ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ

೧. ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಂಕಲ್ಪ ಮಾಡುವುದರ ಮಹತ್ವ

ದೈನಂದಿನ ಜೀವನದಲ್ಲಿ ನಾವು ದೇವರಪೂಜೆ, ಉಪವಾಸ, ಸ್ನಾನ, ಇಂತಹ ಅನೇಕ ಧಾರ್ಮಿಕ ಕೃತಿಗಳನ್ನು ಸಹಜವಾಗಿಯೇ ಮಾಡುತ್ತಿರುತ್ತೇವೆ. ಅವುಗಳಲ್ಲಿನ ಎಷ್ಟೋ ಕೃತಿಗಳನ್ನು ಹಿರಿಯರು ಮಾಡುತ್ತಿದ್ದರೆಂದು ನಾವು ಸಹ ಅದೇ ರೀತಿ ಮಾಡುತ್ತೇವೆ; ಆದರೆ ಈ ಕೃತಿಗಳನ್ನು ನಾವು ಏಕೆ ಮಾಡುತ್ತೇವೆ, ಅವುಗಳನ್ನು ಮಾಡುವ ಉದ್ದೇಶವೇನು, ಎಂಬುದನ್ನು ನಾವು ಗಮನಿಸುವುದಿಲ್ಲ. ಈ ಕೃತಿಗಳ ಸಂಪೂರ್ಣ ಲಾಭವಾಗಲು ಅವುಗಳ ಶಾಸ್ತ್ರವನ್ನು ತಿಳಿದುಕೊಳ್ಳೋಣ…

ಸಙ್ಕಲ್ಪಂ ಚ ಯಥಾ ಕುರ್ಯಾತ್‌ ಸ್ನಾನದಾನವ್ರತಾದಿಕೇ |
ಅನ್ಯಥಾ ಪುಣ್ಯಕರ್ಮಾಣಿ ನಿಷ್ಫಲಾನಿ ಭವನ್ತಿ ಚ || – ಆಚಾರಮಯೂಖ, ಪರಿಭಾಷಾಪ್ರಕರಣ

ಅರ್ಥ : ಸ್ನಾನ, ದಾನ, ವ್ರತ ಇತ್ಯಾದಿ ಯಾವುದೇ ಸತ್ಕರ್ಮವನ್ನು ಮಾಡುವಾಗ ಸಂಕಲ್ಪವನ್ನು ಮಾಡಬೇಕು, ಇಲ್ಲದಿದ್ದರೆ (ಆ) ಪುಣ್ಯಕರ್ಮಗಳು ನಿಷ್ಫಲವಾಗುತ್ತವೆ.

೧ ಅ. ದೇವರ ಪೂಜೆಯನ್ನು ಮಾಡುವಾಗ ಮಾಡಬೇಕಾದ ಸಂಕಲ್ಪ

ಹಿಂದಿನ ಕಾಲದಲ್ಲಿ ಪ್ರತಿದಿನ ಮಾಡುವ ದೇವರ ಪೂಜೆಯನ್ನು ಮಾಡುವಾಗಲೂ ಆಚಮನ ಇತ್ಯಾದಿಗಳನ್ನು ಶಾಸ್ತ್ರೋಕ್ತವಾಗಿ ಮಾಡಿ ‘ನನ್ನ ಸಂಪೂರ್ಣ ಕುಟುಂಬದಲ್ಲಿರುವ ಸದಸ್ಯರಿಗೆ (ಅದರಲ್ಲಿ ಸಾಕುಪ್ರಾಣಿ-ಪಕ್ಷಿ ಇತ್ಯಾದಿ ಎಲ್ಲರನ್ನೂ ಸೇರಿಸಲಾಗುತ್ತಿತ್ತು.) ಎಲ್ಲರಿಗೂ ಆಯುಷ್ಯ, ಆರೋಗ್ಯ ಇತ್ಯಾದಿಗಳು ಸಿಗಲಿ, ಅವರೆಲ್ಲರ ಸಂಪೂರ್ಣ ಏಳಿಗೆಯಾಗಲಿ ಮತ್ತು ನಮ್ಮ ಕುಟುಂಬದ ಮೇಲೆ ಎಲ್ಲ ದೇವತೆಗಳ ಸಂಪೂರ್ಣ ಕೃಪೆಯಿರಲಿ, ಅದಕ್ಕಾಗಿ ನಾನು ಈ ದೇವರಪೂಜೆಯನ್ನು ಮಾಡುತ್ತಿದ್ದೇನೆ’, ಎಂಬ ಸಂಕಲ್ಪವನ್ನು ಮಾಡಿ ಪೂಜೆಯನ್ನು ಮಾಡಲಾಗುತ್ತಿತ್ತು.

೧ ಆ. ಸ್ನಾನವನ್ನು ಮಾಡುವಾಗ ಮಾಡಬೇಕಾದ ಸಂಕಲ್ಪ

ಹಿಂದಿನ ಕಾಲದಲ್ಲಿ ಸ್ನಾನ ಮಾಡುವಾಗ ‘ನನ್ನ ದೇಹ, ವಾಣಿ ಮತ್ತು ಮನಸ್ಸಿನಿಂದ ಆದ ಎಲ್ಲ ಪಾಪಗಳು, ಹಾಗೆಯೇ ಯಾವುದಾದರೊಬ್ಬ ಪಾಪಿ ಮನುಷ್ಯನ ಸಂಪರ್ಕದಿಂದ ತಗಲಿದ ಪಾಪವನ್ನು ದೂರಗೊಳಿಸಲು ನಾನು ಗಂಗಾನದಿಯನ್ನು ಸ್ಮರಿಸಿ ಸ್ನಾನ ಮಾಡುತ್ತೇನೆ’, ಹೀಗೆ ಸಂಕಲ್ಪವನ್ನು ಮಾಡಲು ಹೇಳಲಾಗಿದೆ. (ಇಲ್ಲಿ ಸತ್‌ಸಂಗದ ಮಹತ್ವವು ಗಮನಕ್ಕೆ ಬರುತ್ತದೆ. ಪಾಪಿ ಮನುಷ್ಯನ ಸಂಪರ್ಕದಿಂದ ಯಾವ ಪಾಪಗಳು ತಗಲುತ್ತವೆಯೋ, ಅದರ ಬಗ್ಗೆಯೂ ಶಾಸ್ತ್ರಕಾರರು ವಿಚಾರ ಮಾಡಿದ್ದಾರೆ.)

ಉದಾಹರಣೆಗಾಗಿ ಮೇಲಿನ ಧಾರ್ಮಿಕ ಕೃತಿಗಳನ್ನು ಇಲ್ಲಿ ಕೊಡಲಾಗಿದೆ. ‘ದಿನನಿತ್ಯ ಮಾಡಲಾಗುವ ಪ್ರತಿಯೊಂದು ಧಾರ್ಮಿಕ ಕೃತಿಗಳ ಹಿಂದೆ ಸಂಕಲ್ಪದ ಕೃತಿಯು ಶಾಸ್ತ್ರಕಾರರಿಗೆ ಅಪೇಕ್ಷಿತವಿದೆ. ಇಲ್ಲದಿದ್ದರೆ ಆ ಕೃತಿಗಳು ನಿಷ್ಫಲವಾಗುತ್ತವೆ’, ಎಂದು ಅವರು ಹೇಳುತ್ತಾರೆ.

೧ ಇ. ಇಂದು ಧಾರ್ಮಿಕ ಕೃತಿಗಳನ್ನು ಮಾಡುವ ಮೊದಲು ಅದರ ಉದ್ದೇಶವನ್ನು ದೇವರಿಗೆ ಹೇಳಬೇಕು

ಕಾಲಕ್ಕನುಸಾರ ಮೇಲಿನಂತೆ ಶಾಸ್ತ್ರೋಕ್ತ ಸಂಕಲ್ಪ ಇತ್ಯಾದಿಗಳನ್ನು ಮಾಡಲು ಅನೇಕರಿಗೆ ಸಾಧ್ಯವಾಗುವುದಿಲ್ಲ; ಆದರೆ ನಾವು ಮಾಡುತ್ತಿರುವ ಧಾರ್ಮಿಕ ಕೃತಿಗಳ ಉದ್ದೇಶವನ್ನು ನಮ್ಮ ನಮ್ಮ ರೀತಿಯಲ್ಲಿ ದೇವರಿಗೆ ಹೇಳಬೇಕು ಮತ್ತು ನಂತರ ಆ ಕೃತಿಯನ್ನು ಮಾಡಬೇಕು. ಅದರಿಂದ ಶಾಸ್ತ್ರದಲ್ಲಿ ಹೇಳಿದ ಆ ಕೃತಿಯ ಎಲ್ಲ ಲಾಭಗಳು ನಮಗೆ ಸಿಗುತ್ತವೆ.

೧ ಇ ೧. ಧಾರ್ಮಿಕ ಕೃತಿಗಳ ಉದ್ದೇಶವನ್ನು ಹೇಳುವುದರಿಂದ ಆಗುವ ಲಾಭ

ಅ. ನಮಗೆ ಆ ಕೃತಿಯ ಬಗ್ಗೆ ಶಾಸ್ತ್ರದಲ್ಲಿ ಹೇಳಿದ ಲಾಭ ಸಿಗುವುದು.

ಆ. ಆ ಕೃತಿಯ ಉದ್ದೇಶವು ಮಾನಸಶಾಸ್ತ್ರಕ್ಕನುಸಾರ ಮೊದಲು ನಮ್ಮ ಮನಸ್ಸಿನ ಮೇಲೆ ಬಿಂಬಿತವಾಗುವುದು ಮತ್ತು ಅದನ್ನು ನಾವು ಏಕೆ ಮಾಡುತ್ತಿದ್ದೇವೆ ಎಂದು ತಿಳಿಯುವುದರಿಂದ ಆ ಕೃತಿಯನ್ನು ಗಾಂಭೀರ್ಯದಿಂದ ಮಾಡಲಾಗುವುದು.

ಇ. ಆ ಕೃತಿಯ ವಿಶಿಷ್ಟ ಉದ್ದೇಶ ತಿಳಿಯುವುದರಿಂದ ದೈನಂದಿನ ಜೀವನದಲ್ಲಿಯೂ ಬದಲಾವಣೆ ಆಗುವುದು. ಅವುಗಳ ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

೧. ದಿನನಿತ್ಯ ಸ್ನಾನವನ್ನು ಮಾಡುವಾಗ ‘ಪಾಪಿ ವ್ಯಕ್ತಿಯ ಸಂಪರ್ಕದಿಂದ ತಗಲಿದ ಪಾಪವು ದೂರವಾಗಲಿ’, ಎಂದು ಹೇಳಿ ಸ್ನಾನವನ್ನು ಮಾಡಿದರೆ ಸತ್‌ಸಂಗದಲ್ಲಿ ಇರುವುದರ ಮಹತ್ವ ನಮ್ಮ ಮನಸ್ಸಿನ ಮೇಲೆ ತನ್ನಿಂದ ತಾನೇ ಬಿಂಬಿಸಲ್ಪಡುವುದು.

೨. ದೇವರ ಪೂಜೆಯನ್ನು ಮಾಡುವಾಗ ‘ಮನೆಯಲ್ಲಿನ ಎಲ್ಲರ ಏಳಿಗೆಯಾಗಲಿ’, ಎಂದು ಪ್ರಾರ್ಥಿಸಿ ಪೂಜೆಯನ್ನು ಮಾಡಿದರೆ ಕುಟುಂಬದ ಸದಸ್ಯರಲ್ಲಿ ಸಾಮರಸ್ಯ ಉಂಟಾಗುವುದು.

೨. ಧಾರ್ಮಿಕ ಕೃತಿಗಳ ಫಲವನ್ನು ದೇವರಿಗೆ ಅರ್ಪಿಸುವುದು

ಅ. ಧಾರ್ಮಿಕ ಕೃತಿಯನ್ನು ಮಾಡುವ ಮೊದಲು ಸಂಕಲ್ಪ ಮಾಡಬೇಕು; ಆದರೆ ಕೃತಿ ಆದ ನಂತರ ‘ಈ ಕೃತಿಯನ್ನು ನಾವು ಕೇವಲ ಈಶ್ವರನಿಗೆ ಅರ್ಪಿಸಲು ಮಾತ್ರ ಮಾಡಿದ್ದೇವೆ’, ಎಂಬ ಆಧ್ಯಾತ್ಮಿಕ ಭಾವದಿಂದ ಅದನ್ನು ಈಶ್ವರನಿಗೆ ತಕ್ಷಣ ಅರ್ಪಿಸಬೇಕು.

ಆ. ಈ ಕುರಿತು ಶ್ರೀಮದ್ಭಗವದ್ಗೀತೆಯಲ್ಲಿ ಭಗವಂತನು ಅರ್ಜುನನಿಗೆ ೨ ಸೂತ್ರಗಳನ್ನು ಹೇಳಿದ್ದಾನೆ.

೧. ನೀನು ಕೇವಲ ಕರ್ಮವನ್ನು ಮಾಡು, ಫಲದ ಅಪೇಕ್ಷೆಯನ್ನು ಮಾಡಬೇಡ.

೨. ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್‌ |
ಯತ್ತಪಸ್ಯಸಿ ಕೌನ್ತೇಯ ತತ್ಕುರುಷ್ವ ಮದರ್ಪಣಮ್‌ || – ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೨೭

ಅರ್ಥ : ಹೇ ಕೌಂತೇಯ (ಅಂದರೆ ಕುಂತೀಪುತ್ರ ಅರ್ಜುನ), ನೀನು ಯಾವ ಕರ್ಮವನ್ನು ಮಾಡುತ್ತಿಯೋ, ಏನು ಸೇವಿಸುವೆಯೋ, ಯಾವ ಹವನವನ್ನು ಮಾಡುವೆಯೋ, ಏನು ದಾನ ಮಾಡುವೆಯೋ ಮತ್ತು ಏನು ತಪಸ್ಸು ಮಾಡುವೆಯೋ, ಅದೆಲ್ಲವನ್ನು ನನಗೆ ಅರ್ಪಿಸು.

ಇ. ಫಲದ ಅಪೇಕ್ಷೆಯನ್ನಿಡದೇ ಅದನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವವನ್ನು ಕೂರ್ಮಪುರಾಣದಲ್ಲಿಯೂ ಹೇಳಲಾಗಿದೆ.

ಬ್ರಹ್ಮಣ್ಯಾಧಾಯ ಕರ್ಮಾಣಿ ನಿಃಸಙ್ಗಃ ಕಾಮವರ್ಜಿತಃ |
ಪ್ರಸನ್ನೇನೈವ ಮನಸಾs ಕುರ್ವಾಣೋ ಯಾತಿ ತತ್ಪದಮ್‌ || – ಕೂರ್ಮಪುರಾಣ, ಪೂರ್ವಭಾಗ, ಅಧ್ಯಾಯ ೩, ಶ್ಲೋಕ ೧೪

ಅರ್ಥ : ಯಾರು ಎಲ್ಲ ಕರ್ಮಗಳನ್ನು ಪರಮಾತ್ಮನಿಗೆ ಅರ್ಪಿಸಿ ಆಸಕ್ತಿ ಮತ್ತು ವಾಸನೆಗಳನ್ನು ಬಿಟ್ಟು ಪ್ರಸನ್ನ ಮನಸ್ಸಿನಿಂದ ಮಾಡುತ್ತಾರೋ, ಅವರು ಬ್ರಹ್ಮಪದವನ್ನು ಪಡೆಯುತ್ತಾರೆ.

ತಾತ್ಪರ್ಯವೇನೆಂದರೆ, ಧಾರ್ಮಿಕ ಕೃತಿಯನ್ನು ಮಾಡುವ ಮೊದಲು ‘ನಾವು ಅದನ್ನು ಯಾವ ಉದ್ದೇಶದಿಂದ ಮಾಡುತ್ತಿದ್ದೇವೆ’, ಎಂಬುದನ್ನು ದೇವರಿಗೆ ಹೇಳಬೇಕು ಮತ್ತು ಅದನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸಬೇಕು. ಕೃತಿ ಮಾಡಿದ ನಂತರ ಫಲದ ವಿಚಾರವನ್ನು ಮಾಡದೇ ಅದನ್ನು ತಕ್ಷಣ ದೇವರಿಗೆ ಅರ್ಪಿಸಬೇಕು.

ಯಾವುದೇ ಕೃತಿಯನ್ನು ಮಾಡುವ ಮೊದಲು ದೇವರಿಗೆ ಪ್ರಾರ್ಥಿಸುವುದು ಮತ್ತು ಕೃತಿಯ ಕೊನೆಗೆ ಅವನಿಗೆ ಕೃತಜ್ಞತೆಯನ್ನು ಸಲ್ಲಿಸುವುದು, ಇದರ ಒಂದು ಪ್ರಾತಿನಿಧಿಕ ರೂಪವಾಗಿದೆ.

– ಶ್ರೀ. ಅಮರ ಜೋಶಿ, ಸನಾತನ ವೇದಪಾಠಶಾಲೆ, ಗೋವಾ. (೨೧.೪.೨೦೨೫)

Leave a Comment