ಸ್ವಭಾವದೋಷಗಳಿಂದಾಗುವ ಹಾನಿ

ಅ. ತನಗೆ ಮತ್ತು ಇತರರಿಗೆ ತೊಂದರೆಯಾಗುವುದು : ನಮ್ಮಲ್ಲಿರುವ ವಿವಿಧ ಸ್ವಭಾವ ದೋಷಗಳಿಂದಾಗಿ ಕೇವಲ ನಮಗೆ ಮಾತ್ರವಲ್ಲ, ಇತರರಿಗೂ ತೊಂದರೆಯಾಗುತ್ತದೆ.

ಆ. ಸ್ವಭಾವದೋಷಗಳಿಂದಾಗುವ ದುಷ್ಪರಿಣಾಮಗಳು : ಭಯವಾಗುವುದು, ನಾಚಿಕೆಯಾಗುವುದು, ಮನಬಿಚ್ಚಿ ಮಾತನಾಡದಿರುವುದು ಮತ್ತು ಸಂಕೋಚವಾಗುವುದು ಇವು ಸ್ವಭಾವದೋಷಗಳ ವಿವಿಧ ಲಕ್ಷಣಗಳಾಗಿವೆ. ನಮ್ಮಲ್ಲಿರುವ ಸ್ವಭಾವದೋಷಗಳಿಂದಾಗಿ ನಮಗೆ ‘ಒತ್ತಡವಾಗುವುದು, ಚಿಂತೆ ಮಾಡುವುದು ಮತ್ತು ಅಸ್ವಸ್ಥತೆ ಅನಿಸುವುದು’ ಇಂತಹ ತೊಂದರೆಗಳಾಗುತ್ತವೆ ಮತ್ತು ಇದರಿಂದ ನಮ್ಮ ರೋಗಗಳೂ ಹೆಚ್ಚಾಗಬಹುದು.

ಶಾರೀರಿಕ ಸ್ತರದಲ್ಲಿ

ಸ್ವಭಾವದೋಷಗಳಿಂದ ಶಾರೀರಿಕ ರೋಗಗಳೂ ಉದ್ಭವಿಸುತ್ತವೆ. ಅವುಗಳಿಗೆ ‘ಮನೋಕಾಯಿಕ ರೋಗಗಳು’ ಎಂದು ಹೇಳುತ್ತಾರೆ, ಉದಾ. ಹೆಚ್ಚು ಚಿಂತೆ ಮಾಡುವ ಸ್ವಭಾವವಿದ್ದರೆ ಶರೀರದಲ್ಲಿನ ಎಲ್ಲಾ ಅವಯವಗಳ ಮೇಲೆ ಅದರ ದುಷ್ಪರಿಣಾಮವಾಗುತ್ತದೆ. ಇದರಿಂದ ಆಮ್ಲಪಿತ್ತ, ಅಲ್ಸರ್, ದಮ್ಮು, ಹೃದಯದ ರೋಗಗಳು, ರಕ್ತದೊತ್ತಡ ಇತ್ಯಾದಿ ಕಾಯಿಲೆಗಳು ಉದ್ಭವಿಸುತ್ತವೆ.

ಮಾನಸಿಕ ಸ್ತರದಲ್ಲಿ

ಮನೋರೋಗಗಳು ಉದ್ಭವಿಸುವುದು : ಮನಸ್ಸಿನ ಕಾರ್ಯಕ್ಷಮತೆಯು ಕಡಿಮೆಯಾಗಿ ಮನೋರೋಗಗಳು ಉದ್ಭವಿಸುತ್ತವೆ.

ಮಾನಸಿಕ ರೋಗಗಳಾಗುವುದು : ಸ್ವಭಾವದೋಷಗಳಿಂದ ನಿರಾಶೆ, ಏಕಾಗ್ರತೆ ಮತ್ತು ಅತ್ಮವಿಶ್ವಾಸದ ಅಭಾವ, ಮರೆವು, ಉಧ್ವಸ್ತ ವ್ಯಕ್ತಿತ್ವ (ಸ್ಕಿಜೋಫ್ರೆನಿಯಾ) ಇಂತಹ ವಿವಿಧ ಮಾನಸಿಕ ರೋಗಗಳು ಉದ್ಭವಿಸುತ್ತವೆ.

ಒತ್ತಡಗ್ರಸ್ತ ಜೀವನ : ಸ್ವಭಾವದೋಷಗಳು ಹೆಚ್ಚಿದ್ದಷ್ಟು ಮನಸ್ಸಿನ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ಯಾರಾದರೊಬ್ಬ ವ್ಯಕ್ತಿಯ ಸ್ವಭಾವವು ಚಿಂತೆ ಮಾಡುವುದಾಗಿದ್ದಲ್ಲಿ ಮತ್ತು ಅವನು ಕೋಪಿಷ್ಠನಾಗಿದ್ದರೆ ಚಿಂತೆ ಮಾಡುವುದು ಮತ್ತು ಕೋಪ ಇವೆರಡರ ಒತ್ತಡವು ಅವನ ಮನಸ್ಸಿನ ಮೇಲಾಗುತ್ತದೆ. ಮನಸ್ಸಿನ ಮೇಲೆ ಒತ್ತಡ ಬರುವುದರಿಂದ ಅವನಿಗೆ ಇತರರೊಂದಿಗೆ ಹೊಂದಿಕೊಳ್ಳುವುದು ಕಠಿಣವಾಗುತ್ತದೆ. ಕ್ಷುಲ್ಲಕ ಘಟನೆಗಳಿಂದಲೂ ಅವನ ಮನಸ್ಸಿನ ಮೇಲೆ ಒತ್ತಡವುಂಟಾಗುತ್ತದೆ.

ವ್ಯಸನಾಧೀನತೆ : ಮಾನಸಿಕ ಒತ್ತಡದಿಂದ ಹೊರಬರಲು ವ್ಯಕ್ತಿ ಸಿಗರೇಟು, ಸಾರಾಯಿ ಮುಂತಾದ ವ್ಯಸನಗಳ ಆಧಾರವನ್ನು ಪಡೆಯುತ್ತಾನೆ.

ಬೌದ್ಧಿಕ ಸ್ತರದಲ್ಲಿ

ಸ್ವಭಾವದೋಷಗಳಿಂದಾಗಿ ಮನಸ್ಸಿನ ಮೇಲೆ ವಿವೇಕ ಬುದ್ಧಿಯ ಪ್ರಭಾವ ನಿರ್ಮಾಣವಾಗಲಾರದು : ಜೀವನದಲ್ಲಿ ಯಾವ ಕೃತಿಯನ್ನು ಯೋಗ್ಯ ರೀತಿಯಲ್ಲಿ ಮತ್ತು ಹೇಗೆ ಮಾಡಬೇಕು ಎಂಬುದು ಬುದ್ಧಿಯಿಂದ ತಿಳಿಯುತ್ತದೆ. ಸ್ವಭಾವದೋಷಗಳು ಹೆಚ್ಚಿರುವುದರಿಂದ ಆ ದೋಷಗಳಿಗನುಸಾರ ಯಾವುದಾದರೊಂದು ಅಯೋಗ್ಯ ಕೃತಿ ಅಥವಾ ಪ್ರತಿಕ್ರಿಯೆಯು ಏಕೆ ಅಯೋಗ್ಯವಾಗಿದೆ ಎಂಬುದು ಬುದ್ಧಿಯಿಂದ ಸ್ಪಷ್ಟವಾಗಿದ್ದರೂ, ಆ ಅಯೋಗ್ಯ ಕೃತಿ ವ್ಯಕ್ತಿಯಿಂದ ಪುನಃ ಪುನಃ ಆಗುತ್ತಿರುತ್ತದೆ ಮತ್ತು ಮನಸ್ಸಿನಲ್ಲಿ ಅಯೋಗ್ಯ ಪ್ರತಿಕ್ರಿಯೆ ನಿರಂತರವಾಗಿ ಬರುತ್ತಿರುತ್ತದೆ.

ಸ್ವಭಾವದೋಷ ನಿರ್ಮೂಲನೆಯಿಂದ ವಿವೇಕಬುದ್ಧಿಯು ಜಾಗೃತವಾಗಿ ಚಿತ್ತ ಶುದ್ಧವಾಗುವ ಪ್ರಕ್ರಿಯೆ : ಸಾಧನೆಯಲ್ಲಿ ಚಿತ್ತಶುದ್ಧಿಗೆ ಮಹತ್ವವಿದೆ. ಮನಸ್ಸು ಸಂಕಲ್ಪ ಹಾಗೂ ವಿಕಲ್ಪಗಳನ್ನು ನಿರ್ಮಿಸುತ್ತದೆ ಮತ್ತು ನಿರ್ಣಯಕ್ಕಾಗಿ ಬುದ್ಧಿಯೆಡೆಗೆ ಕಳುಹಿಸುತ್ತದೆ. ಬುದ್ಧಿಯಲ್ಲಿ ವಿವೇಕ ಇಲ್ಲದಿದ್ದರೆ, ವಿಕಲ್ಪಗಳು ಪುನಃ ಹಾಗೆಯೇ ಚಿತ್ತದೆಡೆಗೆ ಹೋಗುತ್ತವೆ. ಚಿತ್ತವು ಮೊದಲು ಹೇಗೆ ಅಶುದ್ಧವಾಗಿತ್ತೋ, ಹಾಗೆಯೇ ಅಶುದ್ಧವಾಗಿರುತ್ತದೆ. ಆದುದರಿಂದ ಬುದ್ಧಿಯಲ್ಲಿ ವಿವೇಕ ಜಾಗೃತವಾದಲ್ಲಿ ಚಿತ್ತವು ವಿವೇಕದ ಮೂಲಕ ಕೆಟ್ಟ ವಿಚಾರಗಳನ್ನು ಒಳಗೆ ಬರಲು ಬಿಡದೆ ದೈವೀ ವಿಚಾರಗಳಿಗೆ ಪ್ರಾಧಾನ್ಯತೆಯನ್ನು ಕೊಡುತ್ತದೆ. ಈ ರೀತಿ ದೈವೀ ವಿಚಾರಗಳು ಹೆಚ್ಚುತ್ತಾ ಹೋಗಿ ನಿಧಾನವಾಗಿ ಚಿತ್ತವು ಶುದ್ಧವಾಗುತ್ತದೆ. – ಪ.ಪೂ. ಪರಶರಾಮ ಮಾಧವ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

ಸ್ವಭಾವದೋಷಗಳು ಅಧಿಕವಾಗಿದ್ದಲ್ಲಿ ಗ್ರಹಿಸುವ ಶಕ್ತಿ ಮತ್ತು ವಿಚಾರ ಪ್ರಕ್ರಿಯೆಗಳ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ.

ಕೌಟುಂಬಿಕ ಸ್ತರದಲ್ಲಿ

ಕುಟುಂಬದಲ್ಲಿನ ಸದಸ್ಯರಲ್ಲಿರುವ ಸ್ವಭಾವ ದೋಷಗಳಿಂದಾಗಿ ಪರಸ್ಪರರಲ್ಲಿ ಸುಸಂವಾದ ಸಾಧಿಸಲು ಅಡಚಣೆಗಳು ಬರುತ್ತವೆ. ಕುಟುಂಬದಲ್ಲಿನ ಯಾರಾದರೊಬ್ಬ ವ್ಯಕ್ತಿಯು ಸಿಟ್ಟಿನ ಸ್ವಭಾವದವನಾಗಿದ್ದಲ್ಲಿ, ಆ ಒಬ್ಬ ವ್ಯಕ್ತಿಯಿಂದ ಮನೆಯಲ್ಲಿನ ಸಂಪೂರ್ಣ ವಾತಾವರಣದಲ್ಲಿ ಒತ್ತಡ ನಿರ್ಮಾಣವಾಗುತ್ತದೆ ಮತ್ತು ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತದೆ.

ಸಾಮಾಜಿಕ

ವ್ಯಕ್ತಿಯ ಸ್ವಭಾವದೋಷಗಳಿಂದಾಗಿ ಅವನ ಸಂಪರ್ಕದಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಗೆ ತೊಂದರೆಯಾಗುತ್ತದೆ.

ಆಧ್ಯಾತ್ಮಿಕ ದೃಷ್ಟಿಯಿಂದ

ಈಶ್ವರನು ದೋಷರಹಿತ, ಸರ್ವಗುಣಸಂಪನ್ನ ಮತ್ತು ಪರಿಪೂರ್ಣನಾಗಿರುವುದರಿಂದ ಸಾಧನೆಯಿಂದ ಅವನೊಂದಿಗೆ ಏಕರೂಪವಾಗುವಾಗ ಸ್ವಭಾವದೋಷ ನಿರ್ಮೂಲನ ಮತ್ತು ಗುಣವೃದ್ಧಿಯನ್ನು ಮಾಡುವುದು ಆವಶ್ಯಕವಾಗಿದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿ ಪ್ರಕ್ರಿಯೆ’ ಗ್ರಂಥ)

Leave a Comment