ಶಿಷ್ಯರಾಗುವುದು ಅಂದರೆ ಏನು ?

ಆಧ್ಯಾತ್ಮಿಕ ಉನ್ನತಿಯಾಗಲು ಇಚ್ಛಿಸುವ ಸಾಧಕರ ಜೀವನದಲ್ಲಿ ಗುರುಗಳ ಮಹತ್ವ ಅಧಿಕವಾಗಿರುತ್ತದೆ; ಆದರೆ ಗುರುಗಳ ಮನಸ್ಸನ್ನು ಗೆಲ್ಲಲು ಒಳ್ಳೆಯ ಶಿಷ್ಯರಾಗುವ ಅವಶ್ಯಕತೆಯಿರುತ್ತದೆ. ಶಿಷ್ಯತ್ವದ ಮಹತ್ವ, ಇತರ ಸಂಬಂಧ ಮತ್ತು ಶಿಷ್ಯ ಅವರಲ್ಲಿನ ವ್ಯತ್ಯಾಸ ಹಾಗೆಯೇ ಗುರು ಯಾರಿಗೆ ಮಾಡುತ್ತಾರೆ, ಈ ವಿಷಯದ ಬಗ್ಗೆ ತಾತ್ತ್ವಿಕ ಮಾಹಿತಿ ಮುಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

1. ಶಿಷ್ಯ ಶಬ್ದದ ವ್ಯಾಖ್ಯೆ ಮತ್ತು ಅರ್ಥ

ಆಧ್ಯಾತ್ಮಿಕ ಉನ್ನತಿ ಹೊಂದಬೇಕೆಂದು, ಯಾರು ಗುರುಗಳು ಹೇಳಿರುವ ಸಾಧನೆ ಮಾಡುತ್ತಾನೆಯೋ ಅವನನ್ನು ಶಿಷ್ಯ ಎನ್ನುತ್ತಾರೆ. ಕುಲಾರ್ಣವ ತಂತ್ರದಲ್ಲಿ ಶಿಷ್ಯನ ವ್ಯಾಖ್ಯೆಯನ್ನು ಈ ರೀತಿ ಹೇಳಲಾಗಿದೆ –

ಶರೀರಮರ್ಥಪ್ರಾಣಾಂಶ್ಚ ಸದ್ಗುರುಭ್ಯೋ ನಿವೇದ್ಯ ಯಃ |
ಗುರುಭ್ಯಃ ಶಿಕ್ಷತೇ ಯೋಗಂ ಶಿಷ್ಯ ಇತ್ಯಭಿಧೀಯತೇ ||

ಅರ್ಥ : ಯಾರು ತನು, ಧನ ಮತ್ತು ಪ್ರಾಣವನ್ನು (ಸರ್ವಸ್ವವನ್ನು) ಗುರುಗಳಿಗೆ ಸಮರ್ಪಿಸಿ ಅವರಿಂದ ಯೋಗವನ್ನು ಕಲಿಯುತ್ತಾನೆಯೋ (ಗುರುಗಳು ಹೇಳಿರುವ ಸಾಧನೆ ಮಾಡುತ್ತಾನೆಯೋ) ಅವನನ್ನು ಶಿಷ್ಯ ಎನ್ನಲಾಗುತ್ತದೆ. (ಆದ್ದರಿಂದಲೇ ಹೆಂಡತಿ-ಮಕ್ಕಳನ್ನು ಬಿಟ್ಟು, ಈಶ್ವರಪ್ರಾಪ್ತಿಯ ತೀವ್ರ ತಳಮಳದಿಂದ ಶಿಷ್ಯನು ಗುರುಗಳ ಬಳಿ ಹೋದರೂ ಆತನಿಗೆ ಪಾಪವು ತಗುಲುವುದಿಲ್ಲ ಎಂದು ಹೇಳುತ್ತಾರೆ.)

2. ಶಿಷ್ಯತ್ವದ ಮಹತ್ವ

ಅ. ಶಿಷ್ಯನು ದೇವಋಣ, ಋಷಿಋಣ, ಪಿತೃ (ಪೂರ್ವಜರ) ಋಣ ಮತ್ತು ಸಮಾಜಋಣ ಎಂಬ ನಾಲ್ಕು ಋಣಗಳನ್ನು ತೀರಿಸಬೇಕಾಗುವುದಿಲ್ಲ.

ಆ. ಗುರುಪುತ್ರೋ ವರಂ ಮೂರ್ಖಸ್ತಸ್ಯ ಸಿದ್ಧ್ಯಂತಿ ನಾನ್ಯಥಾ |
ಶುಭಕರ್ಮಾಣಿ ಸರ್ವಾಣಿ ದೀಕ್ಷಾವ್ರತತಪಾಂಸಿ ಚ || 151 || – ಶ್ರೀ ಗುರುಗೀತಾ

ಅರ್ಥ : ಗುರುಪುತ್ರನೆಂಬ ಪದವಿಗೆ ಯೋಗ್ಯನಾಗಿರುವಂತಹ ಗುರುಸೇವಕ ಶಿಷ್ಯನು ವ್ಯವಹಾರದಲ್ಲಿ ಮುಗ್ಧನಾಗಿದ್ದರೂ ಅವನ ಜಪ, ದೀಕ್ಷೆ, ವ್ರತ, ತಪಸ್ಸು ಇತ್ಯಾದಿ ಕಾರ್ಯಗಳು ಸಿದ್ಧಿ ಹೊಂದುತ್ತವೆ. ಗುರುಸೇವಕರಾಗಿಲ್ಲದವರಿಗೆ ಇಂತಹ ಫಲವು ದೊರಕುವುದಿಲ್ಲ.

3. ವಿದ್ಯಾರ್ಥಿ ಮತ್ತು ಶಿಷ್ಯ ಇವರಲ್ಲಿ ಏನು ವ್ಯತ್ಯಾಸ ಇದೆ ?

ಗುರು ಮತ್ತು ಶಿಕ್ಷಕರಲ್ಲಿ ವ್ಯತ್ಯಾಸವಿರುವಂತೆಯೇ ಶಿಷ್ಯ ಮತ್ತು ವಿದ್ಯಾರ್ಥಿಗಳ ನಡುವೆಯೂ ವ್ಯತ್ಯಾಸವಿದೆ. ಶಿಕ್ಷಕರಿಗೆ ಅವರ ವಿದ್ಯಾಶುಲ್ಕವನ್ನು ಕೊಟ್ಟಕೂಡಲೆ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಲೆಕ್ಕವು ಮುಕ್ತಾಯವಾಗುತ್ತದೆ. ಆದರೆ ಗುರುಗಳು ಆತ್ಮಜ್ಞಾನವನ್ನೇ ಕೊಡುವುದರಿಂದ ಗುರುಗಳಿಗೆ ಏನೇ ಅಥವಾ ಎಷ್ಟೇ ಮಾಡಿದರೂ ಅದು ಕಡಿಮೆಯೇ. ಚಿಕ್ಕಂದಿನಲ್ಲಿ ತಂದೆ-ತಾಯಿಯರು ನಮಗಾಗಿ ಎಲ್ಲವನ್ನೂ ಮಾಡಿರುವುದರಿಂದ ನಾವು ಅವರಿಗೆಂದು ಎಷ್ಟು ಮಾಡಿದರೂ ಅದು ಕಡಿಮೆಯಾಗುವಂತೆಯೇ ಇದು ಕೂಡ.

4. ಮಾಧ್ಯಮ ಮತ್ತು ಶಿಷ್ಯ

ಮಾಧ್ಯಮವೆಂದು ಕಾರ್ಯ ಮಾಡುತ್ತಿರುವಾಗ ಆ ವ್ಯಕ್ತಿಯು ಆಧ್ಯಾತ್ಮಿಕ ಉನ್ನತಿ ಹೊಂದುವುದಿಲ್ಲ. ಆತನು ಪರಪ್ರಕಾಶಿಯಾಗಿಯೇ ಇರುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ ಗುರುಗಳು ಶಿಷ್ಯನಿಂದ ಕಾರ್ಯವನ್ನು ಮಾಡಿಸಿಕೊಳ್ಳುವಾಗ ಶಿಷ್ಯನ ಕ್ಷಮತೆಯನ್ನು ಹೆಚ್ಚಿಸುತ್ತಾರೆ, ಶ್ರೀ ರಾಮಕೃಷ್ಣರು ವಿವೇಕಾನಂದರ ಆತ್ಮಬಲವನ್ನು ವೃದ್ಧಿಸಿ ನಂತರ ಅವರಿಂದ ಕಾರ್ಯವನ್ನು ಮಾಡಿಸಿಕೊಂಡಂತೆ. – ಪ.ಪೂ. ಭಕ್ತರಾಜ ಮಹಾರಾಜರು (ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ)

5. ಸಾಧಕ ಮತ್ತು ಶಿಷ್ಯ

ಸಾಧಕರು ಸ್ಥೂಲ ಜಗತ್ತಿನಲ್ಲಿ ಸಿಲುಕಬಾರದೆಂದು ಅವನು ಸಗುಣದೊಂದಿಗೆ ನಿರ್ಗುಣತತ್ತ್ವದ ಉಪಾಸಣೆ ಮಾಡುವುದು ಆವಶ್ಯಕವಾಗಿದೆ. ಗುರುಪ್ರಾಪ್ತಿಯಾದ ಮೇಲೆ ಸಗುಣದಲ್ಲಿನ ನಿರ್ಗುಣದ, ಅಂದರೆ ಮಾಯೆಯಲ್ಲಿನ ಬ್ರಹ್ಮನ ಅನುಭೂತಿ ಬರಲಿಕ್ಕಾಗಿ ಸಗುಣದಲ್ಲಿನ ಗುರುಗಳ ಸೇವೆ ಮಾಡುವುದು ಅವಶ್ಯಕವಾಗಿದೆ.

6. ಗುರು-ಶಿಷ್ಯವೇ ನಿಜವಾದ ಸಂಬಂಧ ಹೇಗೆ ?

ಈ ಜಗತ್ತಿನಲ್ಲಿ ಗುರು-ಶಿಷ್ಯ ಸಂಬಂಧವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಈ ಒಂದು ಸಂಬಂಧವು ಮಾತ್ರ ನಿಜವಾದ ಸಂಬಂಧವಾಗಿದೆ. ಗುರು-ಶಿಷ್ಯ ಸಂಬಂಧವು ಆಧ್ಯಾತ್ಮಿಕ ಸ್ವರೂಪದ್ದು ಮಾತ್ರವೇ ಆಗಿರುತ್ತದೆ. ಶಿಷ್ಯನಿಗೆ ‘ನನ್ನ ಉದ್ಧಾರವಾಗಬೇಕು’ ಎಂಬ ಒಂದೇ ವಿಷಯದ ಅರಿವಿರುತ್ತದೆ. ಗುರುಗಳಿಗೂ ‘ಈತನ ಉದ್ಧಾರವಾಗಬೇಕು’ ಎಂಬ ಒಂದೇ ವಿಷಯದ ಗಮನವಿರುತ್ತದೆ. ಗುರು-ಶಿಷ್ಯ ಸಂಬಂಧವು ವಯಸ್ಸಿನ ಮುಖಾಂತರ ಉಂಟಾಗಿರುವುದಿಲ್ಲ. ಅದು ಜ್ಞಾನವೃದ್ಧಿ ಮತ್ತು ಸಾಧನಾವೃದ್ಧಿಗಳ ಮೇಲೆ ಆಧಾರಿತವಾಗಿರುತ್ತದೆ. ಜೀವಸೃಷ್ಟಿಯಲ್ಲಿರುವ ಎಲ್ಲಾ ಪ್ರಾಣಿಗಳು ಜ್ಞಾನ ಮತ್ತು ಸಾಧನೆಯ ಮಾಧ್ಯಮದಿಂದಲೇ ಅಭಿವೃದ್ಧಿ ಹೊಂದುತ್ತಿರುತ್ತಾರೆ. ಮಿಕ್ಕೆಲ್ಲಾ ಸಂಬಂಧಗಳು ಭಯ ಅಥವಾ ಸಾಮಾಜಿಕ ಬಂಧನಗಳಿಂದಾಗಿ ಉಂಟಾಗಿರುತ್ತವೆ; ಆದ್ದರಿಂದ ಅವುಗಳು ವ್ಯವಹಾರಕ್ಕೆ ಸೀಮಿತವಾಗಿರುತ್ತವೆ. ಆ ಸಂಬಂಧಗಳಲ್ಲಿ ಅಹಂಭಾವವನ್ನು ಸತತವಾಗಿ ಕಾಪಾಡಿಕೊಳ್ಳಲಾಗುತ್ತದೆ (ಉಳಿಸಿಕೊಳ್ಳಲಾಗುತ್ತದೆ). ಅವುಗಳಲ್ಲಿ ಜ್ಞಾನಕ್ಕಾಗಲಿ ಅಥವಾ ಸಾಧನೆಗಾಗಲಿ ಮಹತ್ವವಿರುವುದಿಲ್ಲ. ಅಹಂಭಾವವನ್ನು ಉಳಿಸಿಕೊಳ್ಳುವುದೆಂದರೆ ಸಂಬಂಧವನ್ನು ಕಾಪಾಡಿಕೊಳ್ಳುವುದು. ಅಹಂಭಾವವನ್ನು ಉಳಿಸುವ ಎಲ್ಲಾ ಸಂಬಂಧಗಳೂ ಸುಳ್ಳಾಗಿರುತ್ತವೆ.

7. ಗುರುಪ್ರಾಪ್ತಿಗಾಗಿ ಏನು ಮಾಡಬೇಕು ?

ಅ. ಗುರುಗಳನ್ನು ಹುಡುಕಬಾರದು
ಎದುರಿಗೆ ಶ್ರೀ ಗುರುಗಳು ಬಂದರೂ | ಜ್ಞಾನಚಕ್ಷುಗಳ ಹೊರತು ಹೇಗೆ ತಿಳಿಯುವುದು||
(ಸಂತ ಭಕ್ತರಾಜ ಮಹಾರಾಜ ವಿರಚಿತ ಭಜನಾಮೃತ, ಭಜನೆ ಕ್ರ. 19)

ನಂಬಿಕೆಯು ಬರದಿದ್ದರೂ ನಿಮಗೆ | ಲೀನರಾಗಿರಿ ಶ್ರೀಚರಣಗಳಲ್ಲಿ |
ಕೊಡುವವರು ಸ್ವಸ್ವರೂಪದ ಜ್ಞಾನವನ್ನು | ಶುದ್ಧ ಪ್ರೇಮದಿಂ ಚಿತ್ತವನ್ನು ಸೆಳೆಯಿರಿ ||
(ಸಂತ ಭಕ್ತರಾಜ ಮಹಾರಾಜ ವಿರಚಿತ ಭಜನಾಮೃತ, ಭಜನೆ ಕ್ರ. 93)

ಗುರುಗಳು, ಹುಡುಕುವುದರಿಂದ ಸಿಗುವುದಿಲ್ಲ. ಏಕೆಂದರೆ ಗುರುತತ್ವವು ಸೂಕ್ಷ್ಮತಮವಾಗಿದೆ ಮತ್ತು ಸಾಧಕನಿಗೆ ಕೇವಲ ಸ್ಥೂಲ ಮತ್ತು ಅಲ್ಪಸ್ವಲ್ಪ ಸೂಕ್ಷ್ಮ ವಿಷಯಗಳು ಮಾತ್ರ ತಿಳಿಯುತ್ತವೆ. ಅಧ್ಯಾತ್ಮದಲ್ಲಿ ಶಿಷ್ಯನು ಗುರುಗಳನ್ನು ಸ್ವೀಕರಿಸುವುದಿಲ್ಲ, ಗುರುಗಳೇ ಶಿಷ್ಯನನ್ನು ಸ್ವೀಕರಿಸುತ್ತಾರೆ. ಅಂದರೆ ಅವರೇ ಶಿಷ್ಯನ ಆಯ್ಕೆ ಮಾಡಿ ಅವನನ್ನು ಸಿದ್ಧಪಡಿಸುತ್ತಾರೆ. ಸಾಧಕನ ಮಟ್ಟವು ಶೇ. 50 ಕ್ಕಿಂತಲೂ ಅಧಿಕವಾದಾಗ ಗುರುಗಳೇ ಸ್ವತಃ ಶಿಷ್ಯನ ಬಳಿ ಬಂದು ಅವನನ್ನು ಶಿಷ್ಯನೆಂದು ಸ್ವೀಕರಿಸುತ್ತಾರೆ. ಸಾಧಕನ ಮಟ್ಟವು ಶೇ. 40 ಕ್ಕಿಂತಲೂ ಕಡಿಮೆಯಿದ್ದರೂ ಅವನಲ್ಲಿ ತೀವ್ರ ಮುಮುುಕ್ಷುತ್ವವು ಇದ್ದರೆ, ಆಗಲೂ ಗುರುಪ್ರಾಪ್ತಿಯಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗುರುಗಳನ್ನು ಹುಡುಕಲು ಪ್ರಯತ್ನ ಪಡುವುದರ ಬದಲು ಶಿಷ್ಯನೆಂದು ಅರ್ಹನಾಗಲು ಪ್ರಯತ್ನ ಮಾಡಬೇಕು.

ಆ. ಗುರುಗಳನ್ನು ಪರೀಕ್ಷಿಸಬಾರದು
‘ವಿಚಾರ ಮಾಡಿ ಎಂದರೆ ಅರಿವಿನೊಂದಿಗೆ ಶ್ರದ್ಧೆಯಿಡುವುದು ಎಂದು ನಿರ್ಧರಿಸಿದರೆ ಗುರುಗಳನ್ನು ಪರೀಕ್ಷಿಸಬೇಕಾಗುವುದು. ಪರೀಕ್ಷಕನು ಯಾವಾಗಲೂ ಪರೀಕ್ಷಾರ್ಥಿಗಿಂತ ಮೇಲ್ಮಟ್ಟದವನಾಗಿರುತ್ತಾನೆ. ನಾವು ಹಾಗೆ ಇದ್ದೇವೆ ಎಂದು ಭಾವಿಸಿದರೆ ಪರೀಕ್ಷಾರ್ಥಿಯನ್ನು ಗುರುಗಳೆಂದು ಪರಿಗಣಿಸಲು ಹೇಗೆ ಸಾಧ್ಯ ?’

ಇ. ತಾನೇ ತನ್ನನ್ನು ಇಂತಹವರ ಶಿಷ್ಯನೆಂದು ಪರಿಗಣಿಸಬಾರದು
ನಾನು ಇಂತಹವರ ಶಿಷ್ಯನಾಗಿದ್ದೇನೆ ಎಂದು ತಿಳಿದುಕೊಳ್ಳಬಾರದು. ಗುರುಗಳು, ‘ಇವನು ನನ್ನ ಶಿಷ್ಯ’ ಎನ್ನಬೇಕು. ಯಾವುದೇ ಒಬ್ಬ ಯುವಕನು ಇಂತಹ ಒಂದು ಹುಡುಗಿಯು ನನ್ನ ಪ್ರೇಯಸಿಯಾಗಿದ್ದಾಳೆ ಎಂದು ಮನಸ್ಸಿನಲ್ಲಿ ನಿರ್ಧರಿಸಿದ ಮಾತ್ರಕ್ಕೆ ಏನೂ ಪ್ರಯೋಜನವಿಲ್ಲ. ಅವಳೂ ಹಾಗೆಯೇ ಅನ್ನಬೇಕು. ಗುರು-ಶಿಷ್ಯರ ಸಂಬಂಧದಲ್ಲಿಯೂ ಹೀಗೆಯೇ.

ಈ. ಯಾರನ್ನು ಗುರುಗಳನ್ನಾಗಿ ಸ್ವೀಕರಿಸಬೇಕು ?
‘ಪ್ರತಿಯೊಬ್ಬನೂ ನಿರ್ಗುಣ ಗುರುಗಳ ಶಿಷ್ಯನಾಗಬೇಕು. ಕೇವಲ ತತ್ವಜ್ಞಾನದ ಅನುಯಾಯಿಗಳಾಗಬಾರದು. ಒಮ್ಮೆ ನೀವು ನಿರ್ಗುಣವನ್ನು ಅರಿತರೆ ನಂತರವೇ ಸಗುಣವನ್ನು ಗುರುತಿಸಬಲ್ಲಿರಿ. ಒಮ್ಮೆ ನೀವು ನಿರ್ಗುಣವನ್ನು ಅರಿತರೆ ನೀವು ಎಲ್ಲಿದ್ದೀರಿ ಎಂಬುದು ನಿಮಗೆ ತಿಳಿಯುವುದು. (ನಿರ್ಗುಣದಲ್ಲಿನ ಗುರುಗಳ ಶಿಷ್ಯನೆಂದರೆ ನಿರ್ಗುಣದ ಅನುಭೂತಿಯನ್ನು ಸತತವಾಗಿ ಪಡೆಯುತ್ತಿರುವ ಪರಾತ್ಪರ ಗುರುಗಳ ಅಥವಾ ‘ನಾಮ’ದ ಶಿಷ್ಯ.)’

ಉ. ಗುರು ಮತ್ತು ಶಿಷ್ಯರ ನಾಲ್ಕು ವರ್ಣಗಳಲ್ಲಿನ ಆಶ್ರಮ :
ಬ್ರಹ್ಮಚಾರಿ ಶಿಷ್ಯನಿಗೆ ಬ್ರಹ್ಮಚರ್ಯಾಶ್ರಮಿ ಗುರುಗಳು, ವಾನಪ್ರಸ್ಥಾಶ್ರಮಿ ಶಿಷ್ಯನಿಗೆ ವಾನಪ್ರಸ್ಥಾಶ್ರಮಿ ಗುರುಗಳು ಮತ್ತು ಸನ್ಯಾಸಾಶ್ರಮಿ ಶಿಷ್ಯನಿಗೆ ಸನ್ಯಾಸಾಶ್ರಮಿ ಗುರುಗಳು ಹತ್ತಿರದವರೆನಿಸುತ್ತಾರೆ. ಆದರೆ ಗೃಹಸ್ಥಾಶ್ರಮಿ ಶಿಷ್ಯನಿಗೆ ಗುರುಗಳು ಬ್ರಹ್ಮಚರ್ಯಾಶ್ರಮದವರಾಗಲಿ, ವಾನಪ್ರಸ್ಥಾಶ್ರಮದವರಾಗಲಿ, ಸನ್ಯಾಸಾಶ್ರಮದವರಾಗಲಿ ಅಥವಾ ಗೃಹಸ್ಥಾಶ್ರಮದವರಾಗಲಿ ಎಲ್ಲರೂ ಹತ್ತಿರದವರೇ ಎಂದೆನಿಸುತ್ತಾರೆ.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಶಿಷ್ಯ’)

Leave a Comment