ಮಹರ್ಷಿ ವ್ಯಾಸರು – ಗುರುತತ್ತ್ವದ ಪ್ರತೀಕ !

೧. ಸಾಧಕನನ್ನು ದೇವತ್ವದ ಕಡೆಗೆ ಕರೆದೊಯ್ಯಲು ಮಹರ್ಷಿ ವ್ಯಾಸರಂತಹ ಪರಾತ್ಪರ ಗುರುವಿನ ತೀವ್ರ ಆವಶ್ಯಕತೆ ಇರುವುದು

ಗುರುಪೂರ್ಣಿಮೆಗೆ ‘ವ್ಯಾಸಪೂರ್ಣಿಮೆ’ ಎಂದೂ ಹೇಳುತ್ತಾರೆ. ಯಾವ ಪೀಠದಿಂದ ಜ್ಞಾನದಾನದ, ಪ್ರಬೋಧನೆಯ ಕಾರ್ಯವಾಗುತ್ತದೋ, ಆ ಪೀಠವು ಮಹರ್ಷಿ ವ್ಯಾಸರದ್ದಾಗಿದೆ. ಆದುದರಿಂದಲೇ ಅದಕ್ಕೆ ‘ವ್ಯಾಸಪೀಠ’ವೆಂದು ಹೇಳುತ್ತಾರೆ. ವ್ಯಾಸಪೀಠವನ್ನು ಸ್ಪರ್ಶಿಸುವ ಅಧಿಕಾರವು ಕೇವಲ ಸದ್ಗುರುಗಳಿಗೆ ಮತ್ತು ಗುರುಸ್ಥಾನದಲ್ಲಿ ಶೋಭಿಸುವಂತಹ ಜ್ಞಾನವಿರುವ ವಿದ್ವಾನರಿಗೆ ಇರುತ್ತದೆ. ಇಂತಹ ವ್ಯಾಸಪೀಠದ ಗೌರವವನ್ನು ನಾವು ಕಾಪಾಡಬೇಕು; ಏಕೆಂದರೆ ಅದು ಜ್ಞಾನ ನೀಡುವ ಪೀಠವಾಗಿದೆ. ಯಾರ ಹೆಸರಿನಿಂದ ಅದು ಅವರು ಗುರುತಿಸಲ್ಪಡುತ್ತಾರೋ, ಆ ಮಹರ್ಷಿ ವ್ಯಾಸರು ಜೀವನದ ನಿಜವಾದ ಭಾಷ್ಯಕಾರ ಮತ್ತು ಮಾನವತೆಯ ಮಹಾನ ಧರ್ಮದ ಪ್ರವರ್ತಕರಾಗಿದ್ದರು. ಸಾಧಕನಿಗೆ ದೇವತ್ವದ ಕಡೆಗೆ ಕರೆದುಕೊಂಡು ಹೋಗಲು ಮಹರ್ಷಿ ವ್ಯಾಸರಂತಹ ಪರಾತ್ಪರ ಗುರುಗಳ ತೀವ್ರ ಆವಶ್ಯಕತೆಯಿದೆ. ಇಂತಹ ಮಹಾನ ಮಹರ್ಷಿ ವ್ಯಾಸರ ವ್ಯಾಸಪೀಠದ ವಸ್ತ್ರಗಳ ಮೇಲೆ ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಗಂಧದಿಂದ ಹನ್ನೆರಡು ರೇಖೆಗಳನ್ನು ಎಳೆದು ಸಿದ್ಧ ಮಾಡಲಾಗುತ್ತದೆ.

೨. ಗುರುತತ್ತ್ವದ ಪೂಜೆಯನ್ನು ಮನಃಪೂರ್ವಕ ಮಾಡಿ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ

ಬ್ರಹ್ಮ, ಪರಾತ್ಪರ ಶಕ್ತಿ, ವ್ಯಾಸ, ಶುಕದೇವ, ಗೌಡಪಾದ, ಗೋವಿಂದಸ್ವಾಮಿ, ಶಂಕರಾಚಾರ್ಯರನ್ನು ಆ ವ್ಯಾಸಪೀಠದ ಮೇಲೆ ಆಹ್ವಾನಿಸಿ ಅವರ ಷೋಡಷೋಪಚಾರ ಪೂಜೆಯನ್ನು ಮಾಡುತ್ತಾರೆ. ಹಾಗೆಯೇ ಆ ಸ್ಥಳದಲ್ಲಿ ದೀಕ್ಷಾಗುರು, ತಾಯಿ ಮತ್ತು ತಂದೆ ಇವರ ಪೂಜೆ ಮಾಡುವ ರೂಢಿಯಿದೆ. ಇಂತಹ ಗುರುಸ್ಥಾನದಲ್ಲಿರುವ ಎಲ್ಲರ, ಅಂದರೆ ಗುರುತತ್ತ್ವದ ಪೂಜೆಯನ್ನು ಮನಃಪೂರ್ವಕ ಮಾಡಿ ಅವರಲ್ಲಿ ಕೃತಜ್ಞತೆ ವ್ಯಕ್ತಪಡಿಸುವ ಮತ್ತು ಅವರಿಗೆ ಇಷ್ಟವಾಗುವಂತಹ ವಿಷಯವನ್ನು ಮುಂಬರುವ ಜೀವನದಲ್ಲಿ ಕೃತಿಯಲ್ಲಿ ತರುವ ಸಂಕಲ್ಪ ಮಾಡುವ ದಿನವೆಂದರೆ ‘ಗುರುಪೂರ್ಣಿಮೆ’ಯಾಗಿದೆ.

ಯಾವುದಾದರೊಂದು ನಿರ್ಜೀವ ವಸ್ತುವನ್ನು ಮೇಲೆ, ಅಂದರೆ ಊರ್ಧ್ವ ದಿಕ್ಕಿಗೆ ಎಸೆಯಲು ಸಜೀವ ವಸ್ತುವಿನ ಆವಶ್ಯಕತೆ ಇರುತ್ತದೆ, ಅದೇ ರೀತಿ ಜಿಜ್ಞಾಸುವಿಗೆ ಯೋಗ್ಯ ಜ್ಞಾನ ಮಾಡಿಕೊಳ್ಳುವುದಿದ್ದರೆ, ಅದಕ್ಕಾಗಿ ಸದ್ಗುರುವಿನದ್ದೇ ಆವಶ್ಯಕತೆಯಿದೆ. ಸದ್ಗುರುವಿನ ಹೊರತು ಅದು ಎಂದಿಗೂ ಸಾಧ್ಯವಿಲ್ಲ. ಮಹರ್ಷಿ ವ್ಯಾಸರು ಎಂದರೆ ಸಾಕ್ಷಾತ್ ಜ್ಞಾನಗಂಗೆಯ ಭಗೀರಥ ! ಅವರು ಮಹಾಜ್ಞಾನಿಯಾಗಿದ್ದರು. ಸರ್ವೋಚ್ಚ ಮತ್ತು ಸರ್ವಶ್ರೇಷ್ಠ ಭಾರತೀಯ ಸಂಸ್ಕೃತಿಗನುಸಾರ ಮತ್ತು ಮಹಾನ ಗುರು ಪರಂಪರೆಗನುಸಾರ ಜ್ಞಾನದ ಉಗಮ ಮಹರ್ಷಿ ವ್ಯಾಸರಿಂದ ಆಗುತ್ತದೆ. ಆದಿಗುರು ವ್ಯಾಸರು ಸಪ್ತಚಿರಂಜೀವಗಳಲ್ಲಿ  ಒಬ್ಬರಾಗಿದ್ದಾರೆ.

೩. ಲೋಹದಂತಹ ಶಿಷ್ಯನನ್ನು ಸ್ಪರ್ಶಮಣಿಯನ್ನಾಗಿ ರೂಪಾಂತರಿಸುವ ಸಾಮರ್ಥ್ಯ ಗುರುಗಳಲ್ಲಿರುವುದು

ಮಹಾಭಾರತದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳ ಸಮಗ್ರ ತತ್ತ್ವಜ್ಞಾನವನ್ನು ವ್ಯಾಸರೇ ತಿಳಿಸಿದ್ದಾರೆ; ಆದುದರಿಂದಲೇ ‘ವ್ಯಾಸೋಚ್ಛಿಷ್ಟಂ ಜಗತ್ ಸರ್ವಮ್ |’ ಎಂದರೆ ‘ಇಡೀ ಜಗತ್ತಿನಲ್ಲಿನ ಅಧ್ಯಾತ್ಮದ ಜ್ಞಾನವನ್ನು ಮಹರ್ಷಿ ವ್ಯಾಸರು ಉಚ್ಚಿಷ್ಟ (ಎಂಜಲು) ಮಾಡಿದ್ದಾರೆ’, ಎಂದು ಹೇಳಲಾಗಿದೆ. ಸಂತ ಜ್ಞಾನೇಶ್ವರರು ಮಹರ್ಷಿ ವ್ಯಾಸರನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

ಸಂತ ಜ್ಞಾನೇಶ್ವರರು, ಮಹರ್ಷಿ ವ್ಯಾಸರಂತಹ ಗುರು ಸ್ಪರ್ಶಮಣಿಗಿಂತಲೂ ಶ್ರೇಷ್ಠರಾಗಿದ್ದರೆ ಎಂದೂ ಹೇಳಿದ್ದಾರೆ. ಏಕೆಂದರೆ ಸ್ಪರ್ಶಮಣಿಯು ಕಬ್ಬಿಣವನ್ನು ಕೇವಲ ಬಂಗಾರಕ್ಕೆ ರೂಪಾಂತರ ಮಾಡುತ್ತದೆ; ಸ್ಪರ್ಶಮಣಿಯಲ್ಲಲ್ಲ; ಆದರೆ ಗುರುಗಳು ಕಬ್ಬಿಣರೂಪಿ ಶಿಷ್ಯನನ್ನು ಸ್ಪರ್ಶಮಣಿಯನ್ನಾಗಿ ಮಾಡುತ್ತಾರೆ. ‘ಶಿಷ್ಯಾತ್ ಇಚ್ಛೆತ್ ಪರಾಜಯಮ್ |’ ಅಂದರೆ ‘ಗುರುಗಳು ಶಿಷ್ಯನಿಂದ ಪರಾಜಯಗೊಳ್ಳಲು ಬಯಸುತ್ತಾರೆ’, ಅಂದರೆ ಅವನನ್ನು ತಮಗಿಂತಲೂ ಶ್ರೇಷ್ಠನನ್ನಾಗಿಸಬೇಕು. ಗುರುಗಳು ಶಿಷ್ಯನನ್ನು ಗುರುಪದವಿಯಲ್ಲಿ ವಿರಾಜಮಾನನಾಗುವಂತೆ ಮಾಡುತ್ತಾರೆ. ಇಂತಹ ಈ ಸದ್ಗುರುಗಳಿಗೆ ಸರಿಸಾಠಿಯಿಲ್ಲ.

‘ಗುರುವೇ ಪರಮೇಶ್ವರ ! ಗುರುವೇ ಸರ್ವೇಶ್ವರ ! ಎಲ್ಲವನ್ನೂ ಅರ್ಪಿಸಬೇಕು ಗುರುಚರಣಗಳಲ್ಲಿ !’ ಗುರು ನಮ್ಮನ್ನು ಜ್ಞಾನದ ಗರ್ಭಗುಡಿಯೊಳಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಜ್ಞಾನದೊಂದಿಗೆ ಏಕರೂಪ ಮಾಡುತ್ತಾರೆ.
– ಪ.ಪೂ. ದಾಸ ಮಹಾರಾಜರು, ಗೌತಮಾರಣ್ಯ, ಭಗವಾನದಾಸ ಆಶ್ರಮ, ಪಾನವಳ-ಬಾಂದಾ

Leave a Comment