ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೧೧

ಆಪತ್ಕಾಲದ ಲೇಖನಮಾಲೆಯ ಹಿಂದಿನ ಲೇಖನದಲ್ಲಿ ಆಹಾರ ಸಂಗ್ರಹದ ಮಾಹಿತಿಯನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ಆರೋಗ್ಯದ ದೃಷ್ಟಿಯಿಂದ ಮಾಡಬೇಕಾದ ಪೂರ್ವ ತಯಾರಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.

೧೧ ಅ. ಮುಂದೆ ಡಾಕ್ಟರರು, ವೈದ್ಯರು, ಆಸ್ಪತ್ರೆಗಳು ಸಿಗದಿರುವ ಸ್ಥಿತಿಯನ್ನು ಗಮನದಲ್ಲಿರಿಸಿ ಆರೋಗ್ಯದ ದೃಷ್ಟಿಯಿಂದ ಮಾಡಬೇಕಾದ ಪೂರ್ವತಯಾರಿ

೧೧ ಅ ೧. ಆಪತ್ಕಾಲದ ಮೊದಲೇ ಕುಟುಂಬಕ್ಕೆ ಬೇಕಾಗುವ ಔಷಧಿಗಳನ್ನು ಸಾಕಾಗುವಷ್ಟು ಖರೀದಿಸಿಡುವುದು

ನೆರೆ, ಭೂಕಂಪದಂತಹ ನೈಸರ್ಗಿಕ ಆಪತ್ತುಗಳಲ್ಲಿ ಸಂಚಾರಸಾರಿಗೆ ಸ್ಥಗಿತವಾಗುವುದರಿಂದ ಇತರ ಸಾಮಾಗ್ರಿಗಳೊಂದಿಗೆ ಔಷಧಿಗಳೂ ಸಹ ಸಿಗುವುದು ಕಠಿಣವಾಗುತ್ತದೆ. ಯುದ್ಧದ ಕಾಲದಲ್ಲಿ ಔಷಧಿಗಳ ಸಂಗ್ರಹವನ್ನು ಪ್ರಾಧಾನ್ಯತೆಯಿಂದ ಸೈನ್ಯಕ್ಕಾಗಿ ಉಪಯೋಗಿಸಲಾಗುತ್ತದೆ. ಹಾಗಾಗಿ ಔಷಧಿಗಳ ಕೊರತೆ ಉಂಟಾಗುತ್ತದೆ. ಈ ದೃಷ್ಟಿಯಿಂದ ಕುಟುಂಬಕ್ಕೆ ಬೇಕಾಗುವಂತಹ ಔಷಧಿಗಳನ್ನು ಆಪತ್ಕಾಲಕ್ಕಿಂತ ಮೊದಲೇ ಸಾಕಾಗುವಷ್ಟು ಖರೀದಿ ಮಾಡಿಡುವುದು ಆವಶ್ಯಕವಾಗಿದೆ. ಕುಟುಂಬದ ವ್ಯಕ್ತಿಗಳಿಗಿರುವ ರೋಗಗಳಿಗನುಸಾರ ಯಾವ ಔಷಧಿಗಳನ್ನು ಎಷ್ಟು ಪ್ರಮಾಣದಲ್ಲಿ ಖರೀದಿಸಬೇಕು ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಭವಿಷ್ಯದಲ್ಲಿ ಬೇಕಾಗಬಹುದಾದ ಯಾವ ಔಷಧಿಗಳನ್ನು ಖರೀದಿಸಿಡಬೇಕು ಎಂಬುದರ ಬಗ್ಗೆ ಕೌಟುಂಬಿಕ ಡಾಕ್ಟರ್ ಅಥವಾ ವೈದ್ಯರಲ್ಲಿ ವಿಚಾರಿಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಕೆಲವು ಸಿದ್ಧ ಆಯುರ್ವೇದಿಕ ಮತ್ತು ಹೋಮಿಯೋಪಥಿ ಔಷಧಿಗಳನ್ನು ದೈನಂದಿನ ಜೀವನದಲ್ಲಿನ ಕಾಯಿಲೆಗಳಿಗೆ ಹೇಗೆ ಉಪಯೋಗಿಸಬೇಕು ಎಂಬ ವಿಷಯದ ಮಾಹಿತಿಯನ್ನು ಸನಾತನದ ಆಪತ್ಕಾಲದ ಸಂಜೀವಿನಿ ಗ್ರಂಥ ಮಾಲಿಕೆಯ ಮುಂಬರುವ ಗ್ರಂಥದಲ್ಲಿ ನೀಡಲಾಗುವುದು. ಸನಾತನವು ಕೆಲವು ಆಯುರ್ವೇದಿಕ ಔಷಧಿಗಳನ್ನು ತಯಾರಿಸಲು ಪ್ರಾರಂಭಿಸಿದ್ದು ಬೇಗನೇ ಈ ಔಷಧಿಗಳು ಎಲ್ಲರಿಗೂ ಸಿಗಲಿವೆ.

೧೧ ಅ ೨. ಔಷಧಿ ಸಸ್ಯಗಳನ್ನು ನೆಡುವುದು

ಆಪತ್ಕಾಲದಲ್ಲಿ ಸಿದ್ಧ ಔಷಧಿಗಳ ಅಭಾವದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆಪತ್ಕಾಲದ ಮೊದಲೇ ಅನೇಕ ಕಾಯಿಲೆಗಳಿಗೆ ಉಪಯುಕ್ತವಾಗುವಂತಹ ಆಯುರ್ವೇದೀಯ ಔಷಧಿ ಸಸ್ಯಗಳನ್ನು ನಾವು ನಮ್ಮ ಮನೆಯ ಮೊಗಸಾಲೆ, ಮೇಲ್ಛಾವಣಿ, ಅಂಗಳ ಮುಂತಾದವುಗಳಲ್ಲಿ ಬೆಳೆಸಬಹುದು. ಇದರಿಂದ ಆಪತ್ಕಾಲದಲ್ಲಿ ಔಷಧಿಗಳಿಲ್ಲದೇ ಬವಣೆಯಾಗಲಾರದು. (ಸಸ್ಯಗಳನ್ನು ಬೆಳೆಸುವುದರ ಬಗ್ಗೆ ಸನಾತನದ ಗ್ರಂಥ ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ ಮತ್ತು ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ? ಎಂಬ ಗ್ರಂಥಗಳಲ್ಲಿ ಸವಿಸ್ತಾರವಾದ ವಿವೇಚನೆಯನ್ನು ಮಾಡಲಾಗಿದೆ.)

೧೧ ಅ ೩. ಸುತ್ತಮುತ್ತಲು ಸಿಗುವ ಔಷಧೀ ಸಸ್ಯಗಳ ಬಗ್ಗೆ ಪರಿಣಿತರಿಂದ ಮಾಹಿತಿಯನ್ನು ಪಡೆದು ಉಪಯೋಗಿಸಿ ನೋಡಿ

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಾಮಾನ್ಯವಾಗಿ ಆಡುಸೋಗೆ, ತುಳಸಿ, ಬಿಲ್ವ, ಔದುಂಬರ, ಅರಳಿ, ಆಲ, ಕಹಿಬೇವು ಮುಂತಾದ ಔಷಧೀ ಸಸ್ಯಗಳು ಎಲ್ಲೆಡೆ ಕಂಡುಬರುತ್ತವೆ. ಪುನರ್ನವೆ, ದೂರ್ವೆ, ಉತ್ತರಣೆ, ಭೃಂಗರಾಜ (ಗರ್ಗ) ದಂತಹ ಸಸ್ಯಗಳು ಬಹಳಷ್ಟು ಕಡೆಗಳಲ್ಲಿ ತನ್ನಿಂದತಾನೇ ಬೆಳೆಯುತ್ತವೆ. ಇಂತಹ ಔಷಧೀ ಸಸ್ಯಗಳನ್ನು ಪರಿಣಿತರಿಂದ ಗುರುತಿಸಿಕೊಳ್ಳಬೇಕು ಮತ್ತು ‘ವನಸ್ಪತಿಗಳ ಔಷಧೀ ಗುಣಧರ್ಮ’ ಎಂಬ ವಿಷಯದ ಸನಾತನದ ಗ್ರಂಥದಲ್ಲಿರುವ ಅದರ ಉಪಯೋಗವನ್ನು ಓದಿ ಆ ವನಸ್ಪತಿಗಳನ್ನು ಬಳಸಿ ನೋಡಬೇಕು.

(ಸನಾತನದ ಮುಂಬರುವ ಗ್ರಂಥಗಳಲ್ಲಿ ಮನೆಮದ್ದುಗಳ ಮಾಹಿತಿಯನ್ನೂ ನೀಡಲಾಗುವುದು.)

೧೧ ಅ ೪. ಚಿಕ್ಕಪುಟ್ಟ ಕಾಯಿಲೆಗಳ ಮೇಲೆ ಸುಲಭ ಉಪಚಾರಗಳ ಪ್ರಯೋಗ ಮಾಡುವುದು

ಚಿಕ್ಕಪುಟ್ಟ ಕಾಯಿಲೆಗಳ ಚಿಕಿತ್ಸೆಗಾಗಿ ಔಷಧಿಗಳನ್ನು ಅವಲಂಬಿಸದೇ ಉಪವಾಸವಿರುವುದು, ಬಿಸಿಲು ಕಾಯಿಸುವುದು ಮುಂತಾದ ಔಷಧರಹಿತ ಚಿಕಿತ್ಸೆಗಳನ್ನು ಮಾಡಲು ಇಂದಿನಿಂದಲೇ ಪ್ರಾರಂಭಿಸಿ. ಇಂತಹ ಚಿಕಿತ್ಸೆಗಳನ್ನು ಸನಾತನದ ಆಪತ್ಕಾಲದ ಸಂಜೀವನಿ ಗ್ರಂತ ಮಾಲಿಕೆಯ ಮುಂಬರುವ ಗ್ರಂಥದಲ್ಲಿ ನೀಡಲಾಗುವುದು.

೧೧ ಅ ೫. ಔಷಧಿರಹಿತ ಉಪಚಾರಪದ್ಧತಿಗಳನ್ನು ಕಲಿತುಕೊಳ್ಳುವುದು

ಬಿಂದುಒತ್ತಡ (ಆಕ್ಯುಪ್ರೆಶರ್), ಖಾಲಿ ಪೆಟ್ಟಿಗೆಗಳ ಉಪಾಯ, ನಾಮಜಪ ಉಪಾಯ ಮತ್ತು ಪ್ರಾಣಶಕ್ತಿವಹನ ಉಪಾಯ ಈ ಔಷಧರಹಿತ ಚಿಕಿತ್ಸಾ ಪದ್ಧತಿಗಳನ್ನು ಕಲಿತುಕೊಳ್ಳಿ. ಈ ಚಿಕಿತ್ಸಾ ಪದ್ಧತಿಗಳ ಬಗ್ಗೆ ಸನಾತನವು ಗ್ರಂಥಗಳನ್ನು ಪ್ರಕಾಶಿಸಿದೆ. www.sanatan.org ಮತ್ತು www.ssrf.org ಈ ಜಾಲತಾಣಗಳಲ್ಲಿಯೂ ಚಿಕಿತ್ಸಾಪದ್ಧತಿಗಳ ಮಾಹಿತಿಯನ್ನು ನೀಡಲಾಗಿದೆ. (ಯೋಗಾಸನಗಳು, ಸುಲಭ ವ್ಯಾಯಾಮಗಳು, ಪ್ರಾಣಾಯಾಮ, ಮರ್ಮಚಿಕಿತ್ಸೆ, ನರಚಿಕಿತ್ಸೆ, (ನ್ಯುರೊಥೆರಪಿ), ವರ್ಣ ಚಿಕಿತ್ಸೆ ಇಂತಹ ಇತರ ಪ್ರಚಲಿತ ಔಷಧಿರಹಿತ ಉಪಚಾರಪದ್ಧತಿಗಳನ್ನು ಕಲಿತು ಅವುಗಳನ್ನು ಸಹ ಉಪಯೋಗಿಸಬಹುದು.)

೧೧ ಅ ೬. ಕಾಯಿಲೆ ಬರಬಾರದೆಂದು ಈಗಿನಿಂದಲೇ ಪ್ರಯತ್ನ ಮಾಡಬೇಕು :

ಕಾಯಿಲೆಯಾದ ನಂತರ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ಕಾಯಿಲೆ ಬರಬಾರದೆಂದು ಈಗಿನಿಂದಲೇ ಪ್ರಯತ್ನ ಮಾಡಬೇಕು. ಈ ವಿಷಯದ ವಿವೇಚನೆಯನ್ನು ಸನಾತನದ ಗ್ರಂಥ ಆಯುರ್ವೇದವನ್ನು ಪಾಲಿಸಿ ಔಷಧಗಳಿಲ್ಲದೇ ಆರೋಗ್ಯವಂತರಾಗಿ ! ಇದರಲ್ಲಿ ನೀಡಲಾಗಿದೆ.

೧೧ ಆ. ಕುಟುಂಬದ ಒಬ್ಬರಾದರೂ ಪ್ರಥಮ ಚಿಕಿತ್ಸೆ ತರಬೇತಿಯನ್ನು ಪಡೆಯುವುದು

ಶರೀರಕ್ಕೆ ಗಾಯಗಳಾಗುವುದು, ರಕ್ತಸ್ರಾವವಾಗುವುದು, ಸುಟ್ಟುಕೊಳ್ಳುವುದು, ಮೂರ್ಛೆ ತಪ್ಪುವುದು, ಹೃದಯಾಘಾತಗಳಂತಹ ಪ್ರಸಂಗಗಳು ಜೀವನದಲ್ಲಿ ಯಾವುದೇ ಕ್ಷಣ ಘಟಿಸುವ ಸಂಭವವಿರುತ್ತದೆ. ಆಪತ್ಕಾಲದಲ್ಲಿ ಉಪಚಾರಕ್ಕಾಗಿ ಕೂಡಲೇ ಡಾಕ್ಟರರು ಸಿಗುಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ಇಂತಹ ಸಮಯದಲ್ಲಿ ರೋಗಿಗೆ ತಾತ್ಕಾಲಿಕ ಚಿಕಿತ್ಸೆ ನೀಡಿ ಅವರ ಪ್ರಾಣವನ್ನು ಉಳಿಸಲು ಸಾಧ್ಯವಾಗಬೇಕು ಎಂಬುದಕ್ಕಾಗಿ ಪ್ರಥಮ ಚಿಕಿತ್ಸೆ ತರಬೇತಿ ಪಡೆಯುವುದು ಆವಶ್ಯಕವಾಗಿದೆ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅಲ್ಲಲ್ಲಿ ಉಚಿತ ಪ್ರಥಮ ಚಿಕಿತ್ಸೆ ತರಬೇತಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ತರಬೇತಿ ವರ್ಗಗಳ ಲಾಭವನ್ನು ಪಡೆದುಕೊಳ್ಳಬೇಕು. ಸನಾತನದ ಗ್ರಂಥಮಾಲಿಕೆಯಲ್ಲಿ ಪ್ರಥಮ ಚಿಕಿತ್ಸೆ ತರಬೇತಿ (ಗ್ರಂಥ ೧ | ಗ್ರಂಥ ೨) ಸಹ ಲಭ್ಯವಿವೆ.

೧೧ ಇ. ಅಗ್ನಿಶಮನ ತರಬೇತಿ ಪಡೆಯುವುದು

ಆಪತ್ಕಾಲದಲ್ಲಿ ಬಾಂಬ್ ಸ್ಫೋಟಗಳಿಂದ ಮತ್ತು ಇತರ ಕಾರಣಗಳಿಂದ ಬೆಂಕಿ ತಗಲುವುದು, ಬೆಂಕಿಯಲ್ಲಿ ಸಿಲುಕುವುದು, ಇಂತಹ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಪತ್ಕಾಲದಲ್ಲಿ ಸರಕಾರದ ಅಗ್ನಿಶಮನ ಸೌಲಭ್ಯದಿಂದ ತಕ್ಷಣ ಸಹಾಯ ಸಿಗಬಹುದು ಎಂದೇನಿಲ್ಲ. ಇದಕ್ಕಾಗಿ ಇಂತಹ ವಿಪತ್ತುಗಳಲ್ಲಿ ಪರಿಹಾರೋಪಾಯಗಳನ್ನು ಮಾಡಲು ಕುಟುಂಬದ ಒಬ್ಬರಾದರೂ ಅಗ್ನಿಶಮನ ತರಬೇತಿಯನ್ನು ಪಡೆಯುವುದು ಆವಶ್ಯಕವಾಗಿದೆ.

ಸನಾತನದ ಅಗ್ನಿಶಮನ ತರಬೇತಿ ಗ್ರಂಥ ಲಭ್ಯವಿದೆ. ಅದರ ಲಾಭವನ್ನು ಪಡೆದುಕೊಳ್ಳಿ. ಅಗ್ನಿಶಮನ ತರಬೇತಿ ವರ್ಗಗಳು ಎಲ್ಲಿಯಾದರೂ ನಡೆಯುತ್ತಿದ್ದರೆ, ಆ ವರ್ಗಗಳಿಗೂ ಹೋಗಿ ಕಲಿಯಿರಿ.

೧೧ ಈ. ಸ್ವರಕ್ಷಣಾ ತರಬೇತಿ ಪಡೆದುಕೊಳ್ಳುವುದು

ಗಲಭೆಕೋರರು, ಗೂಂಡಾಗಳು, ಬಲಾತ್ಕಾರಿಗಳು ಮುಂತಾದ ಸಮಾಜಕಂಟಕರಿಂದ ದೇಶದ ಸಾಮಾನ್ಯ ಜನತೆಯು ಇಂದಿಗೂ ಪೀಡಿತವಾಗಿದೆ. ಆಪತ್ಕಾಲದಲ್ಲಂತೂ ಅರಾಜಕ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಮಯದಲ್ಲಿ ಸಮಾಜಕಂಟಕರಿಂದ ಅಪಾಯ ಹೆಚ್ಚಾಗುತ್ತದೆ. ಇದಕ್ಕೆ ಉಪಾಯವೆಂದು ಈಗಲೇ ಸ್ವರಕ್ಷಣಾ ತರಬೇತಿಯನ್ನು ಪಡೆಯುವುದು ಆವಶ್ಯಕವಾಗಿದೆ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅಲ್ಲಲ್ಲಿ ಉಚಿತ ಸ್ವರಕ್ಷಣಾ ತರಬೇತಿ ವರ್ಗಗಳನ್ನು ನಡೆಸಲಾಗುತ್ತದೆ. ಈ ತರಬೇತಿ ವರ್ಗದ, ಹಾಗೆಯೇ ಸನಾತನದ ಗ್ರಂಥ ಸ್ವರಕ್ಷಣಾ ತರಬೇತಿಯ ಲಾಭವನ್ನು ಪಡೆದುಕೊಳ್ಳಬೇಕು.

೧೧ ಉ. ಆಪತ್ಕಾಲದ ದೃಷ್ಟಿಯಿಂದ ಮಾಡಬೇಕಾದ ಇತರ ಸಿದ್ಧತೆಗಳು

೧. ಆಧುನಿಕ ವೈದ್ಯಕೀಯ ಯಂತ್ರಗಳು ಅಥವಾ ಉಪಕರಣಗಳ ಮೂಲಕ ಮಾಡಬೇಕಾದ ಆವಶ್ಯಕ ಚಿಕಿತ್ಸೆ, ಉದಾ. ಕಣ್ಣುಗಳ ಶಸ್ತ್ರಚಿಕಿತ್ಸೆ, ದಂತಚಿಕಿತ್ಸೆ ಇತ್ಯಾದಿಗಳನ್ನು ಆಪತ್ಕಾಲಕ್ಕಿಂತ ಮೊದಲೇ ಮಾಡಿಸಿಕೊಳ್ಳಬೇಕು.

೨. ಆಹಾರ, ನೀರು, ವಿದ್ಯುತ್, ಅಡುಗೆ ಅನಿಲ ಹಾಗೂ ಇತರ ವಸ್ತು (ಉದಾ. ಅಡುಗೆಗೆ ಬಳಸುವ ಎಣ್ಣೆ) ಮುಂತಾದವುಗಳನ್ನು ಮಿತವ್ಯಯದಿಂದ ಬಳಸುವ ಅಭ್ಯಾಸವನ್ನು ಈಗಿನಿಂದಲೇ ಮಾಡಿಕೊಳ್ಳಬೇಕು.

೩. ನಮ್ಮ ಶಾರೀರಿಕ ಸ್ವಾಸ್ಥ್ಯಕ್ಕನುಸಾರ ನಮಗೆ ಎಷ್ಟು ಆಹಾರ ಆವಶ್ಯಕವಾಗಿದೆ ಎಂಬುದನ್ನು ಅರಿತುಕೊಂಡು ಅದರಂತೆ ಆವಶ್ಯಕವಿರುವಷ್ಟೇ ಆಹಾರವನ್ನು ತಯಾರಿಸುವ ಅಭ್ಯಾಸವನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ಆಪತ್ಕಾಲದಲ್ಲಿ ಇಷ್ಟದ ಪದಾರ್ಥಗಳು ತಿನ್ನಲು ಸಿಗುತ್ತವೆ ಎಂದೇನಿಲ್ಲ; ಹಾಗಾಗಿ ನಮ್ಮ ಇಷ್ಟಾನಿಷ್ಟಗಳನ್ನು ಕಡಿಮೆ ಮಾಡಲು ಆರಂಭಿಸಬೇಕು. ಆಪತ್ಕಾಲದಲ್ಲಿ ಕೆಲವೊಮ್ಮೆ ಗೆಡ್ಡೆಗೆಣಸುಗಳನ್ನು ತಿಂದು ಬದುಕುವ ಅಥವಾ ಉಪವಾಸವಿರುವ ಪ್ರಸಂಗವೂ ಬರಬಹುದು. ಈ ದೃಷ್ಟಿಯಿಂದ ಈಗಿನಿಂದಲೇ ಮನಸ್ಸಿನ ತಯಾರಿಯನ್ನು ಮಾಡಿಕೊಳ್ಳಬೇಕು.

೪. ಬೇಸಿಗೆ, ಮಳೆಗಾಲ ಅಥವಾ ಚಳಿಗಾಲಕ್ಕೆ ಉಪಯುಕ್ತವಾದಂತಹ, ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬಟ್ಟೆಗಳನ್ನು ಉಪಯೋಗಿಸುವ ಅಭ್ಯಾಸವನ್ನು ಈಗಿನಿಂದಲೇ ಮಾಡಬೇಕು.

೫. ಒಟ್ಟಿನಲ್ಲಿ ಎಲ್ಲ ಆವಶ್ಯಕತೆಗಳನ್ನು (ಉದಾ. ಸ್ನಾನಕ್ಕಾಗಿ ಬಿಸಿನೀರೇ ಬೇಕಾಗುವುದು, ಸತತ ಫ್ಯಾನಿನ ಗಾಳಿ ಬೇಕಾಗುವುದು, ವಾತಾನುಕೂಲ ಯಂತ್ರ (ಎಸಿ) ಇಲ್ಲದೇ ನಿದ್ದೆ ಬರದಿರುವುದು) ಕಡಿಮೆ ಮಾಡಲು ನಿಧಾನವಾಗಿ ರೂಢಿ ಮಾಡಿಕೊಳ್ಳಬೇಕು.

೬. ಆಪತ್ಕಾಲದಲ್ಲಿ ಉಪಯುಕ್ತವಾಗುವಂತಹ ವಿವಿಧ ಶಾರೀರಿಕ ಕೃತಿಗಳನ್ನು ಎಷ್ಟು ಸಾಧ್ಯವಿದೆಯೋ ಅಷ್ಟನ್ನು ಮಾಡಲು ಈಗಿನಿಂದಲೇ ರೂಢಿ ಮಾಡಿಕೊಳ್ಳಬೇಕು, ಉದಾ. ರಾಟೆಯಿಂದ ಬಾವಿಯ ನೀರನ್ನು ತೆಗೆಯುವುದು, ಕೈಯಿಂದ ಬಟ್ಟೆಗಳನ್ನು ಒಗೆಯುವುದು, ಲಿಫ್ಟ ಬದಲು ಮೆಟ್ಟಿಲುಗಳ ಮೂಲಕ ಹತ್ತಿ-ಇಳಿಯುವುದು, ಸಮೀಪದ ಸ್ಥಳದಲ್ಲಿ ಕೆಲಸವಿದ್ದಲ್ಲಿ ಅಲ್ಲಿಗೆ ಹೋಗಲು ವಾಹನದ ಬದಲು ಸೈಕಲ್ ಉಪಯೋಗಿಸುವುದು, ಸಂಕ್ಷಿಪ್ತವಾಗಿ, ಯಂತ್ರಗಳ ಅವಲಂಬನೆಯನ್ನು ಕಡಿಮೆ ಮಾಡಿ ಸ್ವಾವಲಂಬಿಯಾಗುವುದು !

೭. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶರೀರವು ಸಕ್ಷಮವಾಗಿರಲು ಪ್ರತಿದಿನ ವ್ಯಾಯಾಮ (ಉದಾ. ಸೂರ್ಯನಮಸ್ಕಾರ ಹಾಕುವುದು, ಕಡಿಮೆ ಪಕ್ಷ ೧-೨ ಕಿ.ಮೀ. ನಡೆಯುವುದು,) ಪ್ರಾಣಾಯಾಮ, ಯೋಗಾಸನಗಳನ್ನು ಮಾಡುವುದು ಇತ್ಯಾದಿ.

© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.

Leave a Comment