ಸಹೋದರ ಬಿದಿಗೆ (ಯಮದ್ವಿತೀಯಾ)

೧. ತಿಥಿ : ಕಾರ್ತಿಕ ಶುಕ್ಲ ದ್ವಿತೀಯಾ
೨. ಇತಿಹಾಸ : ಈ ದಿನ ಯಮನು ತನ್ನ ತಂಗಿ ಯಮುನೆಯ ಮನೆಗೆ ಭೋಜನಕ್ಕೆ ಹೋಗಿದ್ದನು; ಆದುದರಿಂದ ಈ ದಿನಕ್ಕೆ ಯಮದ್ವಿತೀಯಾ ಎನ್ನುವ ಹೆಸರು ಬಂದಿದೆ.
೩. ಮಹತ್ವ

ಅ. ಅಪಮೃತ್ಯು ಬರಬಾರದೆಂದು ಧನತ್ರಯೋದಶಿ, ನರಕ ಚತುರ್ದಶಿ ಮತ್ತು ಯಮದ್ವಿತೀಯಾ ಈ ದಿನಗಳಂದು ಮೃತ್ಯುವಿನ ದೇವತೆಯಾದ ‘ಯಮಧರ್ಮನ’ ಪೂಜೆಯನ್ನು ಮಾಡುತ್ತಾರೆ.

ಆ. ಈ ದಿನ ಯಮರಾಜನು ತನ್ನ ಸಹೋದರಿ ಯಮುನೆಯ ಮನೆಗೆ ಭೋಜನಕ್ಕೆ ಹೋಗುತ್ತಾನೆ ಮತ್ತು ಈ ದಿನ ನರಕದಲ್ಲಿ ಬಿದ್ದು ತೊಂದರೆಗೊಳಗಾದ ಜೀವಗಳನ್ನು ಒಂದು ದಿನದ ಮಟ್ಟಿಗೆ ಮುಕ್ತಗೊಳಿಸುತ್ತಾನೆ.

೪. ಹಬ್ಬವನ್ನು ಆಚರಿಸುವ ಪದ್ಧತಿ

 

 

೪ ಅ. ಯಮತರ್ಪಣ, ಯಮದೀಪದಾನ ಮತ್ತು ಯಮನಿಗೆ ಪ್ರಾರ್ಥನೆಯನ್ನು ಮಾಡುವುದು: ಅಪಮೃತ್ಯು ನಿವಾರಣಾರ್ಥ ‘ಶ್ರೀ ಯಮಧರ್ಮಪ್ರೀತ್ಯರ್ಥಂ ಯಮತರ್ಪಣಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ ಯಮನ ಹದಿನಾಲ್ಕು ಹೆಸರುಗಳನ್ನು ಹೇಳಿ ತರ್ಪಣ ಕೊಡಬೇಕು. ಇದರ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ‘ಇದೇ ದಿನ ಯಮನಿಗೆ ದೀಪದಾನವನ್ನು ಮಾಡುವುದಿರುತ್ತದೆ. ಯಮನು ಮೃತ್ಯು ಮತ್ತು ಧರ್ಮದ ದೇವತೆಯಾಗಿದ್ದಾನೆ. ‘ಪ್ರತಿಯೊಬ್ಬ ಮನುಷ್ಯನಿಗೆ ಮರಣವಿದೆ’ ಎಂಬುದರ ಅರಿವು ಸತತವಾಗಿರುವುದು ಆವಶ್ಯಕವಾಗಿದೆ; ಏಕೆಂದರೆ ಇದರಿಂದ ಮನುಷ್ಯನಿಂದ ಕೆಟ್ಟ ಕಾರ್ಯ ಅಥವಾ ಹಣದ ಅಪವ್ಯಯ ವಾಗುವುದಿಲ್ಲ. ಆದ್ದರಿಂದ ಯಮನಿಗೆ ದೀಪದಾನ ಮಾಡಿ ಮುಂದಿನಂತೆ ಹೇಳಬೇಕು, ‘ಹೇ ಯಮನೇ, ಈ ದೀಪದಂತೆ ನಾವು ಸತರ್ಕರಾಗಿದ್ದೇವೆ, ಜಾಗರೂಕರಾಗಿದ್ದೇವೆ. ಜಾಗರೂಕತೆಯ, ಪ್ರಕಾಶದ ಪ್ರತೀಕವಾಗಿರುವ ದೀಪವನ್ನು ನಿನಗೆ ಅರ್ಪಿಸುತ್ತಿದ್ದೇವೆ, ನೀನು ಅದನ್ನು ಸ್ವೀಕರಿಸು. ನಿನ್ನ ಆಗಮನವು ಯಾವಾಗ ಆಗುವುದು ನಮಗೆ ತಿಳಿದಿಲ್ಲ; ಆದುದರಿಂದ ನಾವು ನಮ್ಮ ಲೆಕ್ಕಪತ್ರವನ್ನು ಸಮಯಕ್ಕೆ ಸರಿಯಾಗಿ ಬರೆದಿಡುತ್ತೇವೆ, ಇದರಿಂದ ಅರ್ಧಂಬರ್ಧ ಬರೆದ ಲೆಕ್ಕದ ಕಾಳಜಿಯನ್ನು ಮಾಡುವ ಆವಶ್ಯಕತೆ ಬೀಳುವುದಿಲ್ಲ. ಏಕೆಂದರೆ ನೀನು ಆಕಸ್ಮಿಕವಾಗಿ ಎಂದಿಗೂ ಬರಬಹುದೆಂಬುದು ನಮಗೆ ತಿಳಿದಿದೆ.’

– ಪ.ಪೂ.ಪರಶರಾಮ ಮಾಧವ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

 

೪ ಆ. ಸಹೋದರಿಯು ಸಹೋದರನಿಗೆ ಆರತಿಯನ್ನು ಬೆಳಗುವುದು: ಈ ದಿನ ಸಹೋದರನು ಸಹೋದರಿಯ ಕಡೆಗೆ ಹೋಗಬೇಕು ಮತ್ತು ಸಹೋದರಿಯು ಸಹೋದರನಿಗೆ ಆರತಿಯನ್ನು ಬೆಳಗಬೇಕು. ಯಾರಾದರೊಬ್ಬ ಸ್ತ್ರೀಗೆ ಸಹೋದರನಿಲ್ಲದಿದ್ದರೆ ಅವಳು ಯಾರಾದರೂ ಅನ್ಯ ಪುರುಷನನ್ನು ಸಹೋದರನೆಂದು ತಿಳಿದು ಅವನಿಗೆ ಆರತಿ ಬೆಳಗಬೇಕು. ಅದು ಸಾಧ್ಯವಿಲ್ಲದಿದ್ದರೆ ಚಂದ್ರನನ್ನು ಸಹೋದರನೆಂದು ತಿಳಿದು ಆರತಿ ಬೆಳಗಬೇಕು. ಈ ದಿನ ಯಾವುದೇ ಪುರುಷನು ತನ್ನ ಮನೆಯಲ್ಲಿ ಪತ್ನಿಯು ತಯಾರಿಸಿದ ಅಡುಗೆಯನ್ನು ಸೇವಿಸಬಾರದು. ತಂಗಿಯ ಮನೆಗೆ ಹೋಗಿ ಅವಳಿಗೆ ವಸ್ತ್ರಾಲಂಕಾರಗಳನ್ನು ಕೊಟ್ಟು ಅವಳ ಮನೆಯಲ್ಲಿ ಭೋಜನ ಮಾಡಬೇಕು. ಸ್ವಂತ ತಂಗಿ ಇಲ್ಲದಿದ್ದರೆ ಬೇರೆ ಸಹೋದರಿಯ ಮನೆಯಲ್ಲಿ ಅಥವಾ ಬೇರೆ ಸ್ತ್ರೀಯನ್ನು ಸಹೋದರಿಯೆಂದು ಪರಿಗಣಿಸಿ ಅವಳ ಮನೆಯಲ್ಲಿ ಭೋಜನ ಮಾಡಬೇಕು ಎಂದು ಹೇಳಲಾಗಿದೆ.

( ಚಿತ್ರದಲ್ಲಿರುವುದನ್ನು ಓದಲು ಚಿತ್ರವನ್ನು ಕ್ಲಿಕ್ ಮಾಡಿ)

(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

Leave a Comment