ಸಾಧನೆಗೆ ಸ್ವಭಾವದೋಷ ನಿರ್ಮೂಲನೆಯ ಪ್ರಯತ್ನವನ್ನು ಜೊತೆಗೂಡಿಸುವುದು ಅನಿವಾರ್ಯ

ಹೆಚ್ಚಿನ ಸಲ ನಮ್ಮ ಜೀವನದಲ್ಲಿ ಒತ್ತಡ ನಿರ್ಮಾಣವಾದಾಗ ಅದರ ಕಾರಣವನ್ನುನಮ್ಮ ಸುತ್ತಮುತ್ತಲಿನ ವಾತಾವರಣ, ಪರಿಸ್ಥಿತಿ ಮತ್ತು ಇತರ ವ್ಯಕ್ತಿಗಳ ಸ್ವಭಾವದೋಷಗಳ ಮೇಲೆ ಹೊರಿಸಲಾಗುತ್ತದೆ; ಆದರೆ ಅವುಗಳ ಮೂಲ ಕಾರಣ, ಅಂದರೆ ತಮ್ಮಲ್ಲಿನ ಸ್ವಭಾವದೋಷಗಳನ್ನು ಹುಡುಕುವ ಪ್ರಯತ್ನವೇ ಆಗುವುದಿಲ್ಲ.

ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ |‘ ಎಂಬ ವಚನಕ್ಕನುಸಾರ ಮನಸ್ಸೇ ಮನುಷ್ಯನ ಬಂಧನ (ಜನ್ಮ-ಮೃತ್ಯುಗಳ ಚಕ್ರದಲ್ಲಿ ಸಿಲುಕುವುದು) ಮತ್ತು ಮೋಕ್ಷಕ್ಕೆ (ಜನ್ಮ-ಮೃತ್ಯುವಿನ ಚಕ್ರದಿಂದ ಹೊರಬಿದ್ದು ನಿತ್ಯ ಸುಖ ದುಃಖಗಳ ಆಚೆಗಿರುವ ಅನಂದ ಮತ್ತು ಶಾಂತಿಯ ಅನುಭೂತಿಯನ್ನು ಪಡೆಯಲು) ಕಾರಣವಾಗಿರುತ್ತದೆ. ವ್ಯಕ್ತಿಯಲ್ಲಿನ ಸ್ವಭಾವದೋಷಗಳು ವ್ಯಕ್ತಿಯ ದುಃಖಕ್ಕೆ ಮತ್ತು ಗುಣಗಳು ವ್ಯಕ್ತಿಯ ಸುಖಕ್ಕೆ ಕಾರಣವಾಗಿರುತ್ತವೆ. ದೈನಂದಿನ ಜೀವನದಲ್ಲಿನ ವಿವಿಧ ಪ್ರಸಂಗಗಳಲ್ಲಿ ನಮ್ಮ ವರ್ತನೆಯಿಂದ ನಮ್ಮಲ್ಲಿನ ಗುಣ- ದೋಷಗಳು ಗಮನಕ್ಕೆ ಬರುತ್ತವೆ. ಸ್ವಭಾವದೋಷಗಳಿಂದಾಗಿ ಜೀವನದಲ್ಲಿ ಪುನಃ ಪುನಃ ಸಂಘರ್ಷದ ಹಾಗೂ ಚಿಂತೆಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೆಚ್ಚಿನ ಸಲ ನಮ್ಮ ಜೀವನದಲ್ಲಿ ಒತ್ತಡ ನಿರ್ಮಾಣವಾದಾಗ ಅದರ ಕಾರಣವನ್ನು ನಮ್ಮ ಸುತ್ತಮುತ್ತಲಿನ ವಾತಾವರಣ, ಪರಿಸ್ಥಿತಿ ಮತ್ತು ಇತರ ವ್ಯಕ್ತಿಗಳ ಸ್ವಭಾವದೋಷಗಳ ಮೇಲೆ ಹೊರಿಸಲಾಗುತ್ತದೆ; ಆದರೆ ಅವುಗಳ ಮೂಲ ಕಾರಣ, ಅಂದರೆ ತಮ್ಮಲ್ಲಿನ ಸ್ವಭಾವದೋಷಗಳನ್ನು ಹುಡುಕುವ ಪ್ರಯತ್ನವೇ ಆಗುವುದಿಲ್ಲ. ಆದುದರಿಂದ ಸ್ವಭಾವದೋಷಗಳು ಹಾಗೆಯೇ ಉಳಿಯುತ್ತವೆ. ಇದರ ಪರಿಣಾಮದಿಂದ ಮನಃಶಾಂತಿ ಸಿಗುವುದಿಲ್ಲ; ಆದುದರಿಂದ ನಮ್ಮ ಜೀವನವು ಸುಖಿಯಾಗಲು ಸ್ವಭಾವದೋಷಗಳ ಅಡಚಣೆಯನ್ನು ದೂರಗೊಳಿಸುವುದು ಅನಿವಾರ್ಯವಾಗಿದೆ.

ಆದರ್ಶ ವ್ಯಕ್ತಿತ್ವವನ್ನು ವಿಕಸಿತಗೊಳಿಸುವುದರ ಆವಶ್ಯಕತೆ

ಜೀವನದಲ್ಲಿನ ಯಾವುದೇ ಕಠಿಣ ಪ್ರಸಂಗದಲ್ಲಿ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳದೇ, ಆ ಪ್ರಸಂಗವನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗಬೇಕು, ಹಾಗೆಯೇ ಯಾವಾಗಲೂ ಆದರ್ಶ ಕೃತಿಯಾಗಬೇಕು ಎಂಬುದಕ್ಕಾಗಿ ವ್ಯಕ್ತಿಯ ಮನೋಬಲ ಉತ್ತಮವಾಗಿರುವುದು ಹಾಗೂ ವ್ಯಕ್ತಿತ್ವವು ಆದರ್ಶವಾಗಿರುವುದು ಆವಶ್ಯಕವಾಗಿರುತ್ತದೆ. ಸ್ವಭಾವ ದೋಷಗಳು ವ್ಯಕ್ತಿಯ ಮನಸ್ಸನ್ನು ದುರ್ಬಲಗೊಳಿಸಲು ಕಾರಣವಾಗಿರುತ್ತವೆ ಮತ್ತು ಗುಣಗಳು ಆದರ್ಶ ವ್ಯಕ್ತಿತ್ವವನ್ನು ವಿಕಸಿತಗೊಳಿಸಲು ಸಹಾಯ ಮಾಡುತ್ತವೆ. ಆದುದರಿಂದ ಆದರ್ಶ ವ್ಯಕ್ತಿತ್ವವನ್ನು ವಿಕಸಿತಗೊಳಿಸಲು ವ್ಯಕ್ತಿಯಲ್ಲಿನ ಸ್ವಭಾವದೋಷಗಳನ್ನು ದೂರಗೊಳಿಸಿ ಗುಣವೃದ್ಧಿ ಮಾಡುವುದು ಆವಶ್ಯಕವಾಗಿದೆ.

ಸ್ವಭಾವದೋಷಗಳು ಆಧ್ಯಾತ್ಮಿಕ ಉನ್ನತಿಗೂ ಬಾಧಕ

ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ, ಅಂದರೆ ಸಾಧನೆಯಲ್ಲಿಯೂ ಸ್ವಭಾವದೋಷಗಳೇ (ಷಡ್ರಿಪು) ಪ್ರಮುಖ ಅಡಚಣೆಗಳಾಗಿರುತ್ತವೆ. ಕಾಮ-ಕ್ರೋಧಾದಿ ಷಡ್ರಿಪುಗಳ ಪ್ರಭಾವದಿಂದ ಅನೇಕ ಮಹಾತಪಸ್ವಿಗಳ, ಮುನಿಶ್ರೇಷ್ಠರ ಮತ್ತು ಪುಣ್ಯಶೀಲ ರಾಜರುಗಳ ಪಾರಮಾರ್ಥಿಕ ಅಧೋಗತಿಯಾದ ಅನೇಕ ಉದಾಹರಣೆಗಳು ಪುರಾಣಗಳಲ್ಲಿನ ಕಥೆಗಳಲ್ಲಿ ಓದಲು ಸಿಗುತ್ತವೆ. ಸ್ವಭಾವದೋಷಗಳ ಮಾಧ್ಯಮದಿಂದ ಷಡ್ರಿಪುಗಳ ಪ್ರಕಟೀಕರಣವಾಗುತ್ತದೆ. ಸಾಧನೆಯಿಂದ ಪ್ರಾಪ್ತವಾದ ಇಂಧನವು (ಶಕ್ತಿ) ಸ್ವಭಾವದೋಷಗಳಿಂದಾಗುವ ತಪ್ಪುಗಳಿಂದ ಖರ್ಚಾಗುತ್ತದೆ. ಸ್ವಭಾವದೋಷಗಳು ಹೆಚ್ಚಿದ್ದಷ್ಟು ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆಯಲ್ಲಿ ಆಗುವ ತಪ್ಪುಗಳ ಪ್ರಮಾಣವೂ ಹೆಚ್ಚಿರುತ್ತದೆ ಮತ್ತು ತಪ್ಪುಗಳು ಹೆಚ್ಚಿದ್ದಷ್ಟು ನಾವು ಈಶ್ವರನಿಂದ ಅಷ್ಟೇ ಪ್ರಮಾಣ ದಲ್ಲಿ ದೂರಹೋಗುತ್ತೇವೆ.

ಹೇಗೆ ಎಣ್ಣೆಯ ಒಂದು ಹನಿಯೂ ಅದರ ಗುಣಧರ್ಮದ ಭಿನ್ನತೆಯಿಂದ ನೀರಿನಲ್ಲಿ ಏಕರೂಪವಾಗುವುದಿಲ್ಲವೋ, ಹಾಗೆಯೇ ಸ್ವಭಾವದೋಷ ನಿರ್ಮೂಲನೆ ಮತ್ತು ಗುಣವೃದ್ಧಿಯನ್ನು ಮಾಡದೇ ಸಾಧಕನಿಗೆ ದೋಷರಹಿತ ಹಾಗೂ ಸರ್ವಗುಣ ಸಂಪನ್ನನಾದ ಈಶ್ವರನೊಂದಿಗೆ ಏಕರೂಪವಾಗಲು ಸಾಧ್ಯವಾಗುವುದಿಲ್ಲ. ಆದುದರಿಂದ ಸಾಧನೆಯಲ್ಲಿನ ಷಡ್ರಿಪುಗಳ ಅಡಚಣೆಯನ್ನು ದೂರಗೊಳಿಸಿ ಈಶ್ವರನೊಂದಿಗೆ ಏಕರೂಪವಾಗಲು ಸ್ವಭಾವದೋಷ ನಿರ್ಮೂಲನೆ ಹಾಗೂ ಗುಣವೃದ್ಧಿ ಮಾಡುವುದು ಆವಶ್ಯಕವಾಗಿದೆ.

ಸಾಧನೆಗೆ ಸ್ವಭಾವದೋಷ ನಿರ್ಮೂಲನೆಯ ಪ್ರಯತ್ನವನ್ನು ಜೊತೆಗೂಡಿಸುವುದು ಅನಿವಾರ್ಯ

ಹೆಚ್ಚಿನ ಸಾಧಕರಿಗೆ ಸಾಧನೆಯಿಂದ ಸ್ವಭಾವದೋಷಗಳ (ಷಡ್ರಿಪುಗಳ) ನಿರ್ಮೂಲನೆಯು ತಾನಾಗಿಯೇ ಆಗುತ್ತದೆ ಎಂದು ಅನಿಸುತ್ತದೆ. ತತ್ತ್ವತಃ ಇದು ಯೋಗ್ಯವಾಗಿದ್ದರೂ, ಪ್ರತಿಯೊಬ್ಬರಲ್ಲಿ ಈ ಪ್ರಕ್ರಿಯೆ ಸಹಜವಾಗಿ ಸಾಧ್ಯವಾಗಬಹುದು ಎಂದು ಹೇಳಲು ಆಗುವುದಿಲ್ಲ. ಇದು ಸಾಧನೆಯ ಧ್ಯೇಯ, ಈಶ್ವರಪ್ರಾಪ್ತಿಯ ತಳಮಳ, ಅಂತಃಕರಣದಲ್ಲಿ ಈಶ್ವರನ ಬಗ್ಗೆ ನಿರ್ಮಾಣವಾದ ಕೇಂದ್ರ, ಪ್ರತ್ಯಕ್ಷ ಸಾಧನೆ ಇತ್ಯಾದಿ ವಿವಿಧ ಘಟಕಗಳ ಮೇಲೆ ಅವಲಂಬಿಸಿರುತ್ತದೆ. ಸಾಧನೆಯ ಉದ್ದೇಶವು ಷಡ್ರಿಪುಗಳ ನಿರ್ಮೂಲನೆ ಮಾಡುವುದು, ಅಂದರೆ ಎಲ್ಲ ರೀತಿಯ ಕ್ರಿಯೆ-ಪ್ರಕ್ರಿಯೆಗಳ ಮೇಲೆ ನಿಯಂತ್ರಣ ಸಾಧಿಸುವುದಾಗಿದೆ; ಆದರೆ ಸ್ವಭಾವದೋಷಗಳೆಂದರೆ ಚಿತ್ತದಲ್ಲಿ ಜನ್ಮಜನ್ಮಾಂತರಗಳ ಸಂಸ್ಕಾರಗಳಾಗಿರುವುದರಿಂದ ಅವು ಚಿತ್ತದಲ್ಲಿ ಎಷ್ಟು ಆಳವಾಗಿ ಮೂಡಿರುತ್ತವೆ ಎಂದರೆ ಸಾಧನೆಯಿಂದ ಅವು ಬೇಗನೇ ನಿರ್ಮೂಲನೆಯಾಗುವುದು ಅಷ್ಟು ಸುಲಭ ಸಾಧ್ಯವಲ್ಲ. ಸಾಧನೆಯಿಂದ ಆಧ್ಯಾತ್ಮಿಕ ಉನ್ನತಿಯಾಗಿ ಮನೋಲಯ ಮತ್ತು ಬುದ್ಧಿಲಯವಾಗುವ ತನಕ, ಅಂದರೆ ಚಿತ್ತದಲ್ಲಿನ ಸಂಸ್ಕಾರಗಳು ನಶಿಸಿಹೋಗುವ ತನಕ ಮನಸ್ಸು ಮತ್ತು ಬುದ್ಧಿ ಕಾರ್ಯನಿರತವಾಗಿರುತ್ತವೆ. ಇದರಿಂದ ಸ್ವಭಾವದೋಷಗಳೂ ಜಾಗೃತವಾಗಿರುತ್ತವೆ. ಆಗ ಸಾಧಕರ ಸಂಬಂಧಿಕರಿಗೆ ‘ಸಾಧನೆ ಮಾಡುತ್ತಿದ್ದರೂ ಇವನ ಸ್ವಭಾವದಲ್ಲಿ ಏಕೆ ಬದಲಾವಣೆಯಾಗುವುದಿಲ್ಲ?’ ಎಂದು ಅನಿಸುತ್ತದೆ. ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರ ಮತ್ತು ವಿಕಲ್ಪಗಳಿಂದ ಸಾಧನೆಯಿಂದ ಆನಂದ ಪ್ರಾಪ್ತಿಯಾಗದೇ ಇರುವುದರಿಂದ ಸಾಧಕನಿಗೂ ನಿರಾಶೆ ಬರುವ ಸಾಧ್ಯತೆಯಿರುತ್ತದೆ. ಆದುದರಿಂದ ‘ಸಾಧನೆಯಿಂದ ಸ್ವಭಾವದೋಷಗಳು ತಾನಾಗಿಯೇ ನಾಶವಾಗುವುವು’ ಎಂದು ವಿಚಾರ ಮಾಡದೇ ಸ್ವಭಾವದೋಷ ನಿರ್ಮೂಲನೆಗಾಗಿ ಪ್ರಯತ್ನಿಸುವುದು ಅನಿವಾರ್ಯವಾಗಿದೆ.

ಯಾರಾದರೊಬ್ಬ ವ್ಯಕ್ತಿಯ ಸುಖ-ಸಮಾಧಾನದ ವಿಚಾರ ಮಾಡುವಾಗ ಮುಖ್ಯವಾಗಿ ‘ಸ್ವಭಾವ’ವನ್ನು ಪರಿಗಣಿಸುವುದು ಆವಶ್ಯಕವಾಗಿದೆ. ವ್ಯಕ್ತಿಯ ವರ್ತನೆಯಿಂದ ಅವನ ಸ್ವಭಾವವನ್ನು ಪರೀಕ್ಷಿಸಬಹುದು. ಸ್ವಭಾವದೋಷಗಳು ವ್ಯಕ್ತಿಯ ಸುಖ-ಸಮಾಧಾನಕ್ಕೆ ಅಡಚಣೆಯಾಗಿರುತ್ತವೆ ಮತ್ತು ಗುಣಗಳು ಸುಖ-ಸಮಾಧಾನಕ್ಕೆ ಪೂರಕವಾಗಿರುತ್ತವೆ. ಸ್ವಭಾವದೋಷಗಳಿಂದ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಒತ್ತಡ ನಿರ್ಮಾಣವಾಗುತ್ತದೆ.

 

Leave a Comment