ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 2)

ಪರಿವಿಡಿ

1. ಸುಖ-ದುಃಖ
1 ಅ. ಸುಖದುಃಖದ ಸ್ವರೂಪ
1 ಆ. ಸುಖ-ದುಃಖದ ಕಾರಣ
1 ಇ. ದುಃಖ ನಿವಾರಣೆಗೆ ನಿಜವಾದ ಪರಿಹಾರೋಪಾಯ
1 ಈ. ಸಕಾಮ ಮತ್ತು ನಿಷ್ಕಾಮ ಸಾಧನೆ
2. ಕರ್ಮಫಲ ಸಿದ್ಧಾಂತ
2 ಅ. ಕರ್ಮದ ಫಲವು ಉದ್ದೇಶದ ಮೇಲೆ ಅವಲಂಬಿಸಿರುತ್ತದೆ
2 ಆ. ಕಲಿಯುಗದಲ್ಲಿ ಪ್ರಾರಬ್ಧದ ಪ್ರಮಾಣವು ಶೇಕಡಾ 65 ರಷ್ಟು ಆದರೆ ಕ್ರಿಯಮಾಣ ಕರ್ಮದ ಪ್ರಮಾಣವು ಶೇಕಡ 35ರಷ್ಟು
3. ಸಾಧನೆಯ ಮಹತ್ವ
3 ಅ. ಸಾಧನೆಯಿಂದ ಪ್ರಾರಬ್ಧವು ಸುಸಹ್ಯವಾಗುವುದು
3 ಆ. ಜನನ-ಮರಣದ ಚಕ್ರದಿಂದ ಮುಕ್ತಿ ಹೊಂದಲು ಸಾಧನೆಯು ಅವಶ್ಯಕ
3 ಇ. ಮನುಷ್ಯನು ಪುನಃ ಪುನಃ ಜನ್ಮಕ್ಕೆ ಬರುವುದರ ಕಾರಣಗಳು
4. ಕುಲದೇವಿಯ ನಾಮಜಪದ ಮಹತ್ವ
4 ಅ. ಕುಲದೇವಿಯ ನಾಮಜಪದಿಂದ ಆಧ್ಯಾತ್ಮಿಕ ಉನ್ನತಿಯು ಪ್ರಾರಂಭವಾಗುತ್ತದೆ
4 ಆ. ಕುಲದೇವಿಯ ನಾಮಸ್ಮರಣೆಯು ಮಲ್ಟಿವಿಟಮಿನ್ ನಂತೆ ಕಾರ್ಯ ಮಾಡುತ್ತದೆ
4 ಇ. ಕುಲದೇವತೆಯ ನಾಮಜಪವನ್ನು ಹೇಗೆ ಮಾಡಬೇಕು
4 ಈ. ಸಾಧನೆಯಲ್ಲಿ ಅಖಂಡತ್ವ ವು ನಾಮಸ್ಮರಣೆಯಿಂದ ಮಾತ್ರ ಸಾಧ್ಯ
5. ದತ್ತನ ನಾಮಜಪದ ವಿಮರ್ಶೆ
6. ಸಂದೇಹ ನಿವಾರಣೆ

1. ಸುಖ-ದುಃಖ

1 ಅ. ಸುಖ-ದುಃಖದ ಸ್ವರೂಪ
ಸ್ಲೈಡ್ : ಸರ್ವೇಸಾಧಾರಣವಾಗಿ ಮಾನವನ ಜೀವನದಲ್ಲಿ ಸುಖದ ಪ್ರಮಾಣವು ಸರಾಸರಿ 25% ಆದರೆ ದುಃಖವು 75%
ನಮ್ಮಲ್ಲಿ ಪ್ರತಿಯೊಬ್ಬರೂ ಸುಖದ ಕ್ಷಣಗಳನ್ನೂ, ದುಃಖವನ್ನೂ ಅನುಭವಿಸಿದ್ದೇವೆ ಆದರೆ ಸುಖ ಪ್ರಾಪ್ತಿಗಾಗಿ ಚಡಪಡಿಸುತ್ತಿದ್ದರರೂ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಪಾಲಿಗೆ ದುಃಖವೇ ಬರುತ್ತದೆ ಎಂಬುದನ್ನು ಅನುಭವಿಸಿರುತ್ತೇವೆ. ಪ್ರಸ್ತುತ ಕಾಲದಲ್ಲಿ ಸರ್ವೇಸಾಧಾರಣವಾಗಿ ಮಾನವನ ಜೀವನದಲ್ಲಿ ಸುಖವು ಸರಾಸರಿ ಶೇಕಡಾ 25ರಷ್ಟು ಮತ್ತೆ ದುಃಖವು ಶೇಕಡ 75ರಷ್ಟು ಇರುತ್ತದೆ. ಹೆಚ್ಚಿನ ಮಂದಿಗೆ ಆನಂದವನ್ನು ಹೇಗೆ ಪಡೆಯುವುದು ಎಂಬುದು ತಿಳಿದಿರುವುದಿಲ್ಲ; ಆದ್ದರಿಂದ ಪ್ರತಿಯೊಬ್ಬನು ಪಂಚಜ್ಞಾನೇAದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಮೂಲಕ ಸ್ವಲ್ಪ ಸಮಯವಾದರೂ ಸುಖವನ್ನು ಪಡೆಯಲು ಹಾಗೂ ದುಃಖದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅದು ಹೇಗೆ ? ಹೇಗೆಂದರೆ ಇಷ್ಟವಾದುದನ್ನು ತಿನ್ನುವುದು, ಇಷ್ಟವಾದ ಜಾಗಗಳಿಗೆ ತಿರುಗಾಡಲು ಹೋಗುವುದು, ಇಷ್ಟವಾದ ಹವ್ಯಾಸವನ್ನು ಇಟ್ಟುಕೊಳ್ಳುವುದು. ಈ ವಿಧದ ಕೃತಿಗಳಿಂದ ಸುಖವನ್ನು ಪಡೆಯಲು ಪ್ರಯತ್ನಿಸುತ್ತಾನೆ, ಹಾಗೆಯೇ ಶಾರೀರಿಕ ವ್ಯಾಧಿಗಳಿಗೆ ಔಷಧಿ ತೆಗೆದುಕೊಳ್ಳುವುದು, ದೂರದರ್ಶನದ ಉಪಕರಣವು ಕೆಟ್ಟುಹೋದರೆ ಅದನ್ನು ಸರಿಪಡಿಸಿಕೊಳ್ಳುವುದು ಇಂತಹ ಕೃತಿಗಳನ್ನು ಮಾಡಿ ದುಃಖವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಇವುಗಳಿಂದ ಶಾಶ್ವತವಾದ ಸುಖವು ದೊರಕುವುದಿಲ್ಲ. ಇದನ್ನು ಸಂತ ತುಕಾರಾಮ ಮಹಾರಾಜರು ಮಾರ್ಮಿಕವಾಗಿ ಹೇಗೆ ವರ್ಣಿಸಿದ್ದಾರೆ. ‘ಸುಖ ಪಾಹತಾ ಜವಾಪಾಡೆ ದುಃಖ ಪರ್ವತಾಯೆವಢೆ’. ಅರ್ಥ : ಸುಖ ನೋಡಿದರೆ ಸಾಸಿವೆಯಷ್ಟು ದುಃಖವು ಪರ್ವತದಷ್ಟು.
ಸ್ವಾಮಿ ವಿವೇಕಾನಂದರು ಕೂಡ ಸುಖ ಮತ್ತು ದುಃಖ ಇವು ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ್ದಾರೆ. ಎಲ್ಲರಿಗೂ ಸುಖ ಮಾತ್ರ ಬೇಕಿರುತ್ತದೆ ಆದರೆ ಯಾವುದೇ ಸುಖವು ಬರುವಾಗ ದುಃಖವೆಂಬ ಮುಳ್ಳಿನ ಕಿರೀಟವನ್ನು ಧರಿಸಿಯೇ ಬರುತ್ತದೆ.

1 ಆ. ಸುಖ-ದುಃಖದ ಕಾರಣಗಳು
* ಶಾರೀರಿಕ : ಕಾಯಿಲೆ ಬರುವುದು
* ಮಾನಸಿಕ : ಯಾರಾದರೂ ವಂಚಿಸುವುದು *
* ಆಧ್ಯಾತ್ಮಿಕ : ಸತತವಾಗಿ ಅಪಯಶಸ್ಸು ಪಾಲಿಗೆ ಬರುವುದು
ನಾವು ಯಾವ ಆನಂದಸ್ವರೂಪ ಬ್ರಹ್ಮದಿಂದ ನಿರ್ಮಾಣವಾಗಿದ್ದೆವೆಯೋ ಅದರೆಡೆಗೆ ಹೋಗುವ ಸೆಳೆತವು ಪ್ರತಿಯೊಬ್ಬನಿಗೂ ಹೆಚ್ಚು ಕಮ್ಮಿ ಪ್ರಮಾಣದಲ್ಲಿ ಇದ್ದೇಇರುತ್ತದೆ. ಅದಕ್ಕಾಗಿ ಈಗ ನಾವು ಸುಖ-ದುಃಖದ ಕಾರಣಗಳು ಯಾವುವು ಮತ್ತು ದುಃಖ ನಿವಾರಣೆಯ ಉಪಾಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಸುಖ-ದುಃಖದ ಕಾರಣಗಳು ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕವಿರುತ್ತವೆ. ಶಾರೀರಿಕ ಸ್ತರದ ದುಃಖವೆಂದರೆ ಶರೀರಕ್ಕೆ ಯಾವುದಾದರೂ ಕಾಯಿಲೆ ಬರುವುದು. ಯಾರಾದರೂ ನಮ್ಮನ್ನು ವಂಚಿಸಿದಾಗ ಮತ್ತು ಯಾರಾದರೂ ನಮ್ಮೊಡನೆ ಅಯೋಗ್ಯವಾಗಿ ಮಾತನಾಡಿದಾಗ ಮನಸ್ಸಿಗೆ ಬೇಸರ ಉಂಟಾಗುತ್ತದೆ ಇದು ಮಾನಸಿಕ ಸ್ತರದ ದುಃಖ.ಬಹಳಷ್ಟು ಪ್ರಯತ್ನಿಸಿದರೂ ಯಶಸ್ಸು ಸಿಗದಿರುವುದು, ವಿವಾಹವಾಗದಿರುವುದು ಇಂತಹ ಘಟನೆಗಳಿಂದ ಆಗುವ ದುಃಖದ ಕಾರಣವು ಹೆಚ್ಚಿನಂಶ ಆಧ್ಯಾತ್ಮಿಕವಾಗಿರುತ್ತದೆ.

1 ಇ. ದುಃಖ ನಿವಾರಣೆಗೆ ನಿಜವಾದ ಪರಿಹಾರ
ದುಃಖದ ಕಾರಣವು ಆಧ್ಯಾತ್ಮಿಕವಾಗಿದ್ದರೆ ಅದರ ನಿವಾರಣೆಗಾಗಿ ಆಧ್ಯಾತ್ಮಿಕ ಮಟ್ಟದ ಉಪಾಯಗಳನ್ನೇ ಮಾಡಬೇಕಾಗುತ್ತದೆ. ದುಃಖದ ಕಾರಣವು ಆಧ್ಯಾತ್ಮಿಕವಾದುದಾಗಿದೆ ಎಂಬುದನ್ನು ಬುದ್ಧಿಯಿಂದ ಹೇಗೆ ಗುರುತಿಸುವುದು ? ಕೆಲವು ಲಕ್ಷಣಗಳಿಂದ ನಾವು ಇದನ್ನು ತಿಳಿದುಕೊಳ್ಳಬಹುದು. ಯಾವುದಾದರೊಂದು ಕುಟುಂಬದಲ್ಲಿ ಹಲವರಿಗೆ ತೊಂದರೆಯಿರುವುದು, ಉದಾಹರಣೆಗೆ ಒಂದು ಕುಟುಂಬದಲ್ಲಿ ಒಬ್ಬ ಮಗನು ಮನೋರೋಗಿಯಾಗಿದ್ದನು ಎರಡನೆಯವನ ವಿವಾಹವಾದ ಹತ್ತು ದಿನಗಳೊಳಗೆ ಪತಿ-ಪತ್ನಿ ಬೇರೆಯಾದರು, ಮೂರನೆಯವನು ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟುಬಿಟ್ಟನು, ಅಲ್ಲದೆ ಕಾಣಲು ಸುಂದರವಾಗಿದ್ದು, ಸ್ನಾತಕೋತ್ತರ ಶಿಕ್ಷಣವನ್ನು ಪಡೆದಿದ್ದು ಒಳ್ಳೆಯ ಸಂಬಳವನ್ನು ಪಡೆಯುತ್ತಿದ್ದ ಮಗಳ ವಿವಾಹವು ಹೊಂದಿ ಬರುತ್ತಿರಲಿಲ್ಲ. ಇವೆಲ್ಲ ವಿಷಯಗಳ ಒತ್ತಡವು ತಾಯಿ-ತಂದೆಯ ಮನಸ್ಸಿನ ಮೇಲೆ ಉಂಟಾಗಿತ್ತು. ಸಂಕ್ಷಿಪ್ತವಾಗಿ, ಮನೆಯಲ್ಲಿ ಪ್ರತಿಯೊಬ್ಬನೂ ದುಃಖಿತನಾಗಿದನು. ಈ ವಿಧದ ಸಂಗತಿಗಳಿದ್ದರೂ ಅಥವಾ ಬಹಳಷ್ಟು ಪ್ರಯತ್ನಪಟ್ಟರೂ ಅಪೇಕ್ಷೆಗೆ ತಕ್ಕಂತೆ ಯಶಸ್ಸು ಸಿಗದಿದ್ದರೆ ಆ ದುಃಖಗಳಿಗೆ ಆಧ್ಯಾತ್ಮಿಕ ಕಾರಣವಿದೆ ಎಂದು ತಿಳಿಯಬಹುದು. ಸಂಕ್ಷಿಪ್ತವಾಗಿ ಯಾವ ದುಃಖದ ಕಾರಣಗಳನ್ನು ಬುದ್ಧಿಯ ಮೂಲಕ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲವೋ ಅಂತಹ ದುಃಖಗಳು ಅಧ್ಯಾತ್ಮಿಕಸ್ವರೂಪದ್ದಾಗಿರುತ್ತದೆ. ಈ ಆಧ್ಯಾತ್ಮಿಕ ದುಃಖದ ನಿವಾರಣೆಗಾಗಿ ಸಾಧನೆ ಮಾಡುವುದೇ ಅವಶ್ಯವಿರುತ್ತದೆ

1 ಈ. ಸಕಾಮ ಮತ್ತು ನಿಷ್ಕಾಮ ಸಾಧನೆ
ಮಾನವ ಜನ್ಮದ ಸಾರ್ಥಕತೆಯು ಮೋಕ್ಷಪ್ರಾಪ್ತಿಯಲ್ಲಿಯೇ ಇದೆ ಎಂದು ಧರ್ಮವು ಹೇಳುತ್ತದೆ. ಮೋಕ್ಷಪ್ರಾಪ್ತಿಗೆಂದು ಪ್ರತಿದಿನ ಕನಿಷ್ಠ ಎರಡು-ಮೂರು ಗಂಟೆಗಳ ಕಾಲ ಶರೀರ, ಮನಸ್ಸು ಮತ್ತು ಅಥವಾ ಬುದ್ಧಿಯಿಂದ ಯಾವ ಪ್ರಯತ್ನಗಳನ್ನು ಮಾಡಲಾಗುತ್ತದೆಯೋ ಅದನ್ನು ಸಾಧನೆ ಎನ್ನುತ್ತಾರೆ. ಸಾಧನೆಯಲ್ಲಿಯೂ ಎರಡು ವಿಧಗಳಿವೆ. ಒಂದು ಸಕಾಮ ಸಾಧನೆ ಮತ್ತೆ ಎರಡನೆಯದು ನಿಷ್ಕಾಮ ಸಾಧನೆ! ಸಕಾಮ ಸಾಧನೆಯೆಂದರೆ ವೈಯಕ್ತಿಕ ಅಪೇಕ್ಷೆಗಳ ಪೂರ್ತಿಗಾಗಿ ಉದಾಹರಣೆಗೆ ಕುಟುಂಬದ ಕಲ್ಯಾಣವಾಗಬೇಕೆಂದು ಅಥವಾ ವಿವಾಹವಾಗುವುದರಲ್ಲಿ ಬರುತ್ತಿರುವ ಅಡಚಣೆಗಳು ದೂರವಾಗಬೇಕೆಂದು, ಇಂತಹ ಉದ್ದೇಶಪೂರ್ತಿಗಳಿಗಾಗಿ ಮಾಡಲಾಗುವ ಸಾಧನೆ. ನಿಷ್ಕಾಮ ಸಾಧನೆಯೆಂದರೆ ಯಾವುದೇ ಅಪೇಕ್ಷೆಯನ್ನು ಇಟ್ಟುಕೊಳ್ಳದೆ ಭಗವಂತನ ಭಕ್ತಿಗಾಗಿ ಮಾಡಲಾಗುವ ಸಾಧನೆ!

ಸಕಾಮ ಸಾಧನೆಯನ್ನು ಮಾಡಿದರೆ ಕಾಮನೆ ಎಂದರೆ ಇಚ್ಛೆಯ ಪೂರ್ತಿಯಾಗುತ್ತದೆ ಆದರೆ ನಿಷ್ಕಾಮ ಸಾಧನೆ ಮಾಡಿದರೆ ಆಧ್ಯಾತ್ಮಿಕ ಉನ್ನತಿಯಾಗಿ ಕಾಮನೆಗಳೂ ಪೂರ್ಣವಾಗುತ್ತವೆ; ಏಕೆಂದರೆ ನನ್ನ ನಿಷ್ಕಾಮ ಭಕ್ತನ ಕಾಮನೆಗಳನ್ನೆಲ್ಲವನ್ನೂ ನಾನು ಪೂರ್ಣಗೊಳಿಸುತ್ತೇನೆ ಎಂಬುದು ಭಗವಂತನ ವಚನವಿದೆ. ಸಕಾಮ ಸಾಧನೆ ಮಾಡುವವನಿಗೆ ಸಕಾಮದ್ದು ಎಂದರೆ ವ್ಯವಹಾರದಲ್ಲಿನ ಫಲವು ಸಿಗಬಹುದು; ಆದರೆ ಈಶ್ವರಪ್ರಾಪ್ತಿಯಾಗುವುದಿಲ್ಲ. ಮಾನವನ ಜನ್ಮದ ಧ್ಯೇಯವು ಮೋಕ್ಷಪ್ರಾಪ್ತಿಯಾಗಿದೆ. ಸಾಧನೆಯು ನಿಷ್ಕಾಮವಾಗಿದ್ದರೆ ಮಾತ್ರ ಮೋಕ್ಷಪ್ರಾಪ್ತಿಯ ಧ್ಯೇಯವು ಸಾಧ್ಯವಾಗುತ್ತದೆ.

2. ಕರ್ಮಫಲ ಸಿದ್ಧಾಂತ

ಪ್ರತಿಯೊಂದು ಕರ್ಮದ ಫಲವನ್ನೂ ಭೋಗಿಸಲೇಬೇಕು
* ಶುಭ ಕರ್ಮಗಳಿಂದ ಪುಣ್ಯವು ಮತ್ತೆ ಅಶುಭ ಕರ್ಮಗಳಿಂದ ಪಾಪವು ಪಾಲಿಗೆ ಬರುತ್ತದೆ.
ಹಿಂದೂ ಧರ್ಮದಲ್ಲಿ 2 ಸಿದ್ಧಾಂತಗಳನ್ನು ಹೇಳಲಾಗಿದೆ. ಮೊದಲನೆಯದು ಕರ್ಮಫಲ ಸಿದ್ಧಾಂತ ಮತ್ತೆ ಎರಡನೆಯದು ಪುನರ್ಜನ್ಮ ಸಿದ್ಧಾಂತ ! ಕರ್ಮಫಲ ಸಿದ್ಧಾಂತವು ಹೇಳುವುದೇನೆಂದರೆ ಮಾಡಿದ ಪ್ರತಿಯೊಂದು ಕರ್ಮದ ಫಲವನ್ನೂ ವ್ಯಕ್ತಿಯು ಭೋಗಿಸಬೇಕಾಗುತ್ತದೆ. ಶುಭ ಕರ್ಮವನ್ನು ಮಾಡಿದರೆ ಪುಣ್ಯವು ಸಿಗುತ್ತದೆ ಮತ್ತು ಅಶುಭ ಕರ್ಮವನ್ನು ಮಾಡಿದರೆ ಪಾಪವನ್ನು ಭೋಗಿಸಬೇಕಾಗುತ್ತದೆ.

ಉದಾಹರಣೆಗೆ ತಂದೆ-ತಾಯಿಯರ ಕಾಳಜಿ ತೆಗೆದುಕೊಳ್ಳುವುದು, ಮಂದಿರದಲ್ಲಿ ದಾನ ನೀಡುವುದು ಮುಂತಾದ ಕರ್ಮಗಳಿಂದ ಪುಣ್ಯವು ಸಿಗುತ್ತದೆ ಮತ್ತು ಇತರರಿಗೆ ಸುಳ್ಳು ಹೇಳುವುದು, ಇತರರ ಮನಸ್ಸಿಗೆ ನೋವಾಗುವಂತೆ ಮಾತನಾಡುವುದು, ಕಳ್ಳತನ ಮಾಡುವುದು ಮುಂತಾದ ಕರ್ಮಗಳಿಂದ ಪಾಪವು ತಗಲುತ್ತದೆ. ಪುಣ್ಯಪ್ರಾಪ್ತಿಯ ಫಲಸ್ವರೂಪವಾಗಿ ಸುಖವು ಸಿಗುತ್ತದೆಯಾದರೆ ಪಾಪದಿಂದ ದುಃಖವನ್ನು ಭೋಗಿಸಬೇಕಾಗುತ್ತದೆ.

ಉದಾಹರಣೆಗೆ ಒಬ್ಬ ವ್ಯಕ್ತಿಯು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಳ್ಳದಿದ್ದರೆ ಅವನಿಗೆ ವ್ಯಾವಹಾರಿಕ ಜಗತ್ತಿನಲ್ಲಿ ಶಿಕ್ಷೆ ಸಿಗದಿರಬಹುದು. ಆ ಕಳ್ಳನು ಒಂದು ವೇಳೆ ಲೌಕಿಕ ಜಗತ್ತಿನಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಈಶ್ವರನ ದರ್ಬಾರಿನಲ್ಲಿ ಹಾಗಾಗಲು ಸಾಧ್ಯವಿಲ್ಲ. ಭಗವಂತನ ಬಳಿ ವ್ಯಕ್ತಿಯ ಪ್ರತಿಯೊಂದು ಒಳ್ಳೆಯ ಹಾಗೂ ಕೆಟ್ಟ ಕಾರ್ಯದ ನೋಂದಣಿ ಆಗಿಯೇ ಆಗುತ್ತದೆ. ಭಗವಂತನು ಪ್ರತಿಯೊಬ್ಬ ವ್ಯಕ್ತಿಯಿಂದ ಕಾಯಾ-ವಾಚಾ-ಮನಸಾ ಆಗುವ ಪ್ರತಿಯೊಂದು ಒಳ್ಳೆಯ ಹಾಗೂ ಕೆಟ್ಟ ಕೃತಿಗಳ ಲೆಕ್ಕವನ್ನು ಇಡುತ್ತಾನೆ.

2 ಅ. ಕರ್ಮದ ಫಲವು ಉದ್ದೇಶದ ಮೇಲೆಯೂ ಅವಲಂಬಿತವಾಗಿದೆ
ಕರ್ಮದ ಫಲವು ಅದರ ಹಿಂದಿನ ಉದ್ದೇಶವನ್ನೂ ಅವಲಂಬಿಸಿರುತ್ತದೆ. ಕರ್ಮದ ಫಲವು ಕರ್ಮ ಮಾಡುವವನ ಉದ್ದೇಶದ ಮೇಲೆ ಅವಲಂಬಿತವಾಗಿರುತ್ತದೆ. ಓರ್ವ ಗೂಂಡಾ ಓರ್ವ ವ್ಯಕ್ತಿಯ ಕಾಲು ಕತ್ತರಿಸುವುದು ಮತ್ತು ಓರ್ವ ವೈದ್ಯನು ಶಸ್ತ್ರಚಿಕಿತ್ಸೆ ಮಾಡಲು ವ್ಯಕ್ತಿಯ ಕಾಲು ಕತ್ತರಿಸುವುದು ಈ ಎರಡರಲ್ಲಿ ಕೃತಿಯು ಒಂದೇ ರೀತಿಯಲ್ಲಿದ್ದರೂ ಉದ್ದೇಶಗಳು ಭಿನ್ನವಾಗಿವೆ. ಗೂಂಡಾನಲ್ಲಿ ವ್ಯಕ್ತಿಗೆ ತೊಂದರೆ ಕೊಡುವ ಉದ್ದೇಶವಿರುತ್ತದೆ ಆದರೆ ವೈದ್ಯನಿಗೆ ಆ ವ್ಯಕ್ತಿಯನ್ನು ರೋಗದಿಂದ ಗುಣಪಡಿಸಲಿಕ್ಕಿರುತ್ತದೆ. ಈ ರೀತಿಯಲ್ಲಿ ಕರ್ಮಫಲವು ಅವರವರ ಉದ್ದೇಶದ ಮೇಲೆ ಅವಲಂಬಿಸಿರುತ್ತದೆ.

2 ಆ. ಕಲಿಯುಗದಲ್ಲಿ ಪ್ರಾರಬ್ಧದ ಪ್ರಮಾಣವು ಶೇ. 65ರಷ್ಟು ಇದ್ದರೆ ಕ್ರಿಯಾಮಾಣವು ಶೇ. 35ರಷ್ಟು ಇರುತ್ತದೆ :
ಹಿಂದೂ ಧರ್ಮದಲ್ಲಿ ಪುನರ್ಜನ್ಮಕ್ಕೆ ಮಾನ್ಯತೆಯಿದೆ. ವ್ಯಕ್ತಿಯಿಂದ ಆದ ಪುಣ್ಯಕರ್ಮ ಮತ್ತು ಪಾಪಕರ್ಮಗಳ ಫಲವನ್ನು ಆ ವ್ಯಕ್ತಿಯು ಇದೇ ಜನ್ಮದಲ್ಲಿ ಭೋಗಿಸಬೇಕಾಗುತ್ತದೆ ಎಂದೇನಿಲ್ಲ, ಕೆಲವೊಮ್ಮೆ ಅದನ್ನು ಮುಂದಿನ ಜನ್ಮದಲ್ಲಿಯೂ ಭೋಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಹಿಂದಿನ ಜನ್ಮಗಳಲ್ಲಾದ ಕರ್ಮಗಳ ಫಲವನ್ನು ನಾವು ಈ ಜನ್ಮದಲ್ಲಿ ಅನುಭವಿಸುತ್ತಿರುತ್ತೇವೆ. ಹಿಂದಿನ ಜನ್ಮಗಳಲ್ಲಾದ ಕರ್ಮಗಳ ಫಲಕ್ಕೆ `ಪ್ರಾರಬ್ಧ’ ಎಂದು ಹೇಳುತ್ತಾರೆ. ಇದನ್ನೇ ನಾವು ವ್ಯಾವಹಾರಿಕ ಭಾಷೆಯಲ್ಲಿ `ಹಣೆಬರಹ’ ಎಂದು ಹೇಳುತ್ತೇವೆ. ಅಧ್ಯಾತ್ಮದ ಅನುಸಾರ ಕಲಿಯುಗದಲ್ಲಿ ಮನುಷ್ಯನ ಜೀವನದಲ್ಲಿ ನಡೆಯುವ ಶೇ. 65ರಷ್ಟು ಘಟನೆಗಳು ಪ್ರಾರಬ್ಧದ ಅಧೀನವಾಗಿರುತ್ತವೆ ಮತ್ತು ಶೇ. 35ರಷ್ಟು ಕ್ರಿಯಾಮಾಣ ಕರ್ಮ ಅಂದರೆ ಪ್ರಯತ್ನಗಳು ವ್ಯಕ್ತಿಯ ಕೈಯಲ್ಲಿರುತ್ತವೆ. ಇದರ ಅರ್ಥ ಆಯುಷ್ಯದಲ್ಲಿ ಶೇ. 65ರಷ್ಟು ಘಟನೆಗಳು ಹಿಂದಿನ ಜನ್ಮದಲ್ಲಿನ ಕರ್ಮಗಳ ಫಲವೆಂದು ಭೋಗಿಸಲು ನಮ್ಮ ಪಾಲಿಗೆ ಬಂದಿರುತ್ತವೆ.

ಉದಾಹರಣೆಗೆ ಇಬ್ಬರು ವಿದ್ಯಾರ್ಥಿಗಳು ಒಂದೇ ವರ್ಷದಲ್ಲಿ ಸಮಾನ ಅಂಕಗಳನ್ನು ಪಡೆದು ಪದವಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅವರಲ್ಲಿನ ಒಬ್ಬನಿಗೆ ಒಳ್ಳೆಯ ಉದ್ಯೋಗ ದೊರೆಯುತ್ತದೆ, ಇನ್ನೊಬ್ಬನಿಗೆ ಬಹಳ ಕಷ್ಟ ಪಡಬೇಕಾಗುತ್ತದೆ. 2 ಅವಳಿ ಮಕ್ಕಳಲ್ಲಿ ಒಂದು ಮಗು ಸದೃಢವಾಗಿರುತ್ತದೆ, ಇನ್ನೊಂದು ಶಾರೀರಿಕವಾಗಿ ದುರ್ಬಲವಾಗಿರುತ್ತದೆ. ಇಂತಹ ಅನೇಕ ಉದಾಹರಣೆಗಳನ್ನು ನಾವು ನಮ್ಮ ಸುತ್ತಮುತ್ತಲೂ ನೋಡಿರಬಹುದು ಅಥವಾ ಅನುಭವಿಸಿರಬಹುದು. `ಹೀಗೆ ಏಕಾಗುತ್ತದೆ ?’ ಎಂಬುದಕ್ಕೆ ಆಧುನಿಕ ವಿಜ್ಞಾನಿಗಳು ಉತ್ತರ ನೀಡಲಾರರು. ವ್ಯಕ್ತಿಯಲ್ಲಿ ಸುಖಪ್ರಾಪ್ತಿಯ ತಳಮಳವಿದ್ದರೂ ವ್ಯಕ್ತಿಯ ಪಾಲಿಗೆ ದುಃಖವೇ ಏಕೆ ಬರುತ್ತದೆ ? ಎಂಬುದನ್ನು ವಿಜ್ಞಾನವು ಕಂಡುಹಿಡಿಯಲಾರದು. ಇದರ ಉತ್ತರವು ಆಧ್ಯಾತ್ಮದಲ್ಲಿ ದೊರೆಯುತ್ತದೆ. ವ್ಯಕ್ತಿಯ ಭೋಗಿಸಬೇಕಾದ ದುಃಖಗಳಿಗೆ ಪೂರ್ವಜನ್ಮದ ಪಾಪಕರ್ಮಗಳೂ ಕಾರಣವಾಗಿರುವ ಸಾಧ್ಯತೆಯಿರುತ್ತದೆ.

3. ಸಾಧನೆಯ ಮಹತ್ವ

3 ಅ. ಸಾಧನೆಯಿಂದ ಪ್ರಾರಬ್ಧವು ಸುಸಹ್ಯವಾಗುವುದು :
ಈಗ ಯಾರಿಗಾದರೂ ಆಯುಷ್ಯದಲ್ಲಿ ಘಟಿಸುವ ಘಟನೆಗಳ ಮೇಲೆ ಪ್ರಾರಬ್ಧದದ್ದೇ ಪ್ರಭಾವವೇ ಇರುವುದೆಂದಾದರೆ ಸಾಧನೆಯನ್ನು ಮಾಡುವುದರಿಂದ ಏನು ಲಾಭ ? ಎಂದು ಅನಿಸಬಹುದು. ಇದರ ಉತ್ತರವೆಂದರೆ ವ್ಯಕ್ತಿಗೆ ಪ್ರಾರಬ್ಧದ ಭೋಗವನ್ನು ಭೋಗಿಸಿ ಮುಗಿಸಬೇಕಾಗುತ್ತದೆ, ಆದರೆ ಸಾಧನೆಯನ್ನು ಮಾಡಿದರೆ ಈ ಭೋಗ ಭೋಗಿಸಲು ಸುಲಭವಾಗುತ್ತದೆ. ಹೇಗೆ ಶಸ್ತ್ರಕ್ರಿಯೆಯನ್ನು ಮಾಡುವ ಮೊದಲು ಅರಿವಳಿಕೆಯನ್ನು ನೀಡಲಾಗಿರುತ್ತದೆ ಹಾಗಾಗಿ ಆ ಸಮಯದಲ್ಲಿ ಶಸ್ತ್ರಕ್ರಿಯೆಯ ನೋವಿನ ಅರಿವಾಗುವುದಿಲ್ಲ, ಹಾಗೆಯೇ ಸಾಧನೆಯಿಂದ ಪ್ರಾರಬ್ಧಭೋಗವನ್ನು ಭೋಗಿಸುವ ಬಲವು ದೊರೆಯುತ್ತದೆ. ಸಾಧನೆಯ ಬಲದಿಂದ ದುಃಖವು ದುಃಖವೆಂದು ಅನಿಸುವುದಿಲ್ಲ. ಬದಲಾಗಿ ದುಃಖದ ರಾಶಿಯಿದ್ದರೂ ಭಗವಂತನು ಭಕ್ತನ ರಕ್ಷಣೆ ಮಾಡುತ್ತಾನೆ, ಎಂಬುದರ ಅನುಭೂತಿಗಳೂ ಬರಬಹುದು. ಇದರ ಒಂದು ಸಮರ್ಪಕ ಉದಾಹರಣೆ ಅಂದರೆ ಸಂತ ಮೀರಾಬಾಯಿ ! ಮೀರಾಬಾಯಿಯು ರಾಜಮನೆತನದವರಾಗಿದ್ದರು. ಬಾಲ್ಯದಿಂದಲೇ ಅವರು ಕೃಷ್ಣಭಕ್ತರಾಗಿದ್ದರು. ಅವರ ಕೃಷ್ಣಭಕ್ತಿಯು ಅವರ ಪತಿಯ ಮನೆಯವರಿಗೆ ಇಷ್ಟವಿರಲಿಲ್ಲ. ಆದುದರಿಂದ ಅವರು ಮೀರಾಬಾಯಿಯನ್ನು ಕೊಲ್ಲಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಅವರು ಮೀರಾಬಾಯಿಗೆ ವಿಷ ಕುಡಿಸಿದರು, ಆದರೆ ಮೀರಾಬಾಯಿಯ ಅತ್ಯುಚ್ಛ ಭಕ್ತಿಯಿಂದಾಗಿ ಅವರ ಮೇಲೆ ವಿಷದಿಂದ ಯಾವುದೇ ಪರಿಣಾಮವಾಗಲಿಲ್ಲ. ಸಾಧನೆಯ ಬಲ ಮತ್ತು ಭಕ್ತಿಯಿದ್ದರೆ ಭಗವಂತನು ಪ್ರಾರಬ್ಧವನ್ನು ಸುಲಭಗೊಳಿಸುತ್ತಾನೆ ಹಾಗೂ ಪ್ರಾರಬ್ಧದ ತೀವ್ರತೆಯನ್ನು ನಷ್ಟಗೊಳಿಸುತ್ತಾನೆ ಎಂಬುದರ ಉದಾಹರಣೆ ಇದಾಗಿದೆ. ಈ ಉದಾಹರಣೆಯೊಂದಿಗೆ ಮನುಷ್ಯನ ಬಳಿ ಇರುವ ಶೇ. 35 ರಷ್ಟು ಕ್ರಿಯಾಮಾಣವು ಅವನ ಪ್ರಾರಬ್ಧವನ್ನು ತಡೆಯಬಹುದು, ಎಂಬುದನ್ನು ಯಾವಾಗಲೂ ಗಮನದಲ್ಲಿಡಬೇಕು.

3 ಆ. ಜನ್ಮ-ಮರಣದ ಚಕ್ರದಿಂದ ಮುಕ್ತಿ ಪಡೆಯಲು ಸಾಧನೆಯು ಆವಶ್ಯಕ
ಹೇಗೆ ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಣವನ್ನು ಪಡೆಯಬೇಕಾಗುತ್ತದೆಯೋ, ಹಾಗೆಯೇ ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆಯನ್ನೇ ಮಾಡಬೇಕಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗಿ ಮುಕ್ತಿ ದೊರೆಯುವ ವರೆಗೆ ಪುನಃ ಪುನಃ ಆತ್ಮದ ಜನ್ಮವಾಗುತ್ತಿರುತ್ತದೆ. ಓರ್ವ ವ್ಯಕ್ತಿಯು ಆಯುಷ್ಯದುದ್ದಕ್ಕೂ ಪುಣ್ಯಕರ್ಮಗಳನ್ನು ಮಾಡುತ್ತಿದ್ದಾನೆ, ಆದರೆ ಅವನು ಸಾಧನೆ ಮಾಡಲಿಲ್ಲ, ಹೀಗಿರುವಾಗ ಅವನು ಜನ್ಮ ಮರಣದ ಚಕ್ರದಿಂದ ಮುಕ್ತವಾಗುವನೇ ? ಇಲ್ಲ. ಏಕೆಂದರೆ ಆ ವ್ಯಕ್ತಿಗೆ ಮೃತ್ಯುವಿನ ನಂತರ ಒಳ್ಳೆಯ ಕರ್ಮಗಳಿಗಾಗಿ ಸ್ವರ್ಗಪ್ರಾಪ್ತಿಯಾಗುತ್ತದೆ. ಪುಣ್ಯಬಲದ ಸಂಗ್ರಹವಿರುವ ವರೆಗೆ ಅವನು ಅಲ್ಲಿಯೇ ಇರುತ್ತಾನೆ ಮತ್ತು ನಂತರ ಪುಣ್ಯಬಲವು ಮುಗಿದ ನಂತರ ಅವನಿಗೆ ಹಿಂದಿನ ಜನ್ಮದ ಪ್ರಾರಬ್ಧವನ್ನು ಭೋಗಿಸಲು ಪುನರ್ಜನ್ಮ ತಾಳಿ ಬರಬೇಕಾಗುತ್ತದೆ. ಪಾಪಕರ್ಮಗಳನ್ನು ಮಾಡುವ ವ್ಯಕ್ತಿಯ ಆಧ್ಯಾತ್ಮಿಕ ಪತನವಾಗುತ್ತದೆ ಹಾಗೂ ಮೃತ್ಯುವಿನ ನಂತರ ಪುನಃ ಮನುಷ್ಯ ಜನ್ಮವು ದೊರೆಯುವುದಿಲ್ಲ, ಬದಲಾಗಿ ಕೀಟ, ಪಶು, ಪಕ್ಷಿ, ಮರ ಹೀಗೆ 84ಲಕ್ಷ ಕನಿಷ್ಟ ಯೋನಿಗಳಲ್ಲಿ ಜನ್ಮಕ್ಕೆ ಬರಬೇಕಾಗುತ್ತದೆ. ಈ ರೀತಿಯಲ್ಲಿ ಸಾಧನೆಯನ್ನು ಮಾಡದಿದ್ದರೆ `ಪುನರಪಿ ಜನನಮ್, ಪುನರಪಿ ಮರಣಮ್…’ ಇದು ನಿರಂತರವಾಗಿ ನಡೆದಿರುತ್ತದೆ.

3 ಇ. ಮನುಷ್ಯನು ಪುನಃ ಪುನಃ ಜನ್ಮ ತಾಳುವುದರ ಕಾರಣಗಳು :
1. ಪ್ರಾರಬ್ಧಭೋಗವನ್ನು ಮುಗಿಸುವುದು
2. ಮೋಕ್ಷಪ್ರಾಪ್ತಿಗಾಗಿ ಸಾಧನೆಯನ್ನು ಮಾಡಿ ಜನ್ಮ ಮೃತ್ಯುವಿನ ಚಕ್ರದಿಂದ ಮುಕ್ತರಾಗುವುದು
ಮನುಷ್ಯನು ಪದೇ ಪದೇ ಜನ್ಮ ತಾಳಲು 2 ಮುಖ್ಯ ಕಾರಣಗಳಿವೆ. ಮೊದಲನೇ ಕಾರಣವೆಂದರೆ ಪ್ರಾರಬ್ಧಭೋಗವನ್ನು ಮುಗಿಸುವುದು ಮತ್ತು 2ನೇಯ ಕಾರಣವೆಂದರೆ ಮೋಕ್ಷಪ್ರಾಪ್ತಿಗಾಗಿ ಸಾಧನೆಯನ್ನು ಮಾಡಿ ಜನನ-ಮರಣದ ಚಕ್ರದಿಂದ ಮುಕ್ತರಾಗುವುದು; ಆದರೆ ನಮ್ಮ ಗಮನವು ಇದರ ಕಡೆಗೆ ಇರುವುದಿಲ್ಲ. ಬಹಳಷ್ಟು ಜನರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಆದುದರಿಂದ ಮನೆ, ಬಂಗಲೆ, ಉದ್ಯೋಗ, ಗಾಡಿ, ಹಣದ ಸುತ್ತಲೂ ಅನೇಕರ ಜೀವನವು ಸಿಲುಕಿರುತ್ತದೆ.

ಉತ್ತಮವಾದ ಸಾಧನೆಯನ್ನು ಮಾಡಿದರೆ ಸಾಧನೆಯಲ್ಲಿನ ತಪೋಬಲದಿಂದ ಹಾಗೆಯೇ ಸಂತರ ಕೃಪೆಯಿಂದ ಪ್ರಾರಬ್ಧವು ನಷ್ಟವಾಗಿ ಜನನ-ಮರಣಗಳ ಚಕ್ರದಿಂದ ಮುಕ್ತಿ ದೊರೆಯುತ್ತದೆ. ಅಂದರೆ ಮೃತ್ಯುವಿನ ನಂತರ ಪುನಃ ಪೃಥ್ವಿಯ ಮೇಲೆ ಜನ್ಮಕ್ಕೆ ಬರಬೇಕಾಗುವುದಿಲ್ಲ. ಸಾಧನೆಯನ್ನು ಮಾಡುವ ವ್ಯಕ್ತಿಗೆ ಮೃತ್ಯುವಿನ ನಂತರ ಸದ್ಗತಿ ದೊರೆಯುತ್ತದೆ. ಅಂದರೆ ಮೃತ್ಯುವಿನ ನಂತರ ಸ್ವರ್ಗ ಲೋಕಕ್ಕಿಂತಲೂ ಮುಂದಿನ ಲೋಕಗಳಲ್ಲಿ ಅಂದರೆ ಮಹಾ, ಜನ, ತಪ ಮತ್ತು ಸತ್ಯ ಈ ಉಚ್ಚ ಲೋಕಗಳಲ್ಲಿ ಮುಂದಿನ ಸಾಧನೆಯನ್ನು ಮಾಡಿ ಮೋಕ್ಷಪ್ರಾಪ್ತಿ ಮಾಡಿಕೊಳ್ಳಬಹುದು. ಇದು ಸಾಧನೆಯ ಮಹತ್ವವಾಗಿದೆ.

ಕರ್ಮಫಲಸಿದ್ಧಾಂತ ಅಥವಾ ಪುನರ್ಜನ್ಮ ಸಿದ್ದಾಂತದಲ್ಲಿ ಯಾರಿಗಾದರೂ ಶ್ರದ್ಧೆ ಇರಲಿ ಅಥವಾ ಇಲ್ಲದಿರಲಿ, ಯಾರಿಗೆ ಕರ್ಮಫಲ ಬೇಕಿರಲಿ ಅಥವಾ ಬೇಡದಿರಲಿ, ಅದು ಪ್ರತಿಯೊಬ್ಬರಿಗೂ ದೊರೆತೆ ದೊರೆಯುತ್ತದೆ.

ಇಲ್ಲಿಯ ವರೆಗಿನ ವಿವೇಚನೆಯಿಂದ ಗಮನಕ್ಕೆ ಬರುವುದೇನೆಂದರೆ ನಮ್ಮ ಪಾಲಿಗೆ ಬಂದಿರುವ ಸುಖ-ದುಃಖವು ಹೆಚ್ಚಾಗಿ ಪೂರ್ವಜನ್ಮದ ಕರ್ಮಗಳ ಫಲವಾಗಿರುತ್ತದೆ. ಪಾಪ-ಪುಣ್ಯದ ಆಚೆಗೆ ಹೋಗಿ ಮೋಕ್ಷಪ್ರಾಪ್ತಿಯನ್ನು ಸಾಧಿಸಬೇಕಾಗಿರುವುದರಿಂದ ಸಾಧನೆಯೊಂದೇ ಪರ್ಯಾಯವಾಗಿದೆ ಇದು ಸಹ ತಮ್ಮೆಲ್ಲರ ಗಮನಕ್ಕೆ ಬಂದಿರಬಹುದು. ಕಾಲಾನುರೂಪ ಸಾಧನೆಯಲ್ಲಿನ ಒಂದು ಮಹತ್ವದ ಹಾಗೂ ಆವಶ್ಯಕ ವಿಷಯವನ್ನು ಇಂದು ತಿಳಿದುಕೊಳ್ಳೋಣ.

ಕಲಿಯುಗದಲ್ಲಿ ನಾಮಸ್ಮರಣೆಯೇ ಸಾಧನೆಯಾಗಿದೆ. ಬಹಳಷ್ಟು ಕಡೆಗಳಲ್ಲಿ ಅನೇಕರು ಇಷ್ಟದೇವತೆಗಳ ಅಥವಾ ತಮಗೆ ಇಷ್ಟವಾಗುವ ನಾಮಜಪವನ್ನು ಮಾಡುತ್ತಾರೆ. ತೆಗೆದುಕೊಂಡ ಒಂದು ನಾಮವೂ ವ್ಯರ್ಥವಾಗುವುದಿಲ್ಲ. ಆದುದರಿಂದ ಇಷ್ಟದೇವತೆಯ ನಾಮಸ್ಮರಣೆಯನ್ನು ಮಾಡುವುದು ಯೋಗ್ಯವಾಗಿದೆ; ಆದರೆ ಅದರೊಂದಿಗೆ ಕಾಲಾನುಸಾರ ಕುಲದೇವತೆಯ ನಾಮಸ್ಮರಣೆಯನ್ನು ಮಾಡುವುದೂ ಆವಶ್ಯಕವಾಗಿದೆ.

4. ಕುಲದೇವಿಯ ನಾಮಜಪದ ಮಹತ್ವ

4 ಅ. ಕುಲದೇವಿಯ ನಾಮಜಪದಿಂದ ಆಧ್ಯಾತ್ಮಿಕ ಉನ್ನತಿಯು ಆರಂಭವಾಗುತ್ತದೆ :
ನಮಗೆ ಆಧ್ಯಾತ್ಮಿಕ ಉನ್ನತಿಗಾಗಿ ಯಾವ ದೇವತೆ ಉಪಾಸನೆಯನ್ನು ಮಾಡುವ ಆವಶ್ಯಕತೆಯಿದೆಯೋ ಅಂತಹ ಕುಲದಲ್ಲಿಯೇ ಭಗವಂತನು ನಮ್ಮನ್ನು ಜನ್ಮಕ್ಕೆ ಹಾಕುತ್ತಾನೆ. ಆ ದೇವತೆಗೆ ಕುಲದ ದೇವತೆ ಎಂದು ಹೇಳುತ್ತಾರೆ. ಕುಲದೇವತೆ ಈ ಶಬ್ದವು ಕುಲ ಮತ್ತು ದೇವತೆ ಈ 2 ಶಬ್ದಗಳು ಸೇರಿ ಆಗಿವೆ. ಕುಲದ ದೇವತೆಯೇ ಕುಲದೇವತೆ. ಕುಲದೇವತೆಯ ಉಪಾಸನೆಯನ್ನು ಮಾಡುವುದರಿಂದ ಮೂಲಾಧಾರಚಕ್ರದಲ್ಲಿನ ಕುಂಡಲಿನಿಶಕ್ತಿಯು ಜಾಗೃತವಾಗುತ್ತದೆ, ಅಂದರೆ ಆಧ್ಯಾತ್ಮಿಕ ಉನ್ನತಿಯು ಆರಂಭವಾಗುತ್ತದೆ.

4 ಆ. ಕುಲದೇವಿಯ ನಾಮಸ್ಮರಣೆಯಿಂದ ಬ್ರಹ್ಮಾಂಡದಲ್ಲಿನ ಎಲ್ಲ ದೇವತೆಗಳ ತತ್ತ್ವದ ಲಾಭವು ನಾಮಧಾರಕನಿಗೆ ಆಗುತ್ತದೆ.
ಬ್ರಹ್ಮಾಂಡದಲ್ಲಿರುವ ಎಲ್ಲ ತತ್ತ್ವಗಳು ಪಿಂಡದಲ್ಲಿ ಬಂದರೆ ಸಾಧನೆಯು ಪೂರ್ಣವಾಗುತ್ತದೆ. ಶ್ರೀವಿಷ್ಣು, ಶಿವ ಮತ್ತು ಶ್ರೀ ಗಣಪತಿಯಂತಹ ದೇವತೆಗಳ ಉಪಾಸನೆಯಿಂದ ಆಯಾ ದೇವತೆಯ ವಿಶಿಷ್ಟ ತತ್ತ್ವಗಳು ವೃದ್ಧಿಯಾಗುತ್ತವೆ.

ಆದರೆ ಬ್ರಹ್ಮಾಂಡದಲ್ಲಿರುವ ಎಲ್ಲ ತತ್ತ್ವಗಳನ್ನು ಆಕರ್ಷಿಸುವ ಮತ್ತು ಅವೆಲ್ಲವುಗಳನ್ನು ಶೇ30ರ ತನಕ ಹೆಚ್ಚಿಸುವ ಸಾಮರ್ಥ್ಯವು ಕೇವಲ ಕುಲದೇವತೆಯ ಜಪದಲ್ಲಿದೆ. ಹೇಗೆ ವಿಟಮಿನ್ ಎ, ಬಿ, ಸಿ, ಡಿ, ಇವುಗಳಲ್ಲಿ ಯಾವ ವಿಟಾಮಿನ್ ಕಡಿಮೆ ಇದ್ದಲ್ಲಿ ಆಯಾ ವಿಟಮಿನ್‌ನ ಗುಳಿಗೆಗಳನ್ನು ಸೇವನೆ ಮಾಡುವುದರಿಂದ ಆ ವಿಟಾಮಿನ್ ನ ಪ್ರಮಾಣವು ನಮ್ಮಲ್ಲಿ ಹೆಚ್ಚಾಗುತ್ತದೆ. ಆದರೆ ಡಾಕ್ಟರು ಮಲ್ಟಿವಿಟಾಮಿನ್ ಗುಳಿಗೆಯನ್ನು ನೀಡಿದರೆ ಅದರಲ್ಲಿ ಎಲ್ಲ ರೀತಿಯ ವಿಟಾಮಿನ್‌ಗಳಿರುವುದರಿಂದ ಶರೀರದಲ್ಲಿ ಯಾವ್ಯಾವ ವಿಟಾಮಿನ್ ಕಡಿಮೆಯಿದೆಯೋ ಅದು ಹೆಚ್ಚಾಗುತ್ತದೆ. ಕುಲದೇವರ ನಾಮಜಪವು ಮಲ್ಟಿ ವಿಟಾಮಿನ್‌ನಂತೆ ನಮ್ಮ ಶರೀರದಲ್ಲಿ ಯಾವ ದೇವರ ತತ್ತ್ವವು ಕಡಿಮೆಯಿದೆಯೋ ಅದು ಹೆಚ್ಚಾಗಲು ಸಹಾಯ ಮಾಡುತ್ತದೆ.
ಅದು ಮಾತ್ರವಲ್ಲ ಕುಲದೇವರು ಪೃಥ್ವಿತತ್ತ್ವದ ದೇವರಾಗಿರುವುದರಿಂದ ಅವರ ಉಪಾಸನೆಯಿಂದ ಸಾಧನೆಯನ್ನು ಪ್ರಾರಂಭಿಸಿದರೆ ನಾಮಸ್ಮರಣೆ ಮಾಡುವವರಿಗೆ ಯಾವುದೇ ತೊಂದರೆ ಆಗುವುದಿಲ್ಲ.

ಕೆಲವರಿಗೆ ಕುಲದೇವರು ಮತ್ತು ಕುಲದೇವಿ ಇಬ್ಬರೂ ಇರುತ್ತಾರೆ. ಆಗ ಅವರು ಕುಲದೇವಿಯ ನಾಮಜಪಿಸಲು ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ತಂದೆ ಮತ್ತು ತಾಯಿ ಇಬ್ಬರೂ ನಮ್ಮ ಹತ್ತಿರವಿದ್ದಾಗಲೂ ಮಕ್ಕಳೂ ಸಹಾಯಕ್ಕಾಗಿ ಮೊದಲು ತಾಯಿಯನ್ನೇ ಕರೆಯುತ್ತಾರೆ. ಇದು ಸಹ ಹಾಗೆಯೇ ಆಗಿದೆ.

4ಇ. ಕುಲದೇವರ ನಾಮಜಪವನ್ನು ಹೇಗೆ ಮಾಡಬೇಕು?
ದೇವರ ಹೆಸರಿನ ಮೊದಲು ಶ್ರೀ” ಹಾಕಬೇಕು. ನಾಮಕ್ಕೆ ಚತುರ್ಥಿ ವಿಭಕ್ತಿ ಪ್ರತ್ಯಯವನ್ನು ಜೋಡಿಸಬೇಕು ಮತ್ತು ಕೊನೆಗೆ ನಮಃ’ ಜೋಡಿಸಬೇಕು. ಉದಾ. ಕುಲದೇವಿಯು ಭವಾನಿಯಾಗಿದ್ದರೆ `ಶ್ರೀ ಭವಾನಿ ದೇವ್ಯೆöÊ ನಮಃ’ ಎಂದು ಹೇಳಬೇಕು. ರೇಣುಕಾದೇವಿಯು ಕುಲದೇವಿಯಾಗಿದ್ದರೆ `ಶ್ರೀ ರೇಣುಕಾ ದೇವ್ಯೆöÊ ನಮಃ ಎಂದು ನಾಮಜಪ ಮಾಡಬೇಕು.
ನಮ್ಮ ಕುಲದಲ್ಲಿ ಕೇವಲ ಕುಲದೇವರು ಮಾತ್ರ ಇದ್ದಲ್ಲಿ ಆ ದೇವರ ನಾಮದ ಮೊದಲು `ಶ್ರೀ’ ಹಾಕಬೇಕು. ನಾಮಕ್ಕೆ ಚತುರ್ಥಿ ವಿಭಕ್ತಿ ಪ್ರತ್ಯಯವನ್ನು ಜೋಡಿಸಬೇಕು ಮತ್ತು ಕೊನೆಗೆ `ನಮಃ’ ಜೋಡಿಸಬೇಕು. ಉದಾ. ವೆಂಕಟೇಶ ದೇವರು ಕುಲದೇವರಾಗಿದ್ದಲ್ಲಿ `ಶ್ರೀ ವೆಂಕಟೇಶಾಯ ನಮಃ’ ಎಂದು ನಾಮ ಜಪಿಸಬೇಕು. ಇದೆ ರೀತಿ ಶ್ರೀ ಗಣೇಶನು ಕುಲದೇವರಾಗಿದ್ದಲ್ಲಿ `ಶ್ರೀ ಗಣೇಶಾಯ ನಮಃ’ ಎಂದು ನಾಮಜಪ ಮಾಡಬೇಕು.

ಇಂದು ಅನೇಕ ಮಂದಿಗೆ ತಮ್ಮ ಕುಲದೇವರು ಯಾರೆಂದೇ ಗೊತ್ತಿರುವುದಿಲ್ಲ. ಇಂತಹ ಸಮಯದಲ್ಲಿ ಅವರು, `ಶ್ರೀ ಕುಲದೇವತಾಯೈ ನಮಃ’ ಎಂದು ನಾಮ ಜಪಿಸಬೇಕು. ಈ ನಾಮಜಪವನ್ನು ಶ್ರದ್ಧೆಯಿಂದ ಮಾಡಿದರೆ ಕುಲದೇವರ ಹೆಸರನ್ನು ತಿಳಿಸುವವರು ಯಾರಾದರೂ ಖಂಡಿತವಾಗಿಯೂ ನಮ್ಮನ್ನು ಭೇಟಿಯಾಗುತ್ತಾರೆ ಎಂದು ಅನೇಕ ಜನರು ಅನುಭೂತಿಯನ್ನು ಪಡೆದಿದ್ದಾರೆ.

ವಿವಾಹ ಎಂದರೆ ಒಂದು ರೀತಿಯಲ್ಲಿ ಪುನರ್ಜನ್ಮವೇ ಆಗಿರುವುದರಿಂದ ವಿವಾಹಿತ ಸ್ತ್ರೀಯರು ಮಾವನ(ಪತಿಯ/ಅತ್ತೆ) ಮನೆಯ ನಾಮಜಪವನ್ನು ಮಾಡಬೇಕು.
ನಮ್ಮ ನಮ್ಮ ಕುಲದೇವರ ಜಪವನ್ನು ಪ್ರತಿದಿನ ಕಡಿಮೆಪಕ್ಷ 1 ರಿಂದ 2 ಗಂಟೆ ಹೆಚ್ಚು ಹೆಚ್ಚು ಅಂದರೆ ಸತತವಾಗಿ ಮಾಡಬೇಕು. ಮೊದಲಿನ ಪ್ರವಚನದಲ್ಲಿ ಹೇಳಿದಂತೆ ನಾಮಜಪಕ್ಕೆ ಶೌಚ-ಅಶೌಚ, ಸೂತಕ-ಮೈಲಿಗೆ, ಸ್ಥಳ-ಕಾಲಗಳ ಬಂಧನ ಇಲ್ಲದ ಕಾರಣ ಈ ನಾಮಜಪವನ್ನು ಕುಳಿತು ಮಾಡಬೇಕು. ಅದರ ಜೊತೆಗೆ ವೈಯಕ್ತಿಕ ಕೆಲಸಗಳನ್ನು ಮಾಡುವಾಗ, ಅಡುಗೆಯನ್ನು ಮಾಡುವಾಗ, ಟಿವಿ ಅಥವಾ ಮೊಬೈಲ್ ನೋಡುವಾಗ, ಪ್ರವಾಸ ಮಾಡುವಾಗ ಇಂತಹ ಪದ್ಧತಿಯಲ್ಲಿ ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ, ಅಲ್ಲಿ ನಾಮಸ್ಮರಣೆ ಮಾಡಲು ಪ್ರಯತ್ನಿಸಬೇಕು.

4ಈ. ಸಾಧನೆಯಲ್ಲಿ ಅಖಂಡತ್ವವನ್ನು ಕೇವಲ ನಾಮಸ್ಮರಣೆಯಿಂದ ಸಾಧಿಸಬಹುದು :
ಅನಂತವಾದAತಹ ಪರಮೇಶ್ವರನೊಂದಿಗೆ ಏಕರೂಪವಾಗಲು ಅಖಂಡವಾಗಿ ಅಂದರೆ 24 ಗಂಟೆಗಳ ಕಾಲ ಸಾಧನೆಯಾಗಬೇಕು. ಜ್ಞಾನಯೋಗಕ್ಕನುಸಾರ ವೇದ, ಉಪನಿಷತ್ತುಗಳು, ಇವುಗಳ ಅಭ್ಯಾಸ, ಕರ್ಮಯೋಗಕ್ಕನುಸಾರ ಧ್ಯಾನ-ಧಾರಣೆ, ತ್ರಾಟಕ-ಪ್ರಾಣಾಯಾಮ, ಭಕ್ತಿಯೋಗಕ್ಕನುಸಾರ ದೇವಪೂಜೆ, ಭಜನೆ, ಕೀರ್ತನೆ ಹೀಗೆ 24 ಗಂಟೆಗಳ ಕಾಲ ಮಾಡುವುದು ಸಾಧ್ಯವಿಲ್ಲ; ಆದರೆ ನಾಮಸ್ಮರಣೆಯನ್ನು 24 ಗಂಟೆಗಳ ಕಾಲ ಮಾಡಬಹುದು. ಸಾಧನೆಯ ಅಖಂಡತ್ವವನ್ನು ಕೇವಲ ನಾಮಸ್ಮರಣೆಯಿಂದಲೇ ಸಾಧಿಸಬಹುದು. ಹಾಗಾಗಿ ಅದು ಸರ್ವೋತ್ತಮ ಸಾಧನೆ ಎಂದು ಪರಿಗಣಿಸಲಾಗುತ್ತದೆ. ನಾವು ಈ ವಾರದಲ್ಲಿ ಕುಲದೇವಿಯ ನಾಮಸ್ಮರಣೆಯನ್ನು ಮನಃಪೂರ್ವಕವಾಗಿ ಮತ್ತು ಏಕಾಗ್ರತೆಯಿಂದ ನಾಮಜಪಿಸಲು ಪ್ರಯತ್ನಿಸಬೇಕು.

5. ದತ್ತನ ನಾಮಜಪದ ವರದಿ

ಅಧ್ಯಾತ್ಮವು ಕೃತಿಯ ಮತ್ತು ಅನುಭೂತಿಯ ಶಾಸ್ತ್ರವಾಗಿದೆ. ಅಧ್ಯಾತ್ಮದಲ್ಲಿ ಕೃತಿಗೆ 98% ಮಹತ್ವವನ್ನು ನೀಡಲಾಗಿದೆ. ಸಕ್ಕರೆಯ ಸಿಹಿತನವನ್ನು ಎಷ್ಟು ವರ್ಣಿಸಿದರೂ ಅದನ್ನು ಪ್ರತ್ಯಕ್ಷವಾಗಿ ಸವಿದು ನೋಡದಿದ್ದರೆ ಆ ವರ್ಣನೆಗೆ ಏನೂ ಉಪಯೋಗವಿಲ್ಲ. ಅಧ್ಯಾತ್ಮದಲ್ಲಿ ಜಿಜ್ಞಾಸೆಗೆ ಮಹತತ್ವವಿರುತ್ತದೆ. ಜಿಜ್ಞಾಸುವೇ ಜ್ಞಾನದ ಅಧಿಕಾರಿಯಾಗಿದ್ದಾನೆ ಎಂದು ಸಂತರು ಹೇಳುತ್ತಾರೆ. ಹಿಂದಿನ (ಕಳೆದ ಬಾರಿಯ) ಪ್ರವಚನದಲ್ಲಿ ನಾವು ಪಿತೃಋಣವನ್ನು ತೀರಿಸಲು ಹಾಗೂ ಪೂರ್ವಜರ ಮುಕ್ತಿಗಾಗಿ `ಶ್ರೀಗುರುದೇವ ದತ್ತ’ ಈ ನಾಮಜಪವನ್ನು ಜಪಿಸುವುದರ ಮಹತ್ವವನ್ನು ತಿಳಿದುಕೊಂಡಿದ್ದೆವು. ತಮ್ಮಲ್ಲಿ ಅನೇಕರು ಈ ನಾಮಜಪವನ್ನು ಮಾಡಲು ಪ್ರಾರಂಭಿಸಿರಬಹುದು. ಅಧ್ಯಾತ್ಮವು ಅನುಭೂತಿಯ ಶಾಸ್ತ್ರವಾಗಿರುವುದರಿಂದ ನಮ್ಮಲ್ಲಿ ಅನೇಕರಿಗೆ ಬೇರೆ ಬೇರೆ ರೀತಿಯ ಅನುಭವಗಳು ಬಂದಿರಬಹುದು. ಕೆಲವು ಜನರಿಗೆ ನಾಮಜಪಿಸಲು ಅಡಚಣೆಗಳು ಸಹ ಬಂದಿರಬಹುದು. ಕೆಲವರಿಗೆ ಮೃತ ಬಂಧುಬಳಗದವರ ಮುಖಗಳು ಕಾಣಿಸುತ್ತವೆ ಅಥವಾ ಮೃತ ವ್ಯಕ್ತಿಗಳು ಆಶೀರ್ವಾದ ನೀಡುತ್ತಿರುವುದು ಕಾಣಿಸುತ್ತದೆ.

6. ಸಂದೇಹ ನಿವಾರಣೆ

ಇಂದು ತೆಗೆದುಕೊಂಡ ವಿಷಯದಲ್ಲಿ ಯಾರಿಗಾದರೂ ಏನಾದರೂ ಸಂದೇಹಗಳಿದ್ದಲ್ಲಿ ಅದನ್ನು ವಿಚಾರಿಸಬಹುದು. ತಮ್ಮ ಮನಸ್ಸಿನಲ್ಲಿ ಸಂದೇಹ -ಪ್ರಶ್ನೆ ಉಂಟಾಗಿದ್ದಲ್ಲಿ ತಾವು ಅವಶ್ಯವಾಗಿ ವಿಚಾರಿಸಬಹುದು

Leave a Comment