ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ ಏನು ಮಾಡಬೇಕು? ಅದರ ಶಾಸ್ತ್ರವೇನು?

ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ ದಾನವನ್ನು ಮಾಡಿಸಬೇಕು ಅಥವಾ ಉಪ್ಪು-ರೊಟ್ಟಿಯಿಂದ ನಿವಾಳಿಸಬೇಕು (ಇಳಿ ಕೊಡಬೇಕು) ಎನ್ನುತ್ತಾರೆ, ಇದರ ಕಾರಣವೇನು ?

ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಸ್ತ್ರೀಣಾಂ ಶೂದ್ರಜನಸ್ಯ ಚ ||
ಆತುರಸ್ಯ ಯದಾ ಪ್ರಾಣಾನ್ ನಯಂತಿ ವಸುಧಾತಲೆ |
ಲವಣಂ ತು ತದಾ ದೇಯಂ ದ್ವಾರಸ್ಯೋದ್ಘಾಟನಂ ದಿವಃ ||
– ಗರುಡಪುರಾಣ, ಅಂಶ ೩, ಅಧ್ಯಾಯ ೧೯, ಶ್ಲೋಕ ೩೧, ೩೨

ಭಾವಾರ್ಥ: ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ ದಾನ ಮಾಡಿಸಬೇಕು. ಹೀಗೆ ಮಾಡುವುದೆಂದರೆ, ಆ ವ್ಯಕ್ತಿಗಾಗಿ ಸ್ವರ್ಗದ ಬಾಗಿಲು ತೆರೆದಂತೆಯೇ ಆಗಿದೆ.

ಉಪ್ಪಿನ ದಾನ ಮಾಡುವುದು ಒಂದು ಪದ್ಧತಿಯಾಯಿತು. ಎರಡನೆಯ ಪದ್ಧತಿ ಎಂದರೆ ಉಪ್ಪು-ರೊಟ್ಟಿಯ ಇಳಿ ಕೊಡುವುದು (ನಿವಾಳಿಸುವುದು). ಈ ಎರಡೂ ಪದ್ಧತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರವು ಮುಂದಿನಂತಿದೆ.

ಬಹಳಷ್ಟು ಸಲ ಮೃತ್ಯುವಿನ ಸಮಯದಲ್ಲಿ ಕೆಟ್ಟ ಶಕ್ತಿಗಳು ಮರಣೋನ್ಮುಖ ವ್ಯಕ್ತಿಯ ಲಿಂಗದೇಹದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುತ್ತವೆ. ಅವುಗಳ ಜಗಳದಿಂದಾಗಿ ಅಥವಾ ಪೈಪೋಟಿಯಿಂದಾಗಿ ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದೆ ದೇಹದಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದಾಗಿ ಮರಣೋನ್ಮುಖ ವ್ಯಕ್ತಿಗೆ ಬಹಳಷ್ಟು ಯಾತನೆಗಳನ್ನು ಅನುಭವಿಸಬೇಕಾಗುತ್ತದೆ. ಉಪ್ಪಿನಿಂದ ಹರಡುವ ರಜ-ತಮಾತ್ಮಕ ಸೂಕ್ಷ್ಮ ವಾಯುವು ಕೆಟ್ಟ ಶಕ್ತಿಗಳಿಂದ ಕೂಡಲೇ ಗ್ರಹಿಸಲ್ಪಡುತ್ತದೆ. ಈ ವಾಯುವು ಅತ್ಯಂತ ಹಗುರವಾಗಿರುತ್ತದೆ ಮತ್ತು ಅದು ಕೆಟ್ಟ ಶಕ್ತಿಗಳ ಸುತ್ತಲಿರುವ ವಾಯುಕೋಶಗಳಿಂದ ಕೂಡಲೇ ಗ್ರಹಿಸಲ್ಪಡುತ್ತದೆ. ಆದುದರಿಂದ ಮರಣೋನ್ಮುಖ ವ್ಯಕ್ತಿಯ ಕೈಯಿಂದ ಉಪ್ಪಿನ ದಾನ ಮಾಡಿಸಬೇಕು ಅಥವಾ ಅವನಿಗೆ ಉಪ್ಪು-ರೊಟ್ಟಿಯಿಂದ ನಿವಾಳಿಸಬೇಕು. ಇದರಿಂದ ಕೆಲವು ಸಮಯದ ವರೆಗೆ ಆ ವ್ಯಕ್ತಿಯ ಮೇಲಿರುವ ಕೆಟ್ಟ ಶಕ್ತಿಗಳ ಹಿಡಿತವು ಕಡಿಮೆಯಾಗುತ್ತದೆ ಮತ್ತು ಆ ವ್ಯಕ್ತಿಯ ಪ್ರಾಣವು ದೇಹದಿಂದ ಸುಲಭವಾಗಿ ಹೊರಗೆ ಹೋಗುತ್ತದೆ. ಯಾವ ಕುಟುಂಬದಲ್ಲಿ ಪೂರ್ವಜರ ಲಿಂಗದೇಹಗಳ ತೊಂದರೆಯು ತೀವ್ರ ಪ್ರಮಾಣದಲ್ಲಿ ಇರುತ್ತದೆಯೋ, ಆ ಕುಟುಂಬದಲ್ಲಿನ ವ್ಯಕ್ತಿಗಳ ಪ್ರಾಣವು ಹೋಗುವಾಗ ಈ ರೀತಿಯ ತೊಂದರೆಗಳಾಗುತ್ತವೆ. ಇಂತಹ ಕುಟುಂಬದವರು ದತ್ತನ ಉಪಾಸನೆಯನ್ನು ಮಾಡಿ ಪೂರ್ವಜರ ತೊಂದರೆಯಿಂದ ಮುಕ್ತರಾಗಬಹುದು. ಅಂದರೆ ಕೊನೆಗೆ ಸಾಧನೆಗೆ ಪರ್ಯಾಯವಿಲ್ಲ.

ಮರಣೋನ್ಮುಖ ವ್ಯಕ್ತಿಯ ಪ್ರಾಣವು ಬೇಗನೆ ಹೋಗದಿದ್ದರೆ, ಅವನ ಕೈಯಿಂದ ಉಪ್ಪನ್ನು ಯಾರಿಗೆ ದಾನ ಮಾಡಬೇಕು ಮತ್ತು ಮುಂದೆ ಆ ದಾನವನ್ನು ಏನು ಮಾಡಬೇಕು?

ಉಪ್ಪನ್ನು ಯಾರಿಗಾದರೂ ದಾನ ಮಾಡಬಹುದು. ಆದರೆ ಅದರಲ್ಲಿ ತ್ಯಾಗದ ಭಾವ, ಅಂದರೆ ‘ತನ್ನ (ದಾನ ನೀಡುವ ವ್ಯಕ್ತಿಯ) ಮಾಧ್ಯಮದಿಂದ ಈಶ್ವರನೇ ಆ ಮರಣೋನ್ಮುಖ ವ್ಯಕ್ತಿಯ ಕಲ್ಯಾಣವನ್ನು ಮಾಡುತ್ತಿದ್ದಾನೆ’ ಎಂಬ ಭಾವವನ್ನಿಟ್ಟು ಕೊಂಡಿರಬೇಕು (ದಾನವನ್ನು ಯಾರು ಬೇಕಾದರೂ, ಅಂದರೆ ಮರಣೋನ್ಮುಖ ವ್ಯಕ್ತಿ ಅಥವಾ ಇತರ ವ್ಯಕ್ತಿಯು ನೀಡುತ್ತಿದ್ದಲ್ಲಿ ಆ ದಾನವನ್ನು ಈಶ್ವರನೇ ನೀಡುತ್ತಿದ್ದಾನೆ ಎಂಬ ಭಾವವಿರಬೇಕು) ಮತ್ತು ದಾನವನ್ನು ತೆಗೆದುಕೊಳ್ಳುವ ವ್ಯಕ್ತಿಯು ‘ಈ ದಾನದ ಮಾಧ್ಯಮದಿಂದ ಈಶ್ವರನು ನನ್ನ ಮೇಲೆ ಅನಂತ ಉಪಕಾರ ಮಾಡುತ್ತಿದ್ದಾನೆ’ ಎಂಬ ಭಾವವನ್ನಿಟ್ಟುಕೊಳ್ಳಬೇಕು; ಇದರಿಂದ ದಾನ ಸ್ವೀಕರಿಸುವವನಲ್ಲಿ ಮತ್ತು ದಾನವನ್ನು ಮಾಡುವವನಲ್ಲಿ ಆದರಭಾವವು ಉತ್ಪನ್ನವಾಗಿ ಈಶ್ವರೀ ಶಕ್ತಿಯಿಂದ ಇಬ್ಬರಿಗೂ ಕೆಟ್ಟ ಶಕ್ತಿಗಳ ತೊಂದರೆಯಾಗುವುದಿಲ್ಲ. ದಾನವನ್ನು ತೆಗೆದು ಕೊಳ್ಳುವ ವಿಧಿಯು ಮುಗಿದ ಬಳಿಕ ‘ಆ ದಾನವು ಆಯಾ ಶಕ್ತಿಗಳನ್ನು ಸಂತುಷ್ಟಪಡಿಸಲಿ’ ಎಂದು ಪ್ರಾರ್ಥಿಸಿ ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು. – ಶ್ರೀಗುರುತತ್ತ್ವ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೩.೨೦೦೫, ರಾತ್ರಿ ೯.೫೫ ಮತ್ತು ೫.೩.೨೦೦೬, ಸಾಯಂ.೫.೧೮)

(ಮೇಲಿನ ವಿಷಯದೊಂದಿಗೆ ಇನ್ನೂ ಅನೇಕ ಸೂಕ್ಷ್ಮ ಸ್ತರದ ವಿಷಯಗಳು ಗ್ರಂಥದಲ್ಲಿವೆ.)

(ಆಧಾರ : ಸನಾತನ ಸಂಸ್ಥೆಯ ಗ್ರಂಥ “ಮೃತ್ಯು ಮತ್ತು ಮೃತ್ಯುವಿನ ನಂತರದ ಕ್ರಿಯಾಕರ್ಮಗಳು”)

Leave a Comment