ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಸಾಧನೆಯಲ್ಲಿ ಎಲ್ಲಿ ‘ಆದರೆ, ಏಕೆಂದರೆ’ ಬರುತ್ತದೆಯೋ, ಅಲ್ಲಿಯೇ ತಪ್ಪುತ್ತದೆ.’ – (ಪರಾತ್ಪರ ಗುರು) ಡಾ. ಆಠವಲೆ

ಅ. ಸ್ವೇಚ್ಛೆಯನ್ನು ನಾಶ ಮಾಡಿದ ಮೇಲೆಯೇ ಸಾಧನೆಯಲ್ಲಿ ಪ್ರಗತಿಯಾಗುತ್ತದೆ !

ಸಾಧಕ : ‘ಕುಟುಂಬದವರೂ ಸಾಧನೆಯನ್ನು ಮಾಡಬೇಕು’, ಎಂದು ನನ್ನ ಅಪೇಕ್ಷೆ ಇರುತ್ತದೆ. ನನಗೆ ಇತರ ಸೇವೆಗಳಿಗಿಂತ ಪ್ರಸಾರದ ಸೇವೆ ಹೆಚ್ಚು ಇಷ್ಟವಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ : ಸ್ವೇಚ್ಛೆಯನ್ನು ನಾಶ ಮಾಡಿದ ಮೇಲೆಯೇ ಸಾಧನೆಯಲ್ಲಿ ಪ್ರಗತಿಯಾಗುತ್ತದೆ. ‘ಸ್ವೇಚ್ಛೆಯಿಂದ ವರ್ತಿಸುವ ಮನುಷ್ಯನು ಬಾಲ ಮತ್ತು ಕೋಡುಗಳಿಲ್ಲದ ದೇಹಧಾರಿ ಪ್ರಾಣಿಯೇ ಆಗಿರುತ್ತಾನೆ’, ಎಂಬ ಒಂದು ಸಂಸ್ಕೃತ ಸುವಚನವಿದೆ. ಆದುದರಿಂದ ಸಾಧನೆಯಲ್ಲಿ ಪರೇಚ್ಛೆ ಮತ್ತು ಈಶ್ವರೇಚ್ಛೆಗಳಿಗೆ ಮಹತ್ವವಿದೆ. ಸಾಧನೆಯಲ್ಲಿ ಕೊನೆಗೆ ಸ್ವೇಚ್ಛೆಯನ್ನು ತ್ಯಾಗ ಮಾಡಬೇಕಾಗುತ್ತದೆ ಮತ್ತು ಎಲ್ಲವನ್ನೂ ದೇವರಿಗೆ ಒಪ್ಪಿಸಿದಾಗಲೇ ನಿಜವಾದ ಆನಂದ ದೊರಕುತ್ತದೆ.

ಆ. ಸೇವೆಯು ಸ್ವಲ್ಪ ಕಡಿಮೆಯಾದರೂ ನಡೆದೀತು; ಆದರೆ ಅದರಿಂದ ನಮ್ಮ ಪ್ರಗತಿಯಾಗುವುದು ಮಹತ್ವದ್ದಾಗಿದೆ.

ಸಾಧಕ : ಪ್ರಸಾರದ ಸೇವೆಯಿಂದಾಗಿ ನನಗೆ ಪ್ರತಿ ಎರಡು ಗಂಟೆಗೊಮ್ಮೆ ನನ್ನ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಮೊದಲು ಆಶ್ರಮದಲ್ಲಿರುವಾಗ ಅದು ಸಾಧ್ಯವಾಗುತ್ತಿತ್ತು.

ಪರಾತ್ಪರ ಗುರು ಡಾ. ಆಠವಲೆ : ಒಂದು ವೇಳೆ ಸೇವೆ ಸ್ವಲ್ಪ ಕಡಿಮೆಯಾದರೂ ನಡೆಯುತ್ತದೆ; ಆದರೆ ಅದರಿಂದ ನಮ್ಮ ಪ್ರಗತಿಯಾಗುವುದು ಮಹತ್ವದ್ದಾಗಿದೆ. ಇದಕ್ಕೆ ಉಪಾಯವೆಂದು ನಮ್ಮ ವರದಿಯನ್ನು ನಮ್ಮ ಹತ್ತಿರ ಒಂದು ಚಿಕ್ಕ ಕಾಗದದ ಮೇಲೆ ಸ್ವಲ್ಪದರಲ್ಲಿ ಬರೆದಿಡಬೇಕು ಮತ್ತು ಸಮಯ ಸಿಕ್ಕಾಗ ಸವಿಸ್ತಾರವಾಗಿ ಬರೆಯಬೇಕು.

ಇ. ಸಂತರಾದ ನಂತರವೇ ದೇವರ ಮೇಲಿನ ಶ್ರದ್ಧೆ ದೃಢವಾಗುತ್ತದೆ

ಸಾಧಕ : ದೇವರ ಮೇಲಿನ ನನ್ನ ಶ್ರದ್ಧೆ ಕಡಿಮೆ ಬೀಳುತ್ತದೆ.

ಪರಾತ್ಪರ ಗುರು ಡಾ. ಆಠವಲೆ : ಸಂತರಾದ ಮೇಲೆಯೇ ದೇವರ ಮೇಲಿನ ಶ್ರದ್ಧೆಯು ದೃಢವಾಗುತ್ತದೆ. ಅಲ್ಲಿಯವರೆಗೆ ಭಾವವನ್ನು ಹೆಚ್ಚಿಸಲು ಪ್ರಯತ್ನಿಸಬೇಕು.

ಈ. ‘ನನಗೆ ಸಾಧನೆಯಲ್ಲಿ ಮುಂದೆ-ಮುಂದೆ ಹೋಗುವುದಿದೆ’, ಎಂಬ ಸ್ವೇಚ್ಛೆಯು ಇರಲೇಬೇಕು !

ಸಾಧಕ : ನನಗೆ ಸಾಧನೆಯಲ್ಲಿ ಸ್ವಂತದ ಯಾವುದೇ ಇಚ್ಛೆ ಇಲ್ಲ. ನಾನು ಎಲ್ಲವನ್ನೂ ದೇವರಿಗೆ ಒಪ್ಪಿಸಿದ್ದೇನೆ.

ಪರಾತ್ಪರ ಗುರು ಡಾ. ಆಠವಲೆ : ‘ನನಗೆ ಸಾಧನೆಯಲ್ಲಿ ಮುಂದೆ-ಮುಂದೆ ಹೋಗಬೇಕಾಗಿದೆ’, ಈ ಸ್ವೇಚ್ಛೆಯು ಇರಲೇಬೇಕು. ಹೀಗಾದರೆ ಮಾತ್ರ ನಾವು ನಮ್ಮಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಕೇವಲ ಪ್ರಗತಿಯ ಅಪೇಕ್ಷೆ ಬೇಡ.

ಉ. ಸಾಧನೆಯಲ್ಲಿ ಮನಸ್ಸನ್ನು ಖಾಲಿ ಮಾಡುವುದಿರುತ್ತದೆ !

ಸಾಧಕ : ಪ್ರಾರ್ಥನೆಯನ್ನು ಮಾಡುವಾಗ ಕೆಲವೊಮ್ಮೆ ನನಗೆ ದೇವರ ಸ್ಮರಣೆಯಾಗುತ್ತದೆ; ಆದರೆ ಶಬ್ದಗಳೇ ಹೊಳೆಯುವುದಿಲ್ಲ. ಆ ಸಮಯದಲ್ಲಿ ನನ್ನ ಮನಸ್ಸು ನಿರ್ವಿಚಾರ ಸ್ಥಿತಿಯಲ್ಲಿರುತ್ತದೆ. ಪ್ರಾರ್ಥನೆಯನ್ನು ಮಾಡುವಾಗ ನನಗೆ ದೇವರ ಮುಖ ಕಾಣಿಸುತ್ತದೆ, ಹಾಗೆಯೇ ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ದೇವರ ಚರಣಗಳು ಕಾಣಿಸುತ್ತವೆ. ಇಂತಹ ಸ್ಥಿತಿ ೪-೫ ನಿಮಿಷಗಳ ಕಾಲ ಇರುತ್ತದೆ.

ಪರಾತ್ಪರ ಗುರು ಡಾ. ಆಠವಲೆ : ಬಹಳ ಒಳ್ಳೆಯದು ! ಕೊನೆಗೆ ಸಾಧನೆಯಲ್ಲಿ ಮನಸ್ಸನ್ನೇ ಖಾಲಿ ಮಾಡುವುದಿರುತ್ತದೆ. ಅಧ್ಯಾತ್ಮವು ಶಬ್ದಗಳ ಆಚೆಗಿನ ಶಾಸ್ತ್ರವಾಗಿದೆ. ಈಶ್ವರನು ಶಬ್ದಗಳ ಆಚೆಗಿರುತ್ತಾನೆ.

ಊ. ಅನಾರೋಗ್ಯದಲ್ಲಿದ್ದಾಗ ಆದಷ್ಟು ಹೆಚ್ಚು ಸಮಯ ನಾಮಜಪ ಮತ್ತು ವ್ಯಷ್ಟಿ ಸಾಧನೆಯನ್ನು ಮಾಡಿ ಮನಸ್ಸನ್ನು ಅರ್ಪಿಸಬೇಕು !

ಸಾಧಕ : ಮೊದಲು ನನಗೆ ಸೇವೆಯನ್ನು ಮಾಡಲು ಸಾಧ್ಯವಾಗುತ್ತಿತ್ತು; ಆದರೆ ಕಾಯಿಲೆಯಿಂದಾಗಿ ಈಗ ಅದು ಸಾಧ್ಯವಾಗುವುದಿಲ್ಲ. ನಾನೇನು ಪ್ರಯತ್ನ ಮಾಡಲಿ ?

ಪರಾತ್ಪರ ಗುರು ಡಾ. ಆಠವಲೆ : ಸಾಧನೆಯಲ್ಲಿ ತನು-ಮನ-ಧನವನ್ನು ಅರ್ಪಿಸುವುದಕ್ಕೆ ಬಹಳ ಮಹತ್ವವಿದೆ. ಅನಾರೋಗ್ಯದಲ್ಲಿರುವಾಗ ದೇವರಿಗೆ ನಿಮ್ಮ ಸ್ಥಿತಿ ಗೊತ್ತಿರುತ್ತದೆ. ಆಗ ಅವನಿಗೆ ‘ನೀವು ಶಾರೀರಿಕ ಸೇವೆಯನ್ನು ಮಾಡಬೇಕು’, ಎಂಬ ಅಪೇಕ್ಷೆ ಇರುವುದಿಲ್ಲ. ಅನಾರೋಗ್ಯವಿರುವಾಗ ಹೆಚ್ಚೆಚ್ಚು ಸಮಯ ನಾಮಜಪ ಮತ್ತು ವ್ಯಷ್ಟಿ ಸಾಧನೆಯನ್ನು ಮಾಡಿ ಮನಸ್ಸನ್ನು ಅರ್ಪಿಸಬೇಕು.

ಎ. ವಯಸ್ಸಾದ ಮೇಲೆ ಯಾವುದು ಹೆಚ್ಚೆಚ್ಚು ಮಾಡಲು ಸಾಧ್ಯವಾಗುತ್ತದೆಯೋ, ಅದನ್ನು ಮಾಡುವುದು ಮಹತ್ವದ್ದಾಗಿದೆ !

ವಯಸ್ಕರ ಸಾಧಕ : ನಾನು ಕೇವಲ ಸೇವೆ ಮತ್ತು ನಾಮಜಪವನ್ನಷ್ಟೇ ಮಾಡುತ್ತೇನೆ. ಬಾಕಿ ಏನನ್ನೂ ಮಾಡುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆ : ತುಂಬಾ ಆಯಿತು ! ವಯಸ್ಸಾದ ನಂತರ ಯಾವುದು ಹೆಚ್ಚೆಚ್ಚು ಸಾಧ್ಯವಾಗುತ್ತದೆಯೋ, ಅದನ್ನು ಮಾಡುವುದು ಮಹತ್ವದ್ದಾಗಿದೆ.

ಓ. ನೌಕರಿ ಮಾಡುವಾಗ ಇಟ್ಟುಕೊಳ್ಳಬೇಕಾದ ದೃಷ್ಟಿಕೋನ !

ಸಾಧಕ : ನಾನು ನೌಕರಿ ಮಾಡುವಾಗ ಸಾಧನೆಯೆಂದು ಎಲ್ಲ ಕೆಲಸಗಳನ್ನು ಮಾಡುತ್ತೇನೆ. ಕಠಿಣ ಪ್ರಸಂಗ ಬಂದರೂ, ನಾನು ಅದರ ಮೇಲೆ ಜಯ ಸಾಧಿಸುತ್ತೇನೆ.

ಪರಾತ್ಪರ ಗುರು ಡಾ. ಆಠವಲೆ : ನೌಕರಿಯನ್ನು ಮಾಡುವಾಗ ಈ ದೃಷ್ಟಿಕೋನವೇ ಮಹತ್ವದ್ದಾಗಿದೆ. ‘ಭೂತಕಾಲದಲ್ಲಿನ ಅಡಚಣೆಗಳ ಮೇಲೆ ವರ್ತಮಾನದಲ್ಲಿದ್ದು ಪ್ರಯತ್ನಿಸುವುದು’ ಮಹತ್ವದ್ದಾಗಿದೆ, ಹಾಗೆಯೇ ‘ಭವಿಷ್ಯದ ಕಾಳಜಿ ಇಲ್ಲದಿರುವುದು’, ಇದು ಸಹ ತುಂಬಾ ಚೆನ್ನಾಗಿದೆ.

ಔ. ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡ ಮೇಲೆ, ಸಾಧನೆಯಲ್ಲಿ ಸ್ಥಿರತೆ ಬರುತ್ತದೆ !

ಸಾಧಕ : ನನ್ನ ಸಾಧನೆಯ ಸ್ಥಿತಿಯು ಸತತವಾಗಿ ಮೇಲೆ-ಕೆಳಗೆ ಆಗುತ್ತಿರುತ್ತದೆ. ಸಾಧನೆಯಲ್ಲಿ ಸಾತತ್ಯ ಉಳಿಯಲು ನಾನು ಯಾವ ಪ್ರಯತ್ನಗಳನ್ನು ಮಾಡಲಿ ?

ಪರಾತ್ಪರ ಗುರು ಡಾ. ಆಠವಲೆ : ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಳ್ಳುವವರೆಗೆ ಸಾಧನೆಯಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ‘ಎರಡು ಹೆಜ್ಜೆ ಮುಂದೆ ಹೋಗುವುದು ಮತ್ತು ಒಂದು ಹೆಜ್ಜೆ ಹಿಂದೆ ಬರುವುದು’, ಹೀಗೆ ನಡೆದೇ ಇರುತ್ತದೆ. ಒಂದು ಬಾರಿ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡರೆ, ಸಾಧನೆಯಲ್ಲಿ ಸ್ಥಿರತೆ ಬರುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ

ಸೇವೆ

ಅ. ಸಾಧಕರು ‘ಎಷ್ಟು ಗಂಟೆ ಸೇವೆಯನ್ನು ಮಾಡುತ್ತಾರೆ ?’ ಎನ್ನುವುದಕ್ಕಿಂತ, ‘ಸೇವೆಯನ್ನು ಮಾಡುವಾಗ ಅವರಿಗೆ ಆನಂದ ಸಿಗುತ್ತದೆಯೇ ?’, ಎನ್ನುವುದರ ಕಡೆಗೆ ಗಮನ ಹರಿಸಬೇಕು. ‘ಮನಸ್ಸಿಗೆ ಆನಂದ ಅನಿಸುತ್ತದೆಯೇ ?’ ಎಂಬುದನ್ನು ನೋಡಬೇಕು.

ಆ. ಪ್ರಸಾರದ ಸೇವೆಯಲ್ಲಿ ನಾವು ಎಲ್ಲರಿಗೂ ಆನಂದವನ್ನು ಕೊಡಬಹುದು. ಇದುವೇ ಸೇವೆಯ ಆನಂದವಾಗಿರುತ್ತದೆ,

ಇ. ಗ್ರಂಥಗಳ ಲೇಖನದ ಸೇವೆಯು ಎಲ್ಲಕ್ಕಿಂತ ದೊಡ್ಡ ಸಮಷ್ಟಿ ಸೇವೆಯಾಗಿದೆ; ಏಕೆಂದರೆ ಗ್ರಂಥಗಳು ದೀರ್ಘಕಾಲದ ವರೆಗೆ ಉಳಿಯುತ್ತವೆ.

ಈ. ಮನೆಯಲ್ಲಿರುವ ರೋಗಿ ಅಥವಾ ವಯಸ್ಸಾದ ವ್ಯಕ್ತಿಗಳ ಸೇವೆಯನ್ನು ಮಾಡುವುದು, ಕೂಡ ಸಾಧನೆಯೇ ಆಗಿದೆ ! : ಮನೆಯಲ್ಲಿ ಯಾರಾದರು ರೋಗಪೀಡಿತ ಅಥವಾ ವಯಸ್ಸಾದವರಿದ್ದರೆ ಮತ್ತು ಅವರ ಸಹಾಯಕ್ಕೆ ನಮ್ಮ ಸಮಯವನ್ನು ಕೊಡಬೇಕಾಗಿದ್ದರೆ, ‘ಅವರ ಸೇವೆಯನ್ನು ಮಾಡುವುದು, ಒಂದು ರೀತಿಯಲ್ಲಿ ಸಾಧನೆಯೇ ಆಗಿದೆ. ರೋಗಿ ಅಥವಾ ವಯಸ್ಸಾದ ವ್ಯಕ್ತಿಯು ‘ಈಶ್ವರನ ರೂಪ ಅಥವಾ ಗುರುರೂಪನಾಗಿದ್ದಾನೆ, ಎನ್ನುವ ಭಾವವನ್ನಿಟ್ಟುಕೊಂಡು ಸೇವೆಯನ್ನು ಮಾಡಬೇಕು, ಇದರಿಂದ ‘ನಮ್ಮ ಸಮಯ ವ್ಯರ್ಥವಾಗುತ್ತಿದೆ’, ಎಂಬ ವಿಚಾರ ಮನಸ್ಸಿನಲ್ಲಿ ಬರುವುದಿಲ್ಲ. – ಪರಾತ್ಪರ ಗುರು ಡಾ. ಆಠವಲೆ

Leave a Comment