ಸತ್ಸೇವೆ ಸತ್ಸಂಗ – 9

ಇಂದು ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಎಲ್ಲ ಸಂತರೂ ‘ಅಹಂಕಾರ ಮಾನವನ ಎಲ್ಲಕ್ಕಿಂತ ದೊಡ್ಡ ಶತ್ರುವಾಗಿದೆ’ ಎಂದು ಹೇಳಿದ್ದಾರೆ. ಈ ಅಹಂಕಾರವನ್ನು ಹೋಗಲಾಡಿಸುವುದು ಹೇಗೆ ಎಂಬುದರ ಕುರಿತು ಪ್ರಾಯೋಗಿಕ ಅಂಶಗಳನ್ನು ನಾವು ಇಂದು ಸತ್ಸಂಗದಲ್ಲಿ ತಿಳಿದುಕೊಳ್ಳೋಣ.

ಅಹಂ ನಿರ್ಮೂಲನೆಯ ಮಹತ್ವ

ವ್ಯಕ್ತಿಯ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಜೀವನವು ಆನಂದಮಯವಾಗಿರುವುದಕ್ಕಾಗಿ ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆಯ ಪಾತ್ರವೇನು ಎಂಬುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇಂದಿನಿಂದ ಮುಂದಿನ ಕೆಲವು ಸತ್ಸಂಗಗಳಲ್ಲಿ ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳೋಣ. ಅಹಂ ಎಂದರೆ ಅಹಂಕಾರ ಅಥವಾ ಗರ್ವ! ಎಲ್ಲ ಸಂತರೂ ಹೇಳಿರುವುದೇನೆಂದರೆ ಮಾನವನ ಎಲ್ಲಕ್ಕಿಂತ ದೊಡ್ಡ ಶತ್ರು ಅಹಂಕಾರ! ಅಹಂ ನಿರ್ಮೂಲನ ಸತ್ಸಂಗಗಳಲ್ಲಿ ನಾವು ಅಹಂನ ವಿವಿಧ ಅಂಶಗಳು ಯಾವುವು, ಅದರ ದುಷ್ಪರಿಣಾಮಗಳೇನು, ಅದರ ಮೇಲೆ ಜಯ ಸಾಧಿಸಲು ಹೇಗೆ ಪ್ರಯತ್ನಿಸಬೇಕು ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.

ಅ. ಅಹಂನ ಸ್ವರೂಪ

ಚಿಕ್ಕವರು-ದೊಡ್ಡವರು, ಬಡವ-ಬಲ್ಲಿದ, ಸುಶಿಕ್ಷಿತ-ಅಶಿಕ್ಷಿತ ಹೀಗೆ ಎಲ್ಲರಲ್ಲಿಯೂ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಅಹಂ ಇದ್ದೇ ಇರುತ್ತದೆ. ಶಿಕ್ಷಣದ ಅಹಂಕಾರ, ಶ್ರೀಮಂತಿಕೆಯ ಅಹಂಕಾರ, ವಿದ್ವತ್ತಿನ ಅಹಂಕಾರ, ಒಳ್ಳೆಯವನಾಗಿರುವುದರ ಅಹಂಕಾರ, ಜಾತಿ-ಧರ್ಮದ ಅಹಂಕಾರ, ನೌಕರಿ-ವ್ಯವಹಾರದ ಅಹಂಕಾರ !! ಅಹಂ, ಕೃಷಿಭೂಮಿಯಲ್ಲಿರುವ ಕಳೆಯಂತಿರುತ್ತದೆ. ಕೃಷಿಭೂಮಿಯಲ್ಲಿನ ಕಳೆಯನ್ನು ಬೇರುಸಮೇತ ಕಿತ್ತು ಹಾಕಿದ ಹೊರತು ಒಳ್ಳೆಯ ಫಸಲು ಸಿಗುವುದೇ ? ಇಲ್ಲವಲ್ಲ! ಅಂತೆಯೇ ಅಹಂ ಅನ್ನು ಸಂಪೂರ್ಣವಾಗಿ ನಷ್ಟ ಮಾಡಿದ ಹೊರತು ಪರಮೇಶ್ವರನ ಕೃಪೆಯ ಫಸಲು ಬರಲಾರದು. ಅಹಂ ಅನ್ನು ಲಯ ಮಾಡುವುದೇ ಸಾಧನೆಯ ಉದ್ದೇಶವಾಗಿರುವುದರಿಂದ ಅಹಂ ನಿರ್ಮೂಲನೆಗಾಗಿ ವಿಶೇಷ ಅರಿವಿನೊಂದಿಗೆ ಪ್ರಯತ್ನಿಸುವುದು ಆವಶ್ಯಕವಿದೆ.

ಆ. ಅಹಂಕಾರದ ವ್ಯಾಖ್ಯೆ

ಅಹಂಕಾರದ ವ್ಯಾಖ್ಯೆ ಏನು ? ತನ್ನನ್ನು ಇತರರಿಂದ ಹಾಗೂ ಬ್ರಹ್ಮ ಅಥವಾ ಈಶ್ವರನಿಂದ ಬೇರೆ ಎಂದು ಭಾವಿಸುವುದೆಂದರೆ ಅಹಂ ! ನನ್ನ ಶರೀರ, ನನ್ನ ಮನಸ್ಸು, ನನ್ನ ಪ್ರಾಣ, ನನ್ನ ಬುದ್ಧಿ, ನನ್ನ ಸಂಪತ್ತು, ನನ್ನ ಗಂಡ/ಮಡದಿ-ಮಕ್ಕಳು, ನನಗೆ ಸುಖ ಸಿಗಬೇಕು ಇಂತಹ ವಿಚಾರಗಳು ಅಹಂನಿಂದ ನಿರ್ಮಾಣವಾಗುತ್ತವೆ. ಅಹಂಕಾರ, ಅಹಂಭಾವ, ಗರ್ವ, ದುರಾಭಿಮಾನ, ನನ್ನತನ, ಜಂಬ ಇವೆಲ್ಲವೂ ’ಅಹಂ’ ಗೆ ಸಂಬಂಧಪಟ್ಟ ಸಮಾನಾರ್ಥ ಪದಗಳಾಗಿವೆ. ’ನಾನು’, ’ನನ್ನದು’, ’ನನಗೆ’ ಈ ವಿಧದ ಅಭಿಮಾನವನ್ನು ಧರಿಸುವುದೆಂದರೆ ಅಹಂ. ’ನಾನು’ ಎಂದರೆ ನಿರ್ದಿಷ್ಟವಾಗಿ ಏನು? ’ನಾನು’ ಯಾರು ? ನಾವು ಈರುಳ್ಳಿಯ ಸಿಪ್ಪೆಯನ್ನು ತೆಗೆಯತೊಡಗಿದಾಗ ಸಿಪ್ಪೆಗಳು ಬರುತ್ತಲೇ ಇರುತ್ತವೆ; ಆದರೆ ಅದರಲ್ಲಿ ’ಸಾರ’ ಎಂದು ಏನೂ ಕೈಗೆ ಸಿಗುವುದಿಲ್ಲ. ಇದೇ ರೀತಿ ವಿಚಾರ ಮಾಡಿದರೆ ’ನಾನು’ ಎಂಬ ವಸ್ತುವು ಸಿಗುವುದಿಲ್ಲ.

ಇ. ಸ್ವಭಾವದೋಷಗಳೆಂದರೆ ಅಹಂಕಾರದ ಪ್ರಕಟೀಕರಣ

ಇದಕ್ಕೂ ಮೊದಲಿನ ಸತ್ಸಂಗಗಳಲ್ಲಿ ನಾವು ಸ್ವಭಾವದೋಷಗಳ ಬಗ್ಗೆ ವಿವರವಾಗಿ ತಿಳಿದುಕೊಂಡಿದ್ದೇವೆ. ಸ್ವಭಾವದೋಷ ಎಂದರೆ ಒಂದು ವಿಧದಲ್ಲಿ ವ್ಯಕ್ತಿಯಲ್ಲಿರುವ ಅಹಂಕಾರದ ಪ್ರಕಟೀಕರಣ. ಉದಾಹರಣೆಗೆ, ಯಾರಾದರೊಬ್ಬರಲ್ಲಿ ಆಲಸ್ಯ ಎಂಬ ಸ್ವಭಾವದೋಷವಿದ್ದರೆ ಅದರ ಹಿಂದೆ ಅಹಂಕಾರದ ‘ತನಗೆ ಕಷ್ಟ ಕೊಡದಿರುವುದು’, ‘ಸ್ವಂತ ಸುಖದ ಬಗ್ಗೆ ವಿಚಾರ ಮಾಡುವುದು’ ಈ ಅಂಶಗಳು ಸಕ್ರಿಯವಾಗಿರಬಹುದು. ಯಾರಾದರೊಬ್ಬರಲ್ಲಿ ’ನಕಾರಾತ್ಮಕ ವಿಚಾರ ಮಾಡುವುದು’ ಎಂಬ ಸ್ವಭಾವದೋಷವಿದ್ದರೆ ಅದರ ಹಿಂದೆ ಅಹಂಕಾರದ ‘ತನ್ನ ಮನಸ್ಸಿನಂತೆ ಆಗಬೇಕು’ ಎಂದೆನಿಸುವುದು, ‘ಪರಿಸ್ಥಿತಿಯನ್ನು ಸ್ವೀಕರಿಸದಿರುವುದು’, ‘ತನ್ನಿಂದ ಅಥವಾ ಇತರರಿಂದ ಹೆಚ್ಚು (ತೀವ್ರ) ಅಪೇಕ್ಷೆ ಇಟ್ಟುಕೊಳ್ಳುವುದು’ ಈ ಅಂಶಗಳು ಸಕ್ರಿಯವಾಗಿರಬಹುದು. ಅಹಂಕಾರವು ಸಾಧನಾಮಾರ್ಗದಲ್ಲಿ ಅಡೆತಡೆಯಾಗಿದೆ ಎಂದಷ್ಟೇ ಇಲ್ಲ, ಅದು ವ್ಯಾವಹಾರಿಕ ಹಾಗೂ ಕೌಟುಂಬಿಕ ಜೀವನದಲ್ಲಿಯೂ ಹಾನಿಕಾರಕವಾಗಿದೆ.

ಈ. ಅಹಂನಿಂದಾಗುವ ನಷ್ಟಗಳು

೧. ಅಹಂನಿಂದಾಗಿ ನಿಜವಾದ ಅರ್ಥದಲ್ಲಿ ಸುಖವನ್ನು ಭೋಗಿಸಲಾಗದಿರುವುದು : ಅಹಂ ಅನ್ನು ತ್ಯಜಿಸದೆ ಸಾಮಾನ್ಯ ಸುಖವನ್ನು ಕೂಡ ಭೋಗಿಸಲಾಗುವುದಿಲ್ಲ. ಉದಾಹರಣೆಗೆ, ತನಗೆ ಇಷ್ಟವಾಗಿರುವ ತಿನಿಸನ್ನು ತಿನ್ನುವಾಗ ನಾವು, ನಾನು ಒಬ್ಬ ದೊಡ್ಡ ಪ್ರಾಧ್ಯಾಪಕ, ಶ್ರೀಮಂತ ಅಥವಾ ದೊಡ್ಡ ವ್ಯಕ್ತಿ ಆಗಿದ್ದೇನೆ ಎಂಬುದರ ಅರಿವು ಇಟ್ಟೂಕೊಂಡರೆ ಆ ಸುಖವನ್ನು ಎಂದಿಗೂ ಭೋಗಿಸಲಾಗುವುದಿಲ್ಲ. ಯಾವುದೇ ಭೌತಿಕ ಸುಖವನ್ನು ಭೋಗಿಸುತ್ತಿರುವಾಗ ನಮಗೆ ನಮ್ಮ ಪದವಿ ಅಥವಾ ವಿದ್ವತ್ತಿನ ಬಗ್ಗೆ ಅರಿವೇ ಇಲ್ಲದಂತಾದರೆ ಮಾತ್ರ ಆ ಸುಖವನ್ನು ನಿಜವಾದ ಅರ್ಥದಲ್ಲಿ ಭೋಗಿಸಲು ಸಾಧ್ಯವಾಗುತ್ತದೆ. ಒಬ್ಬರ ಪರಿಚಯ ಮಾಡಿಕೊಳ್ಳುತ್ತಿರುವಾಗ ’ನಾನು ನನ್ನ ಬಗ್ಗೆ ಏಕೆ ಮಾತನಾಡಲಿ ? ಎದುರಿನ ವ್ಯಕ್ತಿಯೇ ನನ್ನ ಜೊತೆ ಮೊದಲು ಮಾತನಾಡಲಿ’ ಎಂಬ ಅಪೇಕ್ಷೆಯಿದ್ದರೆ ವ್ಯಕ್ತಿಯಲ್ಲಿ ಸಹಜತೆಯಿರುವುದಿಲ್ಲ. ಚಿಕ್ಕ ಮಗುವಿನ ಜೊತೆ ಆಟವಾಡುತ್ತಿರುವಾಗ ತನ್ನ ಪದವಿಯ ಬಗ್ಗೆ ತೀವ್ರ ಅರಿವು ಇದ್ದರೆ ಆಟವಾಡುವಾಗ ಆನಂದವೆನಿಸುವುದಿಲ್ಲ. ಅಹಂಕಾರವು ಆನಂದಪ್ರಾಪ್ತಿಯಲ್ಲಿನ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗಿದೆ.

೨. ಈಶ್ವರನಿಗೆ ಪ್ರಿಯವಾಗದಿರುವುದು : ಶ್ರೀ ಗೋಂದವಲೇಕರ್ ಮಹರಾಜರು ಹೇಳಿದ್ದಾರೆ ’ಒಂದು ವೇಳೆ ಸರ್ವಸ್ವವನ್ನು ಕೊಡದಿದ್ದರೂ ನಡೆದೀತು; ಆದರೆ ’ಸ್ವ’ ಎಂದರೆ ಅಹಂ ಅನ್ನು ಕೊಡಬೇಕು. ಕರ್ಣನು ಎಲ್ಲವನ್ನೂ ಕೊಟ್ಟನು, ಆದರೆ ’ಸ್ವ’ ಕೊಡಲಿಲ್ಲ; ಇದಕ್ಕೆ ವಿರುದ್ಧವಾಗಿ ಗೀತೆಯನ್ನು ಕೇಳಿಸಿಕೊಂಡ ನಂತರ ಅರ್ಜುನನು ’ಸ್ವ’ ಅನ್ನು ಕೊಟ್ಟನು; ಆದ್ದರಿಂದ ಅವನು ಶ್ರೀಕೃಷ್ಣನಿಗೆ ಪ್ರಿಯನಾದನು.

೩. ದುಃಖವು ಪಾಲಿಗೆ ಬರುವುದು : ಅಹಂಕಾರದಿಂದಾಗುವ ಎಲ್ಲಕ್ಕಿಂತ ದೊಡ್ಡ ನಷ್ಟವೆಂದರೆ ಅಹಂನಿಂದ ದುಃಖವು ಪಾಲಿಗೆ ಬರುತ್ತದೆ. ಸಮರ್ಥ ರಾಮದಾಸ ಸ್ವಾಮಿಗಳು ದಾಸಬೋಧದ\ಲ್ಲಿ ಹೀಗೆ ಹೇಳಿದ್ದಾರೆ,

ಮೀ ಕರತೊ ಮ್ಹಣಶೀ ’ ತೇಣೇ ತೂ ದುಃಖಿ ಹೋಶಿ |
ರಾಮ ಕರತಾ ಮ್ಹಣತಾ ಪಾವಶಿ | ಯಶ, ಕೀರ್ತಿ ಪ್ರತಾಪ ||

ಅರ್ಥ : ನಾನು ಮಾಡುತ್ತೇನೆ ಎಂದರೆ ದುಃಖ ಪಡೆಯುವೆ | ರಾಮನು ಮಾಡುವವ ಎಂದರೆ ಪಡೆಯುವೆ ಯಶಸ್ಸು ಮತ್ತು ಕೀರ್ತಿಯ ||

ಅಹಂ ಎಷ್ಟು ಹೆಚ್ಚೋ ಆ ವ್ಯಕ್ತಿಯು ಅಷ್ಟೇ ಹೆಚ್ಚು ದುಃಖಿತನಾಗುತ್ತಾನೆ. ಉದಾಹರಣೆಗೆ, ಒಬ್ಬರಲ್ಲಿ ತನಗೆ ಮಾನ/ಗೌರವ ಸಿಗಬೇಕು ಎಂಬ ಅಪೇಕ್ಷೆಯಿದ್ದರೆ ’ಓರ್ವ ನೆಂಟರು ತಮ್ಮ ಮನೆಯಲ್ಲಿ ನಡೆದ ವಿವಾಹಕ್ಕೆ ನನಗೆ ಆಮಂತ್ರಣ ಕೊಡಲಿಲ್ಲ ಅಥವಾ ತಡವಾಗಿ ಕೊಟ್ಟರು ಅಥವಾ ಯೋಗ್ಯ ಪದ್ಧತಿಯಲ್ಲಿ ಕೊಡಲಿಲ್ಲ’ ಎಂದೆನಿಸಿ ಮನಸ್ಸಿನಲ್ಲಿ ನಕಾರಾತ್ಮಕತೆಯು ಬರಬಹುದು. ಇದಕ್ಕೆ ವಿರುದ್ಧವಾಗಿ ವ್ಯಕ್ತಿಗೆ ಮಾನ/ಗೌರವದ ಅಪೇಕ್ಷೆಯಿಲ್ಲದಿದ್ದರೆ ಆಮಂತ್ರಣ ಸಿಗುವುದರಿಂದ ಆನಂದವಾಗುವುದಿಲ್ಲ ಅಥವಾ ಆಮಂತ್ರಣ ಸಿಗದೇ ಇರುವುದರಿಂದ ದುಃಖವೂ ಆಗುವುದಿಲ್ಲ. ಮಾನಸಿಕ ರೋಗವಿರುವ ವ್ಯಕ್ತಿಗಳಲ್ಲಿ ಅಹಂ, ಸಾಮಾನ್ಯ ವ್ಯಕ್ತಿಗಿಂತ ಹೆಚ್ಚು ಇರುತ್ತದೆ. ಆದ್ದರಿಂದ ಅವರು ದುಃಖಿತರಾಗಿರುತ್ತಾರೆ. ನನ್ನ ಸಂಪತ್ತು, ನನ್ನ ಶರೀರ, ಈ ವಿಧದ ವಿಚಾರಗಳಿದ್ದರೆ ಸಂಪತ್ತು ಕಡಿಮೆಯಾದಾಗ ಅಥವಾ ಶಾರೀರಿಕ ಕಾಯಿಲೆ ಬಂದಾಗ ವ್ಯಕ್ತಿಗೆ ದುಃಖವಾಗುತ್ತದೆ. ಮತ್ತೊಬ್ಬರ ಸಂಪತ್ತು ಕಡಿಮೆಯಾದರೆ ಅಥವಾ ಮತ್ತೊಬ್ಬರಿಗೆ ಕಾಯಿಲೆಯಾದರೆ ಆ ವ್ಯಕ್ತಿಗೆ ದುಃಖವಾಗುವುದಿಲ್ಲ. ಅಹಂನಿಂದ ಮನಸ್ಸಿಗೆ ಆಗುವ ದುಃಖವು ಕೆಲವೊಮ್ಮೆ ಶಾರೀರಿಕ ವೇದನೆಗಳಿಗಿಂತಲೂ ಹೆಚ್ಚು ತೊಂದರೆ ಕೊಡುವಂತಹದ್ದಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಸಂತರು, ‘ಎಲ್ಲವೂ ಪರಮೇಶ್ವರನದ್ದು’ ಎಂದು ಭಾವಿಸುತ್ತಾರೆ, ಯಾವುದನ್ನೂ ತನ್ನದು ಎಂದು ಭಾವಿಸುವುದಿಲ್ಲ; ಆದ್ದರಿಂದ ಅವರು ದುಃಖಿತರಾಗುವುದಿಲ್ಲ, ಸದಾ ಆನಂದದಲ್ಲಿಯೇ ಇರುತ್ತಾರೆ.

೪. ಅಹಂಯುಕ್ತ ಕರ್ಮಾಗಳು ನಾಶವಾಗುತ್ತವೆ : ಅಹಂಯುಕ್ತ ಕರ್ಮಗಳ ಸಂದರ್ಭದಲ್ಲಿ ‘ಕಾಲಃ ಪಿಬತಿ ತದ್ ರಸಂ ।’ ಎಂದರೆ ಕಾಲವು ಅದರ ರಸವನ್ನು ಕುಡಿದು ಬಿಡುತ್ತದೆ ಎಂದು ಹೇಳಲಾಗಿದೆ. ಇದರ ಅರ್ಥವೇನೆಂದರೆ ಅಹಂಯುಕ್ತ ಕರ್ಮವು ಕಾಲಪ್ರವಾಹದಲ್ಲಿ ನಶಿಸಿ ಹೋಗುತ್ತದೆ. ಇದರ ಮಹತ್ವವು ಹಿಂದಿನ ಕಾಲದಲ್ಲಿ ತಿಳಿದಿತ್ತು. ಆದ್ದರಿಂದ ಋಷಿಮುನಿಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ತನ್ನ ಸ್ವಂತದ ಹೆಸರು ಅಥವಾ ಕೀರ್ತಿ ಇವುಗಳ ಬಗ್ಗೆ ಯಾವುದೇ ಅಪೇಕ್ಷೆಗಳನ್ನು ಇಟ್ಟುಕೊಳ್ಳದೇ ನಿಷ್ಕಾಮ ಭಾವದಿಂದ ಕರ್ಮಗಳನ್ನು ಮಾಡುತ್ತಿದ್ದರು. ಇದರ ಉತ್ತಮ ಹಾಗೂ ಸರ್ವಶ್ರೇಷ್ಠ ಉದಾಹರಣೆಗಳೆಂದರೆ ನಮ್ಮ ವೇದಗಳು ಹಾಗೂ ಪ್ರಾಚೀನ ಶಿಲ್ಪಗಳು. ವೇದಗಳ ಮೇಲೆ ಯಾರ ಹೆಸರೂ ಬರೆದಿಲ್ಲ ಅಥವಾ ಯಾವುದೇ ಶಿಲ್ಪಗಳ ಮೇಲೆ ಯಾರ ಹೆಸರೂ ಕೆತ್ತಲಾಗಿಲ್ಲ; ಏಕೆಂದರೆ ಅವರಿಗೆ ಹೆಸರು ಗಳಿಸಬೇಕೆಂಬ ಅಭಿಲಾಷೆಯಿರಲಿಲ್ಲ ಅಥವಾ ಕೀರ್ತಿಯ ಕಾಮನೆಯಿರಲಿಲ್ಲ; ಆದ್ದರಿಂದಲೇ ವೇದಗಳು ಹಾಗೂ ಶಿಲ್ಪಕೃತಿಗಳು ಅಮರವಾಗಿದೆ. ಆದರೆ ನಾವು ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ಕರ್ತೃತ್ವವನ್ನು ತೆಗೆದುಕೊಳ್ಳುತ್ತೇವೆ ಅಲ್ಲವೇ? ಇಂತಿಂತಹ ಒಂದು ಸಂಗತಿಯು ನನ್ನಿಂದಾಯಿತು ಅಥವಾ ಆಗುತ್ತಿದೆ ಎಂಬ ಭಾವನೆಯಿದ್ದರೆ ಅದು ನಮ್ಮ ಅಹಂ ಆಗಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು.

೫. ಕಾರ್ಯದಲ್ಲಿ ವಿಘ್ನಗಳು ಬರುವುದು : ಅಹಂಕಾರದಿಂದ ಏನಾಗುತ್ತದೆ ? ಅಹಂನಿಂದ ಕಾರ್ಯದಲ್ಲಿ ವಿಘ್ನಗಳು ಬರುತ್ತವೆ ಮತ್ತು ಅದರಲ್ಲಿ ನಾವು ಯಶಸ್ವಿಯಾಗುವುದಿಲ್ಲ. ಪಠಣ, ಹೋಮ-ಹವನಾದಿಗಳು, ನಾಮಜಪ ಇವುಗಳಂತಹ ಕೃತಿಗಳನ್ನು ಮಾಡುವಾಗ ಅಹಂನ ಭಾವನೆಯಿದ್ದರೆ ವಿಘ್ನಗಳು ಬರುತ್ತವೆ; ಇಲ್ಲದಿದ್ದರೆ ಬಹುಶಃ ಬರುವುದಿಲ್ಲ. ಇಂತಹ ಅಹಂಕಾರದ ನಿರ್ಮೂಲನೆ ಮಾಡಬೇಕಾಗಿದ್ದರೆ ಮೊದಲಿಗೆ ನಾವು ಅಹಂ ನ ಸ್ವರೂಪವನ್ನು ತಿಳಿದುಕೊಳ್ಳಬೇಕಾಗಿದೆ. ನಮ್ಮಲ್ಲಿ ಯಾವ ಸ್ವರೂಪದ ಅಹಂ ಇದೆ ಎಂದು ನಮಗೆನಿಸುತ್ತದೆ ? ನಮ್ಮ ಅಹಂ ಯಾವ ರೂಪದಲ್ಲಿ ಉಕ್ಕಿ ಬರುತ್ತದೆ ಎಂದು ವಿಚಾರ ಮಾಡಿ ನೋಡಿ.

ಉ. ಅಹಂನ ಅಂಶಗಳ ಕೆಲವು ಉದಾಹರಣೆಗಳು

ಅಹಂಗೆ ಹಲವು ಅಂಶಗಳಿವೆ, ಉದಾಹರಣೆಗೆ, ತನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂಬ ಅಪೇಕ್ಷೆಯಿರುವುದು, ತುಲನೆ ಮಾಡುವುದು, ಸ್ವಕರ್ತೃತ್ವದ ಅಭಿಮಾನವಿರುವುದು, ತನ್ನನ್ನು ಇತರರಿಂದ ಶ್ರೇಷ್ಠವೆಂದು ಪರಿಗಣಿಸುವುದು, ಇತರರನ್ನು ಸದಾ ಟೀಕೆ ಮಾಡುವುದು, ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವುದು, ಕರ್ತೃತ್ವ ತನ್ನಲ್ಲಿ ಇಟ್ಟುಕೊಳ್ಳುವುದು, ತನ್ನ ಮನಸ್ಸಿನಂತಾಗಬೇಕು ಎಂದೆನಿಸುವುದು, ಸ್ವಂತ ಸುಖದ ಬಗ್ಗೆ ವಿಚಾರ ಮಾಡುವುದು. ದಿನನಿತ್ಯದ ಜೀವದಲ್ಲಿನ ಇದರ ಕೆಲವು ಉದಾಹರಣೆಗಳನ್ನು ನೋಡೋಣ.

೧. ತನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂಬ ಅಪೇಕ್ಷೆ : ಗೃಹಿಣಿಯೊಬ್ಬಳು ಒಂದು ಹೊಸ ಬಗೆಯ ತಿಂಡಿಯನ್ನು ಮನಸ್ಸಿಟ್ಟು ತಯಾರಿಸಿದ್ದು ಅದು ರುಚಿಕರವೂ ಆಗಿದ್ದಾಗ, ಮನೆಯಲ್ಲಿ ಯಾರೂ ಮೆಚ್ಚುಗೆ ವ್ಯಕ್ತಪಡಿಸದಿದ್ದರೆ, ಅವಳು ಪಟ್ಟ ಕಷ್ಟದ ಕಡೆ ಯಾರೂ ಗಮನ ಕೊಡದಿದ್ದರೆ ಅವಳಿಗೆ ದುಃಖವಾಗುತ್ತದೆ. ಗೃಹಿಣಿಗೆ ಅನಿಸುವುದೇನೆಂದರೆ, ನಾನು ಇಷ್ಟು ರುಚಿಯಾಗಿ ತಿಂಡಿಯನ್ನು ತಯಾರಿಸಿದೆ, ಎಲ್ಲರಿಗಾಗಿ ಎಷ್ಟು ಮಾಡುತ್ತೇನೆ, ಆದರೆ ಯಾರೂ ಅದನ್ನು ಗಮನಿಸುವುದೇ ಇಲ್ಲ, ಇತ್ಯಾದಿ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಎಲ್ಲ ವಿಚಾರಪ್ರಕ್ರಿಯಯ ಹಿಂದೆ, ಇತರರು ತನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕೆಂಬ ಅಪೇಕ್ಷೆ ಎಂಬ ಅಹಂನ ಅಂಶವಿರುತ್ತದೆ. ಅದಕ್ಕೆ ಗಮನ ಸಿಗದಿದ್ದ ಕಾರಣ ಗೃಹಿಣಿಗೆ ಬೇಸರವೆನಿಸುತ್ತದೆ.

೨. ತುಲನೆ ಮಾಡುವುದು : ತುಲನೆ ಮಾಡುವುದು ಎಂಬುದು ಕೂಡ ಅಹಂನ ಬಹು ದೊಡ್ಡ ಅಂಶವಾಗಿದೆ. ತನ್ನ ಬಳಿ ಯಾವುದು ಇಲ್ಲವೋ ಅದರ ಬಗ್ಗೆ ವಿಚಾರ ಮಾಡುತ್ತಾ ತನ್ನನ್ನು ತಾನು ಇತರರೊಂದಿಗೆ ಹೋಲಿಸುವುದರಿಂದ ವ್ಯಕ್ತಿಗೆ ದುಃಖವಾಗುತ್ತದೆ. ಉದಾ. ಮಾತನಾಡುವಾಗ ಕೀಳರಿಮೆಯಿರುವ ವ್ಯಕ್ತಿಯು, ಪ್ರಭಾವಿ ವಕ್ತಾರನಾಗಿರುವ ವ್ಯಕ್ತಿಯೊಂದಿಗೆ ತನ್ನ ತುಲನೆ ಮಾಡಿಕೊಂಡಾಗ, ’ಇದು ನನಗೆ ಸಾಧ್ಯವಿಲ್ಲ’ ಎಂಬ ಭಾವನೆಯಿಂದ ದುಃಖಿತನಾಗುತ್ತಾನೆ.

೩. ಅಪೇಕ್ಷೆಯಿರುವುದು : ಸ್ವಕರ್ತೃತ್ವದ ಅಭಿಮಾನವಿರುವ ವ್ಯಕ್ತಿಯು ಬುದ್ಧಿಚಾತುರ್ಯ ಮತ್ತು ವ್ಯಾವಹಾರಿಕ ಕೌಶಲ್ಯವೆಂಬ ಗುಣಗಳಿಂದಾಗಿ ವ್ಯವಹಾರದಲ್ಲಿ ಉಚ್ಚ ಮಟ್ಟದ ಯಶಸ್ಸನ್ನು ಗಳಿಸಿದಾಗ, ತನ್ನ ಮಕ್ಕಳು ಕೂಡ ವ್ಯವಹಾರವನ್ನು ಮುಂದೆ ಬೆಳೆಸಬೇಕು ಮತ್ತು ತನ್ನಂತೆಯೇ ಯಶಸ್ಸನ್ನು ಗಳಿಸಬೇಕು ಎಂದು ತಂದೆಗೆ ಅನಿಸುತ್ತಿರುತ್ತದೆ; ಆದರೆ ಪ್ರತ್ಯಕ್ಷದಲ್ಲಿ ಮಗನು ವ್ಯವಹಾರದಲ್ಲಿ ಆಸಕ್ತಿ ಇಲ್ಲದ ಕಾರಣ ನೌಕರಿ ಮಾಡಲು ಬಯಸುತ್ತಾನೆ. ಇದರಿಂದ ತಂದೆಗೆ ದುಃಖವಾಗುತ್ತದೆ. ಇದರ ಹಿಂದೆ ಸ್ವಕರ್ತೃತ್ವದ ಅಭಿಮಾನ ಮತ್ತು ಅಪೇಕ್ಷೆ ಈ ಅಹಂನ ಅಂಶಗಳು ಕಾರ್ಯನಿರತವಾಗಿರುತ್ತವೆ.

೪. ಪ್ರತಿಷ್ಠೆ ಕಾಪಾಡಿಕೊಳ್ಳುವುದು : ಪ್ರತಿಯೊಬ್ಬನೂ ತನ್ನ ಬಗ್ಗೆ ಒಂದು ಪ್ರತಿಮೆಯನ್ನು ನಿರ್ಮಿಸಿಕೊಂಡಿರುತ್ತಾನೆ. ಅದು ಬಹಳಷ್ಟು ಬಾರಿ ವಾಸ್ತವಕ್ಕಿಂತ ಬೇರೆಯೇ ಆಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಅಥವಾ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ’ಪ್ರತ್ಯಕ್ಷಕ್ಕಿಂತ ಪ್ರತಿಷ್ಠೆಯು ಉತ್ಕಟ’ ಎಂದು ಒಂದು ಕವಿತೆಯಲ್ಲಿ ಹೇಳಲಾಗಿದೆ. ಈ ಪ್ರತಿಷ್ಠೆಯಿಂದ ಬಹಳಷ್ಟು ಅಡಚಣೆಗಳು ಬರುತ್ತವೆ. ಕೆಲವೊಮ್ಮೆ ತನ್ನಿಂದಾದ ತಪ್ಪನ್ನು ಪ್ರಾಮಾಣಿಕತೆಯಿಂದ ಹೇಳಲೂ ಸಾಧ್ಯವಾಗುವುದಿಲ್ಲ. ಹೀಗೆ ಮಾಡುವಾಗ ’ಎದುರಿನ ವ್ಯಕ್ತಿಗೆ ನನ್ನ ಬಗ್ಗೆ ಏನೆನಿಸುವುದೋ’ ಎಂಬ ವಿಚಾರವು ಅತ್ಯಂತ ತೀವ್ರವಾಗಿರುತ್ತದೆ. ಉದಾಹರಣೆಗೆ, ನಾವು ಒಂದು ಮಹತ್ವದ ಕಾರ್ಯವನ್ನು ಮಾಡಲು ಮರೆತಾಗ, ಎದುರಿನ ವ್ಯಕ್ತಿಗೆ ’ಆ ಮಹತ್ವದ ಕಾರ್ಯವನ್ನು ಮರೆತು ಬಿಟ್ಟೆ’ ಎಂದು ಪ್ರಾಮಾಣಿಕವಾಗಿ ಹೇಳುತ್ತೇವೆಯೋ ಅಥವಾ ’ಕೆಲಸದ ಒತ್ತಡದಲ್ಲಿ ಅಥವಾ ಇತರ ಕೆಲಸಗಳಿಂದ ಮರೆತು ಹೋದೆ’ ಎಂದು ಸತ್ಯವನ್ನು ತಿರುಚಿ ಹೇಳುತ್ತೇವೆಯೋ ? ನಾವು ಬೇರೆ ಕಾರಣಗಳನ್ನು ಹೇಳುತ್ತಿದ್ದರೆ ನಮ್ಮಲ್ಲಿ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವ ಅಹಂನ ಅಂಶ ಕಾರ್ಯನಿರತವಾಗಿದೆ ಎಂದು ತಿಳಿದುಕೊಳ್ಳಬೇಕು. ಹೀಗೆ ಹಲವಾರು ಅಂಶಗಳಿವೆ.

ಕೈಗಳಿಂದ ತುಂಬ ಸನ್ನೆಗಳನ್ನು ಮಾಡುತ್ತಾ ಮಾತನಾಡುವುದು, ದೊಡ್ಡ ಸ್ವರದಲ್ಲಿ ಮಾತನಾಡುವುದು, ಯಾರಾದರೂ ಮಾತನಾಡುತ್ತಿದ್ದಾಗ ಅವರ ಮಾತಿನ ಮಧ್ಯದಲ್ಲಿ ಮಾತನಾಡುವುದು, ಇವು ಕುಡ ಅಹಂಕಾರದ ಲಕ್ಷಣಗಳಾಗಿವೆ. ಅಹಂನ ಅಂಶಗಳು ನಮ್ಮ ಸಾಧನೆಯಲ್ಲಿ ಯಾವ ರೀತಿ ಅಡ್ಡಿಯಾಗುತ್ತವೆ, ಈ ಅಹಂಕಾರದಿಂದ ವ್ಯಾವಹಾರಿಕ ಜೀವನದಲ್ಲಿಯೂ ಹೇಗೆ ನಷ್ಟವಾಗುತ್ತದೆ, ಇದರ ಮೇಲೆ ಜಯ ಗೊಳಿಸುವುದು ಹೇಗೆ ಇವುಗಳನ್ನು ನಾವು ಮುಂದಿನ ಸತ್ಸಂಗದಲ್ಲಿ ತಿಳಿದುಕೊಳ್ಳೋಣ. ನಾವೆಲ್ಲರೂ ಅಹಂ ನಿರ್ಮೂಲನೆಗಾಗಿ ಪ್ರಯತ್ನ ಮಾಡೋಣವಲ್ಲವೇ ?

Leave a Comment