ಸತ್ಸೇವೆ ಸತ್ಸಂಗ – 2

ಮನಸ್ಸಿನ ತ್ಯಾಗ

ನಾವು ಮನಸ್ಸಿನ ತ್ಯಾಗ ಎಂದರೇನು ಹಾಗೂ ಅದನ್ನು ಹೇಗೆ ಮಾಡಬೇಕು ಎಂಬುದನ್ನು ತಿಳ್ದುಕೊಳ್ಳೋಣ.

ಅ. ಮನಸಿನ ತ್ಯಾಗ ಎಂದರೇನು ?

ಅಧ್ಯಾತ್ಮದಲ್ಲಿ ಮುಂದುಮುಂದಿನ ಹಂತಕ್ಕೇ ಹೋಗಲು ನಾವು ತನು-ಮನ-ಧನದ ತ್ಯಾಗ ಮಾಡಬೇಕಾಗಿರುತ್ತದೆ ಎಂದು ನಮ್ಮೆಲ್ಲರಿಗೂ ತಿಳಿದಿದೆ. ಶರೀರದಿಂದ ಸೇವೆ ಮಾಡುವುದರಿಂದ ತನುವಿನ ತ್ಯಾಗವಾಗುತ್ತದೆ. ಮನಸ್ಸಿನ ತ್ಯಾಗ ಎಂದರೆ ಮನಸ್ಸಿನಿಂದ ನಾಮಸ್ಮರಣೆ ಮಾಡುವುದು ಮತ್ತು ಮನಸ್ಸನ್ನು ಅಖಂಡವಾಗಿ ಭಗವಂತನ ಸಾನ್ನಿಧ್ಯದಲ್ಲಿಡಲು ಪ್ರಯತ್ನಿಸುವುದು. ಮನಸ್ಸು ಕಣ್ಣಿಗೆ ಕಾಣಿಸುವುದಿಲ್ಲ; ಆದರೂ ಮನಸ್ಸಿನ ಕಾರ್ಯವು ನಮ್ಮನ್ನು ನಿಯಂತ್ರಿಸುತ್ತದೆ. ಆದ್ದರಿಂದ ’ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’ ಎಂದು ಹೇಳುತ್ತಾರೆ. ಇದರ ಅರ್ಥ ಮನಸ್ಸೇ ಮನುಷ್ಯನನ್ನು ಬಂಧನದಲ್ಲಿ ಸಿಲುಕಿಸಲು ಅಥವಾ ಬಂಧನದಿಂದ ಬಿಡಿಸಲು ಕಾರಣವಾಗಿರುತ್ತದೆ. ಮನಸ್ಸು ಉತ್ಸಾಹಭರಿತವಾಗಿದ್ದರೆ ಸಕಾರಾತ್ಮಕತೆಯಿಂದಾಗಿ ನಮ್ಮ ಕೃತಿಗಳು ಬೇಗನೆ ಆಗುತ್ತವೆ; ಆದರೆ ಮನಸ್ಸು ನಿರಾಶವಾಗಿದ್ದರೆ ಅದರ ಪರಿಣಾಮವು ಶರೀರದ ಮೇಲೆಯೂ ಕಾಣಿಸುತ್ತದೆ. ತಾವು ಕೂಡ ಇದನ್ನು ಅನುಭವಿಸಿರಬಹುದು. ಇನ್ನೊಂದು ಲೇಖನದಲ್ಲಿ ನಾವು ಮನಸ್ಸು ಹೇಗೆ ಕಾರ್ಯ ಮಾಡುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಇಂದು ನಾವು ಮನಸ್ಸಿನ ತ್ಯಾಗ ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವವರಿದ್ದೇವೆ. ಆದರೆ ಅದಕ್ಕೂ ಮೊದಲು ಮತ್ತೊಮ್ಮೆ ಮನಸ್ಸು ಹೇಗೆ ಕಾರ್ಯ ಮಾಡುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಆ. ಮನಸ್ಸಿನ ಕಾರ್ಯ

ಬಾಹ್ಯ ಮನಸ್ಸು ಮತ್ತು ಅಂತರ್ಮನಸ್ಸು ಹೀಗೆ ಮನಸ್ಸಿನ ಎರಡು ಭಾಗಗಳಿವೆ. ಇಡೀ ಮನಸ್ಸಿನಲ್ಲಿ ಬಾಹ್ಯ ಮನಸ್ಸು ಶೇ. ೧೦ ರಷ್ಟು ಇರುತ್ತದೆ ಮತ್ತು ಅಂತರ್ಮನಸ್ಸು ಶೇ. ೯೦ ರಷ್ಟು ಇರುತ್ತದೆ. ಬಾಹ್ಯ ಮನಸ್ಸು ಎಂದರೆ ಜಾಗೃತಾವಸ್ಥೆಯ ಮನಸ್ಸು. ಸಾಮಾನ್ಯ ವಿಚಾರಗಳು ಹಾಗೂ ಸಂಬಂಧಗಳು ಬಾಹ್ಯ ಮನಸ್ಸಿಗೆ ಸಂಬಂಧಪಟ್ಟಿವೆ. ಅಂತರ್ಮನಸ್ಸು ಒಂದು ವಿಧದಲ್ಲಿ ಎಲ್ಲ ಭಾವ-ಭಾವನೆಗಳು ಹಾಗೂ ಜನ್ಮ-ಜನ್ಮಗಳ ವಿಚಾರ-ವಿಕಾರಗಳ ಉಗ್ರಾಣವಾಗಿರುತ್ತದೆ. ಅಂತರ್ಮನಸ್ಸನ್ನೇ ಚಿತ್ತ ಎಂದು ಕರೆಯುತ್ತಾರೆ.

ಅಂತರ್ಮನಸ್ಸಿನಲ್ಲಿ ವಾಸನಾ ಕೇಂದ್ರ, ಇಷ್ಟಾನಿಷ್ಟ ಇವುಗಳ ಕೇಂದ್ರ, ಸ್ವಭಾವ ಕೇಂದ್ರ, ವೈಶಿಷ್ಟ್ಯಗಳ ಕೇಂದ್ರ, ಕೊಡು-ಕೊಳ್ಳುವ ಲೆಕ್ಕದ ಕೇಂದ್ರ ಹೀಗೆ ಬೇರೆ ಬೇರೆ ಕೇಂದ್ರಗಳಿರುತ್ತವೆ. ವಾಸನಾ ಕೇಂದ್ರದಲ್ಲಿ ವ್ಯಕ್ತಿಯ ಇಚ್ಛೆಗಳು, ಆಸೆ-ಆಕಾಂಕ್ಷೆಗಳು ಮತ್ತು ಅಪೇಕ್ಷೆಗಳ ಸಂಸ್ಕಾರಗಳಿರುತ್ತವೆ. ದಿನನಿತ್ಯದ ಜೀವನದಲ್ಲಿ ಸಂಸ್ಕಾರ ಎಂಬ ಪದವನ್ನು ಉತ್ತಮ ಆಚಾರ-ವಿಚಾರಗಳು ಹಾಗೂ ಕೃತಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸುತ್ತಾರೆ; ಆದರೆ ಆಧ್ಯಾತ್ಮಿಕ ದೃಷ್ಟಿಯಿಂದ ಸಂಸ್ಕಾರಗಳೆಂದರೆ ನಮ್ಮ ವೃತ್ತಿಗಳು ಹಾಗೂ ಕೃತ್ಯಗಳಿಂದ ಮನಸ್ಸಿನಲ್ಲಿ ಮೂಡಿರುವ ಅಚ್ಚುಗಳು ! ಒಳ್ಳೆಯ ಸಂಗತಿಗಳ ಸಂಸ್ಕಾರಗಳಿರುವುದರ ಜೊತೆಯಲ್ಲಿಯೇ ಕೆಟ್ಟ ಸಂಗತಿಗಳ ಸಂಸ್ಕಾರಗಳೂ ಇರುತ್ತವೆ. ಉದಾಹರಣೆಗೆ, ಭಗವಂತನ ನಾಮಜಪವನ್ನು ಮಾಡುವ ಸಂಸ್ಕಾರವಿರುವಂತೆಯೇ ಅಪಶಬ್ದಗಳನ್ನು ಉಪಯೋಗಿಸಿ ಬೈಯುವ ಸಂಸ್ಕಾರವೂ ಇರುತ್ತದೆ. ಕೇವಲ ಈ ಜನ್ಮದ ಸಂಸ್ಕಾರಗಳು ಮಾತ್ರವಲ್ಲ, ಹಿಂದಿನ ಎಲ್ಲ ಜನ್ಮಗಳ ಸಂಸ್ಕಾರಗಳು ಅಂತರ್ಮನಸ್ಸಿನ ಆಳದ ಪದರಗಳಲ್ಲಿ ಅಚ್ಚೂರಿರುತ್ತವೆ. ಇಷ್ಟಾನಿಷ್ಟ ಕೇಂದ್ರದಲ್ಲಿ ವ್ಯಕ್ತಿಗೆ ಇಷ್ಟವಿರುವ ಇಷ್ಟವಿಲ್ಲದಿರುವ ಸಂಗತಿಗಳ ಸಂಸ್ಕಾರಗಳಿರುತ್ತವೆ. ಸ್ವಭಾವಕೇಂದ್ರದಲ್ಲಿ ಸ್ವಭಾವದಲ್ಲಿರುವ ಗುಣ-ದೋಷಗಳ ಸಂಸ್ಕಾರಗಳು ಶೇಖರಣೆಯಾಗಿರುತ್ತವೆ. ವೈಶಿಷ್ಟ್ಯ ಕೇಂದ್ರದಲ್ಲಿ ಕಲೆ ಹಾಗೂ ಆಟ ಇವೇ ಮುಂತಾದ ವ್ಯಕ್ತಿಯಲ್ಲಿರುವ ಪ್ರಾವೀಣ್ಯದ ಸಂಸ್ಕಾರಗಳಿರುತ್ತವೆ. ಕೊಡು-ಕೊಳ್ಳುವ ಲೆಕ್ಕದ ಕೇಂದ್ರದಲ್ಲಿ ಸಂಚಿತ ಹಾಗೂ ಪ್ರಾರಬ್ಧ ಕರ್ಮಗಳ ಸಂಸ್ಕಾರಗಳಿರುತ್ತವೆ.

೧. ಮನಸ್ಸು : ’ಸಂಕಲ್ಪ ವಿಕಲ್ಪಕಾತ್ಮಕಂ ಮನಃ |’, ಇದರ ಅರ್ಥ ವಿಚಾರ ಮಾಡುವುದು ಮನಸ್ಸಿನ ಸ್ವರೂಪವಾಗಿದೆ. ಮನಸ್ಸಿನಲ್ಲಿ ಒಳ್ಳೆಯ-ಕೆಟ್ಟ ವಿಚಾರಗಳು ಬರುತ್ತಲೇ ಇರುತ್ತವೆ. ಮನಸ್ಸು ಚಂಚಲವಾಗಿರುತ್ತದೆ. ಮನಸ್ಸಿನಲ್ಲಿ ’ಇದನ್ನು ಮಾಡಲೇ ಅಥವಾ ಅದನ್ನು ಮಾಡಲೇ?’ ಈ ರೀತಿಯ ವಿಚಾರಗಳು ನಿರಂತರ ನಡೆಯುತ್ತಿರುತ್ತವೆ; ಆದರೆ ಅದಕ್ಕೆ ನಿರ್ಣಯವನ್ನು ತೆಗೆದುಕೊಳ್ಳಲಾಗುವುದಿಲ್ಲ.

೨. ಬುದ್ಧಿ : ನಿರ್ಣಯವನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದರೆ, ಬುದ್ಧಿ!! ’ನಿಶ್ಚಯಾತ್ಮಕ ಬುದ್ಧಿಃ|’ ಎಂದು ಹೇಳಲಾಗಿದೆ.  ಇದರ ಅರ್ಥ ನಿಶ್ಚಯ ಮಾಡುವುದು, ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ ಎಂಬುದರ ಕುರಿತು ವಿಚಾರ ಮಾಡಿ ನಿರ್ಣಯಕ್ಕೆ ಬರುವುದು ಬುದ್ಧಿಯ ಕಾರ್ಯವಾಗಿದೆ. ಮನಸ್ಸಿನಲ್ಲಿರುವ ವಿಚಾರಗಳಿಗನುಗುಣವಾಗಿ ಕೃತಿ ಆಗುವುದು ಅಥವಾ ಆಗದಿರುವುದು ಬುದ್ಧಿಯನ್ನವಲಂಬಿಸಿರುತ್ತದೆ. ನಮ್ಮ ಮನಸ್ಸಿನಲ್ಲಿ ಎಲ್ಲ ಸಂಸ್ಕಾರಗಳಿಗನುಸಾರವಾಗಿ ವಿಚಾರಗಳು ಬರುತ್ತವೆ. ಯಾವ ವಿಚಾರವು ತೀವ್ರವಾಗಿರುವುದೋ ಅದಕ್ಕನುಸಾರವಾಗಿ ಬುದ್ಧಿಯು ನಿರ್ಣಯವನ್ನು ತೆಗೆದುಕೊಳ್ಳುತ್ತದೆ ಮತ್ತು ಅದಕ್ಕೆ ತಕ್ಕಂತೆ ನಮ್ಮಿಂದ ಕೃತ್ಯಗಳಾಗುತ್ತವೆ.

ಇ. ಮನಸ್ಸಿನ ತ್ಯಾಗ ಮಾಡಲು ಜನ್ಮ-ಜನ್ಮಗಳ ಸಂಸ್ಕಾರ ಕಡಿಮೆ ಮಾಡಬೇಕು

ಮನಸ್ಸಿನ ಮೇಲೆ ಅಂಕಿತವಾಗಿರು ಜನ್ಮ ಜನ್ಮಗಳ ಸಂಸ್ಕಾರಗಳನ್ನು ಕಡಿಮೆ ಮಾಡುವ ಉಪಾಯವೆಂದರೆ ನಾಮಸ್ಮರಣೆ ಮಾಡುವುದು! ಯಾವಾಗ ನಮ್ಮ ಮನಸ್ಸಿನಲ್ಲಿ ನಾಮದ ಸಂಸ್ಕಾರ ಹೆಚ್ಚಾಗುತ್ತದೆ ಆಗ ನಮ್ಮ ಮನಸ್ಸಿನಲ್ಲಿ ವ್ಯರ್ಥ ವಿಚಾರಗಳು (ನಿರರ್ಥಕ) ಬರುವ ಪ್ರಮಾಣ ಖಂಡಿತವಾಗಿ ಕಡಿಮೆಯಾಗುತ್ತದೆ. ನಿಮ್ಮೆಲ್ಲರಿಗೂ ೨ ರೇಖೆಗಳ ಉದಾಹರಣೆ ನೆನಪಿರಬೇಕು. ಒಂದು ರೇಖೆಯನ್ನು ಮುಟ್ಟದೇ ಚಿಕ್ಕದು ಮಾಡಬೇಕೆಂದರೆ ಅದಕ್ಕೆ ಸುಲಭ ಉಪಾಯ ಯಾವುದು? ಆ ರೇಖೆಯ ಹತ್ತಿರ ಇನ್ನೊಂದು ದೊಡ್ಡ ರೇಖೆಯನ್ನು ಎಳೆಯುವುದು. ಹಾಗೆ ಮಾಡುವುದರಿಂದ ಆ ರೇಖೆ ತಕ್ಷಣ ಚಿಕ್ಕದಾಗುತ್ತದೆ. ಅದೇ ರೀತಿ ನಮ್ಮ ಮನಸ್ಸಿನ ಮೇಲೆ ಅಂಕಿತವಾಗಿರುವ ಜನ್ಮಜನ್ಮಗಳ ಸಂಸ್ಕಾರಗಳನ್ನು ಕಡಿಮೆ ಮಾಡಬೇಕೆಂದರೆ, ಅದಕ್ಕಾಗಿ ನಾಮದ ಸಂಸ್ಕಾರ ದೃಢವಾಗಿಸಲು ಪ್ರಯತ್ನಿಸಬೇಕಾಗುತ್ತದೆ. ನಾಮಸ್ಮರಣೆ ಹೆಚ್ಚು ಹೆಚ್ಚು ಮಾಡುವುದಕ್ಕಾಗಿ ಸತ್ಸಂಗಕ್ಕೆ ಜೋಡಣೆ ಆಗುವುದು ಆವಶ್ಯಕವಾಗಿದೆ. ಸತ್ಸಂಗದಲ್ಲಿನ ವಾತಾವರಣ ಮತ್ತು ಎಲ್ಲಾ ಜೀವಗಳ ಸಾತ್ವಿಕತೆ ಹೆಚ್ಚಾಗಿರುವುದರಿಂದ ನಾವು ನಿಯಮಿತವಾಗಿ (ಸತತವಾಗಿ) ಸತ್ಸಂಗದಲ್ಲಿ ಭಾಗವಹಿಸಿದರೆ, ಅದರಿಂದ ನಮ್ಮ ಸಾಧನೆಗೆ ವೇಗ ಸಿಗುತ್ತದೆ. ಮನಸ್ಸಿನ ತ್ಯಾಗ ಮಾಡಲು ಹೆಚ್ಚೆಚ್ಚು ನಾಮಜಪ ಮಾಡಬೇಕಾಗುತ್ತದೆ.

ಆದರೆ ತನುವಿನ ತ್ಯಾಗಕ್ಕೆ ಹೋಲಿಸಿದಾಗ ಮನಸ್ಸಿನ ತ್ಯಾಗ ಹೆಚ್ಚು ಕಠಿಣವಾಗಿದೆ. ನಿಮಗೆ ಇದರ ಅನುಭವ ಬಂದಿರಬಹುದು. ನಮ್ಮ ಹತ್ತಿರ ಯಾವುದಾದರೊಂದು ಸೇವೆ ಇದೆ, ಉದಾಹರಣೆ, ಸೋಶಲ್ ಮೀಡಿಯಾ ಮುಖಾಂತರ ಪ್ರಸಾರ ಮಾಡುವುದಿದ್ದರೆ ಅದನ್ನು ನಾವು ಬಹಳ ಉತ್ಸಾಹದಿಂದ ಮಾಡುತ್ತೇವೆ. ಆದರೆ ನಮಗೆ ಅದರ ತುಲನೆಯಲ್ಲಿ ಕುಳಿತು ನಾಮಜಪ ಮಾಡಲು ಹೇಳಿದರೆ, ಅದು ಆಗುವುದಿಲ್ಲ. ಹೀಗೆ ಆಗುತ್ತದೆ ಅಲ್ಲವೇ? ಸಾಮಾನ್ಯವಾಗಿ ನಮ್ಮ ಪ್ರಕೃತಿ ರಜೋಗುಣಿ ಎಂದರೆ ಚಂಚಲವಾಗಿ ಇರುವುದರಿಂದ ಒಂದು ಜಾಗದಲ್ಲಿ ಕುಳಿತು ನಾಮಜಪ ಮಾಡುವುದು ಕಠಿಣವೆನಿಸುತ್ತದೆ. ಆದರೆ ಮನಸ್ಸಿನ ತ್ಯಾಗ ಮಾಡಲಿಕ್ಕಿದ್ದಲ್ಲಿ ಕುಳಿತು ನಾಮಜಪ ಮಾಡುವುದು ಆವಶ್ಯಕವಾಗಿದೆ. ಇದರಿಂದ ನಮ್ಮ ಮನಸ್ಸಿನ ಮೇಲೆ ನಾಮಜಪದ ಸಂಸ್ಕಾರ ಅಂಕಿತ ಆಗಬೇಕಾಗುತ್ತದೆ. ನೀವೆಲ್ಲರೂ ಕುಲದೇವರ ಮತ್ತು ಭಗವಾನ ದತ್ತಾತ್ರೇಯನ ನಾಮಜಪ ಮಾಡುತ್ತಿರಬಹುದು. ಆದರೆ ಬೇರೆ ಸಮಯದಲ್ಲಿಯೂ ಎಂದರೆ ನಮ್ಮ ನಿತ್ಯಕರ್ಮಗಳನ್ನು ಮಾಡುವ ಸಮಯದಲ್ಲಿ ನಾಮಜಪ ಮಾಡಲು ಪ್ರಯತ್ನಿಸಿದರೆ, ನಮ್ಮ ಮನಸ್ಸಿನ ತ್ಯಾಗವೇ ಆಗುತ್ತದೆ. ನಾಮಸ್ಮರಣೆ ಚೆನ್ನಾಗಿ ಆಗಲು ಸತ್ಸಂಗ ಮತ್ತು ಸತ್ಸೇವೆ ಅಷ್ಟೇ ಮಹತ್ವಪೂರ್ಣವಾಗಿವೆ. ನಾಮಜಪದ ತುಲನೆಯಲ್ಲಿ ಸೇವೆಯಲ್ಲಿ ಮನಸ್ಸು ಶೀಘ್ರವಾಗಿ ಏಕಾಗ್ರವಾಗುತ್ತದೆ. ನಮ್ಮ ಮನಸ್ಸು ಯಾವಾಗಲಾದರೂ ನಿರ್ವಿಚಾರವಾಗುತ್ತದೆಯೇ? ಇಲ್ಲವಲ್ಲ? ನಮ್ಮ ಮನಸ್ಸಿನಲ್ಲಿ ಸತತವಾಗಿ ಒಂದಲ್ಲ ಒಂದು ವಿಚಾರಗಳು ಬರುತ್ತಲೇ ಇರುತ್ತವೆ. ಅದರ ಜಾಗದಲ್ಲಿ ನಾವು ಭಗವಂತನ ಕುರಿತು ವಿಚಾರ ಮಾಡಿದರೆ ಅಥವಾ ನಾಮಸ್ಮರಣೆ ಮಾಡಿದರೆ, ನಮ್ಮ ಮನಸ್ಸಿನ ತ್ಯಾಗವಾಗುತ್ತದೆ.

ಈ. ಸ್ವೇಚ್ಛೆ – ಪರೇಚ್ಛೆ – ಈಶ್ವರೇಚ್ಛೆ

ಮನಸ್ಸಿನ ತ್ಯಾಗ ಯಾವುದರಿಂದ ಆಗುತ್ತದೆ ಎಂದರೆ ಪರೇಚ್ಛೆ, ಮತ್ತು ಈಶ್ವರೇಚ್ಛೆಯಿಂದ ವರ್ತಿಸಲಿಕ್ಕಿರುತ್ತದೆ. ಸ್ವೇಚ್ಛೆ – ಪರೇಚ್ಛೆ – ಈಶ್ವರೇಚ್ಛೆ ಒಂದು ಮಹತ್ವಪೂರ್ಣ ಅಧ್ಯಾತ್ಮಿಕ ಅಂಶವಾಗಿದೆ. ಅಧ್ಯಾತ್ಮದಲ್ಲಿ ಸ್ವೇಚ್ಛೆಯ ತ್ಯಾಗ ಮಾಡಿ ಪರೇಚ್ಛೆ ಮತ್ತು ಅದರ ನಂತರ ಈಶ್ವರೇಚ್ಛೆ ಈ ಹಂತಗಳಲ್ಲಿ ಸಾಧನೆಯ ಪ್ರವಾಸ ಮಾಡಬೇಕಾಗುತ್ತದೆ.

೧. ಸ್ವೇಚ್ಛೆ : ಸ್ವೇಚ್ಛೆಯ ಅರ್ಥ ಸ್ವಂತ ಇಚ್ಛೆ. ಮನಸ್ಸಿನಲ್ಲಿ ಹೇಗೆ ಬರುತ್ತದೆ ಹಾಗೆ ಆಚರಣೆ ಮಾಡುವುದು, ಮನಸ್ಸಿನ ಮೇಲೆ ಸ್ವಲ್ಪವೂ ನಿಯಂತ್ರಣ ಇಲ್ಲದಿರುವುದು. ನಮ್ಮ ಮನಸ್ಸಿಗೆ ಬಂದ ಹಾಗೆ ನಡೆಯಬೇಕು, ಹೀಗೆ ಅನಿಸುವುದೇ ಸ್ವೇಚ್ಛೆ. ಇಂತಹ ವ್ಯಕ್ತಿಗಳು ಪಶುಗಳ ಹಾಗೆ ನಾನು, ನನಗಾಗಿ, ಮತ್ತು ನನ್ನಿಂದ ಇಂತಹ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುತ್ತಾರೆ. ಯಾವ ವಸ್ತು ನನಗೆ ಬೇಕು, ಅದನ್ನು ಖರೀದಿಸಬೇಕು, ನನಗೆ ಯಾವ ಪದಾರ್ಥ ಪ್ರಿಯವಾಗಿದೆ, ಅದನ್ನು ಊಟಕ್ಕೆಂದು ತಯಾರಿಸಬೇಕು, ನನ್ನ ವಿಚಾರಗಳಿಗನುಸಾರ ಎಲ್ಲವೂ ನಡೆಯಬೇಕು, ಇದು ಸ್ವೇಚ್ಛೆಯ ಕೆಲವು ಉದಾಹರಣೆಗಳು.

೨. ಪರೇಚ್ಛೆ : ಪರೇಚ್ಛೆಯ ಅರ್ಥ ಮುಂದೆ ಇರುವ ವ್ಯಕ್ತಿಯ ವಿಚಾರ ಅಥವಾ ಇಚ್ಛೆಗನುಸಾರ ನಡೆದುಕೊಳ್ಳುವುದು. ಸ್ವೇಚ್ಛೆ ಬಿಟ್ಟು ನಿಧಾನವಾಗಿ ಪರೇಚ್ಛೆಗನುಸಾರ ಆಚರಣೆ ಮಾಡಲು ಆರಂಭಿಸಿದರೆ, ಅದರಿಂದ ನಮಗೆ ಈಶ್ವರೇಚ್ಛೆ ಏನು ಎಂದು ತಿಳಿಯಲು ಸಾಧ್ಯವಾಗುತ್ತದೆ.

ಅ. ಮನುಷ್ಯ ಮತ್ತು ಇತರ ಪ್ರಾಣಿಗಳಲ್ಲಿರುವ ಅಂತರ : ಮನುಷ್ಯ ಪ್ರಾಣಿ ಮತ್ತು ಇತರ ಪ್ರಾಣಿಗಳಲ್ಲಿ ಒಂದು ಮಹತ್ತ್ವದ ವ್ಯತ್ಯಾಸವಿದೆ. ಇದರ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ.ಅಠವಲೆಯವರು ಮುಂದಿನಂತೆ ಹೇಳಿದ್ದಾರೆ – ಇತರ ಪ್ರಾಣಿಗಳು ವ್ಯಕ್ತಿಸ್ವಾತಂತ್ರ್ಯಕ್ಕನುಸಾರ ಸ್ವೇಚ್ಛೆಯಿಂದ ವರ್ತಿಸುತ್ತವೆ. ಅದರ ವಿರುದ್ಧವಾಗಿ ವ್ಯಕ್ತಿಸ್ವಾತಂತ್ರ್ಯವನ್ನು ಬಿಟ್ಟು ಮನುಷ್ಯನು ಹಂತಹಂತವಾಗಿ ಪರಿವಾರ, ಸಮಾಜ, ರಾಷ್ಟ್ರ ಮತ್ತು ಧರ್ಮ ಇದರ ಹಿತಕ್ಕನುಸರಿಸಿ ಆಚರಣೆ ಮಾಡುತ್ತಾನೆ, ಅಂದರೆ ಹಂತಹಂತವಾಗಿ ಸ್ವೇಚ್ಛೆಯ ಜಾಗದಲ್ಲಿ ಪರೇಚ್ಛೆಯಿಂದ ಆಚರಣೆ ಮಾಡುತ್ತಾನೆ ಮತ್ತು ಕೊನೆಯಲ್ಲಿ ಈಶ್ವರೆಚ್ಛೇಯಿಂದ ಆಚರಣೆ ಮಾಡುವುದು ಇದು ಅವನಿಂದ ಅಪೇಕ್ಷಿತವಾಗಿರುತ್ತದೆ. ಹೀಗೆ ಆಚರಣೆ ಮಾಡಿದರೆ ಆಗ ಅವನು ನಿಜವಾದ ಮನುಷ್ಯನಾಗುತ್ತಾನೆ, ಇಲ್ಲವಾದರೆ ಅವನು ಕೇವಲ ಒಬ್ಬ ಮನುಷ್ಯ ದೇಹಧರಿಸಿರುವ ಪ್ರಾಣಿ ಆಗಿರುತ್ತಾನೆ.

ಪ್ರಾಣಿಗಳು ಮನಸ್ಸಿ ಬಂದಂತೆ ತಿನ್ನುವುದು ಕುಡಿಯುವುದು ಮಲಗುವುದು ಇತ್ಯಾದಿ ಕೃತಿಗಳನ್ನು ಮಾಡುತ್ತಿರುತ್ತವೆ. ಹಾಗೆ ಮನುಷ್ಯನು ಸಹ ತನ್ನ ಮನಸ್ಸಿನಂತೆ ವರ್ತಿಸುತ್ತಿದ್ದಲ್ಲಿ ಅವನಲ್ಲಿ ಮತ್ತು ಪ್ರಾಣಿಗಳಲ್ಲಿರುವ ಅಂತರವೇನು ? ಆದಕಾರಣ ಮನುಷ್ಯನು ಸ್ವೇಚ್ಛೆಯನ್ನು ತ್ಯಜಿಸಿ ಪರೇಚ್ಛೆಯಿಂದ ವರ್ತಿಸುವುದು ಮಹತ್ವಪೂರ್ಣವಾಗಿದೆ, ಅದೇ ಯೋಗ್ಯವಾಗಿದೆ, ನಾನು ಹಾಗೆ ಮಾಡುವೆನು, ಇದು ವ್ಯಕ್ತಿಸ್ವಾತಂತ್ರ್ಯದ ವಿಚಾರಧಾರೆ ಆಗಿದೆ. ಆದಕಾರಣ ಅವರು ಸ್ವೇಚ್ಛೆಯಲ್ಲಿ ಸಿಲುಕುತ್ತಾರೆ. ಸಾಧಕರಂತೆಯೇ ಸ್ವೇಚ್ಛೆಯ ಜಾಗದಲ್ಲಿ ಪರೇಚ್ಛೆಗೆ ಪ್ರಾಧಾನ್ಯತೆಯನ್ನು ನೀಡಿದರೆ ಮತ್ತು ಕೊನೆಯಲ್ಲಿ ಈಶ್ವರನ ಇಚ್ಛೆಯಿಂದ ಆಚರಣೆ ಮಾಡಿದರೆ ಅವರ ಪ್ರವಾಸವು ಈಶ್ವರನ ದಿಶೆಯಲ್ಲಾಗುತ್ತದೆ.

ಆ. ವ್ಯಕ್ತಿ ಸ್ವಾತಂತ್ರ್ಯದಿಂದಾಗುವ ಪರಿಣಾಮ : ಇಂದು ವ್ಯಕ್ತಿಸ್ವಾತಂತ್ರ್ಯ ಎಂಬ ಶಬ್ದಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ, ‘ನನಗೆ ಏನು ಅನಿಸುತ್ತದೆ, ಅದೇ ಸರಿ ಇದೆ, ನಾನು ಹಾಗೆ ಮಾಡುವೆನು’, ಇದು ವ್ಯಕ್ತಿಯ ಸ್ವಾತಂತ್ರ‍್ಯದ ವಿಚಾರಧಾರೆಯಾಗಿದೆ. ಆದಕಾರಣ ಇಂತಹವರು ಸ್ವೇಚ್ಛೆಯಲ್ಲಿ ಸಿಲುಕುತ್ತಾರೆ. ಹಾಗೆ ಸ್ವೇಚ್ಛೆಯ ಜಾಗದಲ್ಲಿ ಪರೇಚ್ಛೆಗೆ ಪ್ರಾಧಾನ್ಯತೆಯನ್ನು ನೀಡಿದರೆ ಮತ್ತು ಕೊನೆಯಲ್ಲಿ ಈಶ್ವರನ ಇಚ್ಛೆಯಿಂದ ಆಚರಣೆ ಮಾಡಿದರೆ ಅವರ ಪ್ರವಾಸವು ಈಶ್ವರನ ದಿಶೆಯಲ್ಲಾಗುತ್ತದೆ. ಇದರ ರೂಢಿಯಾಗಲು ಪ್ರಾರಂಭದಲ್ಲಿ ಯಾವ ವಿಷಯಗಳಿಂದ ನಮಗೆ ತೊಂದರೆ ಆಗುವುದಿಲ್ಲವೋ, ಅಂತಹ ಸೂತ್ರಗಳನ್ನು ಬೇರೆಯವರ ವಿಚಾರಕ್ಕೆ ಅನುಗುಣವಾಗಿ ಮಾಡಲು ಪ್ರಯತ್ನಿಸಬೇಕು. ಉದಾಹರಣೆ, ಬೇರೆಯವರಿಗೆ ಇಷ್ಟ ಆಗುವ ಪಲ್ಯ ಮಾಡುವುದು, ಯಾರು ಏನು ಹೇಳುತ್ತಾರೆ ಅದನ್ನು ಕೇಳುವುದು ಮುಂತಾದವು.

ಇ. ಪರೇಚ್ಛೆಯಿಂದ ಹೇಗೆ ವರ್ತಿಸಬೇಕು ? :  ಪರೇಚ್ಛೆ ಅಂದರೆ ಮುಂದಿರುವ ವ್ಯಕ್ತಿಯ ಇಚ್ಛೆಗನುಗುಣವಾಗಿ ವರ್ತಿಸುವುದರಿಂದ ನಮ್ಮ ಮನಸ್ಸಿನ ತ್ಯಾಗವಾಗುತ್ತದೆ. ಆರಂಭದಲ್ಲಿ ಯಾವ ಕಾರಣದಿಂದ ನಮಗೆ ವಿಶೇಷ ಹಾನಿಯಾಗುವುದಿಲ್ಲವೋ, ಅಂತಹ ಆಂಶಗಳನ್ನು ಅನ್ಯರ ವಿಚಾರಕ್ಕನುಗುಣವಾಗಿ ಪ್ರಯತ್ನಿಸಬೇಕು. ಉದಾಹರಣೆ, ಮನೆಯಲ್ಲಿ ಇಂತಹ ಒಂದು ಪಲ್ಯ ಮಾಡುವಾಗ ಅದರ ಬದಲು ಬೇರೆ ಪಲ್ಯ ಮಾಡಲು ಹೇಳಿದರೆ, ಅದನ್ನು ಕೇಳುವುದು, ಯಾವುದೇ ವಸ್ತು ಯಾವುದೋ ಜಾಗದಲ್ಲಿ ಇಡಲು ಹೇಳಿದರೆ ಅದನ್ನು ಅದೇ ರೀತಿ ಇಡುವುದು. ಯಾವಾಗ ನಾವು ಬೇರೆಯವರ ಇಚ್ಛೆಯ ಪ್ರಕಾರ ವರ್ತಿಸುವ ಪ್ರಯತ್ನ ಮಾಡುತ್ತೇವೆಯೋ, ಆಗ ನಿಧಾನವಾಗಿ ಮನಸ್ಸಿನ ಸಂಘರ್ಷದ ಮೇಲೆ ನಮಗೆ ಜಯ ಪ್ರಾಪ್ತವಾಗಿ ಬೇರೆಯವರ ಮಾತು ಕೇಳುವುದಕ್ಕೆ ಮತ್ತು ಅದೇ ರೀತಿ ಕೃತಿ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಈ. ಯಾರ ಪರೇಚ್ಛೆಯನ್ನು ಸ್ವೀಕರಿಸಬೇಕು? : ಪರೇಚ್ಛೆಯಿಂದ ಆಚರಣೆ ಮಾಡುವ ಸಂದರ್ಭದಲ್ಲಿ ನಾವು ಒಂದು ಮಹತ್ವಪೂರ್ಣ ಅಂಶವನ್ನು ಗಮನದಲ್ಲಿಟ್ಟುಕೊಳ್ಳೋಣ, ಏನೆಂದರೆ ನಮ್ಮ ಸಾಧನೆಗಾಗಿ ಹಾನಿಕರವಲ್ಲದ ಪರೇಚ್ಛೆಯನ್ನು ಸ್ವೀಕರಿಸಬೇಕು, ಉದಾಹರಣೆಗೆ ನಮ್ಮ ಸ್ನೇಹಿತನೊಬ್ಬನು ಮದ್ಯಪಾನ ಮಾಡಲು ಆಗ್ರಹಿಸಿದರೆ, ಅದನ್ನು ನೀವು  ಪರೇಚ್ಛೆ ಎಂದು ಕೇಳಬೇಕೆ ? ಯಾರಾದರೂ ಪರಿವಾರದವರ ಬಳಿ ಸುಳ್ಳು ಹೇಳಿ ತಿರುಗಾಡಲು ಹೋಗೋಣ ಎಂದು ಆಗ್ರಹಿಸಿದರೆ, ಅದನ್ನು ನಾವು ಕೇಳಬೇಕೆ? ಇಲ್ಲ ಅಲ್ಲವೇ ! ಹಾಗಾದರೆ ಇಂತಹ ಪ್ರಸಂಗಗಳಲ್ಲಿ ಈಶ್ವರೆಚ್ಛೇ ಏನು ಇರುತ್ತದೆ ? ಇದನ್ನು ಯೋಚಿಸುವುದು ಮತ್ತು ಅದೇ ರೀತಿ ಕೃತಿ ಮಾಡುವುದು ಅಪೇಕ್ಷಿತವಾಗಿರುತ್ತದೆ. ಭಗವಂತ ನಮಗೆ ಯಾವತ್ತಾದರೂ ಸಾಧನೆ ಮಾಡಬೇಡಿ, ಮಧ್ಯಪಾನ ಮಾಡಿ, ಸುಳ್ಳು ಮಾತನಾಡಿ, ಹೀಗೆ ಹೇಳುತ್ತಾನೆಯೇ? ಇಲ್ಲ ತಾನೇ! ಹಾಗಾದರೆ ನಾವು ಯಾವ ಸನ್ನಿವೇಶಗಳಲ್ಲಿ ಪರೇಚ್ಛೆ ಸ್ವೀಕರಿಸಬೇಕು ಎಂಬ ಬಗ್ಗೆ ಪರಮ ಪೂಜ್ಯ ಡಾಕ್ಟರರು ಮುಂದಿನಂತೆ ಹೇಳಿದ್ದಾರೆ, ‘ನಮ್ಮ ಮನಸ್ಸಿನ ವಿರೋಧವಾಗಬೇಕು ಮತ್ತು ಸಾಧನೆಗೆ ಪೂರಕವಾಗಿರುವ ಪರೇಚ್ಛೆಯನ್ನು ಸ್ವೀಕರಿಸಬೇಕು ಮತ್ತು ಯಾವುದು ಪೂರಕವಾಗಿಲ್ಲ, ಅಂತಹ ಪರೇಚ್ಛೆಯನ್ನೂ ಸ್ವೀಕರಿಸಬಾರದು !’

ಸ್ವೇಚ್ಛೆಯ ತ್ಯಾಗಮಾಡಿ ಪರೇಚ್ಛೆಯಿಂದ ಆಚರಣೆ ಮಾಡುವಾಗ ಆರಂಭದಲ್ಲಿ ನಮ್ಮ ಮನಸ್ಸಿನ ಸಂಘರ್ಷವಾಗುತ್ತದೆ. ಅದರಲ್ಲಿ ಬೇರೆಯವರ ವಿಚಾರಕ್ಕನುಗುಣವಾಗಿ ವರ್ತಿಸುವುದು ಕಠಿಣವೆನಿಸುತ್ತದೆ. ಆದರೆ ನಮ್ಮ ಮನಸ್ಸಿನ ತ್ಯಾಗವಾಗಲು ಮತ್ತು ನಮ್ಮ ಅಹಂಕಾರ ಕಡಿಮೆಯಾಗಲು ನಾವು ಪ್ರಯತ್ನಿಸಬೇಕು. ಇದನ್ನು ನಾವು ಗಮನದಲ್ಲಿಡಬೇಕು. ಈಶ್ವರೇಚ್ಛೆಯ ಅಡಿಪಾಯ ಪರೇಚ್ಛೆಯಲ್ಲಿ ಇದೆ.

೩. ಈಶ್ವರೇಚ್ಛೆ : ಈಶ್ವರೆಚ್ಛೇಯ ಅರ್ಥ ಈಶ್ವರನಿಗೆ ಯಾವುದು ಅಪೇಕ್ಷಿತ ವಿದೆ, ಇದನ್ನು ತಿಳಿದುಕೊಂಡು ಅದೇ ರೀತಿ ಆಚರಣೆ ಮಾಡುವುದು.

ಅ. ಸ್ವಕೇಂದ್ರಿತ ಮತ್ತು ಈಶ್ವರ ಕೇಂದ್ರಿತ ವಿಚಾರದಲ್ಲಿ ಯೋಗ್ಯ ಅಂತರ : ಯಾವಾಗ ನಮಗೆ ಪರೇಚ್ಛೆಯಿಂದ ಆಚರಣೆ ಮಾಡಲು ಸಾಧ್ಯವಾಗುತ್ತದೆ ಆಗ ನಿಧಾನವಾಗಿ ಯಾವ ಪ್ರಸಂಗದಲ್ಲಿ ಈಶ್ವರೇಚ್ಛೆ ಏನಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆ, ಯಾವುದೋ ಪ್ರಸಂಗದಲ್ಲಿ ನಮ್ಮ ಮನಸ್ಸಿನ ಸಂಘರ್ಷ ಬಹಳ ಆಗುತ್ತಿದ್ದರೆ, ಮತ್ತು ಮನಸ್ಸಿಗೆ  ಕಿರಿಕಿರಿ ಆಗುತ್ತಿದೆ; ಯಾವುದೋ ಪರಿಸ್ಥಿತಿ ಸ್ವೀಕಾರವಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ವ್ಯಕ್ತಿ ಏನಾದರೂ ಹೆಚ್ಚು ಸ್ವಕೇಂದ್ರಿತ ಆಗುತ್ತಿದ್ದರೆ, ಅವನಿಗೆ ಆ ಪ್ರಸಂಗದಿಂದ ತಕ್ಷಣ ಹೊರಬರಲು ಆಗುವುದಿಲ್ಲ. ಆದರೆ ಸ್ವ ಅಥವಾ ಕರ್ತೃತ್ವದ ಭಾವನೆಯ ಲಯವಾಗಲು ಪ್ರಾರಂಭವಾಗಿದ್ದರೆ, ನನ್ನ ಜೊತೆಗೆ ಇಂತಹ ಘಟನೆಗಳು ಏಕೆ ನಡೆಯುತ್ತಿವೆ, ಭಗವಂತನಿಗೆ ಈ ಮೂಲಕ ನನಗೆ ಏನು ಕಲಿಸುಲಿಕ್ಕಿದೆ, ಮುಂತಾದ ವಿಚಾರ ಪ್ರಕ್ರಿಯೆ ಆ ವ್ಯಕ್ತಿಯಲ್ಲಿ ಆರಂಭವಾಗುತ್ತದೆ ಮತ್ತು ಅದರಿಂದಲೇ ಪರಿಸ್ಥಿತಿ ಸ್ವೀಕರಿಸಲು ಸಾಧ್ಯವಾಗುತ್ತದೆ. ನಾವು ಮನಸ್ಸಿನ ತ್ಯಾಗಮಾಡುವ ದೃಷ್ಟಿಯಿಂದ ಇಂದಿನಿಂದಲೇ ಹೆಚ್ಚೆಚ್ಚು ಪರೇಚ್ಛೆಯಂತೆ ಆಚರಣೆ ಮಾಡಲು ಪ್ರಾರಂಭಿಸೋಣ. ನೀವೆಲ್ಲರೂ ಇದೇ ದಿಶೆಯಲ್ಲಿ ಪ್ರಯತ್ನ ಮಾಡುವಿರಿ ಅಲ್ಲವೇ ?

ಆ. ಈಶ್ವರೇಚ್ಛೆಯ ಆಚರಣೆಯ ಮಹತ್ವ : ಈಶ್ವರೇಚ್ಛೆಯ ಕಡೆ ಹೋಗುವ ಸಮಯದಲ್ಲಿ ಕರ್ತೃತ್ವ, ಅಹಂಭಾವ ಮತ್ತು ಅಪೇಕ್ಷೆಗಳನ್ನು ತ್ಯಾಗ ಮಾಡಬೇಕು, ಆಗ ಎಲ್ಲಿ ಶರಣಾಗತ ಭಾವ ಜಾಗೃತವಾಗುತ್ತದೆಯೋ ಆಗ ಎಲ್ಲವೂ ಈಶ್ವರೇಚ್ಛೆಯಿಂದಲೆ ನಡೆಯುತ್ತದೆ, ಎಂಬ ಅನುಭೂತಿ ಬರುತ್ತದೆ. ಯಾವಾಗ ಸಾಧಕನಿಗೆ ಎಲ್ಲವೂ ಈಶ್ವರೇಚ್ಛೆಯಿಂದಲೇ ನಡೆಯುತ್ತಿದೆ ಎಂಬುವುದರ ಅನುಭೂತಿ ಬರುತ್ತದೆಯೋ, ಆಗ ಅವನ ಮನಸ್ಸು ಶಾಂತ ಮತ್ತು ಸ್ಥಿರವಾಗುತ್ತದೆ. ನಾನು ಏನು ಮಾಡುವುದಿಲ್ಲ, ಆದರೂ ಎಲ್ಲವೂ ಈಶ್ವರೇಚ್ಛೆಯಿಂದಲೇ ಘಟಿಸುತ್ತಿದೆ, ಇದರ ಅನುಭೂತಿಯಾದ ಕಾರಣ ಅವನು ನಿಶ್ಚಿಂತನಾಗುತ್ತಾನೆ. ಅವನು ಬುದ್ಧಿಯ ಉಪಯೋಗ ಮಾಡಿ ಹೀಗೇಕೆ ಆಯಿತು ? ಯಾವ ಕಾರಣದಿಂದ ಆಯಿತು? ಈ ವಿಚಾರ ಮಾಡದೆ ಅದನ್ನು ಸ್ವೀಕರಿಸುತ್ತಾನೆ. ಈ ಮೂಲಕ ಭಗವಂತನು ನನಗೆ ಕಲಿಸುತ್ತಿದ್ದಾನೆ. ಭಗವಂತನೇ ನನ್ನ ಸಾಧನೆಯಾಗಬೇಕೆಂದು ಇಂತಹ ಪ್ರಸಂಗವನ್ನು ಸೃಷ್ಟಿಸಿದ್ದಾನೆ. ಈ ಭಾವ ಇಟ್ಟು ಅವನು ಈಶ್ವರೇಚ್ಛೆಗೆ ಶರಣಾಗುತ್ತಾನೆ. ತನ್ನ ಮನಸ್ಸು ಮತ್ತು ಬುದ್ಧಿಯನ್ನು ಭಗವಂತನಿಗೆ ಅರ್ಪಿಸಿ (ಶರಣಾದ ಆದನಂತರ) ಭಗವಂತನೇ ಎಲ್ಲವೂ ಮಾಡುತ್ತಾನೆ ಎಂಬುದರ ಅನುಭೂತಿ ಅವನಿಗೆ ಬರುತ್ತದೆ. ಶರಣಾಗತ ಭಾವವು ಜಾಗೃತವಾದನಂತರ ಸ್ವಯಂ ಭಗವಂತನೇ ಸಾಧಕರಿಗಾಗಿ ಓಡೋಡಿ ಬರುತ್ತಾನೆ ಮತ್ತು ಅವನ ಕಾರ್ಯ ಸಂಪನ್ನಗೊಳಿಸುತ್ತಾನೆ.

ಉ. ಮನಸ್ಸಿನ ತ್ಯಾಗವಾದರೆ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯ ವಿಚಾರ ಗ್ರಹಿಸಲು ಸಾಧ್ಯವಾಗುವುದು

ಮನಸ್ಸಿನ ತ್ಯಾಗ ಮಾಡುವುದರಿಂದ ಏನು ಲಾಭವಾಗುತ್ತದೆ ಅಂದರೆ ವ್ಯಕ್ತಿಗೆ ವಿಶ್ವಮನ ಮತ್ತು ವಿಶ್ವ ಬುದ್ಧಿಯ ವಿಚಾರ ಗ್ರಹಿಸಲು ಸಾಧ್ಯವಾಗುತ್ತದೆ. ನಾವು ವಿಶ್ವಮನಸ್ಸು ಮತ್ತು ವಿಶ್ವ ಬುದ್ಧಿಗೆ ಸುಲಭ ಭಾಷೆಯಲ್ಲಿ ಭಗವಂತನ ಮನಸ್ಸು ಮತ್ತು ಭಗವಂತನ ಬುದ್ಧಿ ಹೇಳಬಹುದು. ಯಾವುದೇ ಪ್ರಸಂಗದಲ್ಲಿ ಹೇಗೆ ವರ್ತಿಸಬೇಕು? ಯಾವ ನಿರ್ಣಯ ತೆಗೆದುಕೊಳ್ಳಬೇಕು? ಇದು ನಮಗೆ ತಿಳಿಯುವುದಿಲ್ಲ. ಆದರೆ ಏನಾದರೂ ನಾವು ಭಗವಂತನ ಅನುಸಂಧಾನದಲ್ಲಿದ್ದರೆ, ಆಗ ನಮಗೆ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಅರ್ಥವಾಗುತ್ತದೆ. ಇದರ ಅರ್ಥ ನಾವು ಆ ಪ್ರಸಂಗದಲ್ಲಿ ವಿಶ್ವಮನಸ್ಸು ಮತ್ತು ವಿಶ್ವ ಬುದ್ಧಿಯ ವಿಚಾರ ಗ್ರಹಿಸಲು ಸಾಧ್ಯವಾಗಿದೆ ಎಂದಾಗುತ್ತದೆ.

ಆಧ್ಯಾತ್ಮದಲ್ಲಿ ಕೊನೆಯಲ್ಲಿ ಮನೋಲಯ ಮತ್ತು ಬುದ್ಧಿಲಯ ಸಾಧಿಸುವುದಿರುತ್ತದೆ. ಮನೋಲಯ ಮತ್ತು ಬುದ್ಧಿಲಯ ಮಾಡುವುದರಿಂದ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯ ಜೊತೆ ಏಕರೂಪವಾಗಲು ಸಾಧ್ಯವಾಗುತ್ತದೆ. ಪ್ರತ್ಯಕ್ಷ ಪರಮಪೂಜ್ಯ ಡಾಕ್ಟರರು ಇದರ ಉದಾಹರಣೆಯಾಗಿದ್ದಾರೆ. ಲೌಕಿಕ ದೃಷ್ಟಿಯಿಂದ ನೋಡಿದರೆ, ಪರಮಪೂಜ್ಯ ಡಾಕ್ಟರರು ಮನೋರೋಗ ತಜ್ಞರಾಗಿದ್ದಾರೆ. ಆದರೆ ಇಂದು ಅವರು ಗ್ರಂಥ ನಿರ್ಮಾಣ, ಧ್ವನಿ ಚಿತ್ರೀಕರಣ, ಪ್ರಸಾರ, ಜಾಲತಾಣ, ಸಂಗೀತ, ನೃತ್ಯ, ನಿರ್ಮಾಣಕಾರ್ಯ, ಶೋಧ ಕಾರ್ಯ, ಪತ್ರಿಕೋದ್ಯಮ, ಅಡಿಗೆ, ಆಯುರ್ವೇದ ಇಂತಹ ವಿವಿಧ ಕ್ಷೇತ್ರದ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಕೇವಲ ಮೇಲುಮೇಲಿನ ಮಾರ್ಗದರ್ಶನ ಮಾಡದೆ, ಅವರು ಸಮರ್ಪಕವಾಗಿ ಸಂಬಂಧಿಸಿದ ಕ್ಷೇತ್ರದಲ್ಲಿ ಕಾರ್ಯನಿರತ ವ್ಯಕ್ತಿಗಳ ಸಂದೇಹ ಪರಿಹಾರ ಮಾಡುತ್ತಾರೆ. ಪರಮಪೂಜ್ಯ ಡಾಕ್ಟರರು ವಿಶ್ವಮನ ಮತ್ತು ವಿಶ್ವಬುದ್ಧಿ ಜೊತೆಗೆ ಏಕರೂಪವಾಗಿರುವ ಕಾರಣ ಅವರಿಗೆ ಭಗವಂತನ ವಿಚಾರಗಳು ಗ್ರಹಿಸಲು ಬರುತ್ತದೆ ಮತ್ತು ಅವರು ಅದರಂತೆ ಮಾರ್ಗದರ್ಶನ ಮಾಡುತ್ತಾರೆ.

ನೀವು ಸಹ ಇಂತಹ ಯಾವುದಾದರೂ ಪ್ರಸಂಗದ ಅನುಭವ ಪಡೆದಿರಬಹುದು ಅಲ್ಲವೇ ! ಯಾವುದೇ ಪ್ರಸಂಗದಲ್ಲಿ ಇಂತಹ ಯಾವ ನಿರ್ಣಯ ತೆಗೆದುಕೊಳ್ಳಬೇಕು ಮತ್ತು ಅದು ಯೋಗ್ಯವಾಗಿತ್ತು, ಇದು ಸ್ವಲ್ಪ ಸಮಯದ ನಂತರ ಗಮನಕ್ಕೆ ಬರುತ್ತದೆ. ಹೇಗೆ ಆಗುವುದರ ಅರ್ಥ ಆ ಪ್ರಸಂಗದಲ್ಲಿ ಈಶ್ವರೇಚ್ಛೆಯನ್ನು ತಿಳಿದುಕೊಂಡ ಹಾಗೆ ಆಗಿದೆ.

ಊ. ಮನಸ್ಸಿನ ತ್ಯಾಗ ಮಾಡಲು ಮಾಡುವ ಆವಶ್ಯಕ ಪ್ರಯತ್ನ

ಮನಸ್ಸಿನ ತ್ಯಾಗಮಾಡಲು ನಾವು ಹೆಚ್ಚು ಸಮಯದವರೆಗೆ ನಾಮಜಪ ಮಾಡಲು ಪ್ರಯತ್ನಿಸೋಣ. ನಾವು ಏನಾದರೂ ಕುಳಿತು ಅರ್ಧಗಂಟೆ ನಾಮಜಪ ಮಾಡುತ್ತಿದ್ದರೆ, ಆಗ ನಾವು ಮುಕ್ಕಾಲುಗಂಟೆ ಮಾಡಲು ಸಾಧ್ಯವಿದೆಯೇ? ಎಂದು ನೋಡೋಣ. ಆಚೀಚೆ ಓಡಾಡುತ್ತಾ, ಕೆಲಸ ಮಾಡುವಾಗ, ಪ್ರಯಾಣ ಮಾಡುವಾಗ, ಅಡಿಗೆ ಮಾಡುವಾಗ, ಮನೆಯ ಕೆಲಸ ಮಾಡುವ ಸಮಯದಲ್ಲಿ, ಸ್ನಾನಾದಿ ನಿತ್ಯಕರ್ಮ ಮಾಡುವ ಸಮಯದಲ್ಲಿ ಮುಂತಾದ ಕಡೆಗಳಲ್ಲಿ ನಾಮಜಪ ಮಾಡಲು ಪ್ರಯತ್ನಿಸೋಣ. ಮನಸ್ಸನ್ನು ಭಗವಂತನ ಸಾನಿಧ್ಯದಲ್ಲಿ ಇರಿಸಲು ಭಾವ ಜಾಗೃತಿಯ ಪ್ರಯತ್ನ ಹೆಚ್ಚಿಸೋಣ ಮತ್ತು ನಮ್ಮ ಅಭಿಪ್ರಾಯ ಮತ್ತು ಮೊಂಡುತನ ಬಿಟ್ಟು ಸಾಧನೆಯ ದೃಷ್ಟಿಯಿಂದ ಹಾನಿಯಾಗದೆ ಇರುವ, ಅಂತಹ ಪ್ರಸಂಗದಲ್ಲಿ ಪರೇಚ್ಛೆಯಿಂದ ವರ್ತಿಸಲು ಪ್ರಯತ್ನಿಸೋಣ. ಹೀಗೆ ಮಾಡುವುದರಿಂದ ಹೆಚ್ಚು ಆನಂದ ಸಿಗುತ್ತದೆ. ಅದನ್ನು ಶಬ್ದದಲ್ಲಿ ವರ್ಣಿಸಲು ಅಸಾಧ್ಯ. ನಾವು ಪ್ರತ್ಯಕ್ಷ ಆಚರಣೆ ಮಾಡಿ ಅದರ ಅನುಭೂತಿ ಪಡೆಯೋಣ. ದೇವರು ನಮ್ಮಿಂದ ಈ ಪ್ರಯತ್ನ ಮಾಡಿಸಿಕೊಳ್ಳುವವರಿದ್ದಾರೆ. ದೇವರೇ ನಮ್ಮನ್ನು ಈ ಮಾರ್ಗಕ್ಕೆ ಕರೆದುಕೊಂಡು ಬಂದಿದ್ದಾರೆ, ಹಾಗಾದರೆ ಪ್ರಯತ್ನ ಮಾಡುವ ಚೈತನ್ಯವನ್ನು ಸಹ ಅವರೇ ನೀಡುವವರಿದ್ದಾರೆ! ದೇವರು ನಮಗೆ ಸಾಧನೆಯ ಪ್ರಯತ್ನಕ್ಕಾಗಿ ಶಕ್ತಿ ನೀಡಿದ್ದಾರೆ. ನಾವು ಕೇವಲ ನಮ್ಮ ಕ್ರಿಯಮಾಣವನ್ನು ಉಪಯೋಗಿಸಿ ಅದನ್ನು ಜಾಗೃತವಿಡಬೇಕಾಗಿದೆ.

Leave a Comment