ಗುರುಪೂರ್ಣಿಮೆ (ವ್ಯಾಸಪೂಜೆ)

ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳೇ ಇದ್ದಾರೆ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ. ಪ್ರಸ್ತುತ ಲೇಖನದಲ್ಲಿ ನಾವು ಗುರುಪೂರ್ಣಿಮೆಯ ಮಹತ್ವ ಹಾಗೂ ಈ ಉತ್ಸವ ಆಚರಿಸುವ ಪದ್ಧತಿ ನೋಡುವವರಿದ್ದೇವೆ.

ತಿಥಿ

ಗುರುಪೂರ್ಣಿಮೆ ಮಹೋತ್ಸವವನ್ನು ಎಲ್ಲೆಡೆ ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ. (ತಮಿಳುನಾಡಿನಲ್ಲಿ ವ್ಯಾಸಪೂಜೆಯನ್ನು ಜ್ಯೇಷ್ಠ ಪೂರ್ಣಿಮೆಯಂದು ಮಾಡುತ್ತಾರೆ.)

ಉದ್ದೇಶ

ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ.

ಮಹತ್ವ

೧. ಗುರುಪೂರ್ಣಿಮೆಯಂದು ಗುರುತತ್ತ್ವವು (ಈಶ್ವರೀ ತತ್ತ್ವವು) ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗ (ಸತ್‌ಗಾಗಿ ಮಾಡಿದ ಅರ್ಪಣೆ) ಇವುಗಳ ಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ ೧ ಸಾವಿರ ಪಟ್ಟು ಹೆಚ್ಚಾಗುತ್ತದೆ; ಆದ್ದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ.

೨. ‘ಗುರು-ಶಿಷ್ಯ ಪರಂಪರೆ’ಯು ಹಿಂದೂಗಳ ಲಕ್ಷಾವಧಿ ವರ್ಷಗಳ ಚೈತನ್ಯಮಯ ಸಂಸ್ಕೃತಿಯಾಗಿದೆ. ಆದರೆ ಕಾಲದ ಪ್ರವಾಹದಲ್ಲಿ ರಜ-ತಮಪ್ರಧಾನ ಸಂಸ್ಕೃತಿಯ ಪ್ರಭಾವದಿಂದಾಗಿ ಮಹಾನ ಗುರು-ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಗುರುಪೂರ್ಣಿಮೆಯ ನಿಮಿತ್ತದಿಂದ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಹೇಳಲು ಸಾಧ್ಯವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸದವಕಾಶ ಲಭಿಸುತ್ತದೆ.

ಉತ್ಸವವನ್ನು ಆಚರಿಸುವ ಪದ್ಧತಿ

ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಎಲ್ಲ ಗುರುಗಳ ಶಿಷ್ಯರು ಈ ದಿನದಂದು ಗುರುಗಳ ಪಾದಪೂಜೆಯನ್ನು ಮಾಡಿ ಅವರಿಗೆ ಗುರುದಕ್ಷಿಣೆ ಯನ್ನು ಅರ್ಪಿಸುತ್ತಾರೆ. ಈ ದಿನ ವ್ಯಾಸಪೂಜೆಯನ್ನು ಮಾಡುವ ಪದ್ಧತಿಯೂ ಇದೆ. ಗುರುಪರಂಪರೆ ಯಲ್ಲಿ ವ್ಯಾಸರನ್ನು ಸರ್ವಶ್ರೇಷ್ಠ ಗುರು ಎಂದು ಪರಿಗಣಿಸಲಾಗಿದೆ. ಎಲ್ಲ ಜ್ಞಾನದ ಉಗಮವು ವ್ಯಾಸರಿಂದಲೇ ಆಗುತ್ತದೆ ಎನ್ನುವುದು ಭಾರತೀಯರ ನಂಬಿಕೆಯಾಗಿದೆ.’ ಕುಂಭಕೋಣಮ್ ಮತ್ತು ಶೃಂಗೇರಿ ಇವು ದಕ್ಷಿಣ ಭಾರತದಲ್ಲಿನ ಶಂಕರಾಚಾರ್ಯರ ಪ್ರಸಿದ್ಧ ಪೀಠಗಳಾಗಿವೆ. ಇಲ್ಲಿ ವ್ಯಾಸಪೂಜಾಮಹೋತ್ಸವವು ನಡೆಯುತ್ತದೆ. ವ್ಯಾಸಮಹರ್ಷಿಗಳು ಮತ್ತೊಮ್ಮೆ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದರು ಎನ್ನುವುದು ಭಕ್ತರ ಶ್ರದ್ಧೆಯಾಗಿದೆ. ಆದುದರಿಂದ ಈ ದಿನ ಸಂನ್ಯಾಸಿಗಳು ವ್ಯಾಸಪೂಜೆ ಎಂದು ಶಂಕರಾಚಾರ್ಯರ ಪೂಜೆಯನ್ನು ಮಾಡುತ್ತಾರೆ.

ಗುರುಪೂಜೆಯ ವಿಧಿ

ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ‘ಗುರುಪರಂಪರಾ ಸಿದ್ಧ ರ್ಥಂ ವ್ಯಾಸಪೂಜಾಂ ಕರಿಷ್ಯೇ|’ ಎಂದು ಸಂಕಲ್ಪ ಮಾಡುತ್ತಾರೆ. ಒಂದು ಶುಭ್ರವಸ್ತ್ರವನ್ನು ಹಾಸಿ ಅದರ ಮೇಲೆ ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಗಂಧ ದಿಂದ ಹನ್ನೆರಡು ರೇಖೆಗಳನ್ನು ಎಳೆಯುತ್ತಾರೆ. ಇದೇ ವ್ಯಾಸಪೀಠ. ಅನಂತರ ಬ್ರಹ್ಮ, ಪರಾತ್ಪರಶಕ್ತಿ, ವ್ಯಾಸ, ಶುಕದೇವ, ಗೌಡಪಾದ, ಗೋವಿಂದಸ್ವಾಮಿ ಮತ್ತು ಶಂಕರಾಚಾರ್ಯರನ್ನು ಈ ವ್ಯಾಸಪೀಠದ ಮೇಲೆ ಆವಾಹನೆ ಮಾಡಿ ಅವರಿಗೆ ಷೋಡಶೋಪಚಾರ ಪೂಜೆಯನ್ನು ಮಾಡುತ್ತಾರೆ. ಈ ದಿನ, ದೀಕ್ಷಾಗುರು ಹಾಗೂ ತಂದೆ-ತಾಯಿಯರ ಪೂಜೆಯನ್ನೂ ಮಾಡುವ ಪದ್ಧತಿಯಿದೆ.’

ಆಧಾರ : ಸನಾತನ- ನಿರ್ಮಿತ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’

Leave a Comment