ಸಾಮಾನ್ಯವಾಗಿ ನಾವು ದಿನವಿಡಿ ಯಾವುದಾದರೂ ಧಾರ್ಮಿಕ ಕೃತಿಯನ್ನು ಮಾಡುತ್ತಿರುತ್ತೇವೆ, ಉದಾ. ಬೆಳಗ್ಗೆ ಎದ್ದ ನಂತರ ದೇವತೆಗಳನ್ನು ಸ್ಮರಿಸುವುದು (ಪ್ರಾತಃಸ್ಮರಣೆ), ಸ್ನಾನವನ್ನು ಮಾಡಿ ಮನೆಯಲ್ಲಿ ದೇವರ ಪೂಜೆ ಮಾಡುವುದು, ಸೌಭಾಗ್ಯವತಿ ಸ್ತ್ರೀಯರು ಅನ್ನಪೂರ್ಣೇಶ್ವರಿದೇವಿಯ ಪೂಜೆಯನ್ನು ಮಾಡುವುದು ಮತ್ತು ತುಳಸಿಗೆ ನೀರು ಹಾಕುವುದು, ದೇವರ ಪೂಜೆಯ ನಂತರ ಅಥವಾ ಮಧ್ಯಾಹ್ನ ನೈವೇದ್ಯವನ್ನು ಅರ್ಪಿಸುವುದು, ಸಾಯಂಕಾಲ ತುಳಸಿಯ ಮುಂದೆ ದೀಪವನ್ನು ಹಚ್ಚಿ ನಮಸ್ಕಾರ ಮಾಡುವುದು, ಸಾಯಂಕಾಲ ರಾಮರಕ್ಷಾ, ಶುಭಂ ಕರೋತಿ ಇತ್ಯಾದಿ ಸ್ತ್ರೋತ್ರ-ಶ್ಲೋಕಗಳನ್ನು ಪಠಿಸುವುದು, ದೇವತೆಗಳ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು ಇತ್ಯಾದಿ. ಅನೇಕರಿಗೆ ಧಾರ್ಮಿಕ ಕೃತಿಗಳನ್ನು ಯಾವ ಕೈಯಿಂದ ಮಾಡಬೇಕು, ಇಂತಹ ಕೃತಿಗಳನ್ನು ಮಾಡುವಾಗ ಮುಖ ಯಾವ ದಿಕ್ಕಿಗೆ ಇರಬೇಕು ಎಂಬ ಪ್ರಶ್ನೆಗಳು ಬರುತ್ತವೆ. ಅವುಗಳ ಉತ್ತರಗಳನ್ನು ಮುಂದೆ ಕೊಡಲಾಗಿದೆ.
೧. ಧಾರ್ಮಿಕ ಕೃತಿಗಳನ್ನು ಯಾವ ಕೈಯಿಂದ ಮಾಡಬೇಕು ?
ಯತ್ರೋಪದಿಶ್ಯತೇ ಕರ್ಮ ಕರ್ತ್ತುರಙ್ಗಂ ನ ತೂಚ್ಯತೇ | ದಕ್ಷಿಣಸ್ತತ್ರ ವಿಜ್ಞೇಯಃ ಕರ್ಮಣಾಂ ಪಾರಗಃ ಕರಃ || – ಕರ್ಮಪ್ರದೀಪ, ಪ್ರಪಾಠಕ ೧, ಖಣ್ಡ ೧, ಶ್ಲೋಕ ೬
ಅರ್ಥ : ‘ಯಾವುದಾದರೊಂದು ಕರ್ಮವನ್ನು ಯಾವ ಕೈಯಿಂದ ಮಾಡಬೇಕು’ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೆ ಇಂತಹ ಸಮಯದಲ್ಲಿ ಬಲಗೈಯಿಂದಲೇ ಮುಖ್ಯ ಕೃತಿಯನ್ನು ಮಾಡಬೇಕು.
ಅ. ದೇವರಿಗೆ ಗಂಧವನ್ನು ಹಚ್ಚುವುದು, ಹೂವುಗಳನ್ನು ಅರ್ಪಿಸುವುದು ಇತ್ಯಾದಿ ಕೃತಿಗಳನ್ನು ಬಲಗೈಯಿಂದ ಮಾಡಬೇಕು.
ಆ. ದೇವರಿಗೆ ಸ್ನಾನವನ್ನು ಮಾಡಿಸುವಾಗ ದೇವರ ವಿಗ್ರಹವನ್ನು ಬಲಗೈಯಿಂದ ಉಜ್ಜಬೇಕು ಮತ್ತು ಎಡಗೈಯಿಂದ ನೀರು ಹಾಕಬೇಕು. ವಿಗ್ರಹವನ್ನು ಎಡಗೈಯಲ್ಲಿ ಹಿಡಿಯಬಾರದು ಮೂರ್ತಿಯನ್ನು ಒಂದು ತಟ್ಟೆಯಲ್ಲಿಟ್ಟು ಬಲಗೈಯಿಂದ ಉಜ್ಜಬೇಕು.
ಇ. ದೇವರ ಮುಂಡಿಟ್ಟ ದೀಪವನ್ನು ಬಲಗೈಯಿಂದ ಹಚ್ಚಬೇಕು.
೨. ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಖ ಯಾವ ದಿಕ್ಕಿಗೆ ಇರಬೇಕು ?
ಯತ್ರ ದಿಙ್ನಿಯಮೋ ನಾಸ್ತಿ ಜಪಹೋಮಾದಿಕರ್ಮಸು | ತಿಸ್ರಸ್ತತ್ರ ದಿಶಃ ಪ್ರೋಕ್ತಾ ಐನ್ದ್ರೀ ಸೌಮ್ಯಾಽಪರಾಜಿತಾಃ || – ಕರ್ಮಪ್ರದೀಪ, ಪ್ರಪಾಠಕ ೧, ಖಣ್ಡ ೧, ಶ್ಲೋಕ ೭
ಅರ್ಥ : ‘ವಿಶಿಷ್ಟ ದಿಕ್ಕಿಗೆ ಮುಖ ಮಾಡಿ ಯಾವುದಾದರೊಂದು ಕರ್ಮವನ್ನು ಮಾಡಬೇಕು’, ಎಂಬ ಸ್ಪಷ್ಟ ಉಲ್ಲೇಖವಿಲ್ಲದಿದ್ದಾಗ, ಪೂರ್ವ, ಈಶಾನ್ಯ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕರ್ಮವನ್ನು ಮಾಡಬೇಕು.
ಅ. ಬೆಳಗ್ಗೆ ನಿದ್ದೆಯಿಂದ ಎದ್ದ ನಂತರ ಪ್ರಾತಃಸ್ಮರಣೆಯ ಶ್ಲೋಕವನ್ನು ಹೇಳುವುದು, ಸ್ನಾನ ಮಾಡುವುದು, ತುಳಸಿಗೆ ನೀರು ಹಾಕುವುದು, ಸ್ತೊತ್ರಗಳನ್ನು ಪಠಿಸುವುದು, ನಾಮಜಪ ಮಾಡುವುದು ಇತ್ಯಾದಿ ಕೃತಿಗಳನ್ನು ಮಾಡುವಾಗ ಪೂರ್ವ, ಈಶಾನ್ಯ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು.
ಆ. ಕೆಲವೊಮ್ಮೆ ಕಚೇರಿಯಲ್ಲಿ ಅಥವಾ ಇತರ ಕಡೆಗಳಲ್ಲಿ ದೇವತೆಗಳ ಚಿತ್ರಗಳನ್ನು ಪೂರ್ವ-ಪಶ್ಚಿಮ ದಿಕ್ಕಿಗೆ ಮುಖಮಾಡಿ ಇಟ್ಟಿರುವುದಿಲ್ಲ. ಚಿತ್ರವನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇಟ್ಟಿದ್ದರೆ, ಪೂಜೆ ಮಾಡುವ ವ್ಯಕ್ತಿಯ ಮುಖವು ದಕ್ಷಿಣಕ್ಕೆ ಆಗುತ್ತದೆ. ಇದು ಅಯೋಗ್ಯವಾಗಿದೆ. ಇಂತಹ ಸಮಯದಲ್ಲಿ ದೇವತೆಗಳ ಮುಖ ಯಾವ ದಿಶೆಯಲ್ಲಿದ್ದರೂ, ಪೂಜೆಯನ್ನು ಮಾಡುವವರು ಪೂರ್ವ, ಈಶಾನ್ಯ ಅಥವಾ ಉತ್ತರ ಇವುಗಳಲ್ಲಿ ಅನುಕೂಲಕರವಾದ ದಿಕ್ಕಿಗೆ ಮುಖಮಾಡಿ ಪೂಜೆಯನ್ನು ಮಾಡಬೇಕು.
ಇ. ಪ್ರವಾಸಕ್ಕೆ ಹೋಗುವಾಗ, ಪರೀಕ್ಷೆಗೆ ಹೋಗುವಾಗ, ಹುಟ್ಟುಹಬ್ಬ ಇತ್ಯಾದಿ ಪ್ರಸಂಗಗಳಲ್ಲಿ ಮನೆಯಲ್ಲಿನ ವ್ಯಕ್ತಿಗಳಿಗೆ ನಮಸ್ಕಾರ ಮಾಡಲಾಗುತ್ತದೆ. ಆಗ ನಮಸ್ಕಾರ ಮಾಡುವವರ ಮುಖ ಪೂರ್ವ ದಿಕ್ಕಿಗೆ ಇರಬೇಕು.
ಧಾರ್ಮಿಕ ಕೃತಿಗಳನ್ನು ಮಾಡುವಾಗ ಶಾಸ್ತ್ರಕಾರರು ಹೇಳಿದ ನಿಯಮಗಳನ್ನು ತಮ್ಮತಮ್ಮ ಕ್ಷಮತೆಗನುಸಾರ ಪಾಲಿಸೋಣ ಮತ್ತು ಈ ಕೃತಿಗಳ ಎಲ್ಲ ಸ್ತರಗಳಲ್ಲಿ ಲಾಭ ಪಡೆಯೋಣ !
(ಮೇಲಿನ ಲೇಖನ ‘ಆಚಾರಮಯೂಖ’ ಮತ್ತು ‘ಕರ್ಮಪ್ರದೀಪ’ ಈ ಗ್ರಂಥಗಳಲ್ಲಿನ ಅಂಶಗಳ ಆಧಾರದ ಮೇರೆಗೆ ಬರೆಯಲಾಗಿದೆ’, ಎಂಬುದನ್ನು ವಾಚಕರು ಗಮನಿಸಬೇಕು.)
ಆಷಾಢ ಏಕಾದಶಿ
ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ
ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?
ಮೃತ್ಯುನಂತರದ ಕ್ರಿಯಾಕರ್ಮಗಳು (13 ನೇ ದಿನದ ಕರ್ಮಗಳ ವರೆಗೆ)
ಮೃತ್ಯುನಂತರದ ಕ್ರಿಯಾಕರ್ಮಗಳು (ಅಂತ್ಯಯಾತ್ರೆಯ ಸಿದ್ಧತೆ ವರೆಗೆ)
ಪಿತೃಲೋಕದ ವ್ಯಾಖ್ಯೆ ಮತ್ತು ಅದರ ವಿಧಗಳು