವ್ಯಕ್ತಿಯ ಲಿಂಗದೇಹ ಆ ವಸ್ತುಗಳಲ್ಲಿ ಸಿಲುಕಿ, ಮೃತ್ಯು ನಂತರದ ಪ್ರವಾಸದಲ್ಲಿ ಅದಕ್ಕೆ ಅಡಚಣೆಯುಂಟಾಗಬಹುದು. ಆದ್ದರಿಂದ ಮೃತ ವ್ಯಕ್ತಿಯ ಕುಟುಂಬದವರು ಮುಂದಿನ ಅಂಶಗಳಂತೆ ಆಚರಣೆ ಮಾಡಬೇಕು.

ಅ. ಮೃತ ವ್ಯಕ್ತಿಯು ಕೊನೆಯ ದಿನ ಬಳಸಿದ ಬಟ್ಟೆ ಮತ್ತು ಹಾಸಿಗೆ-ಹೊದಿಕೆಯನ್ನು ಅಂತ್ಯಯಾತ್ರೆಯೊಂದಿಗೆ ತೆಗೆದುಕೊಂಡು ಹೋಗಿ ಅವುಗಳನ್ನು ಚಿತೆಯ ಮೇಲಿಡಬೇಕು. ಹೀಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಅವುಗಳನ್ನು ಕಾಲಾಂತರದಲ್ಲಿ ಅಗ್ನಿಯಲ್ಲಿ ಸುಡಬೇಕು.

ಆ. ಮೃತ ವ್ಯಕ್ತಿಯು ಒಮ್ಮೆಯೂ ಬಳಸದ (ಹೊಸ) ಬಟ್ಟೆಗಳನ್ನು ಅವನ ಕುಟುಂಬದವರು ಅಥವಾ ಇತರ ವ್ಯಕ್ತಿಗಳು ಉಪಯೋಗಿಸಬಹುದು.

ಇ. ಮೃತ ವ್ಯಕ್ತಿಯು ಕೊನೆಯ ದಿನವನ್ನು ಬಿಟ್ಟು ಅದರ ಮೊದಲಿನ ದಿನಗಳಲ್ಲಿ ಬಳಸಿದ ಬಟ್ಟೆಗಳು, ಕೈಗಡಿಯಾರ, ಸಂಚಾರಿವಾಣಿ (ಮೊಬೈಲ್), ಬರವಣಿಗೆಯ ವಸ್ತು, ಪುಸ್ತಕ, ಬ್ಯಾಗ್ ಇತ್ಯಾದಿ ವಸ್ತುಗಳನ್ನು ಗೋಮೂತ್ರ ಅಥವಾ ತೀರ್ಥವನ್ನು ಸಿಂಪಡಿಸಿ ಅಥವಾ ಈ ವಸ್ತುಗಳ ಮೇಲೆ ಯಜ್ಞದ ವಿಭೂತಿ / ಸಾತ್ತ್ವಿಕ ಊದುಬತ್ತಿಯ ವಿಭೂತಿಯನ್ನು ಊದಿ ಶುದ್ಧೀಕರಣ ಮಾಡಬೇಕು. ಕುಟುಂಬದವರು ಈ ವಸ್ತುಗಳನ್ನು ಬಳಸಬೇಕಾಗಿದ್ದಲ್ಲಿ ಅವರು ದತ್ತಗುರುಗಳಿಗೆ ಪ್ರಾರ್ಥನೆ ಮಾಡಿ ಆ ವಸ್ತುಗಳನ್ನು 6 ವಾರಗಳ ನಂತರ ಬಳಸಬೇಕು. 6 ವಾರಗಳಲ್ಲಿ ಮೃತ ವ್ಯಕ್ತಿಯ ಲಿಂಗದೇಹಕ್ಕೆ ಆವಶ್ಯಕವಾದ ಗತಿಯು ಸಿಕ್ಕಿರುತ್ತದೆ, ಹಾಗೆಯೇ ಅವನ ಭೂಮಿಯ ಮೇಲಿನ ಸ್ಪಂದನಗಳು ಮತ್ತು ಅವನ ವಸ್ತುಗಳಲ್ಲಿನ ತೊಂದರೆದಾಯಕ ಸ್ಪಂದನಗಳು ಕೂಡ ಕಡಿಮೆಯಾಗಿರುತ್ತವೆ. ಆದ್ದರಿಂದ ಮೃತ ವ್ಯಕ್ತಿಯ ವಸ್ತುಗಳನ್ನು ಕುಟುಂಬದವರು 6 ವಾರಗಳ ನಂತರ ಬಳಸಬಹುದು.

ಈ. ಸಂತರ ದೇಹವು ಚೈತನ್ಯಮಯವಾಗಿರುತ್ತದೆ. ಆದ್ದರಿಂದ ಅವರು ದೇಹ ತ್ಯಜಿಸಿದ ನಂತರ ಅವರು ಬಳಸಿದ ವಸ್ತುಗಳಲ್ಲಿರುವ ಚೈತನ್ಯದ ಲಾಭವು ಎಲ್ಲರಿಗೂ ಸಿಗಬೇಕೆಂದು ಆ ವಸ್ತುಗಳನ್ನು ಜೋಪಾನ ಮಾಡಿಡಬೇಕು.

Leave a Comment