ಹೋಳಿಯ ನಿಮಿತ್ತ ಪ್ರಭು ಶ್ರೀರಾಮನು ಲಕ್ಷ್ಮಣನಿಗೆ ನೀಡಿದ ಒಂದು ಅನುಪಮ ಉಡುಗೊರೆ !

ಹೋಳಿಯ ದಿನ ಲಕ್ಷ್ಮಣನಿಗೆ ಪ್ರಭು ಶ್ರೀರಾಮನ ಚರಣಸೇವೆ ಸಿಕ್ಕಿತ್ತು. ಅದರ ಬಗ್ಗೆ ಪ್ರಚಲಿತವಿರುವ ಪೌರಾಣಿಕ ಕಥೆಯನ್ನು ಇಲ್ಲಿ ಕೊಡುತ್ತಿದ್ದೇವೆ.

೧. ಶ್ರೀರಾಮನ ಚರಣಸೇವೆಯ ಅವಕಾಶ ಸಿಗದಿರುವುದರಿಂದ ಲಕ್ಷ್ಮಣನಿಗೆ ದುಃಖವಾಗುವುದು

ಶ್ರೀರಾಮರು ವಿವಾಹದ ನಂತರ ಅಯೋಧ್ಯೆಗೆ ಬಂದರು. ಆಗ ಅವರ ಚರಣಸೇವೆಯನ್ನು ಲಕ್ಷ್ಮಣನ ಬದಲು ಸೀತಾಮಾತೆಯು ಮಾಡತೊಡಗಿದಳು. ಲಕ್ಷ್ಮಣನು ಚರಣಸೇವೆಯನ್ನು ಮಾಡಲು ಹೋದರೆ ಸೀತೆಯು ‘ಬೇಡ’ವೆಂದು ಹೇಳುತ್ತಿರಲಿಲ್ಲ; ಆದರೆ ಶಿಷ್ಟಾಚಾರಕ್ಕನುಸಾರ ಎಲ್ಲಿಯವರೆಗೆ ಸೀತಾಮಾತೆ ತಾನಾಗಿಯೇ ಕರೆಯುವುದಿಲ್ಲವೋ, ಅಲ್ಲಿಯವರೆಗೆ ಅಲ್ಲಿ ಹೋಗುವುದು ಯೋಗ್ಯ ಅನಿಸುತ್ತಿರಲಿಲ್ಲ, ಆದುದರಿಂದ ಲಕ್ಷ್ಮಣನಿಗೆ ಹೊರಗೆ ನಿಲ್ಲಬೇಕಾಗುತ್ತಿತ್ತು. ಸೀತೆಯು ಲಕ್ಷ್ಮಣನನ್ನು ಕರೆಯುತ್ತಿರಲಿಲ್ಲ, ಆದುದರಿಂದ ಅವನಿಗೆ ಚರಣಸೇವೆಯ ಅವಕಾಶ ಸಿಗುತ್ತಿರಲಿಲ್ಲ. ಇದರಿಂದ ಲಕ್ಷ್ಮಣನು ದುಃಖದಲ್ಲಿರುತ್ತಿದ್ದನು. ‘ಶ್ರೀರಾಮನ ಚರಣಸೇವೆ ಸಿಗದಿದ್ದರೆ, ಜೀವಂತ ಇರುವುದರಲ್ಲಿ ಏನು ಅರ್ಥವಿದೆ ?’, ಈ ವಿಚಾರದಿಂದ ಲಕ್ಷ್ಮಣನ ಶರೀರ ಕೃಶವಾಗತೊಡಗಿತು.

೨. ಲಕ್ಷ್ಮಣನು ಪ್ರಭು ಶ್ರೀರಾಮನಿಗೆ ಅವರ ಚರಣಸೇವೆಯನ್ನು ಮಾಡಲು ಉಪಾಯ ಕೇಳುವುದು

ಅನಂತರ ಶ್ರೀರಾಮ ಮತ್ತು ಲಕ್ಷ್ಮಣ ಇವರಲ್ಲಿ ನಡೆದ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.

ಶ್ರೀರಾಮ : ಲಕ್ಷ್ಮಣ, ನಿನ್ನ ದೇಹ ಏಕೆ ಕೃಶವಾಗುತ್ತಿದೆ.

ಲಕ್ಷ್ಮಣ : ಪ್ರಭು, ನಿಮಗೆ ಗೊತ್ತೇ ಇದೆ, ಕೆಲವು ದಿನಗಳಿಂದ ನನಗೆ ನಿಮ್ಮ ಚರಣಸೇವೆಯನ್ನು ಮಾಡುವ ಅವಕಾಶ ಸಿಕ್ಕಿಲ್ಲ.

ಶ್ರೀರಾಮ : ನೀನು ನನ್ನ ಸೇವೆಗಾಗಿ ಇಲ್ಲಿಗೆ ಬಂದರೆ, ನಿನಗೆ ಯಾರಾದರೂ ‘ಬೇಡ’ವೆಂದು ಹೇಳುತ್ತಾರೆಯೇ ?

ಲಕ್ಷ್ಮಣ : ಮಾತೆಯವರು ನನ್ನನ್ನು ನೋಡಿದರೂ ಕರೆಯುವುದಿಲ್ಲ. ಪ್ರಭು, ನಾನು ನಿಮ್ಮ ಚರಣಸೇವೆಯ ಹೊರತು ಜೀವಿಸಲು ಸಾಧ್ಯವಿಲ್ಲ !

ಶ್ರೀರಾಮ : ಇದರಲ್ಲಿ ನಾನೇನು ಮಾಡಬಹುದು ? ಅವಳು ಧರ್ಮಪತ್ನಿಯಾಗಿದ್ದಾಳೆ. ಅವಳಿಗೆ ಮೊದಲ ಅಧಿಕಾರವಿದೆ.

ಲಕ್ಷ್ಮಣ : ಪ್ರಭು ಏನಾದರೂ ಉಪಾಯವನ್ನು ಹೇಳಬೇಕು!

೩. ಪ್ರಭು ಶ್ರೀರಾಮರು ಲಕ್ಷ್ಮಣನಿಗೆ ಸೂಚಿಸಿದ ಉಪಾಯ

ಶ್ರೀರಾಮ : ಲಕ್ಷ್ಮಣ, ಒಂದು ಉಪಾಯವಿದೆ, ೪ ದಿನಗಳ ನಂತರ ಹೋಳಿಯ ಹಬ್ಬ ಬರಲಿದೆ. ನಮ್ಮ ರಘುಕುಲದಲ್ಲಿ ಒಂದು ಸಂಪ್ರದಾಯವಿದೆ. ಈ ದಿನದಂದು ಮೈದುನನು ಅತ್ತಿಗೆಯೊಂದಿಗೆ ಹೋಳಿಯನ್ನು ಆಡುತ್ತಾನೆ ಮತ್ತು ಸಾಯಂಕಾಲ ಹಿರಿಯರೆದುರು ಮೈದುನನು ಏನು ವರವನ್ನು ಕೇಳುತ್ತಾನೆಯೋ, ಅದನ್ನು ಅತ್ತಿಗೆಯು ಕೊಡಬೇಕಾಗುತ್ತದೆ, ಇದು ನಿನಗೆ ಗೊತ್ತೇ ಇದೆ. ಈ ಸಲ ನೀನು ಶತ್ರುಘ್ನ ಮತ್ತು ಭರತರೊಂದಿಗೆ ಸೀತೆಯ ಜೊತೆಗೆ ಹೋಳಿಯನ್ನು ಆಡಿ ಸಾಯಂಕಾಲ ಅವಳಲ್ಲಿ ವರ ಕೇಳಲು ಹೋಗು ಮತ್ತು ಆಗ ನೀನು ನಿನ್ನ ಮನೋಗತವನ್ನು ಪೂರ್ಣ ಮಾಡಿಕೋ.

ಶ್ರೀರಾಮ ಹೇಳಿದ ಉಪಾಯವನ್ನು ಕೇಳಿ ಲಕ್ಷ್ಮಣನು ಕುಣಿದಾಡತೊಡಗಿದನು ಮತ್ತು “ಈಗ ಹೋಳಿ ಬೇಗನೆ ಬರಲು ಏನಾದರೂ ಮಾಡಿರಿ”, ಎಂದು ಚಡಪಡಿಸಿ ಹೇಳತೊಡಗಿದನು.

ಶ್ರೀರಾಮ : ಹೋಳಿಯು ಯಾವಾಗ ಬರುವುದಿದೆ, ಆಗಲೇ ಬರುವುದಲ್ಲ !

ಲಕ್ಷ್ಮಣನು ಹೋಳಿ ಬೇಗ ಬರಬೇಕೆಂದು ಪ್ರಾರ್ಥನೆ ಮಾಡತೊಡಗಿದನು.

೪. ಲಕ್ಷ್ಮಣನು ಬೇಡಿದ ವರ

ನಾಲ್ಕು ದಿನಗಳು ಕಳೆದವು ಮತ್ತು ಹೋಳಿಯ ದಿನ ಬಂತು. ವಿವಿಧ ಬಣ್ಣಗಳ ದರ್ಶನವಾಗತೊಡಗಿತು. ಸೀತಾಮಾತೆಯ ಜೊತೆಗೆ ಲಕ್ಷ್ಮಣ, ಭರತ ಮತ್ತು ಶತ್ರಘ್ನರು ಪಾವಿತ್ರ್ಯವಿರಿಸಿ ಹೋಳಿಯನ್ನು ಆಡಿದರು. ಸಾಯಂಕಾಲವಾಗುತ್ತಲೇ ಮೊತ್ತಮೊದಲು ಭರತನು ಸೀತಾಮಾತೆಯ ಬಳಿಗೆ ಹೋದನು ಮತ್ತು ನಮಸ್ಕರಿಸಿ, “ನನಗೆ ನಾನು ಜನ್ಮಜನ್ಮಾಂತರಗಳಲ್ಲಿ ಪ್ರಭು ಶ್ರೀರಾಮರ ಶ್ರೀಚರಣಗಳಲ್ಲಿ ಇರುವಂತಾಗಲಿ ಮತ್ತು ಅವರ ಭಕ್ತಿಯು ಪ್ರಾಪ್ತವಾಗಲಿ” ಅಂತಹ ವರವನ್ನು ನೀಡಿರಿ, ಎಂದು ಕೇಳಿದನು. ಅದಕ್ಕೆ ಸೀತಾಮಾತೆಯು, ‘ತಥಾಸ್ತು’ ಅಂದರೆ ಹಾಗೇ ಆಗಲಿ ಎಂದಳು.

ನಂತರ ಶತ್ರುಘ್ನನ ಸರದಿ ಬಂದಿತು. ಅವನು, “ಅಣ್ಣನು ಜನ್ಮಜನ್ಮಾಂತರಗಳಲ್ಲಿ ಪ್ರಭು ಶ್ರೀರಾಮರ ಭಕ್ತಿಯನ್ನು ಕೇಳಿದ್ದಾನೆ, ನನಗೆ ಜನ್ಮಜನ್ಮಾಂತರಗಳಲ್ಲಿ ಭರತಣ್ಣನ ಭಕ್ತಿಯ ಅವಕಾಶ ಸಿಗಲಿ. ನಾನು ಅವನ ಸೇವೆಯನ್ನು ಮಾಡುವೆನು. ನಾನು ಶ್ರೀರಾಮರ ಸೇವಕನ ಸೇವಕನಾಗುವೆನು”, ಎಂದು ಹೇಳಿದನು. ಅದಕ್ಕೂ ಸೀತಾಮಾತೆಯು ‘ತಥಾಸ್ತು’ ಎಂದು ಹೇಳಿದಳು. ಅನಂತರ ಸೀತೆಯು ಲಕ್ಷ್ಮಣನಿಗೆ ‘ನೀನು ಕೇಳು’ ಎಂದಳು. ಅದಕ್ಕೆ ಲಕ್ಷ್ಮಣನು, “ಮಾತೋಶ್ರೀ, ಹೋಳಿ ನಿಮಿತ್ತ ನನಗೆ ಬೇರೆ ಏನೂ ಬೇಡ, ಕೇವಲ ಶ್ರೀರಾಮರ ಚರಣಸೇವೆಯ ಅಧಿಕಾರ ಸಿಗಲಿ”, ಎಂದನು.

ಪ್ರಭು ಶ್ರೀರಾಮರ ಚರಣಸೇವೆಯ ಅಧಿಕಾರವನ್ನು ಬೇಡುವ ವಿಷಯವನ್ನು ಕೇಳಿ ಸೀತಾಮಾತೆಯು ಮೂರ್ಛಿತಳಾದಳು; ಏಕೆಂದರೆ ರಘುವಂಶದ ಸೊಸೆಯಾಗಿರುವುದರಿಂದ ಅವಳಿಗೆ ವಚನಭಂಗ ಮಾಡಲು ಸಾಧ್ಯವಿರಲಿಲ್ಲ.

೫. ಲಕ್ಷ್ಮಣ ಮತ್ತು ಸೀತೆ ಇಬ್ಬರಿಗೂ ದಕ್ಕಿದ ಶ್ರೀರಾಮ ಸೇವೆಯ ಭಾಗ್ಯ

ವೈದ್ಯರು ಔಷಧಿ ನೀಡಿದರೂ ಸೀತಾಮಾತೆಯು ಪ್ರಜ್ಞೆ ಬಾರದು. ಆಗ ಲಕ್ಷ್ಮಣನು ಓಡಿ ಪ್ರಭು ಶ್ರೀರಾಮರ ಬಳಿ ಹೋದನು. ಶ್ರೀರಾಮರು ಲಕ್ಷ್ಮಣನಿಗೆ ಒಂದು ಯುಕ್ತಿಯನ್ನು ಹೇಳಿದರು. ಅದಕ್ಕನುಸಾರ ಲಕ್ಷ್ಮಣನು ಸೀತಾಮಾತೆಯ ಬಳಿಗೆ ಹೋಗಿ ನಿಧಾನವಾಗಿ, “ಮಾತೋಶ್ರೀ, ಚರಣಸೇವೆಯ ಅಧಿಕಾರವನ್ನು ನಾವಿಬ್ಬರೂ ಹಂಚಿಕೊಳ್ಳೋಣ. ಬಲಚರಣ ನನ್ನದು ಮತ್ತು ಎಡಚರಣ ನಿಮ್ಮದು ! ನೀವು ಚರಣಸೇವೆಯನ್ನು ಮಾಡಲು ಹೋದಾಗ, ನೀವೇ ಸ್ವತಃ ನನ್ನನ್ನು ಕರೆಯಬೇಕು”, ಎಂದು ಹೇಳಿದನು. ಇದನ್ನು ಕೇಳಿ ಸೀತಾಮಾತೆಯು ಎದ್ದು ಕುಳಿತುಕೊಂಡಳು. ಪ್ರಭು ಶ್ರೀರಾಮ ಹೇಳಿದ ಉಪಾಯದಿಂದ ಸೀತಾಮಾತೆ ಮತ್ತು ಲಕ್ಷ್ಮಣ ಇವರಿಬ್ಬರಿಗೂ ಆನಂದವಾಯಿತು.

(ಆಧಾರ : ಮಾಸಿಕ ‘ಲೋಕ ಕಲ್ಯಾಣ ಸೇತು’)

1 thought on “ಹೋಳಿಯ ನಿಮಿತ್ತ ಪ್ರಭು ಶ್ರೀರಾಮನು ಲಕ್ಷ್ಮಣನಿಗೆ ನೀಡಿದ ಒಂದು ಅನುಪಮ ಉಡುಗೊರೆ !”

Leave a Comment