ಬೇಸಿಗೆ ಕಾಲದಲ್ಲಾಗುವ ಶಾರೀರಿಕ ಬದಲಾವಣೆ ಮತ್ತು ಅನುಸರಿಸಬೇಕಾದ ಮುಂಜಾಗ್ರತೆ

ಗ್ರೀಷ್ಮ, ವರ್ಷಾ ಮತ್ತು ಶರದ್ ಈ ೩ ಋತುಗಳೆಂದರೆ ಸಾಮಾನ್ಯವಾಗಿ ೨೧ ಏಪ್ರಿಲ್‌ನಿಂದ ೨೦ ಅಕ್ಟೋಬರ್ ಈ ೬ ತಿಂಗಳ ಅವಧಿಯಲ್ಲಿ ಇತರ ತಿಂಗಳ ತುಲನೆಯಲ್ಲಿ ಸೂರ್ಯನು ಪೃಥ್ವಿಯ ಸಮೀಪವಿರುವುದರಿಂದ ನೈಸರ್ಗಿಕವಾಗಿ ಶಾರೀರಿಕ ಬಲ ಕಡಿಮೆಯಾಗಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ವ್ಯಾಯಾಮಗಳನ್ನು ಕಡಿಮೆ ಗೊಳಿಸಬೇಕು, ಉದಾ. ಸ್ವರಕ್ಷಣಾ ತರಬೇತಿ ವರ್ಗದಲ್ಲಿ ಒಂದೊಂದು ವ್ಯಾಯಾಮ ಪ್ರಕಾರವನ್ನು ಚಳಿಗಾಲದಲ್ಲಿ ೧೦ ರ ಸಂಖ್ಯೆಯಲ್ಲಿ ಮಾಡುತ್ತಿದ್ದರೆ, ಅದನ್ನು ಈಗ ೫ ಕ್ಕೆ ಇಳಿಸಬೇಕು.

ವೈದ್ಯ ಮೇಘರಾಜ ಪರಾಡಕರ

ಹೇಮಂತದಿಂದ ವಸಂತ ಈ ಋತುಗಳ ಅವಧಿಯಲ್ಲಿ ಶರೀರದ ಕ್ಷಮತೆ ಹೆಚ್ಚಾಗಿರುವುದರಿಂದ ಬಹಳಷ್ಟು ವ್ಯಾಯಾಮ ಮಾಡಬಹುದು. ಶರದ್ ಋತುವಿನ ಕೊನೆಯಲ್ಲಿ ಮತ್ತು ಹೇಮಂತ ಋತುವಿನ ಆರಂಭದ ೭-೭ ದಿನಗಳು ಅಂದರೆ ಅಕ್ಟೋಬರ್ ೧೪ ರಿಂದ ಅಕ್ಟೋಬರ್ ೨೭ ಈ ಅವಧಿಯಲ್ಲಿ ಕ್ರಮೇಣ ವ್ಯಾಯಾಮವನ್ನು ಹೆಚ್ಚಿಸಿ ಅನಂತರ ಪ್ರತಿಯೊಂದು ವ್ಯಾಯಾಮ ಪ್ರಕಾರವನ್ನು ೧೦-೧೦ ಸಂಖ್ಯೆಯಲ್ಲಿ ಮಾಡಬೇಕು.

ಬೇಸಿಗೆಯ ಬೇಗೆಯನ್ನು ಶಮನಗೊಳಿಸಲು ಆಯುರ್ವೇದಕ್ಕನುಸಾರ ಋತುಚರ್ಯೆಯನ್ನು ಪಾಲಿಸಿರಿ !
ಬೇಸಿಗೆ ಕಾಲದಲ್ಲಾಗುವ ಶಾರೀರಿಕ ಬದಲಾವಣೆ ಮತ್ತು ಅನುಸರಿಸಬೇಕಾದ ಮುಂಜಾಗ್ರತೆ

೧. ಚರ್ಮ

೧ ಅ. ಚರ್ಮದಲ್ಲಾಗುವ ಬದಲಾವಣೆ

೧ ಅ ೧. ಬೆವರಿನಿಂದ ಮೈ ಮೇಲಿನ ಸಿಪ್ಪೆ ಏಳುವುದು : ಬೇಸಿಗೆಯಲ್ಲಿ ವಿಪರೀತ ಬೆವರು ಬರುತ್ತದೆ. ಬೆವರಿನೊಂದಿಗೆ ಕ್ಷಾರ ಕೂಡ ಶರೀರದಿಂದ ಹೊರಗೆ ಹೋಗುತ್ತಿರುವುದರಿಂದ ಆಯಾಸವಾಗುತ್ತದೆ. ಚರ್ಮದಲ್ಲಿನ ಬೆವರಿನ ಗ್ರಂಥಿಗಳೊಂದಿಗೆ ಎಣ್ಣೆಯ ಗ್ರಂಥಿಗಳು ಕೂಡ ಹೆಚ್ಚು ಕೆಲಸ ಮಾಡುತ್ತಿರುವುದರಿಂದ ಚರ್ಮ ಜಿಡ್ಡುಜಿಡ್ಡಾಗುತ್ತದೆ. ಎಣ್ಣೆಯ ಜಿಡ್ಡು ಚರ್ಮದಲ್ಲಿದ್ದರೆ, ಬೆವರಿನ ಬಾಷ್ಪೀಕರಣ ಶೀಘ್ರಗತಿಯಲ್ಲಿ ಆಗುವುದಿಲ್ಲ ಹಾಗೂ ಶರೀರ ಸ್ವಲ್ಪ ಹೆಚ್ಚು ಕಾಲ ತಂಪಾಗಿರುತ್ತದೆ, ಹೀಗೆ ನಿಸರ್ಗದ ಯೋಜನೆಯಿದೆ. ಬೆವರು ಒಣಗಿದರೆ, ಅದರಲ್ಲಿನ ಕ್ಷಾರವು ಸೂಕ್ಷ್ಮವಾದ ಸ್ಫಟಿಕವಾಗುತ್ತದೆ. ಈ ಸ್ಫಟಿಕದಿಂದ ಮೈಮೇಲಿನ ಸಿಪ್ಪೆ ಏಳುತ್ತದೆ. ಬೆವರಿನಿಂದಾಗಿ ಕಂಕುಳು, ತೊಡೆಯ ಸಂದು ಇತ್ಯಾದಿ ಸ್ಥಳಗಳು ತೇವವಾಗಿರುತ್ತವೆ. ತೇವವಾಗಿರುವ ಸ್ಥಳದಲ್ಲಿ ಬುರುಸು ಬಂದ ಹಾಗೆ ಜಂತುಗಳ ಉತ್ಪತ್ತಿಯಾಗುತ್ತದೆ. ಬೇಸಿಗೆಯಲ್ಲಿ ಬೆವರುಸಾಲೆ ಕೂಡ ಆಗುತ್ತದೆ. ಇವೆಲ್ಲವುಗಳಿಂದ ತುರಿಕೆ ಉಂಟಾಗುತ್ತದೆ. ತುರಿಸುವಾಗ ಮೈಮೇಲೆ ಉಗುರಿನ ಗೀರು ಉಂಟಾಗುತ್ತದೆ, ವಾತಾವರಣದ ಉಷ್ಣತೆಯಿಂದ ಮೈಯಲ್ಲಿ ಉರಿಯುಂಟಾಗುತ್ತದೆ.

೧ ಅ ೨. ಪ್ರಖರ ಸೂರ್ಯಕಿರಣಗಳಿಂದ ಚರ್ಮ ಕಪ್ಪಾಗುತ್ತದೆ : ಬೇಸಿಗೆಯಲ್ಲಿ ಸೂರ್ಯನ ಕಿರಣ ತೀಕ್ಷ್ಣವಾಗಿರುತ್ತದೆ. ಆದ್ದರಿಂದ ಆ ಕಿರಣಗಳಲ್ಲಿನ ಕಡುನೀಲಿ ಭಾಗದಿಂದ ಚರ್ಮದ ಮೇಲೆ ಪರಿಣಾಮ ವಾಗುತ್ತದೆ. ಚರ್ಮ ಸುಡಬಾರದೆಂದು ನಿಸರ್ಗವು ಚರ್ಮದಲ್ಲಿ ಕಪ್ಪು ಪರದೆಯನ್ನು ತರಲು ಪ್ರಯತ್ನಿಸುತ್ತದೆ. ಚರ್ಮದ ಕಣಗಳಲ್ಲಿ ಕಪ್ಪು ದ್ರವ್ಯ (ಮೆಲನಿನ್) ಹೆಚ್ಚಾಗುತ್ತದೆ. ಆದ್ದರಿಂದ ಚರ್ಮ ಮುಚ್ಚಿಕೊಳ್ಳುತ್ತದೆ.

೧ ಅ ೩. ಸನ್‌ಬರ್ನ : ಬಿಸಿಲಿನ ಬೇಗೆ ಹೆಚ್ಚಾದಾಗ ಚರ್ಮ ಸುಟ್ಟುಹೋಗುತ್ತದೆ. ಇದಕ್ಕೆ ಸನ್‌ಬರ್ನ್ ಎಂದು ಹೇಳುತ್ತಾರೆ. ಅತೀ ಉಷ್ಣತೆಯಿಂದ ಕೆಲವೊಮ್ಮೆ ಶರೀರವನ್ನು ತಂಪಾಗಿಸುವ ವ್ಯವಸ್ಥೆ ನಿಷ್ಕ್ರಿಯವಾಗುತ್ತದೆ. ಕೆಲವೊಮ್ಮೆ ಮರಣ ಕೂಡ ಬರುತ್ತದೆ.

೧ ಆ. ಚರ್ಮದ ಆರೋಗ್ಯವನ್ನು ಕಾಪಾಡಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ

೧ ಆ ೧. ಪ್ರತಿದಿನ ಸ್ನಾನದ ಮೊದಲು ಮೈಗೆ ಎಣ್ಣೆ ಹಚ್ಚುವುದು : ಬೆವರಿನ ತೊಂದರೆ ಹಾಗೂ ಚರ್ಮದ ವಿಕಾರ ಆಗಬಾರದೆಂದು ಪ್ರತಿದಿನ ನಿಯಮಿತವಾಗಿ ಸ್ನಾನದ ಮೊದಲು ಮೈಗೆ ಕೊಬ್ಬರಿ ಎಣ್ಣೆ ಹಚ್ಚಬೇಕು. ಎಣ್ಣೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಬೇಕು. ಬೆಳಗ್ಗೆ ಎಣ್ಣೆ ಹಚ್ಚಲು ಸಾಧ್ಯವಿಲ್ಲದಿದ್ದರೆ, ರಾತ್ರಿ ಮಲಗುವಾಗ ಹಚ್ಚಬೇಕು; ಆದರೆ ರಾತ್ರಿಯ ಊಟ ಮತ್ತು ಎಣ್ಣೆ ಹಚ್ಚಿಕೊಳ್ಳುವುದು ಇವೆರಡರಲ್ಲಿ ಕಡಿಮೆಪಕ್ಷ ೨ ಗಂಟೆಯ ಅಂತರವಿರಬೇಕು. ನಿಯಮಿತವಾಗಿ ಎಣ್ಣೆ ಹಚ್ಚಿದರೆ ಮೇಲೆ ಹೇಳಿದ ಎಲ್ಲ ತೊಂದರೆಗಳಿಂದ ಚರ್ಮದ ರಕ್ಷಣೆಯಾಗಿ ಚರ್ಮ ಆರೋಗ್ಯಪೂರ್ಣವಾಗಿರುತ್ತದೆ.

೧ ಆ ೨. ಈ ಸಮಯದಲ್ಲಿ ಸಡಿಲವಾದ ಹತ್ತಿಯ ಬಟ್ಟೆಗಳನ್ನು ಉಪಯೋಗಿಸಬೇಕು ಹಾಗೂ ಕೂದಲನ್ನು ಸ್ವಚ್ಛವಾಗಿಡಬೇಕು.

೧ ಆ ೩. ಕಡುಬಿಸಿಲಿನಲ್ಲಿ ಹೋಗಲಿಕ್ಕಿದ್ದರೆ ನೀರು ಕುಡಿದು ಹೋಗಬೇಕು. ಪ್ಲಾಸ್ಟಿಕ್‌ನ ಪಾದರಕ್ಷೆಗಳನ್ನು ಉಪಯೋಗಿಸಬಾರದು.

೨. ಕಣ್ಣುಗಳು

೨ ಅ. ಕಣ್ಣುಗಳ ಸಮಸ್ಯೆಗಳು : ಬಿಸಿಲಿನಿಂದ ಕಣ್ಣುಗುಡ್ಡೆಯ ನೀರಿನಂಶ ಕೂಡ ಕಡಿಮೆಯಾಗುತ್ತದೆ. ಕಣ್ಣುಗುಡ್ಡೆ ಒಣಗುವುದರಿಂದ ಕಣ್ಣುಗಳು ಉರಿಯುತ್ತವೆ.

೨ ಆ. ಕಣ್ಣುಗಳನ್ನು ಆರೋಗ್ಯವಾಗಿಡುವ ಉಪಾಯ

೨ ಆ ೧. ಕಣ್ಣುಗಳಲ್ಲಿ ತುಪ್ಪದ ಹನಿ ಹಾಕುವುದು: ರಾತ್ರಿ ಮಲಗುವಾಗ ಎರಡೂ ಕಣ್ಣುಗಳಿಗೆ ೧-೧ ಹನಿ ದೇಶಿ ಹಸುವಿನ ತಾಜಾ ತುಪ್ಪದ ಮೇಲಿರುವ ಕೆನೆಯನ್ನು ಹಾಕಬೇಕು.

೨ ಆ ೨. ಬಿಸಿಲಿನಲ್ಲಿ ಹೋಗುವಾಗ ಟೊಪ್ಪಿ ಹಾಗೂ ಗಾಗಲ್ ಉಪಯೋಗಿಸಬೇಕು : ತಲೆ ಮತ್ತು ಕಣ್ಣುಗಳನ್ನು ಬಿಸಿಲಿನಿಂದ ರಕ್ಷಿಸುವಸಲುವಾಗಿ ಹೊರಗೆ ಹೋಗುವಾಗ ಟೊಪ್ಪಿ ಮತ್ತು ಗಾಗಲ್ (ತಂಪು ಕನ್ನಡಕ) ಉಪಯೋಗಿಸಬೇಕು.

೩. ಮೂಗು

೩ ಅ. ಮೂಗಿನಿಂದ ರಕ್ತಸ್ರಾವವಾಗಬಹುದು : ಉಷ್ಣತೆಯಿಂದ ಮೂಗಿನ ಒಳಗಿನ ಸೂಕ್ಷ್ಮವಾದ ತ್ವಚೆಗೆ ಆಘಾತವಾಗುತ್ತದೆ ಹಾಗೂ ಅದರಿಂದ ರಕ್ತಸ್ರಾವವಾಗುವ ಸಾಧ್ಯತೆ ಇದೆ.

೩ ಆ. ಮೂಗಿನಿಂದಾಗುವ ರಕ್ತಸ್ರಾವಕ್ಕೆ ಔಷಧಿಗಳು ಮತ್ತು ಪ್ರತಿಬಂಧಾತ್ಮಕ ಉಪಾಯಗಳು : ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವವಾದರೆ ಮೂಗಿನ ಎರಡೂ ಹೊಳ್ಳೆಗಳಿಗೆ ೨-೨ ಹನಿ ದೂರ್ವೆಯ ರಸ ಅಥವಾ ಹಸಿ ಕೊತ್ತಂಬರಿಯ ರಸವನ್ನು ಹಾಕಬೇಕು. ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜಿ ಆದ ನಂತರ ಮೂಗಿನ ಎರಡೂ ಹೊಳ್ಳೆಗಳಿಗೆ ೨-೨ ಹನಿ ದೇಶಿ ಹಸುವಿನ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಹಾಕಬೇಕು. ಅದರಿಂದ ಮೂಗಿನಿಂದಾಗುವ ರಕ್ತಸ್ರಾವ ಕಡಿಮೆಯಾಗುತ್ತದೆ.

೪. ಜೀರ್ಣಶಕ್ತಿ

೪ ಅ. ಜೀರ್ಣಶಕ್ತಿ ಮಂದವಾಗುವುದು : ಬೇಸಿಗೆಯಲ್ಲಿ ಹಸಿವು ಕಡಿಮೆಯಾಗುತ್ತದೆ.

೪ ಆ. ಜೀರ್ಣಶಕ್ತಿಯನ್ನು ಕೆಡಿಸುವ ಪದಾರ್ಥಗಳನ್ನು ದೂರವಿಡಿ ! : ತಂಪು ಪಾನೀಯ, ಶೀತಕಪಾಟಿನಲ್ಲಿಟ್ಟ ತಂಪು ನೀರು, ಐಸ್ಕ್ರೀಮ್, ಡಬ್ಬಿಯಲ್ಲಿ ಶೇಖರಣೆ ಮಾಡಿಟ್ಟ ರಸಾಯನಯುಕ್ತ ಹಣ್ಣಿನ ರಸ ಇತ್ಯಾದಿಗಳನ್ನು ಸೇವಿಸಬಾರದು. ಈ ಪದಾರ್ಥಗಳು ಪಚನಶಕ್ತಿಯನ್ನು ಕೆಡಿಸುತ್ತವೆ. ಪಚನಶಕ್ತಿ ಚೆನ್ನಾಗಿರಬೇಕಾದರೆ ಊಟದಲ್ಲಿ ಅನ್ನ ಅಥವಾ ಚಪಾತಿಯ ಮೇಲೆ ಒಂದು ಚಮಚ ದೇಶಿ ಹಸುವಿನ ತುಪ್ಪ ಹಾಕಿಕೊಳ್ಳಬೇಕು.

೫. ಮಲ

೫ ಅ. ಮಲ ಗಟ್ಟಿಯಾಗುವುದು : ಶರೀರದಲ್ಲಿನ ನೀರು ಬೆವರಿನ ಮೂಲಕ ಹೊರಗೆ ಹೋಗುವುದರಿಂದ ಮಲ ಗಟ್ಟಿಯಾಗುತ್ತದೆ; ಏಕೆಂದರೆ ಅದರಲ್ಲಿನ ನೀರು ಕೂಡಾ ಕಡಿಮೆಯಾಗುತ್ತದೆ. ಅದಕ್ಕಾಗಿ ಬೇಸಿಗೆಯಲ್ಲಿ ವೃದ್ಧರಿಗೆ ಮಲಬದ್ಧತೆಯ ತೊಂದರೆಯಾಗುತ್ತದೆ.

೫ ಆ. ಮಲಬದ್ಧತೆಯ ನಿವಾರಣೆ : ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಊಟದ ಮೊದಲು ೧ ಚಮಚ (೩-೪ಗ್ರಾಂ) ನೆಲ್ಲಿ ಅಥವಾ ಜ್ಯೇಷ್ಠಮಧು ಇವುಗಳ ಚೂರ್ಣ ಅರ್ಧ ಕಪ್ ನೀರಿನಲ್ಲಿ ತೆಗೆದುಕೊಳ್ಳಬೇಕು ಅಥವಾ ಪ್ರತಿದಿನ ಬೆಳಗ್ಗೆ ಅರ್ಧ ಚಮಚ (೧.೫-೨ಗ್ರಾ.) ಔಡಲದ ಚೂರ್ಣವನ್ನು ಅಷ್ಟೇ ಬೆಲ್ಲದ ಜೊತೆಗೆ ತೆಗೆದು ಕೊಳ್ಳಬೇಕು. ಬೇಸಿಗೆಯಲ್ಲಿ ದೊರೆಯುವ ಮಾವು, ಕವಳೇಕಾಯಿ, ನೇರಳೆ, ಇತ್ಯಾದಿ ಹಣ್ಣುಗಳನ್ನು ಸೇವಿಸಿದರೆ ಮಲಬದ್ಧತೆಯ ತೊಂದರೆ ಯಾಗುವುದಿಲ್ಲ.

೬. ಮೂತ್ರ

೬ ಅ. ಮೂತ್ರದಲ್ಲಿ ಉರಿ : ಶರೀರದಲ್ಲಿನ ಹೆಚ್ಚಿನ ನೀರು ಬೆವರಿನ ಮೂಲಕ ಹೊರಗೆ ಹೋಗುತ್ತದೆ. ಆದ್ದರಿಂದ ಮೂತ್ರದ ಮೂಲಕ ಹೊರಗೆ ಹೋಗಲು ನೀರು ಕಡಿಮೆಯಿರುತ್ತದೆ. ಆದರೆ ಪ್ರತಿದಿನ ಶರೀರದ ಹೊರಗೆ ಹಾಕಬೇಕಾದ ಪದಾರ್ಥಗಳು ಅಷ್ಟೇ ಇರುತ್ತವೆ. ಈ ಪದಾರ್ಥಗಳು ಅಲ್ಪಸ್ವಲ್ಪ ನೀರಿನ ಅಂಶವನ್ನೇ ಅವಲಂಬಿಸ ಬೇಕಾಗುತ್ತದೆ. ಆದ್ದರಿಂದ ಸಹಜವಾಗಿಯೇ ಮೂತ್ರ ದಪ್ಪವಾಗಿ ಅದು ವಿಸರ್ಜನೆಯಾಗುವಾಗ ಉರಿ ಉಂಟಾಗುತ್ತದೆ. ಸ್ತ್ರೀಯರು ಪರ್ಯಾಯವಿಲ್ಲದೆ ಹೆಚ್ಚು ಕಾಲ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದರಿಂದ ಅವರಿಗೆ ಇಂತಹ ತೊಂದರೆಗಳು ಹೆಚ್ಚು ಪ್ರಮಾಣದಲ್ಲಿರುತ್ತವೆ.

೬ ಆ. ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ : ಲಾವಂಚದ ಬೇರು ಹಾಕಿದ ನೀರು ಕುಡಿಯಬೇಕು ಅಥವಾ ತುಳಸಿಯ ಬೀಜ, ಕಾಮ ಕಸ್ತೂರಿ, ಕೊತ್ತಂಬರಿ ಇವುಗಳಲ್ಲಿ ಯಾವುದಾದರೂ ಒಂದನ್ನು ಒಂದು ಲೀಟರ್ ನೀರಿಗೆ ೧ ಚಮಚದಂತೆ ಹಾಕಿ ಬಾಯಾರಿಕೆ ನೀಗುವಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು.

೭. ನಿದ್ರೆ

೭ ಅ. ನಿದ್ರೆ ಕಡಿಮೆಯಾಗಿ ಕಿರಿಕಿರಿ ಹೆಚ್ಚಾಗುವುದು : ಬೇಸಿಗೆಯಲ್ಲಿ ನಿದ್ರೆ ಕಡಿಮೆಯಾಗುತ್ತದೆ. ನಿದ್ರೆ ಕಡಿಮೆಯಾದರೆ ಸಹಜವಾಗಿಯೇ ಜನರಿಗೆ ಕಿರಿಕಿರಿಯಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಹೆಚ್ಚಿನವರ ಮಾನಸಿಕ ಆರೋಗ್ಯ ಕೆಡುತ್ತದೆ. ಇದರ ಪರಿಣಾಮದಿಂದ ರಕ್ತದೊತ್ತಡ ಹೆಚ್ಚಾಗುತ್ತದೆ.

೭ ಆ. ಶಾಂತನಿದ್ರೆಗಾಗಿ ಇದನ್ನು ಮಾಡಿರಿ ! : ಮಲಗುವ ಮೊದಲು ತಲೆ ಮತ್ತು ಕಾಲಿಗೆ ಎಣ್ಣೆ ಹಚ್ಚಬೇಕು ಹಾಗೂ ಕಿವಿಗೂ ೨-೨ ಹನಿ ಕೊಬ್ಬರಿ ಎಣ್ಣೆ ಹಾಕಬೇಕು. ಕಿವಿಯ ಪರದೆಯಲ್ಲಿ ಛಿದ್ರ ಅಥವಾ ಕಿವಿಗೆ ಬುರುಸು ಬಂದು ತುರಿಸುತ್ತಿದ್ದರೆ ಎಣ್ಣೆ ಹಾಕಬಾರದು.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೯.೪.೨೦೧೪)

 

Leave a Comment

Download ‘Ganesh Puja and Aarti’ App