ಬೇಸಿಗೆ ಕಾಲವು ಪ್ರಾರಂಭವಾದುದರಿಂದ ತ್ರಿಕಟುವಿನ ಕಷಾಯದ ಬದಲಾಗಿ ಅಮೃತಬಳ್ಳಿಯನ್ನು ಉಪಯೋಗಿಸಿರಿ !

ಕೆಲವರು ‘ತ್ರಿಕಟು’ ಅಂದರೆ ‘ಶುಂಠಿ, ಕಾಳುಮೆಣಸು ಹಾಗೂ ಹಿಪ್ಪಲಿ’ ಇವುಗಳ ಕಷಾಯವನ್ನು ಪ್ರತಿದಿನ ಸೇವಿಸುತ್ತಿದ್ದಾರೆ. ಆಯುರ್ವೇದದ ಔಷಧಿಗಳನ್ನು ಋತುಗಳಿಗನುಸಾರ ತೆಗೆದುಕೊಳ್ಳುವುದಿರುತ್ತದೆ. ತ್ರಿಕಟು ಉಷ್ಣವಿರುತ್ತದೆ. ಈಗ ಬೇಸಿಗೆ ಕಾಲವು ಆರಂಭವಾಗಿರುವುದರಿಂದ ತ್ರಿಕಟುವಿನ ಕಷಾಯದ ಬದಲು ಅಮೃತಬಳ್ಳಿಯನ್ನು ಉಪಯೋಗಿಸಬೇಕು. ಆಯುರ್ವೇದದಲ್ಲಿ ಅಮೃತಬಳ್ಳಿಯನ್ನು ಜ್ವರಕ್ಕೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉಪಯೋಗಿಸುತ್ತಾರೆ. ಮುಂದೆ ತಿಳಿಸಿದಂತೆ ಯಾವುದೇ ಒಂದು ಪದ್ಧತಿಯಲ್ಲಿ ಅಮೃತಬಳ್ಳಿಯನ್ನು ಬೆಳಗ್ಗೆ ಹಾಗೂ ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ೮ ವರ್ಷಗಳಿಗಿಂತ ಚಿಕ್ಕ ಮಕ್ಕಳು ಅರ್ಧ ಪ್ರಮಾಣದಲ್ಲಿ ಔಷಧಿಯನ್ನು ಸೇವಿಸಬೇಕು.

೧. ಅರ್ಧ ಚಮಚ ಅಮೃತಬಳ್ಳಿಯ ಚೂರ್ಣವನ್ನು ೧ ಬಟ್ಟಲು ನೀರಿನೊಂದಿಗೆ ಸೇವಿಸಬೇಕು.

೨. ಸಂಶಮನಿ ವಟಿ ಅಥವಾ ಅಮೃತಬಳ್ಳಿ ಘನವಟಿ (ಗಿಲೋಯ ಘನವಟಿ) ೫೦೦ ಮಿಲಿಗ್ರಾಂನ ೧ ಗುಳಿಗೆ ೨ ಗುಟುಕು ನೀರಿನೊಂದಿಗೆ ಸೇವಿಸಬೇಕು.

೩. ತಾಜಾ ಅಮೃತಬಳ್ಳಿ ಲಭ್ಯವಿದ್ದರೆ ಅದರ ೧ ಬಟ್ಟಲು (೧೦೦ ಮಿ.ಲಿ.) ಕಷಾಯವನ್ನು ತಯಾರಿಸಿ ಸೇವಿಸಬೇಕು.

ಈ ಕಷಾಯವನ್ನು ತಯಾರಿಸುವ ಪದ್ಧತಿ

ಒಂದೂವರೆ ಸೆಂಟಿಮೀಟರ್ ಉದ್ದದ ಅಮೃತಬಳ್ಳಿಯ ಕಾಂಡದ ತುಂಡನ್ನು ತೆಗೆದುಕೊಳ್ಳಬೇಕು. ಅದನ್ನು ಒರಳು ಮತ್ತು ಕುಟ್ಟಾಣಿಯಲ್ಲಿ ಚೆನ್ನಾಗಿ ಕುಟ್ಟಿ ಒಂದು ಸ್ಟೀಲ್ ಪಾತ್ರೆಯಲ್ಲಿ ೧ ಬಟ್ಟಲು ನೀರು ತೆಗೆದುಕೊಂಡು ಅದರಲ್ಲಿ ರಾತ್ರಿಯಿಡಿ ನೆನೆಸಿಡಬೇಕು. ಬೆಳಗ್ಗೆ ಈ ನೀರನ್ನು ಕುದಿಸಬೇಕು ಹಾಗೂ ಕುದಿ ಬಂದಾಗ ೫ ನಿಮಿಷಗಳಷ್ಟು ಮಂದ ಉರಿಯಲ್ಲಿ ಇಟ್ಟು ಗ್ಯಾಸನ್ನು ಬಂದ ಮಾಡಬೇಕು. ಕಷಾಯಕ್ಕೆ ಕುದಿ ಬಂದಾಗ ಅದರ ಮೇಲೆ ಮುಚ್ಚಳವನ್ನು ಮುಚ್ಚಬಾರದು. ಈ ಕಷಾಯವನ್ನು ಸೋಸಿ ಅದರಲ್ಲಿ ಸಕ್ಕರೆ ಅಥವಾ ಬೆಲ್ಲ ಹಾಕದೇ ಸೇವಿಸಬೇಕು. ಬೆಳಗ್ಗೆ ಕಷಾಯವನ್ನು ಸೋಸಿದಾಗ ಕೆಳಗೆ ಉಳಿದ ಔಷಧದ ಪುಡಿಯಲ್ಲಿ ಪುನಃ ೧ ಬಟ್ಟಲು ನೀರನ್ನು ಹಾಕಿ ಇಡಬೇಕು ಹಾಗೂ ಇದೇ ಪದ್ಧತಿಯಲ್ಲಿ ಸಾಯಂಕಾಲ ಕಷಾಯವನ್ನು ತಯಾರಿಸಬೇಕು. ಸಾಯಂಕಾಲ ಉಳಿದ ಪುಡಿಯನ್ನು ಎಸೆಯಬೇಕು.

ಇಲ್ಲಿ ಓರ್ವ ವ್ಯಕ್ತಿಗಾಗಿ ಬೇಕಾಗುವಷ್ಟು ಕಷಾಯದ ಪ್ರಮಾಣವನ್ನು ನೀಡಲಾಗಿದೆ. ಮನೆಯಲ್ಲಿನ ವ್ಯಕ್ತಿಗಳ ಸಂಖ್ಯೆಗನುಸಾರ ನೀರು ಹಾಗೂ ಅಮೃತಬಳ್ಳಿ ಇವುಗಳ ಪ್ರಮಾಣವನ್ನು ಹೆಚ್ಚಿಸಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನದ ಆಶ್ರಮ, ರಾಮನಾಥಿ, ಗೋವಾ. (೨೯.೩.೨೦೨೦)

Leave a Comment